ಹದಿನಾರು ವರುಷಗಳಾದರೂ ರಸ್ತೆ ಸಂಪರ್ಕವಿಲ್ಲ

೧೯೨೪ರ ಆಗಸ್ಟ್ ತಿಂಗಳಲ್ಲಿ ಭಯಂಕರವಾಗಿ ಧರೆಗಿಳಿದ ಮಹಾನೆರೆಯಿಂದ ಜನರಲ್ಲಿ ಆ ಭೀಕರ ನೆನಪು ಸದಾ ಹಸಿರಾಗಿದೆ. ಅಂದು ಸುರಿದ ಧಾರಾಕಾರ ಮನೆ ಮಾಲತಿ, ತುಂಗೆ, ಭದ್ರೆಯಂತಹ ನದಿಗಳು ಉಕ್ಕಿ ಹರಿದ ಹೊಡೆತಕ್ಕೆ ಊರೂರುಗಳು ಮುಳುಗುತ್ತವೆ. ಮಹಿಷಿ ತಿಮ್ಮಪ್ಪನವರ ಪ್ರಯತ್ನದ ಹದಿನೇಳು ಕೋಟಿ ವೆಚ್ಚದ ಸೇತುವೆಗೆ ಹದಿನಾರು ವರುಷಗಳಾದರೂ ರಸ್ತೆ ಸಂಪರ್ಕವಿಲ್ಲ . ಇನ್ನಷ್ಟು ವಿಷಯಗಳನ್ನು ಲೇಖಕ ನೆಂಪೆ ದೇವರಾಜ್ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ…
——————————————————————-

ಮಹಿಷಿ ಸೇತುವೆ ಆ ಊರಲ್ಲಿ ಆಗುವುದರ ಹಿಂದೆ ದಿವಂಗತ ಮಹಿಷಿ ತಿಮ್ಮಪ್ಪನವರ ಶ್ರಮ ಎಷ್ಟಿತ್ತು ಎಂಬುದರ ನೆನಪನ್ನು ಮಾಡಿಕೊಳ್ಳಲು ಹದಿನಾರು ವರುಷಗಳ ಹಿಂದಕ್ಕೆ ಸಾಗಿದರೆ ಬಹುತೇಕ ನಿಜದ ಅರಿವುಗಳು ಎದೆಗೆ ಒತ್ತರಿಸುತ್ತವೆ. ಕುಮಾರ ಸ್ವಾಮಿ ಮತ್ತು ಯಡಿಯೂರಪ್ಪನವರ ಸಮ್ಮಿಶ್ರ ಸರ್ಕಾರಗಳ ಹೊತ್ತಲ್ಲಿ ಲೋಕೋಪಯೋಗಿ ಸಚಿವರಾಗಿದ್ದವರು ಹೆಚ್.ಡಿ ರೇವಣ್ಣನವರು. ಮುಖ್ಯ ಕಾರ್ಯದರ್ಶಿಗಳಾಗಿದ್ದವರು ಪಿ.ಬಿ ಮಹಿಷಿಯವರು.ಇಲ್ಲಿಂದಲೇ ಕತೆಯಾರಂಭವಾಗುವುದು.

ತೊಂಭತ್ತೊಂಬತ್ತು ವರು಼ಷಗಳ ಹಿಂದೆ ಎಂದರೆ ಸಾವಿರದ ಒಂಭೈನೂರಾ ಇಪ್ಪತ್ತನಾಲ್ಕರ ಇದೇ ಆಗಸ್ಟ್ ತಿಂಗಳಲ್ಲಿ ಭಯಂಕರವಾಗಿ ಧರೆಗಿಳಿದ ಮಹಾನೆರೆ ‘ಮಾರಿ’ ನೆರೆಯಾಗಿ ಜನಪದರಲ್ಲಿ ಉಳಿದು ಹೋದ ಭೀಕರ ನೆನಪು. ಅಂದು ಧರೆಗೆ ಧೋ… ಎಂದು ಆರೇಳು ದಿನ ಸುರಿದ ಮಳೆ ಇಡೀ ಪಶ್ಚಿಮ ಘಟ್ಟವನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು. ಇಲ್ಲಿ ಹುಟ್ಟುವ ಮಾಲತಿ ತುಂಗೆ ಭದ್ರೆಯಂತಹ ನದಿಗಳು ಉಕ್ಕಿ ಹರಿದ ಹೊಡೆತಕ್ಕೆ ಊರೂರುಗಳು ಮುಳುಗುತ್ತವೆ. ಧರೆ ಕುಸಿದ ಹೊಡೆತಕ್ಕೆ ಅಬ್ಬರಿಗಳು ತಂಗುತ್ತವೆ.ಹಿಸ ಹೊಸ ಅಬ್ಬರಿಗಳುದಯಿಸುತ್ತವೆ. ಇಷ್ಟು ಮಾತ್ರವಲ್ಲ ತುಂಗೆಯ ಆರ್ಭಟಕ್ಕೆ ಮಹಿಷಿಯ ಸಮೀಪ ತುಂಗೆ ತನ್ನ ಪತವನ್ನೇ ಬದಲಿಸಿ ಲಕ್ಷಾಂತರ ಲೋಡಿನ ಮರಳಿನ ದ್ವೀಪವನ್ನೆ ನಿರ್ಮಿಸುತ್ತದೆ. ಶಿವರಾಜ ಪುರ ಮುಂತಾದೆಡಗಳಲ್ಲಿದ್ದ ಅಗ್ರಹಾರಗಳು ಮುಳುಗಿ ಹೋಗಿ ಅಲ್ಲಿದ್ದ ನೂರಾರು ಬ್ರಾಹ್ಮಣ ಕುಟುಂಬಗಳು ದಿಕ್ಕು ದೆಸೆ ಕಾಣದೆ ಹುಟ್ಟಿ ಬೆಳೆದ ಊರನ್ನು ತೊರೆದು ಪೇಟೆ ಪಟ್ಟಣ ಸೇರಿ ಬದುಕು ಕಟ್ಟಿಕೊಂಡದ್ದು ಒಂದು ಇತಿಹಾಸವಾದರೆ ಮಹಿಷಿಯಲ್ಲಿದ್ದ ಅಗ್ರಹಾರದ ಬ್ರಾಹ್ಮಣರುಗಳದು ಮತ್ತೊಂದು ಕತೆ. ಮಹಿಷಿಯ ಹೊಳೆಯ ದಡದಲ್ಲಿದ್ದ ಅಶ್ವಥ ನಾರಾಯಣ ದೇವಸ್ಥಾನ ಮುಳುಗಡೆಯಾಗುತ್ತದೆ. ಜೊತೆಗೆ ಅಲ್ಲಿದ್ದ ಬ್ರಾಹ್ಮಣ ಕುಟುಂಬಗಳು ಸಹಾ ಊರು ಬಿಡಬೇಕಾಗುತ್ತದೆ.ಅದೇ ಮಹಿಷಿ ಕುಟುಂಬ‌‌ ದೂರದ ಗಜೇಂದ್ರಗಢದಲ್ಲಿ ನೆಲೆ ಕಂಡುಕೊಳ್ಳುತ್ತದೆ.

ಸರೋಜಿನಿ ಮಹಿಷಿ, ಪಿ.ಬಿ ಮಹಿಷಿಯಂತವರು ಸಾಮಾಜಿಕ ಕ್ಣೇತ್ರದಲ್ಲಿ ಉನ್ನತ ಹುದ್ದೆ ಪಡೆದು ಮುನ್ನಡೆ ಸಾಧಿಸುತ್ತಾರೆ. ಬಹುಭಾಷೆಯಲ್ಲಿ ವಿದ್ವಾಂಸರುಗಳಾಗಿ ಈ ಕುಟುಂಬ ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೇಯೋಭಿವೃದ್ದಿ ಹೊಂದಿದ ಬಗೆ ವಿಶಿಷ್ಟವಾದುದು‌. ಪ್ರಕಾಂಡ ಪಾಂಡಿತ್ಯದ ಸರೋಜಿನಿ ಮಹಿಷಿಯವರು ಹೋದ ಎತ್ತರಕ್ಕೆ ಅವರೊಂದಿಗೆ ಸೇರಿಕೊಂಡ ಹತ್ತು ಹಲವಾರು ಹುದ್ದೆಗಳೆ ಸಾಕ್ಷಿಯಾಗಿವೆ.ಗಜೇಂದ್ರ ಘಡದಲ್ಲಿ ಉತ್ತರೋತ್ತರ ಎತ್ತರಕ್ಕೆ ಬೆಳೆದರೂ ತಮ್ಮ ಹೆಸರಿನ ಹಿಂದೆ ಮಹಿಷಿ ಎಂಬುದನ್ನು ಉಳಿಸಿಕೊಂಡೇ ಬಂದರು.ಅಷ್ಟು ಮಾತ್ರವಲ್ಲ ಮಹಾನೆರೆಯ ಕಾಲದಲ್ಲಿ ಊರು ಬಿಟ್ಟು ರಾಷ್ಟ್ರೀಯ ಮಟ್ಟದಲ್ಲಿ ಸರೋಜಿನಿ ಮಹಿಷಿಯವರು ಬೆಳೆದರೂ ಊರಿನ ಅಶ್ವತ್ತನಾರಾಯಣ ದೇವಸ್ಥಾನದೊಂದಿಗಿನ ಇವರ ಸಂಬಂಧವನ್ನು ಉಳಿಸಿ ಕೊಂಡು ಬಂದರು.

ಇನ್ನು ಪಿ.ಬಿ ಮಹಿಷಿಯವರೋ ರಾಜ್ಯದ ಮುಖ್ಯ ಕಾರ್ಯದರ್ಶಿಯಾದ ಮೇಲೆ ಮಹಿಷಿ ತಿಮ್ಮಪ್ಪನವರ ಒತ್ತಾಸೆಯ ದೆಸೆಯಿಂದ ಮಹಿಷಿಯ ಜೊತೆಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿ ಕೊಂಡರು. ಅವರು ಮುಖ್ಯ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಇದೇ ಮಹಿಷಿಯ ಅಶ್ವತ್ತನಾರಾಯಣ ದೇವಸ್ತಾನದೆದುರ ಸಮಾರಂಭವೊಂದು ನಡೆಯುತ್ತದೆ.ಅ ಸಮಾರಂಭದಕ್ಕೆ ಪಿ.ಬಿ ಮಹಿಷಿಯವರ ಜೊತೆ ಅಂದಿನ ಲೋಕೋಪಯೋಗಿ ಸಚಿವ ರೇವಣ್ಣನವರೂ ಬಂದು ಇದೆ ಸಮಾರಂಭದಲ್ಲಿ ಮಹಿಷಿ ಸೇತುವೆಯ ಕೊಡುಗೆಯನ್ನು ನೀಡಿ ಪಿ.ಬಿ ಮಹಿಷಿಯವರ ಮೇಲಿದ್ದ ಅಭಿಮಾನದ ಪ್ರತೀಕವಾಗಿ ಈ ಸೇತುವೆ ಹೊರ ಹೊಮ್ಮುತ್ತದೆ‌.ಈ ಸೇತುವೆಯ ಕೊಡುಗೆಯನ್ನು ಗುರು ಕಾಣಿಕೆ ಎಂದು ಅಂದು ನಡೆದ ಸಭೆಯಲ್ಲಿ ರೇವಣ್ಣನವರು ಹೇಳುತ್ತಾರೆ.

ರೇವಣ್ಣನವರು ಹೇಳಿದಂತೆ ನಡೆದುಕೊಂಡರು ಕೂಡಾ. ಹದಿನೇಳು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇತುವೆಯ ನಿರ್ಮಾಣವೂ ಆಯಿತು. ಮಹಿಷಿಯಿಂದ ಹೆದ್ದೂರು ಕಟ್ಟೆಹಕ್ಕಲಿನ ಜೊತೆ ಕುಪ್ಪಳ್ಲಿಯನ್ನು ಸಂಪರ್ಕಿಸುವ ಈ ಸೇತುವೆ ಇತ್ತ ಕಡೆ ಹುಬ್ಬಳ್ಳಿ ಹಾವೇರಿಯನ್ನು ಬೆಸೆಯುತ್ತದೆ. ನೋಡ ನೋಡುತ್ತಿದ್ದಂತೆ ತೀರ್ಥಹಳ್ಳಿಯವರಿಗೆ ಹುಬ್ಬಳ್ಳಿ -ಹಾವೇರಿ- ಬೆಳಗಾವಿಗಳು ಕೂಡಾ ಕಣ್ಣಮುಂದೆ ಶರ ವೇಗದಲ್ಲಿ ಗೋಚರಿಸುವಷ್ಟು ಹತ್ತಿರಕ್ಕೆ ಬರಲು ಕಾರಣವಾಗುತ್ತದೆ ಈ ಸೇತುವೆ ಹೊಂದಿದ ಉದ್ದೇಶ.

ಸೇತುವೆಯೇನೊ ಕ್ಷಿಪ್ರವಾಗಿ ಮುಗಿಯುತ್ತದೆ. ಸೇತುವೆಯ ಮೇಲೆ ನಿಂತರೆ ರಾಷ್ಟ್ರ ಕವಿ ಕುವೆಂಪುರವರ ಮಹೋನ್ನತ “ದೇವರು ರುಜು ಮಾಡಿದನು” ಕವಿತೆಗೆ ಕಾರಣವಾದ ನಯನ ಮನೋಹರ ಸಿಬ್ಬಲಗುಡ್ಡೆಯ ಹೊಳೆವ ಮರಳ ಬಯಲು ಕಣ್ಣಿಗೆ ಮುದ ನೀಡುತ್ತದೆ. ಆದರೇನು ಮಾಡುವುದು.ಸೇತುವೆ ಸಿದ್ದವಾರೂ ಈ ಸೇತುವೆ ಮುಖಾಂತರ ಆಚೀಚೆ ಹೋಗುವ ರಸ್ತೆಗಳು ಹದಿನಾರು ವರ್ಷದಿಂದ ರೆಡಿಯಾಗಿಲ್ಲ.ಈಗಿನ ಆಡಳಿತಗಾರರು ಈ ಬಗ್ಗೆ ಅಣುವಿನಷ್ಟೂ ತಲೆ ಕೆಡಿಸಿಕೊಂಡಂತಿಲ್ಲ. ಮಹಿಷಿ ಕಡೆಯಿಂದ ಕುರುಚಲು ಕುನ್ನೇರಲು ಮೊಟ್ಟುಗಳನ್ನು ಭೇದಿಸಿಕೊಂಡು ಉಬ್ಬಸ ಬಿಡುತ್ತಾ ಸೇತುವೆ ಹತ್ತಬೇಕು.ಯಥಾಪ್ರಕಾರ ಹೆದ್ದೂರು ಕಡೆಗೆ ಸೇತುವೆಯಿಂದ ಕೆಳಗೆ ನೋಡಿದರೆ ಅಬ್ಬರಿಯೊಂದು ಗೋಚರಿಸುತ್ತದೆ.ಆ ಅಬ್ಬರಿಯನ್ನು ಕಬ್ಬಿಣದ ಏಣಿಯ ಮೂಲಕ ಇಳಿದು ಗದ್ದೆ ಬಯಲಿಗೆ ಬಂದು ಹತ್ತಿ ಹಾರಿ ಹೆದ್ದೂರು ಸೇರಬೆಕು. ಹದಿನೇಳು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಸೇತುವೆ ಮಾಡಿರುವುದು ವಾಹನಗಳ ಓಡಾಟಕ್ಕೋ ಅಥವಾ ಮ್ಯೂಸಿಯಮ್ ಗಾಗಿಯೊ ಎಂಬ ಪ್ರಶ್ನೆ ಎದುರಾಗುತ್ತದೆ.ಅಂದು ದಿವಂಗತ ಮಹಿಷಿ ತಿಮ್ಮಪ್ಪನವರ ಪರಿಶ್ರಮದ ದ್ಯೋತಕವಾಗಿ ಹಾಗೂ ರೇವಣ್ಣನವರು ಮಹಿಷಿ ಕುಟುಂಬದ ಮೇಲಿಟ್ಟ ಪ್ರೀತಿಗಾಗಿ ಸೇತುವೆ ಮಂಜೂರಾಯಿತು. ಸೇತುವೆ ಕಾಮಗಾರಿ ಬರದಿಂದ ಸಾಗಿ ಸೇತುವೆ ಕೆಲಸ ಮುಗಿದು ಈಗಾಗಲೆ ಹತ್ತಾರು ವರುಷಗಳು ಉರುಳಿವೆ‌‌.ಕಾಮಗಾರಿ ಆರಂಭಿಸಲು ದಿವಂಗತ ಮಹಿಷಿ ತಿಮ್ಮಪ್ಪನವರು ಕಾಗದ ಪತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ ದೃಷ್ಯ ಕಣ್ಣಿಗೆ ಕಟ್ಟುವಂತೆ ನನ್ನೆದುರಿಗೆ ಗೋಚರವಾಗುತಿದೆ. ಮಹಿಷಿ ತಿಮ್ಮಪ್ಪನವರು ನಮ್ಮೊಂದಿಗೆ ಇದ್ದಿದ್ದರೆ ರಸ್ತೆ ಕಾಮಗಾರಿ ಮಾಡಿಸದೆ ಬಿಡುತ್ತಿರಲಿಲ್ಲ ಎಂಬುದು ದಬ್ಬಣ ಗದ್ದೆಯ ಯುವಕ ಶ್ರೀನಂದರವರ ಅಭಿಪ್ರಾಯದಲ್ಲಿ ಸತ್ಯವಿದೆ‌‌.

ಮೊನ್ನೆ ಮೊನ್ನೆ ಸೇತುವೆ ನೋಡುತ್ತಾ ನೋಡುತ್ತಾ ಹೋದಂತೆ ೧೯೨೪ ರ ಮಾರಿ ನೆರೆ, ಮಹಿಷಿ ತಿಮ್ಮಪ್ಪ, ಸರೋಜಿನಿ ಮಹಿಷಿ , ಪಿ.ಬಿ ಮಹಿಷಿ, ಹೆಚ್.ಡಿ ರೇವಣ್ಣ ಇವರೆಲ್ಲ ನೆನಪನಾಳಕ್ಕೆ ನುಸುಳಿದವು. ತುಂಗೆಯ ಭೋರ್ಗರೆತ ಹಾಗೆಯೆ ಇತ್ತು.


  • ನೆಂಪೆ ದೇವರಾಜ್ (ಲೇಖಕರು, ಪತ್ರಕರ್ತರು), ತೀರ್ಥಹಳ್ಳಿ.

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW