ವಿದ್ಯಾರ್ಥಿಗಳಿಗೆ ಅವರು “ವಿಜ್ಞಾನ ವಿರಾಟ”



ನಾನು ಎರಡು ವರುಷ ಕ್ಲಾಸಿನಲ್ಲಿ ಶೇಕಾಡ ನೂರು ಹಾಜರಿ ಇದ್ದ ವಿದ್ಯಾರ್ಥಿ ಎಂದು, ನನ್ನ ಕೆ.ಪಿ.ಆರ್. ಕಲ್ಲೂರಾಯರ ಮೇಸ್ಟ್ರು ಖುದ್ದಾಗಿ ಕರೆದು, ಸ್ಟಾಫ್ ರೂಂ ನಲ್ಲಿ ಎಲ್ಲಾ ಅಧ್ಯಾಪಕರ ಮುಂದೆ ಒಂದು ಗ್ಲಾಸು ಪಾರಿತೋಷಕವಾಗಿ ಕೊಟ್ಟಿದ್ದು ನನಗೆ ಸಿಕ್ಕ ಒಂದು ಅಮೂಲ್ಯ ಸಂಪತ್ತು ಎಂದು ಲೇಖಕರಾದ ರೂಪೇಶ್ ಅವರು ತಮ್ಮ ಒಲುಮೆಯ ಗುರುವನ್ನು ನೆನೆಯುವ ಒಂದು ಲೇಖನ… 

ಮಿಸ್ಟರ್ ಹಿರೋ ನಿಂತ್ಕೋ….”
“ವೇರಿ ಗುಡ್ ಕೂತ್ಕೋ….”
“ಮಿಸ್ಟರ್ ಬೂಸ್ಟ್ ನಿಂತ್ಕೋ….”
“ವೇರಿ ಗುಡ್ ಕೂತ್ಕೋ….”
“ಮಿಸ್ಟರ್ ಫಾರಿನ್ ನಿಂತ್ಕೋ….”
“ವೇರಿ ಗುಡ್ ಕೂತ್ಕೋ….”
ಪುತ್ತೂರಿನ ಸಂತ ಫಿಲೋಮಿನಾ ಬಾಲಕರ ಪ್ರೌಢಶಾಲೆ.. ೬೦ -೯೦ ರ ದಶಕದಲ್ಲಿ ಕಲಿತವರಿಗೆ ಗೊತ್ತಿರುವ super hit dialogue ಗಳಲ್ಲಿ ಒಂದು!!!!!
ಮ್ಯಾತ್ಸ್ ಮಾಂತ್ರಿಕ , ವಿಜ್ಞಾನ ವಿರಾಟ
ಕೆ.ಪಿ.ಆರ್. ಕಲ್ಲೂರಾಯರ ಸಂಭಾಷಣೆ ಇದು.

ಸೆಪ್ಟೆಂಬರ್ ತಿಂಗಳು ಹತ್ತಿರ ಬರುವಾಗ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಗುರುಗಳ ನೆನಪಿನಂಗಳದಲ್ಲಿ ಕಲ್ಲೂರಾಯರೂ ಅಗ್ರರಲ್ಲಿ ಒಬ್ಬರು. ನನಗೆ ೯ -೧೦ ನೇ ತರಗತಿಯಲ್ಲಿ ಮಾತ್ರ ಗಣಿತಶಾಸ್ತ್ರ ಪಾಠ ಮಾಡಿದ “#ವರ” ಅವರು.

ಅವರು ವಿಜ್ಞಾನ ಬೇರೆ ಕ್ಲಾಸಿಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಅವರು “ವಿಜ್ಞಾನ ವಿರಾಟ” ಗಣಿತಕ್ಕೆ ಅವರು “ಮ್ಯಾತ್ಸ್ ಮಾಂತ್ರಿಕ”. ಅಂತಹಾ ಪರಮ್ಮೊನ್ನತ ವಿಷಯ ಮಂಡನೆ ಅವರ ಕ್ಲಾಸು.

ನನಗೆ ೯  ತರಗತಿಯಲ್ಲಿ , ವಾರದಲ್ಲಿ ಮೂರು ದಿನ ಮಧ್ಯಾಹ್ನ ಮೇಲೆ ಅವರ ಕ್ಲಾಸಿತ್ತು, ೧೦ ತರಗತಿಯಲ್ಲಿ, ಮೂರು ದಿನ ಬೆಳಿಗ್ಗಿನ ಪ್ರಥಮ ಪಿರೇಡ್ ಅವರದೇ.

ಶಾಲೆ ೯  ಗಂಟೆಗೆ , ಆದರೆ ಸಾರ್ ಕೊಠಡಿ ಪ್ರವೇಶಿಸುವುದು ೮.೪೫ ಕ್ಕೆ. ಅವರಿಗೆ ಬೇಕಾದ ಡಸ್ಟರ್, ಸೀಮೆ ಸುಣ್ಣ ಕಡ್ಡಿ /ಸೀಸುಕ (ಚಾಕ್ ಪೀಸ್) , ಮರದ ದೊಡ್ಡ ಕಂಪಾಸ್, …. ಎಲ್ಲಾ ಸಾಮಾಗ್ರಿ ಜೊತೆ ಬಂದು ನಗುನಗುತ್ತಾ , ಸೀಸುಕ ತಿರುಗಿಸುತ್ತಾ ಕೊಠಡಿಯೊಳಗಿನ ವಿದ್ಯಾರ್ಥಿಗಳನ್ನು ನೋಡುತ್ತಾ ಕುಳಿತುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಗೊಂದಲ ಮಾಡುವ ವಿದ್ಯಾರ್ಥಿಯನ್ನು ಉದ್ದೇಶಿಸಿ..”ಮಿಸ್ಟರ್ ಹಿರೋ ನಿಂತ್ಕೋ….” ಆ ವಿದ್ಯಾರ್ಥಿ ನಿಂತುಕೊಂಡ ತಕ್ಷಣ, ಸೆಕುಂಡಿನೊಳಗೆ ಅವನಿಗೊಂದು ನಗು ಬೀರುತ್ತಾ, ಕೈಯಲ್ಲಿದ್ದ ಸೀಸುಕದಿಂದ ಕುಳಿತು ಕೊಳ್ಳಲು ಸನ್ನೆ ತೋರಿಸಿ .,..
“ವೆರಿ ಗುಡ್ ಕೂತ್ಕೋ….” ಹೇಳುತ್ತಿದ್ದರು.ಪಾಠ ಪ್ರವಚನದ ಮೊದಲು ವಿದ್ಯಾರ್ಥಿಗಳ ಗಮನದೊಳಗೆ ಹುರುಪು ತರಿಸುವ ಚೈತನ್ಯ ತುಂಬಿಸುತ್ತಿದ್ದರು.

ಇವರಿಂದಾಗಿ ನಾವು ೮.೪೦ ಕ್ಕೇ ಕ್ಲಾಸಿನೊಳಗೆ ಸೇರುತ್ತಿದ್ದೆವು. ಎಂತಹಾ ಪಾಠ ಎಂದರೆ …. ಒಬ್ಬನೇ ಒಬ್ಬ ಫೈಲ್ ಆಗುತ್ತಿರಲಿಲ್ಲ. ಅಂತಹಾ ಅತ್ಯುತ್ಕೃಷ್ಟ (classic) ರೀತಿಯಲ್ಲಿ ಹೋಗುತ್ತಿತ್ತು ಅವರ ಪಾಠ.

ಎಂಟನೇ ತರಗತಿಯಲ್ಲಿ ಕೆಲವರಿಗೆ ಅವರು ಮಧ್ಯಾಹ್ನ ಊಟದ ನಂತರದ ಮೊದಲನೇ ಕ್ಲಾಸು ವಿಜ್ಞಾನ ಮಾಡುವಾಗಲೂ ಒಬ್ಬರಿಗೂ ಒಂದು ಚೂರು ನಿದ್ರೆ ಬರುತ್ತಿರಲಿಲ್ಲ. ನಮಗೆ ಒಂಬತ್ತನೇ‌ತರಗತಿಯಲ್ಲಿ ಅವರು ಗಣಿತಕ್ಕೆ ಬರತೊಡಗಿದ್ದು. ಮಧ್ಯಾಹ್ನ ೧೨ .೩೦ – ೧.೩೦ ಊಟದ ಬಿಡುವು, ಕಲ್ಲುರಾಯರು ೧ .೧೫ ಗೆ ಕ್ಲಾಸಿನಲ್ಲಿ ಉಪಸ್ಥಿತರಾಗುತ್ತಿದ್ದರು.

ಕಲ್ಲೂರಾಯರ ಕ್ಲಾಸಿನ ಪಿರೇಡು ಮುಗಿದು ಬೆಲ್ ಹೊಡೆಯುವಾಗ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳು , ಬೆಲ್ ಹೊಡೆದವನಿಗೆ “…ಛೇ ಇವನಿಗೆ ಸ್ವಲ್ಪ ಲೇಟಾಗಿ ಬೆಲ್ ಹೊಡಿಬೋದಿತ್ತಲ್ಲಾ? ಈ ಬೆಲ್ ಹೊಡೆಯುವವನನ್ನು ಮುಖ್ಯೋಪಾಧ್ಯಾಯರು ಈ ಹೊತ್ತಲ್ಲಿ ಟೀ ತರಲು ಕಳುಹಿಸಲಿಲ್ಲವೇಕೆ? ಯಾವುದೇ ಶಿಕ್ಷಕರು ಈ ಬೆಲ್ ಹೊಡೆಯುವವನನ್ನು ಬ್ಯಾಂಕಿಗೋ ಬೇರೆ ಕೆಲಸಕ್ಕೋ ಕಳುಹಿಸಲಿಲ್ಲವೇಕೆ?..” ಎಂದು ಮರುಗದೆ ಇಲ್ಲದಿದ್ದ ವಿದ್ಯಾರ್ಥಿ ಮನಸ್ಸಿರಲಿಲ್ಲ.

ನನ್ನ ಸಹಪಾಠಿ ಲೋಕೇಶ್, ಅವನ ತಂದೆ ಪುತ್ತೂರಿನ ಒಂದು ವೈದ್ಯರಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದರು. ವೈದ್ಯರು ತೀರಿದ ಮೇಲೆ ಅವರ ತಂದೆಗೆ ಕೆಲಸವಿಲ್ಲದೆ ಬಹಳಾ ಕಷ್ಟದಲ್ಲಿದ್ದರು. ನಾವೆಲ್ಲಾ ಬುತ್ತಿಯಲ್ಲಿನ ಊಟ ಅವನಿಗೆ ಕೊಟ್ಟು ತೃಪ್ತಿ ಪಡಿಸುತ್ತಿದ್ದೆವು. ಅವನೇ ಕಲ್ಲುರಾಯರ ಬೆಸ್ಟ್ #ವಿದ್ಯಾರ್ಥಿ. ಅವನು ಅವರ ಕ್ಲಾಸಿನಲ್ಲಿ ಯಾವುದೇ ನೋಟ್ಸ್ ಬರೆಯುತ್ತಿರಲಿಲ್ಲ. ಎರಡನೇ ಕಾರಣ ಪುಸ್ತಕ ಖರೀದಿಸಲು ದುಡ್ಡಿಲ್ಲ. ಒಂದನೇ ಕಾರಣ ಕಲ್ಲುರಾಯರ ಪಾಠ ಅವನು ಮೆದುಳಿನೊಳಗೆ ಬರೆದು ಹೃದಯದೊಳಗೆ ಮಡಚಿ ಇಡುತ್ತಿದ್ದ. ನಾಳೆ ಗಣಿತ ಪರೀಕ್ಷೆಯಾದರೆ, ಇಂದು ಅವನು ಮನಸ್ಸೊಚ್ಛೆ ಆಟ ಆಡುತ್ತಿದ್ದ, ಯಾವುದಾದರೂ ಬೇರೆ ಪುಸ್ತಕ ಓದುತ್ತಿದ್ದ, ಮಾರನೇ ದಿನ ಗಣಿತ ಪರೀಕ್ಷೆ ಬರೆಯುತ್ತಿದ್ದ. ಕೊನೆಗೆ ಗಣಿತದಲ್ಲಿ ಅವನ ಅಂಕೆ ೧೦೦ ಕ್ಕೆ ೧೦೦ . ಎಸ್ಸೆಸ್ಸೆಲ್ಸಿ ಯಲ್ಲೂ ೧೦೦ . ನನ್ನ ಮಿತ್ರ ನವನೀತ್ ಪುತ್ತೂರು ಕಲ್ಲೂರಾಯರನ್ನು ತುಂಬಾ ಇಷ್ಟ ಪಡುತ್ತಿದ್ದ, ಹುಷಾರಿಲ್ಲದಿದ್ದರೂ ಕಷ್ಟಪಟ್ಟು ಕಲ್ಲೂರಾಯರ ಕ್ಲಾಸನ್ನು ಬಿಟ್ಟುಕೊಡುತ್ತಿರಲಿಲ್ಲ.

ಕಲ್ಲುರಾಯರು ಯಾವ ವಿದ್ಯಾರ್ಥಿಯ ನೋಟ್ಸ್ ಪರಿಶೀಲಿಸುತ್ತಿರಲಿಲ್ಲ.

ಒಂಬತ್ತನೇ ಕ್ಲಾಸಿನ ಒಂದು ಮಧ್ಯಾಹ್ನದ ಪಿರೇಡು, ೧.೧೫ ಗೆ ಬರಬೇಕಾದ ಕಲ್ಲೂರಾಯರು ಕಾಣುತ್ತಿಲ್ಲ. ಅಂದು ನಮ್ಮ ಕ್ಲಾಸ್ ಲೀಡರ್ ಕೃಷ್ಣಾನಂದ. ತನಗಿಷ್ಟವಿಲ್ಲದವರ ಹೆಸರು ಮಾತನಾಡಿದವರ ದೊಡ್ಡ ಪಟ್ಟಿಯಲ್ಲಿ ಬರೆದಿದ್ದ. ಕೃಷ್ಣಾನಂದ ಕ್ರೀಡಾಪಟು ಬೆನ್ ಜಾನ್ಸನ್ ಅಭಿಮಾನಿಯಾಗಿದ್ದ. ೧.೧೬ ಆದರೂ ಸಾರ್ ಬರಲಿಲ್ಲ ಎಂದು ಅವರನ್ನು ಕರೆಯಲು ಬೆನ್ ಜಾನ್ಸನ್ ತರಹ ತಲೆ ಬಗ್ಗಿಸಿ ವೇಗೋತ್ಕರ್ಷದಲ್ಲಿ ಓಡಿದ್ದೇ , ಕೊಠಡಿಯೊಳಗೆ ಆಗತಾನೇ ಪ್ರವೇಶಿಸುತ್ತಿದ್ದ ಕಲ್ಲೂರಾಯರ ಹೊಟ್ಟೆಗೆ ಕೃಷ್ಣಾನಂದನ ತಲೆ ಬಲವಾಗಿ ಹೊಡೆಯಿತು. ಸಾರ್… ನೋವಿನಿಂದ ಚೀರಿದರು, ಅವರ ಕೈಯಲ್ಲಿದ್ದ ಎಲ್ಲಾ ಸಾಮಾಗ್ರಿಗಳು ನೆಲದಲ್ಲಿ ಬಿದ್ದು ಹೊರಳಾಡಿತು. ಸಾರ್, ಬಿದ್ದಲ್ಲಿಂದ ತಾನೇ ಎದ್ದು, ತನ್ನ ನೋವು ಸಹಿಸುತ್ತಾ, ಪ್ರೀತಿಯಿಂದ ಕೃಷ್ಣಾನಂದನನ್ನೂ ಎಬ್ಬಿಸಿ, ಅವನನ್ನು ತನ್ನ ಬೆಂಚಿನಲ್ಲಿ ಕುಳಿತುಕೊಳ್ಳಲು ಹೇಳಿ. ಮೆಲ್ಲನೆ ಕುರ್ಚಿಯಲ್ಲಿ ಕೂತು, ಇನ್ನೊಬ್ಬ ವಿದ್ಯಾರ್ಥಿಯಲ್ಲಿ ಸ್ಟಾಫ್ ರೂಂ ನಿಂದ ಕುಡಿಯಲು ನೀರು ತರಿಸಿ, ಅದನ್ನು ಕುಡಿದು, ತಲೆ ಎತ್ತಿ ನೋಡುತ್ತಾರೆ. ಅವರ ಮುಂದೆ ಮತ್ತೊಮ್ಮ ಸಾಕ್ಷಾತ್ ಕೃಷ್ಣಾನಂದ!!!! ಅವನು ಮತ್ತೊಮ್ಮೆ ಬಂದು ನಿಂತಿದ್ದಾನೆ. ಅವನು “ಸಾರ್… ಇವರೆಲ್ಲಾ ಕ್ಲಾಸಿನಲ್ಲಿ ಮಾತನಾಡಿದವರು” ಎಂದು ಒಂದು ಉದ್ದದ ಕಾಗದ ಪಟ್ಟಿ ಅವರ ಮುಂದೆ ಇಟ್ಟ. ಸಾರ್ ಗೆ ನೋವಾದುದರಿಂದ ಮಾತನಾಡಿದವರಿಗೆ ಸರಿ ಬೀಳುತ್ತೆ ಶಿಕ್ಷೆಯಾಗುತ್ತೆ ಎಂದು ನಾವೆಂದುಕೊಂಡರೆ, ಕ್ಷಣಾರ್ದದಲ್ಲಿ ನಡೆದಿದ್ದೇ ಬೇರೆ.



ಕೃಷ್ಣಾನಂದ ,ಕಲ್ಲೂರಾಯರಿಂದ ಎರಡ್ಮೂರು ನಿಮಿಷ ತಡೆ ರಹಿತ ಏಟು ತಿಂದು ಸೌರವ್ಯೂಹದ ಎಲ್ಲಾ ನಕ್ಷತ್ರಗಳನ್ನು ಕ್ಷಿಪಣಿ ಇಲ್ಲದೆ ಕಂಡು, ಮನದೊಳಗೆ ರಮಣೀಯ ದೃಶ್ಯಕೊಂಡಾಡುತ್ತಿದ್ದ!!!!!! ನಂತರ ಬೆಳಗಿನ ಯಾವುದೇ ಕ್ಲಾಸಿಗೂ ಅವರು ೮.೪೫ ಕೊಠಡಿಯೊಳಗೆ ಹೋಗುತ್ತಿದ್ದರೂ,..ಶಾಲಾ ವರಾಂಡದಲ್ಲಿ ನಡೆಯುವಾಗ, ಯಾವುದಾದರೂ ಕ್ಲಾಸಿನಲ್ಲಿ ಕ್ಲಾಸ್ ಲೀಡರ್ ನಿಂತು , ಮಾತನಾಡುವ ವಿದ್ಯಾರ್ಥಿಗಳ ಹೆಸರು ಬರೆಯುವುದು ಕಂಡಾಗ, ಅವರು ಆ ವರಾಂಡದಲ್ಲಿ ನಿಂತು , ತನ್ನ ಬೆಲ್ ಬಾಟಮ್ ಪ್ಯಾಂಟು ಅಲ್ಲಾಡಿಸಿ , ಆ ಕ್ಲಾಸ್ ಲೀಡರ್ ಗೆ ಒಂದು ನಗು ಬೀರುತ್ತಿದ್ದರೆ, ಅದರ ಅರ್ಥ ಗೊತ್ತಾದ ಲೀಡರ್, ಮೌನವಾಗಿ ತನ್ನ ಬೆಂಚಿನಲ್ಲಿ ಹೋಗಿ ಕೂರುತ್ತಿದ್ದ.

ಅವರ ಪಾಠ ಕೇಳಿಸಿಕೊಳ್ಳದ ವಿದ್ಯಾರ್ಥಿಗಳು ವಿರಳದಲ್ಲಿ ವಿರಳ ಎನ್ನಬಹುದು. ಆದರೂ ಒಮ್ಮೊಮ್ಮೆ ಪಾಠ ಮಾಡುವಾಗ, ಪಾಠ ಕೇಳಿಸಿಕೊಳ್ಳದ ವಿದ್ಯಾರ್ಥಿಗೆ ಪ್ರಶ್ನೆ ಮಾಡುತ್ತಿದ್ದರು.

“AC = square root of √ABsquare +BCsquate ಏನಿದು? ಯಾವ ಪ್ರಮೇಯ? ” ಎಂದು ಒಂದ್ಸಲ ನನ್ನ ಸಹಪಾಠಿ ಸುಂದರನಿಗೆ ಪ್ರಶ್ನಿಸಿದರು. ಅವನು ಹಗಲು ಕನಸು ಕಾಣುತ್ತಿದ್ದ. ಅವನು ಉತ್ತರಿಸದೇ ಇದ್ದಾಗ …. ಕಲ್ಲೂರಾಯರು

” ಟ್ಟೆ…ಟ್ಟೆ…ಟ್ಟೆ …” ಎಂದು ಕೈ ಹಿಂದೆ ಮುಂದೆ ತಿರುಗಿಸಿ ಸನ್ನೆ ಮಾಡಿದರು. ಅದನ್ನು ಅವನು ಅರ್ಥ ಮಾಡಿ ಉತ್ತರಿಸುವ ತನಕ ಪುನಃ ಅದೇ ಪಾಠ ಇಡೀ ಕ್ಲಾಸಿಗೆ ಪುನರಾವರ್ತಿಸಿದರು, ಕೊನೆಗೆ ಅವನಿಂದ ಉತ್ತರ ಹೇಳಿಸಿ ಕುಳಿತು ಕೊಳ್ಳಲು ಹೇಳಿದಾಗ…. ಅವನ ಕಣ್ಣೀರು ತಡೆಯಿಲ್ಲದೆ ಹರಿಯುತ್ತಿತ್ತು. ಇಂತಹಾ ಟೀಚರನ್ನು ನಾನು ಅಪಮಾನಿಸಿದೆ ಎಂದು , ಕ್ಲಾಸಿನ ಬಳಿಕ ಅವರ ಮುಂದೆ ಹೋಗಿ ಕೈ ಜೋಡಿಸಿದಾಗ, ಅವರು ಅವನ ತಲೆ ಸವರಿ ” ಹೋಗು ಕಲಿ…ನೀನು ಒಳ್ಳೆಯವನು ನಿನಗೆ ಒಳ್ಳೆಯದೇ ಆಗುತ್ತೆ” ಎಂದು ಗಲ್ಲ ಸವರಿ ಹೊರಟು ಹೋಗುತ್ತಿದ್ದಿದ್ದು ನನಗೆ ಈಗಲೂ ಕಣ್ಮುಂದೆ ಹಾದು ಹೋಗುತ್ತಿದೆ.ಸುಂದರ ಅಂದು ಮಧ್ಯಾಹ್ನ ಮುಖ ತಗ್ಗಿಸಿ ಊಟ ಮಾಡದೆ ಅಳುತ್ತಾ ಮನೆಗೆ ಹೋಗಿದ್ದ. ಯಾಕೆಂದರೆ ಕಲ್ಲೂರಾಯರ ಕ್ಲಾಸಿನಲ್ಲಿ ಉತ್ತರಿಸಿಲ್ಲ ಎನ್ನುವುದು ಯಾವುದೇ ವಿದ್ಯಾರ್ಥಿಗೂ ಒಂದು ತಾಳಲಾರದ ವಿವರಣಾತೀತವಾದ ದೊಡ್ಡ ನೋವು.

ಎರಡು ವರುಷ ನಾನು ಕ್ಲಾಸಿನಲ್ಲಿ ಶೇಕಾಡ ನೂರು ಹಾಜರಿ ಇದ್ದ ವಿದ್ಯಾರ್ಥಿ ಎಂದು, ನನ್ನ ಅವರು ಖುದ್ದಾಗಿ ಕರೆದು, ಸ್ಟಾಫ್ ರೂಂ ನಲ್ಲಿ ಎಲ್ಲಾ ಅಧ್ಯಾಪಕರ ಮುಂದೆ ಒಂದು ಗ್ಲಾಸು ಪಾರಿತೋಷಕವಾಗಿ ಕೊಟ್ಟಿದ್ದು ನನಗೆ ಸಿಕ್ಕ ಒಂದು ಅಮೂಲ್ಯ ಸಂಪತ್ತು.

ಇದನ್ನು ಓದುವಾಗ ನಾನು ಮರೆತ ಕಲ್ಲೂರಾಯರ ಸಂಭಾಷಣೆ, ನನ್ನ ಸಹಪಾಠಿಗಳು ಗಿರೀಶ್ ಕುಮಾರ್ ಜಿ ಸಿ , ವಿನೋದ್ ಶೆಟ್ಟಿ , ಮಂಜುನಾಥ ರೈ , ವಿಜಯ್ ಸುವರ್ಣ ಮುಂತಾದವರು
ನೆನೆಯಬಹುದು.

ಅವರ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಈ ಶಿಷ್ಯನ ಪುಟ್ಟ ನಮನವಿದು. ಸ್ವೀಕರಿಸುವಿರೆಂದು ನಂಬುತ್ತಾ ಕಲ್ಲೂರಾಯರ ಸಹಸ್ರ ವಿದ್ಯಾರ್ಥಿಗಳಲ್ಲೊಬ್ಬ

ನಿಮ್ಮವ ನಲ್ಲ
*ರೂಪು*


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW