ಹೃದಯ ತೆರೆದ ಶಸ್ತ್ರ ಚಿಕಿತ್ಸೆಯ ನಂತರ ಸುಮಾರು ಒಂದೂವರೆ ವರ್ಷ ಮನೆ ಬಿಟ್ಟು ಹೊರಗೆ ಹೂಗುವುದನ್ನೆ ನಿಲ್ಲಿಸಿದ್ದೆ. ಆದರೆ ಬಹುದಿನಗಳ ನಂತರ ತಂಗಿಯ ಮನೆಯಲ್ಲಿ ನಡೆದ ಸಮಾರಂಭಕ್ಕೆ ಹೋದಾಗ ಅದೊಂದು ಮರೆಯಲಾರದ ಸಮಾರಂಭ ನನಗಾಗಿತ್ತು -ಶಕುಂತಲಾ ಶ್ರೀಧರ, ಅವರ ಭಾವನಾತ್ಮಕ ಬರಹ ಓದುಗರ ಮುಂದಿದೆ, ಮುಂದೆ ಓದಿ…
ಸುಮಾರು ಒಂದೂವರೆ ವರ್ಷ ಮನೆ ಬಿಟ್ಟು ಹೊರಗೆ ಹೂಗುವುದನ್ನೆ ನಿಲ್ಲಿಸಿದ್ದೆ. ವರ್ಷದ ಹಿಂದೆ, ಹೃದಯ ತೆರೆದ ಶಸ್ತ್ರ ಚಿಕಿತ್ಸೆಯ ಎರಡು ತಿಂಗಳ ನಂತರ ಒಂದು ಸಣ್ಣ ವಾಕಿಂಗ್ ಅಂಥ ಮನೆಯಿಂದ ಹೊರಬಿದ್ದಿದ್ದೆ. ಮೂರೇ ದಿನದಲ್ಲಿ ನ್ಯೂಮೋನೀಯ ಆಗಿ ಒಂದು ವಾರ ICU ಗೆ ಸೇರಬೇಕಾಯಿತು. ಆರು ತಿಂಗಳ ನಂತರ ಒಮೈಕ್ರೋನ್ ( ಕೋವಿಡ್ ನ mutant) ತಲೆಯೆತ್ತಿದ್ದಾಗ ಮತೊಮ್ಮೆ ನಾನು ಬಲಿ ಪಶುವಾಗಿ ಒಂದು ವಾರ ICU. ಇವುಗಳ ಪರಿಣಾಮ ನಾನೆರೆಡು ಕಠಿಣ ನಿರ್ಧಾರಗಳನ್ನು ಮಾಡಿದೆ. ಒಂದು ಮನೆ ಬಿಟ್ಟು ಎಲ್ಲಿಯೂ ಹೋಗದಿರುವುದು. ಎರಡು ಊಟ ತಿಂಡಿ ಬಗ್ಗೆ ಹೆಚ್ಚು ಎಚ್ಚರವಾಗಿರುವುದು. ಆದರೆ ಆರು ಜನ ತಮ್ಮ, ತಂಗಿಯರ ದೊಡ್ಡ ಕುಟುಂಬದ ಹಿರಿಯಕ್ಕಳಾಗಿ ಕುಟುಂಬದ ಮದುವೆ, ಇತರೆ ಮಂಗಳ ಕಾರ್ಯಗಳಿಂದ ದೂರವಿರುವುದು ಸ್ವಲ್ಪ ಕಷ್ಟಕರ.ಆದ್ದರಿಂದ ಅಲ್ಲೊಂದು ಇಲ್ಲೊಂದು ತುಂಬಾ ಪ್ರಮುಖವಾದ ಸಮಾರಂಭಗಳಿಗೆ ಹೋಗಲೇಬೇಕಾಯಿತು. ಹಾಗೊಂದು ಅಪರೂಪದ, ಮರೆಯಲಾರದ ಸಮಾರಂಭವೆಂದರೆ ಮೊನ್ನೆ ನಾನು ಭಾಗವಹಿಸಿದ್ದ ನನ್ನ ತಂಗಿ ಕಸ್ತೂರಿ ಮತ್ತು ಆಕೆಯ ಪತಿ ನಂಜುಂಡಯ್ಯ ಅವರ ತೋಟದ ಮನೆಯಲ್ಲಿ ಕಟ್ಟಿಸಿದ್ದ ನವ ನವೀನ ಮದುವೆ ಮಂಟಪದಲ್ಲಿ ಮಾಡಿದ ಹೋಮ. ಮಗಳು ರಜಾ ಹಾಕಿ ಕಾರಲ್ಲಿ ಕರೆದೋಯ್ಯುವುದಾಗಿ ಒಪ್ಪಿಕೊಂಡಳು.
ತೋಟದ ಮನೆ ಇರುವುದು ನಂದಿ ಬೆಟ್ಟದ ಕಣಿವೆಯಲ್ಲಿ. ಸುಮಾರು ಹತ್ತು ಎಕರೆ ಪ್ರದೇಶದ ಮಧ್ಯೆ ಎಲ್ಲ ಅಧುನಿಕ ಸೌಕರ್ಯಗಳಿರುವ ತೊಟ್ಟಿ ಮನೆ. ಅಕ್ಕ ಪಕ್ಕ ಮೋಹಕ ಗುಲಾಬಿ ತೋಟ.ಮನೆಯ ಮುಂದೆ ಇಕ್ಕೆಲಗಳಲ್ಲಿ ಕಣ್ತಣಿಸುವ ಹಚ್ಚ ಹಸಿರು ಹುಲ್ಲುಗವಾಲು. ಒಂದು ಕಡೆ ಹುಲ್ಲಿನ ಮೂಲೆಯಲ್ಲೊಂದು ಉಯ್ಯಾಲೆ. ಉಳಿದಿದ್ದ ನೆಲದಲ್ಲಿ ಬಗೆಬಗೆಯ ಮಾವು. ಮನೆಗೆ ಅನ್ವರ್ಥವಾಗಿ “ಕಣಿವೆ ಮನೆ ” ಅಂಥ ಹೆಸರು. ತೋಟದ ಈಶಾನ್ಯಕ್ಕೆ ಕಲ್ಯಾಣ ಮಂಟಪ. ಸಧ್ಯಕ್ಕೆ ಮೂರು ಬದಿ ಗೋಡೆಗಳಿರುವ ಒಂದು ದೊಡ್ಡ ಹಾಲ್, ಒಂದಾರು ರೂಮುಗಳು ಸಿದ್ದವಾಗಿವೆ. ಶ್ರಾವಣದಲ್ಲಿ ಪೂಜೆ ಮಾಡಿದರೆ ಶುಭವೆಂದು ಹೋಮ, ಪೂಜೆ, ಪೂರ್ ನಾಹುತಿ ಎಲ್ಲ ಇಟ್ಟುಕೊಂಡಿದ್ದರು. ಕರೆದಿದ್ದು ಕೇವಲ ಕೆಲವೇ ಮಂದಿಯನ್ನ. ನಾನು, ನನ್ನ ತಂಗಿಯರಾದ ವಿಜಯ, ಜಯ, ರಾಣಿ ಸತೀಶ್ ಮತ್ತವರ ಪತಿ, ನಂಜುಂಡಯ್ಯನವರ ಸಂಬಂಧಿಕರಾದ ಇಬ್ಬರು ದಂಪತಿಗಳು.
ಬೆಳಿಗ್ಗೆ ಎಂಟು ಗಂಟೆಗೆ ನಮ್ಮ ಕಾರಿನಲ್ಲಿ ನಾನು, ಮಗಳು ರಂಜಿನಿ ಮತ್ತು ತಂಗಿ ಜಯ ಹೊರೆಟೆವು. ಹೊರಟಿದ್ದು ಯಾವುದೋ ಕೆಟ್ಟ ಗಳಿಗೆಯಿರಬೇಕು. ಮಗಳು ರೇಡಿಯೋದಲ್ಲಿ ಚಿತ್ರ ಗೀತೆ ಹಾಕೋಕೆ ಹೋದವಳನ್ನು ತಡೆದು ಪ್ರಯಾಣದ ಆರಂಭದಲ್ಲಿ ದೇವರ ನಾಮ, ” ಐ ಗಿರಿ ನಂದಿನಿ… ” ಹಾಕಿಸಿದೆ. ಸುಮಾರು ಒಂದೂವರೆ ಗಂಟೆಯ ಹಾದಿ. ಬೆಂಗಳೂರು- ದೇವನಹಳ್ಳಿ- ಮೇಳೆಕೋಟೆ- ಚಿಕ್ಕರಾಯಪ್ಪನಹಳ್ಳಿ – ಕಣಿವೆಮನೆ : ಇದು ಹಾದಿ. ಇಡ್ಲಿ, ಚಟ್ನಿ, ಸಾಂಬಾರ್, ಕೇಸರಿ ಬಾತ್, ವಾಂಗಿ ಬಾತ್, ಕಾಫೀ/ ಟೀ ರೆಡಿ ಇರುತ್ತೆ. ಸುಮ್ಮನೆ ಕಾಫೀ ಕುಡುಕೊಂಡು ಬಂದ್ಬಿಡಿ ಎಂದಿದ್ದರು. ಸರಿ, ಆರಾಮವಾಗಿ ಎದ್ದು ಕಾಫೀ ಕುಡಿದು ಹೊರೆಟೆವು.
ಬೆಂಗಳೂರಿನಿಂದ ಹೊರಟು ಯಲಹಂಕದ ನಂತರ ನಾನು ಹೆಚ್ಚು ಕಡಿಮೆ ನಾಲ್ಕು ವರ್ಷದ ನಂತರ ಪ್ರಯಾಣಿಸುತ್ತಿದ್ದರೆ ಸವೆಸುತ್ತಿದ್ದ ರಸ್ತೆಯ ಅಗಲ, ಅಚ್ಚುಕಟ್ಟಾದ, ಕೆಲವು ಕಡೆ two way, ಕೆಲವು ಕಡೆ four way ರಸ್ತೆಗಳು, ಸುಮಾರು ಪ್ರಪಂಚ ಸುತ್ತಿರುವ ನನಗೆ ಬೆಂಗಳೂರಿನ ಪ್ರಗತಿಯ ಬಗ್ಗೆ ಹೆಮ್ಮೆಯನ್ನುಂಟು ಮಾಡಿದವು. ದೇವನಹಳ್ಳಿ ದಾಟಿ ನಂದಿ ಕ್ರಾಸ್ ಗೆ ಎಡಕ್ಕೆ ತಿರುಗಿದರೆ ಅದೊಂದು ಬೇರೆಯದೇ ಪ್ರಪಂಚ. ಒಂಮ್ಮುಖವಾದ ಮಧ್ಯಮ ಅಗಲದ, ಕೆಟ್ಟ ರಸ್ತೆ. ನೀವು ರಸ್ತೆ ಕಡೆ ಗಮನ ಕೊಡದೆ ಅಕ್ಕ ಪಕ್ಕದ ಹೊಲಗಳನ್ನು ನೋಡಿದರೆ, ಭೂಮಿ ತಾಯಿ, ಸುಧೀರ್ಗ ಮಳೆಯ ನಂತರ, ಮೈತೊಳೆದುಕೊಂಡು, ಹರಿದ್ವರಣದಿಂದ ಕಂಗೊಳಿಸುತ್ತಿದ್ದಳು. ಆ ದೃಶ್ಯ ಕಣ್ಣಿಗೆ ಹಬ್ಬ.ಅದಕ್ಕೆ ದೃಷ್ಟಿ ಬೊಟ್ಟು ಇಟ್ಟಂತೆ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಕಟ್ಟುತಿದ್ದ ಅಂಗಡಿಯ ಸಾಲುಗಳು. ಇನ್ನು ಕೆಲವೇ ವರ್ಷಗಳಲ್ಲಿ ಇಡೀ ನಂದಿ ಬೆಟ್ಟದ ರಸ್ತೆಯೇ ಅಂಗಡಿಗಳ, ಹೋಟೆಲ್ಲುಗಳ ಸಾಲಿನಿಂದ ತುಂಬಿ ಹೋಗಬಹುದೇನೋ. ನOದಿ ಬೆಟ್ಟದ ಬುಡದಿಂದ ಎಡಕ್ಕೆ ತಿರುಗಿ ಸೀದ ಹೋದರೆ ಮೆಳೇಕೋಟೆ. ಸುತ್ತಮುತ್ತಲ ಹಳ್ಳಿಗಳಿಗೆ ಒಂದು ದೊಡ್ಡದಾದ ಊರು. ಅಲ್ಲಿಂದ ಬಲಕ್ಕೆ ತಿರುಗಿದರೆ 2 ಕಿಲೋಮೀಟರು ಆದ ಮೇಲೆ ದೊಡ್ಡರಾಯಪ್ಪನಹಳ್ಳಿ, ಅದಾದ ಮೇಲೆ ಚಿಕ್ರಾಯಪ್ಪನಹಳ್ಳಿ.
ಇಲ್ಲಿಯವರೆಗೆ ನಾವು ಯಾವುದೇ ಯೋಚನೆ ಮಾಡದೆ ಸುತ್ತ ಮುತ್ತಿನ ಹಸಿರು ಹೊನ್ನನ್ನ ಕಣ್ಣುತುಂಬಿಸಿಕೊಂಡು. ಹರಟೆಕೊಚ್ಚಿಕೊಂಡು, ಲೊಕೇಶನ್ ಗೂಗಲ್ ಮ್ಯಾಪಿಗೆ ಹಾಕಿ ಹಾಯಾಗಿ ಬಂದೆವು. ಮಾತಿನ ಭರದಲ್ಲಿ ಹಳ್ಳಿಯ ನಡು ಮಧ್ಯೆ ಎಡಕ್ಕೆ ತಿರುಗುವ ಬದಲು ನೇರ ದಾರಿ ಹಿಡಿದು ಒಂದೈದು ಕಿಲೋಮೀಟರು ಹೊದರೆ ಇಡೀ ಲ್ಯಾಂಡಸ್ಕೇಪೇ ನಮ್ಮ ತೋಟದ ಮನೆಯದಕ್ಕಿಂತ ಬೇರೆಯದಾ ಗಿತ್ತು. ಗೂಗಲ್ ಮಾತ್ರ ಎಡಕ್ಕೇ ತಿರುಗಿ, ಕೆಲವು ಮೀಟರ್ ನಂತರ ಬಲಕ್ಕೆ ತಿರುಗಿ, ನಿಮ್ಮ ದೇಸ್ತಿನೇಶನ್ ಇನ್ನು ಕೆಲವೇ ನಿಮಿಷದಲ್ಲಿದೆ ಅಂಥ ಒರಲುತ್ತಾ ಇತ್ತು. ಸ್ವಲ್ಪ ದೂರ ಆದ ಮೇಲೆ ಮುದ್ದೇನಹಳ್ಳಿ ಬಂತು. ಅಲ್ಲಿ ಕಂಡೂ ಕಾಣಿಸದಂತೆ ಆಧುನಿಕ ಕರ್ನಾಟಕದ ಶಿಲ್ಪಿಗಳೋಬ್ಬರಾದ ಸರ್ ಎಂ. ವಿಶ್ವೇಶ್ವರಯ್ಯನವರ ಬಸ್ಟ್ ಒಂದನ್ನ ಪ್ರತಿಷ್ಟಾಪನೆ ಮಾಡಿದ್ದಾರೆ.ಪ್ರತಿ ಕನ್ನಡಿಗನೂ ನಾಚಿಕೆ ಪಡಬೇಕಾದ ದೃಶ್ಯ ಅದು. ಇದಕ್ಕಿಂತ ಸುಂದರವಾದ ಎಂವಿ ಯವರ ಬಸ್ಟ್ಅನ್ನು ನಾನು ನಾಸಿಕದಲ್ಲಿ ನೋಡಿದ್ದೇನೆ. ಅವರ ಹೆಸರಿನ ವೃತ್ತವೋ, ರಸ್ತೆಯೋ ಜೋಧಪುರದಲ್ಲಿ ನೋಡಿದ ಜ್ಞಾಪಕ. ಇದು ಮುದ್ದೇನಹಳ್ಳಿ ಗ್ರಾಮನಸ್ಥರ ಅವಿವೇಕಿತನವೋ ಸರ್ಕಾರದ ಮೌಢ್ಯವೋ ದೇವರಿಗೆ ಗೊತ್ತು.
ನಾವು ದಾರಿ ತಪ್ಪಿದ ಅರಿವಾದೊಡನೆ ಕಾರು ತಿರುಗಿಸಿಕೊಂಡು ಬಂದರೆ ಇದಕ್ಕೊಂದು ತದ್ವಿರುದ್ಧ ದೃಶ್ಯ. ಅಲ್ಲೊಂದು ದೊಡ್ಡ ಕಾಂಪೌಂಡಿನ ಭವ್ಯ ಕಟ್ಟಡ, ಪುಟ್ಟಪರ್ತಿಯ ಪ್ರಾರ್ಥನಾ ಮಂದಿರದ ವಿನ್ಯಾಸದಲ್ಲಿ, ಆದರೆ ಸ್ವಲ್ಪ ಚಿಕ್ಕ ಆಶ್ರಮ. ಇಲ್ಲೊಬ್ಬರು ಸಾಯಿಬಾಬಾ. ಇವರು ಸತ್ಯ ಸಾಯಿಬಾಬಾರ ಶಿಷ್ಯರಂತೆ. ಗೇಟು ಮುಚ್ಚಿದ್ದರೂ ಹೊರಗಡೆ ದೊಡ್ಡದೊಂದು, ಕಣ್ಣುತುಂಬಾ ನೋವು, ಆಸೆ, ಮೈಮೇಲೆ ಅಗ್ಗದ ಬಟ್ಟೆಯುಟ್ಟಿದ್ದ ಬಡ ಭಕ್ತ್ರರ ಸಾಲು. ಅವರು ಎಷ್ಟು ಹೊತ್ತಿಗೆ ಬಂದಿದ್ದರೋ, ಎಷ್ಟು ಹೊತ್ತಿಗೆ ದರ್ಶನ ಮುಗಿಯುತ್ಹೋ! ಅವರ ಹಸಿವು ತೀರಿಸಲು ಒಂದೆರಡು ಊಟದ ಕೈ ಗಾಡಿಗಳು. ದ್ವಿಚಕ್ರಗಳ, ಕಾರುಗಳ ಸಮೂಹ. ಇದು ನಮ್ಮ ದಾರಿಯಲ್ಲ ಅಂಥ ಮತ್ತೇ ಮೇನ್ ರೋಡಿಗೆ ಬಂದು ಗೂಗಲ್ ಮಾತು ಕೇಳಿಕೊಂಡು ಮುಂದುವರೆದರೆ, ದಾರಿಯಲ್ಲಿ ಯಾವುದೇ ಹಳ್ಳಿ ಇಲ್ಲ, ಜನ ಇಲ್ಲ, ಅದು ನಂದಿಯ ಕಣಿವೆ. ಸೊಗಸಾಸ ಅಂಕು ಡೊಂಕಾದ ರಸ್ತೆ, ಇಕ್ಕೆಲೆದ ಹಚ್ಚ ಹಸಿರು ತುಂಬಿದ ಭೂಮಾತೆ, ಅಲ್ಲಲ್ಲಿ ನೀರಿನ ಸಣ್ಣ ಹೊಂಡಗಳು. ಆದರೆ ನಮ್ಮ ದಾರಿಯಾಗಿ ರಲಿಲ್ಲ. ಯಾಕೆಂದರೆ ಮೈಲಿಗಲ್ಲೊಂದು ಇದು ಚಿಕ್ಕಬಳ್ಳಾಪುರದ ರಸ್ತೆ ಅಂಥ ತೋರಿಸಿತು. ಸರಿ. ಗಾಡಿ ತಿರುಗಿಸಿಕೊಂಡು ಅದರ ವಿರುದ್ಧ ದಿಕ್ಕು ಹೊರಟೆವು. ಮೆಳೇಕೋಟೆ ದಾಟಿ ಮತ್ತೇ ಗೂಗಲ್ ದೇವತೆ ಹೇಳಿದ ಪ್ರಕಾರ ಎಡ, ಬಲ ತಿರುಗಿ ಹೋಗ್ತಾ ಇದ್ದರೆ ಮತ್ತೊಂದು ಮೈಲಿಗಲ್ಲು ಇದು ದೊಡ್ಡಬಳ್ಳಾಪುರ- ನೆಲಮಂಗಲದ ರಸ್ತೆ ಅಂಥ ಸೂಚಿಸಿತು. ಸರಿ, ಮತ್ತೇ ಕಾರು ತಿರುಗಿಸಿದ ನನ್ನ ಮಗಳಿಗೆ ಹೇಳಿದೆ, ಮೊದಲು ನೀನು ಗೂಗಲ್ ಬಂದ್ ಮಾಡು. ಚಿಕ್ಕರಾಯಪ್ಪನ ಹಳ್ಳಿಗೆ ನಡಿ. ನಾನು ದಾರಿ ಕೇಳಿ ಹೇಳ್ತಿನಿ ಅಂದೇ. ನಾನು ನನ್ನ ಸೇವೆಯ ಹೆಚ್ಚು ಭಾಗವನ್ನು ಈ ರೀತಿ ದಾರಿ ಗೊತ್ತಿಲ್ಲದ, ತೀರಾ ಹಿಂದುಳಿದ ಹಳ್ಳಿಗಳಲ್ಲಿ ಕೆಲಸ ಮಾಡಿದ ನನ್ನ ಅನುಭವದ ಪ್ರಕಾರ ಪ್ರತಿ ಹಳ್ಳಿಯ ಕಟ್ಟೆಯಲ್ಲಿ ಹರಟೆ ಹೊಡೆಯುವ ಮುದುಕರು, ಹಸು, ಎಮ್ಮೆ ಮೇಯಿಸೋ ಹೆಂಗಸರು ಅಥವಾ ಹುಡುಗರು, ತಮ್ಮ ತಮ್ಮ ಜಮೀನಿನಲ್ಲಿ ಕೆಲಸ ಮಾಡೋ ರೈತರು ಗೂಗಲ್ ಗಿಂತ ನಿಖರವಾದ ದಾರಿ ತೋರಿಸುತ್ತಾರೆ. ಈಗ ಆಗಿದ್ದು ಹಾಗೆ. ಅಲ್ಲಿ ಕೂಲಿ ಮಾಡುತ್ತಿದ್ದ ಹೆಂಗಸನ್ನು ಖೋಡೆ ( ನನ್ನ ಭಾವ ಖೋಡೆಯವರಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಕೆಲವು ಭಾರಿ ಶ್ರೀಹರಿ ಖೋಡೆಯವರು ಆ ತೋಟದ ಮನೆಗೆ ಹೋಗಿದ್ದ ಕಾರಣ ಸುತ್ತಲ ಹಳ್ಳಿಯವರಿಗೆ ಅದು ಖೋಡೇ ಫಾರ್ಮ್) ಫಾರಂಗೆ ದಾರಿ ಯಾವುದು ಎಂದು ಕೇಳಿದೆ. ಸೀದಾ ಹೋಗಿ, ಆ ಟ್ಯಾಂಕಿನ ಮನೆ ಹತ್ತಿರ ಎಡಕ್ಕೆ ತಿರುಗಿಕೊಳ್ಳಿ, ಒಂದರ್ಧ ಮೈಲು ಹೋದರೆ ಖೋಡೇ ಫಾರ್ಮ್. So, ಹತ್ತು ನಿಮಿಷದಲ್ಲಿ ನಾವು ತಂಗಿ ತೋಟದ ಮನೆಯಲ್ಲಿದ್ದೆವು.
( ತಂಗಿಯರಾದ ವಿಜಯ, ಜಯ, ರಾಣಿ ಸತೀಶ್, ತಂಗಿ, ಭಾವ, ಅವರ ಮಕ್ಕಳಾದ ಸೌಮ್ಯ, ಮಹನೀತ್, ಅಳಿಯ ಪ್ರತಾಪ್, ಅವರೊಂದಿಗೆ ಶಕುಂತಲಾ ಶ್ರೀಧರ)
ಗೂಗಲ್ ತಂತ್ರ ಜ್ಞಾನಕ್ಕಿಂತ ನಮ್ಮ ಹಳ್ಳಿಯ ಓದಿಲ್ಲದ ಬಡ ಹೆಣ್ಣು ಮಗಳೊ ಬ್ಬಳು ನಮಗೆ ಅರ್ಥವಾಗುವಂತೆ ಸರಿಯಾದ ದಾರಿ ತೋರಿದ್ದಳು. ಪೂಜೆ, ಹವನ, ಹೋಮ ಎಲ್ಲ ಮುಗಿಯಿತು. ಹೆಚ್ಚು ಕಡಿಮೆ ಒಂದೂವರೆ ವರ್ಷ ಮನೆಯಲ್ಲಿ ನೈಟಿಯಲ್ಲೇ ಕಾಲ ಕಳೆದಿದ್ದ ನನಗೆ ರೇಷ್ಮೆ ಸೀರೆ ಉಟ್ಟು ನಡೆಯಬೇಕಾದರೆ ಸಾಕೋ ಸಾಕಾಯಿತು. ಮಗಳ ಕೈ ಹಿಡಿದುಕೊಂಡು ಮೆಟ್ಟಿಲು ಹತ್ತಿ ತೊಟ್ಟಿ ಮನೆ ಸೇರೋವಷ್ಟರೊಳಗಾಗಿ ಜೀವ ಬಾಯಿಗೆ ಬಂದಿತ್ತು. ರಾಣಿ ಸತೀಶ್ ಅಂತೂ ಯಾರ ಸಹಾಯವೂ ಇಲ್ಲದೆ ಹಾಗೆ ನಡೆಯಿರಿ ಅಂಥ ಸುಮಾರು ದೂರು ನಡೆಯುವ ಹಾಗೆ ಮಾಡಿದರು. ಒಂದು ರೌಂಡ್ ಎಲ್ಲರಿಗೂ ಲೀಚಿ, ಕಡಲೆ ಬೀಜದ ಚಿಕ್ಕಿ ಆಯಿತು. ಎಲ್ಲರೂ ವಿಶಾಲವಾದ ಊಟದ ಮೇಜಿನ ಸುತ್ತ ಕೂತು ಹರಟೆಗೆ ಆರಂಭ ಮಾಡಿದೆವು. ಗುಂಪಿನಲ್ಲೊಬ್ಬರು ಚೆನ್ನಾಗಿ ಅದರಲ್ಲೂ ಜಾನಪದ ಗೀತೆ, ದೇವರನಾಮ ಹಾಡತ್ತಾರೆ ಅಂಥ ಗೊತ್ತಾಯಿತು. ಸರಿ, ಅವರಿಗೆ ದುಂಬಾಲು ಬಿದ್ದೆವು. ಅವರು ಹಾಡಿದ, ” ಭಾಗ್ಯದ ಲಕ್ಷ್ಮಿ ಬಾರಮ್ಮ…… ” ದ ಒಂದು ವಿಡಂಬನಾತ್ಮಕ ತುಣುಕು ಇಲ್ಲಿದೆ. ಆಮೇಲೆ ಸತೀಶ್ ಕಾಳಿಂಗ ರಾಯರ ಒಂದು ಗೀತೆ, ಪಂಡಿತ್ ಜಸರಾಜರ ಕೆಲವು ತುಣುಕುಗಳನ್ನ ಕೇಳಿಸಿದರು.
ಹಾಡಾದ ಮೇಲೆ ಊಟ, ತುಸು ವಿರಾಮ, ಆಮೇಲೆ ಮರಳಿ ಮನೆಗೆ. ಈ ಬಾರಿ ಮೇಲಕೋಟೆ -ರಾಜಘಟ್ಟ- ದೊಡ್ಡಬಳ್ಳಾಪುರ- ಯಲಹಂಕ ಹಾದಿ. ದೊಡ್ಡಬಳ್ಳಾಪುರದವರೆಗೆ ಹಸಿರು ಹೊದ್ದ ಭೂತಾಯಿ ಇದ್ದಕ್ಕಿದ್ದಂತೆ ದ್ವಿಚಕ್ರಗಳ, ಆಟೋರಿಕ್ಷಗಳ, ಕಾರುಗಳ, ಬಸ್ಸುಗಳ, ಜನಜಂಗುಳಿಯ ದಾಂಧಲೆಗೆ ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ತುತ್ತಾದವಳು, ಆನಂದ ನಗರದಲ್ಲಿರುವ ನನ್ನ ಮನೆಯ ತಿರುವಿನವರಿಗೆ ಬಸವಳಿದಳು.
ನನ್ನ ಮಟ್ಟಿಗೆ ಇದೊಂದು ಮರೆಯಲಾರದ ಆನುಭವ. ತಿಂಗಳಾನುಗಟ್ಟಲೆ ಮನೆ- ಆಸ್ಪತ್ರೆ ಮಾತ್ರ ತಿರುಗಿತ್ತಿದ್ದ ನಾನು ಬೆಂಗಳೂರಿಂದಾಚೆಗೆ, ಹೊಲ- ತೋಟಗಳ ನಿಸರ್ಗದ ಮಧ್ಯೆ, ತಂಗಿ, ಭಾವ, ಅವರ ಮಕ್ಕಳಾದ ಸೌಮ್ಯ, ಮಹನೀತ್, ಅಳಿಯ ಪ್ರತಾಪ್, ತಂಗಿಯರೊಂದಿಗೆ, ನನ್ನ ಮಗಳೊಂದಿಗೆ, ಹಾಡುಗರಿಕೆ, ಸ್ವಾದಿಷ್ಟ ಭೋಜನ ಮಾಡಿ ಕಳೆದ ಗಂಟೆಗಳು Memorable. ಬಹಳ ಆಯಾಸ ಶರೀರಕ್ಕಾಗಿದೆ, ಆದರೆ ಬಹಳ ದಿನಗಳ ನಂತರ ಮನಸ್ಸು ಉಲ್ಲಸಿತವಾಗಿದೆ. ಬದುಕು ಹಾಗೆ ಅಲ್ಲವಾ?.
- ಶಕುಂತಲಾ ಶ್ರೀಧರ (ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಾಣಿ ಶರೀರಶಾಸ್ತ್ರದಲ್ಲಿ ಪಿಎಚ್‌ಡಿ ಪಡೆಡಿದ್ದು, ಭಾರತೀಯ ದಶಕಗಳ ಮೇಲಿನ ಅವರ ಪ್ರವರ್ತಕ ಕೆಲಸವನ್ನು ಗುರುತಿಸಿ, ಡಾ.ಶ್ರೀಧರ ಅವರನ್ನು ಆಕ್ಸ್‌ಫರ್ಡ್, ನಾಟಿಂಗ್‌ಹ್ಯಾಮ್, ಯಾರ್ಕ್, ಮ್ಯೂನಿಚ್, ಡ್ಯಾನಿಶ್ ಕೀಟ ನಿಯಂತ್ರಣ ಪ್ರಯೋಗಾಲಯ, ಸ್ಪೇನ್, ವಿಯೆನ್ನಾ, ಟುಬಿಂಗೆನ್,ಅಮೇರಿಕಾದ ಪ್ರತಿಷ್ಟಿತ ವಿಶ್ವವಿದ್ಯಾನಿಲ್ಸಯಾಗಳೇ ಸೇರಿದಂತೆ ವಿಶ್ವದಾದ್ಯಂತ ಸೆಮಿನಾರ್‌ಗಳನ್ನು ನೀಡಲು ಆಹ್ವಾನಿಸಿದ್ದಾರೆ).