ಬಡವರ ಬಾದಾಮಿ ‘ಕಡ್ಲೆಕಾಯಿ’ – ಕೇಶವರೆಡ್ಡಿ ಹಂದ್ರಾಳ



ಕಡ್ಲೆಕಾಯಿಯನ್ನು ‘ ಬಡವರ ಬಾದಾಮಿ ‘ ಎಂದು ಕರೆಯುತ್ತಾರೆ, ಕಡಲೆಕಾಯಿ ನಂಟಿನ ಬಗ್ಗೆ ಖ್ಯಾತ ಕತೆಗಾರ ಕೇಶವರೆಡ್ಡಿ ಹಂದ್ರಾಳ ಅವರು ಬರೆದ ಸುಂದರ ಲೇಖನ ಮುಂದೆ ಓದಿ…

ಗೆಳೆಯ ಸುದರ್ಶನ ರೆಡ್ಡಿಯವರು ಮತ್ತು ಗೆಳೆಯ ವಡ್ಡಗೆರೆ ನಾಗರಾಜಯ್ಯನವರು ತಮ್ಮ ವಾಲ್ಗಳಲ್ಲಿ ಆಗಾಗ ತಮ್ಮ ಹೊಲಗಳ ಚಿತ್ರಗಳನ್ನು ಹಾಕುವುದನ್ನು ನಾನು ಗಮನಿಸುತ್ತಿದ್ದೇನೆ. ಅಂಥ ಚಿತ್ರಗಳಲ್ಲಿ ಶೇಂಗಾ ( ನಮ್ಮ ಕಡೆ ಕಡ್ಲೆಕಾಯಿ ಗಿಡ ಎಂದೇ ಫೇಮಸ್ ) ಹೊಲಗಳನ್ನು ಕಂಡರಂತೂ ನನ್ನ ಮನಸ್ಸು ಹಕ್ಕಿಯಂತೆ ಹಾರಿ ಹೋಗಿ ಕಡ್ಲೆಕಾಯಿ ಗಿಡದ ಹೊಲಗಳ ಸುತ್ತಲೂ ಒಂದು ರೌಂಡ್ ಹಾಕಿಕೊಂಡು ಬಂದು ನನ್ನ ಇಡೀ ಶರೀರ ಮತ್ತು ಮನಸ್ಸಿಗೆ ಅಗಾಧವಾದ ಚೈತನ್ಯ ತುಂಬುತ್ತವೆ. ಗಾಂಧೀಜಿ ಬಹಳವಾಗಿ ಇಷ್ಟಪಡುತ್ತಿದ್ದ ಈ ಕಡ್ಲೆಕಾಯಿ ನೂರಾರು ವರ್ಷಗಳಿಂದ ನಮ್ಮ ಬಯಲುಸೀಮೆಯ ಬಡವರ, ಜನಸಾಮಾನ್ಯರ ಆರ್ಥಿಕ ಬೆನ್ನೆಲುಬೆಂದೇ ಹೇಳಬಹುದು. ನೀರಾವರಿ ಜಮೀನುಗಳಿಲ್ಲದಿದ್ದರೂ ಎಂಥ ಬಡವರಿಗಾದರೂ ಒಂದೆರಡೆಕರೆ ದಿನ್ನೆಯಾದರೂ ಇದ್ದೇ ಇರುತ್ತಿತ್ತು. ಮಳೆಯ ಆಸರೆಯಿಂದಲೇ ಇಂಥ ದಿನ್ನೆ ಹೊಲಗಳಲ್ಲಿ ಕಡ್ಲೆಕಾಯಿ ಬೆಳೆಯುತ್ತಿದ್ದರಲ್ಲದೆ ಅಕ್ಕಡಿ ಸಾಲುಗಳಲ್ಲಿ ಹೆಸರು, ಹಲಸಂದೆ, ಅವರೆ, ಹುಚ್ಚೆಳ್ಳು ಹಾಕುತ್ತಿದ್ದರು. ಸುಗ್ಗಿಯ ಕಾಲದಲ್ಲಿ ಅದೆಂಥ ಸಂಭ್ರಮವೋ… ಹೇಳತೀರದು. ಈಗಲೂ ನೆನೆಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ. ” ಇದ್ದಬದ್ದ ಸೀರೆ ಎಲ್ಲಾ ಹರ್ದೋಗವ್ವೆ, ನೀನು ನೋಡಿದ್ರೆ ಅರಾಸಿಲ್ದೋನಂಗೆ ಓಡಾಡ್ತೀಯ..” ” ಮಕ್ಕಳಿಗೆ ಸುದ್ದಾನ್ವಾಗಿ ಒಂದು ಒಂದಂಗಿ ಇಲ್ಲ, ಒಂದ್ನಿಕ್ಕರ್ರಿಲ್ಲ. ನಿಂಗಂತೂ ಆ ಕಡೆ ಗ್ಯಾನನೇ ಇಲ್ಲ..” ” ಮೂಗ್ನತ್ತು ಮುರ್ದೋಗಿ ಮೂರ್ತಿಂಗ್ಳಾಯ್ತು, ನಿಂಗೆ ಮಾನಮರ್ಯಾದೆ ರಾಗಿ ಕಾಳ್ನಷ್ಟೂ ಇಲ್ದಂಗಾಯ್ತು…” ಎಂದು ಹೆಂಗಸರು ತಗುಲಿಕೊಂಡರೆ ಗಂಡಸರು ತಲೆ ಕೆರೆದುಕೊಳ್ಳುತ್ತಾ ” ಸ್ವಲ್ಪ ನಿರುಬ್ರುವಾಗಿರ್ರಿ, ಕಡ್ಲೆಕಾಯಿ ಕೀಳ್ತಿದ್ದಂಗೆ ಎಲ್ಲಾ ಗಂಜರಗೋಳ್ನೂ ನೀಗಿಸ್ಕಂಬಿವ್ರಿ…” ಎಂದು ಕಕ್ಲಾತಿ ಪಡುತ್ತಿದ್ದರು. ಮಕ್ಕಳ ಓದು, ಬಟ್ಟೆ , ಆಸ್ಪತ್ರೆ ಎಲ್ಲಕ್ಕೂ ನೆರವಾಗುತ್ತಿದ್ದದ್ದು ಈ ಕಡ್ಲೆಕಾಯಿಯೇ !

ಫೋಟೋ ಕೃಪೆ : krishijagran

ಕಡ್ಲೆಕಾಯಿಯನ್ನು ‘ ಬಡವರ ಬಾದಾಮಿ ‘ ಎಂದು ಯಾರು ಕರೆದರೋ.. ಆ ಮಾತಂತು ಹಂಡ್ರೆಡ್ ಪರ್ಸೆಂಟ್ ಸತ್ಯವೇ ಸರಿ ನಮ್ಮ ಬಯಲು ಸೀಮೆಯ ಕಡೆ. ಕಡ್ಲೆಕಾಯಿ ಎಂಬ ಪದ ನಮ್ಮ ಕಡೆ ಎಲ್ಲರ ಬಾಯಲ್ಲೂ. ‘ ಕಳ್ಳೆಕಾಯಿ ‘ ಎಂದೇ ಹೊರಡುವುದು. ನಾವು ಹುಡುಗರಾಗಿದ್ದಾಗ ಅಪವೇಳೆಯಲ್ಲಿ ಯಾರಾದರೂ ನೆಂಟರು ಗಿಂಟರು ಬಂದರೆ, ಕೂಡಲೇ ಒಲೆ ಹಚ್ಚಿ ಕಡ್ಲೆಕಾಯಿ ಹುರಿದುಕೊಟ್ಟು, ಕಾಫಿ ಮಾಡಿಕೊಡುತ್ತಿದ್ದರು. ನಮ್ಮ ಮನೆಗಳಲ್ಲಂತೂ ಕಡ್ಲೆಕಾಯಿ ಮೂಟೆಗಳು ಎಲ್ಲಂದರಲ್ಲೆ ಬಿದ್ದಿರುತ್ತಿದ್ದವು. ಚೀಲವನ್ನು ತೂತಿಟ್ಟು ಎಷ್ಟು ಬೇಕೋ ಅಷ್ಟು ಕಡ್ಲೆಕಾಯಿಯನ್ನು ಜೇಬುಗಳಲ್ಲಿ ತುಂಬಿಕೊಂಡು ದನಗಳು ಮೆಲುಕು ಹಾಕುವಂತೆ ಮೆಲುಕಾಕುತ್ತಿದ್ದೆವು. ಕಡ್ಲೆಕಾಯಿ ಸುಗ್ಗಿಯಲ್ಲಂತೂ ಸ್ಕೂಲಿಗೆ ಹೋಗುತ್ತಿದ್ದ ಎಲ್ಲರ ಪುಸ್ತಕದ ಬ್ಯಾಗುಗಳಲ್ಲೂ ಕಡ್ಲೆಕಾಯಿ ಸರಸ್ವತಿಯೊಂದಿಗೆ ಗೆಳೆತನ ಬೆಳೆಸುತ್ತಿತ್ತು. ಮೇಷ್ಟ್ರುಗಳು ಪಾಠ ಮಾಡುತ್ತಿರುವಾಗಲೇ ಕೆಲವರು ಕಡ್ಲೆಕಾಯಿ ನಮಿಲಿ ಸಿಕ್ಕಿಬಿದ್ದು ರೂಲು ದೊಣ್ಣೆಯ ರುಚಿ ನೋಡುತ್ತಿದ್ದರು. ಕೆಲವೊಮ್ಮೆ ಕೆಲವು ಮೇಷ್ಟ್ರುಗಳು ನಮ್ಮ ಬ್ಯಾಗುಗಳಿಂದ ಕಡ್ಲೆಕಾಯಿ ಎಗರಿಸಿ ಬಾಯಾಡಿಸುತ್ತಿದ್ದರು ! ಕಡ್ಲೆಕಾಯಿ ಸುಗ್ಗಿಯಲ್ಲಿ ದೊಡ್ಡವರು, ಚಿಕ್ಕವರೆನ್ನುವ ಭೇದಭಾವವಿಲ್ಲದೆ ಹೊಲಗಳ ಹತ್ತಿರ ಬೆಂಕಿ ಹಾಕಿ ಕಡ್ಲೆಕಾಯಿ ಸುಟ್ಟು ತಿನ್ನುತ್ತಿದ್ದೆವು. ಇನ್ನು ಹಳ್ಳಿಗಾಡಿನ ಹೆಂಗಸರು ಕಡ್ಲೆಕಾಯಿ ಕೂಡಿಟ್ಟು ಉಡಿದಾರ, ಕರಿಮಣಿ, ಟೇಪು, ಪಿನ್ನ, ಬಾಚಣಿಗೆ, ಸೀರಣಿಗೆ, ಗುಗ್ಗೆ ಕಡ್ಡಿ, ತಿತ್ತಿ, ಸುಣ್ಣದ ಡಬ್ಬಿ ಇತ್ಯಾದಿಗಳನ್ನು ಗಂಡಸರ ಆಸರೆಯಿಲ್ಲದೆಯೇ ಖರೀದಿಸುತ್ತಿದ್ದರು. ಇನ್ನು ಪ್ರಾಯಕ್ಕೆ ಬಂದ ಹುಡುಗರು ಟೆಂಟಿನಲ್ಲಿ ಸಿನಿಮಾ ನೋಡಲಿಕ್ಕೆ, ಪಕೋಡ ತಿನ್ನಲಿಕ್ಕೆ, ಬೀಡಿಸಿಗರೇಟು ಸೇದಲಿಕ್ಕೆ ಮನೆರಲ್ಲಿ ಯಾರಿಗೂ ಕಾಣದಂತೆ ಟವಲ್ಲುಗಳಲ್ಲಿ ಕಡ್ಲೆಕಾಯಿ ಎತ್ತಿಕೊಂಡು ಹೋಗಿ ಅಂಗಡಿಗಳಿಗೆ ಹಾಕುತ್ತಿದ್ದರು. ಕಡ್ಲೆಕಾಯಿಗೆ ಐಸ್ ಕ್ಯಾಂಡಿ ಮಾರುತ್ತಿದ್ದವರು ಕೂಡಾ ಅಂದಾಜಿನ ಮೆಲೆ ಏಸ್ ಕ್ಯಾಂಡಿಗಳನ್ನು ಕೊಟ್ಟು ಹೋಗುತ್ತಿದ್ದರು.

ಫೋಟೋ ಕೃಪೆ : krishijagran

ಕಡ್ಲೆಬೀಜದ ಕಾರ ( ಚಟ್ನಿ ) ಮುದ್ದೆ, ರೊಟ್ಟಿ, ಅನ್ನ, ಚಾಪಾತಿ ಯಾವುದಕ್ಕಾದರೂ ಸೈ ಹಾಲಿಗೆ ಸೆಟ್ಟಾಗುವ ಸಕ್ಕರೆಯಂತೆ ಸೆಟ್ಟಾಗಿಬಿಡುತ್ತದೆ. ನಮ್ಮ ಕಡೆಯಂತೂ ಸಾರಿಗೆ ಯಡವಟ್ಟಾದರೆ ಕೂಡಲೇ ಕಡ್ಲೆಬೀಜ ಹುರಿದು, ಅದಕ್ಕೊಂದಿಷ್ಟು ಉಪ್ಪು, ಹುಣಿಸೆಹಣ್ಣು, ಮೆಣಸಿನಕಾಯಿ ಹಾಕಿ ರುಬ್ಬಿದರೆ ಮುಗೀತು, ಇಡೀ ದಿನ ಮನೆಮಂದಿಯೆಲ್ಲ ಮುದ್ದೆ, ಅನ್ನಕ್ಕೆ ಅದನ್ನೆ ಮೆದ್ದಿಕೊಂಡು ತಿನ್ನುತ್ತಾರೆ. ಇನ್ನು ಅದರೊಂದಿಗೆ ಒಂದಿಷ್ಟು ಮೊಸರು ಬೆರೆಸಿಕೊಂಡರಂತೂ ಅದರ ಕಥೆಯೇ ಬೇರೆ ! ಆದರೆ ಈ ಹತ್ತಾರು ವರ್ಷಗಳಿಂದ ಮಳೆ ಸರಿಯಾಗಿ ಆಗದೆ ಶಿರಾ, ಮಧುಗಿರಿ, ಪಾವಗಡ ಹಾಗು ಗಡಿನಾಡಿನ ಆಂಧ್ರದ ಅನೇಕ ಬಯಲುಸೀಮೆಯ ತಾಲೂಕುಗಳಲ್ಲಿ ಕಡ್ಲೆಕಾಯಿ ಬೆಳೆಯುವುದು ಕಡಿಮೆಯಾಗಿದೆ. ಈ ಬಾರಿ ಚನ್ನಾಗಿಯೇ ಮಳೆಯಾಗಿರುವ ಕಾರಣ ಇರುವಷ್ಟೆ ಕಡ್ಲೇಗಿಡಗಳು ನಳನಳಿಸುತ್ತಿವೆ. ಒಳ್ಳೆಯ ಬೆಳೆಯಾಗಬಹುದೆಂದು ರೈತರು ಅಪಾರವಾದ ಖುಷಿಯಲ್ಲಿದ್ದಾರೆ. ನಾನಂತೂ ಇವೊತ್ತಿಗೂ ಮನೆಯಲ್ಲಿ ಕಡ್ಲೆಕಾಯಿ ಮತ್ತು ಕಡ್ಲೆಕಾಯಿ ಬೀಜವನ್ನು ನಾನೇ ಹುರಿಯುತ್ತೇನೆ. ವಾರದಲ್ಲಿ ಎರಡು ದಿನಗಳಾದರೂ ರೊಟ್ಟಿ ಮತ್ತು ದೋಸೆಗೆ ಕಡ್ಲೆಬೀಜದ ಕಾರ ಬೇಕೇಬೇಕು. ಮಹಾತ್ಮಗಾಂಧಿ ಅನೇಕ ವರ್ಷಗಳ ಕಾಲ ಕಡ್ಲೆಕಾಯಿ ಮತ್ತು ಮೇಕೆ ಹಾಲಿನೊಂದಿಗೆ ಕಾಲ ಹಾಕಿದ್ದಾರೆಂದರೆ ಅದರ ತಾಖತ್ತು ಎಷ್ಟಿರಬೇಡ? ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಡ್ಲೆಕಾಯಿಯದೂ ಅಪರೂಪದ ಪಾತ್ರವಿದ್ದಂತೆ ಅಲ್ಲವೆ? ಕಡ್ಲೆಕಾಯಿ ಮತ್ತು ಮಹಾತ್ಮಗಾಂಧಿ ಈ ದೇಶದ ಎಂಥ ಅಪರೂಪದ ಸಂಗತಿಗಳಲ್ಲವೆ?


  • ಕೇಶವರೆಡ್ಡಿ ಹಂದ್ರಾಳ (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW