ಸಂಜೆ ಕತ್ತಲಿನ ಜೊತೆ ಬೆಳಗುತ್ತಿದ್ದ ಮಂದ ಬೆಳಕಿನ “ಇತಿಹಾಸ”!

ಬಾಲ್ಯದಲ್ಲಿ ಬಳಸಿದ್ದ ಲ್ಯಾಂಪುಗಳು, ಲಾಟೀನುಗಳು ಈಗ ಫೋಟೋಕ್ಕೇ ಮಾತ್ರ ಸೀಮಿತವಾಗಿ ಬಿಟ್ಟಿದೆ, ಅವುಗಳ ಹಿಂದೆ ಮಸುಕು ಮಸುಕಾದ ನೆನಪುಗಳು ಹರಡಿಕೊಂಡಿದ್ದು ಅದರ ನೆನಪನ್ನು ಲೇಖಕ ಕೆಎಂ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ದಿನವೆಲ್ಲ ಜಂಜಡಗಳಿಂದ ಕೂಡಿದ್ದರೂ ಸಂಜೆಗೊಂದು ವಿಚಿತ್ರ ಮೌನದ ಲೇಪನ ಇರುತ್ತದೆ. ಎಂಥದ್ದೇ ಆಯಾಸ, ಒತ್ತಡವಿದ್ದರೂ ಸಂಜೆಯ ರಂಗು ರಂಗಿನ ಬಾನು, ತಂಪು ಗಾಳಿ ಮತ್ತೊಂದು ದಿನ ಮುಗಿವ ಧಾವಂತದ ಆಚೆಗೊಂದು ಪುಟ್ಟ ಧ್ಯಾನಸ್ಥ ಮನಸ್ಸಿರುತ್ತದೆ. ಸಂಜೆ ಸೂರ್ಯ ಶರಧಿಗಿಳಿದು, ಬಾನು ಕೆಂಪಾಗಿ ಮನೆಯೊಳಗೆ ಕತ್ತಲು ಕವಿಯುತ್ತಿದ್ದಂತೆ ಹೊತ್ತಿಕೊಳ್ಳುವ ಲ್ಯಾಂಪು (ಲಾಟೀನು ಅಥವಾ ಸೀಮೆಎಣ್ಣೆಯಿಂದ ಉರಿಯುವ ದೀಪ) ಕರೆಂಟನ್ನೇ ಕಾಣದ ದಿನಗಳಲ್ಲಿ ನಮ್ಮೊಳಗೆ ಬೆಳಕು ಹೊತ್ತಿಸಿದ ನೆನಪಗಳು.

ಸೂರ್ಯಾಸ್ತಕ್ಕಿಂತಲೂ ಮೊದಲೇ ಆ ಲ್ಯಾಂಪಿನ ಗಾಜನ್ನು ತೊಳೆದು, ಒರೆಸಿ ಒಣಗಲು ಇರಿಸಿ, ಲ್ಯಾಂಪಿನ ಹೊಟ್ಟೆಗೆ ಸೀಮೆಎಣ್ಣೆ ತುಂಬಿಸಿ, ಬತ್ತಿಯನ್ನು ಎಳೆದು, ಕರಟಿದ ತುದಿ ಕತ್ತರಿಸಿ ಸಿದ್ಧಪಡಿಸಿದಲ್ಲಿಗೆ ಎನಿಟೈಂ ಬೆಳಕು ಕಾಣಿಸಬಹುದೆಂಬ ಧೈರ್ಯ ಹುಟ್ಟಿಕೊಳ್ಳುತ್ತದೆ.

ಮನೆಯ ಜಗಲಿಗೊಂದು, ಚಾವಡಿಗೊಂದು, ಅಡುಗೆ ಕೋಣೆಗೊಂದು ಲ್ಯಾಂಪು ಇದ್ದರೂ ಆಯಿತು. ಅಥವಾ ಅಲ್ಲೆಲ್ಲ ಚಿಮಿಣಿ ದೀಪ ಹೊತ್ತಿಸಿ ಇರಿಸಿ, ಚಾವಡಿಯಲ್ಲಿ ಮಾತ್ರ ಒಂದು ದೊಡ್ಡ ಲಾಟೀನು ಉರಿಸಿದರೆ ಮನೆ ತುಂಬ ಬೆಳಕೇ ಬೆಳಕು. ಆ ಲಾಟೀನು ಅಥವಾ ಲ್ಯಾಂಪಿನಲ್ಲಿ ಎಂತೆಲ್ಲ ಅಜಸ್ಟುಮೆಂಟುಗಳು ಇತ್ತು ನೆನಪುಂಟ?.

ಒಂದು ಸಣ್ಣ ನಾಬ್ (ತಿರುಗಣಿ) ತಿರುಗಿಸಿದರೆ ಬತ್ತಿ ಮೇಲೆ, ಕೆಳಗೆ ಚಲಿಸಿ “ಹೈ ಬೀಂ, ಲೋಬೀಂ” ಆಗಿಸಬಹುದಿತ್ತು, ಲಾಟೀನಿನ ಒಂದು ಪಕ್ಕಕ್ಕೆ ಲಂಬವಾದ ಸುಮಾರು ಅರ್ಧ ಫೀಟು ಎತ್ತರದ ತಗಡಿನ ಹಾಳೆ ಜೋಡಿಸಿದ್ದು (ಶೇಡ್) ಯಾವ ದಿಕ್ಕಿಗೆ ಬೆಳಕು ಬೇಡವೋ, ಆ ದಿಕ್ಕಿಗೆ ಆ ಶೇಡ್ ತಿರುಗಿಸಿಟ್ಟರೆ ಅತ್ತ ಕಡೆ ಕತ್ತಲು ಕವಿಯುವಂತೆ ಮಾಡಬಹುದಿತ್ತು. ತಗಡಿನ ಶೇಡ್ ತುದಿಯಲ್ಲಿ ಒಂದು ತೂತು ಕೊರೆದಿದ್ದು, ಆ ತೂತನ್ನು ಗೋಡೆಗೆ ಬಡಿದ ಮೊಳೆಗೆ ಹೇಗೆ ಸಾ ನೇತಾಡಿಸಬಹುದಿತ್ತು.

ಲಾಟೀನಿಗೊಂದು ನೇತಾಡಿಸಬಹುದಾದ ತಂತಿಯ ಕೈ ಸಹಿತ ಇದ್ದು, ಅದನ್ನು ನೇತಾಡಿಸಿಕೊಂಡು, ತೂಗಾಡಿಸಿಕೊಂಡು ಹೋಗಬಹುದಿತ್ತು. ಪೂರ್ತಿ ಗ್ಲಾಸಿನ ಮೇಲೆ ತಗಡಿನ ಟೋಪಿ ಕವರ್ ಆದ ಲಾಟೀನು ಆದರೆ ಸಣ್ಣ ಪುಟ್ಟ ಮಳೆಗೂ ಲಾಟೀನನ್ನು ನೇತಾಡಿಸಿಕೊಂಡು ಹೋಗಲು ಸಾಧ್ಯವಿತ್ತು…

ಒಂದು ಸಾಧಾರಣ ಕೋಣೆಗೆ, ಒಂದು ಅಂಗಳಕ್ಕೆ, ಒಂದು ಚಾವಡಿಗೆ ಬೆಳಕು ಪಸರಿಸುವ ಶಕ್ತಿ ಆ ಲ್ಯಾಂಪುಗಳಿಗಿತ್ತು.

ಫೋಟೋ ಕೃಪೆ : pinterest

ಮತ್ತೊಂದು ಎಂತ ಗೊತ್ತುಂಟ…? ಈಗಿನ ಹೈಮಾಸ್ಟ್ ಲೈಟು, ಹೆಲೋಜಿನ್ ಲ್ಯಾಂಪ್, ಎಲ್ ಇಡಿ, ಟ್ಯೂಬುಲೈಟು ಮತ್ತಿತರ ಭಯಂಕರ ಕಣ್ಣು ಕುಕ್ಕುವ ಪ್ರಖರ ಬೆಳಕಲ್ಲ ಲಾಟೀನುಗಳದ್ದು… ಎಷ್ಟೋ ಬೇಕೆ ಅಷ್ಟೇ…ಹಳದಿಯ ಛಾಯೆಯಲ್ಲಿ ತನ್ನ ಸುತ್ತಲಿನ ಒಂದಷ್ಟು ಅಡಿಗಳ ದೂರಕ್ಕೆ ತಲುಪಿಸುವಷ್ಟು ಬೆಳಕನ್ನು ಅದು ಕೊಡುತ್ತಿತ್ತು… ಕರೆಂಟು ಹೋಗುವ ಟೆನ್ಶನಿಲ್ಲ, ಗುಡುಗು, ಸಿಡಿಲು ಬಂದರೂ ದೀಪ ಆರುವುದಿಲ್ಲ, ಭಯಂಕರ ಗಾಳಿ ಬಂದರೆ ಸ್ವಲ್ಪ ಆತಂಕ ಆಗ್ತಾ ಇದ್ದದ್ದು ಸುಳ್ಳಲ್ಲ… ಅದು ಬಿಟ್ಟರೆ ಬತ್ತಿ ಉರಿದು ಮುಗಿದರೆ ಮತ್ತು ಸೀಮೆಎಣ್ಣೆ ಖಾಲಿ ಆದರೆ ಮಾತ್ರ ಇಂತಹ ಲ್ಯಾಂಪುಗಳು ಅಸ್ವಸ್ಥವಾಗುತ್ತಿದ್ದವು.

ಮನೆಮಂದಿ ಸುತ್ತ ಕುಳಿತು ಉಣ್ಣುವಾಗ ನಡುವೆ ಒಂದು ಪುಟ್ಟ ಮರದ ಕಾಲಿನಂಥ ಸ್ಟ್ಯಾಂಡಿನ ಮೇಲೆ, ಬಚ್ಚಲು ಮನೆಯ ಗೋಡೆ ಮೂಲೆಯ ಆಣಿಯ ಮೇಲೆ, ರಾತ್ರಿ ಪುಸ್ತಕ ಓದಿಕೊಂಡೇ ನಿದ್ರೆಗೆ ಜಾರುವ ಮೊದಲು ಚಾಪೆಯ ಮೇಲಿನ ನೆಲದಲ್ಲೇ ಈ ಲ್ಯಾಂಪಿಗೆ ಸ್ಥಳಾವಕಾಶ ಮೀಸಲಾಗಿರುತ್ತಿತ್ತು. ಹಗಲೆಲ್ಲ ಶಯನದ ಸ್ಥಿತಿಯಲ್ಲಿ ಗೋಡೆ ಕಪಾಟಿನಲ್ಲೋ, ಮೇಲಿನ ಹಲಗೆಯಲ್ಲೋ, ಮೂಲೆಯಲ್ಲಿ ಈ ದೀಪಗಳು ಅದೃಶ್ಯವಾಗಿ ಇರುತ್ತಿದ್ದವು.

ಮತ್ತೂ ವಿಶೇಷ ದಿನಗಳಲ್ಲಿ ಮನೆಯಲ್ಲೇನಾದರೂ ಫಂಕ್ಷನ್ ನಡೆಯುವುದಾದರೆ ಮಾತ್ರ ಆ ದಿನ ಗ್ಯಾಸ್ ಲೈಟ್ ಹೊತ್ತಿಸುತ್ತಿದ್ದರು. ಅದೂ ಶ್ರೀಮಂತರ ಮನೆಯಲ್ಲಾದರೆ ಗ್ಯಾಸ್ ಲೈಟ್ ಸ್ವಂತ ಇರುತ್ತಿತ್ತು. ಸಾಮಾನ್ಯದವರು ಅವರ ಮನೆಯಿಂದ ಗ್ಯಾಸ್ ಲೈಟ್ ಎರವಲು ತಂದು ಹೊತ್ತಿಸಿ ಅದರ ಭಯಂಕರ ಬೆಣಚ್ಚಿ (ಬೆಳಕು) ಕಂಡು ಹಬ್ಬ ಸಿಕ್ಕ ಹಾಗೆ ಹಿರಿಹಿರಿ ಹಿಗ್ಗುತ್ತಿದ್ದರು…

ಬೆಳಕೇ ಹಾಗೆ… ಕಂಡಾಬಟ್ಟೆ ಬೇಕಾಗುವುದಿಲ್ಲ. ನಮ್ಮ ಕೆಲಸಕ್ಕೆಷ್ಟು ಬೇಕೋ ಅಷ್ಟು ಸಾಕಾಗುತ್ತದೆ.

ಮತ್ತೆ ಸಣ್ಣಪುಟ್ಟ ಬೆಳಕುಗಳಿಗೂ ಕಣ್ಣು ಒಗ್ಗಿಕೊಳ್ಳುತ್ತದೆ. ದೇವರು ನಮಗೆ ಆ ಶಕ್ತಿ ಕೊಟ್ಟಿದ್ದಾನೆ. ಚಿಕ್ಕವರಿದ್ದಾಗ, ಮನೆಯಲ್ಲಿ ಕರೆಂಟನ್ನೇ ಕಾಣದೇ ಇದ್ದಾಗ, ಬದುಕು ಅದೇ ಸ್ಥಿತಿಯನ್ನು ಒಪ್ಪಿಕೊಂಡಿತ್ತು, ಜೀವನ ಅದಕ್ಕೇ ಒಗ್ಗಿಕೊಂಡಿತ್ತು… ಕರೆಂಟು ಹೋಗುತ್ತದೆ, ಲೋವೋಲ್ಟೇಜ್ ಆಗುತ್ತದೆ, ಸಿಡಿಲು ಬಂದಾಗ ಲೈನು ತಪ್ಪಿಸುತ್ತಾರೆ ಮತ್ತಿತರ ಟೆನ್ಶನ್ ಗಳೇ ಇರಲಿಲ್ಲ…! ನಿರೀಕ್ಷೆಗಳೇ ಇರದ ಅಥವಾ ಕಡಿಮೆಯಿದ್ದ ಬದುಕಿನಲ್ಲಿ ವಿಪರೀತ ಟೆನ್ಶನ್ನು, ಒತ್ತಡ ತಕ್ಕೊಂಡು ಎಂತದೂ ಮಾಡ್ಲಿಕಾಗುವುದಿಲ್ಲ. ಬದುಕು ಸಂಕೀರ್ಣವಾಗುವುದೇ ಅನುಕೂಲಗಳು ಹೆಚ್ಚುತ್ತಾ ಬಂದ ಹಾಗೆ. ಅಲ್ವ?

ಪುಟ್ಟದೊಂದು ಲಾಟೀನು, ಕತ್ತಲು ಆವರಿಸುತ್ತಿದ್ದಂತೆ ಅದರ ಸೀಮೆಎಣ್ಣೆಯದ್ದೇ ಒಂದು ಪರಿಮಳ, ಅದರ ಗಾಜು ಹೊರಸೂಸುತ್ತಿದ್ದ ಬಿಸಿ, ಮೇಲಿನ ಟೋಪಿ ಮೇಲೆ ಸಂಗ್ರಹವಾಗುತ್ತಿದ್ದ ಮಸಿ ಮತ್ತು ದೀಪದಾಚೆಗಿನ ಅಂಗಳದಲ್ಲಿನ ಕತ್ತಲು, ತೊಟ್ಟಿಕ್ಕುವ ಮಳೆ ಹಾನಿ, ತೋಟವನ್ನು ದಾಟಿ ಬರುವ ತಂಪು ಗಾಳಿ, ದೂರದ ಸಮುದ್ರದ ಮೊರೆತದ ಸದ್ದು, ರೈಲಿನ ಶಿಳ್ಳೆ… ಮರುದಿನ ಸೂರ್ಯೋದಯ ಪ್ರಖರ ಸೂರ್ಯ ಬೆಳಕಿನೆದುರು ಮಂಕಾಗಿ, ನಾಚಿ ಮೂಲೆ ಸೇರುತ್ತಿದ್ದ ಲ್ಯಾಂಪುಗಳು…

ಇವೆಲ್ಲ ಬಾಲ್ಯದ ನೆನಪುಗಳು… ಮತ್ತೀಗ ಮಾಯವಾಗುತ್ತಿರುವ, ಮಾಯ ಆಗಿರುವ, ಆಗುವುದು ಖಚಿತವಾಗಿರುವ ಲ್ಯಾಂಪುಗಳು, ಲಾಟೀನುಗಳು ಫೋಟೋಕ್ಕೇ ಸೀಮಿತ ಆಗಿ ಬಿಟ್ಟಿದೆ, ಆದರೆ ನೆನಪುಗಳು ಫೋಟೋದಷ್ಟು ನಿರ್ಲಿಪ್ತವಾಗಿರುವುದಿಲ್ಲ. ಅವುಗಳ ಹಿಂದೆ ಮಸುಕು ಮಸುಕಾದ ನೆನಪಗಳು ಹರಡಿಕೊಂಡಿರುತ್ತವೆ… ಕಳೆದರೂ, ಕರಗದ ಬಾಲ್ಯದ ಸರಳ ಬದುಕಿನ ನೆರಳುಗಳ ಹಾಗೆ!


  • ಕೆಎಂ
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW