ಪರೋಟಾ ತಿಂದು ಹೊರ ಬಂದವನಿಗೆ ಕಂಡಳು ಫ್ಲೋರಿನಾ…
ಸೂಪಾದಲ್ಲಿ ವಾಸ್ತವ್ಯಕ್ಕೆ ಹೇಗೋ ಒಂದು ಮನೆ ಸಿಕ್ಕಿತಲ್ಲ ಎಂದು ಮನಸ್ಸಿಗೆ ಸಮಾಧಾನವಾಯಿತು. ಅವಶ್ಯಕತೆಯಿದ್ದಾಗ ಮನುಷ್ಯ ಅನಾನುಕೂಲಗಳನ್ನು ಲೆಕ್ಕಕ್ಕೇ ತಗೆದುಕೊಳ್ಳುವುದಿಲ್ಲ. ನಾನು ಅವತ್ತೇ ಕೋಳೀ ನರಸಿಂಹಯ್ಯನವರ ಕಚೇರಿಯಿಂದ ಬಾಬೂ ಅಸೋಟಿಕರ್ ಚಾಳಕ್ಕೆ ವಾಸ್ತವ್ಯ ಬದಲಿಸಿಬಿಟ್ಟೆ. ಇಲ್ಲಿಯ ಚಾಳದಲ್ಲಿ ಚಾಂದಗುಡೆಯವರಿದ್ದಾರೆ. ಅವರ ಹಿರಿಯ ಮಗ ಪ್ರತಾಪ ಇದ್ದಾನೆ. ಭೈರಾಚಾರಿಯವರಿದ್ದಾರೆ. ಸಾಹಿತ್ಯ ಪ್ರೀತಿಯ ಪರಿಮಳಾ ಇದ್ದಾರೆ. ಎರಡು ಪೋಲೀಸ್ ಕುಟುಂಬಗಳಿವೆ. ಧೈರ್ಯವಾಗಿ ಇರಬಹುದು. ಡುಕ್ರಿಗಳ ಸದ್ದು ಕೆಲವೊಮ್ಮೆ ಹೆಗ್ಗಣಗಳು ಕಾಲಡಿಯೇ ಓಡಿ ಹೋಗುವ ಸುಖದ ಸಂಸಾರವಿದೆ.
ರಾತ್ರಿ ಊಟದ ಹಸಿವು ಅಷ್ಟಾಗಿ ಆಗಿರದಿದ್ದರೂ ಮಲಯಾಳೀ ಮೂಸಾನ ಲಕ್ಕೀ ಹೊಟೆಲ್ಲು ಕಡೆಗೆ ನಡೆದೆ. ರಾತ್ರಿ ಹೊತ್ತು ಬರೀ ಹೊಟ್ಟೆಯಲ್ಲಿ ಮಲಗಬಾರದೆಂಬ ಎಂಬ ನಿಯಮ ನನ್ನದು. ಅಲ್ಲಿ ಎರಡು ಪರೋಟಾ, ಸೇರ್ವಾ,ಅರ್ಧ ಲಿಂಬೂ, ಅರ್ಧ ಈರುಳ್ಳಿ ತಿಂದು ಹೊರಬಂದೆ.
ಅಲ್ಲಿಯೇ ಹೊರಗೆ ಎದುರಾಗಿ ಕೂತಿದ್ದ ಪಾನ ಅಂಗಡಿಯ ಆ ಬಿಳಿಯ ಹುಡುಗಿ ನನ್ನನ್ನೇ ಗಮನಿಸುತ್ತ ಕೂತಿದ್ದಳೇನೋ. ನಾನು ಹೊರ ಬರುತ್ತಲೂ ನೋಡಿದವಳೇ ಕರೆದಳು. ನನಗೆ ಪಾನ ಹಾಕುವ ರೂಢಿಯಿರಲಿಲ್ಲ. ಮುಜುಗುರದಿಂದಲೇ ಆಕೆಯ ಎದುರು ಹೋಗಿ ನಿಂತೆ. ಮೆಲ್ಲಗೆ ಹೇಳಿದಳು.
ಅದು ಹೆಂಗಸ್ರೇ ಸೇರಿ ನಡೆಸೋ ಮೆಸ್ಸು ಮಾರಾಯ್ರೆ

’ನಿಮ್ಗೆ ಇಲ್ಲೀ ಹೊಟೆಲ್ ಊಟ ಹಿಡಿಸದಿದ್ರೆ ಹೇಳಿ. ಬೈಲಪಾರ್ ಕಡೆಗೆ ಒಂದ್ ಮೆಸ್ ಉಂಟು. ಹೆಂಗಸ್ರೇ ಸೇರಿ ನಡ್ಸೋ ಮೆಸ್ಸು. ಅನ್ನ-ಸಾಂಬಾರ್, ಚಪಾತಿ –ಪಲ್ಯ, ಉಪ್ಪಿನಕಾಯಿ, ಹಪ್ಪಳ ಲೈಕಾಗಿ ಇರ್ತದೆ. ಅನ್ನಕ್ಕೆ ಸೋಡಾ ಹಾಕ್ತಿಲ್ಲ. ಹೊಟ್ಟೆ ನೋವು ಬರೋಕ್ ಚಾನ್ಸೇ ಇಲ್ಲ. ಐವತ್ತು ಪೈಸೆಗೆ ಪ್ಲೇಟು ಊಟ. ಹಾಂ….ಬರೀ ಐವತ್ತು ಪೈಸೆಗೆ. ಇವ್ರೆಲ್ಲಾ ಅರವತ್ತು ಪೈಸೆಗೆ ಅನ್ನ ಹಾಕ್ತಾರೆ. ಮೀನು, ಚಿಕನ್ನು ಬೇಕಂದ್ರೆ ಪಹಿಲಾನೇ ಆರ್ಡರು ಕೊಡ್ಬೇಕು. ಅದೆಲ್ಲಾನೂ ಹೊರಗ್ನಿಂದ ತಂದು ಮಾಡ್ಬೇಕು. ಅದಕ್ಕೆ ಸಪರೇಟು ಪೈಸೇ ಕೊಡ್ಬೇಕು. ಮನೇ ಊಟದ್ ಥರಾ ಇರ್ತದೆ. ಒಂದ್ಸಲ ಊಟ ಮಾಡಿ ನೋಡಿ. ಹಾಂ…! ನಾನ್ ಹೇಳಿದೆ ಅಂತ ಈ ಹೊಟೆಲ್ಲಿನವ್ರಿಗೆ ಹೇಳಬೇಡಿ. ಆಮೇಲೆ ನನ್ಗೆ ಕಿರಿಕ್ ಮಾಡ್ತಾರೆ. ಮೊದ್ಲೇ ಮಲಯಾಳೀ ಜನ.’’
ತಾನು ಹೇಳಬೇಕಾದುದನ್ನು ಸರಸರ ಹೇಳಿ ಮುಗಿಸಿದಳು ಹುಡುಗಿ. ದನಿ ಜೇನು ಹನಿಯಾಗಿತ್ತು. ಸಂಜೆ ಬಾಬೂ ಅಸೂಟಿಕರ ಹೇಳಿದ ಮೆಸ್ಸೇ ಇದು ಇರಬೇಕು ಅಂದುಕೊಂಡೆ.
ಇವಳು ಫ್ಸೋರಿನಾ…! ನನ್ನ ಪೆಟ್ ಸಿನಿಮಾ ಹಿರೋಯಿನ್ ಸಾಯಿರಾಬಾನು ಥರಾ ಇದಾಳೆ!
ಫೋಟೋ ಕೃಪೆ : Cinestaan
ಹುಡುಗಿ ನಕ್ಕು ಹಾಗೆ ಹೇಳಿದಾಗ ಅವಳ ಕೆಂಪು ತುಟಿಯ ಒಳಗೆ ಹುದುಗಿಕೊಂಡಿದ್ದ ಬಿಳಿಯ ಹಲ್ಲುಗಳ ಸಾಲು ಕಣ್ಣು ಕುಕ್ಕಿದವು. ಗಲ್ಲದ ಮೇಲೆ ಗುಳಿ ಬಿದ್ದದ್ದು ಆ ಕಂದುಗತ್ತಲ್ಲಲೂ ಕಂಡಿತು.
‘’ಅಲ್ಲಿಗ್ ಹೋಗಿ ಸಕ್ಕೂಬಾಯಿಗೆ ಹೇಳಿ. ಫ್ಲೋರಿನಾ ಕಳಿಸಿದ್ಲು ಅಂತ. ಖಾಸಾ ಊಟ ಕೊಡ್ತಾರೆ. ಊಟಾ ಮಾಡಿ ಪೈಸಾ ಕೊಡಿ’’
ಅಂದಳು ಹುಡುಗಿ. ಓಹ್!… ಈಕೆಯ ಹೆಸರು ಫ್ಲೋರಿನಾ. ನೋಡುವುದಕ್ಕೆ ಸಾಯಿರಾಬಾನು ಥರ ಇದ್ದಾಳೆ. ಸಾಯಿರಾ ಬಾನು ನಮ್ಮ ಕಾಲದ ಮಿಸ್ ಇಂಡಿಯಾ ಆಗಿದ್ದವಳು. ನಟ ದಿಲೀಪಕುಮಾರನ ಹೆಂಡತಿ. ಪ್ರಸಿದ್ಧ ಹಿಂದೀ ಚಿತ್ರ ನಟಿ. ನಾನು ಬೆಳಗಾವಿಯಲ್ಲಿ ಓದುತ್ತಿದ್ದಾಗ ಅವಳ ಯಾವುದೇ ಸಿನಿಮಾ ಬಂದರೂ ಬಿಡದೆ ನೋಡುತ್ತಿದ್ದೆ. ಅವಳ ಹಾಗೇ ಮುಖಕ್ಕೆ ಮೇಕಪ್ಪು. ಹುಬ್ಬು, ಗಲ್ಲ, ತುಟಿ. ಅವಳ ಹಾಗೇ ಕತ್ತು ಕೊಂಕಿಸಿ ಮಾತಾಡುವ ಗತ್ತುಬೇರೆ ಇದೆ. .
ಫ್ಲೋರಿನಾ ಅದ್ಯಾಕೋ ನನ್ನ ಹೆಸರು ಏನೆದು ಕೇಳಲಿಲ್ಲ. ಹುಡುಗರು ಬಯಸುವ ಹಾಗೆ ಹುಡುಗಿಯರು ಇರುವುದಿಲ್ಲವಲ್ಲ. ಬೇರೆಯವರ ಹತ್ತಿರ ಕೇಳಿ ತಿಳಿದುಕೊಂಡಿರಬೇಕು. ಇವರೆಲ್ಲ ಚಾಲಾಕಿ ಹುಡುಗಿಯರು. ನಾನು ಅವಳನ್ನೊಮ್ಮೆ ನೋಡಿ ತಲೆಯಾಡಿಸಿ ಖೋಲೆಯ ಕಡೆಗೆ ಬಂದೆ.
ಡುಕ್ರುಗಳ ಸೊರಕ್ ಸೊರಕ್ ಸಂಗೀತದಲ್ಲಿ ಮೊದಲ ರಾತ್ರಿ
ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಎಲ್ಲಿದ್ದರೂ ಒಂದು ಚಾಪೆ. ಒಂದು ದಿಂಬು, ಒಂದು ತೆಳುವಾದ ಹೊದಿಕೆ ಅಷ್ಟೇ ನನ್ನ ಹಾಸಿಗೆ. ಇವತ್ತಿಗೂ ಅಷ್ಟೇ ನನಗೆ ಸುಖ ಕೊಡುವ ವ್ಯವಸ್ಥೆ. ಆದರೂ ನಿದ್ದೆಯಿಲ್ಲ. ಹೊಸ ಜಾಗ ಅಂದುಕೊಂಡೆ. ಕೋಣೆಯ ಬಾಗಿಲು ಹಾಕಿಕೊಂಡಿದ್ದರೂ ಹೊರಗೆ ಡುಕ್ರುಗಳ ಹಿಂಡು ಕಿಚಿಕಿಚಿ ಎಂದು ಕೀರಿಡುವ ಸದ್ದು ಕೇಳುತ್ತಿತ್ತು. ರಾತ್ರಿ ಕೆಲವು ಗಂಡಸರೋ-ಹೆಂಗಸರೋ ಪಾಯಖಾನೆಗೆ ಹೋದವರ ಹೆಜ್ಜೆಯ ಸದ್ದು, ಅಲ್ಲಿ ಸುರುವಿಕೊಂಡ ಚೊಲ್ ಚೊಲ್ ನೀರಿನ ಸದ್ದು ಮಲಗಿದಲ್ಲಿಂದಲೇ ಕಿವಿಗೆ ಅಪ್ಪಳಿಸುತ್ತಿತ್ತು. ಅಭ್ಯಾಸ ಆಗುವ ತನಕ ಹೀಗೇ ಅಂದುಕೊಂಡೆ. ಕೆಲವರಂತೂ ನನ್ನ ಖೋಲೆಯ ಬಾಗಿಲಿಗೆ ಟಾರ್ಚು ಬಿಡುತ್ತಿದ್ದರೆ ಕದದ ಸಂದಿನಲ್ಲಿ ಅದರ ಕೋಲಿನಂಥ ಬೆಳಕು ಗೋಡೆಯ ಮೇಲೂ ಬೀಳುತ್ತಿತ್ತು. ಅದರಿಂದ ಮುತ್ತಿಕ್ಕಿ ಬರುವ ನಿದ್ದೆ ಇನ್ನಷ್ಟು ದೂರ ಸರಿಯುತ್ತಿತ್ತು.
ಯಾಕೋ ನನ್ನ ಸರ್ವೇ ತಂಡದ ಜನ ನೆನಪಾದರು. ಅಡುಗೆ ಮಾಡುವ ಅಪ್ಪುಕುಟ್ಟಿ, ಇಂಜನಿಯರ್ ಸೆಟ್ಟಿ, ಶಿರೋಡ್ಕರ, ಹೆಲ್ಪರ್ ಹನುಮಂತ್ಯಾ….ಹಾಗೇ ಸೂಪಾದಲ್ಲಿಯೇ ಇರುತ್ತಾಳೆ ಎಂದು ಹೇಳಿದ ಕುನಾಲೀಬಾಯಿ ಮತ್ತು ಆಕೆಯ ವ್ಯವಹಾರಗಳು ನೆನಪಾದವು. ಕುತೂಹಲಕ್ಕಾದರೂ ಒಮ್ಮೆ ಆಕೆಯನ್ನು ಭೆಟ್ಟಿಯಾಗಬೇಕು. ಅವಳ ಜೀವನ ಕತೆ ಸಿಕ್ಕರೆ ಅದನ್ನೇ ಕತೆಯನ್ನಾಗಿ ಬರೆಯಬೇಕು. ಮತ್ತು ಅದನ್ನು ಓದಲು ಪರಿಮಳಾ ಅವರಿಗೆ ಕೊಡಬೇಕು. ಅಂದುಕೊಂಡೆ.
ಮಧ್ಯ ರಾತ್ರಿ ಪಾನ್ ಅಂಗಡಿಯ ಫ್ಲೋರಿನಾ, ಪುಸ್ತಕ ಪ್ರೀತಿಯ ಪರಿಮಳಾಂಬಾ, ಹೊಟೆಲ್ಲಿಗೆ ನೀರು ತಂದು ಹಾಕುವ ಲಂಬಾಣೀ ಹುಡುಗಿ ಗೋಮ್ಲಿ, ಗೋವಾ ಬಿಜಿನೆಸ್‌ನಲ್ಲಿ ಮುಳುಗಿರುವ ಕುನಾಲೀಬಾಯಿ, ಮನೆಯಲ್ಲಿಯೇ ಮೆಸ್ ನಡೆಸುವ ಸಕ್ಕೂಬಾಯಿ, ಬಕೆಟ್ಟಿನಲ್ಲಿ ಹಸಿ ಮೀನು ತಿಕ್ಕುವ ಚಾಳದ ಕಾರವಾರೀ ಹೆಂಗಸರು ಸಾಲಾಗಿ ನೆನಪಾದರಲ್ಲ
ಫೋಟೋ ಕೃಪೆ : Duniya News
ಎಷ್ಟು ಹೊರಳಿದರೂ ನಿದ್ದೆ ಸುಳಿಯಲಿಲ್ಲ. ಒಮ್ಮೆ ನಾಳೆ ಡ್ಯಾಮ್ ಸೈಟಿನಲ್ಲಿ ಏನು ನಡೆಯುತ್ತದೋ ಎಂದಾದರೆ ಮತ್ತೊಮ್ಮೆ ಕಣ್ಣೆದುರಿಗೆ ಕಂಡ ಫ್ಲೋರಿನಾ, ಪರಿಮಳಾ, ಚಾಳದ ಪೋಲೀಸು ಹೆಂಗಸರು, ನಾನು ಇನ್ನೂ ನೋಡಿರದಿದ್ದ ಕುನಾಲೀಬಾಯಿ, ಮೆಸ್ಸಿನ ಸಕ್ಕೂಬಾಯಿ, ನೀರು ಹೊರುವ ಲಂಬಾಣಿ ಹುಡುಗಿ ಗೋಮ್ಲಿ ಎಲ್ಲ ಸಾಲಾಗಿ ನೆನಪಾದರು. ನೆನಪಾಗುತ್ತಲೇ ನನ್ನ ನಿದ್ದೆಯನ್ನೂ ಕಿತ್ತುಕೊಂಡರು. ಇವರೆಲ್ಲರಿಗಿಂತ ನನಗೆ ಎತ್ತರದ ಸ್ಥಾನದಲ್ಲಿ ಕಂಡವಳೆಂದರೆ ಹಾಸನದ ಪರಿಮಳಾಂಬ. ಯಾ… ಪರಿಮಳಾ.
ದೂರದ ಹಾಸನದಿಂದ ಇಂಥ ಕಾಡಿನ ಊರಿಗೆ ಬಂದಿದ್ದರೂ ಅವರಲ್ಲಿದ್ದ ಸಾಹಿತ್ಯ ಪ್ರೀತಿ, ಕನ್ನಡ ಕಾದಂಬರಿಗಳನ್ನು ಓದುವ ಹವ್ಯಾಸ ನನ್ನ ಗಮನ ಸೆಳೆಯಿತು. ನನ್ನಲ್ಲೂ ಕನ್ನಡದ ಬಗ್ಗೆ ಆತ್ಮ ವಿಶ್ವಾಸ ಮೂಡಿಸಿತು. ಆಕೆ ವಯಸ್ಸಿನಲ್ಲಿ ನನಗಿಂತಲೂ ಹತ್ತು ವರ್ಷ ದೊಡ್ಡವಳು. ಆದರೂ ತನಗೆ ವಯಸ್ಸೇ ಆಗಿಲ್ಲ ಎಂಬಂತೆ ಬೆಂಗಳೂರಿನ ಲೇಖಕಿ ಉಷಾ ನವರತ್ನರಾಮ್ ಥರ ಸ್ವೀವಲೆಸ್ ಬ್ಲೋಜು, ಕತೆಗಾರ್ತಿ ಈಚನೂರು ಜಯಲಕ್ಷ್ಮಿ ಥರ ತೀಡಿದ ಹುಬ್ಬು, ಧಾರವಾಡದ ಕಾದಂಬರಿಗಾರ್ತಿ ಗೀತಾ ಕುಲಕರ್ಣಿ ಥರ ತುಟಿಗೆ ಲಿಪ್‌ಸ್ಟಿಕ್ಕು ಬಳಿದುಕೊಳ್ಳುತ್ತಿದ್ದ ರೀತಿ ನನಗೆ ಕುತೂಹಲ ಮೂಡಿಸಿತ್ತು.
ಹೆಂಡತಿ ಶಿವ ಭಕ್ತೆ. ಗಂಡ ಮಾರಿ ಮಸಣಿಯ ಭಕ್ತ
ಪರಿಮಳಾ ಅವರ ಜೀವನ ಪ್ರೀತಿಯ ಬಗ್ಗೆ ಹೆಮ್ಮೆಯೂ ಅನಿಸಿತು. ಆದರೆ ಆಕೆಯ ಪತಿದೇವ ಹಾಗಿಲ್ಲ. ತನ್ನ ಆಫೀಸು, ಕಡತಗಳು, ಅಲ್ಲಿದ್ದ ಸಾಹೇಬರ ಕೋಳಿಗಳು. ತಿಂಗಳ ಸಂಬಳ. ಸಂಜೆಯಾದರೆ ಮೂಸಾ ಕಾಕಾನ ಲಕ್ಕೀ ಹೋಟೆಲ್ಲು, ಅಲ್ಲಿ ಚಿಕನ್ ಸಾರು, ಎಗ್ಗು ಸಾರು-ಪರೋಟ, ಈರುಳ್ಳಿ ಸಲಾಡ್ ಅಷ್ಟೇ ಅವರ ಪ್ರಪಂಚ. ಗಂಡ ಶಿವ ಭಕ್ತ. ಹೆಂಡತಿ ಮಾರಿ-ಮಸಣೆಯ ಭಕ್ತಳು ಎಂದು ಹೇಳಿದ ಬಸವಣ್ಣ ನೆನಪಾದರೂ ಇಲ್ಲಿ ಅದು ತಿರುವು-ಮುರುವು ಆಗಿತ್ತು.
ಪರಿಮಾಳಾ ಅವರು ನಾನು ಸಂಜೆ ಕೊಟ್ಟಿದ್ದ ನನ್ನ ಕತೆಯನ್ನು ಓದಿದರೋ ಇಲ್ಲೋ. ಅವರಾಗಿ ಹೇಳುವವರೆಗೆ ಕೇಳುವುದು ಬೇಡ ಅಂದುಕೊಂಡೆ. ಅದೂ ನಾನು ಬೆಳಗಾವಿಯಲ್ಲಿ ಓದುತ್ತಿದ್ದಾಗ ಬರೆದ ಕತೆ. ಕನ್ನಡ-ಮರಾಠೀ ಜಗಳದ ಕುರಿತು ಬರೆದದ್ದು. ಇವರಿಗೆ ಅದು ಹಿಡಿಸುತ್ತದೋ ಇಲ್ಲವೋ. ಯೋಚಿಸುತ್ತ ಮಲಗಿದವನಿಗೆ ಹೇಗೋ ಕೊನೆಗೆ ನಿದ್ದೆ ಆವರಿಸಿತ್ತು. ಇಡೀ ದಿನ ಡ್ಯಾಮ ಸೈಟಿನ ಬೆಟ್ಟದಲ್ಲಿ ಹತ್ತಿಳಿದು ಬಂದಿದ್ದ ಆಯಾಸವೂ ಅದಕ್ಕೆ ಕಾರಣವಾಗಿರಬೇಕು.
ಸಾರ್ವಜನಿಕ ಬಹಿರಂಗ ಶೌಚಾಲಯ ಅಂದರೆ ನದೀ ಬಯಲು
ಚಿತ್ರ ಸಂಗ್ರಹ : ಶ್ರೀ ವಿ.ಎಸ್.ಚಳಗೇರಿ
ಬೆಳಿಗ್ಗೆ ಬೇಗ ಎದ್ದವನೇ ನದೀ ಕಡೆಗೆ ಹೋದೆ. ಬಿಳೀ ಪಾಯಿಜಾಮಾ ಹಾಕುವುದು ನನಗೆ ರೂಢಿಯಾಗಿತ್ತು. ಒಂದಷ್ಚು ಬಟ್ಟೆ ಸುತ್ತಿ ಬಗಲಲ್ಲಿಟ್ಟುಕೊಂಡೆ. ಚಾಳದ ನಡುವೆ ನಡೆದು ಹೋದೆ. ಕೆಲವರ ಮನೆಯಲ್ಲಿ ಮಾತ್ರ ದೀಪ ಉರಿಯುತ್ತಿತ್ತು. ಕೆಲವರು ಬಚ್ಚಲದಲ್ಲಿ ಕ್ಯಾಕರಿಸಿ ಉಗಿಯುವುದೂ, ರೇಡಿಯೋ ಪಣಜಿಯಿಂದ ಕೇಳಿ ಬರುವ ಹಾಡುಗಳ ಸಣ್ಣ ದನಿಯೂ ಕೇಳುತ್ತಿತ್ತು. ಬೆಳಗಿನ ಹೊತ್ತು ಬೀದೀ ನಾಯಿಗಳು ಹೊರಗೆ ಮಲಗಿರುವುದಿಲ್ಲ. ಯಾಕಂದರೆ ಕಾಡಿನಿಂದ ಹೊಂಚು ಹಾಕಿ ಬರುವ ತೋಳಗಳು ಅವುಗಳನ್ನು ಎಳೆದೊಯ್ಯುತ್ತವೆ ಎಂಬ ಹೆದರಿಕೆ ಅವಕ್ಕೆ. ಜನ ಸಂಚಾರ ಸುರುವಾದ ಮೇಲೆಯೇ ನಾಯಿಗಳು ಬೀದಿಗೆ ಬರುತ್ತವೆ. ಪೂರ್ವದಲ್ಲಿ ಸೂರ್ಯ ಇನ್ನೇನು ಮೇಲೇಳುವ ಸಂಯ. ಮಂದ ಬೆಳಕಿನಲ್ಲಿ ನದಿಯ ಕಡೆಗೆ ಓಡಿದೆ. ನದೀ ದಂಡೆಯ ಸುತ್ತಲೂ ದಟ್ಟ ಹಸಿರು ಕುಮರಿ ಬೆಳೆದಿತ್ತು. ಅದನ್ನೇ ಊರಿನ ಜನ ಸಾರ್ವಜನಿಕ ಬಹಿರಂಗ ಶೌಚಾಲಯ ಮಾಡಿಕೊಂಡಿದ್ದರು.
ನಾನು ಅಪರ ಕಾರ್ಯ ಮುಗಿಸಿ ನದಿಗೆ ಇಳಿದಾಗ ನೀರು ಬಿಸಿಯಾಗಿ ಆಹ್ಲಾದಕರವಾಗಿತ್ತು. ಹರಿಯುತ್ತಿದ್ದ ನೀರಿನಲ್ಲಿ ಸ್ನಾನವನ್ನೂ ಮಾಡಿದೆ. ಏನೋ ಮುದ. ಇವತ್ತು ಡ್ಯಾಮ ಸೈಟಿಗೆ ಬೇಗ ಹೋಗಬೇಕು. ತುಂಬ ಕೆಲಸವಿದೆ ಎಂದು ಕೊಳ್ಳುತ್ತಲೇ ಗಡಿಬಿಡಿಯಲ್ಲಿ ಚಾಳದ ಹತ್ತಿರ ಬಂದೆ. ಅಲ್ಲಿ ಬಿಳಿಯ ಪೈಜಾಮಾ- ಬನಿಯನ್ನು ಧರಿಸಿದ ಚಾಂದಗುಡೆಯವರು ಎದುರು ಬಂದರು.
ಸೂಪಾದಲ್ಲಿ ಮೊದಲ ಬಾರಿ ದುರ್ಗಾದೇವಿಯ ದರ್ಶನ. ದುರ್ಗೆ ಅಂದರೆ ಕಾಳಿ. ಹರಿವ ಕಾಳಿ ಚಲನಾ ಶೀಲೆ.
ಗುಡಿಯಲ್ಲಿದ್ದ ದುರ್ಗೆ ನಿಶ್ಚಲ ದೇವಿ
ಚಿತ್ರ ಸಂಗ್ರಹ : ಶ್ರೀ ವಿ.ಎಸ್.ಚಳಗೇರಿ
‘’ಹ್ಹಹ್ಹಹ್ಹ…ಶೇಖರವರ… ಗುಡ್ ಮಾರ್ನಿಂಗು. ಮದಲನೇ ನಮಸ್ಕಾರ ಮುಂಜಾನಿದ್ದೂ….
ನಾನೂ ನಮಸ್ಕಾರ ಹೇಳಿದೆ. ಅವರೂ ಹೊಳೆಯ ಕಡೆ ಹೋಗುತ್ತಿರಬಹುದು ಅಂದುಕೊಂಡೆ.
‘’ನಿಮ್ಮ ಖೋಲೇ ಕಡೆ ಹೋಗಿದ್ದೆರಪಾ. ಕೀಲೀ ಹಾಕಿತ್ತು. ಹೊಳೀ ಕಡೆ ಹೋಗಿದ್ರೇನು? ಸ್ನಾನ ವಗೈರೆ ಅಲ್ಲೇ ಆತ?’’
‘’ಆತರಿ. ಇವತ್ತು ಡ್ಯಾಮ ಸೈಟಿಗೆ ಲಗೂ ಹೋಗೂದೈತಿ. ಅದಕ್ಕ ಲಗೂ ಎದ್ದಾವನ ಅತ್ಲಾಗ ಹೋಗಿದ್ದೆ’’
‘’ಅಡ್ಡೀಯಿಲ್ಲ. ನಂದೂ ಸ್ನಾನ ಆತು ಬರ್ರಿ. ಮದಲ ದುರ್ಗಾದೇವಿ ಗುಡೀಗೆ ಹೋಗಿ ದರ್ಶನಾ ಮಾಡಿ ಆಮ್ಯಾಲ ಡ್ಯಾಮ ಕಡೆ ಹೋಗೂನು ಬರ್ರಿ’’
ಅಂದರು. ತಕ್ಷಣ ನನಗೆ ಹನುಮಂತ್ಯಾನ ಕತೆಯಲ್ಲಿ ಬಂದಿದ್ದ ದುರ್ಗಾದೇವಿಯ ಗುಡಿಯ ಚಿತ್ರಣ ನೆನಪಾಯಿತು. ಸೂಪಾದಲ್ಲಿ ಈ ದೇವರಿಗೆ ತುಂಬ ಜನ ನಡೆದುಕೊಳ್ಳುತ್ತಾರಂತೆ. ದುರ್ಗೆ ಸಾಕ್ಷಾತ್ ಹರಿವ ಕಾಳಿಯ ಅವತಾರ ಎಂದೇ ಎಲ್ಲರ ನಂಬಿಕೆ. ಇವತ್ತು ಅವಕಾಶ ತಾನಾಗಿಯೇ ಬಂದಿದೆ. ಇಲ್ಲಿಂದಲೇ ಹೋಗಿ ದೇವಿಗೆ ನಮಸ್ಕರಿಸಿ ಬರಬೇಕು. ಸೂಪಾದಲ್ಲಿ ರಾಮ ಮಂದಿರ ಬಿಟ್ಟರೆ ಇದೇ ಪ್ರಸಿದ್ಧ ಗುಡಿ.
ಇಬ್ಬರೂ ಪೋಲೀಸ ಸ್ಟೇಶನ್ ಮುಂದೆ ಹಾದು ಬ್ರಿಟಿಷ್ ಬಂಗಲೆಯ ದಾರಿಯಲ್ಲಿರುವ ದುರ್ಗಾ ಗುಡಿಯನ್ನು ತಲುಪಿದೆವು. ಕೆಂಪು ಹಂಚು ಹೊದಿಸಿ ಕಟ್ಟಿದ ದೇವಸ್ಥಾನ ಇದು. ಅದನ್ನು ಯಾವಾಗ ಕಟ್ಟಿಸಿದ್ದಾರೋ ಯಾರಿಗೂ ಗೊತ್ತಿಲ್ಲ. ಕಾರವಾರೀ ಜನ ಹೆಚ್ಚಾಗಿ ಈ ದೇವಿಗೆ ನಡೆದು ಕೊಳ್ಳುತ್ತಾರೆ. ಸೂಪಾದಲ್ಲಿ ವಾಸವಾಗಿರುವ ಅರಣ್ಯ ಇಲಾಖೆಯವರು, ಪೋಲೀಸ ಸಿಬ್ಬಂದಿ, ಕೆ.ಇ.ಬಿ.ಯವರು, ಕಂದಾಯ ಇಲಾಖೆಯ ನೌಕರರು ಹೆಚ್ಚಾಗಿ ಈ ಗುಡಿಗೆ ಬರುತ್ತಾರೆ. ನಾವು ಅಲ್ಲಿಗೆ ಹೋದಾಗ ಅದಾಗಲೇ ಪೂಜೆ ಮುಗಿಸಿದ ಭಟ್ಟರು ಆರತಿ ತಟ್ಟೆ ಹಿಡಿದುಕೊಂಡು ಭಕ್ತರ ದಾರಿ ನೋಡುತ್ತ ನಿಂತಿದ್ದರು.
ಹೇ ! ಕಾಳೀ ತಾಯೀ…! ಬಯಲು ಸೀಮೆಯಿಂದ ಬಂದು ಈ ಅರಣ್ಯದಲ್ಲಿ ನಿನ್ನ ಸೆರಗಿಗೆ ಬಿದ್ದೇನೆ. ಹಾಲಲ್ಲಾದರೂ ಹಾಕು. ನೀರಲ್ಲಾದರೂ ಹಾಕು
ನಾನು ದೇವಿಗೆ ಅಡ್ಡ ಬಿದ್ದು ಬೇಡಿಕೊಂಡೆ. ಬಯಲು ನಾಡಿಂದ ಈ ಅರಣ್ಯಕ್ಕೆ ಬಂದು ನಿನ್ನ ಸೆರಗಿಗೆ ಬಿದ್ದಿದ್ದೇನೆ ಎನ್ನುವ ಅಂತರಂಗದ ಮಾತು ನನಗಷ್ಟೇ ಕೇಳಿಸಿತೇನೋ. ಕಾಳೀ ನದಿಯ ದಂಡೆಯ ಮೇಲಿರುವ ಈ ದುರ್ಗೆ ಪೂರ್ವಾಭಿಮುಖಿಯಾಗಿ ನಿಂತಿದ್ದಾಳೆ. ಕೆಳಗೆ ನದಿಯಾಗಿ ಹರಿಯುವ ಕಾಳೀ ತಾಯಿಯೂ ಪೂರ್ವಾಭಿಮುಖಿಯಾಗಿ ಸಾಗುತ್ತಾಳೆ. ಕಾಳಿ ಮತ್ತು ದುರ್ಗೆ ಇಬ್ಬರದೂ ಒಂದೇ ಅವತಾರ. ಅಲ್ಲಿ ನದಿಯಾಗಿ ಹರಿಯುವ ಕಾಳಿಯು ಇಲ್ಲಿ ಗುಡಿಯಲ್ಲಿ ದುರ್ಗೆಯಾಗಿ ನಿಶ್ಚಲ ಮೂರ್ತಿಯಾಗಿ ಕೂತಿದ್ದಾಳೇನೋ ಅನಿಸಿತು. ಭಟ್ಟರು ಹಿಡಿದ ಆರತಿ ತಟ್ಟೆಗೆ ಕಿಸೆಯಲ್ಲಿದ್ದ ಚಿಲ್ಲರೆ ಐದು ಪೈಸೆಯನ್ನು ಹಾಕಿದೆ. ಯಾಕೋ ಮನಸ್ಸಿಗೆ ಸಮಾಧಾನವೆನಿಸಿತು. ಸ್ವಲ್ಪ ಹೊತ್ತು ಗುಡಿಯ ಕಟ್ಟೆಯ ಮೇಲೆ ಕೂತು ಎದ್ದೆವು. ಆಗಲೇ ಚಾಂದಗುಡೆಯವರು ಹೇಳಿದರು.
‘’ಇವತ್ತು ಸಂಜೀಗೆ ಸಕ್ಕೂಬಾಯಿ ಮೆಸ್ಸು ತೋರಸ್ತೀನಿ. ಅದಕೂ ಮದಲ ರಾಮ ಮಂದಿರಕ್ಕೂ ಹೋಗೂನು. ಊರ ದೇವರ ದರ್ಶನಾನೂ ಆಗ್ಲಿ. ಹಂಗಽ… ನದೀ ಸಂಗಮ ಇಲ್ಲೇ ಐತಿ. ಕಾಳಿ ಪಾಂಡ್ರಿ ನದಿಗೂಳು ಸೇರೂ ಸಂಗಮ. ಇಲ್ಲಿಂದನ ಕಾಣತೈತಿ ನೋಡ್ರಿ.ಅಲ್ಲೆ ’’
ಅಂದರು. ನಾನು ಹೊಳೆಯ ಕಡೆ ನೋಡಿದೆ. ಎರಡು ನದಿಗಳು ಸೇರುವ ಸಂಗಮವೂ ಅಲ್ಲಿ ಕಂಡಿತು. ಅವು ಕೂಡುವ ಜಾಗದಲ್ಲಿ ಒಂದು ಹಳೆಯ ಕಲ್ಲಿನ ಕಟ್ಟೆ ಇದ್ದದ್ದು ಕಂಡಿತು. ಆ ಕಟ್ಟೆಯ ಮೇಲೆ ಕಲ್ಲಿನ ದೇವರನ್ನು ಇಟ್ಟಿದ್ದು ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಅಲ್ಲಿ ಜಾತ್ರೆಯಾಗುತ್ತದಂತೆ.
ಮದಲ ನಾಷ್ಟಾ ಮಾಡಿ ಬರೂನು. ಆಮ್ಯಾಲ ತಳಗ ಕುಂಡೀ ಊರಾಕೂ ವ್ಯಾಳೇ ಸಿಗೂದಿಲ್ಲ ನಮಗ
ನಾನೂ, ಚಾಂದಗುಡೆಯವರೂ ನಿನ್ನೆಯಂತೆ ನಡೆಯುತ್ತ ಡ್ಯಾಮ ಸೈಟಿಗೆ ಬಂದೆವು. ಇಂದು ಕೆಲಸದ ಒತ್ತಡ ಹೆಚ್ಚು ಇದ್ದ ಕಾರಣ ಉಳಿದ ಕಡೆಗೆ ಹೆಚ್ಚು ಗಮನ ಕೊಡಲಾಗಲಿಲ್ಲ. ಆಗಲೇ ಸ್ಟೋರು ಕೀಪರ್ ಕಾಶೀನಾದನ್ ಫೀಲ್ಡ ಆಫೀಸಿನ ಬಳಿ ನಿಂತಿದ್ದ. ಹೇಗೂ ಆತ ಡ್ಯಾಮ ಸೈಟಿನಲ್ಲೇ ವಾಸ ಮಾಡುತ್ತಿದ್ದನಲ್ಲ. ಆತ ನಮ್ಮನ್ನು ನೋಡಿ ‘ವಣ್ಣಂಗೇ… ವಣ್ಣಂಗೇ…’ ಅಂದ. ಅಲ್ಲಿಯೇ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದ ಕೆಲವು ಲೇಬರ್ ಜನರನ್ನೂ ಕರೆದುಕೊಂಡು ಬಂದಿದ್ದ. ಯೊಜನೆಯ ಮಾಡೆಲ್ ಬಂದ ಕೂಡಲೇ ಅದನ್ನು ಲಾರಿಯಿಂದ ಕೆಳಗಿಳಿಸಲು ಅವರೆಲ್ಲ ಸಿದ್ಧರಾಗಿದ್ದರು. ಶ್ರೀಧರ್ ಕಾಣಕೋಣಕರ ಸೂಪಾದಿಂದ ಆಗಲೇ ಸೈಟಿಗೆ ಬಂದು ದಾಮೋದರನ್ ಹೊಟೆಲ್ಲಿಗೆ ನಾಷ್ಟಾ ಮಾಡಲು ಹೋಗಿದ್ದ. ಆತನೂ ದಿನಾಲು ನಡೆದುಕೊಂಡೇ ಅಲ್ಲಿಗೆ ಬರುತ್ತಿದ್ದ.
‘’ಹ್ಹಹ್ಹಹ್ಹ….ನಾವೂ ಮೊದಲ ನಾಷ್ಟಾ ಮಾಡೇ ಕುಂಡ್ರೂನು ಶೇಖರವರ… ಮುಂಬಯಿ ಜನ ಬಂದ್ರೂ ಅಂದ್ರ ತಳಗ ಕುಂಡೀ ಊರಾಕೂ ವ್ಯಾಳೇ ಸಿಗೂದಿಲ್ಲ. ಬರ್ರಿ. ಇನ್ನೇನು ಶೇಷಗಿರಿಯವ್ರೂ ಬರತಾರ. ಆಮ್ಯಾಲ ಅಡತಾರ ಆದೀತ್ರೆಪಾ… ಹೂಂ…’’
ಎಂದು ಚಾಂದಗುಡೆಯವರು ಅವಸರ ಮಾಡಿ ಅತ್ತ ಕರೆದೊಯ್ದರು. ನನಗೂ ಅದು ಹೌದು ಅನಿಸಿತ್ತು. ಇಬ್ಬರೂ ತಡಮಾಡದೆ ದಾಮೋದರ ಹೋಟೆಲ್ಲಿನ ದಿನ್ನೆಯ ಕಡೆಗೆ ಓಡಿದೆವು.
ಡ್ಯಾಮ್ ಸೈಟಿನಲ್ಲಿ ಸಿಕ್ಕಿತು ಕೇರಳದ ಪುಟ್ಟೂ- ನೇಂದ್ರ ಬಾಳೇ ಹಣ್ಣು
ಆಗಲೇ ಹೊಟೆಲಿನಲ್ಲಿ ನಾಲ್ಕಾರು ಜನ ಕೂತು ನಾಷ್ಟಾ ಮಾಡುತ್ತಿದ್ದರು. ದೂರದಿಂದಲೇ ನಮ್ಮನ್ನು ನೋಡಿದ ದಾಮೋದರನ್ ಒಳಗಿನಿಂದಲೇ ಕೂಗಿದ.
‘‘ವಣ್ಣಾ…ವಣ್ಣಾ…! ಶೇಗರಪ್ಪೋರೆ. ಬಿಸೀ ಪುಟ್ಟೂ ರೆಡಿ ಉಂಡು. ಸಕ್ರೆ-ನೇಂದ್ರ ಬಾಳೇ ಹಣ್ಣು ಬಂದದೆ. ಕಡ್ಲೇ ಸಾರು ನಲ್ಲ ಉಂಡು’’.
ದಾಮೋದರ ಹೇಳಿದ. ನಾನು ಪುಟ್ಟೂ ಹೆಸರು ಕೇಳಿದ್ದೆ. ಇದರ ಬಗ್ಗೆ ನಮ್ಮ ತಂಡದಲ್ಲಿದ್ದ ಅಪ್ಪೂ ಕುಟ್ಟನ್ ಹಲವಾರು ಬಾರಿ ಹೇಳಿದ್ದ. ಒಂದು ಅಡಿ ಉದ್ದದ ಬಿದಿರು-ಬಂಬೂದಲ್ಲಿ ತುಸು ನೆನಸಿದ ಅಕ್ಕಿಯ ರವೆಯನ್ನು ತುಂಬಿ ಒಲೆಯ ಮೇಲಿಟ್ಟು ಆವಿಯಲ್ಲಿ ಬೇಯಿದರೆ ಅದು ಸಿದ್ಧವಾಗುತ್ತದೆ. ತಿನ್ನಲು ರುಚಿ ಮತ್ತು ಆರೋಗ್ಯಕ್ಕೆ ಬಲ ಕೊಡುತ್ತದೆ ಎಂದೂ ಅಪ್ಪೂ ಹೇಳಿದ್ದ. ಕಡ್ಲೆ ಕಾಳು ಸಾರು ಅದಕ್ಕೆ ಪೊಗದಸ್ತಾಗಿ ಇರುತ್ತದಂತೆ. ಇದು ಕೇರಳದ ಬಹು ಜನಪ್ರಿಯ ತಿಂಡಿಯಂತೆ. ನಮ್ಮ ಬಯಲು ಸೀಮೆಯ ಜಿಲ್ಲೆಗಳಲ್ಲಿ ಇದರ ಪರಿಚಯವಿಲ್ಲ. ನಾನು ಯಾವತ್ತೂ ಇದನ್ನು ನೋಡಿರಲೂ ಇಲ್ಲ. ಹಾಗೆ ನೋಡಿದರೆ ಇಡ್ಲಿ ಕೂಡ ನಮ್ಮ ಭಾಗದ್ದಲ್ಲ.
ಫೋಟೋ ಕೃಪೆ : Wikipedia
ದಾಮೋದರನ್ ಪ್ಲೇಟಿನಲ್ಲಿ ಎರಡು ಬಿಳಿಯ ರವೆಯ ಉದ್ದನ್ನ ಪುಟ್ಟೂ ತಂದಿಟ್ಟ. ಹಸಿ ಕೊಬ್ಬರಿಯನ್ನು ಅದಕ್ಕೆ ತುರಿದೂ ಹಾಕಿದ್ದ. ಪಕ್ಕಕ್ಕೆ ಒಂದೊಂದು ನೇಂದ್ರ ಬಾಳೇ ಹಣ್ಣು. ಕಡಲೇ ಕಾಳು ಸಾರು ತಂದಿಟ್ಟ. ಒಂದು ಬಟ್ಟಲ್ಲಲಿ ಸಕ್ಕರೆಯನ್ನು ಇಟ್ಟ. ಅದ್ಭುತ ತಿಂಡಿ ಅನಿಸಿತು. ಹೀಗೆ ತಿಂಡಿ ತಿನ್ನುವಾಗ ನೀರಿನ ಹುಡುಗಿ ಗೋಮ್ಲಿ ಒಂದೆರಡು ಸಲ ನನ್ನತ್ತ ನೋಡಿ ಕಿಸಕ್ ಎಂದು ನಕ್ಕು ಹೋದಳು. ನಾನು ಪೆಚ್ಚನಂತೆ ಅತ್ತಿತ್ತ ನೋಡಿದೆ.
ಅದನ್ನು ಹೇಗೋ ಗಮನಿಸಿದ ದಾಮೋದರನ್ ತಾನೂ ನಕ್ಕು ‘ಶೇಗರಪ್ಪೋರು ಚೆರಿಕ್ಯಾದು… ಹ್ಹಿಹ್ಹಿಹ್ಹಿ’ ಅಂದ. ನಾನು ಚಾಂದಗುಡೆಯವರತ್ತ ಗಾಬರಿಯಿಂದ ನೋಡಿದೆ. ಅವರು ಪುಟ್ಟೂ ತಿನ್ನುವುದರಲ್ಲಿ ಮಗ್ನರಾಗಿದ್ದರು. ನಮಗೆ ಕೆಲಸದ ಅವಸರವಿತ್ತು. ನಾನು ಡ್ಯಾಮ ಕೆಲಸಕ್ಕೆ ಹೊಸದಾಗಿ ಬಂದವ ಬೇರೆ. ಮೀಟರ್ ಚಹ ಕುಡಿದ ನಂತರ ಮಧ್ಯಾನ ಊಟಕ್ಕೆ ಇಲ್ಲಿಗೇ ಬರ್ತೀವಿ ಎಂದು ದಾಮೋದರನಿಗೆ ಹೇಳಿ ಫೀಲ್ಡ ಆಫೀಸೀನತ್ತ ತಿರುಗಿ ದಿನ್ನೆ ಇಳಿದೆವು.
ಡ್ಯಾಮ ಸೈಟಿನಲ್ಲಿ ನನ್ನ ಮೊದಲ ಈವೆಂಟ್
ಆಗಲೇ ನಾಯಕ್ ಸಾಹೇಬರು ಬಂದಿದ್ದರು. ಫೀಲ್ಡ ಆಫೀಸೀನ ಹೊರಗೆ ಒಂದು ದೊಡ್ಡ ಹಂದರ ಹಾಕಿ ಮೇಲೆ ನೆರಳಿಗೆಂದು ತಗಡು ಹೊದಿಸಲಾಗಿತ್ತು. ಡ್ಯಾಮ್ ಸೈಟಿಗೆ ಯಾರಾದರೂ ವಿ.ಐ.ಪಿ.ಗಳು ಬಂದರೆ ಅವರಿಗೆ ಖುರ್ಚಿಗಳನ್ನು ಇಲ್ಲಿಯೇ ಹಾಕುತ್ತಿದ್ದರು. ಇವತ್ತು ಮಾಡೆಲ್ ಬರುತ್ತಿರುವುದರಿಂದ ಅದನ್ನು ಇಲ್ಲಿಯೇ ಇಳಿಸಿ ಇಡಬೇಕಾಗಿತ್ತು. ಮುಂಬಯಿಯಿಂದ ಆರ್.ಜೆ.ಶಾಹ್ ಕಂಪನಿಯವರು ಬರುತ್ತಿರುವುದರಿಂದ ಧಾರವಾಡ ಆಫೀಸೀನಿಂದ ನಮ್ಮ ಬಾಸ್ ಎಕ್ಸಿಕ್ಯೂಟಿವ್ ಇಂಜನಿಯರ ಶ್ರೀ ಹೆಚ್.ಆರ್.ಎನ್. ಮೂರ್ತಿಯವರೂ, ಅಸಿಸ್ಟಂಟ ಎಕ್ಸಿಕ್ಯೂಟಿವ್ ಇಂಜನಿಯರ್ ಶ್ರೀ ಸಿ.ಎಸ್.ಹೆಬ್ಲಿಯವರೂ ಬರುತ್ತಾರೆಂದು ಎಲ್ಲರೂ ಸೇರಿದ್ದರು. ಚೀಫ್ ಇಂಜನಿಯರ್ ಕಚೇರಿಯ ಅಧಿಕೃತ ಫೋಟೋಗ್ರಾಫರ ಶ್ರೀ ಪಿ.ಡಿ.ಕೊನೇರಿಯವರೂ ಧಾರವಾಡದಿಂದ ದೊಡ್ಡ ಕೆಮರಾ ಸಹಿತ ಬಂದಿದ್ದರು.
ಅಷ್ಟರಲ್ಲಿ ಸೂಪಾ ಐಬಿಯಿಂದ ಹೈದರಾಬಾದಿನ ಅಧಿಕಾರಿ ಶೇಷಗಿರಿಯವರೂ, ಜಿಯಾಲಾಜಿಸ್ಟರಾದ ವಿ.ಎಸ್. ಉಪಾಧ್ಯಾರೂ, ಮಂಗಾರಾಮರೂ ಒಟ್ಟಿಗೇ ಬಂದರು. ಮುಂಬಯಿಯ ಶಾಹ್ ಕಂಪನಿಯವರು ಬಂದ ಮೇಲೆ ಅವರಿಗೆ ನದಿಯ ಎರಡೂ ಬದಿಯ ಬೆಟ್ಟಗಳನ್ನು ತೋರಿಸಿ ಡ್ರಿಪ್ಸ[ಗುಹೆ]ಗಳನ್ನು ಎಲ್ಲಿ ತೋಡಬೇಕಾಗುತ್ತದೆ ಎಂದು ಜಾಗೆ ತೋರಿಸಬೇಕಾಗಿತ್ತು. ಮತ್ತು ಕಂಪನಿಯವರ ಕೆಲಸದ ಕಾರ್ಯ- ವೈಖರಿ ಕೇಳಿ ತಿಳಿದುಕೊಳ್ಳಬೇಕಾಗಿತ್ತು. ಅಲ್ಲದೆ ಇಲ್ಲಿಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಧ್ಯಾನವೇ ಅವರು ಬೆಂಗಳೂರಿನತ್ತ ಪ್ರಯಾಣ ಬೆಳೆಸುವವರಿದ್ದರು. ಅಲ್ಲಿ ವಿನ್ಯಾಸ ಕಚೇರಿಯ ಹಿರಿಯ ಅಧಿಕಾರಿ ಗಳೊಂದಿಗೆ ಸಮಾಲೋಚಿಸಿ ಕಾಮಗಾರಿಯ ವರ್ಕ್ ಆರ್ಡರ್ ಪಡೆದುಕೊಳ್ಳುವುದೂ ಅವಶ್ಯವಿತ್ತು. ಸರಕಾರದಿಂದ ವರ್ಕ್ ಆರ್ಡರ್ ಸಿಗದೆ ಅವರು ಬೆಟ್ಟದಲ್ಲಿ ಕಾಮಗಾರಿ ಆರಂಭಿಸುವಂತಿರಲಿಲ್ಲ.
ಡ್ಯಾಮ ಕೆಲಸಕ್ಕೆ ಬಂದ ಮೊದಲ ಕಂತ್ರಾಟುದಾರರು
ಚಿತ್ರ ಸಂಗ್ರಹ : ಶ್ರೀ ವಿ.ಎಸ್.ಚಳಗೇರಿ
ಬರಬೇಕಾದವರು ಎಲ್ಲರೂ ಬಂದರು. ಧಾರವಾಡ ಆಫೀಸೀನಲ್ಲಿದ್ದ ಎಕ್ಸಿಕ್ಯೂಟಿವ್ ಇಂಜಿನಿಯರ್[ಇ.ಇ.] ಶ್ರೀ ಹೆಚ್.ಆರ್.ಎನ್. ಮೂರ್ತಿಯವರು, ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್[ಎ.ಇ.ಇ.] ಶ್ರೀ ಸಿ.ಎಸ್.ಹೆಬ್ಲಿಯವರು, ಎ.ಇ. ಶ್ರೀ ಸಯ್ಯದ್ ಅವರೂ ಬಂದರು. ಮುಂಬಯಿಂದ ಮೆಸರ್ಸ್. ಆರ್.ಜೆ.ಶಾಹ್ ಕಂಪನಿಯ ಮುಖ್ಯಸ್ಥರಾದ ಸೌರವ್ ಪಾಂಡೆ ಮತ್ತು ವಿಜಯ್ ಕುಲಕರ್ಣಿಯವರೂ ಬಂದರು. ಈಗ ಡ್ಯಾಮ ಸೈಟ್ ಫೀಲ್ಡ ಆಫೀಸೀನ ಮುಂದೆ ನಾಲ್ಕಾರು ಕಾರುಗಳು. ಅಷ್ಟೊಂದು ಕಾರುಗಳು ಇಲ್ಲಿ ಯಾವತ್ತೂ ಬಂದು ನಿಂತಿರಲಿಲ್ಲ ಎಂದು ಚಾಂದಗುಡೆ ಸಂಭ್ರಮಪಟ್ಟರು. ಬಂದ ಎಲ್ಲಾ ಸಾಹೇಬರುಗಳಿಗೆ ಖುರ್ಚಿ ತೋರಿಸಿ ಕೂಡಿಸುವ ಕೆಲಸ ಮತ್ತು ಅವರಿಗೆ ಬಿಸ್ಕೀಟು- ಚಹ ಕೊಡುವ ಕೆಲಸವನ್ನು ನನಗೆ ಮತ್ತು ಶ್ರೀಧರ್ ಕಾಣಕೋಣಕರಗೆ ಒಪ್ಪಿಸಲಾಗಿತ್ತು. ಅದು ನನ್ನ ಸೇವಾವಧಿಯಲ್ಲಿ ನಡೆದ ಮೊದಲ ಈವೆಂಟ್ ಆಗಿತ್ತು.
ಇಂಜಿನಿಯರ್ ಸಯ್ಯದ್ ಅವರು ಡ್ಯಾಮು ಕಟ್ಟುವ ಎರಡೂ ಬೆಟ್ಟಗಳ ಭೂಗರ್ಭಗಳ ಮಾಹಿತಿ ಇರುವ ದೊಡ್ಡ ದೊಡ್ಡ ನೀಲೀ ನಕ್ಷೆಗಳನ್ನು ಧಾರವಾಡದಿಂದಲೇ ತಂದಿದ್ದರು. ಈ ನಕ್ಷೆ ತಯಾರಿಸಲು ನಮ್ಮ ಇಲಾಖೆಯ ಇಂಜಿನಯರರು ಎರಡು ವರ್ಷ ಸತತ ಕೆಲಸ ಮಾಡಿದ್ದರಂತೆ. ಸೂಪಾ ಬೆಟ್ಟಗಳ ಭೂಗರ್ಭದ ಆಳದಲ್ಲಿ ರುವ ಭೂ ರಚನೆಯನ್ನು ಹೆಕ್ಕಿ ಹೊರತಗೆದು ನಕ್ಷೆ ತಯಾರಿಸಲಾಗಿತ್ತು. ಆಣಕಟ್ಟು ನಿರ್ಮಾಣದ ಪೂರ್ವಭಾವಿ ನಿರ್ಧಾರಗಳಿಗೆ ಈ ನಕ್ಷೆಗಳು ಪ್ರಯೋಜನಕಾರಿಯಾಗಿದ್ದವು.
ಎರಡು ಬೆಟ್ಟದಲ್ಲಿ ಎಂಟು ಗುಹೆಗಳನ್ನು ತೋಡುವ ಎರಡೂವರೆ ಕೋಟಿಯ ಕಾಮಗಾರಿ
ಚಿತ್ರ ಸಂಗ್ರಹ : ಶ್ರೀ ವಿ.ಎಸ್.ಚಳಗೇರಿ
ಅಲ್ಲಿ ಬಂದಿದ್ದ ಎಲ್ಲ ಅಧಿಕಾರಿಗಳೂ ನೀಲೀ ನಕ್ಷೆಗಳನ್ನು ಬಿಡಿಸಿಕೊಂಡು ಚರ್ಚಿಸಿದರು. ನನಗೆ ಆ ನೀಲೀ ನಕ್ಷೆಗಳನ್ನು [ಬ್ಲೂ ಪ್ರಿಂಟ್] ಅಧಿಕಾರಿಗಳ ಎದುರು ಹಿಡಿದು ನಿಲ್ಲುವ ಮತ್ತು ಅವರ ಚರ್ಚೆಯನ್ನು ಕುತೂಹಲದಿಂದ ಕೇಳಿಸಿಕೊಳ್ಳುವ ಕೆಲಸ ಕೊಟ್ಟರು. ಮತ್ತು ಅಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನು ಕೈಯಲ್ಲಿ ಬರೆದುಕೊಂಡು ನಾಯಕ್ ಸಾಹೇಬರಿಗೆ ಒಪ್ಪಿಸುವ ಕೆಲಸವೂ ನನ್ನದಾಗಿತ್ತು.
ಎರಡೂ ಬೆಟ್ಟದಲ್ಲಿ ಎಲ್ಲಿ ಎಲ್ಲಿ ಡ್ರಿಫ್ಟ [ಗುಹೆಗಳನ್ನು] ಗಳನ್ನು ಕೊರೆಯಬೇಕು, ಹಾಗೂ ಬೆಟ್ಟದ ಗರ್ಭದಲ್ಲಿ ಎಷ್ಟು ಉದ್ದದ ಸುರಂಗಗಳಿರಬೇಕು ಎಂಬುದಕ್ಕೆ ಶೇಷಗಿರಿಯವರು ಸಲಹೆ ಕೊಡುತ್ತಿದ್ದರು. ಸಿ.ಎಸ್.ಹೆಬ್ಲಿಯವರು ತಾವೂ ಅದಕ್ಕೆ ಸಮ್ಮತಿ ಕೊಡುತ್ತಿದ್ದರು. ಅವರು ಹೆಚ್ಚು ಮಾತಾಡುವ ಜಾಯಮಾನದವರಲ್ಲ. ಇ.ಇ. ಶ್ರೀ ಹೆಚ್.ಆರ್.ಎನ್. ಮೂರ್ತಿಯವರು ಅವತ್ತಿನ ಸೈಟ್ ಮೀಟಿಂಗನ್ನು ನಿಯಂತ್ರಿಸುತ್ತಿದ್ದರು. ಶಾಹ್ ಕಂಪನಿಯವರು ತಮ್ಮ ಸಿಬ್ಬಂದಿ ಡ್ಯಾಮ ಸೈಟಿನಲ್ಲಿಯೇ ಉಳಿಯುತ್ತಾರೆ. ಅವರಿಗೆ ಇಲಾಖೆಯವರೇ ಉಳಿಯಲು ತಗಡಿನ ಶೆಡ್ಡು ಕೊಡಬೇಕೆಂದು ಕೇಳಿದರು. ಅದಕ್ಕೆ ನಮ್ಮ ಇ.ಇ. ಅವರೂ ಸಮ್ಮತಿಸಿದರು. ಆ ಕ್ಷಣ ನಾನು ಉಳಿದೆಲ್ಲವನ್ನೂ ಮರೆತು ಈ ತಜ್ಞರ ಮಾತುಗಳತ್ತ ಗಮನ ಕೊಡುತ್ತಿದ್ದೆ. ಒಂದು ಹಂತದ ಮೀಟಿಂಗ ಮುಗಿಸಿ ಸಭೆ ಮುಗಿಯಿತು. ಎಲ್ಲರೂ ಕಾಳೀ ನದಿ ಮೌನವಾಗಿ ಹರಿಯುತ್ತ ಪೂರ್ವಕ್ಕೆ ಸಾಗುವ ನೋಟದ ಕಡೆಗೆ ಗಮನ ಕೊಟ್ಟರು. ನಾನು ಒಮ್ಮೆ ಎರಡೂ ಬೆಟ್ಟಗಳ ತುದಿಯನ್ನು ನೋಡುತ್ತ ಏನೋ ಯೋಚಿಸಿದೆ.
[ಮುಂದುವರೆಯುತ್ತದೆ. ಮುಂದಿನ ಶನಿವಾರ ಮತ್ತೆ ಓಡಿರಿ. ಇದು ಬೆಳಕು ತಂದವರ ಕತ್ತಲ ಬದುಕಿನ ಕತೆ]
ಹೂಲಿಶೇಖರ್
(ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)