ಬಿಸಿಲು ನಾಡಿನ ಸಾಹಿತ್ಯದ ಫಸಲು ; ಗೀತಾ ನಾಗಭೂಷಣ.

ಜಿಲ್ಲೆಯ ಏಕೈಕ ಮೊಟ್ಟ ಮೊದಲ ಮಹಿಳಾ ಗುಮಾಸ್ತೆ ಅಂತಲೂ ಕರೆಸಿಕೊಂಡಿದ್ದ ಗೀತಾ ನಾಗಭೂಷಣ ಅವರು ಮುಂದೆ ಕಲಬುರಗಿಯ ನಗರೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ಅಲ್ಲೇ ಪ್ರಾಚಾರ್ಯರಾಗಿ ಸುದೀರ್ಘವಾದ ಸೇವೆ ಸಲ್ಲಿಸಿದರು.ಗೀತಾ ನಾಗಭೂಷಣ ಅವರ ಸಾಧನೆಯ ಹಾದಿಯ ಕುರಿತು ಶರಣಗೌಡ ಬಿ.ಪಾಟೀಲ ತಿಳಗೂಳ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕನ್ನಡ ಸಾಹಿತ್ಯ ಲೋಕಕ್ಕೆ ಗೀತಾ ನಾಗಭೂಷಣ ಅವರ ಕೊಡುಗೆ ಅಪಾರವಾದದ್ದು. ಸ್ತ್ರೀವಾದಿ ಸಾಹಿತಿಯಾಗಿ ಶೋಷಿತ ಸಮುದಾಯದ ಧನಿಯಾಗಿ ಮಹಿಳಾ ಪರ ಧನಿಯಾಗಿ ತಮ್ಮ ಬರಹದ ಮೂಲಕ ಗಟ್ಟಿ ಹೆಜ್ಜೆ ಇರಿಸಿದ ದಿಟ್ಟ ಸಾಹಿತಿ, ಇವರು ಹುಟ್ಟಿದ್ದು ಬಿಸಿಲು ನಾಡೆಂದೇ ಖ್ಯಾತಿ ಪಡೆದ ಕಲಬುರಗಿ ಜಿಲ್ಲೆಯ ಸಾವಳಗಿ ಗ್ರಾಮದ ತಳ ಸಮುದಾಯದಲ್ಲಿ, ತಂದೆ ಶಾಂತಪ್ಪ ಬಟ್ಟೆ ಗಿರಣಿಯಲ್ಲಿ ಕಾರ್ಮಿಕನಾಗಿದ್ದರೆ, ತಾಯಿ ಶರಣಮ್ಮ ಎಮ್ಮೆ ಕಟ್ಟಿ ಹಾಲು ಮಾರಿ ಜೀವನ ನಡೆಸುವ ಮಹಿಳೆ, ಇಂತಹ ಬಡತನ ಕುಟುಂಬದಲ್ಲಿ ಜನಿಸಿದ ಗೀತಾ ನಾಗಭೂಷಣ ಚಿಕ್ಕವಳಿದ್ದಾಗ ಅಪ್ಪ ಹೇಳುವ ಕಥೆಗಳು ಕೇಳಿ ಇವರಲ್ಲಿ ಸಾಹಿತ್ಯದ ಮೊಳಕೆಯೊಡೆಯಲು ಕಾರಣವಾಯಿತು. ಧೀರ ಮಹಿಳೆಯರ, ವಿಶೇಷ ಸಾಧಕಿಯರ ಜೀವನ ಚರಿತ್ರೆ ಶಾಲೆಯಲ್ಲಿ ಓದಿ ಶಿಕ್ಷಕರಿಂದ ಕೇಳಿ ನಾನೂ ಏನಾದರು ದೊಡ್ಡ ಸಾಧನೆ ಮಾಡಬೇಕು ಅನ್ನುವ ಕನಸು ಕಂಡವರು.

ನೀನೊಂದು ಸರಕಾರಿ ನೌಕರಿ ಮಾಡಿದರೆ ಸಾಕೆಂದು ಅಪ್ಪ ಹೇಳಿದಾಗ ಆತನ ಮಾತಿಗೆ ತಲೆಯಾಡಿಸಿ ಮೆಟ್ರಿಕ್ಯುಲೇಶನ್ ಪರೀಕ್ಷೆ ಪಾಸಾದ ನಂತರ ಮುಂದೆ ಓದದೆ ಜಿಲ್ಲಾ ಕಲೆಕ್ಟರ್ ಕಛೇರಿಯಲ್ಲಿ ಗುಮಾಸ್ತ ಹುದ್ದೆಗೆ ಸೇರಿದರು. ಮಗಳಿಗೆ ಸರಕಾರಿ ನೌಕರಿ ಸಿಕ್ಕಿದ್ದು ಅಪ್ಪನಿಗೆ ಎಲ್ಲಿಲ್ಲದ ಖುಷಿಯಾಯಿತು. ಜಿಲ್ಲೆಯ ಏಕೈಕ ಮೊಟ್ಟ ಮೊದಲ ಮಹಿಳಾ ಗುಮಾಸ್ತೆ ಅಂತಲೂ ಕರೆಸಿಕೊಂಡರು, ಅಂದಿನ ಕಾಲದಲ್ಲಿ ಒಬ್ಬ ಮಹಿಳೆ ಗುಮಾಸ್ತ ಕೆಲಸ ಮಾಡೋದೆಂದರೆ ಅದು ಕೆಲವರಿಗೆ ಸರಿ ಬರುತ್ತಿರಲಿಲ್ಲ ಇವರ ಬಗ್ಗೆ ಕೆಲವರು ಕುಹಕದ ಮಾತುಗಳಾಡುತಿದ್ದರು. ಅದು ಕೂಡ ಇವರ ಮನಸ್ಸಿನ ಮೇಲೆ ಪರಿಣಾಮ ಬೀರಿ ಅವಮಾನಿಸಿದವರ ಮುಂದೆ ಎದ್ದು ನಿಲ್ಲಬೇಕು, ಉನ್ನತ ವ್ಯಾಸಂಗ ಮಾಡಿ ಸಾಧಿಸಿ ತೋರಿಸಬೇಕು ಅಂತ ನಿರ್ಧರಿಸಿದರು. ವಿದ್ಯಾಭ್ಯಾಸದ ಖರ್ಚು ಸರಿದೂಗಿಸಿಕೊಳ್ಳಲು ಗುಮಾಸ್ತ ಹುದ್ದೆಯಲ್ಲಿ ಮುಂದುವರೆಯುವದೂ ಅನಿವಾರ್ಯಗಿತ್ತು. ಉದ್ಯೋಗದ ಜೊತೆ ಜೊತೆಯಲ್ಲೇ ಓದು ಮುಂದುವರೆಸಿ ಎಂ ಎ ಬಿ ಎಡ್ ಪದವಿಯೂ ಪಡೆದುಕೊಂಡರು ನಂತರ ಕಲಬುರಗಿಯ ನಗರೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಉಪನ್ಯಾಸಕಿಯಾಗಿ ಅಲ್ಲೇ ಪ್ರಾಚಾರ್ಯರಾಗಿ ಸುದೀರ್ಘವಾದ ಸೇವೆ ಸಲ್ಲಿಸಿದರು.

ಗೀತಾ ನಾಗಭೂಷಣ ಅವರ ಜೀವನವೇ ಒಂದು ಸಂಕೀರ್ಣತೆಯಿಂದ ಕೂಡಿದ್ದಾಗಿತ್ತು. ನಿತ್ಯದ ಬದುಕಿನಲ್ಲಿ ಅನುಭವಿಸಿದ ಕಹಿ ಅನುಭವಗಳು, ವಯಕ್ತಿಕ ನೋವು, ಅಪಮಾನ ಇವೆಲ್ಲ ಇವರಲ್ಲಿ ಬಂಡಾಯದ ಧನಿ ಗಟ್ಟಿಗೊಳ್ಳುವಂತೆ ಮಾಡಿದವು. ಬರವಣಿಗೆಯ ಮೂಲಕ ಆ ಧನಿ ಸ್ಪೋಟಗೊಂಡು ಹೊರ ಬರಲು ಕಾರಣವಾಯಿತು. ತಮ್ಮ ವೈವಾಹಿಕ ಜೀವನದಲ್ಲಿ ನೆಮ್ಮದಿ ಸಿಗದೆ ಪರಿತಪಿಸಬೇಕಾಯಿತು. ನಾನು ತಪ್ಪು ಹೆಜ್ಜೆ ಇಟ್ಟಿದ್ದೇನೆಂದು ತಿಳಿಯುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು ಬದುಕು ಹಳಿ ತಪ್ಪಿದಂತಾಯಿತು. ಯಾರ ಆಸರೆಯೂ ಇಲ್ಲದಂತಾಗಿ ತ್ರಿಶಂಕು ಸ್ಥಿತಿ ಎದುರಿಸಬೇಕಾಯಿತು. ಆದರೂ ಗಟ್ಟಿ ಧೈರ್ಯ ಮಾಡಿ ಛಲತೊಟ್ಟು ಯಾರ ಮರ್ಜಿ ಮುಲಾಜಿಗೆ ಒಳಗಾಗದೆ ಸ್ವತಂತ್ರವಾಗಿ ಬದುಕಬೇಕೆಂದು ನಿರ್ಧರಿಸಿದರು. ತನ್ನಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಅಡಗಿರುವ ಆ ನೋವು ನಿರಾಸೆ ಸಿಟ್ಟು ಶೋಷಣೆ ಎಲ್ಲವೂ ಬರವಣಿಗೆಯ ಮೂಲಕ ಹೊರ ಹಾಕಲು ಆರಂಭಿಸಿದರು. ಇವರ ಬಂಡಾಯದ ಧನಿ ಮಹಿಳಾ ಶೋಷಣೆಯ ವಿರುದ್ದವಾಗಿತ್ತು. ಶೋಷಿಸಿದವರ ಬಗ್ಗೆ ಕೆಂಡ ಕಾರುತ್ತಾ ನಿರ್ಭಿಡೆಯಿಂದ ಬರೆಯಲು ಆರಂಭಿಸಿದರು.

ಒಮ್ಮೆ ತಾಯಿಯ ತವರು ಮನೆಯಾದ ಚುಂಚೂರು ಜಾತ್ರೆಗೆ ಹೋದಾಗ ಅಲ್ಲಿ ಹರಕೆ ಹೊತ್ತ ಮಹಿಳೆಯರು ಬೆತ್ತಲೆ ಸೇವೆ ಮಾಡುವದು ನೋಡಿ ರೋಷಿ ಹೋದರು ಆ ದೃಶ್ಯ ಇವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿ “ನೀಲಗಂಗಾ ಅನ್ನುವ ಕಾದಂಬರಿ ಬರೆಯಲು ಪ್ರೇರೇಪಿಸಿತು. ಮಹಿಳಾ ಶೋಷಣೆಯನ್ನು ಮನಮುಟ್ಟುವಂತೆ ಕಾದಂಬರಿಯಲ್ಲಿ ಚಿತ್ರಿಸಿದರು. ಅದು ಲಂಕೇಶ ಪತ್ರಿಕೆಯಲ್ಲಿ ದಾರಾವಾಹಿಯಾಗಿ ಪ್ರಕಟಗೊಂಡು ಜನ ಮೆಚ್ಚುಗೆ ಗಳಿಸಿತು. ಕಾದಂಬರಿಯಲ್ಲಿ ಬಳಸಿದ ಭಾಷೆ ಸೌಮ್ಯವಾಗಿರಲಿಲ್ಲ ಬದಲಿಗೆ ಕಲಬುರಗಿ ನೆಲದ ಜುವಾರಿ ಒರಟು ಭಾಷೆಯಾಗಿತ್ತು ನೆಲದ ಸೊಗಡು ಬಿಂಬಿಸುವಂತಿತ್ತು ಆದರೂ ಓದುಗರು ಅದನ್ನು ವಿನಮ್ರ ಮನಸ್ಸಿನಿಂದ ಸ್ವೀಕರಿಸಿ ಮೆಚ್ಚುಗೆ ಸೂಚಿಸಿದರು. ತಮ್ಮ ಕಾದಂಬರಿಯ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಅದಾದ ನಂತರ ‘ಹಸಿಮಾಂಸ ಮತ್ತು ಹದ್ದುಗಳು” ಕಾದಂಬರಿ ಬರೆದರು. ಅದು ಕೂಡ ತರಂಗ ವಾರಪತ್ರಿಕೆಯಲ್ಲಿ ದಾರಾವಾಹಿಯಾಗಿ ಪ್ರಕಟಗೊಂಡು ಚರ್ಚೆಗೂ ಗ್ರಾಸವಾಯಿತು. “ಎಂತಹ ಅಶ್ಲೀಲ ಬರೀತಾಳ್ರಿ” ಅನ್ನುವ ಟೀಕೆ ಟಿಪ್ಪಣಿಗಳೂ ಕೇಳಿ ಬಂದವು. ಆದರೆ ಹೆಚ್ಚಿನ ಸಂಖ್ಯೆಯ ಓದುಗರು ಕಾದಂಬರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲವಾಗಿ ನಿಂತರು. ಅದು ಮುಂದೆ ಹೆಣ್ಣಿನ ಕೂಗು ಅನ್ನುವ ಚಲನಚಿತ್ರವಾಗಿ ತೆರೆಗೆ ಬಂದು ಯಶಸ್ವಿಯೂ ಆಯಿತು.

ನಂತರ ಬರೆದ ಕಾದಂಬರಿಗಳಲ್ಲಿ ವಸ್ತುವಿನ ನಾವಿನ್ಯತೆ ಬಳಸುವ ಭಾಷೆಯಲ್ಲಿ ಹೊಸತನ ಅಳವಡಿಸಿಕೊಂಡು ಬರೆಯಲು ಆರಂಭಿಸಿ ತಮ್ಮ ಬರವಣಿಗೆಗೆ ಭದ್ರ ಬುನಾದಿ ಕಂಡುಕೊಂಡರು. ಧುಮ್ಮಸು, ದಂಗೆ, ಚಿಕ್ಕಿಯ ಹರೆಯದ ದಿನಗಳು, ಬದುಕಲು ಹೋದವರು, ಆಸರೆಗಳು, ಅವ್ವ ಮೊದಲಾದ ಕಾದಂಬರಿಗಳು ಲಂಕೇಶ, ಸುಧಾ, ತರಂಗ ಹೀಗೆ ಅನೇಕ ಕಡೆ ಪ್ರಕಟಗೊಂಡು ಅಪಾರ ಜನಪ್ರೀಯತೆ ತಂದು ಕೊಟ್ಟವು. ಬಿಸಿಲು ನಾಡಿನ ಸಾಹಿತ್ಯದ ಫಸಲು ಎಲ್ಲಡೆ ಪಸರಿಸತೊಡಗಿತು. ಹತ್ತು ಹಲವು ಕಾದಂಬರಿಗಳ ಜೊತೆ ಕಥಾಸಂಕಲ, ನಾಟಕ ಇನ್ನಿತರ ವಿಭಿನ್ನ ಪ್ರಕಾರದ ಕೃತಿಗಳನ್ನು ಪ್ರಕಟಿಸಿದರು. ಇವರ ಅನೇಕ ಕಥೆಗಳು, ನಾಟಕಗಳು ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಪ್ರಸಾರಗೊಂಡು ಕೇಳುಗರ ಮನ ಗೆದ್ದವು. ಕಲಬುರಗಿಯ ಗ್ರಾಮೀಣ ಜುವಾರಿ ಭಾಷೇಯನ್ನು ತಮ್ಮ ಕೃತಿಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡು ಗೀತಾ ನಾಗಭೂಷಣ ಯಶಸ್ಸು ಕಂಡರು.

ವ್ಯವಸ್ಥೆಯ ವಿರುದ್ಧ, ಮೂಢ ನಂಬಿಕೆ, ಕಂದಾಚಾರ ಅನಿಷ್ಟ ಪದ್ದತಿಗಳ ಬಗ್ಗೆ ಬರೆದಾಗ ಜಾತಿವಾದಿಗಳ ಕೆಂಗಣ್ಣಿಗೂ ಗುರಿಯಾಗಬೇಕಾಯಿತು , ಕುಟುಂಬದ ಕೋಪವೂ ಎದುರಿಸಬೇಕಾಯಿತು. ಆದರೂ ಇವರು ಎದೆಗುಂದದೆ ತಮ್ಮ ಕಾರ್ಯ ಮುಂದುವರೆಸಿದರು.

“ಕೂಲಿಕಾರನ ಮಗಳಾದ ನನಗೆ ಗ್ರಾಮೀಣ ಬಡ ಮಹಿಳೆಯರ ಬದುಕು ಬವಣೆ ಗೊತ್ತು ಅವರ ಕಷ್ಟಗಳನ್ನು ಸಾರಿ ಹೇಳಲು ನಾನು ಹಟದಿಂದ ಬರೆದಿದ್ದೇನೆ ಹೊರತು ಚಟದಿಂದ ಬರೆದಿಲ್ಲ” ಅಂತ ಹೇಳುತ್ತಾರೆ.

ಆರಂಭದಲ್ಲಿ ಇವರು ಮನೋರಂಜನಾತ್ಮಕ ಬರಹ ಬರೆದರೂ ತಾವು ಬರೆಯಬೇಕಾದದ್ದು ಬೇರೇಯೇ ಇದೆ ಅಂತ ಎಂಭತ್ತರ ದಶಕದಿಂದ ಈಚೆಗೆ ಬಂಡಾಯದ ಬರಹದ ಕಡೆ ವಾಲಿದರು, ಗುಡಿಸಲಗೇರಿಯ ಹೆಂಗಸರ ಹೋರಾಟ ಸಂಘರ್ಷಗಳ ಬದುಕು, ನೈಜ ಸತ್ಯ ನಿಷ್ಠುರಗಳೊಂದಿಗೆ ಪ್ರಜ್ಞಾವಂತ ಓದುಗರ ಮುಂದಿಟ್ಟಾಗ ಸಾಕಷ್ಟು ಬೆಂಬಲ ಕೂಡ ವ್ಯಕ್ತವಾಯಿತು.

ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರ ಹುಡುಕಿಕೊಂಡು ಬಂದವು. ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಿ ಸರೋಜಾದೇವಿ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ, ಗೋರೂರು ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಅನುಪಮಾ ಪ್ರಶಸ್ತಿ, ನಾಡೋಜ ಗೌರವ ಡಾಕ್ಟರೇಟ ಪದವಿ, ಎಸ್ ಆರ್ ಪಾಟೀಲ ಪ್ರತಿಷ್ಠಾನದ ಪ್ರಶಸ್ತಿ, ಮಹಾಂತ ಜ್ಯೋತಿ ಪ್ರತಿಷ್ಠಾನದ ಕಾಯಕ ರತ್ನ ಪ್ರಶಸ್ತಿ, ಅಲ್ಲದೇ ಇನ್ನೂ ಅನೇಕ ಪ್ರಶಸ್ತಿಗಳೂ ಬಂದವು ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ಅಧ್ಯಕ್ಷೆಯಾಗಿ, ಡಾ ಶಿವರಾಮ ಕಾರಂತ ಪ್ರಶಸ್ತಿ ಆಯ್ಕೆ ಸಮೀತಿಯ ಸದಸ್ಯೆಯಾಗಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯಯಾಗಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸೆನೆಟ ಸದಸ್ಯೆಯಾಗಿ, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮೀತಿಯ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದರು. ಗದಗಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾದರು.

ಇವರು ತಮ್ಮ ಬದುಕಿನುದ್ದಕ್ಕೂ ನಿರಂತರ ಕಹಿ ಉಂಡು ಬೆಳೆದರು ಸಾಹಿತ್ಯದ ಮೂಲಕ ಸಿಹಿ ಉಣಿಸಿದರು ಸುಮಾರು ಎಪ್ಪತ್ತೆಂಟು ವರ್ಷಗಳ ಕಾಲ ಬದುಕಿ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿ, ಸಾಹಿತ್ಯ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಸಿಲು ನಾಡಿನ ಹೆಮ್ಮೆಯ ಸಾಹಿತಿ ಅನಿಸಿಕೊಂಡರು. ಭೌತಿಕವಾಗಿ ಇವರು ನಮ್ಮ ನಿಮ್ಮ ಜೊತೆಗಿಲ್ಲದಿದ್ದರೂ ಸಾಹಿತ್ತಿಕವಾಗಿ ಸದಾ ಜೊತೆಗಿದ್ದಾರೆ, ಬಿಸಿಲು ನಾಡಿನ ಸಾಹಿತ್ಯದ ಫಸಲು ಎಲ್ಲಡೆ ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.


  • ಶರಣಗೌಡ ಬಿ.ಪಾಟೀಲ ತಿಳಗೂಳ – ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW