ಗುರುತಿನ ಕ್ರೌರ್ಯ – ಕೇಶವ ರೆಡ್ಡಿ ಹಂದ್ರಾಳ  

ಮನುಷ್ಯನಿಗೆ ಖುಷಿ ನೀಡಿದರೂ ಕೆಲವೊಮ್ಮೆ ವಿಪರೀತ ಮುಜುಗರವನ್ನೂ ಉಂಟು ಮಾಡುತ್ತದೆ ಆ ಒಂದು ಸನ್ನಿವೇಶವನ್ನು ಖ್ಯಾತ ಕತೆಗಾರ ಕೇಶವ ಹಂದ್ರಾಳ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಈ ಗುರುತು ಎಂಬುದು ಮನುಷ್ಯನಿಗೆ ಖುಷಿ ನೀಡಿದರೂ ಕೆಲವೊಮ್ಮೆ ವಿಪರೀತ ಮುಜುಗರವನ್ನೂ ಉಂಟು ಮಾಡುತ್ತದೆ. ಮೂರು ತಿಂಗಳ ಹಿಂದೆ ಒಂದು ದಿನ ಮೆಜೆಸ್ಟಿಕ್ ಒಂದು ರೌಂಡ್ ಹೊಡೆದು ಸಪ್ನ ಬುಕ್ ಹೌಸ್ ಕಡೆ ನಡೆದಿದ್ದೆ. ಮೆಜೆಸ್ಟಿಕ್ ಗೆ ಹೋದರೆ ಗಾಂಧೀನಗರದಲ್ಲಿರುವ ನಮ್ಮ ಹೆಡ್ ಆಫೀಸಿಗೆ ಹೋಗಿ ಒಂದಿಬ್ಬರು ಸ್ನೇಹಿತರನ್ನು ಮಾತನಾಡಿಸಿಕೊಂಡು, ಸಪ್ನ ಬುಕ್ ಹೌಸ್ನಲ್ಲಿ ದೊಡ್ಡೇಗೌಡರನ್ನು ನೋಡಿಕೊಂಡು ಹಾಗೇ ನರ್ತಕಿ ಹೋಟೆಲ್ಗೆ ಹೋಗಿ ಅದರ ಒಡೆಯ ನನ್ನ ಅತ್ಯಂತ ಆತ್ಮೀಯ ಸ್ನೇಹಿತರಾದ ರಾಜಗೋಪಾಲ್ ರೊಂದಿಗೆ ಒಂದು ಗಂಟೆ ಮಾತನಾಡಿಕೊಂಡು, ಊಟದ ಟೈಮಾದರೆ ಅಲ್ಲೆ ಊಟಮಾಡಿ ಬಸ್ಟ್ಯಾಂಡ್ ಒಳಗೆ ಇಳಿಬಿದ್ದು ಮೆಟ್ರೋ ರೈಲು ಹತ್ತುವುದು ನನಗೆ ಬಹಳ ಹಿತವಾದ ಸಂಗತಿ.

ಫೋಟೋ ಕೃಪೆ : google

ಅವೊತ್ತು ಸಪ್ನ ಬುಕ್ ಹೌಸ್ ಪ್ರವೇಶ ಮಾಡಿದಾಗ ನಾಲ್ಕೂವರೆ ಗಂಟೆಯಾಗಿತ್ತು. ನನ್ನ ಮಗ ಹೇಳಿದ್ದ Mein kemph ಪುಸ್ತಕ ಖರೀದಿಸುವುದನ್ನು ನೆನಪು ಮಾಡಿಕೊಂಡು ಒಂದನೇ ಮಹಡಿಗೆ ಹೋಗಲು ಕೌಂಟರ್ ಮುಂದೆ ನಡೆಯುತ್ತಿರಬೇಕಾದರೆ ಅಲ್ಲಿ ನಿಂತಿದ್ದ ಸುಮಾರು ಮೂವತ್ತು ಮೂವತ್ತೈದು ವಯಸ್ಸಿನ ಹೆಣ್ಣು ಮಗಳು ನನ್ನನ್ನು ನೋಡಿ ಕಣ್ಣು ಅರಳಿಸುತ್ತಾ

” ನೀವು ಕೇಶವರೆಡ್ಡಿ ಹಂದ್ರಾಳ ಅಲ್ವಾ ಸಾರ್…” ಎಂದು ಖುಷಿಯಿಂದ ಕೇಳಿದ್ದಳು. ಆಕೆಯ ಹತ್ತನ್ನೆರಡು ವರ್ಷದ ಮಗಳು ಜೊತೆಯಲ್ಲಿದ್ದಳು. ನಾನು ” ಹೌದು ಕಣಮ್ಮ…” ಎಂದಿದ್ದೆ. ಅಷ್ಟರಲ್ಲಿ ಬಿಲ್ ಪೇ ಮಾಡಿ ಕೈನಲ್ಲಿ ಪುಸ್ತಕಗಳ ಬ್ಯಾಗ್ ಹಿಡಿದಿದ್ದ ಆಕೆಯ ಗಂಡ ಬಂದಿದ್ದ. ಆ ಹೆಣ್ಣು ಮಗಳು ತುಂಬಾ ಖುಷಿಯಿಂದ ಅಚಾನಕ್ಕಾಗಿ ನನ್ನ ಕೈ ಹಿಡಿದು ” ರೀ ಇವ್ರೇ ಕೇಶವರೆಡ್ಡಿ ಹಂದ್ರಾಳ. ಎಷ್ಟು ಚನ್ನಾಗಿ ಕಥೆ ಬರಿತಾರೆ ಗೊತ್ತಾ. ನನಗಂತೂ ಇವೊತ್ತು ತುಂಬಾ ಖುಷಿ ಆಗ್ತಿದೆ …” ಎಂದು ಸಂಭ್ರಮದಿಂದ ಇನ್ನೂ ಏನೋ ಹೇಳುವವಳಿದ್ದಳು. ನಾನು ಇಂಥ ಸನ್ನಿವೇಶಗಳಲ್ಲಿ ತುಂಬಾ ಮುಜುಗರಕ್ಕೀಡಾಗಿ ಬಿಡುತ್ತೇನೆ. ಆಕೆಯ ಗಂಡ ನನ್ನನ್ನೊಮ್ಮೆ ಕೆಕ್ಕರಿಸಿ ನೋಡಿ ” ಮನೆಗೆ ಕರ್ಕೊಂಡು ನಡಿ, ಮನೇಲೇ ಇಟ್ಕೊಂಡ್ರಾಯ್ತು ..” ಎಂದು ನಿರ್ಧಯಿಯಾಗಿ ರೇಗಿದ ಪರಿಗೆ ಆಕೆ ಬೆಚ್ಚಿಬಿದ್ದವಳಂತೆ ನನ್ನ ಕೈ ಬಿಟ್ಟು ಆತನ ಜೊತೆ ಹೋಗಿಬಿಟ್ಟಿದ್ದಳು. ನಾನು ಒಂಥರಾ ಗರಬಡಿದವನಂತೆ ನಿಂತವನು ಸಾವರಿಸಿಕೊಂಡು ಪುಸ್ತಕ ಕೊಂಡು ಸೀದಾ ಮನೆಗೆ ಹೋದೆ. ಮೆಜೆಸ್ಟಿಕ್ ಎಂಬ ಮಾಯಾ ಬಜಾರಿನಲ್ಲಿ ಅವರ್ಯಾರೋ, ನಾನ್ಯಾರೋ ? ಆತ 61 ವರ್ಷ ವಯಸ್ಸಿನ ನನ್ನ ಮೇಲೆ ಏಕೆ ಸಿಟ್ಟಾದ… ತಾಯಿ ಅಣ್ಣಮ್ಮದೇವಿಯೇ ನೀನೇ ಹೇಳಬೇಕು!

ನಡೆದ ಸಂಗತಿಯನ್ನು ನನ್ನ ಹೆಂಡತಿಗೆ ಹೇಳಿದ್ದೆ.

” ಅಯ್ಯೋ ಏನಪ್ಪಾ ಸುಮ್ನೆ ಬಂದಿದ್ದೀಯ ಆ ಮುಷೆಂಡಿ ಮೂತಿಗೊಂದು ಇಕ್ಬೊರೋದು ಬಿಟ್ಟು ..” ಎಂದಿದ್ದಳು. ಈ ಮುವತ್ತು ವರ್ಷಗಳಲ್ಲಿ ಕಥೆಗಳನ್ನು ಮೆಚ್ಚಿ ಬರುತ್ತಿದ್ದ ಪತ್ರಗಳಿಗೆ ಧನ್ಯವಾದಗಳನ್ನು ತಿಳಿಸಿ ನನ್ನ ಹೆಂಡತಿಯೇ ಅನೇಕ ಸಾರಿ ಪತ್ರ ಬರೆದಿದ್ದಿದೆ. ನಾನು ಮಂಗಳೂರಿನಲ್ಲಿ ಕೆಲಸ ಮಾಡುವಾಗ ಅಲ್ಲಿನ ಪರಿಸರದ ರೈತ ಕುಟುಂಬವೊಂದರ ಸುತ್ತ
‘ ರೋಗ ‘ ಎಂಬ ಕಥೆಯನ್ನು ತರಂಗ ಪತ್ರಿಕೆಯಲ್ಲಿ ಬರೆದಿದ್ದೆ. ಅದರಲ್ಲಿ ಪೋಟೋ ಮತ್ತು ಹೆಸರಿನೊಂದಿಗೆ ವಿಳಾಸ ಕೂಡ ಪ್ರಕಟಿಸುತ್ತಿದ್ದರು . ಕಥೆ ಪ್ರಕಟವಾದ ಮೂರು ವಾರಕ್ಕೆ ಯಾರೋ ದಂಪತಿಗಳು ನಾವಿದ್ದ ಬೋಂದೆಲ್ ಕ್ವಾರ್ಟರ್ಸ್ಗೆ ಹುಡುಕಿಕೊಂಡು ಬಂದಿದ್ದರು. ನಾನು ಡ್ಯೂಟಿಗೆ ಹೋಗಿದ್ದೆ. ನನ್ನ ಹೆಂಡತಿ ಊಟಕ್ಕಿಟ್ಟು ಕಳಿಸಿದ್ದಳು. ಕಥೆ ಸೇಮ್ ಅವರದೇನಂತೆ. ನಾನು ಕಥೆಯಲ್ಲಿ ಬಳಸಿದ್ದ ಹೆಸರುಗಳು ಕೂಡ ಅವರ ಹೆಸರುಗಳೇನಂತೆ ! ಮನೆಯಲ್ಲಿ ಮಾಡಿ ತಂದಿದ್ದ ಮಿಡಿ ಮಾವಿನ ಉಪ್ಪಿನಕಾಯಿ ಮತ್ತು ಹಳಸಿನ ಹಪ್ಪಳ ಕೊಟ್ಟು ಹೋಗಿದ್ದರು.

ಫೋಟೋ ಕೃಪೆ : google

ಕೆಲವು ವರ್ಷಗಳ ಹಿಂದೆ ನಾನು ಮತ್ತು ಗೆಳೆಯ ಕುಂ ವೀರಭದ್ರಪ್ಪ ರಾತ್ರಿ ಎಂಟು ಗಂಟೆಯಲ್ಲಿ ಟ್ಯಾಂಕ್ ಬಂಡ್ ರಸ್ತೆಯ ಲಾರ್ಡ್ಸ್ ಬಾರ್ ನಲ್ಲಿ ಬಿಯರ್ ಕುಡಿಯುತ್ತಾ ಕುಳಿತಿದ್ದಾಗ ಪಕ್ಕದ ಟೇಬಲ್ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ನಮ್ಮನ್ನೇ ದಿಟ್ಟಿಸಿ ನೋಡಿ ಕಡೆಗೆ ನಮ್ಮ ಗುರುತು ಹಚ್ಚಿ

” ನಾನು ನಿಮ್ಮಿಬ್ಬರ ಅಭಿಮಾನಿ. ನೀವಿಬ್ಬರೂ ಕಥೆ ಬರೆಯೋದರಲ್ಲಿ ಅಣ್ಣತಮ್ಮಂದಿರೇ ಸರಿ…” ಎಂದು ಹೇಳಿ ಎಷ್ಟು ಹೇಳಿದರೂ ಕೇಳದೆ ನಮ್ಮ ಬಿಲ್ಲನ್ನು ಅವರೇ ಕೊಟ್ಟಿದ್ದರು. ಕೊನೆಗೆ ಮತ್ತಿನ ಖುಷಿಯಲ್ಲಿ ಅವರ ಹೆಸರು ಕೂಡ ಹೇಳಿರಲಿಲ್ಲ ! ನಾವೂ ಕೇಳಿರಲಿಲ್ಲ, ನಿರ್ಧಯಿಗಳು!! ಬಹಳ ಸಮಯದ ಹಿಂದೆ ಒಂದು ದಿನ ಏಳುಗಂಟೆಯ ಸಮಯದಲ್ಲಿ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ನನ್ನ ಹೈಸ್ಕೂಲು ಮತ್ತು ಕಾಲೇಜು ಕ್ಲಾಸ್ಮೇಟ್ ನಾಗನಾಥನ ಮನೆಗೆ ಹೋಗಿ ಹಿಂತಿರುಗುವಾಗ ಜನತಾ ಬಜಾರ್ ಮುಂದೆ ನಿಂತಿದ್ದ ವೇಶ್ಯೆಯೊಬ್ಬಳನ್ನು ಮಫ್ತಿಯಲ್ಲಿದ್ದ ಪೊಲೀಸ್ ಗಬಕ್ಕನೆ ಹಿಡಿದುಕೊಂಡಿದ್ದ. ಅವಳು ಒದ್ದಾಡುತ್ತಿದ್ದಳು. ನನಗೆ ಅಯ್ಯೋ ಅನ್ನಿಸಿ ಆಕೆಯನ್ನು ಬಿಡುವಂತೆ ಹೇಳಿದ್ದೆ. ಆತ ” ನೀವ್ಯಾರು ಹೋಗ್ರಿ ಕೇಳೋಕೆ ..” ಎಂದಿದ್ದ. ಆ ಟೈಮಿನಲ್ಲಿ ನಮ್ಮೂರಿನ ಜ್ಯೋತಿ ಪ್ರಕಾಶ್ ಮಿರ್ಜಿಯವರು ಬೆಂಗಳೂರಿನ ಪೊಲೀಸ್ ಕಮಿಷನರ್ ಆಗಿದ್ದರು. ನಾನು ಮತ್ತು ನಮ್ಮ ಇಲಾಖೆಯಲ್ಲಿ ಸಹೋದ್ಯೋಗಿಯಾಗಿದ್ದ ನಮ್ಮೂರಿನ ನರಸೇಗೌಡರು ವಾರದ ಹಿಂದೆ ತಾನೇ ಮಿರ್ಜಿಯವರನ್ನು ಮಾತನಾಡಿಸಿಕೊಂಡು ಬಂದಿದ್ದೆವು. ನಾನು ” ರೀ ನಿಮ್ಮ ಕಮಿಷನರ್ ನಮ್ಮೂರ್ನೋರೆ, ಮಾಡ್ಲ ಪೋನ್ ಈಗ್ಲೆ…” ಎಂದು ಮೊಬೈಲ್ ತೆಗೆದಿದ್ದೆ. ಆತ ಅವಳನ್ನು ಬಿಟ್ಟ ತಕ್ಷಣ ಅವಳು ಸಾಗರ್ ಟಾಕೀಸ್ ಕಡೆ ಓಡಿಹೋಗಿದ್ದಳು. ಆತ ” ಏನ್ಮಾಡೋದು ಸಾರ್ ನಮ್ಗೂ ಅಯ್ಯೋ ಅನ್ನಿಸ್ತೈತೆ ಪಾಪ. ತುಂಬಾ ಕಾಟ ಆಗೋಗೈತೆ ಇಲ್ಲಿ. ನಮ್ಮ ಇನ್ಸ್ಪೆಕ್ಟ್ರು ಬೇರೆ ನಮ್ಮೇಲೆ ಬೀಳ್ತಾರೆ …” ಎಂದು ತ್ರಿವೇಣಿ ಟಾಕೀಸಿನವರೆಗೂ ಮಾತನಾಡಿಕೊಂಡು ಬಂದಿದ್ದ.


  • ಕೇಶವ ರೆಡ್ಡಿ ಹಂದ್ರಾಳ  (ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW