ಯಕ್ಷಗಾನ ವಲಯದಲ್ಲಿ ಪರಂಪರೆಯ ಹೊರತಾಗಿ ನಡೆಯುವ ರಂಗಾಭಿವ್ಯಕ್ತಿಗೆ ಮೂರು ರೀತಿಯ ಶಬ್ದವನ್ನು ಉಲ್ಲೇಖಿಸುತ್ತಾರೆ. ಪ್ರಯೋಗ, ಗಿಮಿಕ್ಸ್ ಮತ್ತು ಬದಲಾವಣೆ ಕುರಿತು ಗಣಪತಿ ಹೆಗಡೆ ಕಪ್ಪೆಕೆರೆ ಅವರ ಒಂದು ಅವಲೋಕನ. ಮುಂದೆ ಓದಿ…
ಗಿಮಿಕ್ಸ್ :
ಗಿಮಿಕ್ಸ್ ಎಂದರೆ ತಂತ್ರ ಎಂತಲೇ ಅರ್ಥ. ಒಂದು ರಂಗನಡೆ ಯಕ್ಷಗಾನಕ್ಕೆ ಮಾರಕ ಎಂದು ವಾದಿಸುವಾಗ ಈ ಶಬ್ದದ ಬಳಕೆ ಮಾಡುತ್ತಾರೆ. ಇದು ಆ ರಂಗನಡೆಯನ್ನು ತಾತ್ಸಾರವಾಗಿ ನೋಡಬಹುದು ಎನ್ನುವುದರ ಸೂಚ್ಯಾರ್ಥ. ಹಾಗಾದರೆ ಪ್ರಯೋಗವೆಂದರೇನು? ಅದು ಒಂದು ಕೇವಲ ತಂತ್ರವಲ್ಲ. ವಿಶಾಲವಾದ ತಾತ್ವಿಕ ತಳಹದಿಯ ಮೇಲೆ ನಿರೂಪಿಸಿದ ಹೊಸದಾದ ರಂಗಾಭಿವ್ಯಕ್ತಿ. ಹಾಗಾಗಿ ಅದು ಕೇವಲ ತಂತ್ರವಲ್ಲ, ಒಂದು ಮಂತ್ರವೇ ಆಗಿರುತ್ತದೆ. ಬದಲಾವಣೆ ಎನ್ನುವ ಶಬ್ದ ಪ್ರಯೋಗ ತೀರಾ ತಾತ್ಸಾರವಾದ ಭಾವವಲ್ಲ. ಅದು ಆ ತಂತ್ರವನ್ನು ‘ಸಾಮಾನ್ಯ’ ಎಂದು ಹೇಳುವ ಭಾವದಲ್ಲಿ ಬಳಸಲ್ಪಡುವುದೇ ಹೆಚ್ಚು. ಒಂದು ರೀತಿಯಲ್ಲಿ diplomatic ಆಗಿ ಹೇಳುವ ಕ್ರಮವೂ ಆಗಿರಬಹುದು. ಹಾಗಾದರೆ ಕೇವಲ ಬದಲಾವಣೆ ಎನ್ನುವುದೇ ಇಲ್ಲವೇ?? ನನ್ನ ಪ್ರಕಾರ ಕೇವಲ ಬದಲಾವಣೆ ಎನ್ನಬಹುದಾದದ್ದೂ ಸಹ ಇದೆ. ಹಿಂದಿದ್ದಿದ್ದೆ, ಹೊಸತೇನಲ್ಲ. ರಂಗದಲ್ಲಿ ಬಳಸಲ್ಪಡುತ್ತಿರುವ ಸಂದರ್ಭ ಅಥವಾ ಅಳವಡಿಸಿದ ಸಂದರ್ಭ ಬೇರೆ, ಅಷ್ಟೆ ಎನ್ನುವಾಗ ಬದಲಾವಣೆ ಎಂಬ ಶಬ್ದ ಸೂಕ್ತ. ಈ ಮೂರೂ ಶಬ್ದಗಳಿಗೆ ಒಂದೊಂದು ಉದಾಹರಣೆಯನ್ನಿಟ್ಟುಕೊಂಡು ಚರ್ಚಿಸುತ್ತೇನೆ.

ಫೋಟೋ ಕೃಪೆ : Deccan herald
ಒಬ್ಬಾತ ಕಲಾವಿದ ಪ್ರೇಕ್ಷಕರ ಮಧ್ಯದಲ್ಲಿ ಟೆಂಟ್ಗೆ ಕಟ್ಟಿದ ಕಂಬವನ್ನು ಹತ್ತುವ ಸಾಹಸ ಮಾಡಿದರೆ ಅದು ಸರ್ಕಸ್ ರೀತಿಯ ಗಿಮಿಕ್ಸ್. ಅದೇ ರೀತೀ ಹೊಸ ಪ್ರೇಕ್ಷಕರನ್ನು ಸೆಳೆಯುತ್ತೇವೆ ಎಂದೋ ಇಲ್ಲಾ ಪ್ರೇಕ್ಷಕರ ರಂಜನೆಗೆಂದೋ ಒಂದು ಸಿನಿಮಾ ಹಾಡನ್ನು ಅದೇ ದಾಟಿಯಲ್ಲಿ ಹಾಡಿದರೆ, ಆಗ ಅದನ್ನು ಯಕ್ಷಗಾನದ ಮಟ್ಟುಗಳನ್ನು ತಿಳಿದ ವಿದ್ವಾಂಸರು ಯಕ್ಷಗಾನೀಯವಲ್ಲ ಎನ್ನುವಾಗಲೂ ಸಹ ಗಿಮಿಕ್ಸ್ ಎಂಬ ಶಬ್ದವನ್ನೇ ಪ್ರಯೋಗಿಸುತ್ತಾರೆ.
ಬದಲಾವಣೆ :
ಇನ್ನು ಬದಲಾವಣೆ ಎನ್ನುವುದು ಯಾವಾಗ?? ಈಗ ಬಡಗುತಿಟ್ಟಿನಲ್ಲಿ ಪ್ರಚಲಿತವಿರುವ ಆಖ್ಯಾನದ ಪ್ರಾರಂಭಕ್ಕೂ ಮುಂಚಿನ ಧರ್ಮರಾಯನ ಒಡ್ಡೋಲಗ ಕೊನೆಯ ಪಕ್ಷ ಗುಂಡಬಾಳಾದಲ್ಲಾದರೂ ಈಗಿದ್ದ ಹಾಗಿರಲಿಲ್ಲ. (ಉಡುಪಿ ಜಿಲ್ಲೆಯಲ್ಲಿ ಹೇಗಿತ್ತು ಎನ್ನುವುದು ನನಗೆ ಗೊತ್ತಿಲ್ಲ). ಕೆರೆಮನೆ ಮೇಳ ಡೇರೆಮೇಳವಾಗಿ ಪುನರ್ಸಂಘಟನೆಗೊಳಗಾದಾಗ ಕೆರೆಮನೆ ಶಿವರಾಮ ಹೆಗಡೆಯವರೇ ಕುಳಿತು ನೋಡಿ, ಒಪ್ಪಿಗೆ ಕೊಟ್ಟ ನಿರ್ಧಿಷ್ಟ ಸಮಯದ( ೧೦ – ೧೧ ನಿಮಿಷದ್ದಾಗಿರಬೇಕು) ಒಡ್ಡೋಲಗ ಕ್ರಮ ಈಗ ಬಳಕೆಯಲ್ಲಿರುವುದು.ಇದು ಅತ್ಯಂತ ಪರಿಣಾಮಕಾರಿ. ಮತ್ತು ಮಾರಕವಲ್ಲದ ಹಾಗೂ ಪೂರಕವಾದ ಬದಲಾವಣೆ. ಇಂದಿಗೂ ಸಹ ಈ ಕ್ರಮ ರಂಗಕ್ಕೊಂದು ಆವರಣ ಕೊಡುವಲ್ಲಿ ಮತ್ತು ಪ್ರಸಂಗಕ್ಕೊಂದು ಕಾವು ಕೊಡುವಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಇದನ್ನು ಪ್ರಯೋಗವೆನ್ನಬಹುದಾದರೂ ಬದಲಾವಣೆ. ಯಾಕೆಂದರೆ ಇದು ಯಕ್ಷಗಾನದಲ್ಲಿದ್ದ ಕುಣಿತಗಳನ್ನೇ ಬಳಸಿದ ಕ್ರಮ. ಯಾವುದೂ ಎರವಲು ವಿಚಾರಧಾರೆಯಲ್ಲ. ಹೊರಗಿನಿಂದ ತಂದಿದ್ದಲ್ಲ. ಕೆಲವೊಂದು ರಾಜ ಪಾತ್ರಗಳ ಒಡ್ಡೋಲಗಕ್ಕೆ ಕನಿಷ್ಟ ಅರ್ಧಗಂಟೆ ಬೇಕಿತ್ತಂತೆ..ಸುಮಾರು ೧೫ ವರ್ಷದ ಹಿಂದಿನ ಮಾತು. ನಮ್ಮೂರಿನಲ್ಲಿ ಶರಸೇತು ಬಂಧ ಯಕ್ಷಗಾನ ಊರಿನ ಕೇಂದ್ರ ಭಾಗದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಆಯೋಜಿಸಲ್ಪಟ್ಟಿತ್ತು. ನನ್ನ ದೊಡ್ಡಪ್ಪನವರಾದ ಕಪ್ಪೆಕೆರೆ ಸುಬ್ರಾಯ ಭಾಗವತರ ಅರ್ಜುನನ ಪಾತ್ರ. ಅರ್ಜುನನ ಪ್ರವೇಶ ಕುಣಿತವನ್ನು ಅವರಂದು ನಮ್ಮ ಕಡೆ ಹಿಂದೆ ಬಳಕೆಯಲ್ಲಿದ್ದ ಕ್ರಮದಲ್ಲೇ ಕುಣಿದು ತೋರಿಸಿದ್ದರು. ಅದು ನನಗೆ ಹೊಸ ಅನುಭವ. ಆದರೆ ಎಲ್ಲಾ ಆಖ್ಯಾನಗಳಲ್ಲೂ ಇಂದು ಅಷ್ಟೇ ಕುಣಿದರೆ ಅದು ಸಾಮಾನ್ಯವಾಗಬಹುದು. ಮತ್ತು ಪರಿಣಾಮದ ದೃಷ್ಟಿಯಿಂದಲೂ ಇಂದು ಸೋಲಬಹುದು. ಹಿಂದೆ ಇದ್ದ ಕ್ರಮವಾದ್ದರಿಂದ ಒಂದು ಬದಲಾವಣೆ.. ನನ್ನ ಇನ್ನೊಬ್ಬ ದೊಡ್ಡಪ್ಪನವರಾದ, ಸಾಹಿತಿಗಳೂ ಆದ ಕನ್ನಡ ಪ್ರೊಫೆಸರ್ ಆಗಿ ನಿವೃತ್ತರಾದ ಗಜಾನನ ಹೆಗಡೆ, ಶರಸೇತು ಬಂಧದಲ್ಲಿ ಅರ್ಜುನನ ದೀರ್ಘ ತೀರ್ಥಯಾತ್ರೆಯ ಹಿನ್ನೆಲೆಯಲ್ಲಿ ನೋಡಿದಾಗ ಆ ಪ್ರವೇಶ ಕುಣಿತ ಸೂಕ್ತವಾದುದು ಎಂದಿದ್ದರು. ಪ್ರವೇಶ ಕುಣಿತವೇ ಧ್ವನಿಪೂರ್ಣವಾದ ನಿದರ್ಶನವಿದು. ಹೀಗೆ ಪರಂಪರೆಯನ್ನೂ ಸಹ ಉಳಿಸಬಹುದು.. ಒಟ್ಟಾರೆ ಪರಂಪರೆಯಲ್ಲಿ ಹೀಗಿತ್ತು ಎಂಬ ವಾದಕ್ಕಿಂತ, ಎಲ್ಲಿ ಮತ್ತು ಹೇಗೆ ಅಳವಡಿಸಿ, ಕಾಯ್ದುಕೊಳ್ಳಬಹುದು ಎಂಬ ಚಿಂತನೆ ಇಂದಿನ ತುರ್ತು ಅಗತ್ಯ. ಏಕತಾನತೆಗಿಂತ ಬೇರೆ ಬೇರೆ ರಂಗಮಾದರಿಗಳನ್ನು ಸೃಷ್ಟಿಸುವಲ್ಲೂ ಇದು ಸಹಾಯಕ. ಹಾಗಾಗಿ ಇಂಥಹ ಚಿಂತನೆಗಳು ಸ್ವಾಗತಾರ್ಹ.

ಫೋಟೋ ಕೃಪೆ : commons.wikimedia
ಪ್ರಯೋಗಗಳು :
ಪ್ರಯೋಗಗಳ ವಿಚಾರಕ್ಕೆ ಬರೋಣ. ಬಡಗುತಿಟ್ಟಿನ ಯಕ್ಷಗಾನ ಸದಾ ಪ್ರಯೋಗಗಳಿಗೆ ತೆರೆದುಕೊಂಡ ಒಂದು ರಂಗಪ್ರಾಕಾರ. ಈ ಕುರಿತು ಲೇಖನ ಸರಣಿಗಳೇ ಬಂದಿವೆ. ನಾನು ಕೆಲವೇ ಮಾತುಗಳಲ್ಲಿ ಈ ಕುರಿತು ನನ್ನ ಅನಿಸಿಕೆಯನ್ನು ಹಂಚಿಕೊಳ್ಳುತ್ತೇನೆ. ಪ್ರಯೋಗಗಳನ್ನು ಮಾಡುವ ಕಲಾವಿದರ ಅಥವಾ ತಂಡದ ಗುರಿಗಳೇ ಬೇರೆ ಬೇರೆ. ಹೊಸ ಪ್ರೇಕ್ಷಕರನ್ನು ಸೆಳೆಯುವುದು ಮತ್ತು ಪರಂಪರೆಯ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವುದು ಎರಡು ಪ್ರಮುಖ ಕಾರಣಗಳು. ೩೦ ನಿಮಿಷದ ಪ್ರಯೋಗದಿಂದ ಹಿಡಿದು ೩ ಘಂಟೆಯ ಪ್ರಯೋಗಗಳವರೆಗೆ ಬಹಳಷ್ಟು ರೀತಿಯ ಪ್ರಯೋಗಳು ನಡೆದಿವೆ. ಜಾಗತೀಕರಣದಿಂದಾಗಿ ನಗರೀಕರಣ. ನಗರೀಕರಣದಿಂದಾಗಿ ಬೇರೆ ಕಲೆಗಳೆದುರು ಜೊತೆಯಾಗಿ ನಿಲ್ಲಬೇಕಿದೆ. ಸಂಜೆ ಹೊತ್ತು ಮನಸ್ಸಿನ ಉಲ್ಲಾಸಕ್ಕಾಗಿ ಒಂದಿಷ್ಟು ಹೊತ್ತು ಕಲಾಸ್ವಾದನೆ ಮಾಡುವ ಒಂದು ವರ್ಗ ನಗರಗಳಲ್ಲಿದೆ. ಅಂಥವರೆದುರು ಕಾಲಮಿತಿಯಲ್ಲಿ ಯಕ್ಷಗಾನದ ಸಾರವನ್ನು ತಿಳಿಸುವುದು ಬಹಳ ಸವಾಲಿನ ಕೆಲಸ. ಯಕ್ಷಗಾನ ತಂಡಗಳು ಇಂಥಹ ಪ್ರೇಕ್ಷಕರ ಜೊತೆ ಜೊತೆಯಲ್ಲಿ ರಂಗಭೂಮಿಯನ್ನು ಗಂಭೀರವಾಗಿ ನೋಡುವ ವರ್ಗವನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಬಹಳಷ್ಟು ಬಾರಿ ಈ ವರ್ಗವೇ ಪ್ರಯೋಗದ ಹಣೆಬರಹದ ನಿರ್ಣಾಯಕರು. ಇಂದು ನಮ್ಮಲ್ಲಿರುವ ಅಧ್ಯಯನ ಕೇಂದ್ರಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ತೊಡಗಿಕೊಂಡಿವೆ. ಮತ್ತು ಯಾವುದೋ ಒಂದು ವರ್ಷ ಒಂದೆರಡು ಪ್ರಯೋಗಗಳನ್ನು ಮಾಡಿದರಾಯಿತು ಎನ್ನುವ ಹಾಗಿಲ್ಲ. ಅದು ನಿರಂತರವಾಗಿ ನಡೆಯುತ್ತಲೇ ಇರಬೇಕಾಗುತ್ತದೆ. ನಾನು ಕೆಲವು ದಿನಗಳ ಹಿಂದೆ ಆಳ್ವಾಸ್ ಸಂಸ್ಥೆಯ ಸಂಭವಾಮಿ ಯುಗೇ ಯುಗೇ ಯಕ್ಷರೂಪಕವನ್ನು ನೋಡಿದೆ. ಹೇಗಿತ್ತು ಎನ್ನುವದಕ್ಕಿಂತ ಇಂಥವು ಬೇಕು ಎನ್ನುವುದೇ ಸರಿ.. ಯಾಕೆಂದರೆ ಮೇಲೆ ಹೇಳಿದ ಪ್ರೇಕ್ಷಕರಿಗೆ ಅದರಲ್ಲೂ ಭಾಷೆ ಒಂದು ತೊಡಕಾಗುವ ಪ್ರೇಕ್ಷಕರಿಗೆ ಈ ತೆರನಾದ ರೂಪಕಗಳು ಉತ್ತರ. ಆದರೆ ಪಾರಂಪರಿಕ ಯಕ್ಷಗಾನ ರಂಗಭೂಮಿ ಸ್ವೀಕರಿಸಬೇಕಾದ ಯಾವುದಾದರೂ ಅಂಶ ಇವುಗಳಿಂದ ಸಿಗಬಹುದೇ?? ಎಂಬುದು ಪ್ರಶ್ನೆ. ಆನಂತರ ಯಕ್ಷಗಾನ ವಲಯದ ಪ್ರೇಕ್ಷಕರ ಮಧ್ಯೆ ಪ್ರದರ್ಶಿಸಲ್ಪಟ್ಟ ರಾಧಾಂತರಂಗದಂಥಹ ಪ್ರಯೋಗಗಳು.
ಇವು ಹೆಚ್ಚು ಪ್ರದರ್ಶನ ಕಂಡಿಲ್ಲ. ಯಕ್ಷಗಾನ ವಲಯದ ಪ್ರೇಕ್ಷಕರಿಗೆ ಇದು ಹೊಸ ಅನುಭವ ಕೊಟ್ಟಿದೆಯೇ ಎನ್ನುವುದು ಪ್ರಶ್ನೆ. ಇಂಥಹ ಪ್ರಯೋಗಗಳಾಗುವಾಗ ಭಾಗವತಿಕೆ ಇಂಪಾಗಿರಬೇಕು ಎನ್ನುವುದು ಸರಿ. ಅದಕ್ಕಿಂತ ಮುಖ್ಯವಾಗಿ ಸಾಹಿತ್ಯವನ್ನು ವಿಮರ್ಶಾವಲಯ ಗಮನಿಸಬೇಕು. ಚರ್ಚೆಗಳಾಗಬೇಕು. ಹತ್ತಿಪ್ಪತ್ತು ಜನರನ್ನು ಏಕಕಾಲದಲ್ಲಿ ರಂಗಸ್ಥಳ ತುಂಬಿಸುವ ರೂಪಕಗಳು ಮಾತ್ರ ಯಶಸ್ವಿಯಾಗುತ್ತವೆ ಅಂತಲ್ಲ. ಕೆಲವೊಮ್ಮೆ ಅವುಗಳಿಗಿಂತ ಗಂಭೀರ ಪ್ರೇಕ್ಷಕರು ಇದಕ್ಕಿರುತ್ತಾರೆ. ಇಂಥ ಪ್ರಯೋಗಗಳು ಕೂಡ ಸ್ವಾಗತಾರ್ಹವೆ ಸರಿ.. ಈಗ ವ್ಯವಸಾಯೀ ಮೇಳದ ರಂಗಸ್ಥಳದಲ್ಲಿ ವರ್ತಮಾನದಲ್ಲಿ ನಡೆದ ಒಂದೆರಡು ಪ್ರಯೋಗವನ್ನು ಗಮನಿಸೋಣ.. ಕೊಂಡದಕುಳಿಯವರ ಪ್ರಯೋಗದ ಕುರಿತೇ ಚರ್ಚಿಸಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ.. ಅನಿವಾರ್ಯ ಯಾಕೆಂದರೆ ಬೇರಾರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಮತ್ತು ಗಂಭೀರವಾಗಿ ತೊಡಗಿಸಿಕೊಂಡವರಿಲ್ಲ. ಈ ಕುರಿತು ಚರ್ಚೆ ಆದಾಗಲೆಲ್ಲ ಉಲ್ಲೇಖಿಸಲ್ಪಡುವ ಶಬ್ದಗಳು ಶಬ್ದಾಭಿನಯ ಮತ್ತು ಭಾವಾಭಿನಯ ಎನ್ನುವುದು. ಆದರೆ ಇವೆರಡು ಶಬ್ದಗಳು ಭಾರತೀಯ ಕಾವ್ಯ ಮೀಮಾಂಸೆ ಪುಸ್ತಕದಲ್ಲಿದ್ದ ಹಾಗಿಲ್ಲ. ಆದ್ದರಿಂದ ಇವುಗಳನ್ನು ಯಾರು coin ಮಾಡಿದರು ಎನ್ನುವುದು ನನಗೆ ತಿಳಿದಿಲ್ಲ.. ಇವು ಆಧುನಿಕ ಕಾಲದಲ್ಲಿ ಒಂದು ಹೊಸ ರಂಗಸಿದ್ಧಾಂತಕ್ಕೆ ಕಾರಣವಾಗಬಹುದೇ ಎನ್ನುವ ಕುತೂಹಲ ನನಗಿದೆ.ಒಂದು ಪದ್ಯವನ್ನು ಭಾಗವತರು ಹಾಡಿದಾಗ ಅದರಲ್ಲಿ ಅಭಿನಯಕ್ಕೆ ಸಿಗುವ ಶಬ್ದಗಳನ್ನು ಅಭಿನಯಿಸುವುದು ಹಿಂದಿನ ಕ್ರಮವಾಗಿತ್ತು ಎನ್ನುವುದು ಕೇಳಿ ಬಲ್ಲೆ. ಆದರೆ ಅದನ್ನು ವಿಸ್ತರಿಸುವಾಗ ಮುಮ್ಮೇಳದ ಕಲಾವಿದ ಮತ್ತು ಭಾಗವತರ ಮಧ್ಯೆ ಒಂದು ಹೊಂದಾಣಿಕೆ ಅವಶ್ಯ. ಇಲ್ಲಿ ಶಬ್ದಾಭಿನಯ ಎನ್ನುವುದನ್ನು ಚಲಾವಣೆಗೆ ತರುತ್ತೀರೆಂದಾದರೆ, ಅದು ಪದ್ಯದ ಚೌಕಟ್ಟು ಮೀರಬಾರದು. ಉದಾಹರಣೆಗೆ ಬಲರಾಮನ ಹತ್ತಿರ ಕೃಷ್ಣ ‘ಯಾತಕೆ ಮರುಳಾದಿರಿ ಅಣ್ಣಯ್ಯಾ’ ಎಂದು ಕೇಳುವಾಗ ಮರುಳು ಎಂದರೆ ಹುಚ್ಚಾಟವಾಯಿತು ನಿನ್ನದು ಎನ್ನುವ ಛೇಡಿಸುವ ಧ್ವನಿ.

ಫೋಟೋ ಕೃಪೆ : Flickr
ಅತಿಕಾಯ ರಾವಣನಲ್ಲಿ ‘ಯಾತಕೆ ಮರುಳಾದೆ ತಾತಾ’ ಎನ್ನುವಾಗ ಇರುವುದು ಬೇಸರದ ಅಥವಾ ಖೇದದ ಧ್ವನಿ. ಎರಡೂ ಪದ್ಯದಲ್ಲಿರುವುದು ಮರುಳು ಎಂಬುದೇ. ಆದರೆ ಧ್ವನಿ ಭಿನ್ನ. ಕೊಂಡದ ಕುಳಿಯವರು ಕೆಲವು ಪದ್ಯಗಳಿಗೆ ಭಾವಾಭಿನಯ ತಂದರು ಎನ್ನಲಾಗಿದೆ. ಅವರ ‘ಕಪಟ ನಾಟಕರಂಗ’ ಅಥವಾ ‘ಸೃಷ್ಟಿಗರ್ಜುನ’ ಪದ್ಯಗಳಲ್ಲಿನ ಪ್ರಸ್ತುತಿ ಮೂರು ಹಂತಗಳಲ್ಲಿ ನನ್ನನ್ನು ಪ್ರಭಾವಿಸಿದೆ. ಮೊದಲಬಾರಿ ಕಂಡಾಗ ನನಗೆ ಆಶ್ಚರ್ಯವಾದರೂ ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಯಾಕೆಂದರೆ ಹಿಂದಿನ ಹಿರಿಯ ಕಲಾವಿದರ ಕುರಿತಾದ ವರ್ಣನೆಗಳನ್ನು ಕೇಳುತ್ತಾ ಬೆಳೆದ ನಾನು ವರ್ತಮಾನವನ್ನು ಒಪ್ಪುತ್ತಿರಲಿಲ್ಲ.
ಆನಂತರ ಎರಡನೇ ಹಂತದಲ್ಲಿ ಖುಷಿಯಾಗಿ ನೋಡಿದೆ. ಇಂದು ಮೂರನೇ ಹಂತದಲ್ಲಿ ವಿಶ್ಲೇಷಣೆಯ ದೃಷ್ಟಿಯಿಂದ ನೋಡುತ್ತಿದ್ದೇನೆ. ಒಂದು ಪದ್ಯದಲ್ಲಿ ಸೂಚಿತವಾಗುವ ಮಾತನ್ನು ಕಥೆಗಳ ಮೂಲಕ ಪದ್ಯಕ್ಕೇ ಅಭಿನಯಿಸಿದರೆ ಅದನ್ನು ನೃತ್ಯರೂಪಕ ಎಂತಲೇ ಹೇಳಬೇಕಾಗುತ್ತದೆ.. ಒಂದೊಮ್ಮೆ ಪದ್ಯದಲ್ಲಿ ಶಬ್ದಗಳಿಂದ ಹೊರತಾದ ಒಂದು ನೋಟ ಅಡಕವಾಗಿದ್ದರೆ ಮತ್ತು ಅದನ್ನು ಕಲಾವಿದ ಅಭಿವ್ಯಕ್ತಿಸಿದರೆ ಭಾವಾಭಿನಯ ಅನ್ನಬಹುದು. ಉದಾಹರಣೆಗೆ ‘ಸದ್ದಿಲ್ಲದೆ ಮದ್ದರೆವೆನು’ ಪದ್ಯ ತಗೊಳ್ಳಿ. ಸದ್ದಿಲ್ಲದೆ ಮತ್ತು ಮದ್ದರೆವೆನು ಎಂಬೆರಡೂ ಶಬ್ದವನ್ನೂ ಹಲವಾರು ಬಾರಿ ದುಡಿಸಿಕೊಳ್ಳುವುದು ರೂಢಿ. ಅದು ಶಬ್ದಾಭಿನಯ. ಆದರೆ ಅದೊಂದು ಗಾದೆ ಮಾತಿನಂಥಹ ನುಡಿಕಟ್ಟು. ಆ ಮಾತಿನ ಭಾವ ‘ಕಪಟತನ’ ಪ್ರದರ್ಶಿಸುತ್ತೇನೆ ಎನ್ನುವುದು. ಇಲ್ಲಿ ಭಾವಾಭಿನಯ ಎಂಬ ಮಾತಿಗೂ ಅವಕಾಶವಿದೆ. ಎಲ್ಲಾ ಪದ್ಯಗಳೂ ಹೀಗಿರಲಾರವು. ಆದರೆ ನೃತ್ಯ ರೂಪಕ ಏಕತಾನತೆಯನ್ನು ತರುತ್ತಿದೆ ಮತ್ತು ಲಯವನ್ನು ಹಿಡಿದಿಟ್ಟುಕೊಳ್ಳುವ ಸಮಸ್ಯೆ ಇದೆ ಎನ್ನುವವರೂ ಇದ್ದಾರೆ. ಆದರೆ ಕೆಲವೊಂದು ವಿಮರ್ಶಕರು ‘ಊಟದಲಿ ನಿಪುಣ’ ಎಂಬ ಶಬ್ದಕ್ಕೆ ಅಡುಗೆ ಮಾಡಿ ಬಾಳೆಲೆ ಎಸೆಯುವವರೆಗಿನ ಅಭಿನಯ ಮಾಡುವವರು ಅಥವಾ ಬಕಾಸುರನ ಕಥೆಯನ್ನು ಕುಣಿಯುವವರು ಮುಂದೊಂದು ದಿನ ಬರಬಹುದು ಎಂದು ಎಚ್ಚರಿಸಿದ್ದಾರೆ.. ಆದರೆ ನಾವು ಕೊಂಡದಕುಳಿಯವರ ಪ್ರಯೋಗವನ್ನು ಗಮನಿಸಿದರೆ ಒಂದು ಚೌಕಟ್ಟಿದೆ. ಇದಕ್ಕೆ ಪರ್ಯಾಯವಾಗಿ ಒಂದು ಮಾರ್ಗವನ್ನು ಹೇಳಬಯುಸುತ್ತೇನೆ. ನನ್ನಕ್ಕ(ದೊಡ್ಡಪ್ಪನ ಮಗಳು) ಯಶಸ್ವಿನಿ ಹೆಗಡೆಯ ಜೊತೆ ಏನೋ ಚರ್ಚಿಸುವಾಗ, ಯಕ್ಷಗಾನದಲ್ಲಿ ಒಂದು ಒಳ್ಳೆಯ ನಿಲುವು ಬಹಳ ಮುಖ್ಯ. ಅದನ್ನು ಕೊಟ್ಟು ಚೆನ್ನಾಗಿ ಕುಣಿದರೆ ಪ್ರೇಕ್ಷಕರು ಮೆಚ್ಚುತ್ತಾರೆ ಅಲ್ಲವೇ?? ಎಂದು ಕೇಳಿದಳು.. ಅವಳು ಭರತನಾಟ್ಯ ಕಲಿತವಳು. ಅವಳೇನು ಯಕ್ಷಗಾನದ ವಾತಾವರಣದಲ್ಲಿ ಬೆಳೆದವಳಲ್ಲ. ಯಾವುದೇ ಹಿನ್ನೆಲೆಯಲ್ಲಿ ಹೇಳಿದ್ದಲ್ಲ.. ಆದರೆ ನಾನು ಆ ಮಾತಿನ ಕುರಿತಾಗಿ ಯೋಚಿಸಿದೆ. ಹೌದು.. ‘ಕಪಟನಾಟಕರಂಗ’ ಅಥವಾ ‘ಸೃಷ್ಟಿಗರ್ಜುನ’ ಪದ್ಯ ತೆಗೆದುಕೊಂಡರೆ ಒಂದೆರಡು ನಿಲುವಿನಲ್ಲಿ ಎದುರು ಪಾತ್ರದ ವ್ಯಕ್ತಿತ್ವದ ಕುರಿತಾಗಿ ಹೇಳಿಬಿಡಬಹುದು. ಕಥೆ ಹೇಳಿಕೊಂಡು ಕುಣಿಯಬೇಕೆಂದಿಲ್ಲ. ಉದಾಹರಣೆಗೆ ಮತ್ಸ್ಯಬೇಧನ, ನಪುಂಸಕತ್ವ, ಐರಾವತ, ಕೃಷ್ಣನ ಗೋವರ್ಧನೋದ್ಧಾರ, ಸುದರ್ಶನ ಚಕ್ರ, ಹೀಗೆ ಆ ನಿಲುವುಗಳೇ ಇಡೀ ಕಥೆಯನ್ನು ಹೇಳಿಬಿಡುತ್ತದೆ. ಕೊಂಡದಕುಳಿಯವರ ‘ಮನ ಸೆಳೆವ ಮಧುಮಾಸ’ ಮತ್ತು ‘ಬಾರೆ ಬಾ ಮದನರಾಣಿ’ ಇವೆರಡೂ ಸಹ out of box ಯೋಚನೆಗಳು.. ತುಂಬಾ ಚೆಂದ.. ಕಂಸ ದಶಾವತಾರವನ್ನು ಕಂಡ ಕಲ್ಪನೆ ಹಿಡಿಸಲಿಲ್ಲ. ಪರಂಪರೆಯ ಕೃಷ್ಣ ಬಲರಾಮರು ಬಂದು ಹೋಗುವ ಕ್ರಮವೇ ಹೆಚ್ಚು ಸೂಕ್ತ. ಪ್ರತಿಯೊಂದು ಪ್ರಸಂಗಕ್ಕೂ ಪರಂಪರೆಯಲ್ಲಿ ಭಿನ್ನವಾದ ರಂಗಮಾದರಿಗಳಿವೆ. ಯಕ್ಷಗಾನ ಪರಂಪರೆ ಬಹಳ ಶ್ರೀಮಂತ. ಕೊಂಡದಕುಳಿಯವರ ವಾಚಿಕವನ್ನೂ ಸಹ ನೀವು ಗಮನಿಸಬೇಕು. ಹರಿಶ್ಚಂದ್ರನಿರಲಿ, ಕೃಷ್ಣಾರ್ಜುನದ ಅರ್ಜುನನಿರಲಿ ಹಿರಿಯ ಕಲಾವಿದರ ಮಾತನ್ನು ಬಳಸಿದರೂ, ಆಶಯಭಂಗವಾಗದಂತೆ ಆಶಯ ವಿಸ್ತರಿಸುತ್ತಾರೆ. ಕೆಲವೆಡೆ ಪರಂಪರೆಯನ್ನು ಪ್ರಶ್ನಿಸಿದ್ದಾರೆ. ಕಾರ್ತವೀರ್ಯನ ಪೀಠಿಕೆ ಹೊಸತು. ಪ್ರತ್ಯುತ್ಪನ್ನಮತಿತ್ವ ಅಸಾಧಾರಣ. ಹೇಳುತ್ತಾ ಹೋದರೆ ಪ್ರತಿ ಪಾತ್ರವನ್ನು ವಿಶ್ಲೇಷಿಸಬೇಕಾಗುತ್ತದೆ. ಹೀಗೆ ಇಂದು ಕೊಂಡದಕುಳಿಯವರು ಸಾರ್ವಕಾಲಿಕ ಶ್ರೇಷ್ಟರ ಸಾಲಿನಲ್ಲಿ ನಿಲ್ಲುವ ಕಲಾವಿದರು.

ಫೋಟೋ ಕೃಪೆ : deccanchronicle
ಪ್ರಯೋಗಗಳು ಬೇಕು. ಆದರೆ ಕೇವಲ ಕಲಾವಿದರ ಬಯೋಡೇಟಾದಲ್ಲಿ ಉಲ್ಲೇಖಿಸಲು ಪ್ರಯೋಗ ಸೀಮಿತವಾಗಿರಬಾರದು. ನೆನಪಿಡಿ, ಪ್ರಯೋಗವೊಂದು ಯಶಸ್ವಿಯಾಗುವುದು ಮುಂದೊಂದು ದಿನ ಅದು ಪರಂಪರೆ ಎನಿಸಿಕೊಳ್ಳುವುದರಲ್ಲಿ ಅಡಗಿದೆ. ಹಿರಿಯರಾದ ಪ್ರಭಾಕರ ಜೋಶಿಯವರು ಎಲ್ಲಾ ಕಾಲದಲ್ಲಿ ಕಾಳಿದಾಸ, ಶೇಕ್ಸ್ಪಿಯರ್ ಕಾಣಸಿಗಲಾರರು. ಇದಕ್ಕೆ ಯಕ್ಷಗಾನ ವಲಯವೂ ಹೊರತಲ್ಲ ಎಂದಿದ್ದಾರೆ. ಆದರೆ ಇಂದು ನಮಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರತಿಭಾನ್ವಿತ ಕಲಾವಿದರ ಅವಶ್ಯಕತೆ ಇದೆ.. ಒಂದು ಸಂಚಲನದ ಅವಶ್ಯಕತೆ ಇದೆ. ಪ್ರಯೋಗಗಳು ನಡೆಯಲಿ. ಎಷ್ಟೆಲ್ಲಾ ಪ್ರಶ್ನೆಗಳು ಹುಟ್ಟುತ್ತವೋ ಹುಟ್ಟಲಿ. ಅವುಗಳ ಉತ್ತರಕ್ಕಾಗಿ ಪ್ರಾಮಾಣಿಕವಾಗಿ ಚಿಂತಿಸೋಣ. ಒಂದು ಕಾಲಘಟ್ಟ ಎಂಥೆಂಥ ಚಿಂತನೆಗಳನ್ನು ಹೊಂದಿತ್ತು ಎನ್ನುವುದು ಆ ಕಾಲದ ಶ್ರೀಮಂತಿಕೆಯಾಗಿರುತ್ತದೆ.
- ಗಣಪತಿ ಹೆಗಡೆ ಕಪ್ಪೆಕೆರೆ ( ವೃತ್ತಿಯಲ್ಲಿ ಸಾಫ್ಟ್ ವೆರ್ ಇಂಜೀನಿಯರ್ ,ಹವ್ಯಾಸಿ ಬರಹಗಾರರು)
