“ಕಾಂತ”ಪುಸ್ತಕ ಪರಿಚಯ – ಮೋಹನ್ ಕುಮಾರ್ ಡಿ ಎನ್ವ್ಯಾಸರ ಭಾವ ಪ್ರಪಂಚ ಎಷ್ಟು ವಿಶಿಷ್ಟವಾದುದೋ ತಮ್ಮ ಕತೆಗಳ ಪೂರೈಕೆಗಾಗಿ ಅವರೇ ಸೃಷ್ಟಿಸಿಕೊಂಡ ದುರ್ಗಾಪುರ, ಹೊಸದುರ್ಗ, ಕಾಂತಿಪುರ, ಶಂಕರೀ ನದಿ, ಶಂಕರ ಗುಡ್ಡ ಪರಿಸರ ಕೂಡ ಅಷ್ಟೇ ವಿಶಿಷ್ಟವಾದುದು.ಎಂ. ವ್ಯಾಸ ಅವರ “ಕಾಂತ” ಕೃತಿಯ ಕುರಿತು ಲೇಖಕ ಮೋಹನ್ ಕುಮಾರ್ ಡಿ ಎನ್ ಅವರು ಬರೆದ ಪುಸ್ತಕ ಪರಿಚಯ ಓದುಗರ ಮುಂದಿದೆ. ಮುಂದೆ ಓದಿ….

ಪುಸ್ತಕ : “ಕಾಂತ”
ಲೇಖಕರು : ಎಂ. ವ್ಯಾಸ
ಪ್ರಕಾಶನ : ಶ್ರೀನಿವಾಸ ಪುಸ್ತಕ ಪ್ರಕಾಶನ

“ನನ್ನ ಕತೆಗಳನ್ನು ಓದಬೇಡ ರೂಪಾ… ಅವುಗಳೆಲ್ಲಾ ನನ್ನ ಭ್ರಮಾಲೋಕದ ಆಗುಹೋಗುಗಳು. ಅವುಗಳಲ್ಲಿನ ಮಾತುಕತೆಗಳೂ ಹಾಗೇನೇ… ಇಲ್ಲಿ… ಈ ಲೋಕದಲ್ಲಿ ಹಾಗೆ ಯಾರೂ ಮಾತನಾಡೋಲ್ಲ… ವರ್ತಿಸೋದಿಲ್ಲ. ನಾನು ನರಕಗಳಿಗೆ ಸ್ವರ್ಗವನ್ನೂ ಸ್ವರ್ಗಗಳಿಗೆ ನರಕವನ್ನೂ ರಾಚಿಬಿಡುತ್ತೇನೆ. ನೀನು ಆ ಮಾತುಗಳನ್ನು ಅನುಕರಿಸಬೇಡ. ನನ್ನ ಕಥಾ ಪಾತ್ರಗಳೊಡನೆ ಬೆರೆತು ಹೋಗಿ ನನ್ನ ವ್ಯಕ್ತಿತ್ವವೇ ನಾಶವಾಗಿದೆ. ನಾನೀಗ ಸ್ಪಪ್ಡ್ ಎನಿಮಲ್… ತೊಗಲು ಬೊಂಬೆ…”

“ಉರಿ” ಕತೆಯಲ್ಲಿ ಪಾತ್ರಧಾರಿಯೊಂದರ ಮೂಲಕ ವ್ಯಾಸರು ನುಡಿಸುವ ನುಡಿಗಳಿವು. ನುಡಿ ಪಾತ್ರಧಾರಿಯದೇ ಆಗಿದ್ದರೂ, ಸಮಯ ಸಂದರ್ಭಕ್ಕೆ ತಕ್ಕಂತೆ ನುಡಿದಿದ್ದರೂ, ಇದು ಸ್ವತಃ ವ್ಯಾಸರ ಅಂತರಾಳದ ಮಾತುಗಳಲ್ಲದೆ ಬೇರೇನೂ ಆಗಿರಲಿಕ್ಕೆ ಸಾಧ್ಯವಿಲ್ಲ ಎನ್ನುವುದು ನನ್ನ ಬಲವಾದ ನಂಬಿಕೆ ಮತ್ತು ಇಲ್ಲಿಯ ತನಕ ವ್ಯಾಸರ ಬಗೆಗಿನ ಗ್ರಹಿಕೆ.
ಎಲ್ಲರೂ ವ್ಯಾಸರನ್ನು ವಿಕ್ಷಿಪ್ತ ಕತೆಗಾರ ಎನ್ನುತ್ತಾರೆ; ವಿಶಿಷ್ಟ ಕತೆಗಾರ ಎನ್ನಬಹುದು. ಎರಡು ಅಕ್ಷರಗಳ ಕತೆಗಳನ್ನೇ ರಚಿಸುವ ಕತೆಗಾರ ಎನ್ನುವುದೂ ಸೂಕ್ತವಲ್ಲ. ಅರ್ಥವಾಗದಂತೆ ಬರೆಯುತ್ತಾರೆ ಎನ್ನುವ ಆರೋಪ ನಿರಾಧಾರವಾದುದು.

ಮಂದಿ ಮಾಡುವ ಆರೋಪಗಳಿಗೆ ಲಾಯಕ್ಕಾದವರೇ ಆಗಿದ್ದಲ್ಲಿ, ಕೆಳಗಿನ ಒಂದು ಸನ್ನಿವೇಶವನ್ನು, ಅದರಲ್ಲೂ ಪುರುಷಾರ್ಥಗಳಲ್ಲಿ ಒಂದಾದ ಕಾಮವನ್ನು ಕುರಿತಂತೆ ಬರೆಯುವಾಗ, ಬಹು ಮುಖ್ಯವಾಗಿ ತಾಯಿ ಸಮಾನಳಾದ ಗೆಳೆಯನ ತಾಯಿಯನ್ನು ಆಕ್ರಮಿಸಿಕೊಳ್ಳುವ ಸಂದರ್ಭವನ್ನು ಎಷ್ಟು ತಾದ್ಯಾತ್ಮಕವಾಗಿ ಆಶ್ಲೀಲತೆಯ ಕಿಡಿ ಸೋಕದಂತೆ ನಿಭಾಯಿಸುತ್ತಾರೆ ಎಂಬುದಕ್ಕೆ ಕೆಳಗಿನ ಸಾಲುಗಳೇ ಸಾಕ್ಷಿ ನುಡಿಯುತ್ತವೆ.

“ಅವಳು ಅಡಗಿಸಿಡುತ್ತಿದ್ದ ನಿಧಿಗಳೆಲ್ಲಾ ಕಣ್ಣೆದುರು ತೆರೆದಿಡಲ್ಪಟ್ಟವು. ಭಿಕಾರಿಯ ಹಾಗೆ ಲಗುಬಗನೆ ಎಲ್ಲವನ್ನೂ ಆವರಿಸಿಕೊಂಡೆ. ಆ ವಿಶಾಲತೆಯಲ್ಲಿ ಎಂಥ ಸೌಂದರ್ಯ ಅಡಗಿತ್ತೋ ತಿಳಿಯಲೇ ಇಲ್ಲ. ವಿಶಾಲವಾದ ಅಮಲಿನ ಸಾಗರದಲ್ಲಿ ಮುಳುಗುತ್ತಾ – ತೇಲುತ್ತಿರುವಂತೆ ಇದ್ದೆ. ಆಗ ದಿನೇಶ ಬಂದ. ನೋಡಬಾರದ್ದನ್ನು ನೋಡಿದ. ಅವಳು ಹುಚ್ಚಿಯ ಹಾಗಿದ್ದಳು. ಅಡಗಲಾರದಷ್ಟು ಭೀಕರವಾಗಿ ತೆರೆದುಕೊಂಡಿದ್ದಳು. ಬಯಲು ಎಲ್ಲಿ ಅಡಗಬೇಕು ಹೇಳು…? ನಾನು ಕ್ರಿಮಿಯ ಹಾಗೆ ಚಿಕ್ಕದಾಗಿ ಮುದುಡಿಕೊಂಡಿದ್ದೆ… ಓಡಿದೆ. ಅಡಗಿದೆ. ನಿನ್ನ ಬಳಿ ಅಡಗುವುದಾಗಲಿಲ್ಲ. ರೂಪಾ. ಉರಿಸಲ್ಪಟ್ಟ ಪಂಜಾಗಿದ್ದೆ…” ಒಬ್ಬ ನಯವಾದ ಕತೆಗಾರ ಮಾತ್ರ ಇಂತಹ ಕರಗಿ ಹೋಗಬಹುದಾದ ಸನ್ನಿವೇಶವನ್ನು ತಡೆದಿಡಬಲ್ಲ.

ಇಂಥದ್ದೇ ಇನ್ನೊಂದು ಕ್ಲಿಷ್ಟಕರ ಸನ್ನಿವೇಶವನ್ನು “ಭೂಮಿ” ಎನ್ನುವ ಕತೆಯಲ್ಲಿ ವ್ಯಾಸರು ನಿಭಾಯಿಸಿದ ರೀತಿ ಹೀಗಿದೆ : “ನಾನು ಹೀಗಿರುವಾಗ ನೀನು ಹುಟ್ಟಿದೆ. ಆಗ ನಿನಗೆ ಏನೂ ತಿಳಿಯುತ್ತಿರಲಿಲ್ಲ. ಈಗ ನಿನಗೆ ಎಲ್ಲವೂ ತಿಳಿಯುತ್ತದೆ. ಆದರೂ ನಿನಗೇನೂ ಅರ್ಥವಾಗುವುದಿಲ್ಲ. ನಿನ್ನ ತಾಯಿ – ನಿನ್ನ ತಾಯಿಯಾಗುವ ಮೊದಲೇ ಸತ್ತುಹೋಗಿದ್ದಳು. ಇಲ್ಲಿರೋದು ನಿನ್ನ ಭೂಮಿ, ನಿನಗೆ ಅನ್ನ ಬೆಳೆದು ಕೊಟ್ಟ ಭೂಮಿ. ಇಲ್ಲೊಮ್ಮೆ ನಡೆದು ನೋಡು, ಬಾ ಮಗೂ”. ಬೆಲೆವೆಣ್ಣಾದ ತನ್ನ ಸ್ವಂತ ತಾಯಿಯನ್ನು ಆ ಕರಾಳ ಕೋಪದಿಂದ ಬಿಡಿಸಲು ಹೋದಾಗ ಆಕೆ ತನ್ನ ಮನಸ್ಸಿನ ಹೊರತಾಗಿ ಸಮಸ್ತವನ್ನೂ ವಿಟನೊಬ್ಬನಿಗೆ ಸಮರ್ಪಿಸಿಕೊಂಡಿರುತ್ತಾಳೆ. ಮಗ ಅಚಾನಕ್ಕಾಗಿ ಕದ ತೆರೆದು ಒಳ ಬರುತ್ತಾನೆ. ಅಲ್ಲ, ವ್ಯಾಸರೊಳಗಿನ ಸೂಕ್ಷ್ಮ ಮನಸ್ಥಿತಿಯ ಕತೆಗಾರ ನಮ್ಮೆದುರು ನಿಲ್ಲುತ್ತಾನೆ. ಆಗ ವ್ಯಾಸ ರೂಪದ ತಾಯೊಬ್ಬಳು ಹೇಳಿದ ಮಾತುಗಳಿವು.

“ಕಾಂತ” ಕೃತಿ ಲೇಖಕರು ಎಂ. ವ್ಯಾಸ

ವ್ಯಾಸರ ಕತೆಗಳ ಆಳಕ್ಕೆ ಇಳಿದಂತೆಲ್ಲ ನಮ್ಮನ್ನು ಪ್ರಮುಖವಾಗಿ ಕಾಡುವ ದುಃಖ, ದುಮ್ಮಾನ, ಸಿಟ್ಟು, ಸೆಡವು, ಅಸಹಾಯಕತೆ, ವಿಷಾದತೆ, ಗಾಢ ನೋವು, ಅಂತರ್ಮುಖಿತ್ವ, ಖಿನ್ನತೆ, ಹತಾಶೆ, ಅಪರಾಧಿ ಪ್ರಜ್ಞೆ, ನೋವು, ಸಾವು, ಸೂತಕ, ಸಂತಾಪ, ತಲ್ಲಣ ಭಾವಗಳೇ ಇದಿರುಗೊಳ್ಳುವ ಸಂಗತಿಗಳಾದರೂ ಇದೆಲ್ಲವನ್ನೂ ಮೀರಿದ ಮನುಷ್ಯ ಸಹಜ ಭಾವಗಳನ್ನೂ, ಮುಖ್ಯವಾಗಿ, ಜೀವನಕ್ಕೆ ಅವಶ್ಯ ಬೇಕಾದ ಧನಾತ್ಮಕ ಚಿಂತನೆಗಳನ್ನೂ ಅವರ ಕತೆಗಳು ಮೂಡಿಸಬಲ್ಲದೆನ್ನುವುದು ನನ್ನ ಅಭಿಪ್ರಾಯ. ಕತೆ ಆರಂಭಗೊಂಡು, ಮಧ್ಯಂತರಕ್ಕೆ ಬಂದು ಅಂತಿಮವಾಗಿ ಮುಗಿದು ಹೋದರೂ ವ್ಯಾಸರನ್ನು ಆ ಕ್ಷಣಕ್ಕೆ ತಟ್ಟುತ್ತಿದ್ದ ಭಾವ ತೀವ್ರತೆಯೇ ಇಡೀ ಕತೆಯ ಮೇಲ್ಮೈಯಾಗಿ ಪ್ರತಿನಿಧಿಸುವಂತಿದ್ದರೂ, ಜೀವ ಸಿಂಚನಕ್ಕೆ ಬೇಕಾದ ಅಮೃತವೂ ಅವರ ಕತೆಗಳಲ್ಲಿ ಹೇರಳವಾಗಿ ದೊರಕುತ್ತದೆ. ವ್ಯಾಸರನ್ನು ಕಾಡುವ ಅದೇ ಭಾವದಿಂದ ಹೊರಬಂದು ನೋಡಿದರೆ ಮಾತ್ರ ನಮಗೆ ಈ ಸಂಗತಿ ಮನದಟ್ಟಾಗಬಲ್ಲದು.

ವ್ಯಾಸರು ಚಿತ್ರಿಸುವ ಸಂಜೆಗಳನ್ನೊಮ್ಮೆ ಓದಬೇಕು. ಅದ್ಭುತವಾದ ಚಿತ್ರಣ ಕಟ್ಟಿಕೊಡುತ್ತಾರೆ. ಕೇವಲ ಸಂಜೆಗತ್ತಲಲ್ಲಿ ನಡೆಯುವ ಕತ್ತಲು ಬೆಳಕಿನ ಮುಸುಕು ಗುದ್ದಾಟವನ್ನೇ ಹಿಡಿದು ಭಾವವನ್ನು, ಪರಿಸರವನ್ನು ಕೆರಳಿಸಿಬಿಡಬಲ್ಲರು! ಸಂಜೆಗತ್ತಲು ಬಂತೆಂದರೆ, ಅಲ್ಲಿ, ಮನೆಯೊಳಗೆ ಮುಚ್ಚಿದ ಅರೆ ಬಾಗಿಲ ನಡುವೆ ನುಗ್ಗಲು ಹವಣಿಸುತ್ತಿರುವ ಕತ್ತಲ ತವಕವನ್ನು, ಬೆಳಕಿನ ಅಸ್ತಿತ್ವದ ನರಳಾಟವನ್ನು ಹೆಣೆದುಬಿಡುತ್ತಾರೆ. ಮನೆ ಮುಂದಿನ ಮಾವಿನ ಮರ, ಅದರ ಗೆಲ್ಲುಗಳು, ಚಿಗುರಿ ಹೂವಾಗಿ ಪೀಚುಗಾಯಿಯಾಗಿ ಕಾಯಾಗಿ ಹಣ್ಣಾಗಿ ಗೊರಟೆಯಾಗಿ ಮತ್ತೆ ಚಿಗುರನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿಯೂ ಅಡಗಿರಬಹುದಾದ ತಣ್ಣನೆಯ ವಿಷಾದತೆಯನ್ನು ಸಂಧ್ಯಾ ಸಮಯದ ಹಿನ್ನೆಲೆಯಲ್ಲಿಯೇ ಬಹುಪಾಲು ತರುತ್ತಾರೆ. ಮಾರ್ದವತೆ ಮತ್ತು ನೀರವತೆ ತುಂಬಿದ ಸಂಜೆಗಳ ಸವಿನೋಟ ಓದುಗರನ್ನು ಭ್ರಾಮಕ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ.ಅವರ ಕತೆಗಳ ಮತ್ತೊಂದು ವೈಶಿಷ್ಟತೆ ಎಂದರೆ, ಎಂತಹುದೇ ಗಾಢವಾದ ಕತೆಯಿರಲಿ, ಅಲ್ಲೊಂದು ಗದ್ಯದಲ್ಲಿ ಕಾವ್ಯವನ್ನು ಹೇಳಿಬಿಡುತ್ತಾರೆ. ಫಕ್ಕನೆ ಒಂದೇ ಏಟಿಗೆ ಓದಿಕೊಂಡು ಹೋಗುವವರಾದರೆ ಗದ್ಯದಲ್ಲಿ ಅವರ ಕಾವ್ಯ ಪ್ರಯೋಗಾತ್ಮಕತೆಯನ್ನು ಕಂಡುಹಿಡಿಯಲಾರರು. ಕತೆಯಲ್ಲಿ ಕವಿತೆಯನ್ನೇ ಬರೆದರು. ಅದು ಬೇರೆ. ಆದರೆ ಇಂತಹ ಪ್ರಯೋಗಶೀಲತೆಯನ್ನು ನಾವು ಗುರುತಿಸಲು ವ್ಯಾಸರನ್ನು ನಿಧಾನಕ್ಕೆ, ಅವರ ಕತೆಗಳ ಓಘಕ್ಕೆ ತಕ್ಕಂತೆ, ಓದಬೇಕು. ಬೇಕಿದ್ದರೆ ಕೆಳಗಿನ ಸಾಲುಗಳನ್ನು ಓದಿಕೊಳ್ಳಿ:

“ನಿನ್ನ ಬಳಿ ಕುಳಿತಾಗಲೆಲ್ಲಾ ಸಮುದ್ರದ ಬಳಿ ಕುಳಿತ ಹಾಗಾಗುತ್ತದೆ. ತೆರೆಗಳಿದ್ದಷ್ಟು ಕಾಲ – ಅವುಗಳನ್ನು ಮುಟ್ಟುತ್ತಿರುವಷ್ಟು ಕಾಲ ಸಮುದ್ರ ನಮ್ಮದೇ ಅನಿಸುತ್ತದೆ. ದೂರ ಹೋದರೆ ದೂರ
ಹೋಗುತ್ತದೆ. ಪರಕೀಯವಾಗುತ್ತದೆ. ಸಮುದ್ರವನ್ನು ಯಾರು ಸ್ವಂತ ಮಾಡಿದ್ದಾರೆ ಹೇಳು. ಮುಳುಗಿ ಸತ್ತರೆ…”

ವ್ಯಾಸರ ಭಾವ ಪ್ರಪಂಚ ಎಷ್ಟು ವಿಶಿಷ್ಟವಾದುದೋ ತಮ್ಮ ಕತೆಗಳ ಪೂರೈಕೆಗಾಗಿ ಅವರೇ ಸೃಷ್ಟಿಸಿಕೊಂಡ ಪರಿಸರ ಕೂಡ ಅಷ್ಟೇ ವಿಶಿಷ್ಟವಾದುದು. ದುರ್ಗಾಪುರ, ಹೊಸದುರ್ಗ, ಕಾಂತಿಪುರ, ಶಂಕರೀ ನದಿ, ಶಂಕರ ಗುಡ್ಡ.. ಇದೆಲ್ಲ ಅಸ್ತಿತ್ವದಲ್ಲೇ ಇಲ್ಲವಾದರೂ ಇದೆ ಎಂದೇ ನಂಬಬೇಕಾದ ಅನಿವಾರ್ಯತೆ ಕತೆಯನ್ನು ಓದುವಾಗ ಓದುಗನನ್ನು ಮೀರುವ ಅನುಭವವೇದ್ಯ ಸಂಗತಿಗಳು. ಕತೆಗೆ ಬೇಕಾದ ಪೂರಕ ಪರಿಸರ ಸೃಷ್ಟಿಯಷ್ಟೇ ಅಲ್ಲದೆ ಕತೆಯ ನಂತರವೂ ಬಿಟ್ಟೂಬಿಡದೆ ಕಾಡುವ ಅನನ್ಯ ಸೃಷ್ಟಿಗಳಿವು. ಶಂಕರೀ ನದಿಯ ಹುಟ್ಟು, ಮೂಲ, ನದಿ ಪಾತ್ರ, ಹರಿವು, ಹರವು – ಅದು ವ್ಯಾಸರೊಬ್ಬರಿಗಷ್ಟೇ ತಿಳಿದಿದ್ದ ಸಂಗತಿಯಾಗಿತ್ತೇನೋ ಅನಿಸುವುದು ಕಣ್ಣ ಮುಂದಿನ ಸತ್ಯವಾದರೂ ಅವಳು ಸದಾ ನಮ್ಮಲ್ಲೂ ಪ್ರವಹಿಸುತ್ತಿರುತ್ತಾಳೆ ಎನ್ನುವುದಕ್ಕೆ ಸಾಕ್ಷಿ ವ್ಯಾಸರು ಬರೆದಿಟ್ಟ ಕತೆಗಳು. ಹುಟ್ಟು ಮೂಲ ಎಂದೆಲ್ಲ ಅಂಡಲೆಯುವ ಬದಲು ವ್ಯಾಸರು ತಮ್ಮಿಡೀ ಜೀವಿನಪೂರ ಮುಳುಗೇಳಿದಂತೆ ಶಂಕರಿಯಲ್ಲಿ ನಾವೂ ಲೀನವಾಗೋಣ, ಗುರಿ ಗಮ್ಯ ಸೇರಬಹುದೆನ್ನುವ ಸಣ್ಣ ಆಶಯದೊಂದಿಗೆ.

ಇದನ್ನು ಮೀರಿ ವ್ಯಾಸರ ಬಗ್ಗೆ ಹೆಚ್ಚು ಹೇಳಿದರೆ ಅಪಸವ್ಯವಾದೀತು.


  • ಮೋಹನ್ ಕುಮಾರ್ ಡಿ ಎನ್ (ಲೇಖಕರು, ಪುಸ್ತಕ ವಿಮರ್ಶಕರು)

0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW