ಪ್ರಕೃತಿ ನಡುವಿದೆ ಸೊಬಗಿನ ಕಾರವಾರ. ಅಲ್ಲೊಂದು ನಮ್ಮೂರು ಸುಂದರ ಹೊನ್ನಾವರ ಎಂದು ಪ್ರಕೃತಿಯ ಸೊಬಗನ್ನು ನಾಗರಾಜ್ ಲೇಖನ್ ಅವರು ಕವನದ ರೂಪದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ.
ಕಡಲ ದಡದ ಪ್ರಕೃತಿ ಮಡಿಲಲ್ಲಿ ಸುಂದರ ಕಾರವಾರ
ಅಲ್ಲೊಂದು ನಮ್ಮೂರು ಹಸಿರಿನ ಹೊನ್ನಾವರ
ಅಡಿಕೆ,ತೆಂಗು,ಬಾಳೆಯಿಂದ ಕಂಗೊಳಿಸುತ್ತಿರುವ ಭೂದೇವಿ
ಹಸಿರಿನ ಸಿರಿಯಿಂದ ತುಂಬಿರುವ ಸುಂದರ ಶ್ರೀದೇವಿ
ಜನ-ಮನ ತಣಿಸುವ ಸಂಜೆಯ ಕಡಲತೀರ
ಸೃಷ್ಠಿಯ ಮಡಿಲಲ್ಲಿರುವ ಇಡಗುಂಜಿ ಗಣೇಶ ಮಂದಿರ
ಜೀವನ ಶಿಕ್ಷಣ ಕಲಿಸುವ ಹಲವು ವಿದ್ಯಾಲಯ
ಕಲಿಯುವ ಮನಸಿದ್ದವರಿಗೆ ಇದು ದೇವಾಲಯ
ಎಲ್ಲೇ ನಿಂತು ನೋಡಿದರೂ ಹಸಿರು ವನಸಿರಿಯ ರೂಪವೆ
ನಡುವಲ್ಲೊಂದು ಕನ್ನಡ ನಾಡಿನ ಉದ್ದದ ಶರಾವತಿ ಸೇತುವೆ
ವನದೇವಿಯ ದೇಗುಲವಿದೆ ಕಾಡಿನ ನಡುವೆ
ಮರಗಳ ತಂಪು, ಹಕ್ಕಿಯ ಇಂಪು ಎಂದೆಂದೂ ದೇವಿಗೆ ನಗುವೆ
ತೋಂ…..ತೋಂ…….ಎನ್ನುವ ಚಂಡೆ ಮೃದಂಗ
ಧೀಂ……ಧೀ೦……..ಎನ್ನುವ ಯಕ್ಷಗಾನ ರಂಗ
ಚಿಟ್ಟಾಣಿ,ಶಂಕರನಾಗ್ ರಂತಹ ಕಲಾವಿದರ ತವರೂರು
ನಿಸರ್ಗದ ಮಡಿಲಲ್ಲಿ ಅಡಗಿರುವ ಪ್ರತಿಭೆಗಳು ಸಾವಿರಾರು
ಪ್ರಕೃತಿ ನಡುವಿನ ಸೊಬಗಿನ ಕಾರವಾರ
ಅಲ್ಲೊಂದು ನಮ್ಮೂರು ಸುಂದರ ಹೊನ್ನಾವರ.||
ನಾಗರಾಜ್ ಲೇಖನ್ ( ಹರಡಸೆ,ಹೊನ್ನಾವರ)