ಕನ್ನಡದ ಮೊದಲ ಕಾದಂಬರಿ ‘ಮಾಡಿದ್ದುಣ್ಣೋ ಮಾರಾಯ’



ಎಂ.ಎಸ್.ಪುಟ್ಟಣ್ಣನವರ ಪೂರ್ಣ ಹೆಸರು ಮೈಸೂರು ಸೂರ್ಯನಾರಾಯಣ ಭಟ್ಟ ಪುಟ್ಟಣ್ಣ. ಇವರು ಚನ್ನಪಟ್ಟಣದವರು. ಕಾದಂಬರಿ ಕ್ಷೇತ್ರದಲ್ಲಿ ಮಾತ್ರವಲ್ಲ, ಸ್ವತಂತ್ರ ಇತಿಹಾಸ ಗ್ರಂಥಗಳನ್ನು, ಜೀವನ ಚರಿತ್ರೆಗಳನ್ನು ರಚಿಸಿದವರಲ್ಲಿಯೂ ಇವರು ಮೊದಲಿಗರು ಎಂದು ಭಾವಿಸಲಾಗಿದೆ.

ಕನ್ನಡದ ಮೊದಲ ಕಾದಂಬರಿ ‘ಮಾಡಿದ್ದುಣ್ಣೋ ಮಾರಾಯ’ ಬರೆದ ಪುಟ್ಟಣ್ಣ ೧೮೫೪ ರಿಂದ ೧೯೩೦ ರವರೆಗೆ ಜೀವಿಸಿದ್ದ ಒಬ್ಬ ನ್ಯಾಯನಿಷ್ಠುರ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಅವರ ಕರ್ತವ್ಯ ನಿಷ್ಠೆ ಮತ್ತು ನಿರ್ದಾಕ್ಷಿಣ್ಯ ಪ್ರವೃತ್ತಿ ಹಲವರ ಹುಬ್ಬೇರಿಸಿದ್ದಂತೂ ಸತ್ಯ. ತಾಲೂಕು ಮಟ್ಟದ ಅಧಿಕಾರಿಯಾಗಿ ಹೆಸರು ಮಾಡಿದ ಇವರು ಹಿತಭೋದಿನಿ ಎಂಬ ಪತ್ರಿಕೆಗೆ ಜನ್ಮ ನೀಡಿ, ಅಂದಿನ ಮೈಸೂರು ರಾಜ್ಯದ ಮೊದಲನೇ ಪತ್ರಕರ್ತರೆಂದು ಹೆಸರು ಗಳಿಸಿದರು. ಅವರ  “ನೀತಿ ಚಿಂತಾಮಣಿ(೧೮೮೪)” ಮತ್ತು “ಮಾಡಿದ್ದುಣ್ಣೋ ಮಹಾರಾಯ” ಕೃತಿಗಳಿಂದ ಪುಟ್ಟಣ್ಣ ಖ್ಯಾತರಾಗಿದ್ದರೂ “ಮುಸುಗ ತೆಗೆಯೇ ಮಾಯಾಂಗನೆ”, “ಪೇಟೆ ಮಾತೇನಜ್ಜಿ”, “ಅವರಿಲ್ಲದೂಟ” ಕಾದಂಬರಿಗಳೂ ಅಲ್ಲದೆ ಹಲವಾರು ಕತೆ, ಜೀವನ ಚರಿತ್ರೆ, ರೂಪಾಂತರ/ಭಾಷಾಂತರ, ಪಠ್ಯ ಪುಸ್ತಕ ಮುಂತಾಗಿ ಹಲವು ಹತ್ತು ಅವರಿಂದ ರಚಿತವಾದ ಇತರ ಕೃತಿಗಳು.

ಫೋಟೋ ಕೃಪೆ : ಟಿಪ್ಪಣಿ ಪುಸ್ತಕಗಳು

ಪುಟ್ಟಣ್ಣನವರದು ಅತ್ಯಂತ ಪರಿಶುದ್ಧ ವ್ಯಕ್ತಿತ್ವ. ಅಂತರಂಗದಲ್ಲಿ ಮೃದುವಾಗಿದ್ದರೂ ಖಂಡಿತವಾದಿಯಾಗಿದ್ದರು ಅವರು ಅಮಲ್ದಾರರಾಗಿದ್ದಾಗ ಜಮಾಬಂದಿಗೆ ಅನೇಕ ಬಾರಿ ಸಂಚಾರ ಹೋಗುತ್ತಿದ್ದರು. ಸದಾ ಕಾಲ ಅಡುಗೆಯವನು ಇವರೊಂದಿಗೆ ಇರುತ್ತಿದ್ದ. ಅಕ್ಕಿ ಬೇಳೆ ಸಾಂಬಾರ್ ಪದಾರ್ಥಗಳು ಒಂದು ಸೆಟ್ ಪಾತ್ರೆ ಒಂದು ಕಬ್ಬಿಣದ ಮಡಿಸುವ ಮಂಚ ಜೊತೆಗೆ ಇರುತ್ತಿದ್ದವು. ಎಂದಾದರೂ ಅಡಿಗೆಯವರು ಬರಲಾಗದಿದ್ದರೆ ಗ್ರಾಮಸ್ಥರಿಂದ ಹಾಲು ಹಣ್ಣುಗಳನ್ನು ಕೊಂಡು ತಿನ್ನುತ್ತಿದ್ದರು. ಗ್ರಾಮ ವಾಸಿಗಳು ಎಷ್ಟೇ ಒತ್ತಾಯಿಸಿದರೂ, ಅವರು ಕೊಡುತ್ತಿದ್ದ ಹಾಲು ಹಣ್ಣು ಬೆಣ್ಣೆ ಇತ್ಯಾದಿಗಳನ್ನು ಹಣ ಕೊಡದೇ ಸ್ವೀಕರಿಸುತ್ತಿರಲಿಲ್ಲ. ಒಮ್ಮೆ ಗ್ರಾಮಸ್ಥರು ಅಮಲ್ದಾರರಿಗೆ ಯಾವುದೇ ವಸ್ತುವನ್ನು ಬೆಲೆಗೆ ಕೊಡಬಾರದು ಎಂದು ನಿಶ್ಚಯಿಸಿದರು. ಅಡಿಗೆಯವನೂ ಜೊತೆಗೆ ಇರಲಿಲ್ಲ.

ಫೋಟೋ ಕೃಪೆ : ಟಿಪ್ಪಣಿ ಪುಸ್ತಕಗಳು

ಪುಟ್ಟಣ್ಣನವರು ಜಗ್ಗಲಿಲ್ಲ. ತಮ್ಮ ಅಧಿಕಾರವನ್ನು ಚಲಾಯಿಸಲೂ ಇಲ್ಲ. ತಮ್ಮ ನಂಬಿಕೆಗೆ ಊನವನ್ನು ತಂದುಕೊಳ್ಳಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಉಪವಾಸವೇ ಇದ್ದು ಕೆಲಸ ಮುಗಿಸಿ ಹೋದರು. ಪುಟ್ಟಣ್ಣನವರ ತಾಲೂಕಿಗೆ ಮೇಲಧಿಕಾರಿಗಳು ಬಂದಾಗ ಗ್ರಾಮಸ್ಥರಿಂದ ವಸೂಲಿ ಮಾಡಿದ ಪದಾರ್ಥಗಳಿಗೆ ರಸೀದಿ ಕೊಟ್ಟು ಅಧಿಕಾರಿಗಳಿಂದ ಮಾಡಿ ಆಯಾ ಗ್ರಾಮಸ್ಥರಿಗೆ ಕೊಡಿಸುತ್ತಿದ್ದರು. ಯಾವ ಹಂಗಿಗೂ ಸಿಲುಕದಿದ್ದರೆ ಮಾತ್ರ ಪ್ರಾಮಾಣಿಕವಾಗಿ ಇರಬಹುದು ಎಂಬುದು ಪುಟ್ಟಣ್ಣನವರ ತರ್ಕವಾಗಿತ್ತು.

ಒಮ್ಮೆ ಪುಟ್ಟಣ್ಣನವರ ಪಕ್ಕದ ಮನೆಯವರು ಮನೆ ಖಾಲಿ ಮಾಡಿ ಹೋಗಿದ್ದರು. ಇವರ ಮನೆ ಪಕ್ಕದ ಮನೆ ಎರಡನ್ನೂ ಸರ್ಕಾರದವರು ಇಲಾಖೆಯವರಿಗೆ ಕಟ್ಟಿಸಿಕೊಟ್ಟಿದ್ದವು. ಒಮ್ಮೆ ಪುಟ್ಟಣ್ಣನವರ ಹೆಂಡತಿ ಮನೆಯ ಹಿತ್ತಲಿನಲ್ಲಿ ಕರಿಬೇವು ಮುಗಿದಿದ್ದರಿಂದ, ಖಾಲಿಯಾಗಿದ್ದ ಮನೆಯ ಹಿತ್ತಲಿನಲ್ಲಿದ್ದ ಕರಿಬೇವಿನ ಗಿಡದಿಂದ ಕರಿಬೇವನ್ನು ತರಿಸಿದರು. ಇದನ್ನು ದೂರದಿಂದಲೇ ಗಮನಿಸಿದ ಪುಟ್ಟಣ್ಣನವರು, ಆ ದಿನ ಕರಿಬೇವು ಹಾಕಿದ್ದ ಸಾರು ತಿನ್ನಲಿಲ್ಲ, ಕರಿಬೇವು ಸೇರಿದ್ದ ಮಜ್ಜಿಗೆಯನ್ನೂ ಮುಟ್ಟಲಿಲ್ಲ. ಉಪ್ಪಿನಕಾಯಿಯೊಂದಿಗೆ ಊಟದ ಶಾಸ್ತ್ರ ಮುಗಿಯಿತು. ಎಂದಿನಂತೆ ಕೋರ್ಟಿಗೆ ಹೋದವರು ಹೆಂಡತಿಗೆ ಸಮನ್ಸ್ ಕಳಿಸಿದರು. ಇದ್ದ ಹಾಗೆ ಬರಬೇಕು ಎಂಬ ಆಜ್ಞಿಯಿಂದ ಗಾಭರಿಯಾಗಿ ಅವರ ಪತ್ನಿ ಗೌರಮ್ಮ ಕೋರ್ಟಿಗೆ ಹೋದರು. ‘ಕರಿಬೇವಿನ ಕಳವಿಗೆ ಒಂದು ರೂಪಾಯಿ ದಂಡ ಅಥವಾ ಬೆಳಗಿನಿಂದ ಸಂಜೆಯವರೆಗೆ ಕೋರ್ಟಿನಲ್ಲಿ ಕುಳಿತಿರಬೇಕು’ ಎಂಬ ತೀರ್ಪು ಕೊಟ್ಟರು. ಆಕೆಯ ಬಳಿ ಒಂದು ರೂಪಾಯಿ ಎಲ್ಲಿಂದ ಬರಬೇಕು. ಆಳುಗಳು ಚಂದಾ ಕೂಡಿಸಿ ದಂಡ ತೆತ್ತು ಯಜಮಾನಿಯನ್ನು ಬಿಡಿಸಿಕೊಂಡು ಬಂದರು. ಮನೆಗೆ ಬಂದ ಮೇಲೆ ಪುಟ್ಟಣ್ಣನವರು ದಂಡದ ಹಣವನ್ನು ಆಳುಗಳಿಗೆ ನೀಡಿ ಹೆಂಡತಿಯನ್ನು ಋಣಮುಕ್ತಳನ್ನಾಗಿಸಿದರು.

ಶತಮಾನದ ಹಿಂದಿನವರ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆ ಇಂದಿನವರಿಗೆ ಆದರ್ಶವಾಗಬೇಕು.

  • ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW