” ಅಮ್ಮ‌ ಸಿಕ್ಕಿದ್ಲು “ಬೆಳಗೆರೆಯ ಸ್ಟ್ರೆಂತು ಓದುಗರ ವೀಕ್‌ನೆಸ್ಸು…..!

ಅಮ್ಮ‌ಸಿಕ್ಕಿದ್ಲು ಪುಸ್ತಕ ರವಿ ಬೆಳಗೆರೆ ಅವಸರದಲ್ಲಿ ಬಡಿಸಿದ ಅಡಿಗೆಯಾದರೂ, ಏನೇ ಪದಾರ್ಥಗಳು ಮಿಸ್ ಆದರೂ ಅಮ್ಮನ ಕೈರುಚಿಯಲ್ಲಿ ತಯಾರಾಗಿ ರುಚಿಸುವ ಅಡಿಗೆಯಂತೆ ಬೆಳಗೆರೆಯ ಅಭಿಮಾನಿಗಳಿಗೆ ಇದು ಸವಿ ಸವಿ ಕಿಕ್ ಕೊಡಬಲ್ಲದು ! – ಹಿರಿಯೂರು ಪ್ರಕಾಶ್, ಮುಂದೆ ಓದಿ…

ಪುಸ್ತಕ : ಅಮ್ಮ‌ಸಿಕ್ಕಿದ್ಲು
ಲೇಖಕರು : ರವಿ ಬೆಳಗೆರೆ
ಪ್ರಕಾಶನ : ಭಾವನಾ ಪ್ರಕಾಶನ

ಹತ್ತು ಪರ್ಸೆಂಟ್ ವೈಯಕ್ತಿಕ ವಿಚಾರಗಳಿಗೆ ತೊಂಭತ್ತು ಪರ್ಸೆಂಟ್ ಬಣ್ಣ ಬಣ್ಣದ ಫ಼್ಯಾಂಟಸಿ ಸೀನುಗಳನ್ನು ಬೊಂಬಾಟಾಗಿ ಜೋಡಿಸಿ ಅದರ ಸುತ್ತ ಕುಡಿತ, ಕುಸ್ತಿ , ಕಲ್ಪನೆ, ಕನಸು, ಸೆಕ್ಸು, ಲವ್ವು, ಫ಼ೈಟಿಂಗು, ಭಾವುಕತೆ ಇವೇ ಮುಂತಾದ ಆಸಕ್ತಿದಾಯಕ ಮೆಲೋಡ್ರಾಮಾದ ಸರಕುಗಳನ್ನು ಫ಼್ಲಾಷ್ ಬ್ಯಾಕ್ ರೀತಿಯಲ್ಲಿ ಕೂಡಿಸಿ ಬರೋಬ್ಬರಿ ತೊಂಭತ್ನಾಲ್ಕು ಪುಟಗಳಲ್ಲಿ ಕೇವಲ ಐದೇ ದಿನದಲ್ಲಿ ಸರಾಗವಾಗಿ ಬರೆದು ಓದುಗರ ತಲೆಯೊಳಗೆ ಇಳಿಸುವಂತಹ ಕಲೆ ಇದ್ದದ್ದು ರವಿಬೆಳಗೆರೆ ಎಂಬ ಅಕ್ಷರಮೋಡಿಗಾರನಿಗೆ ಮಾತ್ರವೇನೋ….. !

ಈ ಮೋಡಿ ಗಾರುಡಿಗನ ಲೇಖನಿಯ ಮೂಸೆಯಲ್ಲಿ ಅರಳಿದ್ದೇ…..”ಅಮ್ಮ ಸಿಕ್ಕಿದ್ಲು” ..ಎಂಬ ಅವರ ವೈಯಕ್ತಿಕ ಬದುಕಿನ ತರಾವರಿ ತವಕಗಳ ಸಿನಿಮೀಯ‌ ಕಥಾಗುಚ್ಛ.!

ರವಿ ಬೆಳಗೆರೆಯ ಯಾವುದೇ ಕಾದಂಬರಿ, ಕಥನ ಅಥವಾ ಬರಹ ಓದಿದರೂ ಅದು ನಿಮ್ಮನ್ನು ಬೇರೆಯದೇ ಆದ ಲೋಕಕ್ಕೆ ಅನಾಮತ್ತು ಸೆಳೆದುಬಿಡುತ್ತದೆ. ಆ‌ ಲೋಕ ನಿಜವೇ ಆಗಬೇಕಿಲ್ಲ, ಅಲ್ಲಿರುವುದು ಭ್ರಮಾಲೋಕವಷ್ಟೇ ಅಲ್ಲ ಅಥವಾ ಅದನ್ನು ರೀಲುಗಳ ಸುತ್ತುವಿಕೆ ಎಂದುಕೊಂಡರೂ ಪರವಾಗಿಲ್ಲ . ಅಸಲಿಗೆ ನೀವು ಓದುತ್ತಿರುವುದರಲ್ಲಿ ಮುಕ್ಕಾಲುವಾಸಿ ವಾಸ್ತವತೆಗೆ ದೂರವಿರುವ ಅಂಶಗಳೇ ಇದ್ದರೂ ಅವುಗಳನ್ನು ಅವಾಸ್ತವ ಎನ್ನಲು ಮನಸು ಬಾರದು, ಒಂದೊಮ್ಮೆ ಅವರು ಹೇಳಿಕೊಳ್ಳುವುದರಲ್ಲಿ ಸುಳ್ಳುಗಳೇ ತುಂಬಿದ್ದರೂ ಅದನ್ನು ತೀರಾ ಹಸಿ ಸುಳ್ಳುಗಳು ಎನ್ನಲು ನಿಮ್ಮ ನಾಲಿಗೆ ಹೊರಳಲ್ಲ, ಆತ್ಮರತಿಯ ವೈಭವೀಕರಣವೇ ಅಲ್ಲಿ ಮೈವೆತ್ತಂತಿದ್ದರೂ ಅದನ್ನು ಹಾಗೆಂದುಕೊಳ್ಳಲು ಓದುಗರ ಮತಿ ಒಪ್ಪದು, ಅಸಹಜತೆಯ ಅಪಸವ್ಯಗಳು ಅಲ್ಲಲ್ಲಿ ಅಮರಿಕೊಂಡಿದ್ದರೂ ಅದನ್ನು ಅನರ್ಥಕಾರಿ ಎನ್ನಲು ಮನಕ್ಕೆ ಆಗದು. ಇದು ಅವರ ಬರಹದ ಶೈಲಿಗಿರುವ ತಾಕತ್ತೋ, ಕರಾಮತ್ತೋ , ಅಥವಾ ಓದುಗರು ಅವರ ಮೇಲಿಟ್ಟಿರುವ ಅಭಿಮಾನದ ಅಸಲೀಯತ್ತೋ ಗೊತ್ತಿಲ್ಲ ಕಣ್ರೀ…! ಅಂತೂ ಎವೆಯಿಕ್ಕದೇ ಬೆಳಗೆರೆಯ ಬರಹವನ್ನು ಓದುತ್ತಾ ಹೋಗ್ತೀವಿ.

ಈ ಕೃತಿಯಲ್ಲಿ ರವಿಬೆಳಗೆರೆಯ ಕುಡಿತದ ಚಟವನ್ನೂ ಸಹ್ಯವೆನಿಸಬಲ್ಲ, ಸುಂದರವೆನಿಸಬಲ್ಲ ಸುಧೀರ್ಘ ವಿವರಣೆಯಿದೆ. ಕುಡಿತದ ಚಟಕ್ಕೂ ಇಷ್ಟೆಲ್ಲಾ ಬಿಲ್ಡಪ್ ಗಳಿವೆಯೆಂಬುದು ನಿಮಗೆ ಗೊತ್ತಾಗೋದೇ ಈ ತರಹದ ಕಣ್ಣಿಗೆ‌ಕಟ್ಟುವ ನಿರೂಣೆಯಿಂದ. ಇಡೀ ಕಾದಂಬರಿಯ ಮುಖ್ಯ ಹೂರಣವೇ ಕಥಾನಾಯಕನ ಬಿಡಲಾಗದ ಕುಡಿತದ ಚಟ ಮತ್ತು ಅದರಿಂದ ಆತನ ಮೇಲಾದ ಪರಿಣಾಮ , ಹಾಗೂ ಅದನ್ನು ಕೊನೆಯಲ್ಲಿ ಅಮ್ಮನ ಪ್ರಭಾವದಿಂದ ಬಿಟ್ಟೆನೆಂದು ಸಾಧಿಸಿ, ತನ್ನ ಕ್ಷೇತ್ರದ ಸಾಧನೆಗೆ ಮುಖ ಮಾಡುವ ಹಂತದೊಳಗೆ ಅನಾವರಣವಾಗುವ ಅವರ ಸ್ವವಿವರಗಳ ಸಕತ್ ಹೀರೋಯಿಸಮ್ಮು…!

ಕುಡಿತದ ಕಾರಣಕ್ಕಾಗಿ ಹೆಂಡತಿ ಸುಮ್ಮಿ ಮತ್ತು ಮಗ ರಾಘು ತನ್ನನ್ನು‌ ಬಿಟ್ಟು ದೂರ ಹೋದಾಗ ಆತ್ಮಹತ್ಯೆಗೆ ಶರಣಾಗಬೇಕೆಂದು ತೀರ್ಮಾನಿಸುವ ನಮ್ಮ ಹೀರೋನ ಮನಸು ಅದೇಕೋ ಕೊನೆ ಘಳಿಗೆಯಲ್ಲಿ ಬಳ್ಳಾರಿಯತ್ತ ಮುಖ ಮಾಡುತ್ತದೆ. ಬಾಟಲ್ ಗಟ್ಟಲೆ ಕುಡಿದು ರಾತ್ರಿಯಿಡೀ ಬೈಕಿನಲ್ಲಿ ಬಳ್ಳಾರಿ ಹಾದಿಯಲ್ಲಿ ಪಯಣಿಸುವ ಮೂಲಕ ತನ್ನ ಕುಡಿತದ ತಾಕತ್ತು ಎಂಥಾದ್ದೆಂದು ಬೆಳಗೆರೆ ಬೆಳಗಿಸಿದ್ದಾರೆ. ಕುಡಿದು ಬೈಕ್ ಓಡಿಸಿ ಬಳ್ಳಾರಿಯ ಮೋತಿ ಸರ್ಕಲ್ ಬಳಿ ಎದುರಿಗೆ ಬಂದ ಲಾರಿಗೆ ಬೇಕಾಗಿಯೇ ಡಿಕ್ಕಿ ಹೊಡೆದರೂ ಬಚಾವಾಗುವ ಬೆಳಗೆರೆಯ ಅದ್ಭುತ ಪವಾಡ ಯಾವ ಸೂಪರ್ ಮ್ಯಾನ್ ಗೂ ಕಡಿಮೆಯಿಲ್ಲ. ಅಲ್ಲಿಂದ ಅಪಘಾತವಾದ ಬೈಕಿನಲ್ಲೇ ತನ್ನ ಮನೆಗೆ ಹೋಗಿ ಸೊಗಸಾದ ಕಲ್ಪನೆಯಲ್ಲಿಯೇ ಅಮ್ಮನ ಆದರಾತಿಥ್ಯದ ಸವಿಯನ್ನುಂಡು ಅವಳ ಪ್ರೀತಿ, ವಾತ್ಸಲ್ಯ, ವೈವಾಹಿಕ ಜೀವನ, ಬಿಟ್ಟು ಹೋದ ದುಡ್ಡಿನ ದುರಾಸೆಯ ಗರಡಿಮನೆಯ ಗಂಡ, ಮಗನನ್ನು ಚೆನ್ನಾಗಿ ಓದಿಸಬೇಕೆಂಬ ಹಠ, ಅದಕ್ಕಾಗಿ ಅವರಿವರ ಮನೆಕೆಲಸ ಮಾಡಿ ಸಲಹಿದ ತಾಯಿಯ ಮಮತೆ, ಯಾರೇನೇ ತಪ್ಪು ಮಾಡಿದರೂ ಅವೆಲ್ಲವನ್ನೂ ಮರೆತು ಧೈರ್ಯವಾಗಿ ಜೀವನ ಸಾಗಿಸುವ ಅವಳ ಛಲ..ಇವೆಲ್ಲದರ ಸಂಕೇತವಾದ ಅಮ್ಮನ ತೋಳ್ತೆಕ್ಕೆಯ ಮಾತೃ ಪ್ರೇಮವನ್ನು ಅಸ್ವಾದಿಸಿ ಕೊನೆಗೆ ಆತ್ಮಹತ್ಯೆಯ ಯೋಚನೆಯನ್ನೇ ಬಿಡುವ ಹಂತಕ್ಕೆ ಬರುವಲ್ಲಿ ಅನೇಕ ಘಟನೆಗಳ ಫ಼್ಲಾಷ್‌ಬ್ಯಾಕ್ ನಿಮ್ಮ ಚಿತ್ತವನ್ನು ಕಲಕಿಬಿಡುತ್ತದೆ.

ಈ ಒಟ್ಟು ಕಥೆಯಲ್ಲಿ‌ ಬಂದು ಹೋಗುವ ಸನ್ನಿವೇಶಗಳು ಯಾವ ಕಮರ್ಷಿಯಲ್ ಸಿನಿಮಾಗೂ ಕಡಿಮೆಯಿಲ್ಲದೇ ಬೆಳಗೆರೆಯ ಸ್ವಯಂ ವೈಭವೀಕರಣಕ್ಕೆ ಅದ್ಭುತವಾಗಿ ಸಾಥ್ ನೀಡಿವೆ. ಅಷ್ಟೇ ಅಲ್ಲ… ಇವೆಲ್ಲವನ್ನೂ ಸುಂದರವಾಗಿ ಹೆಣೆದ ರೀಲ್ ಗಳು ಎಂದು‌ ಕ್ಷಣಕಾಲ ಅನಿಸಿದರೂ ಹಾಗೆಂದು ನೀವು ಭಾವಿಸಲಿಕ್ಕೆ‌ ಅವಕಾಶ ಕೊಡದೆಯೇ ಬೆಳಗೆರೆಯ ಬರವಣಿಗೆಯ ಶೈಲಿ ನಿಮ್ಮನ್ನು ಮೆಸ್ಮರೈಸ್ ಮಾಡಿಬಿಡುತ್ತದೆ.

ಹೀಗಾಗಿಯೇ ಎರಡೆರೆಡು ಫ಼ುಲ್ ಬಾಟಲ್ ಕುಡಿದು ಸರಿರಾತ್ರಿಯಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಮುನ್ನೂರ ಏಳು ಕಿ.ಮಿ ಬೈಕ್ ಓಡಿಸುವ ಬೆಳಗೆರೆಯ ಚಿತ್ ಆಗದ ತಾಕತ್ತು, ಗರಡಿಮನೆಯಲ್ಲಿ ತಾನೆಂತಹ ದೇಹದಾರ್ಢ್ಯ ಹೊಂದಿದ್ದೆ ಎಂಬುದರ ಗತ್ತು , ತನ್ನ ಅಮ್ಮನ ಬಗೆಗೆ ವ್ಯತ್ಯಾಸವಾಗಿ ಏನೋ ಅಂದರು ಎಂದು ವೈದ್ಯನೊಬ್ಬನನ್ನು ಮತ್ತು ಗೆಳೆಯರನ್ನೇ ಹಿಗ್ಗಾಮುಗ್ಗ ಥಳಿಸಿದ ಹೀರೋ ಶೈಲಿಯ ಗೈರತ್ತು, ತನ್ನ ವೃತ್ತಿಯ ಇಂಟಲಿಜೆನ್ಸ್ ಬಗೆಗಿನ ಆತ್ಮಪ್ರಶಂಸೆಯ ಅಸಲೀಯತ್ತು….. ಇತ್ಯಾದಿಗಳೆಲ್ಲದರ ಬಿಲ್ಡಪ್ಪು ಹಾಗೂ ಅತಿರಂಜಿತ ವರ್ಣನೆಗಳು ಆತ್ಮರತಿಯ ಉತ್ತುಂಗ ತಲುಪಿದರೂ ನಿಮ್ಮ ಆತ್ಮವನ್ನು ಟಚ್ ಮಾಡದೇ ಇರದು.

ತಥಾಕಥಿತ ಅಮ್ಮನ‌ ಭಾವುಕತೆಯ ಕತೆಗಿಂತ ಬಳ್ಳಾರಿಯ ತನ್ನ‌ ವೈಯಕ್ತಿಕ ಬದುಕಿನ ತಳಮಟ್ಟದಿಂದ ಬೆಂಗಳೂರಿನ ಪತ್ರಿಕೋದ್ಯಮದ ಎತ್ತರದ ಸ್ಥಾನಕ್ಕೆ ಏರಿದ್ದರ ವರ್ಣರಂಜಿತ ಬಗೆಯ ಬೆಳಗೆರೆ ಶೈಲಿಯ ನಿರೂಪಣೆ ಇಡೀ ಪುಸ್ತಕವನ್ನು ಆವರಿಸಿಕೊಂಡಿದೆ.

ಚಳ್ಳಕೆರೆಯ ಸರ್ಕಲ್ ನಲ್ಲಿ‌ದ್ದ ಹುಚ್ಚಿಯೊಬ್ಬಳಿಗೆ

” ಅಮ್ಮ‌ಸಿಕ್ಕಿದ್ಲು ” ಅಂತ ಹೇಳಬೇಕಿತ್ತು…. ಎಂದು ಕಾದಂಬರಿಯ ಕೊನೆಯಲ್ಲಿ ಅವಲತ್ತುಕೊಳ್ಳುವ ಬೆಳಗೆರೆಯ ಆ ಎರಡು ಸಾಲುಗಳೇ ಇಡೀ ಪುಸ್ತಕದ ಹೂರಣದಂತೆ , ಸೌಂಡು ಮಾಡುವ ಸಂಕೇತದಂತೆ ಸಾದರಪಡಿಸುತ್ತದೆ.

ಒಟ್ಟಾರೆ…..ಇದು ರವಿ ಬೆಳಗೆರೆ ಅವಸರದಲ್ಲಿ ಬಡಿಸಿದ ಅಡಿಗೆಯಾದರೂ, ಏನೇ ಪದಾರ್ಥಗಳು ಮಿಸ್ ಆದರೂ ಅಮ್ಮನ ಕೈರುಚಿಯಲ್ಲಿ ತಯಾರಾಗಿ ರುಚಿಸುವ ಅಡಿಗೆಯಂತೆ ಬೆಳಗೆರೆಯ ಅಭಿಮಾನಿಗಳಿಗೆ ಇದು ಸವಿ ಸವಿ ಕಿಕ್ ಕೊಡಬಲ್ಲದು !

** ಮರೆಯುವ ಮುನ್ನ **

ರವಿ ಬೆಳಗೆರೆಯವರ “ಮಾಂಡೋವಿ”, “ಹೇಳಿ ಹೋಗು ಕಾರಣ ” ಆದಮೇಲೆ ನಾನು ಓದಿದ ಮೂರನೇ ಕಾದಂಬರಿ “ಅಮ್ಮ ಸಿಕ್ಕಿದ್ಲು” . ಬೆಳಗೆರೆಯವರ ಇತರೆ ಕೃತಿಗಳಲ್ಲಿ ಸಾಮಾನ್ಯವಾಗಿ ಸಿಗುವ ಪಂಚ್ ಹಾಗೂ ಕಿಕ್ ಇಲ್ಲಿ ಕಣ್ಮರೆಯಾಗಿದ್ದರೂ ಅವರ ಬರಹಗಳನ್ನು ಆರಾಧಿಸುವವರಿಗೆ ಅವರ ವೈಯಕ್ತಿಕ ಬದುಕಿನ ಎಲ್ಲಾ ತಪರಾಕಿ- ತುಪಾಕಿಗಳು‌ ಗೊತ್ತಿದ್ದೂ ಎಂಜಾಯ್ ಮಾಡುವವರಿಗೆ ಇದು ನಿರಾಶೆ ಮಾಡೋಲ್ಲ. ಏಕೆಂದರೆ ರವಿಬೆಳಗೆರೆ ಎಂದರೆ “ಆತ್ಮರತಿಯ‌ ಅಂತಃಪುರದ ನವಾಬ”ನಂತೆ ಎಂಬುದನ್ನು ಅರಿತೂ ಅವರನ್ನು ಕನ್ನಡಿಗರು ಕೈಹಿಡಿದು ಮೆಚ್ಚಿಕೊಂಡಿದ್ದಾರೆಂದರೆ ಅದು ಅವರ ಬರಹಕ್ಕೆ ಸಂದ ಮನ್ನಣೆ.

ಅಮ್ಮನ ಹೆಸರಿನ ಈ ಕೃತಿಯನ್ನು ಅಮ್ಮನ ಮೇಲಿನ ಸೆಂಟಿಮೆಂಟು, ಅಟ್ಯಾಚ್ ಮೆಂಟು, ಕಮಿಟ್ ಮೆಂಟುಗಳನ್ನು ಹೆಚ್ಚಿಗೆ ಫ಼ೋಕಸ್ ಮಾಡಿ ಬರೆದಿದ್ದಲ್ಲಿ ಬಹುಶಃ ಅದೊಂದು ಬೆಳಗೆರೆಯ ಕಥಾಗುಚ್ಛದ ಅದ್ಭುತ ಕೃತಿಯಾಗಿರುತ್ತಿತ್ತೇನೋ ! ಆದರೆ ಅಮ್ಮನ ಭಾವುಕತೆಗಿಂತಲೂ ರವಿಯ ವೈಯಕ್ತಿಕ ಬದುಕಿನ ಉತ್ಪ್ರೇಕ್ಷಿತ ವೈಭವೀಕರಣಕ್ಕೆ ಹೀರೋಯಿಸಮ್ಮಿಗೆ ಹೆಚ್ಚು ಒತ್ತು ನೀಡಿರುವುದ ರಿಂದ ಕೃತಿಯ ಸಾರಕ್ಕೆ ಅಲ್ಲಲ್ಲಿ ಗರ ಬಡಿದು ಅದು ಕೆಲವೊಮ್ಮೆ ಅತಿಸಾರವಾಗಿ ಬಿಡುತ್ತದೆ. ಆದರೆ ರವಿಬೆಳಗೆರೆಯ ಬಳ್ಳಾರಿ ಘಾಟು ಸವಿದವರಿಗೆ ಇದೊಂದು ಡಿಫ಼ೆಕ್ಟು ಅಂತ ಅನಿಸೋದೇ ಇಲ್ಲ….

ಏಕೆಂದರೆ ಅದೇ ಅವರ ಸ್ಟ್ರೆಂತು ಹಾಗೂ ಅವರ ಓದುಗರ ವೀಕ್ ನೆಸ್ಸು !!

ಲಾಸ್ಟ್ ಪಂಚ್ :

ನಿಮ್ಮ ಭಾವುಕತೆಯ ಜೀವನದ ಮಹಲನ್ನು ಮತ್ತೊಬ್ಬರ ದೌರ್ಬಲ್ಯಗಳ ಕಟ್ಟಡಗಳ ಮೇಲೆ ಕಟ್ಟಬೇಡಿ.


  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು) , ಹಿರಿಯೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW