ಜೀವನ ಎಷ್ಟೊಂದು ವಿಚಿತ್ರ ನೋಡಿ. ಹೆಣ್ಣು ಎಲ್ಲೋ ಹುಟ್ಟುತ್ತದೆ. ಹಾಗೇ ಗಂಡೂ ಎಲ್ಲೋ ಹುಟ್ಟುತ್ತದೆ. ಸಂದರ್ಭಗಳು ಮದುವೆ ಎಂಬ ಅಖಾಡಕ್ಕೆ ಇಬ್ಬರನ್ನು ದೂಡುತ್ತವೆ. ಈ ಅಖಾಡವೇ ಜೀವನ. ಇಲ್ಲಿ ಯಾರು ಗೆಲ್ಲುತ್ತಾರೆ. ಯಾರು ಸೋಲುತ್ತಾರೆ ಎಂಬುದು ಮುಖ್ಯವಲ್ಲ. ಸೋಲು-ಗೆಲುವು ಇಬ್ಬರಿಗೂ ಇದೆ. ಮದುವೆ ಅನ್ನೋದು ಸ್ವರ್ಗದಲ್ಲೇ ಆಗಿರುತ್ತದೆ ಎಂದು ಹಿಂದಿನವರು ಹೇಳುತ್ತ ಬಂದರು. ಆದರೆ ಮಕ್ಕಳು ಮಾತ್ರ ಈ ಜನ್ಮದಲ್ಲೇ ಆಗೋದು ವಾಸ್ತವ. ಈ ವಾಸ್ತವದ ಜಂಜಾಟವೇ ಜೀವನ. ಈ ಜೀವನ ಹೇಗಿದೆ ಅಂದರೆ ಸಾಕಪ್ಪ ಸಾಕು ಈ ಪಾಪಿ ಜನ್ಮ ಅನ್ನಿಸುವಷ್ಟು ಜಂಜಾಟದ ಗೂಡು.
ಹೆಂಡತಿಯಾದವಳು ಗಂಡನಿಗೆಂದು ಏನೆಲ್ಲ ಮಾಡುತ್ತಾಳೆ. ತಿಂಡಿ-ಊಟ, ಡಬ್ಬಿ ಕಟ್ಟುವುದು ಮತ್ತು ಅದನ್ನು ತೊಳೆಯುವುದರಿಂದ ಸುರುವಾಗುತ್ತದೆ. ಬಟ್ಟೆ ಒಗೆದು ಇಸ್ತ್ರಿ ಮಾಡಬೇಕು. ಅವನ ಶೂ ಒರೆಸಿ ಎತ್ತಿಡಬೇಕು. ಆತ ಏನು ತಿನ್ನುತ್ತಾನೆ. ಏನು ಕುಡಿಯುತ್ತಾನೆ ಎಂದು ಕೇಳಿ ಮಾಡಬೇಕು. ಯಾಕೆಂದರೆ ಅವನು ದುಡಿಯುವವ. ಮನೆ ಸಡೆಸುತ್ತಾನೆ. ಅವನ ಆಸರಿಕೆ-ಬೇಸರಿಕೆಗೆ ಹೆಗಲು ಕೊಡುವುದು ಹೆಣ್ಣಿನ ಆದ್ಯ ಕರ್ತವ್ಯ. ಜೀವನ ಎಂಬ ಅಖಾಡದಲ್ಲಿ ಗಂಡು ಗೆಲ್ಲಬೇಕು. ಹೆಣ್ಣು ಸೋಲಬೇಕು ಎಂಬುದು ಅವತ್ತಿನಿಂದ ನಡೆದುಕೊಂಡು ಬಂದ ವಾಸ್ತವ. ಆದರೆ ಈ ಸೋಲಿನ ಹಿಂದಿರುವ ಆಕೆಯ ತ್ಯಾಗ, ಅಸಹಾಯಕತೆ, ಮಮತೆ, ಪ್ರೀತಿ, ದಣಿವು ಮಾತ್ರ ಯಾರ ಕಣ್ಣಿಗೂ ಕಾಣುವುದಿಲ್ಲ. ಅದು ಅಗೋಚರ. ಸೋಲಿನಲ್ಲಿಯೇ ಸುಖ ಕಾಣುವ ಹೆಣ್ಣು ಜೀವನದಾಟದಲ್ಲಿ ಕೊನೆಗೆ ಪಡೆಯುವುದೇನು?
ಗಂಡನ ಆರೈಕೆಯೊಂದಿಗೆ ಮಕ್ಕಳನ್ನು ಹೆರಬೇಕು. ಹೆತ್ತ ಮಕ್ಕಳನ್ನು ಪೋಷಿಸಬೇಕು. ಕಣ್ಣಂಚಿನಲ್ಲೇ ಅವುಗಳನ್ನು ಬೆಳೆಸಬೇಕು. ಮತ್ತದೇ ತ್ಯಾಗ, ಮಮತೆ, ದಣಿವು ಇತ್ಯಾದಿಗಳಿಗೆ ಮೈ – ಮನಸ್ಸು ತೆರೆಯಬೇಕು. ಮುಂದೆ ಕಾಲ ಆಕೆಗೆ ವಯಸ್ಸಿನ ಕೌದಿ ಹೊದಿಸುತ್ತದೆ. ಯೌವನ- ವಯಸ್ಸು,ರೂಪ ಇಳಿಯುತ್ತ ಹೋದಂತೆ ಗಂಡನ ಭಾವನೆಗಳು ಯಾತ್ರಿಕವಾಗುತ್ತವೆ. ಎಲ್ಲರಿಂದ ತಾತ್ಸಾರದ ಮಾತುಗಳು ಶುರು. ಮಕ್ಕಳು ದೊಡ್ಡವರಾಗುತ್ತಾರೆ. ಓದಿ ಡಿಗ್ರಿ ಪಡೆದು ಹಣ ಸಂಪಾದಿಸತೊಡಗುತ್ತಾರೆ. ಅಲ್ಲಿಗೆ ಅವರ ಜೀವನ ನೋಟವೇ ಬೇರೆಯಾಗುತ್ತದೆ. ಅಪ್ಪ-ಅವ್ವ ವಯಸ್ಸಾದವರು, ಅರಳುಮರಳಿನವರು, ಹೇಳಿದ್ದನ್ನೇ ಹೇಳುತ್ತಾರೆ. ಅವರ ಜೊತೆ ಇದ್ದರೆ ತಲೆ ಕೆಡುತ್ತದೆ ಅನ್ನುತ್ತಾರೆ. ಅವನ ಹಾಗೆ ಯೋಚಿಸುವ ಸೊಸೆ ಮನೆಗೆ ಬರುತ್ತಾಳೆ. ಅವರಿಬ್ಬರದೇ ಲೋಕ ಮನೆಯಲ್ಲಿ ಸೃಷ್ಟಿಯಾಗುತ್ತದೆ. ಗಂಡ ಕೆಲಸದಿಂದ ನಿವೃತ್ತಿ ಆಗಿರುತ್ತಾನೆ. ಕೆಲಸವಿಲ್ಲ. ಈಗ ಹೆಂಡತಿಯೊಂದಿಗೆ ಮಾತಿನ ಸಂಸಾರ ಶುರುವಾಗಿರುತ್ತದೆ. ಸದಾ ಅವರಿವರ ಬಗ್ಗೆ ಮಾತಾಡುವುದೇ ಇವರ ಕಾಯಕ. ಇಲ್ಲಿ ಹೆಣ್ಣು ತನ್ನ ತಾಯ್ತನದ ಹಂಬಲಕ್ಕಾಗಿ ಮಿಡಿಯುತ್ತಾಳೆ. ಮಗ ಒಮ್ಮೆಯಾದರೂ ಮಾತಾಡಿಸುತ್ತಾನೇನೋ ಎಂದು ಹಂಬಲಿಸುತ್ತಾಳೆ. ಸೊಸೆ ಹೊರಗಿನಿಂದ ಬಂದರೆ ಸಾಕು. ತನ್ನ ಬೆಡ್ ರೂಮ್ ಸೇರಿ ಬಾಗಿಲು ಹಾಕಿಕೊಳ್ಳುತ್ತಾಳೆ. ಅದೇನು ಅಲಂಕಾರವೋ. ಅದೇನು ಬಟ್ಟೆಯೋ. ಕೇಳಿದರೆ ಅತ್ತೆ ಇದು ನಿಮ್ಮ ಕಾಲವಲ್ಲ ಅನ್ನುತ್ತಾಳೆ. ಸಂಜೆಯಾದರೆ ಹೊರಗೆ ಕಿಟ್ಟೀ ಪಾರ್ಟಿ ಎಂದು ಹೋಗುತ್ತಾಳೆ. ಮಗ ಅಲ್ಲಿಗೆ ಬಂದು ಜಾಯಿನ್ ಆಗುತ್ತೇನೆ ಎಂದು ಫೋನ್ ಮಾಡಿರುತ್ತಾನೆ. ಆತನಿಗೆ ಪಬ್ ಅಂದರೆ ಬಲು ಇಷ್ಟ ಅಂತೆ. ಸೊಸೆಯೇ ವರದಿ ಕೊಡುತ್ತಾಳೆ. ವಯಸ್ಸಾದ ಅಪ್ಪ-ಅಮ್ಮ ಅದನ್ನು ಕೇಳಿ ಪಿಳಿಪಿಳಿ ಕಣ್ಣು ಬಿಡುತ್ತಾರೆ. ಜೀವನವಿಡೀ ಮಗನ ಸ್ಕೂಲ್, ಕಾಲೇಜು ಎಂದೆಲ್ಲ ಹಣ ಸುರಿದ ಅಪ್ಪ ಈಗ ಗೋಡೆ ನೋಡುತ್ತಾ ಕೂತು ಬಿಡುತ್ತಾನೆ. ಕೊನೆಗೆ ಆಸರೆ ಆಗುವವಳೇ ಅದೇ ಹೆಂಡತಿ. ಬಿಸಿ ಅನ್ನಮಾಡಿದ್ದೀನಿ,ತುಪ್ಪ ಹಾಕಿದೀನಿ ತಿನ್ನಿ ಅನ್ನುತ್ತಾಳೆ. ಕೊನೆಗೆ ಅವನಿಗೆ ಆಸರೆ ಆಗುವವಳು ಅದೇ ಹೆಣ್ಣು-ಹೆಂಡತಿ. ಬಿಸಿ ಅನ್ನ ಮಾಡಿದ್ದೀನಿ ತುಪ್ಪ ಹಾಕಿದೀನಿ ತಿನ್ನಿ ಅನ್ನುತ್ತಾಳೆ. ಅನ್ನುವುದೇನು ಆಕೆಯೇ ತುತ್ತು ಮಾಡಿ ತಿನಿಸುತ್ತಾಳೆ. ಗಂಡನ ಕಣ್ಣಲ್ಲಿ ನೀರಾಡುತ್ತದೆ. ಅಳಬೇಡಿ ಎಂದು ಅವಳೇ ಎನ್ನುತ್ತಾಳೆ. ಯಾಕೆಂದರೆ ಅವಳು ಹೆಣ್ಣು, ಸಹನಾಶೀಲೆ. ಪದವಿ ಕೊಟ್ಟಿದ್ದರಲ್ಲ ಬಲ್ಲವರು.
ಅಷ್ಟೊತ್ತಿಗೆ ಹೊರಗಿಂದ ಮಗ ಸೊಸೆ ಒಳ ಬರುತ್ತಾರೆ. ಪಬ್ಬಿನಿಂದಲೇ ಬಂದಿರಬೇಕು. ಏನೋ ಹೇಳಲು ಬಳಿ ಬರುತ್ತಾರೆ. ಮಗ ಹತ್ತಿರ ಬಂದ ಎಂದು ತಾಯಿ ಅಕ್ಕರೆಯಿಂದ ಮುಂದಕ್ಕೆ ಬಾಗುತ್ತಾಳೆ. ಮಗ ತೊದಲುತ್ತ ಹೇಳುತ್ತಾನೆ. ಅಪ್ಪ, ನಿಮಗೆ ತೊಂದರೆ ಆಗುತ್ತದೆ. ಹೇಗೂ ವಯಸ್ಸಾಯಿತು. ಇನ್ನು ನೀವು ಈ ಸಂಸಾರದಾಟದಿಂದ ಹೊರಗೆ ಇರಬೇಕು. ಫ್ರೀ ಬರ್ಡ್ ಥರ. ಅದಕ್ಕೇ ನಿಮಗೊಂದು ಒಳ್ಳೆ ವೃದ್ದಾಶ್ರಮ ನೋಡಿದೀವಿ. ಅಲ್ಲಿ ಎಲ್ಲ ಅನುಕೂಲ ಇದೆ. ನಿಮ್ಮ ವಯಸ್ಸಿನವರೇ ಅಲ್ಲಿರೋದು. ನಾಡಿದ್ದು ಅಲ್ಲಿಗೆ ಶಿಫ್ಟ್ ಆಗಿಬಿಡಿ. ಕಾರಿನಲ್ಲಿ ಬಿಟ್ಟು ಬರ್ತೀವಿ ಅನ್ನುತ್ತಾನೆ. ಅಷ್ಟೇ, ಸೊಸೆ ಸೊಂಟ ಹಿಡಿದು ಬೆಡ್ ರೂಮಿಗೆ ಹೋಗಿಯೇ ಬಿಡುತ್ತಾನೆ. ಬಾಗಿಲು ಹಾಕಿ ಕೊಳ್ಳುತ್ತದೆ. ಅಲ್ಲಿಗೆ ಇಡೀ ಮನೆ ಕತ್ತಲು.
ತನ್ನ ಹೆಗಲ ಮೇಲೊರಗಿದ ಗಂಡನ ತಲೆ ನೇವರಿಸುತ್ತ ಹೆಂಡತಿ ಹೇಳುತ್ತಾಳೆ. ಇನ್ನು ನಾವು ಇಲ್ಲಿ ಇರೋದು ಬೇಡಾರೀ, ಮಗನಿಗೇ ಬೇಡಾದ್ಮೇಲೆ ಯಾತಕ್ಕೆ ಈ ಮನೆ. ನಡೀರಿ ಈಗಲೇ ಹೋಗೋಣ ಎಂದು ಗಂಡನ ಕೈ ಹಿಡಿದು ಮೇಲೇಳುತ್ತಾಳೆ ಹೆಂಡತಿ. ಅವಳ ಸಹನೆ ಇಲ್ಲಿ ರಾರಾಜಿಸುತ್ತದೆ. ಗಂಡನ ಕೈ ಹಿಡಿದು ವೃದ್ದಾಶ್ರಮದತ್ತ ಮುಖ ಮಾಡುತ್ತಾಳೆ ಈ ಸಹನಾಶೀಲೆ.
#ಹಗಉಟ