‘ಅಶ್ವಾರಾಧನೆ’ ಪುಸ್ತಕ ಪರಿಚಯ – ಡಾ. ಸಂಗಮೇಶ ತಮ್ಮನಗೌಡ್ರ



ಡಾ. ಕಲ್ಲಯ್ಯ ಎಸ್. ಹಿರೇಮಠ ಅವರು ಹಾಲಕೆರೆ ಸಂಸ್ಥಾನಮಠದ ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಕಲ್ಲಯ್ಯ ಶಿವಯ್ಯ ಹಿರೇಮಠ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಶೋಧನಾ ಸಂಬಂಧಿತ ಮೌಲ್ಯಯುತ ಹಲವಾರು ಕೃತಿಗಳನ್ನು ರಚಿಸಿದ್ದು, 2010ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಡಾ. ಕಲ್ಲಯ್ಯ ಹಿರೇಮಠ ವಿರಚಿತ ‘ಅಶ್ವಾರಾಧನೆ’ಯು ಸಾಂಸ್ಕೃತಿಕ ಚಿಂತನೆಯ ವಿಶಿಷ್ಠ ಕೃತಿಯಾಗಿದೆ.

ಲೇಖಕರು : ಡಾ. ಕಲ್ಲಯ್ಯ ಹಿರೇಮಠರ

ಸಾಂಸ್ಕೃತಿಕ ಚಿಂತನ ಕೃತಿ : ಅಶ್ವಾರಾಧನೆ

ಗ್ರಂಥ ಚಿಂತನ : ಡಾ. ಸಂಗಮೇಶ ತಮ್ಮನಗೌಡ್ರ, ಶಿಕ್ಷಕ ಸಾಹಿತಿಗಳು.

ಮಾನವ ಸಂಸ್ಕøತಿಯಲ್ಲಿ ಆರಾಧನಾ ಪದ್ಧತಿ :

‘ಆರಾಧನೆ’ ಎಂದರೆ ಪೂಜಿಸುವುದು ಎಂದರ್ಥ. ಪೂಜ್ಯ ಭಾವನೆಯಿಂದ ಸನ್ನಡತೆಯ ಬದುಕು ಕಳೆಯಲು ಆರಾಧನಾ ಪದ್ಧತಿಯು ಜಾರಿಗೆ ಬಂದಿತು. ಶಿವನ ವಾಹನ ‘ನಂದಿ’ ಇಂದ್ರನ ವಾಹನ ‘ಆನೆ’ ಗಣೇಶನ ವಾಹನ ‘ಇಲಿ’ ಸರಸ್ವತಿ ವಾಹನ ‘ನವಿಲು’ ದುರ್ಗಾ-ಕಾಳಿಕಾ ದೇವಿಯ ವಾಹನವು ‘ಸಿಂಹ’ ಇರುವ ಹಾಗೆ, ಮೈಲಾರಲಿಂಗ-ಬೀರಲಿಂಗೇಶ್ವರನ ವಾಹನ ಕುದುರೆ ಆಗಿದೆ. ಈ ವಾಹನ ಆಧಾರಿತ ಪ್ರಾಣಿ ಪಕ್ಷಿಗಳೆಲ್ಲವನ್ನೂ ದೇವರೆಂದು ಪೂಜಿಸುತ್ತಾ ಬಂದಿದ್ದಾರೆ.

ಕೆಲ ಪ್ರಾಣಿಗಳ ಕುರಿತು ಅಪಾರ ಪ್ರೀತಿ ಮತ್ತು ಭಕ್ತಿ :

ಶಿಲಾಯುಗದಿಂದ ಹಿಡಿದು ಇಂದಿನ ಕಾಲದತನಕವೂ ಮಾನವನಿಗೆ ನಿತ್ಯವೂ ಉಪಯೋಗಿಸುವ ಪ್ರಾಣಿಗಳ ಕುರಿತು ಅಪಾರವಾದ ಭಕ್ತಿ-ಪ್ರೀತಿ ಮತ್ತು ಗೌರವ ಭಾವನೆ ಇರುವುದನ್ನು ನಾವು ಕಾಣುತ್ತೇವೆ. ನಾಯಿಯು ಅತ್ಯಂತ ನಂಬಿಗಸ್ಥ ಪ್ರಾಣಿಯೆಂದೆನಿಸಿದರೆ, ಅದನ್ನು ಬಿಟ್ಟರೆ ಕುದುರೆಗೆ ಎರಡನೆಯ ಪ್ರಾಶಸ್ತ್ಯ ಕೊಡಲಾಗಿದೆ. ಯುದ್ಧ ಸಂದರ್ಭದಲ್ಲಿ ಕುದುರೆಗೆ ಹೆಚ್ಚಿನ ಮಹತ್ವ ಕೊಡುವರು. ಕುದುರೆಯ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ, ಕ್ರಿ.ಪೂ. 4000 ವರ್ಷಗಳಷ್ಟು ಹಿಂದಿನ ಕಡತಗಳ ಮೊರೆ ಹೋಗಬೇಕಾಗುತ್ತದೆ. ಹರಪ್ಪ ಮತ್ತು ಮೆಹಂಜೋದಾರೋ ಸಂಸ್ಕøತಿಯಲ್ಲಿ ಕುದುರೆಯ ಅವಶೇಷಗಳು ಮತ್ತು ಎಲುಬುಗಳು ದೊರೆತಿರುವುದರಿಂದ ಆರ್ಯ ಪೂರ್ವಯುಗದ ಭಾರತೀಯರಿಗೆ ಕುದುರೆಯ ಬಗ್ಗೆ ಮಾಹಿತಿ ಇತ್ತು ಎಂಬ ಅಂಶ ಸ್ಪಷ್ಟವಾಗುತ್ತದೆ ಎಂಬ ಚಿಂತನಶೀಲ ವಿಚಾರವನ್ನು ಡಾ. ಕಲ್ಲಯ್ಯ ಹಿರೇಮಠ ಅವರು ಈ ಕೃತಿಯಲ್ಲಿ ವ್ಯಕ್ತಪಡಿಸುತ್ತಾರೆ.

ಇತಿಹಾಸಕಾರ ಮೆಗಾಸ್ತನೀಸ್‍ನ ವಿಚಾರದಂತೆ ಕುದುರೆಯ ಬಳಕೆಯ ನಿಜ ಅಸ್ತಿತ್ವ :

ವೇದದ ಹೇಳಿಕೆಯಲ್ಲಿ “ಓ, ದೇವಮಾನವಾದಿಗಳೆಲ್ಲರ ವೀರನೇ ನೀನು ಯಾರು, ನಿನ್ನ ಕುದುರೆಗಳಲ್ಲಿ ಲಗಾಮೆಲ್ಲಿ, ನೀನು ಬಲಶಾಲಿಯಾದುದು ಹೇಗೆ ?” ಎಂದು ಮರುತರನನ್ನು ಕುರಿತು ಬರುವ ಈ ಉಲ್ಲೇಕದಲಲಿ ಕುದುರೆಗಳನ್ನು ಯುದ್ಧದಲ್ಲಿ ಬಳಸುತ್ತಿದ್ದರು ಎಂಬ ವಿಷಯವನ್ನು ಪ್ರಸ್ತಾಪಿಸುತ್ತಾನೆ. ಹೀಗಾಗಿ ಕುದುರೆ ಸಂಸ್ಕøತಿ ಜೊತೆಗೆ ಜಾಗತಿಕ ಮನ್ನಣೆ ದೊರೆತಿದೆ.

ಅಶ್ವ’ ಪದದ ನಾಮ ನಿಷ್ಪತ್ತಿ ರೂಪಾಂತರಗೊಂಡುದು :

‘ಅಶ’ ಎಂಬ ಪದವು ಸಂಸ್ಕøತ ಜನ್ಯವಾಗಿದ್ದು ಕನ್ನಡದಲ್ಲಿ ಶಾಸ್ತ್ರಗಳು ರಚನೆಯಾದ ಸಂದರ್ಭದಲ್ಲಿ ಸಂಸ್ಕøತದಿಂದ ರಚನೆಯಾದ ಶಾಸ್ತ್ರಕೃತಿಗಳನ್ನು ಕನ್ನಡಿಗರು ಎರವಲಾಗಿ ಪಡೆದುಕೊಂಡ ಕಾರಣ ‘ಅಶ್ವ’ ಎಂಬ ಪದ ಬಂದಿತು. ಕನ್ನಡದ ಶಾಸ್ತ್ರಕಾರರು ‘ಅಶ್ವ’ ಪದವನ್ನು ಸಡಿಲಗೊಳಿಸಿ, ಕುದುರೆ, ಹಯ, ತೇಜ, ತುರಗ ಮುಂತಾದ ಹೆಸರುಗಳಿಂದ ಕರೆಯುತ್ತ ಬಂದಿದ್ದಾರೆ.

ಸಾಧಕರಿಗೆ ಆರತಿ ಬೆಳಗುವ ನಿರಾಜನಾರಾಧನೆ :

ಮನೆಯಲ್ಲಿ, ದೇವಸ್ಥಾನಗಳಲ್ಲಿ ದೇವರ ಮುಂದೆ ಎತ್ತುವ ಆರತಿಗೆ ಸಂಸ್ಕøತದಲ್ಲಿ ‘ನಿರಾಜನ’ ಎನ್ನುವರು. ನವ ವಧುವರರಿಗೆ, ವಿಜಯಯಾತ್ರೆಗೆ ಹೊರಡುವ ಯೋಧರಿಗೆ ಯುದ್ಧದಲ್ಲಿ ಜಯಶೀಲರಾದ ರಾಜರಿಗೆ, ಸಾಮಂತರಿಗೆ, ಸೈನಿಕರಿಗೆ, ವಿಶೇಷ ಸಾಧನೆಗೈದವರಿಗೆ ದೀಪದ ಆರತಿ ಬೆಳಗುತ್ತಿದ್ದರು. ಇಂದಿಗೂ ಈ ಪದ್ಧತಿಯು ಚಾಲ್ತಿಯಲ್ಲಿದೆ. ಸಾರ್ವಭೌಮತ್ವದ ಗುರುತುಗಳಾದ ಪಟ್ಟದ ಕುದುರೆಗಳು, ಆನೆಗಳು ಮತ್ತು ಆಯುಧಗಳಿಗೂ ದೀಪದಾರತಿಯ ವಿಶೇಷ ಪೂಜೆ ಬಳಕೆಯಲ್ಲಿತ್ತು. ಕಾಶ್ಮೀರದಲ್ಲಿ ಈ ಪದ್ಧತಿ ಬಳಕೆಯಲ್ಲಿದೆ. ಕಾಳಿದಾಸನ ‘ರಘುವಂಶ’ ಕೃತಿಯಲ್ಲಿ ರಘುಮಹಾರಾಜ ದಿಗ್ವಿಜಯಕ್ಕೆ ಹೊರಟಾಗ, ನೀರಾಜನ ವಿಧಿಯಿಂದ ಕುದುರೆಗಳನ್ನು ಪೂಜಿಸುತ್ತಾ ಅಗ್ನಿಯಲ್ಲಿ ಹವಿಸ್ಸನ್ನು ಅರ್ಪಿಸುತ್ತಾರೆ ಎಂದು ಲೇಖಕರು ಈ ಗ್ರಂಥದಲ್ಲಿ ವಿವರಿಸುತ್ತಾರೆ.



ಯೋಗಶಾಲೆಯಲ್ಲಿ ಪಟ್ಟದ ಕುದುರೆಯನ್ನು ಪೂಜಿಸುವ ವೈಖರಿ :

ರಾಜಧಾನಿಯ ಈಶಾನ್ಯ ಭಾಗದಲ್ಲಿ ಹಲಸು, ದೇವದಾರು ಮುಂತಾದ ಮರಗಳಿಂದ ಹದಿನಾರು ಮೊಳ ಎತ್ತರ, ಹತ್ತು ಮೊಳ ತೋರಣ ಕಮಾನುಗಳನ್ನು ಕಟ್ಟಿದ ಮಂಟಪವನ್ನು ನಿರ್ಮಿಸುತ್ತಾರೆ. ಸಾಮಾನ್ಯವಾಗಿ ಮೂರು ಕಮಾನುಗಳುಳ್ಳ ಪ್ರವೇಶದ್ವಾರಗಳು ಇರುತ್ತವೆ. ಅಲ್ಲೊಂದು ಶಾಂತಿಸದ್ಯ, ಯೋಗಶಾಲೆ ನಿರ್ಮಿಸಬೇಕು. ಅದನ್ನು ಸಾಲವೃಕ್ಷ, ಔದುಂಬರ, ಅರ್ಜುನ ಮರಗಳಿಂದಲೂ ಕುಶಹುಲ್ಲಿನಿಂದ ನಿರ್ಮಿಸಿ, ಯೋಗಶಾಲೆಗೆ ಬಿದುರಿನ ಬಾಗಿಲು, ಮತ್ಸ್ಯ, ಧ್ವಜ ಮತ್ತು ಚಕ್ರಗಳಿಂದ ಅಲಂಕಾರಗೊಳಿಸಬೇಕು. ಸೂರ್ಯನು ಚಿತ್ತಾನಕ್ಷತ್ರಕ್ಕೆ ಪ್ರವೇಶಿಸಿದ ದಿನದಿಂದ ಅವನು ಸ್ವಾತಿ ನಕ್ಷತ್ರಕ್ಕೆ ಹೋಗುವವರೆಗೆ ಈ ವೃತವನ್ನು ನಡೆಸುತ್ತಾರೆ. ಏಳು ದಿನಗಳ ಕಾಲ ಮಂತ್ರಗಳಿಂದ ಕುದುರೆಗಳನ್ನು ಈ ಪೂಜಾ ಗೃಹದಲ್ಲಿ ಪೂಜಿಸಿ ಶಾಂತಿ ಮಾಡಿಸಬೇಕು. ಎಂಟನೆಯ ದಿನ ಬೆಳಗಾದಾಗ ಒಂದು ಕುಟೀರವನ್ನು ಮರದ ತೊಗಟೆಗಳಿಂದ ಮತ್ತು ಹುಲ್ಲಿನಿಂದ ಮಂಟಪದ ದಕ್ಷಿಣ ಭಾಗದಲ್ಲಿ ಉತ್ತರಾಭಿಮುಖವಾಗಿ ನಿರ್ಮಿಸಬೇಕು.

ಅಶ್ವವೇದ್ಯ ಮತ್ತು ದೈವಜ್ಞ ಅವರೊಂದಿಗೆ ಹುಲಿಯ ಚರ್ಮದ ಮೇಲೆ ಪೂರ್ವಾಭಿಮುಖವಾಗಿ ಯಜ್ಞಕುಂಡದ ಎದುರು ರಾಜನು ಕುಳಿತುಕೊಳ್ಳಬೇಕು.

ಮಂತ್ರಪೂರ್ವಕವಾಗಿ ಹೋಮ ನಡೆಸಬೇಕು. ಈಗ ವಾದ್ಯಗಳು ಮೊಳಗುತ್ತಿರಲು ಪಟ್ಟದ ಕುದುರೆಯನ್ನು ಮತ್ತು ಪಟ್ಟದ ಆನೆಯನ್ನು ಅಲಂಕರಿಸಿ ಮೆಲ್ಲಮೆಲ್ಲನೆ ಆ ಶಾಂತಿಗೃಹದ ಕುಟೀರಕ್ಕೆ ಕರೆತರಬೇಕು ಪಟ್ಟದ ಕುದುರೆಗೆ ಮಂತ್ರಪೂರ್ವಕವಾಗಿ ನೈವೇದ್ಯದ ಅನ್ನವನ್ನು ರಾಜಪುರೋಹಿತರು ಸಮರ್ಪಿಸಬೇಕು. ಔದುಂಬರ ವೃಕ್ಷ ಶಾಖೆಯನ್ನು ಶುದ್ದೋದಕದಲ್ಲಿ ಅದ್ದಿ ಕುದುರೆಗಳ ಮತ್ತು ಆನೆಗಳ ಮೇಲೆ ಸಿಂಪಡಿಸುತಾ ಪುರೋಹಿತರು ವೇದಘೋಷ ಮಾಡಬೇಕು. ಸೂರ್ಯನು ಸ್ವಾತಿ ನಕ್ಷತ್ರ ಬಿಟ್ಟು ವಿಶಾಖಾ ನಕ್ಷತ್ರಕ್ಕೆ ಪ್ರವೇಶಸಿದ ದಿನ ವಿಶೇಷಪೂಜೆ ನಡೆಯುತಿತ್ತು.

ಅಭಿನವಚಂದ್ರನ ಅಶ್ವಶಾಸ್ತ್ರ ಕೃತಿಯಲ್ಲಿ ‘ನೀರಾಜನವಿಧಿ’ ಕುರಿತು ವ್ಯಕ್ತಗೊಂಡ ವಿಚಾರ :

ಶತ್ರುಕುಲವನ್ನು ಸಂಹಾರ ಮಾಡುವ ಉದ್ದೇಶದಿಂದಲೂ ಆ ಮೂಲಕ ಮೇಲೆದ್ದು ಬರಲಿರುವ ಜಯವಧುವನ್ನು ಕೈಹಿಡಿಯುವ ಸಲುವಾಗಿ ಈ ನೀರಾಜನ ವಿಧಿಯನ್ನು ಸಾಂಗೋಪ ಸಾಂಗವಾಗಿ ಆಚರಿಸತಕ್ಕದ್ದು ಎಂದು ವಿವರಣೆ ಕೊಡುತ್ತಾನೆ. ಇಲ್ಲಿ ಅಶ್ವೀಜ ಶುದ್ಧ ಬಿದಿಗೆಯ ದಿನ ಅಶ್ವಾನೀಕಕ್ಕೆ ರಕ್ಷೆ ಇಡುವ ಉದ್ದೇಶದಿಂದ ಉತ್ಸಾಹದಿಂದ ಮಹಾಮಂಗಲಕರನಾದ ಈ ನೀರಾಜನ ವಿಧಿಯನ್ನು ನೆರವೇರಿಸುತ್ತಿದ್ದು, ಪಟ್ಟದ ಕುದುರೆಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರವನ್ನು ಕವಿ ಇಲ್ಲಿ ವರ್ಣಿಸುತ್ತಾನೆ. ಅದರ ಜೊತೆ ಯುವರಾಜ ಕುದುರೆ, ಸೇನಾಧಿಪತಿ ಕುದುರೆ, ಅಮಾತ್ಯ ಕುದುರೆ ಇವುಗಳನ್ನೆಲ್ಲಾ ಈ ದಿನ ವಿಧಿವತ್ತಾಗಿ ಪೂಜಿಸುತ್ತಿದ್ದರು. ಬೆಲ್ಲ, ಭತ್ತ, ಅಕ್ಕಿ, ಕಲಶ, ಕರುಕೆ, ದಧಿ, ಪುಷ್ಪರಿ, ದೀಪ, ಎಸೆನ ರಂಗವಲಿ, ಎಲಿ ಅಡಕೆ ಮುಂತಾದ ಪ್ರಸಿದ್ಧ ಪೂಜಾದ್ರವ್ಯಗಳನ್ನು ಅಲ್ಲಿ ಬಳಸುತ್ತಿದ್ದರು. ಕೊಡೆ ಮಂಗಲಗೀತ, ವಾದ್ಯ ಪಟಹ, ಹೇವiಚಾಮರ, ಗಣಿಕಾವ್ರಾತ, ಸುಭಟ, ಸುಸಂಪಾತ, ಕಹಳಾರವ – ಈ ಎಲ್ಲಾ ವಸ್ತುಗಳ ಜೊತೆಗೆ ಕೋಲಾಹಲದೊಂದಿಗೆ

ಮಹಾನವಮಿಯವರೆಗೆ ಕುದುರೆಗಳನ್ನು ಸ್ನಾನ ಮಾಡಿಸುತ್ತಿದ್ದರು. ಅದಕ್ಕಾಗಿ, ತೊರೆ, ಸಮುದ್ರ, ಪೆರ್ಗೆರೆ, ತಾವರೆಗೊಳ ಮುಂತಾದ ಕಡೆಗಳಿಂದ ನೀರನ್ನು ತರುತ್ತಿದ್ದರು. ಕುದುರೆಗಳ ಮೇಲೆ ಇದ್ದ ಮಣ್ಣಿನ ಕೊಳೆಯನ್ನು ತೊಳೆದು ಆ ಮೇಲೆ ಪಂಚಗವ್ಯಗಳನ್ನು ತೊಳೆಯುತ್ತಿದ್ದರು.

ಕುದುರೆಗೆ ಸ್ನಾನ ಪೂಜಾಧಿ ಅಲಂಕಾರ ವೈಭವ :

ದೇವತಾ ಪ್ರತಿಷ್ಠಾಪನೆಯ ಮುನ್ನ ಪುಷ್ಪಾಧಿವಾಸ ಫಲಾಧಿವಾಸ, ರತ್ನಾಧಿವಾಸ, ಧ್ಯಾನಾಧಿವಾಸ, ಜಲಾಧಿವಾಸ ಎಂಬ ಕ್ರಮವಿದೆ. ಆಯಾ ವಸ್ತುಗಳಲ್ಲಿ ಈ ದೇವತಾ ವಿಗ್ರಹಗಳನ್ನು ಒಂದು ರಾರಿ ಅವಧಿಯವರೆಗೆ ಮುಳುಗಿಸಿ ಇಟ್ಟು, ಮರುದಿನ ಅದನ್ನು ತೆಗೆದು ಶುದ್ಧಿಗೊಳಿಸುವ ಕ್ರಮವಿದೆ. ಒಂದು ನೀರಿನ ತೊಟ್ಟಿಯಲ್ಲಿ ಕೆಲಕಾಲ ಕುತ್ತಿಗೆಯ ಮಟ್ಟದವರೆಗೆ ಮುಳುಗಿಸಿ, ಎಬ್ಬಿಸಿ, ಹೊರಗೆ ತರುವ ಜಲವಾಸದ ಅರ್ಚನೆಯನ್ನು ಈ ವಿಧಿಯಲ್ಲಿ ಮಾಡುತ್ತಿದ್ದರು. ನಂತರ ಈ ವಾಜಿಗೆ ಕುಂಕುಮ, ಅರಿಶಿನ, ಗಂಧ ಮುಂತಾದವುಗಳಿಂದ ಪೂಜಿಸುತ್ತಿದ್ದರು. ಈಗ ರತ್ನಾವಳಿಯಿಂದ ಕೂಡಿದ ಕಳಶದ ತೋವಾಲನ್ನು ಕುದುರೆ ಮಸ್ತಕದಲ್ಲಿ ಧರಿಸುತ್ತಿತ್ತು. ಮೇಖಲೆ (ಒಂದು ಡಾಬು) ಮಣಿಸರ, ರೇಷ್ಮೆಬಟ್ಟೆ, ರಕ್ಷೆ ಮುಂತಾದವುಗಳಿಂದ ಕೊರಳನ್ನು ಅಲಂಕರಿಸುತ್ತಿದ್ದರು ಹಣೆಯ ಮೇಲೆ ಪಟ್ಟದ ಕುದುರೆಯ ಲಾಂಛನವನ್ನು ಕಟ್ಟುತ್ತಿದ್ದರು ಎಂದು ಲೇಖಕರಾದ ಡಾ. ಕಲ್ಲಯ್ಯ ಹಿರೇಮಠ ಅವರು ಅಶ್ವಾರಾಧನೆ ಕುರಿತು ಸತ್ತ್ವಪೂರಿತ ಅಧ್ಯಯನ ಬಲದಿಂದಲೇ ವಿವರಿಸುತ್ತಾರೆ.

ಪಟ್ಟದ ಕುದುರೆಯ ಸ್ವರ್ಗವೈಭವ :

ಕುದುರೆಗೆ ಕೆಟ್ಟ ದೃಷ್ಟಿಗಳಕೆಡುಕು ಆಗದಿರಲಿ ಎಂಂದು ಒಂದು ಸೀರೆಯಲ್ಲಿ ಅರಿಶಿನ, ಉತ್ತರಣೆ (ಅಪಾ ಮಾರ್ಗ) ಬಿಳಿ ಸಾಸುವೆ, ಗಜ್ಜುಗ, ಇಂಗು, ಆಮರ್ದುವಳ್ಳೀ, ಬೇವು ಲೋದ್ರ, ಬಾಗೆ (ಸಿರಸ) ಬಜೆ, ಗಗ್ಗುಳ, ಹಿಪ್ಪೆ, ಕಕ್ಕೆ, ರಾಜವೃಕ್ಷ, ಸರಳ ಗೋರೋಜನಗಳನ್ನು ಕಟ್ಟಿ ಆ ಸೀರೆಯ ಪಟ್ಟಣವನ್ನು ಕುದುರೆಯ ಕೊರಳಿಗೆ ಕಟ್ಟುತ್ತಿದ್ದರು.

ದೇವಸ್ಥಾನದ ಮಣ್ಣು, ಮದಗಜಗಳ ಕೋಡದ ಮಣ್ಣು, ಹುತ್ತದ ಮಣ್ಣು ಮತ್ತು ಅರಮನೆಯ ಮಣ್ಣು ಈ ಮೃತ್ತಿಕೆಗಳನ್ನು ಕುದುರೆಯ ಹೃದಯ ಭಾಗಕ್ಕೆ ಹಚ್ಚುತ್ತಿದ್ದರು. ವಿಶಾಲವಾದ ಈ ಅಶ್ವಶಾಲೆಯ ಮಂಟಪವನ್ನು ರಂಗವಲ್ಲಿ ತೋರಣ, ಬಾವು, ತಮಟೆ, ವೇಧಘೋಷ, ಶೇಷಾಕ್ಷತೆ, ಪುಷ್ಪ, ಗಂಧ, ದೀಪ, ಧೂಪ ಮುಂತಾದವುಗಳಿಂದ ಅಲಂಕರಿಸುತ್ತಿದ್ದರು. ಅಲ್ಲಿ ಹೋಮ ಮಾಡಿಸಿ ಪರೋಹಿತರಿಗೆ ದಕ್ಷಿಣೆಕೊಟ್ಟು ಮುಂಬರುವ ಸಂಗ್ರಾಮ ವಿಜಯಯಾತ್ರೆಗೆ ನೆರೆದ ಎಲ್ಲ ಜನರಿಂದ ಹಾರೈಕೆಗಳನ್ನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತಿದ್ದರು.

ವಿಶಿಷ್ಟ ಸಂಪ್ರದಾಯ ಹೊತ್ತ ತೇಜಮ್ಮನ ಆರಾಧನೆ :

ಬಳ್ಳಾರಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಕುದುರೆ ಕುಣಿತದ ಜೊತೆಜೊತೆಗೆ ತೇಜಮ್ಮನ ಆರಾಧನೆ ಮಾಡುವ ಪದ್ಧತಿ ಪ್ರಾಚೀನ ಹೆಚ್ಚು ಜನಜನಿತವಾಗಿರುವುದನ್ನು ಕಾಣುತ್ತೇವೆ. ಕುದುರೆ ಮನೆಮನೆಗೆ ಬಂದಾಗ ಪೂಜೆ ಮಾಡುತ್ತಾರೆ. ಕೊಗಳಿನಾಡಿನ ಕೊಗಳಿ, ಅಂಬಳಿ ಕೊಟ್ಟರು. ಚಿಮ್ಮನಹಳ್ಳಿಯಲ್ಲಿ ಕುದುರೆಯು ಮನೆಗೆ ಬಂದಾಗ ಊರಲ್ಲಿ ಸಂಭ್ರಮ ಸಡಗರದಿಂದ ದೇವಿ ಬಂದಳು ಎಂದು ಪೂಜಿಸುವುದರ ಜೊತೆಗೆ ಕಪ್ಪಕಾಣಿಕೆಯನ್ನು ಕೊಡುವ ಪದ್ಧತಿಯಿದ್ದು, ಅಕಳನ್ನು ಗೋಮಾತೆಯೆಂದು ಪೂಜಿಸುವುದನ್ನು ಬಿಟ್ಟರೆ, ನಂತರದ ಸ್ಥಾನ ಆನೆ ಮತ್ತು ಕುದುರೆಗಳಿಗೆ ಸಿಗುತ್ತದೆ. ಪ್ರತಿಯೊಂದು ಪ್ರಾಣಿಯನ್ನು ಒಬ್ಬೊಬ್ಬರು ಅಂದರೆ ಒಂದೊಂದು ಸಮುದಾಯ ಬೇರೆ ಬೇರೆ ಮಜಲುಗಳಲ್ಲಿ ಆಚರಣೆಗೆ ತೊಡಗಿಸಿಕೊಳ್ಳುತ್ತಾರೆ. ಕುದುರೆಯನ್ನು ಪೂಜಿಸುವ ಸಂಪ್ರದಾಯವು ಕನ್ನಡ ನಾಡಿನ ತುಂಬೆಲ್ಲಾಇದೆ. ಹಾಲುಮತ ಸಂಪ್ರದಾಯದಲ್ಲಿ ಕುದುರೆ

ಪೂಜೆಯು ಅತೀ ಪ್ರಾಚೀನ ಪದ್ಧತಿಯಾಗಿದೆ. ಬೆಳಗಾವಿ ಜಿಲ್ಲೆಯ ಮುರಗುಂಡಿಯ ಶ್ರೀ ಮರುಳಸಿದ್ಧೇಶ್ವರ ದೇವಸ್ಥಾನದಲ್ಲಿ ಕುದುರೆಯ ನಿತ್ಯ ಪೂಜೆಯು ನಡೆಯುತ್ತದೆ. ಎಂದು ಡಾ.ಕಲ್ಲಯ್ಯ ಹೇಳುತ್ತಾರೆ.



ದೇವರ ವಾಹನವಾಗಿ ಕುದುರೆ :

ಗೋವು, ಹಿಂದೂ ಹಾಗೂ ಬ್ರಾಹ್ಮಣರಿಗೆ, ಮೇಕೆಯು ಕ್ರಿಶ್ಚಿಯನ್ನರಿಗೆ, ಕೋಣ, ಕತ್ತೆ, ಎಮ್ಮೆ, ನಾಯಿಗಳು ಶೂದ್ರರಿಗೆ ಪೂಜ್ಯವಾಗಿ ಕಂಡು ಬಂದವು.ಶಿವನ ವಾಹನ ನಂದಿ, ಇಂದ್ರನ ವಾಹನ ಬಿಳಿ ಆನೆ- ಐರಾವತವೆಂತಲೂ ಸಿಂಹವು ಭಾರತ ದೇಶದತುಂಬೆಲ್ಲಾ ಗ್ರಾಮದೇವತೆಗಳ ವಾಹನವೆಂದೂ, ಹುಲಿಯುದುರ್ಗೆ, ಕಾಳಿಕಾದೇವಿಯರಿಗೆ ಮತ್ತು ಮಲೆಮಾದೇಶ್ವರನಿಗೆ ವ್ಯಾಘ್ರ ವಾಹನವಾಗಿದೆ. ಮಠಾಧೀಶರು ಮತ್ತು ಮಹರ್ಷಿಗಳು ಹುಲಿ ಚರ್ಮದ ಮೇಲೆ ಗಣೇಶನ ವಾಹನ, ಕೋಣವು ಯಮಧರ್ಮನ ವಾಹನ, ಜಿಂಕೆಯು ವಾಯುವಿನ ವಾಹನ, ಮೈಲಾರಲಿಂಗನ ಸಂಪ್ರದಾಯದಲ್ಲಿ ‘ನಾಯಿ ಗೊರವದೀಕ್ಷೆ’ ಆಚರಣೆಯಲ್ಲಿರುವಂತೆ ಕುದುರೆಯನ್ನು ಇಂದ್ರ ವಾಹನವೆಂದೂ, ಇಂದ್ರನ ಚಿನ್ನದರಥಕ್ಕೆ ಒಂದು ಸಹಸ್ರ ಕುದುರೆಗಳು ಸೂರ್ಯನರಥಕ್ಕೆ ಏಳು ಕೆಂಪು ಕುದುರೆಗಳು, ರಾಹು-ಕೇತುವಿನ ರಥಕ್ಕೆಎಂಟು ಮಾಸಲು ಕೆಂಪು ಬಣ್ಣದ ಕುದುರೆಯನ್ನು ಕಟ್ಟಲಾಗಿದೆ. ಪ್ರಹ್ಲಾದ, ಆದಿತ್ಯ ಹನೊಂದು ಜನರುದ್ರರು, ಕುಂಜಂಭ ಹಾಗೂ ನವಗ್ರಹಗಳ ರಥಗಳಿಗೆ ಕುದುರೆಯನ್ನು ಕಟ್ಟಲಾಗಿದೆ.

ರಥವು ನವಗ್ರಹಗಳ ವಾಹನವಾಗಿದ್ದು, ಕುದುರೆಗಳನ್ನು ಕಟ್ಟಿದದೊಡ್ಡರಥ ಶುಕ್ರಗ್ರಹದ ವಾಹನ. ಸೂರ್ಯನ ವಾಹನವಾದ ರಥಕ್ಕೆ ಒಂದೇಚಕ್ರ ಹಾಗೂ ಹನ್ನೆರಡು ಅರೆಕಾಲುಗಳು, ವರುಣದೇವ ಸೂರ್ಯರಥದ ಸಾರಥಿ, ಹತ್ತು ಬಿಳಿ ಕುದುರೆಗಳನ್ನು ಕಟ್ಟಿದ ಮೂರು ಚಕ್ರದರಥ ಚಂದ್ರನ ವಾಹನ, ಬುಧಗ್ರಹದ ರಥವನ್ನು ಗಾಳಿ, ಬೆಂಕಿ ಮತ್ತುಚಿನ್ನದ ಬಣ್ಣಗಳಿಂದ ನಿರ್ಮಿಸಲಾಗಿದೆ. ಗಾಳಿ ವೇಗದಲ್ಲಿ ಚಲಿಸುವ

ಕುದುರೆಗಳನ್ನು ಕಟ್ಟಲಾಗಿದೆ. ಚಿನ್ನದಿಂದ ಮಾಡಿದ ಅಗ್ನಿಯಿಂದ ಹುಟ್ಟಿದ ಕುದುರೆಗಳನ್ನು ಕಟ್ಟಿದ ರಥ ಕುಜ ಗ್ರಹದ ವಾಹನ, ಬೃಹಸ್ಪತಿಯ ವಾಹನವಾದ ಚಿನ್ನದ ರಥವನ್ನು ಎಂಟು ಬಿಳಿಯ ಕುದುರೆಗಳು, ಶನಿದೇವನ ರಥವನ್ನು ಹಲವು ಬಣ್ಣದ ಕುದುರೆಗಳು, ಕೇತುವಿನ ರಥವನ್ನು ಜೀರುಂಡೆಯಂತಹ ಕಪ್ಪುಬಣ್ಣದ ಕುದುರೆಗಳು, ರಾಹುವಿನ ರಥವನ್ನು ಗಾಳಿಯ ಬೇಗದ ಕುದುರೆಗಳು ಎಳೆಯುತ್ತವೆ.

ಮೈಲಾರಲಿಂಗನ ಸಂಪ್ರದಾಯದಲ್ಲಿಕುದುರೆಆಚರಣೆ ಮತ್ತು ವಿಧಿ-ವಿಧಾನ :

ಮೈಲಾರದ ದೇವರಗುಡ್ಡದ ಕ್ಷೇತ್ರದ ಮುಖಮಂಪಟದ ಎಡಭಾಗದಲ್ಲಿ ದೊಡ್ಡದೊಂದು ಕಟ್ಟೆಯಿದ್ದು, ಅದರ ಮೇಲೆ ದೇವರ ವಾಹನವಾದ ಕುದುರೆಯ ಅನೇಕ ಮೂರ್ತಿಗಳನ್ನು ಇಡಲಾಗಿದೆ. ಇವೆಲ್ಲಾ ಕಟ್ಟಿಗೆಯಿಂದ ಮಾಡಿದ್ದು ಬಣ್ಣಗಳನ್ನು ಕೊಡಲಾಗಿದೆ. ಬಿಜಾಪುರಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಮಲ್ಲಯ್ಯ ದೇವಸ್ಥಾನವಿದ್ದು, ಮಲ್ಲಯ್ಯ ಕಟ್ಟೆಯ ಎದುರುಗಡೆ ಸ್ವಲ್ಪ ಅಂತರದಲ್ಲಿ ಕಲ್ಲಿನಿಂದ ಕೆತ್ತಿದ ಕುದುರೆಯನ್ನು ಶಿಲಾಪೀಠದ ಮೇಲೆ ಸ್ಥಾಪಿಸಲಾಗಿದೆ. ಕಲ್ಲಿನ ಕುದುರೆ ದಕ್ಷಿಣಾಭಿಮುಖವಾಗಿದ್ದು ಸುಂದರವಾಗಿದೆ.

ವಿಶಿಷ್ಠ ಆಚರಣೆಯಾಗಿರುವ ‘ಕುದುರೆ ಹಬ್ಬ’ :

ಕುದುರೆಯ ಹಬ್ಬವನ್ನು ಶೀಗೆಯ ಹುಣ್ಣಿಮೆಯ ಏಳನೆಯ ದಿನಕ್ಕೆ ಆಚರಿಸುವರು. ಅಂದು ನಾಲ್ಕು ಗಂಟೆಯ ಸುಮಾರಿಗೆ ಅಶ್ವಾರೋಹಿಯಾಗಿ ಮಲ್ಲಯ್ಯ ಬೇಟೆಗಾಗಿ ಹೊರಡುವನು.

ಗಂಗಿಮಾಳಮ್ಮ, ತುಪ್ಪದ ಮಾಳಮ್ಮ, ಚಿಕ್ಕಯ್ಯ, ಜುಂಜಯ್ಯ ಹೆಗ್ಗಡೆ ಮೊದಲಾದ ಎಲ್ಲ ದೇವರಿಗೆ ಪೂಜೆ ಸಲ್ಲುತ್ತದೆ. ಮಹಾಲಯ ಅಮವಾಸ್ಯೆಯಿಂದ ಪ್ರಾರಂಭವಾಗುವ ಒಟ್ಟು ಕಾರ್ಯಕ್ರಮಗಳು ಈ ಕುದುರೆಯ ಹಬ್ಬದ ಆಚರಣೆಯೊಂದಿಗೆ

ಮುಕ್ತಾಯಗೊಳ್ಳುತ್ತವೆ. ಈ ಕುರಿತು ಲೇಖಕರು ವಿವರವಾಗಿ ವಿವರಿಸುತ್ತಾರೆ.

ಮಹಾರಾಷ್ಟ್ರದಲ್ಲಿಕುದುರೆ ಹಬ್ಬ ಆಚರಣೆ :

ಮಹಾರಾಷ್ಟ್ರದ ವ್ಯಾರ್ಘ ಮುರಳಿಯವರು ಕರ್ನಾಟಕದವರಂತೆ ಕಂಬಳಿಯ ನಿಲುವಂಗಿ, ಮುರಗಿ, ಮುಂಡಾಸ, ಕುಲಾವಿ ಮುಂತಾದವನ್ನು ಧರಿಸುವುದಿಲ್ಲ. ಸಾಮಾನ್ಯ ಬಟ್ಟೆಯಲ್ಲಿಯೇ ಇರುತ್ತಾರೆ. ಸಾಮಾನ್ಯ ಬಟ್ಟೆಯಲ್ಲಿಯೇ ಇರುತ್ತಾರೆ. ಪೇಂಬರ ಮೈಲಾರದ ಬದಾಮತಿ ವಗ್ಗೆರು ಕಸೆಯಂಗಿ ಅಲ್ಲಿ ಕುದುರೆ ಇರುವ ಮಂಟಪದ ಮುಂದೆ ಆ ತಟ್ಟೆಯನ್ನಿಟ್ಟು ದಂಡೆಯ ಹೂಗಳಿಂದ ಕುದುರೆ ಮೊದಲಾದದೇವರ ಪ್ರತೀಕಗಳನ್ನು ಪೂಜಿಸುವರು.

ಆಂಧ್ರ ಪ್ರದೇಶದಲ್ಲಿ ಕುದುರೆ ಹಬ್ಬಆಚರಣೆ :

ಆಂಧ್ರಪ್ರದೇಶದ ‘ಮೂಲ’ ಜನಾಂಗದ ಬೆಡಗುಗಳಲ್ಲಿ ಕುದುರೆಯೂ ಒಂದು ಕುದುರೆ ಕನಸಿನಲ್ಲಿ ಕಾಣಿಸಿಕೊಂಡರೆ ತಾವು ದೇವರಿಗೆ ಒಪ್ಪಿಸಬೇಕಾದ ಹರಕೆ ಬಾಕಿ ಉಳಿದಿದೆ ಎಂದು ಭಕ್ತರು ನಂಬುತ್ತಾರೆ.

ಪ್ರಾಚೀನ ಕಾಲದ ಆಚರಣೆಯಾಗಿ ಕುದುರೆ ಆರಾಧನೆ :

ಹಳೆಯ ಕಾಲದ ಮನೆಗಳು ಬಾಗಿಲು ಪಟ್ಟಿಕೆಗಳಲ್ಲಿ ಕುದುರೆ ಚಿತ್ರಗಳನ್ನು ಬಿಡಿಸಿ ಪೂಜಿಸುವ ಪರಂಪರೆಇತ್ತು. ಸೇಡಂ, ಶಹಾಪುರ, ಚಿತ್ತಾಪುರ, ಬಸವಕಲ್ಯಾಣ ಚಂಚೋಳಿ, ಲಿಂಗಸೂರು, ಮಾನ್ವಿ, ದೇವದುರ್ಗ, ಗಲಬರ್ಗ, ಬೀದರ, ರಾಯಚೂರು, ಕೊಪ್ಪಳ ಭಾಗದಲ್ಲಿ ಹಳೆಯದಾದ ಅರಸು ಮನೆತನಗಳಲ್ಲಿ ಗೌಡರು, ವಾಲೀಕಾರರು, ಕರಕುಶಲಗಾರರು, ಪಂಚಾಳರು ಮುಂತಾದವರ ಮನೆಯ ಬಾಗಿಲುಗಳಲ್ಲಿ ಕುದುರೆಯ ಚಿತ್ರಗಳಿರುವುದನ್ನು ಕಾಣುತ್ತೇವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‘ಕುದುರೆ ಕೋಲ’ಆಚರಣೆ :

ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಕಂಡು ಬರುವ ‘ಕುದುರೆಕೋಲ’ ಎಂಬ ಕಲೆಯು ‘ನಲ್ಕೆ’ ಜನಾಂಗದವರ ಆರಾಧನಾತ್ಮಕ ಕಲೆಯಾಗಿದ್ದು, ಸುಗ್ಗಿ, ಬೇಸಾಯ ಆರಂಭಿಸುವ ಮೊದಲು ಈ ಕುಣಿತವನ್ನು ನಡೆಸುತ್ತಾರೆ. ಸಾಮಾನ್ಯವಾಗಿ ಬಿತ್ತನೆಗೆಗದ್ದೆಯನ್ನು ಹಸನುಗೊಳಿಸಿ, ಉಳುಮೆಯನ್ನು ಪೂರ್ತಿಗೊಳಿಸುವ ದಿನಕ್ಕೆ ‘ಕಂಡದಕೋರಿ’ ಎಂದು ಕರೆಯುತ್ತಾರೆ. ಈ ಆಚರಣೆಯನ್ನು ದೊಡ್ಡ ಬೇಸಾಯಗಾರರು, ಅರಸರು, ಬಲ್ಲಾಳರು, ಬೂಡಿನವರು, ಗುತ್ತಿನವರು ವಿಜೃಂಭಣೆಯಿಂದ ನಡೆಸುತ್ತಾರೆ. ಗದ್ದೆಕೋರಿಆದ ಬಳಿಕ ಗದ್ಗೆ ಮಧ್ಯೆ ಪೊರಕೆ ಹಾಕುವ ಪದ್ಧತಿಯಿದೆ. ಪೊರಕೆ ಹಾಕುವ ಮೊದಲು ‘ಕುದುರೆ ಕೋಲ’ ನಡೆಯುತ್ತದೆ. ಸುಗ್ಗಿಯ ನಂತರ ಬೆಳೆ ಬಿತ್ತುವ ಮೊದಲು ಆಗುವ ಈ ಸಮಾರಂಭ ಸಾಮಾನ್ಯವಾಗಿ ಡಿಸೆಂಬರ ತಿಂಗಳಲ್ಲಿ ನಡೆಯುತ್ತದೆ. ಪೊರಕೆ ಮತ್ತು ಕುದುರೆ ಕೋಲಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಕುದುರೆ ಕೋಲವೆಂದರೆ ನಾಗಬ್ರಹ್ಮನು ಕುದುರೆಯ ಮೇಲೆ ಕುಳಿತುಕೊಂಡು ಬರುವ ದೃಶ್ಯವಾಗಿದೆ. ತುಳುನಾಡಿನಲ್ಲಿ ಯಾವುದೇ ಉತ್ಸವ ಹಾಗೂ ಆರಾಧನೆ ಮಾಡುವ ಸಂದರ್ಭದಲ್ಲಿ ನಾಗಬ್ರಹ್ಮನ ಸೇವೆಯು ಮೊದಲು ನಡೆಯುತ್ತದೆ.

ಡಾ. ಕಲ್ಲಯ್ಯ ಹಿರೇಮಠ ಅವರು ಕ್ರಿಯಾತ್ಮಕ ಸಂಶೋಧನಾಕಾರರು :

ಸಂಶೋಧನೆಯ ವಿವಿಧ ಮಗ್ಗಲುಗಳನ್ನು ಪರಿಚಯಿಸು ‘ಅಶ್ವಾರಾಧನೆ’ ಎಂಬ ಕೃತಿಯು ಗಾತ್ರದಲ್ಲಿ ಕಿರಿದಾದರೂ ವೈಚಾರಿಕ ನೆಲೆಗಟ್ಟಿನಲ್ಲಿ ಹಿರಿದಾದ ಕೃತಿಯೆನಿಸುವಷ್ಟರ ಮಟ್ಟಿಗೆಇಲ್ಲಿಯ ವಿಷಯವು ನಿರೂಪಣೆಗೊಂಡಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತುಳುನಾಡು, ಹರಪ್ಪಾ-ಮೆಹಂಜೋದಾರೋ ಸಂಸ್ಕೃತಿ, ಮೆಗಾಸ್ತನೀಸ್ ಗ್ರೀಸ್, ಬೌದ್ಧ ಸಂಸ್ಕೃತಿಯ ಕೆಲವು ವಿಚಾರಗಳ ಅಳವಡಿಕೆಯ ದೃಷ್ಟಿಯಿಂದ ಸಮಯ ವಿನಯೋಗಿಸುವ ವೃತಿಯ ಮಧ್ಯದಲ್ಲಿಯೂ ಪ್ರವೃತ್ತಿಯಾದ ಸಾಹಿತ್ಯ ವೃತ್ತಿಯನ್ನು ಕೈಬಿಟ್ಟಿಲ್ಲ.

ಕವಿಯಾಗಿ, ನಾಟಕಕಾರರಾಗಿ, ಸಾಮಾಜಿಕಚಿಂತಕರಾಗಿ, ಶ್ರೇಷ್ಠವಾಗ್ಮಿಯಾಗಿ ಗುರುತಿಸಿಕೊಂಡಿದ್ದಾರೆ.ಅವರು ತಮ್ಮ ಕ್ರಿಯಾಶೀಲತೆಯಿಂದ ಉತ್ತರೋತ್ತರವಾಗಿ ಬೆಳೆಯಲಿ, ಹೆಚ್ಚು ಹೆಚ್ಚು ಓದುಗರುಅವರಕೃತಿಗೆ ಸಿಗಲಿ ಎಂದುಹಾರೈಸುವೆನು.


  • ಡಾ. ಸಂಗಮೇಶ ತಮ್ಮನಗೌಡ್ರ (ಶಿಕ್ಷಕರು ಸಾಹಿತಿಗಳು) ಲಕ್ಷ್ಮೇಶ್ವರ.

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW