ನಮ್ಮ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ,ಹಾಸನ ಜಿಲ್ಲೆ ಮತ್ತು ಕೊಡಗಿನ ಗಡಿಭಾಗದಲ್ಲಿ ಕಾಣಸಿಗುವ ಈ ಅಪರೂಪದ ಸುಂದರಿಯ ಹೆಸರು ನೀಲಾಕುರಂಜಿ. ಈ ಹೂವಿನ ವೈಶಿಷ್ಟತೆಯ ಬಗ್ಗೆ ಲೇಖಕಿ ಪವಿತ್ರ. ಹೆಚ್.ಆರ್ ಅವರು ಓದುಗರಿಗೆ ಉತ್ತಮ ಮಾಹಿತಿ ನೀಡಿದ್ದಾರೆ. ಸಾಧ್ಯವಾದರೆ ನೀವು ಕೂಡಾ ಈ ಸುಂದರಿಯನ್ನು ನೋಡಿ ಕಣ್ತುಂಬಿಕೊಳ್ಳಿ…
ನಭದಿಂದ ಒಕುಳಿ ಚೆಲ್ಲಿ ನೀಲಾಂಬರಿಯಾಗಿದ್ದಾಳೆ ಧರೆಯಿಂದು ಸ್ವರ್ಗವನ್ನು ನಾಚಿಸುವಂತೆ ಶ್ರಾವಣವನ್ನು ಶೃಂಗಾರಮಯವಾಗಿಸಿ ತನ್ನಡೆಗೆ ಎಲ್ಲರನ್ನೂ ಆಕರ್ಷಿಸುತ್ತಿರವಳು ನೀಲಾಕುರಂಜಿ ಎಂಬ ಅಪರೂಪದ ಸುಂದರಿ.

ಫೋಟೋ ಕೃಪೆ : THE TRAVEL BLOG
ಹೆಚ್ಚಾಗಿ ಪಶ್ಚಿಮ ಘಟ್ಟದ ಪರ್ವತದ ಸಾಲಿನಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಕುರಂಜಿ ನೀಲಾಸುಂದರಿ ಪಶ್ಚಿಮ ಘಟ್ಟದ ನೀಲಗಿರಿ ಪರ್ವತಗಳಿಗೆ ನೀಲಗಿರಿ ಬೆಟ್ಟಗಳು ಎಂದು ಹೆಸರು ಬರಲು ಕಾರಣಕರ್ತಳು ಹೌದು. ಈ ರೀತಿ ಅಪರೂಪಕ್ಕೆ ಅರಳಿದ ಮೊದಲ ಹೂಗಳನ್ನು ದೇವರಿಗೆ ಅರ್ಪಿಸಿ ಪೂಜಿಸಲಾಗುತ್ತದೆ. ನಮ್ಮ ಕರ್ನಾಟಕದಲಿ ಕುಕ್ಕೆ ಸುಬ್ರಮಣ್ಯ ಸ್ವಾಮಿಗೆ ಮೊದಲು ಈ ಹೂಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗೆ ಈ ಹೂಗಳನ್ನು ಮನೆಯಲ್ಲಿ ಇಟ್ಟರೆ ಅದೃಷ್ಟವೆಂದು ಹೇಳುತ್ತಾರೆ ಹಿರಿಯರು.
ಕೇರಳ ರಾಜ್ಯದ ಬೆಟ್ಟದ ಸಾಲಿನಲ್ಲಿ ಹೆಚ್ಚು ಅರಳುವ ಈ ಅಪರೂಪದ ಸುಂದರಿ ನಮ್ಮ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೆಲವು ಬೆಟ್ಟಗಳಲ್ಲಿ, ಹಾಸನ ಜಿಲ್ಲೆ ಮತ್ತು ಕೊಡಗಿನ ಗಡಿಭಾಗದಲ್ಲಿ ಬರುವ ಪುಷ್ಪಗಿರಿ ಬೆಟ್ಟಗಳು, ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಕುಮಾರ ಪರ್ವತ ಪ್ರದೇಶದಲ್ಲಿ ಈ ಸುಂದರಿ ಕಾಣಸಿಗುತ್ತಾಳೇ ಅಪರೂಪಕೆ. 2006 ರಲ್ಲಿ ಕೇರಳ ರಾಜ್ಯದಲ್ಲಿ ಅರಳಿದ್ದರೆ 2018 ರಲ್ಲಿ ಚಿಕ್ಕಮಗಳೂರು ಮತ್ತು ಕುಮಾರ ಪರ್ವತ, ಪುಷ್ಪ ಗಿರಿ ಬೆಟ್ಟದಲ್ಲಿ ಅರಳಿದ್ದಳು.

ಫೋಟೋ ಕೃಪೆ : The Indian express
ಆದರೆ ಈ ಬಾರಿ ಎಲ್ಲರ ಕಣ್ಮನ ಸೆಳೆಯಲೆಂದೆ ಕೊಡುಗು ಜಿಲ್ಲೆಯಲ್ಲಿ ಎಲ್ಲರೂ ಬಹು ಬೇಗ ತಲುಪಿ ನೀಲಾಂಬರಿಯನ್ನು ಮನತುಂಬಿ ಕೊಳ್ಳಲು ಸಾಧ್ಯವಾಗುವಂತಹ ಮಡಿಕೇರಿ ಸಮೀಪದ ಮಾಂದಲ ಪಟ್ಟಿ ಮತ್ತು ಸೋಮವಾರಪೇಟೆ ಸಮೀಪದ ಕೋಟೆ ಬೆಟ್ಟ ಎಂಬ ಸ್ಥಳಗಳ ಬೆಟ್ಟ ಮತ್ತು ಸುತ್ತಮುತ್ತಲಿನ ಬೆಟ್ಟದ ಸಾಲುಗಳನ್ನು ನೀಲಾ ಕುರಂಜಿ ಕಳೆದ ಇಪ್ಪತ್ತು ದಿನಗಳಿಂದ ಅರಳಿ ನೀಲಾಂಬರಿಯಾಗಿಸಿ ತನ್ನತ್ತ ಎಲ್ಲರ ಚಿತ್ತವನ್ನು ಸೆಳೆಯುತ್ತಿದ್ದಾಳೇ.
ನೀಲಾಕುರಂಜಿ ಎಂಬ ಸುಂದರಿಯ ವೈಜ್ಞಾನಿಕ ಸಸ್ಯ ಶಾಸ್ತ್ರೀಯ ಹೆಸರು ಸ್ಟೋಬಲಂಥೆನ್ ಕುಂತಿಯಾನ ಎಂದು ಕೆಲವು ಕಡೆ ಈ ಹೂಗಳನ್ನು ಗುರ್ಗಿ ಹೂ ಎಂದು ಕರೆಯುವುದುಂಟು ಈ ಸಸ್ಯದಲಿ ವಿಶ್ವದಲ್ಲಿ 250 ಜಾತಿಯ ಕುರಂಜಿ ಹೂವುಗಳ ಪ್ರಭೇದವಿದ್ದು ಭಾರತದಲ್ಲಿ 46 ಜಾತಿಯ ಗಿಡ ಮತ್ತು ಹೂವುಗಳು ಕಂಡುಬರುತ್ತವೆ ಇದರಲ್ಲಿ ನೀಲಿ ಅಲ್ಲದೆ ಬಿಳಿ, ಪಿಂಕ್, ಹಳದಿ ಬಣ್ಣದ ಹೂಗಳು ಇದೆ ಎಂದು ಹೇಳಲಾಗುತ್ತಿದೆ. ಈ ಗಿಡಗಳು ಸುಮಾರು 30 ರಿಂದ 60 ಸೆಂಟಿಮೀಟರ್ ಬೆಳೆಯುತ್ತದೆ.ಮತ್ತು ಈ ಗಿಡಗಳು ಹೆಚ್ಚಾಗಿ ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಹೂ ಬಿಡುತ್ತದೆ . ಹೂ ಬಿಟ್ಟ ಸಮಯದಲ್ಲಿ ಇವುಗಳ ಕಾಂಡದಲಿ ಔಷಧಿ ಗುಣವಿದ್ದು ಅದನ್ನು ಹಲವು ಖಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಫೋಟೋ ಕೃಪೆ : unpluggedtv
ಈ ಹೂವುಗಳು ಅರಳುವ ರೀತಿಯಲ್ಲಿ ಹಲವು ಗೊಂದಲಗಳಿದ್ದು ಕೆಲವರು ಐದು, ಏಳು, ಒಂಬತ್ತು, ಹನ್ನೆರಡು ವರ್ಷಗಳಿಗೊಮ್ಮೆ ಅರುಳುತ್ತವೇ ಅನ್ನುತ್ತಾರೆ ಸೋಮವಾರ ಪೇಟೆಯ ಕೋಟೆ ಬೆಟ್ಟದಲ್ಲಿ ಅರಳಿರುವ ಕುರಂಜಿ ಹೂಗಳು ಏಳು ವರ್ಷಕ್ಕೊಮ್ಮೆ ಅರಳುವ ಹೂ, ಮಡಿಕೇರಿಯ ಮಾಂದಲಪಟ್ಟಿಯಲ್ಲಿ ಅರಳಿರುವ ಹೂ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಕುರಂಜಿ ಹೂಗಳು ಎನ್ನುತ್ತಾರೆ… ಆದರೆ ಎರಡು ಬೆಟ್ಟದ ಸಾಲಿನಲಿರುವ ಹೂ ಹಾಗೂ ಸಸ್ಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ, ವೈಜ್ಞಾನಿಕವಾಗಿ ದೃಡಪಟ್ಟಿರುವಂತೆ ಕುರಂಜಿ ಹೂಗಳು ಹನ್ನೆರಡು ವರ್ಷಗಳಿಗೊಮ್ಮೆ ಅರಳಿ ಎರಡು ತಿಂಗಳು ಇದ್ದು ನಂತರ ಗಿಡಗಳು ಸಾಯುತ್ತೆವೆ ಎನ್ನುತ್ತಾರೆ ಚಿಂತಕರು. ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಸಸ್ಯ ಶಾಸ್ತ್ರ ಪಠ್ಯದಲಿ ಮೊದಲ ಪಾಠವು ಈ ಹೂವನ್ನು ಕುರಿತಂತೆ ಇರುವುದು ಇನ್ನೂ ವಿಶೇಷ.
ಎಷ್ಟು ವರ್ಷಗಳಿಗಾದರೂ ಅರಳಲಿ ಅರಳಿದಾಗ ಇವಳ ಸೌಂದರ್ಯವನ್ನು ನೋಡಲು ಮಾತ್ರ ಎರಡು ಕಣ್ಣು ಸಾಲದು ಹಾಗಾಗಿ ಕೋವಿಡ್ ಕೇಸ್ ಜಾಸ್ತಿಯಿರಲಿ,ವಿಕೇಂಡ್ ಕರ್ಪ್ಯೂ ಇರಲಿ ಯಾರು ತಲೆಕೆಡಿಸಿಕೊಳ್ಳದೆ ಪ್ರವಾಸಿಗರ ದಂಡು ಮಾತ್ರ ತಂಡೋಪತಂಡವಾಗಿ ಕೊಡಗಿಗೆ ಆಗಮಿಸುತ್ತಿದ್ದಾರೆ. ಈಗ ಮಳೆಗಾಲವಾಗಿರುವುದರಿಂದ ಕೊಡಗಿನಲಿ ಚಳಿ ಮತ್ತು ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿರುತ್ತದೆ.. ಇದು ಬೆಟ್ಟದ ಸಾಲುಗಳಲ್ಲಿ ಇನ್ನೂ ಹೆಚ್ಚು ಕಾಣುವುದರಿಂದ ಹೂಗಳ ಸೌಂದರ್ಯ ವನ್ನು ಸರಿಯಾಗಿ ಕಣ್ತುಂಬಿಕೊಳ್ಳಲು ಆಗುವುದಿಲ್ಲ ಹಾಗಾಗಿ ಹೂಗಳನ್ನು ಮತ್ತು ಬೆಟ್ಟದ ಸಾಲುಗಳ ಸೌಂದರ್ಯ ಸವಿಬೇಕೆಂದರೆ ಬೆಳಿಗ್ಗೆ 11 ಘಂಟೆಯಿಂದ ಮಧ್ಯಾಹ್ನದ 3 ಗಂಟೆಯಷ್ಟರಲ್ಲಿ ಹೋಗಬೇಕು ಆಗ ಮಾತ್ರ ನೀಲಾಂಬರೀ ಜೊತೆಗೆ ಚಂದದ ಸೆಲ್ಫಿ, ಫೋಟೋ ಕ್ಲಿಕ್ ಸಿಕೊಳ್ಳಲು ಸಾಧ್ಯ, ಇಲ್ಲದಿದ್ದರೆ ಮಂಜಿನ ವಾತಾವರಣ ತಿಳಿಯಾಗುವರೆಗೂ ಕಾಯಬೇಕು, ಹಾಗೆ ಮಂಜು ಸುರಿಯುವುದಿರಿಂದ ಚಳಿಯು ಹೆಚ್ಚಾಗುತ್ತದೆ.
ಕೋಟೆ ಬೆಟ್ಟಕ್ಕೆ ಹೋಗುವ ಮಾರ್ಗ :-
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೋಮವಾರ ಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿ ಗರ್ವಾಲೆ ಹೋದ್ರೆ ಗರ್ವಾಲೆ ಗ್ರಾಮದ ಕೋಟೆ ಬೆಟ್ಟದಲ್ಲಿ ಈ ಹೂ ಅರಳಿದೆ. ಅಲ್ಲಿ ಎಷ್ಟು ಬೆಟ್ಟಗಳಿವೆಯೂ ಅಷ್ಟರಲ್ಲೂ ಹೂ ಇದೆ. ಹಾಗೆ ಅಲ್ಲಿಯ ಬೆಟ್ಟದಲ್ಲಿನ ಸ್ವಲ್ಪ ದೊರದಲ್ಲಿ ಒಂದು ವಾಟರ್ ಪಾಲ್ಸ್ ಮತ್ತು ಶಾಂತಳ್ಳಿ ಮಾರ್ಗದಿಂದ ಸುರ್ಲಬ್ಬಿ ಮೂಲಕ ಗರ್ವಾಲೆಗೆ ಹೋಗುವ ದಾರಿಯಲ್ಲಿ ಒಂದು ವಾಟರ್ ಫಾಲ್ಸ್ ಸಿಗುತ್ತದೆ,ಇದಕ್ಕೆ ಸೋಮವಾರ ಪೇಟೆಯಿಂದ ತಾಕೇರಿ ಎಂಬ ಗ್ರಾಮದ ಮಾರ್ಗವಾಗಿಯು ಹೋಗಬಹುದು. ಎರಡು ಮಾರ್ಗಗಳಲ್ಲಿ ಹೋದ್ರು.ಕಾರಗಳು ಬೆಟ್ಟದ ತುದಿಯವರೆಗೂ ಹೋಗುತ್ತವೆ.

ಫೋಟೋ ಕೃಪೆ : kodavaclan (ಕೋಟೆ ಬೆಟ್ಟ)
ಮಾಂದಲ ಪಟ್ಟಿಗೆ ಹೋಗುವ ಮಾರ್ಗ :-
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಡಿಕೇರಿ ಸಮೀಪದ ಮಾಂದಲಪಟ್ಟಿ ಎಂಬಲ್ಲಿ ಈ ಹೂಗಳು ಆರಳಿವೆ… ಆದ್ರೆ ಇದಕ್ಕೆ ಅರ್ಧ ದಾರಿವರೆಗೂ ಕಾರಿನಲ್ಲಿ ಹೋಗಿ ಆಮೇಲೆ ಅಲ್ಲಿಂದ ಜೀಪ್, ಅಥವಾ ಪಿಕ್ ಆಪ್ ಮಾಡಿ ಕೊಂಡು ಬೆಟ್ಟಕ್ಕೆ ಹೋಗ್ಬೇಕು.. ಇದು ಸ್ವಲ್ಪ ರಿಸ್ಕಿ. ಆದ್ರೆ ನೋಡಲು ತುಂಬಾ ಚನ್ನಾಗಿದೆ. ಕನ್ನಡದ ಗಾಳಿಪಟ ಸಿನಿಮಾದಲ್ಲಿ ಮುಗಿಲಪೇಟೆ ಎಂಬ ಹೆಸರಿನಲ್ಲಿ ಈ ಬೆಟ್ಟವನ್ನು ತೋರಿಸಿದ್ದಾರೆ ನೋಡಿ ಅದೆ ಬೆಟ್ಟ ಮಾಂದಲಪಟ್ಟಿ. ಈ ಬೆಟ್ಟಕ್ಕೆ ಮಾದಪುರದ ಹಟ್ಟಿಹೊಳೆಯ ಮುಖಾಂತರರವು ಹೋಗಬಹುದು..ಈ ಮಾರ್ಗದಲ್ಲಿ ರಸ್ತೆ ಸಧ್ಯದ ಪರಿಸ್ಥಿತಿಯಲ್ಲಿ ಹೇಗಿದೆ ಎಂಬುದರ ಬಗ್ಗೆ ನನಗೆ ಸರಿಯಾಗಿ ಈಗ ಮಾಹಿತಿ ಇಲ್ಲ.

ಫೋಟೋ ಕೃಪೆ : thrillophilia ಮಾಂದಲ ಪಟ್ಟಿ
ನಾವು ಕೋಟೆ ಬೆಟ್ಟದ ಕುರಂಜಿ ಹೂಗಳನ್ನು ನೋಡಲು ಹೋಗಿದ್ದರಿಂದ ರಸ್ತೆ ಪರಿಚಯ ಚನ್ನಾಗಿದೆ. ಸೋಮವಾರಪೇಟೆಯಿಂದ ಕೋಟೆ ಬೆಟ್ಟಕ್ಕೆ ಹೋಗುವ ರಸ್ತೆ ಸಂಪೂರ್ಣ ಟಾರು ರಸ್ತೆಯಾಗಿದ್ದು ಬೆಟ್ಟದ ತುದಿಯವರೆಗೂ ಕಾರಿನಲ್ಲಿ ತಲಪುಬಹುದು.
ಕೋಟೆ ಬೆಟ್ಟದ ಮತ್ತೊಂದು ವಿಶೇಷತೆ ನನ್ನ ಗಮನಕ್ಕೆ ಬಂದಿದ್ದು ಇಲ್ಲಿ ರಾಶಿ ರಾಶಿ ನೀಲಿ ಕುರಂಜಿ ಹೂಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಎನ್ನುವ ಹಾಗೆ ಅಪರೂಪದಲಿ ಅಪರೂಪವಾಗಿ ಅತಿವೀರಳವಾದ ಶುದ್ಧ ಬಿಳಿ ಬಣ್ಣದ ಕುರಂಜಿ ಹೂಗಳು ಕಾಣ ಸಿಗುತ್ತದೆ.. ನಾನು ಗುಂಪ್ಪಾಗಿ ಬೆಳೆದಿದ್ದ ಒಂದೇ ಗಿಡವನ್ನಷ್ಟೆ ನೋಡಿದ್ದು. ಉಳಿದಂತೆ ಸಣ್ಣ ಸಣ್ಣ ಕಡಿಗಳ ರೀತಿಯ ಅತಿವಿರಳವಾಗಿ ಒಂದೇರಡು ಕಡೆ ಮಾತ್ರ ಇದ್ದವು. ಈ ಬೆಟ್ಟಕ್ಕೆ ಹೋದ ಬಹುತೇಕ ಮಂದಿ ಈ ಬಿಳಿ ಕುರಂಜಿ ಹೂಗಳನ್ನು ನೋಡಿರುವುದಕೆ ಸಾಧ್ಯವಿಲ್ಲ ಅನಿಸುತ್ತೆ. ಬಹುಶಃ ಪ್ರಕೃತಿ ಸೌಂದರ್ಯ ಮನಸಾರೆ ಆಸ್ಪಾದಿಸುವರಿಗಷ್ಟೆ ವಿರಳಾತೀತಾವಾದ ಸಸ್ಯ ಸಂಪತ್ತು ಕಾಣಸಿಗುತ್ತವೆ ಅನ್ನುವುದು ನನ್ನ ನಂಬಿಕೆ.
ಯಾರೇ ಹೋದರು ಬಿಳಿ ಕುರಂಜಿಯನ್ನು ಹುಡುಕಿ ನೋಡಿ ಬನ್ನಿ ಏಕೆಂದರೆ ರಾಶಿ ನೀಲಾಕುರಂಜಿ ಮಧ್ಯೆ ಶ್ವೇತಾಂಬರಿಯ ಅಷ್ಟು ಸುಲಭವಾಗಿ ಕಣ್ಣಿಗೆ ಕಾಣೋಲ್ಲಾ!! ನನಗೆ ಗೊತ್ತಿರುವ ಹಾಗೆ ನೀಲಾಕುರಂಜಿ ಎಲ್ಲ ಕಡೆ ಇದೆ , ಬಿಳಿ ಕುರಂಜಿ ಮಾತ್ರ ನಾನು ಮೊದಲ ಬಾರಿನೋಡಿದ್ದು ಮತ್ತು ಅದರ ಬಗ್ಗೆ ತಿಳಿದಿದ್ದು.
- ಪವಿತ್ರ. ಹೆಚ್.ಆರ್ ( ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ )
