“ಅದಮ್ಯ ಚೇತನ ನಮ್ಮ ಕಥಾಗುಚ್ಚ”ಕಥಾಗುಚ್ಚ ಸಾಹಿತ್ಯ ಪ್ರಿಯರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಷ್ಟೇ ಅಲ್ಲ, ಒಗ್ಗಟ್ಟು, ಸಹಬಾಳ್ವೆ, ಜವಾಬ್ದಾರಿ ಇತ್ಯಾದಿ ಜೀವನದ ಅಮೂಲ್ಯ ವಿಷಯಗಳನ್ನು ಈ ವೇದಿಕೆ ಕಲ್ಪಿಸಿಕೊಟ್ಟಿದೆ. ಈಗ ಕಥಾಗುಚ್ಚಕ್ಕೆ ನಾಲ್ಕನೇಯ ವಾರ್ಷಿಕೋತ್ಸವದ ಸಂಭ್ರಮ. ಚಿತ್ರದುರ್ಗದಲ್ಲಿ ನಡೆಯಲಿದೆ. ಕಥಾಗುಚ್ಚ ಸದಸ್ಯರೇ ಆದ ಪೂರ್ಣಿಮಾ ಮರಳಿಹಳ್ಳಿ ಅವರು ಕಥಾಗುಚ್ಛದ ಬಗ್ಗೆ ಲೇಖನವನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…

“ಸಂಗೀತ ಕಲೆಯೊಂದು ಸಾಹಿತ್ಯ ಕಲೆಯೊಂದು
ಅಂಗಾಂಗ ಭಾವ ರೂಪಣದ ಕಲೆಯೊಂದು
ಸಂಗಳಿಸಲೀ ಕಲೆಗಳನುನಯವು ಚರ್ಚೆಯಲಿ
ಮಂಗಳೋನ್ನತ ಕಲೆಯೋ- ಮಂಕುತಿಮ್ಮ”.

ಸಂಗೀತ,ಸಾಹಿತ್ಯ, ಅಭಿನಯ ಕಲೆಗಳ ಒಡನಾಟ ಬೆಳೆದರೆ ಅವರ್ಣನೀಯ ಆನಂದ ಸಿಗುತ್ತದೆ. ಈ ಕಲೆಗಳೆಲ್ಲ ಮಾನವನನ್ನು ಉದ್ದರಿಸುತ್ತದೆ. ಶ್ರೀ ಡಿ.ವಿ.ಜಿ ಯವರ ಈ ಕಗ್ಗ ಅದೆಷ್ಟು ಅರ್ಥಪೂರ್ಣ ಅಲ್ಲವೇ.?? ಸಾಹಿತ್ಯದ ಕಲೆಗೆ ಈ ಕಥಾಗುಚ್ಚ ಎಂಬ ವೇದಿಕೆ ನಮಗೆಲ್ಲಾ ಅವರ್ಣನೀಯ ಆನಂದವನ್ನೇ ನೀಡಿದೆ. ಜೊತೆಗೆ ಅದಮ್ಯ ಚೇತನ ಕೂಡ ನೀಡಿ ಬೆಳೆಸಿದೆ. ನಮ್ಮ ಕಥಾಗುಚ್ಚದ ಬಗ್ಗೆ ಅದೆಷ್ಟು ಬರೆದರೂ, ಹೇಳಿದರೂ ಕಡಿಮೆಯೇ. ಆದರೂ ನನ್ನ ಭಾವನೆಗಳಿಗೆ ಅಕ್ಷರ ರೂಪ ಇಲ್ಲಿ ಕೊಟ್ಟಿರುವೆ.

“ಅಮೃತಘಳಿಗೆ…”

ಸಾಮಾಜಿಕ ಜಾಲತಾಣದಲ್ಲೇ ಅತ್ಯಂತ ಉತ್ತುಂಗದ ಶಿಖರಕ್ಕೆ ತನ್ನದೇ ಆದ ಛಾಪು ಮೂಡಿಸುತ್ತ ಕನ್ನಡ ಕಸ್ತೂರಿಯ ಕಂಪನ್ನು ಸೂಸುವಂತಹ ಕಥಾಗುಚ್ಚ ಎಂಬ ಸಾಹಿತ್ಯ ಬಳ್ಳಿ ಅದ್ಯಾವ ಘಳಿಗೆಯಲ್ಲಿ ಮುಖಪುಟದಲ್ಲಿ ಒಡಮೂಡಿತೋ ನಿಜಕ್ಕೂ ಆ ಗಳಿಗೆಯೇ ಅಮೃತ ಘಳಿಗೆ. “ಕರ್ಮಣ್ಯೇ ವಾದಿಕಾರಸ್ತೆ ಮಾ ಫಲೇಷು ಕದಾಚನಾ” ಯಾವ ಸಂಬಳ, ಪ್ರಮೋಶನ್,ರಜಾ ಸೌಲಭ್ಯ ಇಲ್ಲದ ಹುದ್ದೆ ನಮ್ಮ ನಿರ್ವಾಹಕಿಯರ ಹುದ್ದೆ. ಯಾವ ಫಲಾಫೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ,ನಿನ್ನ ಕರ್ಮ ನೀನು ಮಾಡು ಫಲಾಫಲಗಳನ್ನು ದೇವರಿಗೆ ಬಿಟ್ಟು ಬಿಡು ಎಂಬ ಉಕ್ತಿಯಂತೆ ಯಾವುದೇ ಫಲಾಫೇಕ್ಷೆ ಇಲ್ಲದೇ ತಮ್ಮ ಕೌಟುಂಬಿಕ ಜವಾಬ್ದಾರಿಗಳ ನಡುವೆಯೂ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟು ಸಾಹಿತ್ಯದ ಸೇವೆಗೆ ಕಂಕಣಬದ್ದರಾಗಿ ನಿಂತಿದ್ದಾರೆ ನಿರ್ವಾಹಕಿಯರು. ಗುಂಪಿನ ಶಿಸ್ತು, ಗುಣಮಟ್ಟ, ಪಾರದರ್ಶಕತೆ, ಜವಾಬ್ದಾರಿ ಹಂಚಿಕೆ, ವಸ್ತುನಿಷ್ಠತೆ ,ನಿಯಮಗಳ ಪಾಲನೆ ಹೀಗೆ ಅಚ್ಚುಕಟ್ಟಾದ ಗುಂಪಿನ ಕಾರ್ಯವೈಖರಿಗೆ ಕಾರಣವೇ ಈ ಕರ್ಮಯೋಗಿಗಳ ಕಾಯಕ.

“ಒಗ್ಗಟ್ಟೇ ಬಲ…”

ನಿರ್ವಾಹಕಿಯರು ರೂಪಿಸಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ಲಾಘನೀಯ ಸೇವೆ ನಮ್ಮ ಸಂಘಟಕರದ್ದು. ಕಥಾಗುಚ್ಚದ ಯಾವುದೇ ಕಾರ್ಯಕ್ರಮಗಳು ಬರಲಿ ತಾಮುಂದು ನಾಮುಂದು ಎಂದು ಜವಾಬ್ದಾರಿಗಳನ್ನು ಹೊತ್ತು ಯಶಸ್ವಿಗೊಳಿಸುತ್ತಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ಮಾದರಿ ಆಗಿದ್ದಾರೆ.

“ಪಾತ್ರವರಿತ ದಾನ…”

ಬರಹಗಾರರಿಗೆ ಸ್ಫೂರ್ತಿದಾಯಕ ಸ್ಪರ್ಧೆಗಳನ್ನು ಏರ್ಪಡಿಸಿ ತಮ್ಮ ಸ್ವಂತ ಹಣದಿಂದ ಪುಸ್ತಕಗಳನ್ನು ನೀಡುತ್ತಿರುವ ನಮ್ಮ ಆಯೋಜಕರು ಕನ್ನಡ ಸಾಹಿತ್ಯ ಸೇವೆಯಲ್ಲಿ ಹೆಚ್ಚಿನದ್ದೇ ಪಾಲು ತೆಗೆದುಕೊಂಡಿದ್ದಾರೆ. ಯಾವುದೇ ಕಥಾಗುಚ್ಚದ ಕಾರ್ಯಕ್ರಮಗಳಿರಲಿ ತನು ,ಮನ,ಧನದಿಂದ ಸೇವೆ ಸಲ್ಲಿಸುವಂತಹ ಪಾತ್ರವರಿತ ದಾನ ನಮ್ಮ ಸದಸ್ಯ ದಾನಿಗಳದ್ದು.

“ಮೃಷ್ಟಾನ್ನ ಭೋಜನ”

ಅಬ್ಬಬ್ಬಾ!! ಅದೆಂಥಹ ವಿದ್ವತ್ಪೂರ್ಣ ಲೇಖನಗಳು, ಚಿಂತನ ಮಂಥನಗಳು, ಸಿನಿಮಾಗಳನ್ನೇ ತೋರಿಸುವಂಥಹ ಕಥೆ, ಕಾದಂಬರಿಗಳು ,ಪತ್ತೆದಾರಿ ಕಥೆಗಳು,ಲಲಿತ ಪ್ರಬಂಧಗಳು, ಹಾಸ್ಯಪೂರ್ಣ ಬರಹಗಳು, ತುಣುಕು ಮಿಣುಕುಗಳು, ಕಾವ್ಯಮಯ ಭಾವ ಸೃಷ್ಟಿಸುವಂಥಹ ಕವನಗಳು, ಸಾಹಿತ್ಯದ ತೃಷೆಗೆ ನಮ್ಮ ಕಥಾಗುಚ್ಚವು ಮೃಷ್ಟಾನ್ನ ಭೋಜನವನ್ನೇ ಉಣಬಡಿಸುತ್ತದೆ. ಅದೆಷ್ಟು ಓದಿದರೂ ಮುಗಿಯದಷ್ಟು ಬರಹಗಳ ಸುರಿಮಳೆ ಪ್ರತಿದಿನ. ಇದೊಂದು ಅಕ್ಷಯ ಪಾತ್ರೆ ಎಂದರೆ ಸುಳ್ಳಾಗದು.

“ಜೀವಧಾತು…”

ಕೇವಲ ಬರಹಗಾರರೇ ತುಂಬಿದ ಗುಂಪು ನಮ್ಮದಲ್ಲ.
ಬರಹಗಾರರ ಎರಡು ಪಟ್ಟು ಹೆಚ್ಚು ಆಸಕ್ತ ಓದುಗರಿದ್ದಾರೆ. ಅದೆಷ್ಟೋ ಸದಸ್ಯರು ತೆರೆಮರೆಯಲ್ಲಿ ಕಥಾಗುಚ್ಚದ ಸಾಹಿತ್ಯವನ್ನು ಓದುತ್ತ ಸಾಹಿತ್ಯಾನಂದ ಪಡೆಯುತ್ತಿದ್ದಾರೆ. ಬರಹಗಾರರಿಗೆ ಸ್ಫೂರ್ತಿ, ಹಾಗೂ ಕಥಾಗುಚ್ಚದ ಜೀವಾಳವೇ ಓದುಗರು.

“ಎಲೆಮರೆಯ ಸೇವೆ…”

ಯಾವ ಹೆಸರು,ಪ್ರಶಂಸೆ ಆಪೇಕ್ಷಿಸದೇ ಕಥಾಗುಚ್ಚದ ಯಾವುದೇ ಸಂದರ್ಭ ಇರಲಿ ,ಯಾವುದೇ ಸಮಯವಿರಲಿ ಇ – ಪ್ರಮಾಣ ಪತ್ರಗಳನ್ನು ತಯಾರಿಸಿಕೊಡುತ್ತ ಕೆಲವು ಸದಸ್ಯರು ಎಲೆಮರೆಯಲ್ಲೇ ಸಾಹಿತ್ಯ ಸೇವೆಯ ಪಾಲುದಾರರಾಗಿದ್ದಾರೆ.

ನಮ್ಮ ಕಥಾಗುಚ್ಚ ಸಾಹಿತ್ಯ ಕೇವಲ ಜಾಲತಾಣದಲ್ಲಿ ಮೀಸಲಾಗದೇ ಹಲವಾರು ಕೃತಿಗಳಲ್ಲಿ ಮೆರೆಯುತ್ತಿದೆ. ಜೀವನ ಜೋಕಾಲಿ, ಹಸಿರು ಗಾಜಿನ ಬಳೆಗಳು, ಪಯೋನಿಧಿ ಭಾಗ ೧,೨,೩, ಇತ್ತೀಚೆಗಷ್ಟೇ ಕಾವ್ಯಧಾರೆ, ಮಾನ್ವಿತ,ವಸುಂಧರ,ಚಿರಂತನ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಿದ ಕೀರ್ತಿ ನಮ್ಮ ಗುಚ್ಚದ್ದು.

ಮೋಡ ಮುಚ್ಚಿದ ಶಶಿಯಂತಿದ್ದ ನಮಗೆಲ್ಲ ಆಗಸದಂತಹ ವೇದಿಕೆ ಕಲ್ಪಿಸಿ ಕೊಟ್ಟ ಕೀರ್ತಿ ನನ್ನ ಕಥಾಗುಚ್ಚದ್ದು.“ಬಾಂಧವ್ಯಗಳ ಬೆಸುಗೆ…”

ಕಥಾಗುಚ್ಚದ ಇಡೀ ಬಳಗದಲ್ಲಿ ತಂದೆ,ತಾಯಿ,ಅಕ್ಕ,ಅಣ್ಣ,ತಮ್ಮ,ತಂಗಿ, ಗೆಳೆಯ,ಗೆಳತಿಯರೆಂಬ ಬಾಂಧವ್ಯವೂ ಬೆಸೆದಿದೆ. ನೋವು ಹಂಚಿಕೊಳ್ಳುವ ಮನವಿದೆ, ಸಾಂತ್ವನದ ಮಡಿಲಿದೆ,ಖುಷಿಯನ್ನು ಇಮ್ಮಡಿಸುವ ಮನಸ್ಸಿದೆ. ಹರಟೆ ಇದೆ,ಮಾರ್ಗದರ್ಶನವೂ ಇದೆ.

“ಗಡಿಯಾಚೆಗೂ ಕಥಾಗುಚ್ಚ…”

ಪುಟ್ಟ ಗ್ರಾಮದಿಂದ ಅಮೇರಿಕಾ ,ಆಸ್ಟ್ರೇಲಿಯದಂತಹ ದೇಶ ವಿದೇಶಗಳಲ್ಲೂ ನಮ್ಮ ಕಥಾಗುಚ್ಚವೆಂಬ ಕುಸುಮದ ಪರಿಮಳ ಹರಡಿದೆ. ತಾಯ್ನಾಡು,ನುಡಿಯ ಅಭಿಮಾನವನ್ನು ತಮ್ಮ ಸಕ್ರಿಯ ಬರವಣಿಗೆಯ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

“ಕಥಾಗುಚ್ಚವೆಂಬ ಗುರು…”

ಇಲ್ಲಿ ಸದಸ್ಯಳಾದ ಪ್ರಾರಂಭದಲ್ಲಿ ಕೇವಲ ಕವನ ಬರೆಯುತ್ತಿದ್ದ ನನಗೆ ಕಥೆ,ಪ್ರವಾಸ ಕಥನ, ಲಲಿತ ಪ್ರಬಂಧಗಳು, ಕಾಲ್ಪನಿಕ ಕಥೆಗಳು, ಹಾರರ್, ಹಾಸ್ಯ ಎಲ್ಲವನ್ನೂ ಬರೆಯಲು ಕಲಿಸಿದಂತಹ ಗುರು ನನ್ನ ಈ ಕಥಾಗುಚ್ಚ. ಬಹಳಷ್ಟು ಸದಸ್ಯರಿಗೆ ಗುರುವಾಗಿದೆ ಈ ವೇದಿಕೆ.

“ಅಭಿಲಾಷೆ…”

ನಮ್ಮ ಕಥಾಗುಚ್ಚದಲ್ಲಿ ಅದೆಷ್ಟು ಬರಹಗಾರರು ನಾಳೆ ನಾಡಿನ ಶ್ರೇಷ್ಠ ಕವಿಗಳಾಗಬಹುದು, ಕಾದಂಬರಿಕಾರರು ಆಗಬಹುದು, ಬರಹಗಾರರ ಕಥೆಗಳು ಮುಂದೊಂದು ದಿನ ಸಿನಿಮಾ ಆಗಬಹುದು, ಸಾರಸ್ವತ ಲೋಕದ ಪ್ರಶಸ್ತಿಗಳಿಗೆ ಭಾಜನರಾಗಬಹುದು. ಹೀಗೆ ನಮ್ಮಕಥಾಗುಚ್ಚ ಕನ್ನಡ ಸಾಹಿತ್ಯ ಲೋಕಕ್ಕೊಂದು ಹೆಜ್ಜೆ ಗುರುತಾಗಿ ಕೀರ್ತಿ ಪತಾಕಿ ಹಾರಿಸಲಿ ಎಂಬುದೇ ನನ್ನ ಅಭಿಲಾಷೆ.

“ನಿಮಗಿದೋ ವಂದನೆ…”

ಕಥಾಗುಚ್ಚವೆಂಬ ವಿಸ್ಮಯ ದ್ರವ್ಯದಲ್ಲಿ ನಾನೊಂದು ಅಣು ಎಂಬುದೇ ನನಗೊಂದು ಹೆಮ್ಮೆ. ಈ ಬಾರಿಯ ವಾರ್ಷಿಕೋತ್ಸವ ಚಿತ್ರದುರ್ಗದಲ್ಲಿ ನಡೆಯುತ್ತಿದ್ದದ್ದು ಮತ್ತೊಂದು ಹೆಮ್ಮೆಯ ಸಂಗತಿ. ಮತ್ತೊಮ್ಮೆ ಧನ್ಯವಾದಗಳು. ಎಲ್ಲರಿಗೂ ಕಥಾಗುಚ್ಚದ ನಾಲ್ಕನೆಯ ವಾರ್ಷಿಕೋತ್ಸವದ ಶುಭಾಶಯಗಳು.

ಜೈ ಕನ್ನಡಾಂಬೆ, ಜೈ ಭುವನೇಶ್ವರಿ…


  • ಪೂರ್ಣಿಮಾ ಮರಳಿಹಳ್ಳಿ ಧಾರವಾಡ

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW