ಅಂತು : ಪ್ರಕಾಶ್ ನಾಯಕ್ ಅವರ ಕಾದಂಬರಿ ಒಂದು ಟಿಪ್ಪಣಿ.

ಲೇಖಕ ಪ್ರಕಾಶ್ ನಾಯಕ್ ಅವರ ಕಾದಂಬರಿ ‘ಅಂತು’ ಕುರಿತು ವಿಮರ್ಶಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಪುಸ್ತಕ ಪರಿಚಯ ಲೇಖನವಿದು, ಮುಂದೆ ಓದಿ….

ಈ ಕಾದಂಬರಿಯ ಕೆಲವು ಸಾಧನೆಗಳು:

ಮೊದಲ ಬಾರಿಗೆ ಹಿಂದೂಗಳ‌ ನಂಬಿಕೆಯಾದ ಆತ್ಮದ ಪರಿಕಲ್ಪನೆಯನ್ನು ಬಹುಮುಖಿ ದೃಷ್ಟಿಯಿಂದ ಪರೀಕ್ಷೆಗೆ ಒಳಪಡಿಸಿರುವುದು. ಅದನ್ನು ಇತ್ಯಾತ್ಮಕ ಎಂದು ಪರಿಗಣಿಸಿ ಅದರ ಪ್ರಯೋಗದಲ್ಲಿ ಸಹಕರಿಸುವ ಪಾತ್ರಗಳ ಸೃಷ್ಟಿ ಮಾಡಿರುವ ಹಾಗೆ ,ಅದು ಋಣಾತ್ಮಕ ಎಂದು ಪರಿಗಣಿಸಿ ಅದರ ವಿರುದ್ಧ ಹೊರ ನಡೆಯುವ ಪಾತ್ರಗಳ ಸೃಷ್ಟಿ ಮಾಡಿರುವುದು. ಮೊದಲನೆಯದಕ್ಕೆ ನಿದರ್ಶನವಾಗಿ ಅಭಿಜಿತ್ ( ಬಂಡವಾಳ ಹೂಡಿಕೆಗೆ), ದಿಗಂಬರ ತಂತ್ರಜ್ಞಾನ ಸೃಷ್ಟಿಗೆ, ರಿಚರ್ಡ್ ಅದರ ವಾಣಿಜ್ಯೀಕರಣಕ್ಕೆ.

ಎರಡನೆಯದಕ್ಕೆ ಅದನ್ನು ಅನೈತಿಕ ಎಂದು ಪರಿಗಣಿಸಿ ಅದರಿಂದ ಹೊರನಡೆದ / ಹೊರಹಾಕಲ್ಪಟ್ಟ. ಯಾಲಿ, ಸೋಫಿಯಾ, ಅಭಿಜಿತ್ ನ ತಂದೆ ಮತ್ತು ಹೆಂಡತಿ. ( ಮತ್ತೆ ಅಮೆರಿಕೆಗೆ ಬರುವುದಿಲ್ಲ ಎಂದು ಭಾರತಕ್ಕೆ ಶಾಶ್ವತವಾಗಿ ಮರಳುವ ಮೂಲಕ, ಡಿಸ್ಗಸ್ಟ್ ಎಂದು ಕರೆಯುವ ಮೂಲಕ).

‌‌‌‌‌
ಮೂರನೆಯ ಬಗೆಯ ಪಾತ್ರಗಳು ಇಲ್ಲಿವೆ . ಅವನ್ನು ಬಲಿಪಶುಗಳು ಎಂದು ಕರೆಯಬಹುದು. ಕೌಶಿಕ್ ನ ಆತ್ಮವನ್ನು ಒಂದು ದೇಹದಿಂದ ಇನ್ನೊಂದು ದೇಹಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ತಮ್ಮನ್ನು ಮೂಕವಾಗಿ ಒಡ್ಡಿಕೊಳ್ಳುವ ಪಾತ್ರಗಳು. ಅವುಗಳು: ಕೌಶಿಕ್ ನ ಹೆಂಡತಿ ಎಡ್ರಿಯಾನ,( ಅಳಿದ ಮೇಲೆ ಕಾದಂಬರಿಯ ತಂತ್ರವನ್ನು ಅಳವಡಿಸಿಕೊಂಡು), ಅಲ್ಮೆನ್ಸೋನ ಹೆಂಡತಿ ಎಂಜಲಿತೋ ಮತ್ತು ಅಲ್ಮೆನ್ಸೊ ಕೂಡ. ಸಾಮಾನ್ಯವಾಗಿ ಪ್ರಯೋಗ ಮಾಡುವಾಗ ಅವರ ಒಪ್ಪಿಗೆ ಪಡೆಯುವುದು ಅಗತ್ಯ. ಆದರೆ ಇದು ಇಲ್ಲಿ ನಾಪತ್ತೆಯಾಗಿದೆ.
ಕಾದಂಬರಿಯ ಕೇಂದ್ರ ಪಾತ್ರ ಎಂದು ಕರೆಯಬಹುದಾದ ವಿಜ್ಞಾನಿಯಾದ ಕೌಶಿಕ್ ಇದೆಲ್ಲದರ ಹಿಂದಿನ ಸೂತ್ರಧಾರ. ಇವನನ್ನು ಪ್ರಾರಂಭದಲ್ಲಿ ಫಿರ್ಕಿಬಾಬಾ( ಗೋಕರ್ಣದ) ನೊಂದಿಗೆ ಮುಖಾಮುಖಿಯಾಗಿಸಲಾಗಿದೆ. ಅವನನ್ನು ನಿಯಮಾತೀತನೆಂದು, ಸಂವೇದನಾರಹಿತನಾಗಿ ಚಿತ್ರಿಸಲಾಗಿದೆ. ಆದ್ದರಿಂದಲೆ ಅವನಿಗೆ ಗ್ಲಿಟನ್ ನ ಹೃದಯಾಘಾತವಾಗಲಿ, ಹೆಂಡತಿಯ ಆತ್ಮಹತ್ಯೆಯಾಗಲಿ ( ಅದು ಆತ್ಮಹತ್ಯೆಯಲ್ಲವೆಂದು , ಅವಳ ಆತ್ಮವನ್ನು ಎಂಜಲಿತೊಳ ದೇಹಕ್ಕೆ ವರ್ಗಾವಣೆ ಅವನ ಹೇಳಿಕೆಯ ಪ್ರಕಾರ ) ಅವನನ್ನು ಯಾವುದೇ ರೀತಿಯಲ್ಲಿ ಬಾಧಿಸುವುದಿಲ್ಲ. ಇನ್ನೊಂದು ವೈಚಿತ್ರ್ಯವೆಂದರೆ ಪ್ರಯೋಗಕ್ಕೆ ಒಳಗಾಗುವ ಇಬ್ಬರೂ – ಆತ್ಮದ ಪರಿಕಲ್ಪನೆಯೆ ಇಲ್ಲದ ಪಾಶ್ಚಾತ್ಯ ಪಾತ್ರಗಳು. ಅಲ್ಮೆನ್ಸೊನ ದುರಂತವೆಂದರೆ ಎಂಜಲಿತೊಳ ರೂಪಾಂತರವನ್ನು ಅಸಹಾಯಕನಾಗಿ ಒಪ್ಪಿಕೊಂಡು ಹೊಸ ಜೀವನಕ್ಕೆ ಹೊಂದಿಕೊಳ್ಳುವುದು. ಪರಂಪರಾಗತ ನಂಬಿಕೆಯನ್ನು, ಆಧುನಿಕ ತಂತ್ರಜ್ಞಾನದ ಚೌಕಟ್ಟಿನಲ್ಲಿ ಇಟ್ಟು , ಅದನ್ನು ಮೇಲಿನಂತೆ ಬಹುಮುಖಿಯಾಗಿ ವಿಶ್ಲೇಷಣೆಗೆ ಒಳಪಡಿಸಿರುವುದು ಈ ಕಾದಂಬರಿಯ ಸಾಧನೆ ಎಂದು ಕರೆಯಬಹುದು.

‘ಅಂತು’ ಕಾದಂಬರಿಕಾರ ಪ್ರಕಾಶ್ ನಾಯಕ್

ಅವರ ಉತ್ತರ ಕನ್ನಡದ ಭಾಷೆಯ ಘಮಲನ್ನು ಅವರು ಆಗಾಗ್ಗೆ ಬಳಸುವ’ ದಿಗಿಣ’ ಎನ್ನುವ ಎನ್ನುವ ಶಬ್ದದ ಮೂಲಕ, ಪೌರಾಣಿಕ ನಾಟಕದ ಮೂಲಕ ಮನಗಾಣಬಹುದು. ಸಾಂತಪ್ಪ, ಪಿರ್ಕಿಬಾಬಾ, ಅಭಿಜಿತ್, ಮುಂತಾದ ಉತ್ತರ ಕನ್ನಡದ ಪಾತ್ರಗಳ ಮೂಲಕ. ಅಮೆರಿಕದ ಸಂಸ್ಕೃತಿಯನ್ನು ವೈನ್ ಬಿ, ಪ್ರದೇಶಗಳ, ಹೋಟೆಲ್ ಗಳ ವರ್ಣನೆಗಳಲ್ಲಿ, ಪಾತ್ರಗಳ ಸೃಷ್ಟಿಯ ಮೂಲಕ ಚಿತ್ರವತ್ತನ್ನಾಗಿ ಮೂಡಿಸಲಾಗಿದೆ. ಇದನ್ನು ಬೇರು ಕಾಂಡಗಳ ಸಮಾಗಮ ಎಂದು ಬೇಕಾದರೆ ಕರೆಯಬಹುದು. ಬಹುಮುಖಿ ನಿರೂಪಣೆ ಈ ಕಾದಂಬರಿಯ ತಂತ್ರ ವಿನ್ಯಾಸ. ಇದರಿಂದಾಗಿ ‌ಏಕಮುಖಿ ಬರವಣಿಗೆಯ ಅಪಾಯವನ್ನು ತಪ್ಪಿಸಿ, ಕಥನಕ್ಕೆ ಬಹುತ್ವವನ್ನು ಪ್ರದಾನಿಸಲು ಸಾಧ್ಯವಾಗಿದೆ. ಇದು ಪ್ರಕಟವಾಗುವುದು ವಿವಿಧ ಪಾತ್ರಗಳ ನಿರೂಪಣೆಯ ಮೂಲಕ. ಅಭಿಜಿತ್, ದಿಗಂಬರ, ರಿಚರ್ಡ್, ಅಲ್ಮೆನ್ಸೊ ,ತಮ್ಮ ತಮ್ಮ ದೃಷ್ಟಿಕೋನಗಳಿಗೆ ಅನುಗುಣವಾಗಿ ತಮ್ಮ ತಮ್ಮ ಕಥನಗಳನ್ನು ಬಿತ್ತರಿಸುತ್ತಾರೆ. ಜತೆಗೆ ಉಳಿದವರ ದೃಷ್ಟಿಕೋನವನ್ನು ಒಳಗೊಳ್ಳಲು ಯತ್ನಿಸುತ್ತಾರೆ. ಇದರಿಂದಾಗಿ ಕಥನಕ್ಕೆ ಬಹುತ್ವ ತಾನಾಗಿಯೇ ಪ್ರಾಪ್ತವಾಗಿದೆ. ವಿರುದ್ಧ ಮುಖಗಳನ್ನು ಕೂಡ ಇವು ಒಳಗೊಳ್ಳುವ ಪ್ರಕ್ರಿಯೆ ಈ ಕಥನದ ವೈಶಿಷ್ಟ್ಯವಾಗಿದೆ. ಅಭಿಜಿತ್ ತನ್ನ ಹೆಂಡತಿ ಅಪ್ಪನ ತೀವ್ರ ಸ್ವರೂಪದ ಪ್ರತಿಕ್ರಿಯೆಯನ್ನು ದಾಖಲಿಸುವುದು ಇದಕ್ಕೆ ನಿದರ್ಶನ . ‌‌‌‌

ಸಮಕಾಲೀನ ಭಾರತದ ರಾಜಕೀಯದಲ್ಲಿ ಧಾರ್ಮಿಕ ನಂಬಿಕೆಗಳ ಪುನರುಜ್ಜೀವನದ ಪ್ರಯತ್ನದ ಒಂದು ವಿಮರ್ಶಾತ್ಮಕ ಬಿಂಬವಾಗಿ ಕೂಡ ಇದನ್ನು ಪರಿಗಣಿಸಬಹುದು. ಇದನ್ನು ಕಳಿಸಿ ಓದಲು ಅನುವು ಮಾಡಿಕೊಟ್ಟ ಲೇಖಕರ ಸೌಜನ್ಯಕ್ಕೆ ವಂದನೆ ಮತ್ತು ಅಭಿನಂದ

  • ರಘುನಾಥ್ ಕೃಷ್ಣಮಾಚಾರ್ (ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW