ಎಲ್. ಎಸ್. ಡಿ.??? ಏನು ಹೇಳುತ್ತದೆ ಈ ನಾಟಕ?

ಎಲ್ ಎಸ್ ಡಿ ನಾಟಕದಲ್ಲಿ ಮನೆಗೆಲಸ ಮಾಡುವ ದುಡಿಯುವ ವರ್ಗದ ಅನುಭವದ ಕಥನವಿದೆ. ಇದು 39ನೇ ಪ್ರದರ್ಶನವಾಗಿದೆ.ಹಿರಿಯ ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು ಅವರು ಎಲ್ ಎಸ್ ಡಿ ನಾಟಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇದು ಏನಾದರೂ ಡ್ರಗ್ಸ್ ‌ಗೆ ಸಂಬಂಧಿಸಿದ ನಾಟಕವೇ? ನಾಟಕ ಪ್ರದರ್ಶನ ‌ಕ್ಕೆ ಹೋಗುವ ಮುಂಚೆ ಇದೇ ಯೋಚನೆ ತಲೆಯಲ್ಲಿ ಸುತ್ತುತ್ತಿತ್ತು… ನಾಟಕ ನೋಡಿದ ಮೇಲೆ
ಒಂದು ಒಳ್ಳೆಯ ಅಭಿನಯದ, ಉತ್ತಮ ಸಂದೇಶದ ಮನರಂಜನೆಯ ನಾಟಕ ನೋಡಿದ ಸಂತೃಪ್ತ ಭಾವನೆ ಮೂಡಿತು. ನಾನಾ ಕಾರಣಗಳಿಗೆ ಸ್ವಲ್ಪ ಬಿಗುವಾಗಿದ್ದ ಮನಸ್ಸು, ನಾಟಕದ ಹಾಸ್ಯಕ್ಕೆ ಸ್ಪಂದಿಸಿ ಮನಸ್ಸು ಹಗುರಾಯಿತು.

ಆರಂಭದಲ್ಲಿ ಹಾಸ್ಯ ಪ್ರಧಾನ ಸಂಭಾಷಣೆ, ಆಂಗಿಕ ಅಭಿನಯ ಮುಂತಾದವುಗಳಿಂದ ಜನರನ್ನು ಸಂಪೂರ್ಣ ಮನರಂಜನೆಗೆ ದೂಡಿದರೂ, ನಂತರದಲ್ಲಿ ನಾಟಕ ಗಂಭೀರವಾಗಿ ಒಂದು ಉತ್ತಮ ಸಂದೇಶ ನೀಡುವ ನಾಟಕವಾಗಿ ಕೊನೆಗೊಳ್ಳುತ್ತದೆ. (ನಾನು ನಮ್ಮ ಸಮುದಾಯ ರಂಗತಂಡದಿಂದ ಕಲಿತಿರುವ ಮೂಲ ಪಾಠ, ಜಗತ್ತಿನ ಮಹಾನ್ ನಾಟಕಕಾರ ಬ್ರೆಕ್ಟ್ ನ ಸಿದ್ದಾಂತಕ್ಕೆ ಪೂರಕವಾದ ನಾಟಕದ ವಸ್ತು ಮತ್ತು ವಿನ್ಯಾಸ ಇದಾಗಿದೆ. ರಂಗಭೂಮಿ ಕೇವಲ ಮನರಂಜನೆಗೆ ಮಾತ್ರ ಅಲ್ಲ; ರಂಗಭೂಮಿ ಸಾಮಾಜಿಕ ಚಿಂತನೆಯ ಸ್ಪಂದನೆಗಳಿಗೂ ಕಾರಣವಾಗಬೇಕು)..

ಈ ನಾಟಕದಲ್ಲಿ ಮನೆಗೆಲಸ ಮಾಡುವ ದುಡಿಯುವ ವರ್ಗದ ಅನುಭವದ ಕಥನವಿದೆ. ತಾವು ಮನೆಗೆಲಸ ಮಾಡುವ ಉನ್ನತ ಅಥವಾ ಮಧ್ಯಮ ವರ್ಗದ ಮನೆಯೊಡತಿಯರ ಬದುಕನ್ನು ತೀರಾ ಹತ್ತಿರದಿಂದ ಪ್ರತಿದಿನ ನೋಡುವ ಈ ಮನೆಗೆಲಸದ ದುಡಿಯುವ ಜನ, ತಮ್ಮ ಬದುಕಿನ ಕನಸುಗಳನ್ನೂ ಆ ವರ್ಗದ ಆಯಾಮದಲ್ಲೇ ಕಟ್ಟಿಕೊಳ್ಳಲು ಆರಂಭಿಸುತ್ತಾರೆ. ಮನೆಯೊಡತಿಯ ಸಂಸ್ಕೃತಿ, ಐಷಾರಾಮಿ ವಸ್ತುಗಳು, ನಡೆನುಡಿಗಳು ತಮ್ಮ ಬದುಕಿನಲ್ಲೂ ಇದ್ದರೆ ಎಷ್ಟು ಚಂದ ಅನ್ನಿಸಲು ಆರಂಭವಾಗುತ್ತದೆ. ಮನೆಯೊಡತಿ, ಮನೆಗೆಲಸದವರ ಮೇಲೆ ತೋರಿಸುವ ಪ್ರೀತಿ, ಮಾನವೀಯತೆ ಕೃತಕವಾದದ್ದು ಎಂದು ಅರಿವಿಗೆ ಬರಲು ತುಂಬಾ ಸಮಯ ಬೇಕಾಗುತ್ತದೆ.

ಎಲ್ ಎಸ್ ಡಿ..

ನೂರಾರು ಕನಸುಗಳಲ್ಲೆ ತಮ್ಮ ಬದುಕಿನ ಉನ್ನತಿಯನ್ನು‌ ಕಾಣುವ ಒಂದು ವರ್ಗದ ಕಥೆಯಿದೆ; ಅನುಭವಗಳಿವೆ; ಆ ಆಸೆಗಳನ್ನು ಈಡೇರಿಸಿಕೊಳ್ಳಲು ಅಸಮಂಜಸ ಸುಲಭ ಮಾರ್ಗೋಪಾಯಗಳನ್ನು ಹುಡುಕಿಕೊಂಡು ಕೊನೆಗೆ ಹತಾಶರಾಗುವ ಕೋಟ್ಯಂತರ ಜನರ ಬದುಕಿನ ಕಥೆ ಇದಾಗಿದೆ. ಇಂತಹ ಸರಳ ಮತ್ತು ಸುಂದರ ಸಂದೇಶ ನೀಡುವ ನಾಟಕಗಳೂ ಸಹ ರಂಗಭೂಮಿಗೆ ಬಹಳ ಮುಖ್ಯವಾಗುತ್ತದೆ.

ಅಭಿನಯದಷ್ಟೇ ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಶಶಿ ಅಡಪ ಅವರ ರಂಗ ವಿನ್ಯಾಸ. ಪ್ರಾಯೋಗಿಕ ಮತ್ತು ವ್ಯಾವಹಾರಿಕ ರಂಗಭೂಮಿಯ ಅಪಾರ ಅನುಭವ ಹೊಂದಿರುವ ಶಶಿ, ಬಹಳ ಸರಳ ಆದರೆ ಪರಿಣಾಮಕಾರಿ ರಂಗ ಸಜ್ಜಿಕೆಯನ್ನು ವಿನ್ಯಾಸ ಮಾಡಿದ್ದಾರೆ.

ರಂಗದ ಮೇಲೆ ಇರುವ ಮೂರು ಹೆಣ್ಣು ಮಕ್ಕಳು ಅನಾಯಾಸವಾಗಿ ರಂಗಸಜ್ಜಿಕೆಯ ಬದಲಾವಣೆಗಳನ್ನು ಮಾಡುವ ರೀತಿಯಲ್ಲಿ ವಿನ್ಯಾಸ ಮಾಡಿರುವುದು ಎಲ್ಲ ಪ್ರೇಕ್ಷಕರ ಗಮನವನ್ನು ವಿಶೇಷವಾಗಿ ಸೆಳೆಯುತ್ತದೆ. ಸುಶ್ಮ, ಸ್ನೇಹ ಮತ್ತು ಸುನೇತ್ರ… ರಂಗದ ಮೇಲೆ ಕಣ್ಣಿಗೆ ಕಾಣಿಸುವ ಕಲಾವಿದರು ಮೂರು ಜನರಾದರೂ ಅವರು ನಾಟಕದಲ್ಲಿ ಅಭಿನಯಿಸುವ ಪಾತ್ರಗಳು ಕನಿಷ್ಠ ಎಂಟರಿಂದ ಹತ್ತು…ರಂಗದ ಮೇಲೆ ದೃಶ್ಯಗಳಿಗೆ ಪೂರಕ ಉಡುಪುಗಳನ್ನು ಬದಲಾಯಿಸುವುದು, ದೃಶ್ಯಗಳಿಗೆ ಬೇಕಾದ ರಂಗ ವಿನ್ಯಾಸ ಮತ್ತು ಸಜ್ಜಿಕೆಗಳನ್ನು ಬದಲಾಯಿಸುವುದು, ಅವಶ್ಯವಿದ್ದ ಕಡೆ, ಹಿನ್ನಲೆ ಸಂಗೀತ ನೀಡುವುದು….ಎಲ್ಲವೂ ರಂಗದ ಮೇಲಿನಿಂದಲೇ ನಡೆಯುತ್ತದೆ ಮತ್ತು ಅವೆಲ್ಲವುಗಳನ್ನೂ ನಿಭಾಯಿಸುವವರು ಈ ಮೂರು ಕಲಾವಿದರೇ.

ಒಬ್ಬರ ಮೇಲೆ ಮತ್ತೊಬ್ಬರು ಪೈಪೋಟಿಗೆ ಬಿದ್ದ ಹಾಗೆ ನಟಿಸುವ ಈ ಮೂರೂ ಕಲಾವಿದರು ತಮ್ಮ ದೈಹಿಕ ಗಾತ್ರವನ್ನು ಮರೆತು ಹೇಗೆ ಅಷ್ಟು ಅನಾಯಾಸವಾಗಿ ನಟಿಸುತ್ತಾರೋ? ಈ ಗುಟ್ಟು ನಾಟಕ ಮುಗಿದ ಮೇಲೂ ತಿಳಿಯದಾಗಿದೆ. ನಿನ್ನೆ ನಾನು ನೋಡಿದ್ದು 39ನೇ ಪ್ರದರ್ಶನ… ಇದಕ್ಕೆ ನೂರು ಪ್ರದರ್ಶನ ಕಾಣುವ ಶಕ್ತಿ ನಾಟಕದ ವಸ್ತು ಮತ್ತು ಅಭಿನಯದ ಅಂತರಂಗದಲ್ಲಿ ಇದೆ. ಕೆಲವು ಪ್ರದರ್ಶನಗಳನ್ನು ಮನೆಗೆಲಸ ಮಾಡುವ ಹೆಣ್ಣು ಮಕ್ಕಳಿಗೆ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೆ, ಬಿಬಿ‌ಎಮ್‌ಪಿ ರಸ್ತೆ ಗುಡಿಸುವ‌ ಕಾರ್ಮಿಕರಿಗಾಗಿಯೇ ಮಾಡುವುದು ಸೂಕ್ತ ಎಂದು ನನ್ನ ಅನಿಸಿಕೆ.

ಈ ನಿಟ್ಟಿನಲ್ಲಿ ರಂಗ ತಂಡ ಆಲೋಚನೆ ಮಾಡಲಿ….ಇನ್ನಷ್ಟು ಪ್ರದರ್ಶನ ಗಳನ್ನು ಈ ಪ್ರಸ್ತುತಿ ಕಾಣಲಿ ಎಂದು ಹಾರೈಸುತ್ತೇನೆ…


  • ಗುಂಡಣ್ಣ ಚಿಕ್ಕಮಗಳೂರು – ಹಿರಿಯ ರಂಗಕರ್ಮಿ, ಸಂಘಟಕರು, ನಟರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW