ಕೆ. ನಲ್ಲತಂಬಿ ಅವರ ‘ಕೋಶಿ’ಸ್’ ಎನ್ನುವ ರೆಸ್ಟೋರೆಂಟ್, ವಿನ್ಸೆಂಟ್ ಹೇಳುವ ಸತ್ಯಗಳು ಹಾಗೂ ಲೇಖಕರು ಕಟ್ಟಿಕೊಡುವ ಭಾವ ಎಲ್ಲವೂ ಕಾಫಿಯನ್ನು ಆಸ್ವಾದಿಸಿದಂತೆಯೇ.. ಅಲ್ಲಿಯೇ ಕುಳಿತ ಭಾವದಂತೆ ಭಾಸವಾಗುತ್ತದೆ. ವಿಭಾ ವಿಶ್ವನಾಥ್ ಅವರು ‘ಕೋಶಿ’ಸ್’ ಕವನ ಸಂಕಲನದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಶೀರ್ಷಿಕೆ : ಕೋಶಿ’ಸ್ ಕವಿತೆಗಳು
ಲೇಖಕರು : ಕೆ. ನಲ್ಲತಂಬಿ
ಪ್ರಕಾಶಕರು : ಬಹುರೂಪಿ
ಪ್ರಥಮ ಮುದ್ರಣ : 2018
ಪುಟಗಳು : 40
ಬೆಲೆ : 40 ರೂ.
ಕೆ. ನಲ್ಲತಂಬಿಯವರ ಕೋಶಿ’ಸ್ ಕವಿತೆಗಳು ಕಾಫಿ ಹಾಗೂ ಆಧ್ಯಾತ್ಮವನ್ನು ಜೀವನಪಾಠವಾಗಿ ವಿನ್ಸೆಂಟ್ ಮೂಲಕ ಹೇಳಿಸಿರುವ ಪರಿ ಬಹಳ ಇಷ್ಟವಾಯಿತು. ಅರ್ಥಪೂರ್ಣವಾಗಿದ್ದು.. ಕಾಡುವ ಸಾಲುಗಳು ಬೇಗನೆ ಸೆಳೆಯುತ್ತದೆ.
ಬಿ.ವಿ ಭಾರತಿಯಯರ ಕಿಚನ್ ಕವಿತೆಗಳು ಹಾಗೂ ಸದಾಶಿವ ಸೊರಟೂರು ಅವರ ಕಂಡಕ್ಟರ್ ಕವಿತೆಗಳು ಪುಸ್ತಕಗಳು ಸಹಾ ಇಂತಹದ್ದೇ ಓದಿನ ಅನುಭವವನ್ನು ನೀಡುತ್ತವೆ. ಆದರೆ, ಬರಹಗಾರರು ಆರಿಸಿಕೊಂಡಿರುವ ಸ್ಥಳಗಳು, ಭಾವಗಳು.. ಒಬ್ಬರಿಗಿಂತ ಒಬ್ಬರಲ್ಲಿ ವಿಭಿನ್ನ. ಆದರೆ ಈ ಪುಸ್ತಕವನ್ನು ಕೈಯಲ್ಲಿ ಹಿಡಿದಾಗ ಅವೂ ನೆನಪಾಗುತ್ತವೆ.
ಕೋಶಿ’ಸ್ ಎನ್ನುವ ರೆಸ್ಟೋರೆಂಟ್, ವಿನ್ಸೆಂಟ್ ಹೇಳುವ ಸತ್ಯಗಳು ಹಾಗೂ ಲೇಖಕರು ಕಟ್ಟಿಕೊಡುವ ಭಾವ ಎಲ್ಲವೂ ಕಾಫಿಯನ್ನು ಆಸ್ವಾದಿಸಿದಂತೆಯೇ.. ಅಲ್ಲಿಯೇ ಕುಳಿತ ಭಾವದಂತೆ ಭಾಸವಾಗುತ್ತದೆ.
ಈ ಪುಸ್ತಕದಲ್ಲಿ ಸಂಧ್ಯಾರಾಣಿಯವರು ಮತ್ತೊಂದು ಮಾತನ್ನು ಹೇಳುತ್ತಾರೆ. “ಕಾಫಿ ಎನ್ನುವುದೊಂದು ಕಲೆ, ಕಾಫಿ ಎನ್ನುವುದೊಂದು ವಿಜ್ಞಾನ, ಕಾಫಿ ಎನ್ನುವುದೊಂದು ಸಾಕ್ಷಾತ್ಕಾರ. ಟೀ ಕಾಯಿಸಬಹುದು. ಆದರೆ ಕಾಫಿ ಮಾಡಬೇಕು. ಟೀ ಕೆಡಿಸುವುದು ಕಷ್ಟ, ಕಾಫಿಯ ಹದ ಸಾಧಿಸುವುದು ಕಷ್ಟ.” ಎಷ್ಟು ನಿಜವಲ್ಲವಾ..?! ಅವರವರ ರುಚಿಗೆ ತಕ್ಕಂತೆ ಅವರವರಿಗೆ ಹೊಂದುವಂತೆ ಕಾಫಿ ಮಾಡಿಕೊಡುವುದು, ಒಪ್ಪಿಸುವುದು ಕಷ್ಟ. ನಮಗಿಷ್ಟವಾದದ್ದು.. ಅವರಿಗೆ ಒಗರೋ.. ಸಿಹಿಯೋ.. ಸಪ್ಪೆಯೋ.. ಅತಿ ಹೆಚ್ಚು ಹಾಲು ಅಥವಾ ಅತಿ ಹೆಚ್ಚು ಡಿಕಾಕ್ಷನ್ ಎನ್ನುವ ಭಾವ ಮೂಡಿಸಬಹುದು. ಕವಿತೆಗಳು ಹಾಗೆಯೇ ಅಲ್ಲವಾ, ಒಬ್ಬರ ಭಾವಕ್ಕೆ ತಾಕಿದ್ದು ಮತ್ತೊಬ್ಬರಿಗೆ ಅದೇ ಭಾವದಲ್ಲಿ ಸಿಗಲೇಬೇಕೆಂದೇನಿಲ್ಲ. ಒಬ್ಬರ ಭಾವಕ್ಕೂ ಮತ್ತೊಬ್ಬರ ಭಾವಕ್ಕೂ ಅದೆಷ್ಟು ವಿಭಿನ್ನತೆ ಹಾಗೂ ವ್ಯತ್ಯಾಸ. ನನಗಿಷ್ಟವಾದ ಕೆಲ ಕವಿತೆಗಳನ್ನು ಕೋಟ್ ಮಾಡುತ್ತಾ ಹೋಗುತ್ತೇನೆ.

ಎಷ್ಟೋ ಬಾರಿ ಅಪರಿಚಿತರೂ ಒಬ್ಬರು ಹೇಳುವ ಯಾವುದೋ ಮಾತು ನಮ್ಮ ಚಿಂತೆಯನ್ನು ದೂರ ಮಾಡಬಹುದು ಅಥವಾ ಹೇಳುವ ಸಾಂತ್ವನ ನಮ್ಮ ಬದುಕಿನಲ್ಲಿ ಆಲೋಚಿಸುವ ದಿಕ್ಕನ್ನು ಬದಲಾಯಿಸಬಹುದು. ಯಾವುದೋ ಕ್ಷಣದಲ್ಲಿ ಒದಗಿ ಬಂದ ಸಹಾಯ ಪವಾಡವನ್ನೇ ಮಾಡಿಬಿಡಬಹುದು. ಆದರೆ, ಕಾಲಕ್ಕಾಗಿ ಕಾಯಬೇಕು. ಎಲ್ಲ ಬದಲಾವಣೆಗಳು ಒಂದೇ ರೀತಿ ಆಗುವುದಿಲ್ಲ. ಕೆಲವೊಮ್ಮೆ ಕಠಿಣತ್ವಕ್ಕೆ ಸೋಲದ ಬಂಡೆಗಲ್ಲಿನಂತಹಾ ಮನುಷ್ಯರು ಪ್ರೀತಿಗೆ ಸೋತು ಬಿಡಬಹುದಲ್ಲವೇ..??
ಕಾಫಿ ಕುಡಿಯುತ್ತಾ ಕುಳಿತಿದ್ದೆ ವಿನ್ಸೆಂಟ್ ಬಂದು
”ಚಿಂತೆ ಬಿಡಿ ಸಾರ್,
ಪವಾಡವಾಗುತ್ತೆ,
ಹಾರೆಯ ಪೆಟ್ಟಿಗೆ
ಸೀಳದ ಬಂಡೆ,
ಬೀಜದ ಮೊಳಕೆಗೆ
ಬಿರಿಯುತ್ತೆ’ ಎಂದ
ಒಂಟಿತನ ಹಾಗೂ ಏಕಾಂತ ಎರಡು ಬೇರೆ ಬೇರೆಯೇ.. ಇದನ್ನು ಅರ್ಥ ಮಾಡಿಕೊಳ್ಳುವವರು ವಿರಳ. ಒಂಟಿತನ ಎಲ್ಲರಿಂದ ನಮ್ಮನ್ನು ದೂರ ನಿಲ್ಲುವಂತೆ ಮಾಡಿದರೆ, ಏಕಾಂತದ ನಂತರ ಮತ್ತೆ ಮನಸ್ಸುಗಳು ಹತ್ತಿರವಾಗುತ್ತವೆ. ಏಕಾಂತ ನಮ್ಮಲ್ಲಿ ಹುಟ್ಟಿಸುವ ಭಾವ ಹಾಗೂ ಆಲೋಚನೆಗಳು ಮತ್ತೆ ಜೀವನೋತ್ಸಾಹ ಉಕ್ಕಿಸುವುದರಲ್ಲಿ ಸಂಶಯವಿಲ್ಲ.
“ಒಂಟಿತನವ ಕಳೆದುಬಿಡಬಹುದು,
ಏಕಾಂತಕ್ಕೆ ಜೊತೆ ಬೇಕು ಸಾರ್”
ಎಲೆಲಾ.. ಅಂದುಕೊಳ್ಳುತ್ತಾ
ಗುಟುಕರಿಸಿದ ಕಾಫಿ ನೆತ್ತಿಗೇರಿದಾಗ
ವಿನ್ಸೆಂಟ್ ನಗುತ್ತಿದ್ದ
ನಾವು ಯಾರಿಗಾದರೂ ಸಹಾಯ ಮಾಡುತ್ತಿದ್ದೇವೆಂದರೆ ನಾವು ಅವರ ಮೇಲೆ ಋಣದ ಹೊರೆಯನ್ನು ಹೊರಿಸಬಾರದು. ಅಲ್ಲದೇ, ಮತ್ತೊಬ್ಬರಿಂದ ಪಡೆದದ್ದಕ್ಕಾಗಿ ಋಣ ನಮ್ಮ ಮೇಲಿದೆ ಎಂಬ ಭಾವ ನಮ್ಮನ್ನು ಕಾಡಬಾರದು. ಹಾಗಾದಾಗ.. ನಾವು ಮಾಡಿದ ಸಹಾಯಕ್ಕೂ ಪಡೆದ ಸಹಾಯದ ಹಿಂದಿನ ನಿಸ್ವಾರ್ಥತೆ ಹಾಗೂ ಶಾಂತತೆಯೇ ಕಳೆದು ಹೋಗಿಬಿಡುತ್ತದೆ. ಕೆಲವೊಮ್ಮೆ ಇಂತಹಾ ಸಾಂತ್ವನಗಳು ಕೂಡ ಎಷ್ಟು ಸಿಹಿಯಲ್ಲವಾ..??
“ಕೊಟ್ಟಿದ್ದು ಹೊರೆಯಾಗಿಯು
ಪಡೆದದ್ದು ಋಣವಾಗಿಯು
ಇರಬಾರದು ಸಾರ್”
ಎಂದ ವಿನ್ಸೆಂಟ್ ತಂದಿಟ್ಟ ಕಾಫಿ
ಬಹಳ ರುಚಿಯಾಗಿತ್ತು.
ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎನ್ನುವ ನುಡಿ ಕೇಳಿರಬಹುದು. ದೈಹಿಕವಾಗಿ ಆಗುವ ಆಘಾತವನ್ನು, ಬಿದ್ದ ಪೆಟ್ಟನ್ನು ಆ ಕ್ಷಣವೇ ಮರತುಬಿಡಬಹುದೇನೋ.. ಆದರೆ ಮಾತಿನ ಪೆಟ್ಟಿನ ನೋವು ಎಷ್ಟೋ ಕಾಲದವರೆಗೂ ಕಾಡುತ್ತಾ ಉಳಿಯುವುದಲ್ಲವೇ..?? ಅಂತಹಾ ಮಾತಿನ ಪೆಟ್ಟುಗಳು ನೆನಪಾದಾಗ ಮನಸ್ಸು ಕಹಿಯಾಗದೆ, ಸಿಹಿಯಾಗುವುದೇ..??
” ಪೆಟ್ಟು ತಿನ್ನಬಹುದು
ಮಾತು ನುಂಗಲಾಗುವುದೇ ಸಾರ್”
ವಿನ್ಸೆಂಟ್ ಕಾಫಿ ಇಂದೇಕೋ ಕಹಿ ಕಹಿ.
ಎಷ್ಟೋ ಬಾರಿ ನಮಗೆ ಇಷ್ಟವಿಲ್ಲದಿದ್ದರೂ.. ಸಮಯ ಸಂದರ್ಭಕ್ಕೆ ತಕ್ಕಂತೆ ರಾಜಿಯಾಗುತ್ತಾ ಹೋಗಬೇಕಾಗುತ್ತದೆ. ಸಂಧಾನವಿಲ್ಲದ ಬದುಕೇ ಇಲ್ಲವೇನೋ ಎನ್ನಿಸುತ್ತದೆ. ನೀರು ಎಲ್ಲದರೊಡನೆಯೂ ಬೆರೆಯುತ್ತದೆ. ಆದರೆ, ಉಳಿದ ಪದಾರ್ಥಗಳನ್ನು ಎಲ್ಲರದರೊಡನೆಯೂ ಬೆರೆಸುವುದು ಕಷ್ಟವೇ.. ಕೆಲವೊಮ್ಮೆ ಕಾಫಿಯಲ್ಲಿ ಸಕ್ಕರೆ ಕಡಿಮೆ ಇದ್ದ ಸಂದರ್ಭದಲ್ಲಿ ಕೂಗಾಡಿದವರು ತಮಗೆ ಮಧುಮೇಹ ಬಂದ ಸಂದರ್ಭದಲ್ಲಿ ಸಕ್ಕರೆ ಇಲ್ಲದ ಕಾಫಿಯನ್ನು ರೂಡಿಸಿಕೊಳ್ಳುವುದಿಲ್ಲವೇ..?! ರಾಜಿಯಾಗುವುದೆಂದರೆ ಮತ್ತೇನೂ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸುತ್ತಾ ಸಾಗುವ ಮನೋಭಾವ ಹೊಂದುವಾಗ.. ಹೀಗೆ ರಾಜಿಯಾದಾಗ ಮನಸ್ಸಿನ ಶಾಂತತೆಯೂ ಹೆಚ್ಚುತ್ತದೆ. ಅಲ್ಲದೇ ಈ ಸಂಧಾನವೇ ಕೆಲವೊಮ್ಮೆ ನಿರ್ಲಿಪ್ತತೆಯನ್ನು ಮೂಡಿಸಿಬಿಡುತ್ತದೆ.
“ಸಂಧಾನವಿಲ್ಲದ ಬದುಕಿದೆಯಾ ಸಾರ್”
ವಿನ್ಸೆಂಟ್ ಕೊಟ್ಟ ಕಾಫಿಯಲ್ಲಿ
ಸಕ್ಕರೆ ಇಲ್ಲದಿದ್ದರೂ ಕುಡಿಯುತ್ತಿದ್ದೆ
ಸತ್ಯ ಸಿಹಿ ಸುಳ್ಳಿನ ಪರದೆ ಹೊದ್ದಾಗ ಮೇಲ್ನೋಟಕ್ಕೆ ಕಾಣುವ ಸತ್ಯವೇ ಬೇರೆ. ನಮ್ಮ ಕಣ್ಣಿಗೆ ಹೆಚ್ಚು ರಾಚುವುದು ಅದೇ. ಆದರೆ, ನಿಜವಾಗಿಯೂ ಅದೇ ಸತ್ಯವಾ ಎಂದು ಪರಾಮರ್ಶಿಸಿ ನೋಡಬೇಕಾದರೆ.. ಅದರ ಆಳಕ್ಕಿಳಿದು ಒಳ ಹೊಕ್ಕರೆ ಮಾತ್ರ ಸಾಧ್ಯ. ಕೆಲವೊಮ್ಮೆ ಸುಳ್ಳು ಹೆಚ್ಚು ನಿರಾಳತೆಯನ್ನು ತಂದುಕೊಡಬಹುದು.. ಸತ್ಯ ತಿಳಿದಾಗ ಮನಸ್ಸು ರಾಡಿಯಾಗಬಹುದು. ಹಾಗೆಂದು, ಸತ್ಯವನ್ನು ತಿಳಿದುಕೊಳ್ಳಲು ಹೋಗಲೇಬಾರದೇ..?? ಇದಕ್ಕೆ ಉತ್ತರ ಕಷ್ಟ. ಆದರೆ, ಕೆಲವೊಮ್ಮೆ ಸತ್ಯವನ್ನು ಬಹಳ ಹತ್ತಿರದಿಂದ ನೋಡಲು ಕೆಡಕುವುದು ನಮ್ಮ ಶಾಂತತೆಯನ್ನು ಕಲಕಿ ತಲೆನೋವು ತಂದೊಡ್ಡುತ್ತದೆ.
” ಸತ್ಯವನ್ನು ಬಹಳ ಹತ್ತಿರದಿಂದ
ನೋಡಬಾರದು ಸಾರ್”
ವಿನ್ಸೆಂಟ್ ಕಾಫಿಯನ್ನೇನೋ
ತಂದಿಟ್ಟು ಹೋದ, ಈಗ
ನನ್ನ ತಲೆ ಸಿಡಿಯುತ್ತಿದೆ.
ಪ್ರೇಮ ಹುಟ್ಟುವುದನ್ನೇ ಗುರುತಿಸುವುದು ಕಷ್ಟ. ಪ್ರೇಮವನ್ನು ಆರಂಭಿಸುವುದು ಇನ್ನೂ ಕಷ್ಟ. ಹಾಗೆಯೇ ಕವಿತೆಯನ್ನು ಮುಗಿಸುವುದು ಕಷ್ಟ ಎನ್ನುವುದು ಕೇವಲ ಬರೆಯುವವರಿಗಲ್ಲ ಓದುವವರಿಗೂ ಅರಿವಾಗಿರುತ್ತದೆ. ಕವಿತೆಯ ಒಳ ಹೊಕ್ಕಿದಾಗ ಅದರಿಂದ ಹೊರಬರುವುದು ಕಷ್ಟವೇ.. ಹೀಗೆ ಕೋಶಿ’ಸ್ ಕವಿತೆಗಳ ಗುಂಗಿನಿಂದ ಹೊರಬರುವುದು ಕಷ್ಟವೇ..

“ಕವಿತೆಯನ್ನು ಮುಗಿಸುವುದು
ಪ್ರೇಮವನ್ನು ಪ್ರಾರಂಭಿಸುವುದು
ಬಲು ಕಷ್ಟ ಸಾರ್”
ವಿನ್ಸೆಂಟ್ ತಂದಿಟ್ಟ
ಕಾಫಿಯಲ್ಲಿ ಹೊಸ ರುಚಿ.
ಇಲ್ಲಿನ ಕವಿತೆಗಳನ್ನು ಗಮನಿಸುವಾಗ.. ಸಂಧಾನದ ಮಾತನ್ನಾಡುವಾಗ ಸಕ್ಕರೆ ಇಲ್ಲದ ಕಾಫಿ ಕುಡಿಯುವುದು ಆ ಕ್ಷಣದ ಸಂಧಾನ. ಕಹಿ ಸತ್ಯವನ್ನು ಅರಗಿಸಿಕೊಂಡಾಗ ಬರುವ ತಲೆನೋವು ಕಾಫಿಯನ್ನು ಕುಡಿದರೆ ಹೋಗುವುದಿಲ್ಲವೆಂಬ ಸತ್ಯವನ್ನು ಆ ಮೂಲಕವೇ ಹೇಳುತ್ತಾರೆ.
ಹಬೆಯಾಡುವ ಕಾಫಿ, ಕಹಿ ಕಾಫಿ, ಕಾಫಿ ಸ್ಟ್ರಾಂಗ್ ಆಗಿರುವುದು, ಕಾಫಿ ಹೆಚ್ಚು ಬಿಸಿ ಇರುವುದು, ಕಾಫಿಯಲ್ಲಿನ ಭಕ್ತಿರಸ ಹೀಗೆ ಕಾಫಿ ಕಾಣುತ್ತಾ ಹೋದರೆ.. ವಿನ್ಸೆಂಟ್ ನ ನಡವಳಿಕೆಗಳು ಕೂಡಾ ಕಾಣುತ್ತಾ ಹೋಗುತ್ತವೆ. ಕಾಫಿ ಇಟ್ಟು ಹೋಗುವ ವಿನ್ಸೆಂಟ್, ಬಿಲ್ ಇಟ್ಟು ಹೋಗುವ ವಿನ್ಸೆಂಟ್, ಕಿವಿಯಲ್ಲಿ ಅನುಭವದ ಮಾತನ್ನು ಉಸುರುವವನು, ಬುದ್ದನಂತೆ ಕಾಣುವ ವಿನ್ಸೆಂಟ್, ವಿನ್ಸೆಂಟ್ ನ ತೂಕದ ಮಾತುಗಳು.. ಹೀಗೆ ಕಾಫಿಯ ಜೊತೆ ಮನುಷ್ಯನ ನಡವಳಿಕೆಗಳು ಭಾವಗಳು ಕವಿತೆಯೊಡನೆ ಮಿಲನವಾಗಿದೆ.
ಈ ಪುಟ್ಟ ಪುಸ್ತಕದಲ್ಲಿ ರೇಖಾಚಿತ್ರಗಳ ಜೊತೆಗೆ ಮುಖಪುಟವೂ ಆಕರ್ಷಕವಾಗಿದೆ. ಕಾಫಿ ಚೆಲ್ಲಿದ ಕಪ್ ಎತ್ತಿದ ನಂತರ ಕಾಫಿಯ ಕಪ್ ನ ಕರೆ ಉಳಿದು ಹೋಗುವಂತೆ.. ಈ ಕವಿತೆಗಳನ್ನು ಓದಿದ ನಂತರ ಅನುಭವಿಸುವ ಅನುಭೂತಿಯೂ ನಮ್ಮಲ್ಲಿ ಮಧುರವಾಗಿ ಉಳಿದುಹೋಗುತ್ತದೆ. ಮತ್ತೆ-ಮತ್ತೆ ಓದಿ ಹೊಸ ಹೊಳಹುಗಳನ್ನು ಕಂಡುಕೊಳ್ಳುವಂತಹಾ ಕವಿತೆಗಳ ಗುಚ್ಛ. ಹೊಸ ರುಚಿಯ ಕಾಫಿಯನ್ನು ಸವಿಯಲು ಮನಸ್ಸು ಹೇಗೆ ವಿಭಿನ್ನವಾಗಿರುತ್ತದೆಯೋ.. ಕಾಫಿ ಮಾಡುವ ಸಮಯ, ಸಂದರ್ಭಗಳು ಪರಿಣಾಮಗಳು ಹೇಗೆ ವಿಭಿನ್ನವೋ.. ಕವಿತೆ ಹೊಸ ಅರ್ಥಗಳನ್ನು ಹುಟ್ಟಿಸುವುದು ಹಾಗೆಯೇ ಅಲ್ಲವಾ..?! ಮತ್ತೆ-ಮತ್ತೆ ಓದಿಸಿಕೊಳ್ಳುವಂತಹಾ, ಕೋಟ್ ಮಾಡುವಂತಹಾ ನನ್ನಿಷ್ಟದ ಕವಿತೆಗಳು.
- ವಿಭಾ ವಿಶ್ವನಾಥ್
