ಹೂಲಿ ಶೇಖರ್ ಅವರ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ‘ಕರಿಯು ಕನ್ನಡಿಯೊಳಗೆ’ ಕೃತಿಯ ಕುರಿತು ಹಿರಿಯ ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ಬರೆದ ಒಂದು ಪುಸ್ತಕ ಪರಿಚಯವನ್ನು ತಪ್ಪದೆ ಓದಿ…
ನಾಟಕ : ಕರಿಯು ಕನ್ನಡಿಯೊಳಗೆ
ಲೇಖಕರು : ಹೂಲಿ ಶೇಖರ
ಪ್ರಕಾಶಕರು : ಬೆರಗು ಪ್ರಕಾಶನ
ಪ್ರಕಾರ : ನಾಟಕ
ಬೆಲೆ : 120/
ಪುಟ : 109
ಖರೀದಿಸಲು : 9880144705
ಕರಿಯು ಕನ್ನಡಿಯೊಳಗೆ ಹೂಲಿ ಶೇಖರ :
“ಕನ್ನಡ ಸಂಸ್ಕೃತಿ ಸಂಘರ್ಷಕ್ಕೆ ಸಿಲುಕಿದಾಗಲೆಲ್ಲ ಮತ್ತೆ ಮತ್ತೆ ಕಲ್ಯಾಣದ ಕ್ರಾಂತಿಯ ಕಡೆಗೆ ತಿರುಗಿ ನೋಡುವುದು ಅನಿವಾರ್ಯ” ಎಂದು ನನ್ನ ಮೇಷ್ಟ್ರು ಡಿ.ಆರ್.ನಾಗರಾಜ್ ಒಂದು ಕಡೆ ಬರೆದಿದ್ದಾರೆ.
ಗೌರಿ ಲಂಕೇಶ್ ಮತ್ತು ನಮ್ಮ ಖ್ಯಾತ ಸಂಶೋಧಕರಾದ ಡಾ.ಎಂ.ಎಂ.ಕಲ್ಬುರ್ಗಿಯವರ ಬರ್ಬರ ಕೊಲೆಗಳಾದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಹೂಲಿ ಶೇಖರ ಅವರ ಮೇಲಿನ ನಾಟಕಕ್ಕೆ ಕಲ್ಬರ್ಗಿಯವರ ಮಾತುಗಳೇ ಪ್ರೇರಣೆ. ಅದಕ್ಕೆ ಅವರನ್ನೆ ನಾಟಕದ ಒಂದು ಪ್ರಧಾನ ಪಾತ್ರವಾಗಿಸಿಕೊಂಡು ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣದ ಕ್ರಾಂತಿಯ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ. ಅದೆಂದರೆ ಇಲ್ಲಿಯವರೆಗೂ ನಂಬಿಕೊಂಡಂತೆ ಬಿಜ್ಜಳನ ಕೊಲೆಗೆ ಶರಣರು ಕಾರಣಕರ್ತರಲ್ಲ, ಅದಕ್ಕೆ ಬದಲಾಗಿ ಬಿಜ್ಜಳನ ಮಗ ಸೋವಿದೇವ ಅಧಿಕಾರ ದಾಹಕ್ಕಾಗಿ ನಡೆಸಿದ ಕಗ್ಗೊಲೆ ಎಂದು ಸಿದ್ದಪಡಿಸಿದ್ದಾರೆ. ಇದರಿಂದ ಬಿಜ್ಜಳನಿಗೆ ಬಸವಣ್ಣ ಮತ್ತು ಶರಣರ ಬಗ್ಗೆ ಇದ್ದ ತಪ್ಪುಕಲ್ಪನೆ ಮಾಯವಾಗಿ ಪಶ್ಚಾತ್ತಾಪ ಉಂಟಾಗುತ್ತದೆ. ಇದರಿಂದ ಶರಣರ ಸ್ವರ್ಗದ ದ್ವಾರಕ್ಕೆ ತಲುಪಿದವರು, ಅದನ್ನು ನಿರಾಕರಿಸಿ ತಮ್ಮ ತತ್ವ ಮತ್ತು ಆಚರಣೆಗಳ ಮೂಲಕ ಧರೆಯನ್ನೇ ಸ್ವರ್ಗವನ್ನಾಗಿಸುವ ಪಣತೊಡುತ್ತಾರೆ. ಈ ಇತ್ಯಾತ್ಮಕ ನಿಲುವಿನೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಇದಕ್ಕಾಗಿ ಅವರು ಕಲ್ಬುರ್ಗಿಯವರ ಪಾತ್ರವನ್ನು ತೀರ್ಪುಗಾರರನ್ನಾಗಿಸಿ, ವಿಚಾರಣೆಯ ಮೂಲಕ ( ಶರಣರ ಮತ್ತು ವೈದಿಕರ) ವಿನ್ಯಾಸವನ್ನು ಅನುಸರಿಸಿದ್ದಾರೆ.ಇದೆ ಕಾರಣಕ್ಕೆ ಈ ನಾಟಕ ಇಲ್ಲಿಯವರೆಗೆ ಕಲ್ಯಾಣ ಕ್ರಾಂತಿಯ ಕುರಿತು ಬಂದಿರುವ ನಾಟಕಗಳಿಗಿಂತ ಇದು ಭಿನ್ನವೂ ವಿಶಿಷ್ಟವೂ ಆಗಿದೆ.
ಕರಿಯು ಕನ್ನಡಿಯೊಳಗೆ ಲೇಖಕರು ಹೂಲಿ ಶೇಖರ್
ಕಲ್ಯಾಣ ಕ್ರಾಂತಿಯಂತಹ ಮಹದ್ ಘಟನೆಯನ್ನು ಈ ಚಿಕ್ಕ ನಾಟಕ ಒಳಗೊಂಡಿರುವುದರಿಂದ ಇದಕ್ಕೆ ಇಟ್ಟಿರುವ ” ಕರಿಯು ಕನ್ನಡಿಯೊಳಗೆ” ಎಂಬ ಶೀರ್ಷಿಕೆ ಸಾರ್ಥಕವಾಗಿದೆ. ತಮ್ಮ ಕೈಯಾರೆ ಈ ಕೃತಿಯನ್ನು ಕೊಟ್ಟ ನಾಟಕಕಾರ ಶ್ರೀ ಹೂಲಿ ಶೇಖರ ಅವರಿಗೆ, ಅವರ ಮನೆಗೆ ಕರೆದು ಆತ್ಮೀಯ ಆತಿಥ್ಯ ನೀಡುವುದರೊಂದಿಗೆ ಇದಕ್ಕೆ ಕಾರಣಕರ್ತೆಯಾದ ಅವರ ಪ್ರತಿಭಾವಂತ ಮಗಳು ಆಕೃತಿಯ ನಿರ್ದೇಶಕಿ ಶಾಲಿನಿ ಪ್ರದೀಪ್ ಅವರಿಗೆ ವಂದನೆ ಅಭಿನಂದನೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು