ಬಾಳಗಾರಿನಲ್ಲಿ ಶ್ರೀರಾಘವೇಂದ್ರಸ್ವಾಮಿ ಆರಾಧನೆ- ಎನ್.ವಿ.ರಘುರಾಂ.

ತೀರ್ಥಹಳ್ಳಿಯಿಂದ ಬಾಳಗಾರಿಯಲ್ಲಿನ ರಾಯರ ಆರಾಧನೆ ಕುರಿತು ಲೇಖಕ ಎನ್.ವಿ.ರಘುರಾಂ. ಅವರು ಬರೆದ ಲೇಖನ, ಬಾಳಗಾರಿನ ಅರ್ಚಕರು ತನ್ಮಯ ಭಾವದಿಂದ ಮೂರ್ತಿಗೆ ಗಂಧ ಹಚ್ಚುವ ದೃಶ್ಯ, ತೀರ್ಥದಲ್ಲಿ ಇರುತ್ತಿದ್ದ ತುಳಸಿಯ ಸುವಾಸನೆ, ಹಯಗ್ರೀವದ ಏಲಕ್ಕಿ, ಲವಂಗದ ಪರಿಮಳ, ಊರಿನವರು ದೇವಸ್ಥಾನಕ್ಕೆ ಬರುವ ನೂರಾರು ಜನರಿಗೆ ಅವರ ಮನೆಯಲ್ಲೇ ಅನುಕೂಲ ಕಲ್ಪಿಸುವ ಪರಿ ಎಲ್ಲಾ ಮನದಲ್ಲಿ ಹಸಿ, ಹಸಿಯಾಗಿದೆ ಎನ್ನುತ್ತಾರೆ ಲೇಖಕರು.ಮುಂದೆ ಓದಿ…

 

‘ಕಾಯೋ ಗುರು ರಾಯ ಕರುಣಿಸಿ ಕಾಯೋ ಗುರುರಾಯ’

( ಸುಮಾರು 1965 ವರ್ಷದಲ್ಲಿ ಆಚರಿಸಿದ ಹಬ್ಬ)

ತೀರ್ಥಹಳ್ಳಿಯಿಂದ ಶಿವಮೊಗ್ಗ ದಾರಿಯಲ್ಲಿ ಹೊರಟರೆ ಸುಮಾರು ಆರೇಳು ಮೈಲಿ ದೂರದಲ್ಲಿರುವ ಗ್ರಾಮವೇ ಬಾಳಗಾರು. ಇದು ಒಂದು ಸಾಮಾನ್ಯ ಮಲೆನಾಡ ಹಳ್ಳಿ. ಆದರೆ ಶ್ರಾವಣ ಮಾಸ ಬಂದರೆ ಎಲ್ಲರ ಬಾಯಲ್ಲಿ ಬಾಳಗಾರಿಗೆ ಹೋಗುವ ವಿಷಯ ಬರುತ್ತದೆ. ಆಗ ತೀರ್ಥಹಳ್ಳಿಯಲ್ಲಿ ರಾಯರ ಮಠ ಇರಲಿಲ್ಲ. ಅತಿ ಸಮೀಪದ ರಾಯರ ಮಠ ಇದ್ದಿದ್ದು ಈ ಬಾಳಗಾರು ಎಂಬ ಸಣ್ಣ ಹಳ್ಳಿಯಲ್ಲಿ. ಹಾಗಾಗಿ ರಾಯರ ಆರಾಧನೆ ಬಂದರೆ ಎಲ್ಲರೂ ಬಾಳಗಾರಿಗೆ ಹೋಗುತ್ತಿದ್ದರು.

ತೀರ್ಥಹಳ್ಳಿಯಿಂದ ಬಾಳಗಾರಿಗೆಂದೆ ಬೇರೆ ಬಸ್ ನ ವ್ಯವಸ್ಥೆ ಇರಲಿಲ್ಲ. ಈಗಿನ ತರಹ ಎಲ್ಲರ ಬಳಿ ಸ್ಕೂಟರ್, ಕಾರ್ ಆಗಲಿ, ಟಿ.ಟಿ.ಗಾಡಿಗಳಾಗಲಿ ಇರಲಿಲ್ಲ. ಆಗ ಶಿವಮೊಗ್ಗಕ್ಕೆ ಹೋಗುವ ಬಸ್ ನಲ್ಲೇ ಹೋಗಬೇಕಿತ್ತು. ಬೆಳಿಗ್ಗೆ 7.15ಕ್ಕೆ ತೀರ್ಥಹಳ್ಳಿಯಿಂದ ಮೊದಲು ಹೊರಡುವುದೇ ದೇವಂಗಿ ಬಸ್. ಬಾಳಗಾರಿಗೆ ಹೋಗುವವರು ಮೊದಲು ಹೋಗಿ ಸೀಟ್ ಹಿಡಿದುಕೊಂಡು ಕೂತರೆ, ‘ಬಾಳಗಾರ್ ಸೀಟ್ ಎಲ್ಲಾ ಹಿಂದೆ ಹೋಗಿ’ ಎನ್ನುತ್ತಾ ಕಂಡಕ್ಟರ್ ಬರುತ್ತಿದ್ದ. ‘ಸೀಟ್ ಹೇಗಪ್ಪಾ ಹಿಂದುಗಡೆ ಹೋಗುತ್ತೇ? ನಾವೇ ಹೋಗಬೇಕು’ ಎಂದು ಮನಸ್ಸಿಯಲ್ಲೇ ಅಂದುಕೊಂಡು, ನಿಧಾನವಾಗಿ ಹಿಂದಿನ ಸೀಟ್ಗೆ ಹೋಗುತ್ತಿದ್ದವು. ಮುಂದುಗಡೆ ಸೀಟ್ ಶಿವಮೊಗ್ಗ ಹೋಗುವವರಿಗೆ ಮೀಸಲು. ಐವತ್ತು ಜನರ ಬಸ್ ನಲ್ಲಿ ಎಂಬತ್ತಕ್ಕೂ ಹೆಚ್ಚು ಜನ ತುಂಬಿಕೊಂಡು ಬಸ್ ಹೊರಡುತ್ತಿತ್ತು.

ಫೋಟೋ ಕೃಪೆ : google

ಆಗ ಮೊದಲು ಸಿಗುವುದೇ ಹಳೆಯ ಕುಶಾವತಿ ಸೇತುವೆ. ಮಳೆಗಾಲದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿರುತ್ತದೆ. ಆಗ ಈ ಸೇತುವೆಯ ಕೆಳಗೆ ಕೆಂಪು ಬಣ್ಣಕ್ಕೆ ತಿರುಗಿರುವ ನದಿ ಕಾಣುತ್ತದೆ. ಅದರ ಸುತ್ತಲೂ ಕಾಣುವುದು ಹಚ್ಚ ಹಸಿರಿನ ಭತ್ತದ ಗದ್ದೆ. ನಂತರ ಅನಂದಗಿರಿ ಗುಡ್ಡ, ಮುಂದೆ ಬರುವುದೇ ಬಾರಿ ತಿರುವು. ಬಸ್ಸಿನ ರೈಲ್ ಹಿಡಿದುಕೊಂಡು ನಿಂತಿರುವರ ಜೊತೆಗೆ ಕೂತಿರುವ ಜನರೂ ಕೂಡ ಆಕಡೆ ಈಕಡೆ ಓಲಾಡುವ ಹಾಗೆ ಆಗುವ 170 ಡಿಗ್ರಿ ತಿರುವು! ಎಲ್ಲಾ ಅವರವರ ಜಾಗದಲ್ಲಿ ಸರಿಮಾಡಿಕೊಂಡು ಕೂರುವುದು, ನಿಲ್ಲುವುದು ಮಾಡುವ ಹೊತ್ತಿಗೆ “ಕೆಸರೇ” ಗ್ರಾಮ ಬಂದಿರುತ್ತಿತ್ತು. . ಆ ದಾರಿಯಲ್ಲಿ ಎಲ್ಲಾ ಚೆನ್ನಾಗಿದೆ. ಆದರೂ ಹೆಸರು ಮಾತ್ರ ‘ಕೆಸರು!’ ನಂತರ ಬರುವುದೇ “ಬಾಳಗಾರು”. ಇಲ್ಲೇ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನವಿರುವುದು.

ಆರಾಧನೆ ಸಮಯದಲ್ಲಿ ಇಲ್ಲಿ ನೋಡಬೇಕು. ಸುತ್ತಲೂ ಹಸಿರು. ಬಸ್ ನಿಂದ ಇಳಿದು ಒಂದು ಫರ್ಲಾಂಗ್ ನಡೆದರೆ ಬಾಳಗಾರು ಪ್ರಾರಂಭ. ರಸ್ತೆಯ ಎರಡೂ ಕಡೆ ಹಳೆಯ ಮಲೆನಾಡಿನ ಹಂಚಿನ ಮನೆಗಳು ಕಾಣುತ್ತದೆ. ಒಂದಿಪ್ಪತ್ತು ಅಥವ ಇಪ್ಪತೈದು ಮನೆ ಇರುವ ಸಣ್ಣ ಹಳ್ಳಿ. ಇನ್ನೊಂದು ಫರ್ಲಾಂಗ್ ಹೋದರೆ ಕಾಣುವುದೇ ರಾಯರ ಗುಡಿ. ಬಾಳೆಕಂಬ ಕಟ್ಟಿ, ಮಾವಿನ ತೋರಣದ ಸಿಂಗಾರಕೊಂಡ ದೇವಸ್ಥಾನ. ನೋಡಲು ಬಾರಿ ದೇವಸ್ಥಾನವೇನಲ್ಲ. ಚಿಕ್ಕ ಗುಡಿಯೇ. ಆದರೂ ಈ ಗುಡಿಯ ಬಗ್ಗೆ ಕೇಳದವರು ಸುತ್ತಮುತ್ತಲಿನಲ್ಲಿ ಯಾರು ಇರಲಿಲ್ಲ.
ಗುಡಿಯ ಎದುರುಗಡೆ ಇದ್ದ ಏಳೆಂಟು ಮನೆಯವರು ಆರಾಧನೆಗೆ ಬರುವವರ ಅನುಕೂಲಕ್ಕೆ ಆಗುವಂತೆ ಮನೆಯಲ್ಲಿ ಜಾಗ ಮಾಡಿಟ್ಟಿರುತ್ತಿದ್ದರು. ನಾವೆಲ್ಲ ಅಲ್ಲಿ ಕೈಕಾಲು ತೊಳೆದು ರೇಷ್ಮೆ ಮುಗುಟ ಉಟ್ಟು ದೇವಸ್ಥಾನಕ್ಕೆ ಹೋದರೆ ಬೃಂದಾವನದ ಹೊರಗಡೆ ರೂಮ್ ತನಕ ನಮಗೆ ಪ್ರವೇಶವಿತ್ತು. ಅಲ್ಲಿ ಬೆಳಿಗ್ಗೆ ಮುಂಚಯೇ ಪೂಜೆ ಪ್ರಾರಂಭವಾಗಿರುತ್ತಿತ್ತು. ಎಲ್ಲೆಲ್ಲೂ ಜನ. ಕೆಲವು ಗಂಡಸರು ಕೆಂಪು, ನೀಲಿ, ಬಣ್ಣದ ರೇಷ್ಮೆ ಮುಗುಟ ಉಟ್ಟುಕೊಂಡಿದ್ದರೆ ಇನ್ನು ಕೆಲವರು ಕಚ್ಛೆ ಪಂಚೆ ರೀತಿಯಲ್ಲಿ ಉಟ್ಟುಕೊಂಡಿರುತ್ತಿದ್ದರು. ನಾವೆಲ್ಲ ಕ್ರೀಂಮ್ ಕಲರ್ ಮುಗುಟ ಸುತ್ತಿಕೊಂಡು, ಅದು ಜಾರಿ ಹೋಗದಂತೆ ಗಂಟು ಹಾಕಿ ಕಟ್ಟಿಕೊಂಡಿರುತ್ತಿದ್ದೆವು. ಅಪ್ಪನಿಗೆ ಒಂದೇ ಸಮನೆ ಕೂರಲು ಆಗುತ್ತಿರಲಿಲ್ಲ. ಬಾಗಿಲು ಬಳಿ ಸ್ವಲ್ಪ ಹೊತ್ತು ಕೂರುತ್ತಿದ್ದರು, ಮತ್ತೆ ನಿಲ್ಲುತ್ತಿದ್ದರು. ಅಮ್ಮ ದೇವರ ಮುಂದೆ ಕೂತರೆ ಮುಗಿಯಿತು, ಅಲ್ಲಾಡುತ್ತಿರಲಿಲ್ಲ. ನಾವೆಲ್ಲ ಅಲ್ಲಿಯೇ ಬೆಳಿಗ್ಗೆ 9ಗಂಟೆಯ ಹೊತ್ತಿಗೆ ಹೋದರೆ ಮಧ್ಯಾಹ್ನ 12ರ ತನಕ ಎಲ್ಲರೂ ನಿಂತೇ ಪೂಜೆ ನೋಡುತ್ತಿದ್ದದು. ‘ಇವರು ಯಾರು ಮಕ್ಕಳು?’ ಎಂದು ಅಲ್ಲಿ ನಿಂತಿದ್ದ ಯಾರದ್ರು ಕೇಳುತ್ತಿದ್ದರು. “ಇವರು ವೆಂಕಟರಾಯರ ಮಕ್ಕಳು” ಎಂದು ಅಲ್ಲಿದ್ದವರು ಯಾರದ್ರು ಹೇಳುತ್ತಿದ್ದರು. ದೇವಸ್ಥಾನಕ್ಕೆ ಮಡಿ ಉಟ್ಟು ಕೊಂಡು ಬಂದಿರುವ ಸಣ್ಣ ಮಕ್ಕಳು ನಾವಾದ್ದರಿಂದ ಎಲ್ಲರ ಕಣ್ಣು ತಾನಾಗಿಯೇ ಬೀಳುತ್ತಿದ್ದವು.

ಫೋಟೋ ಕೃಪೆ : twitter

ಮಂತ್ರ ಪೂರ್ವಕವಾಗಿ ಅಭಿಷೇಕ ನಡೆಯುತ್ತಿತ್ತು. ಮಂತ್ರಗಳ ಪರಿಚಯವಾಗಲೀ ಅಥವ ಅರ್ಥವಾಗಲಿ ನನಗೆ ಗೊತ್ತಿರಲಿಲ್ಲ. (ಈಗಲೂ ಗೊತ್ತಿಲ್ಲ! ಅದು ಬೇರೆಯ ವಿಷಯವೇ ಬಿಡಿ!) ಆದರೆ ಪೂಜೆ ಮಾಡುವಾಗ ಅರ್ಚಕರು ಮಾಡುವ ಕೆಲಸಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಅದರಲ್ಲೂ ಅರ್ಚಕರು ಅಭಿಷೇಕದ ನಂತರ ಬಟ್ಟೆಯಿಂದ ಬೃಂದಾವನ ಒರೆಸುವ ರೀತಿಯಲ್ಲಿ ಎನೋ ಒಂದು ರೀತಿಯ ತಾದ್ಯಾತ್ಮತೆ ಅವರಲ್ಲಿ ಕಾಣುತ್ತಿದ್ದೆ. ಬಹಳ ವರ್ಷಗಳ ನಂತರ ಅದನ್ನು ನೆನಪಿಸಿಕೊಂಡರೆ ಮಗುವೊಂದಕ್ಕೆ ತಾಯಿ ಮೈ ಒರೆಸುವ ರೀತಿಯಲ್ಲಿ ಬಹುಶಃ ಅವರು ಬಟ್ಟೆಯಿಂದ ಒರೆಸುತ್ತಿದ್ದರೆಂದೆನಿಸಿತು. ಪೂಜೆ ಮಾಡುವುದನ್ನು ನೋಡಿ, ನೋಡಿ ಯಾವ ಪೂಜೆ ಮಾಡಿದ ಮೇಲೆ ಯಾವ ಪೂಜೆ ಮಾಡುತ್ತಾರೆ ಎಂಬ ವಿಷಯ ಸಾಮಾನ್ಯವಾಗಿ ಗೊತ್ತಾಗಿತ್ತು. ಅಭಿಷೇಕ, ಅಲಂಕಾರ, ಪೂಜೆ, ಮಂಗಳಾರತಿ,… ಒಂದಾದ ಮೇಲೆ ಒಂದು ನಡೆಯುತ್ತಿತ್ತು. ಅದನ್ನು ನೋಡುತ್ತಾ ನಿಂತಿರುತ್ತಿದ್ದೆ. ಆದರೆ ನನಗೆ ಬಹಳ ಇಷ್ಟವಾಗುತ್ತಿದ್ದುದು ಆ ಪೂಜೆಯ ಜೊತೆ ಜೊತೆಯಲಿ ಅಮ್ಮನ ಜೊತೆ ಕೆಳಗೆ ಕುಳಿತುಕೊಂಡವರು ಹೇಳುತ್ತಿದ್ದ ಹಾಡುಗಳು. ‘ತುಂಗಾ ತೀರದ ….. ‘, ‘ರಾಯ ಬಾರೋ…ತಂದೆ ತಾಯಿ ಬಾರೋ..’, ‘ನಂಬಿ ಕೆಟ್ಟವರಿಲ್ಲವೊ….’, ಹೀಗೆ ಅನೇಕ ಹಾಡುಗಳನ್ನು ಒಂದಾದ ಮೇಲೊಂದು ಹೇಳುತ್ತಿದ್ದರು. ಕೊನೆಯಲ್ಲಿ ‘ತೂಗಿರೇ ರಾಯರ, ತೂಗಿರೆ ಗುರುಗಳ…’ ಹಾಡಿನೊಂದಿಗೆ ಮುಗಿಯುತ್ತಿತ್ತು. ಭಕ್ತಿಯಲ್ಲಿ ಪರವಶರಾಗಿ ನಿಂತಿರುವ ಅನೇಕರು ಅಲ್ಲಿ ನಿಂತಿರುತ್ತಿದ್ದರು. ಪ್ರತಿಯೊಬ್ಬರೂ ಮಾಡುವ ಕೆಲಸ, ಕೆಲವರು ದೇವರ ಬಳಿ ಪ್ರಾರ್ಥನೆಯ ಮಾಡುವಾಗ ಇರುವ ಧೈನ್ಯಸ್ಥಿತಿ, ಸಣ್ಣ ಮಕ್ಕಳನ್ನು ಎತ್ತಿಕೊಂಡು ಕುತ್ತಿಗೆ ಉದ್ದ ಮಾಡಿಕೊಂಡು ದೇವರನ್ನು ಕಾಣಲು ಪ್ರಯತ್ನಿಸುವ ಎಲ್ಲರನ್ನೂ ಕುತೂಹಲದಿಂದ ನೋಡುತ್ತಾ ಸುತ್ತಿ ಕೊಂಡಿರುವ ಮುಗುಟ ಮಧ್ಯೆ ಮಧ್ಯೆ ಜಾರದಂತೆ ಸರಿ ಮಾಡಿಕೊಳ್ಳುತ್ತಿರುವಾಗ ಊಟದ ಸಮಯವಾಗಿರುತ್ತಿತ್ತು.

ಫೋಟೋ ಕೃಪೆ : twitter

ಅಲ್ಲಿಗೆ ಬಂದ ನೂರಾರು ಜನರಿಗೆಲ್ಲರಿಗೂ ಊಟ. ಗುಡಿಯ ಎದುರುಗಡೆ ಇದ್ದ ಎಳೆಂಟು ಮನೆಗಳಲ್ಲಿ ಎಲೆ ಹಾಕುತ್ತಿದ್ದರು. ಎಲ್ಲರಿಗೂ ಬಾಳೆಎಲೆ ಊಟ. ಒಂದು ಮನೆಯಲ್ಲಿ ಅಡಿಗೆ ಮಾಡಿರುತ್ತಿದ್ದರು. ಬಡಸುವವರು ಒಂದು ಮನೆಯಲ್ಲಿ ಬಡಿಸಿ ನಂತರ ಇನ್ನೊಂದು ಮನೆಗೆ ಹೋಗುತ್ತಿದ್ದರು. ಊಟದ ರುಚಿ ತಿಂದವರಿಗೆ ಮಾತ್ರ ಗೊತ್ತು!. ಆ ಊಟದ ರುಚಿ ಇನ್ನೆಲ್ಲೂ ಬರಲು ಸಾಧ್ಯವಿಲ್ಲ ಬಿಡಿ. ಬರಿ ರುಚಿಯೊಂದೇ ಮಾತ್ರವಲ್ಲ ಅಲ್ಲಿ ಒಂದು ಸಾರಿ ದೊಡ್ಡ ಅನ್ನದ ಕೈಯಲ್ಲಿ ಒಂದು ಸಾರಿಗೆ ಹಾಕುತ್ತಿದ್ದ ಅನ್ನ ಮನೆಯಲ್ಲಿ ಮಾಡುವ ಪೂರ್ಣ ಊಟಕ್ಕಿಂತ ಜಾಸ್ತಿ ಇರುತ್ತಿತ್ತು! ಆ ಗಮಗಮ ಸಾರು, ಚೀಣಿಕಾಯಿ ಪಲದ್ಯ,……. ಇವೆಲ್ಲಾ ಇದ್ದಾಗ ಊಟ ಸೇರದೆ ಇರಲು ಸಾಧ್ಯವಿಲ್ಲ. ಆದರೆ ಅಲ್ಲಿ ಮಾಡುತ್ತಿದ್ದ ‘ಹಯಗ್ರೀವ’ದ ರುಚಿ ಇನ್ನೂ ಬಾಯಲ್ಲಿದೆ ಎಂದೆನಿಸುತ್ತದೆ. ಅದು ಬಹುಶಃ ಎಲ್ಲರಿಗೂ ಇಷ್ಟ ಕೂಡ. ನನಗೂ ಬಹಳವೇ ಇಷ್ಟವೇ. ಮಧ್ಯೆ, ಮಧ್ಯೆ ಕೆಲವರು ಭೋಜನ ಕಾಲೇ ಹರಿನಾಮ ಸ್ಮರಣೆ ಎನ್ನುತ್ತಾ ದೇವರ ಹಾಡೋ, ಸ್ತುತಿಯೋ ಹೇಳುತ್ತಿದ್ದರು. ಮಜ್ಜಿಗೆ ಬಂದರೆ ಊಟ ಮುಗಿಯಿತು ಎಂದರ್ಥ.

ಫೋಟೋ ಕೃಪೆ :google

ತೀರ್ಥಹಳ್ಳಿಗೆ ಹಿಂತಿರುಗುವುದು ಈಗ ಇನ್ನೊಂದು ಸಹಾಸದ ಕೆಲಸ. ಶಿವಮೊಗ್ಗದಿಂದ ಬಸ್ ತುಂಬಿ ಬರುತ್ತಿದ್ದರಿಂದ ಇಲ್ಲಿ ಎಲ್ಲರೂ ಹತ್ತಲು ಆಗುತ್ತಿರಲಿಲ್ಲ. ಕೆಲವರು ಶಿವಮೊಗ್ಗ ರಸ್ತೆಯಲ್ಲಿ ಒಂದು ಮೈಲಿ ಮುಂದೆ ನಡೆದು ಬಸ್ ನಿಲ್ಲಿಸಿ ಹತ್ತಲು ಪ್ರಯತ್ನ ಪಡುತ್ತಿದ್ದರು. ಆದರೆ ನಾವೆಲ್ಲ ಬಸ್ಗೆ ಕಾದು ಹತ್ತುವ ವ್ಯರ್ಥ ಪ್ರಯತ್ನ ಮಾಡದೆ ರಸ್ತೆಯಲ್ಲಿ ನಡೆಯುತ್ತ ತೀರ್ಥಹಳ್ಳಿಯ ಕಡೆ ಹೊರಡುತ್ತಿದ್ದವು. ಮಳೆಗಾಲ ಹಾಗಾಗಿ ತಂಪಾದ ವಾತಾವರಣ. ದಾರಿಯ ಉದ್ದಕ್ಕೂ ಭತ್ತದ ಗದ್ದೆಯ ಎಳೆ ಹಸಿರು, ಅಡಿಕೆ ಮರದ ಸಾಲುಗಳು, ಬಿಳಿ ಬಣ್ಣದ ಗಂಟೆ ಹೂ ನೋಡುತ್ತ ನಡೆಯುತ್ತಿದ್ದರೆ ದಾರಿ ಕಳೆದಿದ್ದು ಗೊತ್ತಾಗುತ್ತಿರಲಿಲ್ಲ. ಅಷ್ಟು ಹೊತ್ತು ನಮಗೋಸ್ಕರ ಬಿಟ್ಟಿದ್ದ ಮಳೆ ಪ್ರಾರಂಭವಾಗುತ್ತಿತ್ತು. ಮಳೆ ಬಂದರೆ ಯಾರು ತಲೆ ಕೆಡಿಸಿಕೊಳ್ಳದ ಕಾಲವದು. ಎಲ್ಲರ ಕೈಯಲ್ಲಿದ್ದ ಮರದ ಕೋಲಿನ ದೊಡ್ಡ ಛತ್ರಿಗಳನ್ನು ಬಿಚ್ಚಿಕೊಂಡು ಮುಂದೆ ಸಾಗುತ್ತಿದ್ದವು. ಮಳೆ ತುಂಬ ಜಾಸ್ತಿಯಾದರೆ ದಾರಿಯಲ್ಲಿರುವ ಯಾರದ್ದಾದರು ಮನೆಯ ಅಂಗಳದಲ್ಲಿ ಐದು, ಹತ್ತು ನಿಮಿಷ ನಿಲ್ಲುವುದು, ಮತ್ತೆ ಹೊರಡುವುದು. ‘ಕೆಸರೇ’ ಊರಿನ ಬಳಿ ಮುಖ್ಯ ದಾರಿಯಲ್ಲೇ ಒಂದು ಮನೆಯಿತ್ತು. ಆ ಮನೆಯ ಅಂಗಳ ವಿಶಾಲವಾಗಿರುವುದಲ್ಲದೇ ಬಗೆ, ಬಗೆಯ ದಾಸವಾಳದ ಹೂ, ವಿವಿಧ ಬಣ್ಣಗಳ ಡೇರೆ ಹೂಗಳ ತೋಟವೇ ಅವರ ಮನೆಯಲ್ಲಿತ್ತು. ‘ಒಳಗೆ ಬನ್ನಿ, ಕಾಫೀ ಮಾಡ್ಲ…’ ಈ ತರಹ ಉಪಚಾರ ಕೂಡ ಆ ಮನೆಯವರು ಮಾಡುತ್ತಿದ್ದರು. ಅನಂದಗಿರಿ ಗುಡ್ಡದ ಬಳಿ ಬರುವಾಗ ದಾರಿಯಲ್ಲಿರುವ ಭತ್ತದ ಗದ್ದೆಯಲ್ಲಿ ಇಳಿದು, ಏರಿಯ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಷಾರ್ಟ್ ಕಟ್ ನಲ್ಲಿ ಬರಲು ಪ್ರಯತ್ನಿಸಿ ಕಾಲೆಲ್ಲಾ ಕೆಸರು ಮಾಡಿಕೊಂಡಿದ್ದಿದೆ. ಅಂತೂ ಮನೆ ತಲುಪಿದಾಗ ಸಂಜೆಯಾಗಿರುತ್ತಿತ್ತು.

ಈಗ ತೀರ್ಥಹಳ್ಳಿಯಲ್ಲೂ ರಾಯರ ಮಠವಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಟಿ.ವಿ.ಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ‘ಲೈವ್’ ಆಗಿ ತೋರಿಸುತ್ತಾರೆ. ಆದರೂ ಬಾಳಗಾರಿನ ಅರ್ಚಕರು ತನ್ಮಯ ಭಾವದಿಂದ ಮೂರ್ತಿಗೆ ಗಂಧ ಹಚ್ಚುವ ದೃಶ್ಯ, ತೀರ್ಥದಲ್ಲಿ ಇರುತ್ತಿದ್ದ ತುಳಸಿಯ ಸುವಾಸನೆ, ಹಯಗ್ರೀವದ ಏಲಕ್ಕಿ, ಲವಂಗದ ಪರಿಮಳ, ಊರಿನವರು ದೇವಸ್ಥಾನಕ್ಕೆ ಬರುವ ನೂರಾರು ಜನರಿಗೆ ಅವರ ಮನೆಯಲ್ಲೇ ಅನುಕೂಲ ಕಲ್ಪಿಸುವ ಪರಿ ಎಲ್ಲಾ ಮನದಲ್ಲಿ ಹಸಿ, ಹಸಿಯಾಗಿದೆ. ‘ಕಾಯೋ ಗುರು ರಾಯ ಕರುಣಿಸಿ ಕಾಯೋ ಗುರುರಾಯ’ ದಾಸರ ಹಾಡಿನ ಧ್ವನಿ ಕಿವಿಯಲ್ಲಿ ಮಾರ್ದನಿಸುತ್ತಿದೆ.

(ಫೋಟೋ- ಮಾಗಡಿ ರಸ್ತೆಯ ರಾಯರ ಮಠ)


  • ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ) 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW