ಅಣ್ಣಾದೊರೈನ ಜರ್ಕಿನ್ನು ! ಚಂದ್ರಮಳ ವೇಲೂ !!ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರ ಬರಹ ಓದುವಾಗ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ. ಕೆಲವು ಬರಹಗಳಂತೂ ಓದುಗರನ್ನು ಭಾವುಕರನ್ನಾಗಿ ಮಾಡುತ್ತವೆ. ಓದುಗರನ್ನು ನಗಿಸುವ- ಅಳಿಸುವ ಮಾಂತ್ರಿಕ ಶಕ್ತಿ ಅವರ ಬರವಣಿಗೆಯಲ್ಲಿದೆ. ಈ ಲೇಖನ ಓದುವಾಗ ನನಗೆ ಗೊತ್ತಿಲ್ಲದಂತೆ ನಾನು ಕೂಡಾ ಭಾವುಕಳಾದೆ, ಈ ಲೇಖನದಲ್ಲಿ ಅಂಥದ್ದು ಏನಿದೆ, ಮುಂದೆ ಓದಿ…

1998 ರಿಂದ 2000ರದವರೆಗೆ ನಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೆ. 1999ರ ಏಪ್ರಿಲ್ ತಿಂಗಳಿನ ಒಂದು ದಿನ ಸಂಜೆ ನನ್ನಂತೆಯೇ ಡಾ. ಬೆಸಗರಹಳ್ಳಿ ರಾಮಣ್ಣನವರಿಗೆ ಆತ್ಮೀಯರಾಗಿದ್ದ ಕ್ಯಾತನಹಳ್ಳಿ ರಾಮಣ್ಣ, ಕಥೆಗಾರ, ಕಾದಂಬರಿಕಾರ ವೀರಭದ್ರ, ನನ್ನ ಸಹೋದ್ಯೋಗಿ ಮಿತ್ರರಾಗಿದ್ದ ಅತ್ತಿಹಳ್ಳಿ ದಾಸೇಗೌಡ ಮತ್ತು ನಾನು ಕೆ ಎಸ್ ಟಿ ಡಿ ಸಿಯ ಮಯೂರ ರೆಸ್ಟೋರೆಂಟ್ ನಲ್ಲಿ ಬಿಯರ್ ಕುಡಿಯುತ್ತಾ ಕುಳಿತಿದ್ದೆವು. ಡಾಕ್ಟರ್ ಬೆಸಗರಹಳ್ಳಿ ರಾಮಣ್ಣ ಮಡಿದು ಕೆಲವು ತಿಂಗಳುಗಳು ಕಳೆದಿದ್ದವು.

ಬಿಯರ್ ಕುಡಿಯುತ್ತಾ ಬೆಸಗರಹಳ್ಳಿ ರಾಮಣ್ಣನವರಿಗೆ ವಿದ್ಯಾರ್ಥಿ ದಿಸೆಯಿಂದಲೂ ಗೆಳೆಯರಾಗಿದ್ದ ಕ್ಯಾತನಹಳ್ಳಿ ಒಂದು ಘಟನೆಯನ್ನು ಹೇಳಿದ್ದರು : ” ಕಡು ಪ್ರೀತಿ, ಮೋಹ, ವ್ಯಾಮೋಹಗಳು ಬಹಳ ಕೆಟ್ಟವು ಸಾರ್. ಅಣ್ಣಾ ದೊರೈ ಸತ್ತು ಐದಾರು ತಿಂಗಳು ಕಳೆದಿದ್ದವು. ಮಂಡ್ಯದಲ್ಲಿ ಒಂದು ದಿನ ರಾತ್ರಿ ನಾಟಕ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಮಬ್ಬುಗತ್ತಲ್ಲಿ ವ್ಯಕ್ತಿಯೊಬ್ಬರು ಅನ್ ಸೈಜ್ ಜರ್ಕಿನ್ನು ಹಾಕಿಕೊಂಡು, ಎರಡೂ ಕೈಗಳನ್ನು ಜರ್ಕಿನ್ ಜೇಬಿನಲ್ಲಿ ತೂರಿಸಿಕೊಂಡು ನಿಂತಿದ್ದರು. ಒಂಥರಾ ಬೆಸಗರಹಳ್ಳಿ ರಾಮಣ್ಣ ಇದ್ದಂಗೆ ಇದ್ರು. ನಾನು ಗಕ್ಕನೆ ಎದ್ದು ಹತ್ತಿರ ಹೋದೆ. ಸಾಕ್ಷಾತ್ ಬೆಸಗರಹಳ್ಳಿ ರಾಮಣ್ಣನೇ. ನನ್ನ ನೋಡಿ ರಾಮಣ್ಣ ನಗುತ್ತಾ ಇದು ಅಣ್ಣಾದೊರೈನ ಜರ್ಕಿನ್, ಹೆಂಗ್ ಕಾಣ್ತೀನಿ ನಾನು ಇದರಾಗೆ ಎಂದಿದ್ದರು. ನನ್ನ ಕಣ್ಣಲ್ಲಿ ಹೇಳದೆ ಕೇಳದೆ ಕಣ್ಣೀರು ಕಿತ್ತು ಬಂದಿದ್ದವು.. ” ಎಂದು ಮಾತು ನಿಲ್ಲಿಸುವುದರೊಂದಿಗೆ ನಮ್ಮೆಲ್ಲರ ಕಣ್ಣುಗಳನ್ನೂ ತೇವಗೊಳಿಸಿದ್ದರು.

(ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರ ಪುತ್ರ ಐಪಿಎಸ್ ಅಧಿಕಾರಿ ಕ್ರಾಂತಿ)

ಇದು ಏಕೆ ನೆನಪಾಯಿತೆಂದರೆ ನಿನ್ನೆ ಶನಿವಾರ ಆಪ್ತರೊಬ್ಬರನ್ನು ಭೇಟಿಯಾಗುವ ಸಲುವಾಗಿ ಶಿವಮೊಗ್ಗಕ್ಕೆ ತೆರಳಲು ಶುಕ್ರವಾರ ರಾತ್ರಿಯೇ ಬಟ್ಟೆಗಳನ್ನು ಬ್ಯಾಗಿಗೆ ಹಾಕಿಕೊಳ್ಳಲು ವಾರ್ಡ್ರೋಬ್ ತೆಗೆದು ತಡಕಾಡುತ್ತಿದ್ದಾಗ ಹಿಂದೆ ಬಚ್ಚಿಟ್ಟಿದ್ದ ಬಟ್ಟೆ ತುಂಬಿದ ಕವರೊಂದು ನೆಲಕ್ಕೆ ಬಿದ್ದಿತ್ತು. ನೋಡಿದರೆ ಆಸ್ಪತ್ರೆಗೆ ಸೇರಿಸುವ ದಿನ ಚಂದ್ರಮ್ಮ ತನ್ನ ಬಟ್ಟೆಗಳನ್ನು ತುಂಬಿಕೊಂಡಿದ್ದ ಬ್ಯಾಗು. ಬಿಳಿ ವೇಲು ನೆಲದ ಮೇಲೆ ಹರಡಿಕೊಂಡಿತ್ತು. ಮುಖ ಒರೆಸಿಕೊಳ್ಳಲು, ಊಟ ಮಾಡಿದಾಗ ಕೈ ಒರೆಸಿಕೊಳ್ಳಲು, ಧೀರನ ಗೊಣ್ಣೆ ಒರೆಸಲು, ಊರಿಗೆ ಹೋದಾಗ ಬಿಸಿಲು ಗಿಸಿಲಾದರೆ ತಲೆಯ ಮೇಲೆ ಹಾಕಿಕೊಳ್ಳಲು ನಮ್ಮ ಚಂದ್ರಮ್ಮ ಥಟ್ಟನೆ ತನ್ನ ವೇಲನ್ನು ಕೊಡುತ್ತಿದ್ದಳು.

ಅವಳು ಸತ್ತ ದಿನ ಆ ಬಟ್ಟೆಯ ಬ್ಯಾಗನ್ನು ಹಿಂದಕ್ಕೆ ಹಾಗೆಯೇ ತಂದು ರೂಮಿನಲ್ಲಿ ಇಟ್ಟಿದ್ದೆವು. ಅಪ್ರಜ್ಞಾಪೂರ್ವಕವಾಗಿ ನಾನು ಅವಳ ವೇಲನ್ನು ಹೆಗಲ ಮೇಲೆ ಹಾಕಿಕೊಳ್ಳುವುದನ್ನು ಮಾಡುತ್ತಿದ್ದೆ. ಇದನ್ನು ಗಮನಿಸಿದ ಕ್ರಾಂತಿ ” ಏನಪ್ಪಾ ನೀನು ಚಿಕ್ಕ ಮಗುವಿನ ಥರ ” ಎಂದು ಕಿತ್ತು ಕೊಂಡು ಬ್ಯಾಗಿಗೆ ತುರುಕಿ ವಾರ್ಡ್ರೋಬ್ ನ ಹಿಂದೆ ಬಚ್ಚಿಟ್ಟಿದ್ದ. ಅದು ಹೀಗೆ ಮೊನ್ನೆ ಬಿದ್ದಿತ್ತು. ಅದೇ ಸಮಯಕ್ಕೆ ಸಪ್ನದ ದೊಡ್ಡೇಗೌಡರ ಫೋನು: ” ಸಾರ್ ನಾಳೆ ಗಾಂಧಿಭವನದ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳಬಾರದು, ನಿಮ್ಮದೂ ಬುಕ್ ರಿಲೀಸ್ ಇದೆ ” ಎಂದು ಒತ್ತಾಯಿಸಿದ್ದರು. ಅವರ ಫೋನ್ ಇಟ್ಟ ಕೂಡಲೇ ಕ್ರಾಂತಿಯ ಫೋನ್. ಬೈಕ್ ರೈಡ್ ನಲ್ಲಿ ಅವನು ಶ್ರೀನಗರದ ಬಳಿಯ ಪಟ್ನಿಟಾಪ್ ಎಂಬ ಜಾಗ ತಲುಪಿದ್ದನಂತೆ. ಅವನಿಗೆ ಹುಷಾರ್ ಹೇಳಿ ಹರಡಿದ್ದ ಚಂದ್ರಮಳ ವೇಲನ್ನು ಎತ್ತಿಕೊಳ್ಳುತ್ತಿರಬೇಕಾದರೆ ವಾಟ್ಸಾಪ್ ವಿಡಿಯೋ ಕಾಲ್ನಲ್ಲಿ ಧೀರ ಪ್ರತ್ಯಕ್ಷನಾಗಿದ್ದ. ವೇಲನ್ನು ನೋಡಿ ” ಹೇ ಹೇ ಅಜ್ಜಿಯಕ್ಕಂದು.. ” ಎಂದು ನಕ್ಕಿದ್ದ. ಕೆಲವೊಮ್ಮೆ ಅದೇ ವೇಲನ್ನು ಧೀರನಿಗೆ ಪಂಚೆಯಂತೆ, ಸೀರೆಯಂತೆ ಉಡಿಸಿ ನಮ್ಮ ಚಂದ್ರಮ್ಮ ಸಂಭ್ರಮಿಸುತ್ತಿದ್ದಳು…

ಕೆಲವು ನೆನಪುಗಳು ಎದೆ ಬಗೆದು ನಿಲ್ಲುತ್ತವೆ..


  • ಕೇಶವ ರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ . ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿ) .

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW