ಬೆಳಗಾವಿ ಜಿಲ್ಲಾ ದರ್ಶನಕರ್ನಾಟಕದ ಪ್ರತಿಯೊಂದು ಜಿಲ್ಲೆಯೂ ಒಂದಲ್ಲಾ ಒಂದು ಸ್ಥಳ, ಅಲ್ಲಿನ ವಿಶೇಷತೆಯಿಂದ ಖ್ಯಾತಿ ಪಡೆದಿದೆ. ಅವುಗಳನ್ನೆಲ್ಲಾ ಒಟ್ಟೂ ಹಾಕಿ ಓದುಗರಿಗೆ ಪ್ರತಿ ಜಿಲ್ಲಾ ದರ್ಶನವನ್ನು ಮಾಡಿಸಲು ಹೊರಟಿದ್ದಾರೆ ಲೇಖಕರಾದ ಸಿ ವಿ ಬಾಹುಬಲಿ ಜಯರಾಜ್ ಅವರು. ಓದಿ, ನಮ್ಮ ಜಿಲ್ಲೆ ನಮ್ಮ ಹೆಮ್ಮೆ ಅನ್ನಿ…

ಬೆಳಗಾವಿ ಕೋಟೆ

ಈ ಕೋಟೆ ನೂರು ಎಕರೆ ಪ್ರದೇಶದಲ್ಲಿ ವರ್ತುಲಾಕಾರದಲ್ಲಿದ್ದು ೧೨ ನೇ ಶತಮಾನದಲ್ಲಿ ರಟ್ಟರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದೆ.

ಈ ಕೋಟೆ ಆಳವಾದ ಕಂದಕದಿಂದ ಸುತ್ತುವರಿದಿದೆ. ಕಂದಕದ ತಳ ಭಾಗದಿಂದ ೩೨ ಅಡಿ ಎತ್ತರದ ಗೋಡೆಯನ್ನು ನಿರ್ಮಿಸಲಾಗಿದೆ. ಒಳಾಂಗಣ ೯೧೦ ಮೀಟರ್ ಉದ್ದ ಹಾಗೂ ೭೩೦ ಅಡಿ ಅಗಲವಿದ್ದು, ಎರಡು ದ್ವಾರಗಳನ್ನು ಒಳಗೊಂಡಿದೆ. ಕೋಟೆಯೊಳಗೆ ವೀರಗಲ್ಲು, ಮಾಸ್ತಿಕಲ್ಲು, ಕಮಲ ಬಸದಿ, ಸಫಾ ಮಸೀದಿ ಹಾಗೂ ರಾಮಕೃಷ್ಣ ಮಿಷನ್ ಆಶ್ರಮವಿದೆ.

ಕೋಟೆಯ ಪ್ರವೇಶದ್ವಾರದಲ್ಲಿ ಎರಡು ಹಿಂದೂ ದೇವಾಲಯಗಳಿವೆ. ಒಂದು ಗಣೇಶನ ದೇವಸ್ಥಾನ. ಇನ್ನೊಂದು ದುರ್ಗಾ ದೇವಸ್ಥಾನ. ಇದನ್ನು ಕೋಟೆಗಳ ಮತ್ತು ಯುದ್ಧದ ದೇವತೆ ಎಂದು ಪರಿಗಣಿಸಲಾಗಿದೆ. ಇದು ಕೋಟೆಯ ಒಂದು ಮೂಲೆಯಲ್ಲಿದೆ. ದೇವಾಲಯದ ಹೊರ ಮುಂಭಾಗವು ಪೌರಾಣಿಕ ವ್ಯಕ್ತಿಗಳ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತದೆ.

ಫೋಟೋ ಕೃಪೆ : Tripadvisor

ಕೋಟೆಯಲ್ಲಿ ದೇಶದ ಜೈನ ಬಸದಿಗಳಲ್ಲೇ ಕಲಾತ್ಮಕವಾದ ಹಾಗೂ ಅಲಂಕಾರಿಕ ಕೆತ್ತನೆಯ ಪ್ರಮುಖ ಬಸದಿಯಾದ ಕಮಲ ಬಸದಿಯಿದೆ. ಒಳ ಭಾಗದಲ್ಲಿ ಕಮಲದ ಆಕಾರದ ಸೂಕ್ಷ್ಮ ಕೆತ್ತನೆಯಿಂದಾಗಿ ಇದು ಕಮಲ ಬಸದಿ ಎಂದೇ ಜನಪ್ರಿಯವಾಗಿದೆ.

ಕಮಲ ಬಸದಿಯ ಕಂಬಗಳು ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಅದೆಷ್ಟು ನುಣುಪಾಗಿವೆಯೆಂದರೆ ಅವುಗಳಲ್ಲಿ ನಮ್ಮ ಪ್ರತಿಬಿಂಬವನ್ನು ಕಾಣಬಹುದಾಗಿದೆ. ಗರ್ಭ ಗುಡಿಯಲ್ಲಿರುವ ಭಗವಾನ್ ನೇಮಿನಾಥನ ದಿವ್ಯವಾದ ಕಪ್ಪು ಶಿಲೆಯ ಮೂರ್ತಿಯು ಗುಡಿಗಿಂತಲೂ ಹಳೆಯದು. ಈ ಮೂರ್ತಿ ಸುಮಾರು ಇನ್ನೂರು ವರ್ಷಗಳ ಹಿಂದೆ ಕಾಡಿನಲ್ಲಿ ದೊರೆತಿದೆ. ಇಲ್ಲಿ ವರ್ತಮಾನದ ೨೪ ತೀರ್ಥಂಕರರನ್ನು ಚಿತ್ರಿಸಿರುವುದಲ್ಲದೆ ಮುಂದಿನ ಭವದ ೨೪ ತೀರ್ಥಂಕರರನ್ನು ಸಹ ಚಿತ್ರಿಸಲಾಗಿದೆ.

ಈ ಬಸದಿಗೆ ಭೂಮಿ ದಾನ ಮಾಡಿದ ವಿಷಯದ ಶಾಸನ ಈಗ ಲಂಡನ್‌ನ ಬ್ರಿಟೀಷ್ ಮ್ಯೂಸಿಯಂ ನಲ್ಲಿದೆ.

ಫೋಟೋ ಕೃಪೆ : Wikimedia (ಸಫಾ ಮಸೀದಿ)

ಈ ಕೋಟೆಯು ಎರಡು ಮಸೀದಿಗಳಾದ ಸಫಾ ಮಸೀದಿ ಮತ್ತು ಜಾಮಿಯಾ ಮಸೀದಿ ಹೊಂದಿದೆ. ಮಸೀದಿಯ ಸ್ತಂಭಗಳು ನಾಗರಿ ಮತ್ತು ಪರ್ಷಿಯನ್ ಶೈಲಿಗಳ ಸಮ್ಮಿಲನದಲ್ಲಿ ಸೊಗಸಾದ ಶಾಸನಗಳನ್ನು ಹೊಂದಿವೆ. ಇಲ್ಲಿನ ಎರಡು ಸ್ತಂಭಗಳು ಹಿಂದೂ ದೇವಾಲಯಗಳಿಂದ ಬಂದಿದ್ದು, ನಾಗರಿ ಲಿಪಿಯಲ್ಲಿ ಕನ್ನಡ ಶಾಸನಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ.

ಈ ಕೋಟೆಯನ್ನು ಶತ್ರುಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಅತ್ಯಂತ ದೊಡ್ಡ ದೊಡ್ಡದಾದ ಕಬ್ಬಿಣ ದ್ವಾರಗಳಿಂದ ಭದ್ರವಾಗಿ ನಿರ್ಮಿಸಲಾಗಿದೆ. ಕೋಟೆಯ ಪ್ರವೇಶ ದ್ವಾರವನ್ನು 1631ರಲ್ಲಿ ನಿರ್ಮಾಣ ಮಾಡಲಾಗಿದೆ. ಕಾಮಾನುಗಳನ್ನು ಒಳಗೊಂಡ ಈ ಕೋಟೆ ಅತ್ಯಂತ ಸುಂದರವಾಗಿ ಕಾಣುತ್ತದೆ.

ಈ ಐತಿಹಾಸಿಕ ಕೋಟೆಯು ಹಿಂದೂ, ಜೈನ, ಇಸ್ಲಾಮಿಕ್ ವಾಸುಶಿಲ್ಪದಿಂದ ಕೂಡಿದ್ದು ಕಲ್ಲು ಹಾಗೂ ಮಣ್ಣಿನಿಂದ ನಿರ್ಮಾಣಗೊಂಡಿದೆ.

ಬೆಳಗ್ಗೆ 8 ರಿಂದ ಸಂಜೆ 6:30 ರವರೆಗೆ ಕೋಟೆಗೆ ಪ್ರವೇಶವಿದೆ.

ರಾಷ್ಟ್ರ ಧ್ವಜಸ್ತಂಭ :

ನಗರದ ಕೋಟೆಕೆರೆ ಆವರಣದಲ್ಲಿ ನಿರ್ಮಿಸಿರುವ ಬರೋಬ್ಬರಿ ೩೬೦ ಅಡಿ (೧೧೦ ಮೀಟರ್‌) ಎತ್ತರದ ರಾಷ್ಟ್ರ ಧ್ವಜಸ್ತಂಭವಿದೆ.
ಭಾರತ-ಪಾಕಿಸ್ತಾನ ಗಡಿ ವಾಘಾ ದಲ್ಲಿರುವ ಧ್ವಜಸ್ತಂಭವೂ ೩೬೦ ಅಡಿ ಎತ್ತರವಿದೆ ಎನ್ನುವ ಮಾಹಿತಿಯಿದೆ. ೧೨೦  ಅಡಿ ಅಗಲ ಮತ್ತು 80 ಅಡಿ ಉದ್ದದ 500 ಕೆಜಿ ತೂಕದ ರಾಷ್ಟ್ರಧ್ವಜ ಈ ಸ್ತಂಭದಲ್ಲಿ ದಿನದ 24 ಗಂಟೆಯೂ ಹಾರಾಡಲಿದೆ. ರಾತ್ರಿ ಹೊತ್ತು ಧ್ವಜ ಕಾಣುವ ಸಲುವಾಗಿ ಫೋಕಸ್‌ ಲೈಟ್‌ಗಳನ್ನು ಸಹ ಅಳವಡಿಸಲಾಗಿದೆ

ಗೋಕಾಕ್ ಜಲಪಾತ :

ಫೋಟೋ ಕೃಪೆ : narivishwa

ಗೋಕಾಕ ಜಲಪಾತ ಕರ್ನಾಟಕದ ಎರಡನೇ ದೊಡ್ಡ ಜಲಪಾತ. ನೈಸರ್ಗಿಕವಾಗಿ ಕೊರೆದಿರುವ ಬಂಡೆಗಳ ಮೇಲಿಂದ 52 ಮೀಟರ್ ಕೆಳಗೆ ಘಟಪ್ರಭಾ ನದಿಯು ಇಲ್ಲಿ ರಭಸವಾಗಿ ಧುಮುಕುತ್ತದೆ.
ಈ ಜಲಪಾತವು ಮಳೆಗಾಲ ಹಾಗೂ ಚಳಿಗಾಲದಲ್ಲಿ ತುಂಬಿ ಹರಿಯುತ್ತದೆ. ಮಳೆಗಾಲದಲ್ಲಿ ದಪ್ಪ ಕೆಂಪು ಕಂದು ಬಣ್ಣದ ನೀರು ಬಂಡೆಯ ಅಂಚನ್ನು ಉಜ್ಜುತ್ತ ಸ್ವಲ್ಪ ದೂರದಿಂದ ಕೇಳಿಸುವ ಸಣ್ಣ ಘರ್ಜನೆಯೊಂದಿಗೆ ಹರಿದು ಬರುತ್ತದೆ. ಈ ಜಲಪಾತ ವೀಕ್ಷಿಸಲು ನದಿಯ ಉದ್ದಕ್ಕೂ ಸುಮಾರು 201 ಮೀ. ಉದ್ದದ ತೂಗು ಸೇತುವೆ ಇದೆ. ಇಲ್ಲಿ ಒಮ್ಮೆಗೆ 30 ಜನರಿಗೆ ಮಾತ್ರ ಹೋಗಲು ಅವಕಾಶವಿದೆ. ಇಲ್ಲಿ ನಿಂತು ಜಲಪಾತವನ್ನು ವೀಕ್ಷಿಸುವುದು ಒಂದು ಅದ್ಭುತ ಅನುಭವ. ಎಲ್‌ ಆಕಾರದಲ್ಲಿರುವ ಈ ಜಲಪಾತದ ಸೊಬಗನ್ನು ಸವಿಯಲು ಧೈರ್ಯವೂ ಬೇಕು. ಏಕೆಂದರೆ ನದಿಯ ರಭಸ ಆ ಪರಿಯದು. ಜೋರಾಗಿ ಬೀಸುವ ಗಾಳಿಗೆ 201 ಮೀ. ಉದ್ದದ ಸೇತುವೆ ಅಕ್ಷರಶಃ ತೂಗುಯ್ಯಾಲೆಯಂತಾಗುತ್ತದೆ.

ಈ ಜಲಪಾತದ ಬಳಿ ಒಂದು ಸುಂದರ ಗಾರ್ಡನ್‌ ಕೂಡಾ ಇದೆ.

ಈ ಜಲಪಾತ ಗೋಕಾಕ್ ನಗರದಿಂದ 6 ಕಿ.ಮೀ. ದೂರದಲ್ಲಿದೆ. ಜಲಪಾತದ ಸ್ಥಳದಲ್ಲಿ ವಸತಿಗಾಗಿ ಹೊಟೇಲ್‌ಗಳ ವ್ಯವಸ್ಥೆಯೂ ಇದೆ.

ಕಿತ್ತೂರು ಕೋಟೆ :

ಈ ಕೋಟೆಯು ಕಿತ್ತೂರು ರಾಣಿ ಚೆನ್ನಮ್ಮನ ಕಾಲದಲ್ಲಿ ನಿರ್ಮಿಸಲಾದದ್ದು ಎನ್ನಲಾಗುತ್ತದೆ. ಕೋಟೆಯ ಮಣ್ಣಿನ ಗೋಡೆ ಏಳು ಅಡಿ ದಪ್ಪವಿದೆ. ಎತ್ತರದ ದಿಬ್ಬದ ಮೇಲಿರುವುದರಿಂದ ಕೋಟೆ ಅನೇಕ ಮೈಲಿಗಳವರೆಗೆ ಎದ್ದು ಕಾಣುತ್ತದೆ.

ಫೋಟೋ ಕೃಪೆ : Justdial

ಈ ಕೋಟೆಯ ಗೋಡೆಗಳ ಮಧ್ಯದಲ್ಲಿ 1.5 ಅಡಿ ವ್ಯಾಸದ ಓರೆಯಾಗಿ ಕೂಡಿಸಿದ ಕಬ್ಬಿಣದ ಕೊಳವೆಯಿದ್ದು ಅದು ಆಕಾಶದ ಕಡೆಗೆ ಮುಖ ಮಾಡಿದೆ. ಇದು ನಕ್ಷತ್ರಗಳ ವೀಕ್ಷಣೆಗೆ ಮಾಡಿದ್ದಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ನೀರಿನ ವ್ಯವಸ್ಥೆ ಅಚ್ಚರಿ ಉಂಟು ಮಾಡುತ್ತದೆ. ಒಂದು ಕಡೆ ಸಂಗ್ರಹಿಸಿದ ನೀರು ಇಡೀ ಅರಮನೆಗೆ ಪೂರೈಕೆಯಾಗುತ್ತಿತ್ತು.

ಕೋಟೆಯ ಒಳಗೆ ಪ್ರವೇಶಿಸಿಸುತ್ತಿದ್ದಂತೆ ಇಲ್ಲಿ ವಸ್ತು ಸಂಗ್ರಹಾಲಯವನ್ನು ಕಾಣಬಹುದು. ರಾಜರ ಕಾಲದ ಕತ್ತಿ, ಗುರಾಣಿ, ಬೀಸುಕಲ್ಲು, ನಾಣ್ಯಗಳು ಹಾಗೂ ಆ ಕಾಲದ ಪ್ರಮುಖ ವಸ್ತುಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

ವಸ್ತು ಸಂಗ್ರಹಾಲಯದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಕಾಣುವುದು ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದ ಬತ್ತೇರಿ. ಅಲ್ಲಿಂದ ಸ್ವಲ್ಪ ದೂರ ಸಾಗಿದರೆ ಒಂದು ಕಾಲದಲ್ಲಿ ಬಲಾಢ್ಯ ಕೋಟೆಯಾಗಿದ್ದ ದೊಡ್ಡ ಕೋಟೆಯ ಭಗ್ನಾವಶೇಷಗಳು ಕಾಣುತ್ತವೆ. ಸರ್ಕಾರ ಈ ಅಳಿದುಳಿದ ಭಗ್ನಾವಶೇಷಗಳ ಸುತ್ತಲೂ ಹಸಿರು ಹುಲ್ಲು ಹಾಸು ಬೆಳೆಸುವ ಮೂಲಕ ಸೌಂದರ್ಯ ಹೆಚ್ಚಿಸಿದೆ. ಅರಮನೆಯ ಮುಖ್ಯದ್ವಾರ ಹಾಳಾಗಿದ್ದು, ಅದರ ಹತ್ತಿರದಲ್ಲಿ ೧೦೦ ಅಡಿ ಅಗಲ ೩೦೦ ಅಡಿ ಉದ್ದದ ದ್ವಾರ ಮಂಟಪವಿದೆ. ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಅತಿಥಿಗಳ ಕೋಣೆಗಳು, ಸಭಾಗೃಹ, ಭೋಜನಾಲಯ, ಪೂಜಾ ಕೊಠಡಿ, ಸ್ನಾನದ ಮನೆ ಗಮನ ಸೆಳೆಯುತ್ತವೆ.ವಸ್ತುಸಂಗ್ರಹಾಲಯದ ಸಮೀಪದಲ್ಲಿ ಇರುವ ಕಲ್ಮಠ ರಾಜಗುರುಗಳ ಸಂಸ್ಥಾನ ಮಠ. ಈ ಮಠದಲ್ಲಿ ಮುದಿ ಮಲ್ಲಪ್ಪ ಸರದೇಸಾಯಿ, ರುದ್ರಸರ್ಜ, ವೀರಪ್ಪಗೌಡ ಸರದೇಸಾಯಿ, ಮಲ್ಲಸರ್ಜ, ರಾಣಿ ಚೆನ್ನಮ್ಮಳ ಮಗ ಬಾಳಾಸಾಹೇಬ, ಶಿವಲಿಂಗ ರುದ್ರಸರ್ಜನ ಸಮಾಧಿಗಳಿವೆ. ಇಲ್ಲಿ ಒಂದು ಸುಂದರವಾದ ಉದ್ಯಾನವೂ ಇದೆ.

ಇಲ್ಲಿಗೆ ಪ್ರತಿ ದಿನ ಬೆಳಗ್ಗೆ೯ ರಿಂದ ಸಂಜೆ ೫ ರ ಉಚಿತ ಪ್ರವೇಶವಿದೆ.
ಸರಕಾರಿ ರಜೆಗಳನ್ನು ಹೊರತುಪಡಿಸಿದರೆ ವಾರದ ರಜೆ ಸೋಮವಾರ.

ಕಿತ್ತೂರು ಕೋಟೆಯು ಬೆಳಗಾವಿಯಿಂದ ೫೦ ಕಿ.ಮೀ. ದೂರದಲ್ಲಿದೆ.

ನವಿಲುತೀರ್ಥ :

ಫೋಟೋ ಕೃಪೆ : Mapio

ಮಲಪ್ರಭಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು ಪ್ರದೇಶವೇ ’’ನವಿಲುತೀರ್ಥ’’. ಇಲ್ಲಿ ವೃತ್ತಾಕಾರದ ಕಮಾನು ಹೊಂದಿರುವ ಸ್ವಾಗತ ಮಾರ್ಗವು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅಲ್ಲಿಂದ ನೇರ ಬಂದರೆ ತಿರುವಿದೆ. ಕೆಳಗೆ ಹೊರಟರೆ ಅಣೆಕಟ್ಟು ತಲುಪಬಹುದು. ಹಾಗೆ ಮಾಡದೆ ತಿರುವಿನಲ್ಲಿ ಎಡಕ್ಕೆ ಬಂದರೆ ಅಲ್ಲಿ ಪಕ್ಷಿಧಾಮ, ವಿಶ್ರಾಂತಿ ಗೃಹಗಳಾದ ಪ್ರಿಯದರ್ಶಿನಿ, ಚಾಲುಕ್ಯ ದರ್ಶಿನಿಗಳ ಮಧ್ಯದಲ್ಲಿ 1000 ಅಡಿ ಉದ್ದ 70 ಅಡಿ ಅಗಲ ಕಲ್ಲು ಹಾಸಿನಲ್ಲಿ ಕಪ್ಪು ಹಾಗೂ ಕೆಂಪು ಮಣ್ಣಿನಲ್ಲಿ ಮಾಡಲಾದ ಉದ್ಯಾನವನವು ಸಿಗುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಇಲ್ಲಿ ಹೂ ಗಿಡಗಳ ಪ್ರದರ್ಶನ ಏರ್ಪಡಿಸಿರುತ್ತಾರೆ. ಆಗ ಗುಲಾಬಿ, ಚೆಂಡು ಹೂ, ಗ್ಲ್ಯಾಡಿಯೋಸಿಸ್. ಜರ್ಬೇರಾ ಮೊದಲಾದ 35ಕ್ಕೂ ಹೆಚ್ಚು ವಿವಿಧ ರೀತಿಯ ಹೂ ಗಿಡಗಳನ್ನು ಬೆಳೆಸಿರುತ್ತಾರೆ.ಇಲ್ಲಿರುವ ಪಕ್ಷಿಧಾಮದಲ್ಲಿ ನವಿಲು, ಪಾರಿವಾಳ, ಮೊಲಗಳನ್ನು ಕಾಣಬಹುದು. ಅದರ ಪಕ್ಕದಲ್ಲಿ ಗುಲಾಬಿ ಗಿಡಗಳಿವೆ. ಮುಂದೆ ಸಾಗಿ ಬಂದರೆ ನದಿಯು ಹರಿದಿರುವ ಸ್ಥಳಗಳನ್ನು ಪ್ರತಿಕೃತಿಯ ಮೂಲಕ ನಕ್ಷೆಯ ಆಧಾರದಲ್ಲಿ ನಿರ್ಮಿಸಲಾಗಿದೆ. ಇವನ್ನೆಲ್ಲ ವೀಕ್ಷಿಸಿ ಮೊದಲಿಗೆ ಬಂದ ತಿರುವಿನವರೆಗೂ ಬಂದು ಕೆಳಗಿನ ಮಾರ್ಗದತ್ತ ತೆರಳಿದರೆ ಕಂಡು ಬರುವುದೇ ಶಂಕರ ಉದ್ಯಾನವನ. ಇಲ್ಲಿಯೂ ಕೂಡ ವಿವಿಧ ಬಗೆಯ ಹೂ ಗಿಡಗಳು ನೀಲಗಿರಿ, ಅಶೋಕ ವೃಕ್ಷಗಳು ವಿವಿಧ ವಿನ್ಯಾಸದಲ್ಲಿ ಕಂಡುಬರುತ್ತವೆ. ಅಲ್ಲಲ್ಲಿ ನೀರಿನ ತುಂತುರು ಸಿಂಚನ, ದಟ್ಟವಾಗಿ ಬೆಳೆದು ಹಾಸಿಕೊಂಡಿರುವ ಗರಿಕೆ ಹುಲ್ಲಿನ ಹಾಸು, ಚಿಕ್ಕಚೊಕ್ಕದಾದ ರಸ್ತೆ. ಸುತ್ತಲೂ ಅಂದವಾಗಿ ಕೆಲವೆಡೆ ಜೋಡಿಸಿಟ್ಟ ಹೂವಿನ ಕುಂಡಗಳು, ಗಮನಸೆಳೆಯುತ್ತವೆ. ಇವನ್ನೆಲ್ಲ ವೀಕ್ಷಿಸಿ ಕೆಳಕ್ಕೆ ಬಂದರೆ ಪೂರ್ಣ ತಗ್ಗು ಪ್ರದೇಶ ಸಿಗುತ್ತದೆ. ಅದೇ ಅಣೆಕಟ್ಟು.
ನಾಲ್ಕುಗೇಟ್ ಹೊಂದಿರುವ ಅಣೆಕಟ್ಟು ಅದರ ಮೇಲಿನ ರಸ್ತೆ ಒಂದೆಡೆ ಹಿನ್ನೀರು ಇನ್ನೊಂದೆಡೆ ಗೇಟ್ ಮೂಲಕ ಮುನವಳ್ಳಿಯತ್ತ ಹರಿಯುತ್ತಿರುವ ನೀರು. ಈ ತಗ್ಗಿನಲ್ಲಿ ನಿಂತು ಮೇಲೆ ದೃಷ್ಟಿ ಹಾಯಿಸಿದರೆ ಆಳವಾದ ಕಂದಕದಲ್ಲಿ ನಿಂತ ಅನುಭವ, ಸುತ್ತಲೂ ಬೆಟ್ಟ ಹಸಿರು ನಿಸರ್ಗ, ಇಲ್ಲಿ ಇನ್ನೂ ಕೆಳಕ್ಕೆ ಬಂದರೆ ರಾಮಲಿಂಗೇಶ್ವರ ದೇವಾಲಯ ಹಾಗೂ ಗುಹೆಗಳಿವೆ. ಈ ಗುಹಾಂತರ ದೇವಾಲಯದಲ್ಲಿ ಕಾಳಿಕಾದೇವಿ, ವಿಠ್ಠಲ-ರುಕ್ಮಿಣಿ, ಶಯನದಲ್ಲಿರುವ ವಿಷ್ಣು, ಲಿಂಗಗಳು ಗಮನ ಸೆಳೆಯುತ್ತವೆ.

ಈ ಆಣೆಕಟ್ಟು ಮುನವಳ್ಳಿಯಿಂದ 4 ಕಿ.ಮೀ., ಸವದತ್ತಿಯಿಂದ 12 ಕಿ.ಮೀ. ದೂರದಲ್ಲಿದೆ.

ಬಾದಾಮಿ :
ಬಾದಾಮಿ ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುಂಚೆ ಇದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು.

ಫೋಟೋ ಕೃಪೆ : Wikipedia

ಕೊಳದ ಪಶ್ಚಿಮ ಭಾಗದಲ್ಲಿರುವ ಅಖಂಡ ಬಂಡೆಗಳಲ್ಲಿ ನಿರ್ಮಿಸಲಾಗಿರುವ ನಾಲ್ಕು ಗುಹಾಲಯಗಳು ಮೇಣ (ಮೇಗಣ) ಬಸ್ತಿಗಳೆಂದು ಪ್ರಸಿದ್ಧವಾಗಿವೆ. ಇಲ್ಲಿರುವ ಬೃಹತ್ ಬೆಟ್ಟವನ್ನು ಬೆಣ್ಣೆಯಂತೆ ಕೊರೆದು ಕಲಾಸಿರಿಯನ್ನು ತುಂಬಿರುವುದು ಎಂಥವರನ್ನೂ ಚಕಿತರನ್ನಾಗಿಸುತ್ತದೆ.

ಕೊಳದ ಪಶ್ಚಿಮ ಭಾಗದಲ್ಲಿರುವ ಅಖಂಡ ಬಂಡೆಗಳಲ್ಲಿ ನಿರ್ಮಿಸಲಾಗಿರುವ ನಾಲ್ಕು ಗುಹಾಲಯಗಳು ಮೇಣ (ಮೇಗಣ) ಬಸ್ತಿಗಳೆಂದು ಪ್ರಸಿದ್ಧವಾಗಿವೆ. ಇಲ್ಲಿರುವ ಬೃಹತ್ ಬೆಟ್ಟವನ್ನು ಬೆಣ್ಣೆಯಂತೆ ಕೊರೆದು ಕಲಾಸಿರಿಯನ್ನು ತುಂಬಿರುವುದು ಎಂಥವರನ್ನೂ ಚಕಿತರನ್ನಾಗಿಸುತ್ತದೆ.

ಈ ಗುಹಾಲಯಗಳಲ್ಲಿ ಒಂದು ಶೈವ, ಎರಡು ವೈಷ್ಣವ, ಇನ್ನೊಂದು ಜೈನಸಂಪ್ರದಾಯಕ್ಕೆ ಸೇರಿದವು.

ಶಿವನಿಗೆಂದು ಮೀಸಲಾಗಿರುವ ಮೊದಲನೆಯ ಗವಿಯಲ್ಲಿ ಒಂದು ಹೆಚ್ಚುವರಿ ಕೋಣೆಯಿದೆ.ಎರಡನೆಯ ಮತ್ತು ಮೂರನೆಯ ಗುಹೆಗಳ ನಡುವೆ ಒಂದು ತೀರ ಚಿಕ್ಕದಾದ ನೈಸರ್ಗಿಕ ಗುಹೆ ಇದ್ದು ಅದರಲ್ಲಿ ಪದ್ಮಪಾಣಿಯಾದ ಬುದ್ಧನ ಉಬ್ಬುಚಿತ್ರ ಇದೆ. ಇದರ ಸುತ್ತಲೂ ಆಶೀರ್ವಾದ ಭಂಗಿಯಲ್ಲಿರುವ ಚಿತ್ರಗಳಿವೆ.

ನಾಲ್ಕು ಗುಹೆಗಳೂ ಬೇರೆ ಬೇರೆ ಎತ್ತರಗಳಲ್ಲಿ ನಿರ್ಮಿತವಾಗಿದ್ದು ಒಂದರಿಂದ ಇನ್ನೊಂದಕ್ಕೆ ಹೋಗಲು ಮೆಟ್ಟಿಲುಗಳಿವೆ. ಪ್ರತಿಯೊಂದು ಗುಹೆಯಲ್ಲಿಯೂ ಆಯತಾಕಾರದ ಮೊಗಸಾಲೆ (ವೆರಾಂಡಾ), ವಿಶಾಲವಾದ ಸಭಾಗೃಹ ಮತ್ತು ಗರ್ಭಗುಡಿಗಳಿವೆ.

ಶೈವ ಗುಹಾಲಯ :
ಇದು ಒಂದನೇ ಗುಹಾಲಯವಾಗಿದ್ದು 5ನೇ ಶತಮಾನದಲ್ಲಿ ನಿರ್ಮಾಣವಾಗಿದೆ.

ನೆಲ ಮಟ್ಟದಿಂದ ಸುಮಾರು ನಲವತ್ತು ಮೆಟ್ಟಿಲುಗಳನ್ನು ಹತ್ತಿ ಈ ಮೊದಲನೆಯ ಗುಹೆಗೆ ಹೋಗಬೇಕು. ಇದರಲ್ಲಿ ಒಂದು ಶಿವಲಿಂಗವಿದೆ. ಇಲ್ಲಿರುವ ತಾಂಡವ ನೃತ್ಯದಲ್ಲಿ ಮಗ್ನವಾಗಿರುವ ಹದಿನೆಂಟು ತೋಳುಗಳ ನಟರಾಜನ ಶಿಲ್ಪವು ಪ್ರಸಿದ್ಧವಾಗಿದೆ. ಹದಿನೆಂಟು ಕೈಗಳ ನಟರಾಜ, ಅದರ ಪ್ರತಿಯೊಂದು ಕೈಯಲ್ಲಿ ಹಿಡಿದ ವಿವಿಧ ಆಯುಧಗಳು, ಅದರ ನರ್ತನದ ವಿಶೇಷ ಭಂಗಿ ಮೋಹಕವಾಗಿದೆ. ಇಷ್ಟೊಂದು ಬಾಹುಗಳುಳ್ಳ ನಟರಾಜನ ಶಿಲ್ಪ ಪ್ರಪಂಚದಲ್ಲಿ ಮತ್ತೆಲ್ಲೂ ಕಾಣಸಿಗುವುದಿಲ್ಲ. ಈ ನಟರಾಜನ ಕೆತ್ತನೆಯು 5 ಅಡಿ ಎತ್ತರವನ್ನು ಹೊಂದಿದೆ.

ಫೋಟೋ ಕೃಪೆ : Wikimedia

ಈ ಗುಹೆಯಲ್ಲಿಯೇ ಅರ್ಧನಾರೀಶ್ವರ ಮತ್ತು ಹರಿಹರೇಶ್ವರರ ಪ್ರತಿಮೆಗಳೂ ಇವೆ. ಇವು ಶಿವ ಮತ್ತು ವಿಷ್ಣುಗಳ ಏಕ ಭಾವವನ್ನೂ ಅಂತೆಯೇ ಪರುಷತತ್ವ ಹಾಗೂ ಸ್ತ್ರೀತತ್ವಗಳ ಸಮನ್ವಯವನ್ನೂ ಸಾಂಕೇತಿಕವಾಗಿ ನಿರೂಪಿಸುತ್ತವೆ. ಈ ಗುಹೆಯ ಗೋಡೆಗಳ ಮೇಲೆ ಮಹಿಷಾಸುರ ಮರ್ದಿನಿ, ಗಣಪತಿ ಮತ್ತು ನವಿಲಿನ ಮೇಲೆ ಆಸೀನನಾದ ಷಣ್ಮುಖನ ಉಬ್ಬು ಚಿತ್ರಗಳನ್ನು ಕೆತ್ತಲಾಗಿದೆ. ಮೇಲ್ಭಾಗದ ತೊಲೆಗಳ ಮೇಲಿರುವ ಶಿವ ಪಾರ್ವತಿಯರ ವಿವಾಹದ ಶಿಲ್ಪ ಮತ್ತು ಚಾವಣಿಯ ಮೇಲಿರುವ ಗಜಲಕ್ಷ್ಮಿಯ ಶಿಲ್ಪಗಳು ಬಹಳ ಆಕರ್ಷಕವಾಗಿವೆ. ಗುಹೆಯಲ್ಲಿರುವ ಕಂಬಗಳು ಒಂದು ಮಿಥುನ ಶಿಲ್ಪ ಹಾಗೂ ನರಸಿಂಹ, ಗರುಡ, ಸನ್ಯಾಸಿ ಮತ್ತು ಪ್ರಹ್ಲಾದರ ಚಿಕ್ಕ ಶಿಲ್ಪಗಳಿಂದ ಅಲಂಕೃತವಾಗಿವೆ. ಇದರಲ್ಲಿನ ಪಾರ್ವತಿ ಭಾಗದಲ್ಲಿನ ಕಿರೀಟ, ಕರ್ಣಕುಂಡಲ, ಬಳೆಗಳು, ತೋಳ್ಬಂದಿ ಮುಂತಾದವುಗಳು ಹಾಗು ಶಿವನ ಭಾಗದಲ್ಲಿನ ಜಟಾಮುಕುಟ, ನಾಗಪರಶು, ಅರ್ಧಚಕ್ರ ಹಾಗು ನಂದಿಯ ಕೆತ್ತನೆಗಳು ಆಕರ್ಷಕವಾಗಿವೆ. ಅಲ್ಲೇ ಬುಡದಲ್ಲಿ ಶಿವನ ಈ ‘ಅರ್ಧನಾರೀಶ್ವರ’ನ ರೂಪಕ್ಕೆ ಕಾರಣನಾದ ಅಸ್ಥಿಪಂಜರದ ಭೃಂಗಋಷಿಯ ಕೆತ್ತನೆಯಿದೆ. ಮತ್ತೊಂದು ಗಮನ ಸೆಳೆಯುವ ಶಿಲ್ಪವೆಂದರೆ ಲಕ್ಷ್ಮಿ, ಪಾರ್ವತಿ ಸಹಿತನಾಗಿರುವ ಹರಿ, ಹರನ ಶಿಲ್ಪ. ಇದರಲ್ಲೂ ಶಿವನ ಭಾಗದಲ್ಲಿರುವ ಜಟಾಮುಕುಟ, ಸರ್ಪಕುಂಡಲ, ಸರ್ಪ ಯಜ್ಞೋಪವೀತಗಳು ಗಮನ ಸೆಳೆಯುತ್ತವೆ. ಇದಲ್ಲದೇ ಇಲ್ಲಿನ ತ್ರಿಶೂಲಧಾರಿ ದ್ವಾರಪಾಲಕರು, ಐದುಹೆಡೆಯ ನಾಗರಾಜ, ವಿದ್ಯಾಧರ ದಂಪತಿಗಳು, ಪಾರ್ವತಿ ಕಲ್ಯಾಣ, ಭಿಕ್ಷಾಟನಾ ಶಿವ, ಸ್ತ್ರೀ-ಪುರುಷರ ಮಿಥುನ ಶಿಲ್ಪಗಳು ಆಕರ್ಷಕವಾಗಿವೆ.ವೈಷ್ಣವ ಗುಹಾಲಯ :

ಇದು ಎರಡನೇ ಗುಹಾಲಯವಾಗಿದೆ. ಇಲ್ಲಿನ ಗರ್ಭಗುಡಿಯೊಳಗೆ ಯಾವ ವಿಗ್ರಹವೂ ಇಲ್ಲ. ಗುಹೆಯ ಪ್ರವೇಶ ದ್ವಾರವು ನಾಲ್ಕು ಸ್ತಂಭಗಳನ್ನು ಹೊಂದಿದೆ. ಪ್ರವೇಶದಲ್ಲಿಯೇ ಇರುವ ಇಬ್ಬರು ದ್ವಾರಪಾಲಕರ ಶಿಲ್ಪಗಳನ್ನು ನೋಡಿದ ನಂತರ ವಿಷ್ಣುವಿನ ಅವತಾರಗಳಾದ ಭೂವರಾಹ ಮತ್ತು ವಾಮನರ ಬೃಹತ ಗಾತ್ರದ ವಿಗ್ರಹಗಳು ಕಾಣಿಸುತ್ತವೆ. ಗುಹೆಯ ಜಂತಿಯ ಮೇಲೆ ವಿಷ್ಣುವಿನ ಬೇರೆ ಬೇರೆ ಅವತಾರಗಳಿಂದ ಆರಿಸಲಾದ ಘಟನೆಗಳನ್ನು ನಿರೂಪಿಸುವ ಚಿಕಣಿ ಶಿಲ್ಪಗಳು ರೂಪಿತವಾಗಿವೆ. ಹಾಗೆಯೇ ಕಂಬಗಳ ಮೇಲೆ ಬ್ರಹ್ಮ, ವಿಷ್ಣು, ಶಿವ ಮತ್ತು ಗಜಲಕ್ಷ್ಮಿಯರ ಶಿಲ್ಪಗಳನ್ನೂ ನೋಡಬಹುದು
ಇಲ್ಲಿನ ಭೂವರಾಹ ಮೂರ್ತಿ, ವಿರಾಟ್ ರೂಪದ ವಾಮನ-ತ್ರಿವಿಕ್ರಮನ ಶಿಲ್ಪ, ಶುಕ್ರಾಚಾರ್ಯರು ವಿಷ್ಣುವಿಗೆ ಅರ್ಘ್ಯ ಸಮರ್ಪಿಸುತ್ತಿರುವುದು, ಬಲಿ ಚಕ್ರವರ್ತಿಯ ಸಂಹಾರ ಮುಂತಾದವುಗಳು ಗಮನ ಸೆಳೆಯುತ್ತವೆ. .ವೈಷ್ಣವ ಗುಹಾಲಯ :
ಎರಡನೇ ಗುಹೆಯಿಂದ ಇನ್ನಷ್ಟು ಮೇಲೆ ಹೋದರೆ ನಂತರ ಸುಮಾರು ಕ್ರಿ.ಶ. ೫೭೮ ರಲ್ಲಿ ನಿರ್ಮಿತವಾಗಿರುವ ಈ ಮೂರನೆಯ ಗುಹೆಯನ್ನು ಕಾಣಬಹುದು.

ಮೂರನೇ ಗುಹಾಲಯ ಕೂಡ ವೈಷ್ಣವ ಗುಹಾಲಯ. ಇದನ್ನು ಚಾಲುಕ್ಯ ದೊರೆ ಮಂಗಳೇಶನು ತನ್ನ ಸಹೋದರ ಕೀರ್ತಿವರ್ಮನ ಪಟ್ಟಾಭಿಷೇಕದ ನೆನಪಿಗೆ ನಿರ್ಮಿಸಿದ್ದಾನೆ. ಎಲ್ಲಕ್ಕಿಂತ ವಿಶಾಲವಾದ ಈ ಗುಹೆಯು ವಿಷ್ಣುವಿನ ವಿವಿಧ ಅವತಾರಗಳಿಗೆ ಮೀಸಲಾಗಿದೆ. ಪೌರಾಣಿಕವಾದ ಘಟನೆಗಳನ್ನು ನಿರೂಪಿಸುವ ಶಿಲ್ಪಗಳ ಸಂಗಡವೇ ದೈನಂದಿನ ಜೀವನದಿಂದ ತೆಗದುಕೊಂಡ ದೃಶ್ಯಗಳೂ ಇರುವುದು ಈ ಗುಹೆಯ ವಿಶೇಷ. ಗುಹೆಯ ಪ್ರವೇಶವು ಸುಮಾರು ಎಪ್ಪತ್ತು ಅಡಿಗಳಷ್ಟು ವಿಶಾಲವಾಗಿದೆ. ಅದರ ಮೇಲ್ಭಾಗದಲ್ಲಿ ಗಣಗಳ ಕೆತ್ತನೆಯನ್ನು ನೋಡಬಹುದು. ಆರನೆಯ ಶತಮಾನದ ಜೀವನಶೈಲಿ ಮತ್ತು ಸಂಸ್ಕೃತಿಗಳನ್ನು ಅನಾವರಣ ಮಾಡುವ ಉಡುಪುಗಳು, ಒಡವೆಗಳು, ಕೇಶಶೈಲಿ ಮುಂತಾದ ಸಂಗತಿಗಳನ್ನು ಈ ಗುಹೆಯಲ್ಲಿ ಹೇರಳವಾಗಿ ಕಾಣಬಹುದು. ಇಲ್ಲಿರುವ ಅನಂತ ಸರ್ಪನ ಮೇಲೆ ಕುಳಿತ ವಿಷ್ಣು, ನರಸಿಂಹಾವತಾರ, ವರಾಹಾವತಾರ, ತ್ರಿ ವಿಕ್ರಮಾವತಾರ ಮತ್ತು ಹರಿಹರ ರೂಪಗಳ ಚೆಲುವಿಕೆಯನ್ನು ಸಾವಧಾನವಾಗಿ ವೀಕ್ಷಿಸಬೇಕು.

ಇಲ್ಲೂ ಕೂಡ ಗರ್ಭಗೃಹ, ಸಭಾಮಂಟಪ ಹಾಗು ಮುಖ ಮಂಟಪಗಳು ಇವೆ. ಇಲ್ಲಿನ ಎಂಟು ಕೈಗಳ ವಿಷ್ಣುವಿನ ಬೃಹತ್ ಶಿಲ್ಪ, ಆ ಕೈಗಳಲ್ಲಿ ಹಿಡಿದಿರುವ ವಿವಿಧ ಆಯುಧಗಳ ವಿವರಪೂರ್ಣ ಕೆತ್ತನೆ, ಹಾಗು ಇದರ ಎದುರಲ್ಲೇ ವಾಮನಾವತಾರದ ಬೃಹತ್ ಶಿಲ್ಪ ಮೋಹಕವಾಗಿವೆ. ಇಷ್ಟೇ ಅಲ್ಲದೆ ಶೇಷಶಯನ ವಿಷ್ಣು, ಬೃಹದಾಕಾರದ ಭೂವರಾಹ ಶಿಲ್ಪಗಳು, ನರಸಿಂಹ, ಹರಿಹರ ಹಾಗು ವಿಷ್ಣುಪುರಾಣದ ಕಥಾನಕದ ದೃಶ್ಯಾವಳಿಯ ಕೆತ್ತನೆಗಳನ್ನು ಕಾಣಬಹುದು. ಈ ಗುಹೆಯಲ್ಲಿ, ನಿಸರ್ಗದತ್ತವಾದ ಬಣ್ಣಗಳನ್ನು ಉಪಯೋಗಿಸಿರುವ ಕೆಲವು ವರ್ಣಚಿತ್ರಗಳಿವೆ. ಇವುಗಳಲ್ಲಿ ಅನೇಕ ಚಿತ್ರಗಳು ಬಹಳ ಸುಂದರವಾಗಿದ್ದರೂ ಹಳತಾಗಿವೆ. ಈ ಗುಹೆಯ ಒಳಭಾಗದಲ್ಲಿ ಒಂದು ಸಂಸ್ಕೃತ ಶಾಸನ ಮತ್ತು ಒಳಭಾಗದಲ್ಲಿ ಒಂದು ಕನ್ನಡ ಶಾಸನಗಳನ್ನು ಶೋಧಿಸಲಾಗಿದೆ. ಇವೆರಡೂ ಚಾಲುಕ್ಯ ಚಕ್ರವರ್ತಿ ಕೀರ್ತಿವರ್ಮನ ಸೋದರನಾದ ಮಂಗಳೇಶನು ನೀಡಿದ ದಾನ, ದತ್ತಿಗಳಿಗೆ ಸಂಬಂಧಿಸಿದವು.ಜೈನ ಗುಹಾಲಯ :
ನಾಲ್ಕನೆಯ ಗುಹೆಯು ಜೈನಧರ್ಮಕ್ಕೆ ಸಂಬಂಧಪಟ್ಟ ಶಿಲ್ಪಗಳಿಗೆ ಮೀಸಲಾಗಿದೆ. ಇದರ ಮೊಗಸಾಲೆಯ ಮುಂಭಾಗದಲ್ಲಿ ಒಬ್ಬ ಕುಬ್ಜನ ಉಬ್ಬು ಶಿಲ್ಪವಿದೆ. ಅದರ ಛತ್ತಿನ ಮೇಲೆ ಒಂದು ಗಂಧರ್ವರ ಜೋಡಿಯೂ (ಯಕ್ಷ, ಯಕ್ಷಿ) ಅದರ ಬಲಭಾಗದಲ್ಲಿ ಭಕ್ತರ ಸಮೇತರಾದ ತೀರ್ಥಂಕರರ ಶಿಲ್ಪವೂ ಇವೆ. ಇವೆಲ್ಲವನ್ನೂ ಮೊಗಸಾಲೆಯ ಪ್ರವೇಶದಲ್ಲಿಯೇ ಕಾಣಬಹುದು.ಇಲ್ಲಿನ ಗರ್ಭಗೃಹದಲ್ಲಿ ಮಹಾವೀರರ ಮೂರ್ತಿಯಿದೆ. ಮುಖ್ಯ ಮಂಟಪದ ಎದುರು ಬದುರು ಗೋಡೆಗಳ ಮೇಲೆ ಬಾಹುಬಲಿ ಮತ್ತು ಪಾರ್ಶ್ವನಾಥ ತೀರ್ಥಂಕರರ ಶಿಲ್ಪಗಳಿವೆ. ಪಾಶ್ವನಾಥನ ಕೆತ್ತನೆಯು ಸುಮಾರು 7.5 ಅಡಿಗಳು ಉದ್ದವಿದೆ. ಬಾಹುಬಲಿಯ ಮೂರ್ತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪುರಾತನ ಮೂರ್ತಿಯೆಂಬ ಖ್ಯಾತಿ ಹೊಂದಿದೆ.
ಈ ಗುಹೆಯ ಬೇರೆ ಬೇರೆ ಭಾಗಗಳಲ್ಲಿ ಮಹಾವೀರ ತೀರ್ಥಂಕರ, ಮಾತಂಗ ಯಕ್ಷ, ಸಿದ್ಧಾಯನಿ ಯಕ್ಷಿ ಮತ್ತು ಪದ್ಮಾವತಿ ಯಕ್ಷಿಯರ ಶಿಲ್ಪಗಳನ್ನು ನೋಡಬಹುದು. ಗರ್ಭಗುಡಿಯ ಹಿಂಭಾಗದ ಗೋಡೆಯನ್ನು ಮೇಲೆ ಮಹಾವೀರ ತೀರ್ಥಂಕರನ ಬೃಹತ್ ಮೂರ್ತಿಯು ಅಲಂಕರಿಸಿದೆ.

ಐದನೇ ಗುಹೆ :
ಇದು ನೈಸರ್ಗಿಕ ಗುಹೆ. ಇಲ್ಲಿ ಬುದ್ಧನ ಪ್ರತಿಮೆಯಿದೆ. ಬುದ್ಧನೇ ಅಲ್ಲದೇ ಮರಗಳು, ಆನೆಗಳು ಮತ್ತು ಸಿಂಹಗಳನ್ನು ಕೂಡ ಇಲ್ಲಿ ಕಾಣಬಹುದಾಗಿದೆ. ಸಿಂಹಾಸನ ಮೇಲೆ ಬುದ್ಧನು ಕುಳಿತಿರುವ ಭಂಗಿಯು ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿದೆ.

ಫೋಟೋ ಕೃಪೆ : Wikimedia

ಅಗಸ್ತ್ಯ ಸರೋವರ :

ನಗರದ ಹೊರ ವಲಯದಲ್ಲಿ ಬಾದಾಮಿ ಬಸ್ ನಿಲ್ದಾಣದಿಂದ ಒಂದು ಕಿ.ಮೀ. ದೂರದಲ್ಲಿರುವ ಅಗಸ್ತ್ಯ ಸರೋವರವು ಗುಹೆಗಳ ದೇವಾಲಯಗಳ ಕೆಳಗೆ ಇರುವ 5 ನೇ ಶತಮಾನದಲ್ಲಿ ರೂಪುಗೊಂಡ ಅಗಾಧವಾದ ಸರೋವರವಾಗಿದೆ.

ಅಗಸ್ತ್ಯ ಸರೋವರದ ಪೂರ್ವ ದಂಡೆಗಳು ಭೂತನಾಥ ದೇವಾಲಯಗಳಿಂದ ಕೂಡಿದ್ದು ದೊಡ್ಡ ಬೆಟ್ಟದ ಹಿನ್ನೆಲೆಯೊಂದಿಗೆ ಸುಂದರವಾಗಿ ಕಾಣಿಸುತ್ತದೆ.

’ಅಗಸ್ತ್ಯತೀರ್ಥ’ ಸರೋವರದ ಸುತ್ತಲೂ ಅನೇಕ ಚಿಕ್ಕ ಚಿಕ್ಕ ಗುಡಿಗಳಿವೆ. ಇವುಗಳನ್ನು ಏಳನೆಯ ಶತಮಾನದಿಂದ ಹದಿನೇಳನೆಯ ಶತಮಾನದವರೆಗಿನ ಸುದೀರ್ಘ ಅವಧಿಯಲ್ಲಿ ವಿಭಿನ್ನ ರಾಜವಂಶಗಳ ಆಳ್ವಿಕೆಯಲ್ಲಿ ಕಟ್ಟಲಾಗಿದೆ.

ಬಾದಾಮಿಯ ಉತ್ತರ ಭಾಗದಲ್ಲಿರುವ ಗುಡ್ಡದ ಮೇಲೆ ಮೂರು ಶಿವ ದೇವಾಲಯಗಳಾದ ಮಾಲೆಗುತ್ತಿ ದೇವಾಲಯ, ಲಕುಲೀಶ ದೇವಾಲಯ, ಭೂತನಾಥ ದೇವಾಲಯಗಳ ಗುಂಪು ಪ್ರಸಿದ್ಧವಾದುದು.ಮಾಲೆಗುತ್ತಿ ದೇವಾಲಯ ವಾಸ್ತು ಶಿಲ್ಪದ ದೃಷ್ಟಿಯಿಂದ ಪ್ರಮಾಣಬದ್ಧವಾಗಿದೆ. ಇದು ದ್ರಾವಿಡ ಮಾದರಿಯ ಶಿಲ್ಪವಾಗಿದೆ. ಲಕುಲೀಶ ದೇವಾಲಯದ ಗರ್ಭಗುಡಿಯಲ್ಲಿ ಎತ್ತರವಾದ ವೇದಿಕೆ ಮೇಲೆ ನಗ್ನವಾಗಿ ಕುಳಿತಂತೆ ತೋರುವ ಶಿವನ ವಿಶಿಷ್ಟವಾದ ವಿಗ್ರಹವಿದೆ. ದ್ರಾವಿಡ ಶೈಲಿಯ ಕಟ್ಟಡಗಳಿಗಾಗಿ ಭೂತನಾಥ ದೇವಾಲಯಗಳು ತುಂಬಾ ಮಹತ್ವದ್ದಾಗಿದೆ.

ಮಾಲೆಗಿತ್ತಿ ಶಿವಾಲಯವನ್ನು ಏಳನೆಯ ಶತಮಾನದ ಕೊನೆಯ ಭಾಗದಲ್ಲಿಯೂ ಉಳಿದೆರಡು ದೇವಾಲಯಗಳನ್ನು ಅದಕ್ಕಿಂತ ಮೊದಲು ಎಂದರೆ ಸುಮಾರು ಆರನೆಯ ಶತಮಾನದ ಮೊದಲ ಭಾಗದಲ್ಲಿಯೂ ನಿರ್ಮಿಸಲಾಗಿದೆ.

ಬಾದಾಮಿ ಊರಿನೊಳಗೆ ಇರುವ ಜಂಬುಲಿಂಗ ದೇವಾಲಯವು ಮೊದಲು ಬ್ರಹ್ಮ-ವಿಷ್ಣು-ಶಿವ ದೇವಾಲಯವಾಗಿತ್ತು. ಇದು ಕರ್ನಾಟಕದ ಮೊಟ್ಟಮೊದಲ ತ್ರಿಕೂಟಾಚಲ ಮಾದರಿಯ ಗುಡಿ. ಇದನ್ನು ಏಳನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಮೂರು ಶಾಸನಗಳು ದೊರೆತಿವೆ.

ಪುರಾತನ ವಸ್ತು ಸಂಗ್ರಹಾಲಯ :

೬ ನೇ ಶತಮಾನದಿಂದ ೧೬ ನೇ ಶತಮಾನಗಳ ಅವಧಿಯಲ್ಲಿ ನಿರ್ಮಿಸಿದ ಪ್ರಾಚೀನ ಶಾಸನಗಳನ್ನು ಇಲ್ಲಿ ಕಾಣಬಹುದು.

ಈ ಸಂಗ್ರಹಾಲಯದಲ್ಲಿ ೪ ಪ್ರದರ್ಶನಾ ಸ್ಥಳಗಳಿದ್ದು ಅವುಗಳಲ್ಲಿ ಶಿವ, ವಿಷ್ಣುವಿನ ವಿವಿಧ ಅವತಾರಗಳು, ಗಣಪತಿ ಹಾಗೂ ಭಗವದ್ಗೀತೆಯನ್ನು ಬಿಂಬಿಸುವ ಹಲವು ದೃಶ್ಯಾವಳಿಗಳಿವೆ.
ಇಲ್ಲಿ ನೈಸರ್ಗಿಕವಾದ ಗುಹೆಯ ಮಾದರಿಯೊಂದನ್ನು ಪ್ರದರ್ಶಿಸಲಾಗಿದೆ. ಅದರೊಳಗೆ ಇತಿಹಾಸಪೂರ್ವ ಯುಗದ ಕೆಲವು ವಸ್ತುಗಳನ್ನು ಹಾಗೂ ಮೂರನೆಯ ಗುಹೆಯಿಂದ ಪ್ರತಿ ಮಾಡಿದ ವರ್ಣಚಿತ್ರದ ಪ್ರತಿಯೊಂದನ್ನು ಪ್ರದರ್ಶಿಸಲಾಗಿದೆ. ಪಟ್ಟದಕಲ್ಲಿನಲ್ಲಿ ದೊರೆತ ಕೆಲವು ಪ್ರತಿಮೆಗಳನ್ನೂ ಇಲ್ಲಿ ಸಂರಕ್ಷಿಸಲಾಗಿದೆ.

ಶಿವನ ವಾಹನವಾದ ಸುಂದರವಾದ ನಂದಿಯ ವಿಗ್ರಹವನ್ನು ಸಂಗ್ರಹಾಲಯದ ಪ್ರವೇಶದಲ್ಲಿ ಇರಿಸಲಾಗಿದೆ.

ಮಾರ್ಚ್ ನಿಂದ ಜುಲೈ ವರೆಗೆ ಬಾದಾಮಿಗೆ ಭೇಟಿ ನೀಡಲು ಉತ್ತಮ ಸಮಯ.


  • ಸಿ ವಿ ಬಾಹುಬಲಿ ಜಯರಾಜ್, ಚಾಮರಾಜನಗರ 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW