ಸವ೯ಮಂಗಳ ಜಯರಾಂ ಅವರು “ಮಾಧುರಿಯ ಮಿಡಿತಗಳು”ಎಂಬ ಶೀರ್ಷಿಕೆ ಹೊತ್ತ ಗಜಲ್ ಸಂಕಲನದಿಂದ ಕನ್ನಡ ಗಜಲ್ ಸಾರಸ್ವತ ಲೋಕದಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಿದ್ದಾರೆ.ಗಜಲ್ ಕೃತಿಯ ಕುರಿತು ಗಜಲ್ ಕವಿ ಯು.ಸಿ. ರಾಜ್ ಅಹಮದ್ ಸೊರಬ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮಾಧುರಿಯ ಮಿಡಿತಗಳು
ಕವಿಯತ್ರಿ : ಸವ೯ಮಂಗಳ ಜಯರಾಂ
ಪ್ರಕಾರ :ಗಜ಼ಲ್ ಸಂಕಲನ
ಗಜಲ್ ಒಂದು ಲೋಕಮಾನ್ಯ ಕಾವ್ಯ ಪ್ರಕಾರವಾಗಿದ್ದು ಜಾತಿ, ಮತ, ಕುಲ, ಗೋತ್ರ, ಧಮ೯ ಪಂಗಡಗಳ ತಾರತಮ್ಯವಿಲ್ಲದೆ ಸವ೯ ಜನರ ಮನಸ್ಸನ್ನು ಮುಟ್ಟುವಂತಹ ಕಾವ್ಯ ಹಾಡುಗಬ್ಬವಾಗಿಯೂ ವಾಚನಕ್ಕೆ ಅನುಕೂಲವಾಗಿ ಹಲವು ವಿಷಯಗಳಿಂದ ಗಮನ ಸೆಳೆಯುತ್ತಿದೆ.ಅರೇಬಿಕ್ ನಿಂದ ಫಾಸಿ೯ ಫಾಸಿ೯ಯಿಂದ ಉದು೯ ಉದು೯ವಿನಿಂದ ಹಿಂದಿ ಮರಾಠಿ ಇಂಗ್ಲಿಷ್ ಪಂಜಾಬಿ ತುಳು ತೆಲುಗು ತಮಿಳು ಬಂಗಾಲಿ ಹೀಗೆ ಹಲವು ಭಾಷೆಗಳಿಗೆ ಭಾಷಾಂತರ ಗೊಂಡು ನಮ್ಮೆಲ್ಲರ ಹೆಮ್ಮೆಯ ಭಾಷೆಯಾದ ಸಿರಿಗನ್ನಡದಲ್ಲಿ ನೂರಾರು ಕವಿಗಳು ಬರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಗಜಲ್ ಕಾವ್ಯವು ಕೋಮಲ ಭಾಷೆಯಲ್ಲಿರುವ ಅನಿವ೯ಚನೀಯ ಸಾತ್ವಿಕ ತಿರುಳು. ಜ್ಞಾನದ ಸದಭಿರುಚಿ ನಯನಾಜೂಕುತನ ಭಾವತೀವ್ರತೆ, ಪಾತ್ರಗಳಲ್ಲಿ ಇಳಿದು ಬರೆಯುವಂತಹ ಕಲೆ, ಸುಜ್ಞಾನದ ಆನಂದ ಲೌಕಿಕ ಪರಲೌಕಿಕ ಪ್ರೇಮ ಆಧ್ಯಾತ್ಮಿಕ ಸಾಮಾಜಿಕ, ವೈಚಾರಿಕ ಹೀಗೆ ಅನೇಕಾನೇಕ ಚಿಂತನೆಗಳಿಂದ ಮಧುರ ಭಾವಗಳಿಂದ ಸಾತ್ವಿಕವಾದ ಹಂಬಲವನ್ನು ಮೂಡಿಸುವಂತಹ ವೈಶಿಷ್ಟ್ಯ ಪೂರ್ಣ ಕಾವ್ಯವಾಗಿದೆ.
ಇದರ ಸೆಳೆತಕ್ಕೆ ಸಾವಿರಾರು ಕವಿಗಳು ಆಕಷಿ೯ತರಾಗಿ ಲಕ್ಷೋಪಲಕ್ಷ ಸಂಖ್ಯೆಗಳಲ್ಲಿ ಗಜಲ್ ಗಳು ರಚಿತವಾಗಿವೆ,ಆಗುತ್ತಿವೆ.ಇಂತಹ ವೈಶಿಷ್ಟ್ಯ ಪೂರ್ಣ ಕಾವ್ಯ ಪ್ರಕಾರದಲ್ಲಿ
ಬಹುಭಾಷಾ ಪರಿಣಿತರಾದ ಸಹೋದರಿ ಶ್ರೀಮತಿ ಸವ೯ಮಂಗಳ ಜಯರಾಂ ಅವರು “ಮಾಧುರಿಯ ಮಿಡಿತಗಳು”ಎಂಬ ಶೀರ್ಷಿಕೆ ಹೊತ್ತ ಗಜಲ್ ಸಂಕಲನದಿಂದ ಕನ್ನಡ ಗಜಲ್ ಸಾರಸ್ವತ ಲೋಕದಲ್ಲಿ ತಮ್ಮ ಹೆಸರನ್ನು ದಾಖಲಿಸುತ್ತಿದ್ದಾರೆ. ಕಾವ್ಯ ಪ್ರೌಢಿಮೆಯನ್ನು ಹೊಂದಿದ ಇವರು ಗಜಲ್ ಕೃತಿಯನ್ನು ರಚಿಸಿರುವುದು ಸಂತೋಷದ ವಿಷಯವಾಗಿದೆ.

ಇವರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಅರಳಾಪುರ ಗ್ರಾಮದಲ್ಲಿ ಜನಿಸಿ ಎಂ.ಎ.ಬಿ.ಎಡ್. ಪದವೀಧರರಾಗಿ ಪ್ರಸ್ತುತ ಗೌರಿಬಿದನೂರಿನ ಎಸ್. ಎಸ್. ಇ. ಎ. ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು ಇವರ ಬರವಣಿಗೆಯ ಫಲವಾಗಿ ಹಲವಾರು ಪ್ರಶಸ್ತಿ ಬಹುಮಾನಗಳು
ಒಲಿದು ಬಂದಿರುತ್ತವೆ.ಇವರ ಪ್ರಥಮ ಕವನ ಸಂಕಲನ “ಕಾವ್ಯ ಕುಸುರಿ”( 2020 ) ಎರಡನೇ ಕೃತಿ “ಕಥಾ ಸಿರಿ ಕಥಾಸಂಕಲನ (2021) ಹಾಗೂ ಮೂರನೇ ಕೃತಿ “ಗುಲ್ಮೊಹರ್”
(ಅಂಕಣ ಬರಹಗಳು) 2022 ರಲ್ಲಿ ಬಿಡುಗಡೆಗೊಂಡಿದ್ದು , ಇದೀಗ 2023 ರಲ್ಲಿ ತಮ್ಮ ನಾಲ್ಕನೇ ಕೃತಿಯನ್ನು ಗಜ಼ಲ್ ಸಾಹಿತ್ಯ ಲೋಕಕ್ಕೆ ಅರ್ಪಿಸಲಿದ್ದಾರೆ. ಈ ವಿಷಯವಾಗಿ ಹೇಳುವುದಾದರೆ ಇವರು ಹಲವು ಬಗೆಯ ಸಾಹಿತ್ಯವನ್ನು ಬಲ್ಲವರಾಗಿದ್ದು ಕವಯತ್ರಿ, ಲೇಖಕಿ,ಕತೆಗಾರ್ತಿ ಹಾಗೂ ಗಜ಼ಲ್ಕಾರ್ತಿಯೂ ಆಗಿದ್ದಾರೆಂದೂ ತಿಳಿದುಬರುತ್ತದೆ.
ಈ ಸಂಕಲನದ ಮೊಟ್ಟ ಮೊದಲ ಗಜ಼ಲ್ ಸಖಿಯ ವಣ೯ನೆ ಮತ್ತು ಅನುರಾಗ ಘನತೆ ಗೌರವಾದರಗಳನ್ನು ಎತ್ತಿ ಹಿಡಿದಿದೆ.ಈ ಗಜಲ್ ವಿಶೇಷತೆಯಿಂದ ಕೂಡಿದ್ದು ಸಖಿಯು ಸಖನ ಪಾತ್ರದಲ್ಲಿ ಇಳಿದು ಬರೆದಿರುವುದು ಗಮನ ಸೆಳೆಯುತ್ತದೆ. ಪಾತ್ರಗಳಲ್ಲಿ ಇಳಿದು ಬರೆಯುವುದೂ ಒಂದು ಕಲೆಯಾಗಿದ್ದು ಭಾವಜೀವಿಗಳಲ್ಲಿ ಮಾತ್ರ ಇಂತಹ ಗುಣ ವಿಶೇಷತೆಗಳು ಅಡಕವಾಗಿರುತ್ತವೆ.ಕವಯತ್ರಿ ತಮ್ಮ ಈ ಸಂಕಲನದಲ್ಲಿ ಇಂತಹ ಕೆಲವು ಗಜಲ್ ಗಳನ್ನು ಅಥ೯ಗಭಿ೯ತವಾದ ರೀತಿಯಲ್ಲಿ ಬಿಂಬಿಸಿದ್ದಾರೆ.
ಗಜಲ್ ಎಂದರೆ ಪ್ರೇಮಿಗಳ ಸಂವಾದ ದಂಪತಿಗಳ ಮಾತುಕತೆ ಎರಡು ಹೃದಯಗಳ ಚಡಪಡಿಕೆ ಜಿಂಕೆಯ ಆತ೯ನಾದ ಪ್ರೇಮಿಗಳ ವಿರಹ ವೇದನೆ.ಅನುರಾಗದ ಧ್ಯಾನ ಲೌಕಕ ಪರಲೌಕಿಕ ಪ್ರೇಮವೆಂದು ವ್ಯಾಖ್ಯಾನಗಳನ್ನು ಕೊಟ್ಟಿರುವುದನ್ನು ನಾವು ಗಮನಿಸಬಹುದಾಗಿದೆ.ಇವೆಲ್ಲವುಗಳ ನಡುವೆ ಗಜಲ್ ಎಂದರೆ ಹೆಂಗಸರ ಮಾತು ಮಹಿಳೆಯರ ಸಂವಾದ ಎಂದೂ ಹೇಳಲಾಗಿದೆ.ಹೆಂಗಸರ ಮಾತೆಂದರೆ ಸಖಿ ಸಖನ ಮಾತು ತಾಯಿ ಮಗಳ ಮಾತು ಅಕ್ಕಿ ತಂಗಿಯರ ಮಾತು ಪ್ರಿಯಕರ ಪ್ರಿಯತಮೆಯ ಮಾತು ತಂದೆ ಮಗಳ ಮಾತು ಅಣ್ಣ ತಂಗಿಯ ಮಾತು ಹೀಗೆ ವಿಶಿಷ್ಟತೆಯಿಂದ ಕೂಡಿದ ಭವ್ಯ ಮಣ್ಣಿನ ಸೊಗಡು ಮತ್ತು ದಿವ್ಯ ನೆಲದ ಸಂಸ್ಕಾರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಾತುಗಳಾಗಿರಬಹುದು. ಹಾಗೆಯೇ ಗಜಲ್ ಎಂದರೆ ವಿಶ್ವ ಮಾನವತೆಯ ಸಂದೇಶ ಸಾರುವ ಮಧುರವಾದ ಕಾವ್ಯವಾಗಿರಬಹುದು.

ಇಂತಹ ಅಭೂತಪೂರ್ವ ಗಜಲ್ ಕಾವ್ಯ ಸಂಕಲನವನ್ನು “ಮಾಧುರಿ “ಎಂಬ ತಖಲ್ಲುಸ್ ( ಕಾವ್ಯನಾಮ)ದಿಂದ ಕನ್ನಡ ಗಜ಼ಲ್ ಸಾಹಿತ್ಯ ಲೋಕಕ್ಕೆ ಅರ್ಪಿಸಲು ಸವ೯ಮಂಗಳ ಜಯರಾಂ ರವರು ಸಜ್ಜಾಗಿದ್ದಾರೆ. ಇವರ ಸಂಕಲನದ ಮೊದಲ ಗಜಲ್ ಕಾವ್ಯದ ಮೂರನೇ ಶೇರ್ (ದ್ವಿಪದಿ) ಹೀಗಿದೆ.
ನಿನ್ನ ಸಾನಿಧ್ಯ ದೊರೆತರೆ ಸಾಕೆನಗೆ ಸ್ವಗ೯ವನ್ನೇ ತಿರಸ್ಕರಿಸಿಬಿಡುವೆ /
ನೀ ಹೀಗೇಕೆ ದೂರ ಸರಿದು ಬೆದರಿದ ಜಿಂಕೆಯಂತೆ ಓಡುತ್ತಿರುವೆ ಸಖಿ /
ಇಲ್ಲಿ ಪತಿಯ ನಿಷ್ಕಲ್ಮಶ ಅನುರಾಗ ಕವಯತ್ರಿಯ ಲೇಖನಿಯಿಂದ ಮೂಡಿ ಬಂದಿದೆ. ಪತಿಯ ಪ್ರೇಮವನ್ನು ಪತಿಯ ಪಾತ್ರದಲ್ಲಿಯೇ ಇಳಿದು ಬರೆದಿದ್ದಾರೆ. ನಿನ್ನ ಸಾನಿಧ್ಯ ನಿನ್ನ ದಶ೯ನ ನಿನ್ನ ನಡೆ ನುಡಿ ಪ್ರೀತಿ ಪ್ರೇಮ ದೊರೆತರೆ ನನಗೆ ಮತ್ತೇನು ಬೇಕು ನಲ್ಲೆ ನಿನ್ನ ಈ ಗುಣಗಳ ಮುಂದೆ ನನಗೆ ಎಲ್ಲವೂ ಶೂನ್ಯವಾಗಿದೆ. ನಿನ್ನ ಈ ಪವಿತ್ರ ಅನುರಾಗದ ಮುಂದೆ ಸ್ವಗ೯ವೇ ಇಳಿದು ಬಂದರೂ ನಾನದನ್ನು ತಿರಸ್ಕರಿಸಿಬಿಡುತ್ತೇನೆ.ನೀನು ಹೀಗೇಕೆ ಬೆದರಿದ ಜಿಂಕೆಯಂತೆ ಓಡುತಿರುವೆ ನಿನಗೆ ಕೊಂಚವೂ ಭಯ ಪಡುವ ಅವಶ್ಯಕತೆ ಇಲ್ಲ.ನನ್ನ ಸುಭದ್ರವಾದ ರಕ್ಷಣೆಯ ಕಕ್ಷೆಯಲ್ಲಿ ನಿಶ್ಚಿಂತೆಯಿಂದಿರು ಎಂದು ಹೇಳುವ ಈ ದ್ವಿಪದಿಯು ಮನೋಜ್ಞವಾಗಿದೆ.
ಮೊದಲ ಗಜ಼ಲ್ ನಲ್ಲಿ ಅದೆಂತಹ ಅದ್ಭುತ ಹಾಗೂ ಸುಂದರವಾದ ಭಾವನೆ ಮೇಳೈಸಿದೆ.
ಬೆಳದಿಂಗಳ ರಾತ್ರಿಯಲಿ ಹುಣ್ಣಿಮೆಯ ಚಂದ್ರಮನಂತೆ ಹೊಳೆಯುತ್ತಿರುವೆ ಸಖಿ /
ಮರಳುಗಾಡಿನಲ್ಲಿ ದೊರೆತ ಚಿಲುಮೆಯಂತೆ ಚಿಮ್ಮುತ್ತಿರುವೆ ಸಖಿ /
ಬೆಳದಿಂಗಳ ರಾತ್ರಿಯಲಿ ಆಹ್ಲಾದಕರ ತಂಗಾಳಿಯಲ್ಲಿ ಹಸಿರಾದ ಗಿಡಮರಬಳ್ಳಿಗಳ ನಡುವೆ ವಿಹರಿಸುವಾಗ ಚಂದಿರನ ಅನುಪಮ ಸೌಂದಯ೯ವು ಬೀದಿಯಲ್ಲೆಲ್ಲಾ ಹೊಳೆಯುವಂತೆ ಕಂಗೊಳಿಸುವುದು ಭಾವ ಜೀವಿಗೆ ಅದೆಷ್ಟು ಮಧುರವಾಗಿ ಕಂಡಿರಬಹುದು. ಮತ್ತು ಮರಳುಗಾಡಿನಲ್ಲಿ ವಿಪರೀತವಾದ ಸುಡು ಬಿಸಿಲಿನಲ್ಲಿ ನೆರಳಿನ ಕೊಂಚವೂ ಸುಳಿವಿಲ್ಲದ ಪರಿಸ್ಥಿತಿಯಲ್ಲಿ ಗಿಡ ಮರಗಳು ತಂಪಿಲ್ಲದ ಕಠಿಣ ಸಮಯದಲ್ಲಿ ಹುಲುಸಾಗಿ ಚಿಮ್ಮುತ್ತಿರುವ ತಂಪಾದ ನೀರಿನ ಚಿಲುಮೆಯಂತೆ ನೀ ಬಂದಿರುವೆ ಸಖಿ ನನ್ನ ಬಾಳನ್ನು ಸುಖ ಸಂತೋಷ ಸಮೃದ್ಧಿಯಿಂದ ಬೆಳಗಿಸಲು ಬಂದಿರುವೆ ಸಖಿಯೆಂದು ಬಹಳ ಸುಂದರವಾದ ಸಾಲುಗಳಲ್ಲಿ ಬರೆದಿದ್ದಾರೆ.
ಸವ೯ಮಂಗಳ ಜಯರಾಂ ರವರ ಗಜಲ್ ಗಳಲ್ಲಿ ಹಲವಾರು ವಿಷಯವಸ್ತುಗಳಿವೆ. ಇವರ ಗಜ಼ಲ್ ಗಳು ಕೇವಲ ಒಂದು ವಿಷಯಕ್ಕೆ ಸೀಮಿತವಾಗಿಲ್ಲ. ಜೀವನ ಪ್ರೀತಿ ಮತ್ತು ವಿಶ್ವಮಾನವತೆಯ ತುಡಿತವಿದೆ. ದೇಶಪ್ರೇಮವಿದೆ ಕನ್ನಡ ನಾಡಿನ ಬಗ್ಗೆ ಅಪಾರ ಗೌರವ ಮತ್ತು ಕನ್ನಡ ಭಾಷೆಯ ಬಗ್ಗೆ ಅಪಾರ ಅಭಿಮಾನವಿದೆ.
ಗಜಲ್ 18 ರಲ್ಲಿ ಕನ್ನಡದ ಹಿರಿಮೆ ಗರಿಮೆಗಳನ್ನು ಎತ್ತಿ ಹಿಡಿದಿದ್ದಾರೆ.
ಲಿಪಿಗಳ ರಾಣಿ ನಮ್ಮ ಸವಿಗನ್ನಡ ಚಿನ್ನುಡಿ ನೋಡಿ /
ಕನ್ನಡಿಗರು ನಾವೆಂಬುದೇ ಸೊಗಸಾದ ಜೇನ್ನುಡಿ ನೋಡಿ /
ಭರತ ಮಾತೆಯ ನಲ್ಮೆಯ ಕುವರಿ ಭುವನೇಶ್ವರಿ /
ಕನ್ನಡವೇ ಕರುನಾಡ ಮಕ್ಕಳ ಮುನ್ನುಡಿ ನೋಡಿ /
ಎಂದು ಸೊಗಸಾಗಿ ವರ್ಣಿಸಿದ್ದಾರೆ.
ಅನುರಾಗದ ಮುತ್ತುಗಳನ್ನಾರಿಸಿ ಜೀವನ ಪ್ರೀತಿಯ ಸಾತ್ವಿಕ ಹಾಗೂ ಪವಿತ್ರ ಬಂಧನ ಮೇಳೈಸಿರುವ ಗಜಲ್ 16 ರಲ್ಲಿ ಪತಿಯ ಪಾತ್ರದಲ್ಲಿ ಇಳಿದು ಬರೆದ ದ್ವಿಪದಿಗಳು ಭಾವ ಜೀವಿಗಳ ಅತ್ಯುನ್ನತ ಕಲ್ಪನೆಗಳಿಗೆ ಹಿಡಿದ ಕನ್ನಡಿಯಂತಿವೆ. ಸೂಯ೯ ಚಂದ್ರ ನಕ್ಷತ್ರಗಳನ್ನೇ ಪ್ರೇಯಸಿಯ ಅಂಗನದಲ್ಲಿಳಿಸುವುದು ವಸಂತಗಳನ್ನು ಕರೆಸಿ ತಂಪಾದ ಹವೆಯಿಂದ ಪ್ರೇಮಿಯನ್ನು ಪುಳಕಿತಗೊಳಿಸುವುದು ಆಕಾಶವನ್ನೇ ಮಡಿಚಿ , ಬೃಹತ್ ಬೆಟ್ಟ ಗುಡ್ಡಗಳನ್ನೇ ಪ್ರಿಯತಮನು ತನ್ನ ಆತ್ಮ ಸಖಿ ಮನದನ್ನೆ ಜೀವನ ಸಂಗಾತಿಯ ಮುಡಿಗೇರಿಸುವ ಅತೀ ಮಧುರವಾದ ಭಾವನೆಗಳನ್ನು ಕವಯತ್ರಿ ವ್ಯಕ್ತಪಡಿಸಿದ್ದಾರೆ.
ಆಗಸವನ್ನೇ ಮಡಚಿ ಕೊಟ್ಟರಾಯಿತೆಂದು ಅಂದುಕೊಂಡಿದ್ದೆ ಸಖಿ /
ಕಗ್ಗತ್ತಲ ಕಾಮೊ೯ಡ ನುಂಗಿಬಿಟ್ಟೀತೆಂದು ಭಯಗೊಂಡಿದ್ದೆ ಸಖಿ /
ಮಲೆಗಳ ಸೊಬಗನ್ನೇ ನಿನ್ನ ಮುಡಿಗೇರಿಸುವ ಬಯಕೆಯಾಗಿತ್ತು /
ನಿನ್ನ ನಗುವಿಗೆ ಸಾಟಿಯಾಗಲಾರದೆಂದು ಅಂದುಕೊಂಡಿದ್ದೆ ಸಖಿ /
ಆಹಾ…. ಎಂತಹ ಅದ್ಭುತ ಕಲ್ಪನೆ !!
ಸವ೯ಮಂಗಳ ರವರ ಈ ಸಂಕಲನದಲ್ಲಿ ಇನ್ನೊಂದು ವಿಶೇಷವೇನೆಂದರೆ ಹಲವು ಗಜಲ್ ಗಳು ಜುಲ್ ಕಾಫಿಯದಿಂದ ಕೂಡಿವೆ. ಇದಕ್ಕೆ ಉದಾಹರಣೆಯಾಗಿ ಈ ಮೇಲಿನ ಎರಡು ದ್ವಿಪದಿಗಳನ್ನು ಗಮನಿಸಬಹುದಾಗಿದೆ. ಗಜಲ್ ಬರೆಯುವ ಕಲೆಯಲ್ಲಿ ಕೆಲವು ನುರಿತ ಕವಿಗಳಿಗೆ ಮಾತ್ರ ಒಂದೇ ಶೇರ್ ನಲ್ಲಿ ಎರಡು ಕಾಫಿಯಗಳನ್ನು (ಒಳ ಪ್ರಾಸಗಳನ್ನು) ಪ್ರಯೋಗಿಸುವ ಸಾಮರ್ಥ್ಯವಿರುತ್ತದೆ.ಗಜ಼ಲ್ ಕಾವ್ಯದ ಪ್ರತಿಯೊಂದು ಶೇರ್(ದ್ವಿಪದಿ) ಎರಡು ಕಾಫಿಯಾ (ಒಳಪ್ರಾಸ)ಗಳಿಂದ ಕೂಡಿದ್ದರೆ ಇದನ್ನು ಜು಼ಲ್ ಕಾಫಿಯ ಗಜಲ್ ಎನ್ನುತ್ತಾರೆ.
ಇವರ ಜುಲ್ ಕಾಫಿಯ ಗಜಲ್ ಗಳಿಗೆ ಮತ್ತೊಂದು ಉದಾಹರಣೆ ನೋಡಿ
ಈ ಸಂಜೆಯ ಸೊಬಗು ಹಿತವಾಗಿದೆ ಸೊಗಸಾಗಿದೆ ಸಖ /
ನಿನ್ನೊಂದಿಗೆ ಜೀವನ ಸುಖವಾಗಿದೆ ಶುಭವಾಗಿದೆ ಸಖ /
ಇವರ ಗಜಲ್ ಗಳಲ್ಲಿ ಹುಟ್ಟಿದ ಮಣ್ಣಿನ ಭವ್ಯ ಸಂಸ್ಕೃತಿ ಹೆಣ್ಣಿನ ಘನತೆ ಗೌರವ ನೆಲದ ಸಂಸ್ಕಾರವನ್ನು ಭಿತ್ತರಿಸುವ ಜೊತೆ ಜೊತೆಗೆ ತಾಯಿಯ ಸವ೯ಶ್ರೇಷ್ಠ ಗುಣವನ್ನು ಕೊಂಡಾಡುವ ಮತ್ತು ಮಹಿಮೆ ತಾಳ್ಮೆ ಕರುಣೆಯನ್ನು ಅಥ೯ವತ್ತಾಗಿ ಓದುಗರಿಗೆ ಮನಸೂರೆಗೊಳಿಸುವಂತೆ ಬರೆದಿದ್ದಾರೆ.
ಗಜಲ್( 7 )
ನೆಲದವ್ವಳಷ್ಟೇ ನೋವುಗಳ ಸಹಿಸಿದವಳು ಹೆತ್ತವ್ವ ಇವಳು /
ತನ್ನೊಡಲ ರಕ್ತವನ್ನೇ ಬಸಿದವಳು ಹೆತ್ತವ್ವ ಇವಳು /
ಹೆತ್ತವರು ತಮ್ಮ ಮಕ್ಕಳಿಗಾಗಿ ಎಲ್ಲಾ ತರಹದ ಸಂಕಷ್ಟಗಳನ್ನು ಸಹಿಸಿ ತಮ್ಮ ಸುಖ ಸಂತೋಷಗಳನ್ನೇ ತ್ಯಾಗ ಮಾಡಿ ನಿದ್ರೆ ನೆಮ್ಮದಿಯನ್ನು ಮಕ್ಕಳಿಗಾಗಿ ಅಪಿ೯ಸಿ ಅವರ ಭವಿಷ್ಯದ ನಿಮಾ೯ಣಕ್ಕಾಗಿ ಇಡೀ ಜೀವನವನ್ನೇ ಸವೆಸಿಬಿಡುತ್ತಾರೆ. ತಂದೆ ತಾಯಿಗಳ ಶ್ರಮ ಅವರ ಸ್ಥಾನ ಅವರಿಗೆ ಕೊಡಬೇಕಾದ ಗೌರವ ತಮ್ಮ ಭವಿಷ್ಯಕ್ಕಾಗಿ ಪಟ್ಟ ಕಷ್ಟ ಸಹಿಸಿದ ನೋವುಗಳು ಎಲ್ಲವನ್ನೂ ತಿಳಿದು ಅವರೊಂದಿಗೆ ಎಲ್ಲಾ ತರಹದ ಸೌಜನ್ಯದೊಂದಿಗೆ ವತಿ೯ಸುವ ವಿನಯದಿಂದ ನಡೆದುಕೊಳ್ಳುವ ಹಲವಾರು ಮಕ್ಕಳನ್ನು ನಾವು ಕಾಣುತ್ತೇವೆ.ಇದನ್ನು ಅಲ್ಲಗೆಳೆಯಲಾಗುವುದಿಲ್ಲ.
ಆದರೆ ಇಂತಹ ಮಕ್ಕಳ ನಡುವೆ ಸ್ವಾಥ೯ ಮತ್ತು ಲೋಭ ತುಂಬಿದ ಸಮಾಜದಲ್ಲಿ ಅನೇಕರು ತಮ್ಮ ಮೃಗೀಯ ವತ೯ನೆ ಮತ್ತು ಮಾನವೀಯತೆಯನ್ನು ಮರೆತು ನೈತಿಕತೆಯನ್ನೇ ತಲೆತಗ್ಗಿಸುವಂತೆ ಮಾಡುವ ದುಷ್ಟ ಕೃತ್ಯಗಳನ್ನೆಸಗಿ ಹೆತ್ತವರನ್ನು ಅವರ ಕೊನೆಗಾಲದಲ್ಲಿ ಅಯ್ಯೋ ಎನಿಸುವ ಹಲವಾರು ಕ್ರೂರಿ ಪಾಪಿಷ್ಟ ಮಕ್ಕಳನ್ನು ನಾವು ಕಾಣುತ್ತಿದ್ದೇವೆ.ಜೀವನ ಪಯ೯ಂತ ಮಕ್ಕಳಿಗಾಗಿಯೇ ದುಡಿದು ಸಂಪಾದಿಸಿದ ಅವರನ್ನು ಎಲ್ಲವನ್ನೂ ಕಸಿದುಕೊಂಡು ಮನೆಯಾಚೆ ಕಳಿಸಿ ಬೀದಿ ಭಿಕಾರಿಗಳಾಗಿಸಿ ಪಿಶಾಚಿಗಳಾಗಿ ಮೆರೆಯುವ ಧನಗಾಹಿ ಸ್ವಾಥಿ೯ ಮಕ್ಕಳು ಮತ್ತು ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಕೈತೊಳೆದುಕೊಳ್ಳುವ ಅನುಕೂಲ ಸಿಂಧು ಮಕ್ಕಳ ರಾಕ್ಷಸ ಗುಣವನ್ನು ಕಂಡು ಕವಯತ್ರಿ ಮಮ್ಮಲು ಮರಗಿದ್ದಾರೆ.ಹೆತ್ತವರಿಗೆ ಅಮಾನವೀಯವಾಗಿ ನಡೆಸಿಕೊಳ್ಳುವ ರೀತಿ ಶೋಚನೀಯ ಸ್ಥಿತಿ ದುಸ್ತರ ಬದುಕನ್ನು ಕಂಡು ಸವ೯ಮಂಗಳ ಜಯರಾಂ ಅವರು ವಿಡಂಬನಾತ್ಮಕವಾಗಿ ಬಹಳ ನೋವನ್ನು ವ್ಯಕ್ತಪಡಿಸುತ್ತಲೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ಚುಚ್ಚಿದ್ದಾರೆ.
ಗಜಲ್( 8 )
ಹೆತ್ತು ಹೊತ್ತು ಸಾಕಿ ಸಲುಹಿದ ಅಪ್ಪ ಅಮ್ಮನಿಗೆ ವೃದ್ಧಾಶ್ರವೇ ಗತಿ /
ಆದಶ೯ ಭಾಷಣ ಬಿಗಿಯುವುದರಲ್ಲಿ ತಪ್ಪೇನಿಲ್ಲ ಬಿಡು /
ಇವರ ಹದಿಮೂರನೇ ಗಜಲ್ ಹಲವು ಬಗೆಯ ಶೋಷಣೆಗಳನ್ನು ಅನಾವರಣಗೊಳಿಸುವ ಕನ್ನಡಿಯಂತಿದೆ.”ಕುರುಡು ಕಾಂಚಾಣ” ಎಂಬ ರದೀಫ್ ನಿಂದಾಗಿ (ಪುನರಾವರ್ತಿತ ಪದ) ಈ ಗಜ಼ಲ್ ಬಹಳ ಶಕ್ತಿಶಾಲಿಯಾಗಿ ಹೊರಹೊಮ್ಮಿದೆ . ಇವರ ಈ ಗಜಲ್ ಓದುವಾಗ ವರಕವಿ ಬೇಂದ್ರೆಯವರ “ಕುರುಡು ಕಾಂಚಾಣ ಕುಣಿಯುತ್ತಲಿತ್ತು ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು”ಎಂಬ ಮನೋಜ್ಞ ಸಾಲುಗಳು ಥಟ್ಟನೇ ನೆನಪಾಗುತ್ತವೆ.
ಗಜಲ್ (13 )
ಸೂರಿಲ್ಲದವರ ನೆತ್ತಿಯ ಮೇಲೆ ಕವಡೆ ಹಾಕುತ್ತ ಕುಣಿಯುತ್ತಿದೆ ಕುರುಡು ಕಾಂಚಾಣ /
ಮರಿ ಹಕ್ಕಿಗಳ ಗೂಡಿಗೆ ಕವಣೆ ಬೀಸುತ್ತ ಮೆರೆಯುತ್ತಿದೆ ಕುರುಡು ಕಾಂಚಾಣ /
ಕೈಗೆ ಬಂದ ತುತ್ತು ಬಾಯಿಗೆ ಬಂದೀತೆಂದು ಬರಿಯ ಭ್ರಮೆಯಾಗುತಿದೆ /
ಸಾಲವೇ ಶೂಲವಾಗಿ ಅನ್ನದಾತನ ಕೊಲ್ಲುತ್ತ ಚುಚ್ಚುತ್ತಿದೆ ಕುರುಡು ಕಾಂಚಾಣ /
ಈ ಸಂಕಲನದಲ್ಲಿ ಎಲ್ಲಾ ಐವತ್ತ್ನಾಲ್ಕು ಗಜ಼ಲ್ ಗಳನ್ನು ಗಮನಿಸಿದಾಗ ಆಜಾ಼ದ್ ಗಜ಼ಲ್, ಮುರದ್ದಫ್ ಗಜ಼ಲ್, ಗೈರ್ ಮುರದ್ದಫ್ ಗಜ಼ಲ್, ಜುಲ್ ಕಾಫಿಯಾ ಗಜ಼ಲ್, ಜದೀದ್ ಗಜ಼ಲ್, ನಸರೀ ಗಜ಼ಲ್, ಮುಸಲ್ಸಲ್ ಗಜ಼ಲ್, ಗೈರ್ ಮುಸಲ್ಸಲ್ ಗಜ಼ಲ್, ಇಷ್ಕ್ – ಎ – ಮಜಾಜಿ , ಇಷ್ಕ್ – ಎ – ಹಕೀಕಿ ಗಜ಼ಲ್ ಗಳ ಝಲಕ್ ಗಳನ್ನು ಕಾಣಬಹುದಾಗಿದೆ. ಈ ಸಂಕಲನದಲ್ಲಿ “ಜುಲ್ ಕಾಫಿಯಾ ” ಗಜ಼ಲ್ ಗಳೇ ಹೆಚ್ಚಾಗಿರುವುದು ಇನ್ನೊಂದು ವಿಶೇಷ.
ಹೀಗೆ ಇವರ ಗಜ಼ಲ್ ಸಂಕಲನದಲ್ಲಿ ಹಲವಾರು ಅದ್ವಿತೀಯ ಅಶಾರ್ (ದ್ವಿಪದಿ)ಗಳಿವೆ . ಅವೆಲ್ಲವುಗಳ ಬಗ್ಗೆ ವಿಶ್ಲೇಷಿಸುತ್ತಾ ಹೋದರೆ ಅದುವೇ ಒಂದು ಕೃತಿಯಷ್ಟಾಗಬಹುದು.
ಸಹೋದರಿ ಸವ೯ಮಂಗಳ ಜಯರಾಂ ಅವರ “ಮಾಧುರಿಯ ಮಿಡಿತಗಳು” ಎಂಬ ಈ ಗಜ಼ಲ್ ಸಂಕಲನವು ಯಶಸ್ಸನ್ನು ಪಡೆಯಲಿ ಹಾಗೆಯೇ ಮುಂದಿನ ದಿನಗಳಲ್ಲಿ
ಇವರು ಇನ್ನಷ್ಟು ಗಜಲ್ ಕೃತಿಗಳನ್ನು ಬರೆಯುವಂತಾಗಲಿ ಎಂದು ಹಾರೈಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ
- ಯು.ಸಿ. ರಾಜ್ ಅಹಮದ್ ಸೊರಬ – ಸಾಹಿತಿಗಳು, ಗಜಲ್ ಕವಿ
