ಎಲ್ಲ ವಿಷಾದಗಳಿಗೂ ವಿದಾಯ ಹೇಳೋಣ…ಕವಿ ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಸೊಗಸಾದ ಕವಿತೆ.ತಪ್ಪದೆ ಓದಿ….
ನೆಪ ಮಾತ್ರದ ಕನವರಿಕೆ ಅಲ್ಲ!
ಅದು ನೇವರಿಕೆ ನಿನ್ನ ಮೇಲಿರುವ ಒಲವು..
ಉಸಿರಿಗೊಮ್ಮೆ ಕೇಳಿ ನೋಡು..
ನನ್ನ ಸ್ಮರಣೆ ಬರುತ್ತಲೆ ಬಿಸಿಗೊಂಡಿದ್ದರೆ
ವಿರಹವಿನ್ನೂ ತಪಿಸುತಿದೆ ಎಂದರ್ಥ..
ಮುನಿಸು ಒಂದು ಹಂತದವರೆಗೆ ಚೆನ್ನ ಚಿನ್ನ
ಅದನ್ನು ತೊರೆದು ಒಮ್ಮೆ ಮುಗುಳ್ನಕ್ಕರೆ ಸಾಕು
ಒಲವಿನ ಬಳ್ಳಿ ಕುಡಿಯೊಡೆದು
ದಾಂಗುಡಿ ಇಡುತ್ತದೆ ಬಾಳ ಚಪ್ಪರದ ಮೇಲೆ
ಹಸಿರುಟ್ಟು ಹೂ ಬಿಟ್ಟು ಸೆಳೆಯುತ್ತದೆ
ಮೋಹ ಜಾಲ ಬೀಸಿ
ಒಂದು ಹೆಜ್ಜೆ ಮುಂದಿಟ್ಟರೆ
ಅತ್ತಣಿಂದ ಎರಡು ಹೆಜ್ಜೆ ಮುಂಪರಿಯುತ್ತವೆ
ಸಂಗಮಿಸುವುದಕ್ಕೆ…
ಎರಡು ನದಿಗಳು ಪ್ರವಹಿಸಿ
ಬರಬೇಕಲ್ಲವೇ ಬೆರೆಯುವ ಉತ್ಸಾಹದೊಂದಿಗೆ
ಇರಲಿ ಒಳಗೆ ಒಲವು ಉಕ್ಕಿಸುವ ಪ್ರೀತಿ
ಸಾಕಿನ್ನು ಎಲ್ಲ ವಿಷಾದಗಳಿಗೂ
ವಿದಾಯ ಹೇಳೋಣ..
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.
