ತೋಟ, ಹೊಲಗಳಲ್ಲಿ ಸ್ವಾಭಾವಿಕ ಹಸಿರು ಬೇಲಿ ಬೆಳೆಸಲು ಬಯಸುವ ರೈತರು ಕಾರೆಹಣ್ಣು ಬೀಜಗಳನ್ನು ಹಾಕಿದರೂ ಸಸಿ ಹುಟ್ಟುವುದು ತೀರಾ ಅಪರೂಪ. ಈ ಕಾರೆಹಣ್ಣಿನ ಕುರಿತು ಹಿರಿಯ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಬರೆದ ಪುಟ್ಟ ಲೇಖನ, ಮುಂದೆ ಓದಿ…
“ಕಾರೆ ಸೊಪ್ಪಾದರೂ ಸರಿಯೇ ಕಾಯಕದಿಂದಲೇ ಜೀವನ್ಮುಕ್ತಿ” ಎಂದಿದ್ದಾರೆ ಬಸವಣ್ಣ.
ಹೊಲಮಾಳದ ಬೆರಕೆ ಸೊಪ್ಪುಗಳ ಜೊತೆಯಲ್ಲಿ ಕಾರೆ ಕುತರಿನ ಎಳೆಚಿಗುರನ್ನು ಸೇರಿಸಿ ತಯಾರಿಸಿದ ಬಸ್ಸಾರು (ಉಪ್ಸಾರು) ಸವಿಯಲು ಬಲು ರುಚಿ. ಮುಂಗಾರಿನ ಮಳೆಗಾಲದ ಜುಲೈ- ಆಗಸ್ಟ್- ಸೆಪ್ಟೆಂಬರ್ ತಿಂಗಳುಗಳಲ್ಲಿ ಕಾರೆಹಣ್ಣು ಸಿಗುತ್ತದೆ. ನಿರ್ದಿಷ್ಟ ತಾಪಮಾನದಲ್ಲಿ ಮಾತ್ರ ಬೀಜಗಳು ಮೊಳೆತು ಸಸಿಯಾಗುತ್ತವೆ. ತೋಟಗಳಲ್ಲಿ ಹೊಲಗಳಲ್ಲಿ ಸ್ವಾಭಾವಿಕ ಹಸಿರು ಬೇಲಿ ಬೆಳೆಸಲು ಬಯಸುವ ರೈತರು ಇದರ ಬೀಜಗಳನ್ನು ಹಾಕಿದರೂ ಸಸಿ ಹುಟ್ಟುವುದು ತೀರಾ ಅಪರೂಪ.
ಕಾರೆಹಣ್ಣು ನಮ್ಮ ಬಯಲು ಸೀಮೆಯ ಕುರುಚಲು ಕಾಡುಗಳಲ್ಲಿ, ಗೋಮಾಳ ಹೊಲಗಳಲ್ಲಿ ದಂಡಿಯಾಗಿ ಸಿಗುತ್ತವೆ. ತುಂಬಾನೇ ಪೌಷ್ಟಿಕಾಂಶಗಳಿರುವ ಮತ್ತು ಶಕ್ತಿವರ್ಧಕ ಆಹಾರ ಇದು. ಬಂಗಾರದ ಬಣ್ಣದಲ್ಲಿ ಹೊಳೆಯುವ ಕಾರೆಯ ಕೆಂಗಾಯಿಗಳನ್ನು ತಂದು ತಂಗಡಿಸೊಪ್ಪು- ಕುರಿಪಿಚ್ಚಿಗೆ- ಕಲ್ಲಹರಳಿನ ಜೊತೆಯಲ್ಲಿ ಪಾವುಡದಲ್ಲಿ ಸುತ್ತಿ ಮಡಗಿದರೆ ಬೇಗ ಹಣ್ಣಾಗುತ್ತವೆ. ನಮ್ಮ ಬಾಲ್ಯಕಾಲದಲ್ಲಿ ಹುಡುಗರು ಹುಡುಗಿಯರು ಗುಂಪುಗೂಡಿ, “ಕಾರೆ ಕಾಯಿ ಕೆಂಗು- ಪೂಜಾರಪ್ಪನ ಪಿಂಗು” ಎಂದು ಹೇಳಿಕೊಂಡು ಬೀದಿಯಲ್ಲಿ ಕುಣಿದಾಡುತ್ತಿದ್ದೆವು. ಈ ಶಿಶುಪ್ರಾಸ ಕೇಳಿಸಿಕೊಂಡ ದೊಡ್ಡವರು ನಮಗೆ ಉಗಿದು ಉಪ್ಪಾಕಿ ಹಾಗೆ ಹೇಳಬಾರದೆಂದು ಎಚ್ಚರಿಸುತ್ತಿದ್ದರು. ಅವರು ಬೈದಷ್ಟೂ ಶಿಶುಪ್ರಾಸವನ್ನು ಜೋರಾಗಿ ಹೇಳಿ ಕ್ಯಾಕಾಕುತ್ತಿದ್ದೆವು.
ಕಾರೆಹಣ್ಣು ಕುರಿತ ನಿಮ್ಮ ಅನುಭವಗಳನ್ನು ದಾಖಲಿಸಿರಿ.
- ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು),ಬೆಂಗಳೂರು.