ಮಾನಸ….ಇದು ಮನಸಿನ ಮಾತು (ಭಾಗ-೪೬)

ಯುವ ಪೀಳಿಗೆಯವರು ದೇಶದ ಆಗು ಹೋಗುಗಳ ಘಟನೆಗಳನ್ನು ತಿಳಿಯದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹೋರಾಟಗಾರರನ್ನು ನೆನೆಯದೆ, ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಲ್ಲಿ ಮತ ಚಲಾಯಿಸುವ ಜವಾಬ್ದಾರಿಯನ್ನು ಕಡೆಗಣಿಸಿದರೆ ರಾಷ್ಟ್ರ ನಿರ್ಮಾಣ ಮಾಡುವುದು ಅಸಾಧ್ಯ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಮ್ಮ ದೇಶದಲ್ಲಿ ಸರಿಸುಮಾರು ಶೇಕಡ 34% ಯುವ ಪೀಳಿಗೆಯವರಿದ್ದಾರೆ. ಯಾವುದೇ ರಾಷ್ಟ್ರ ತೆಗೆದುಕೊಂಡರೂ ಅಲ್ಲಿನ ಯುವಪೀಳಿಗೆಯವರು ರಾಷ್ಟ್ರಾಭಿಮಾನಿಗಳಾಗಿರಬೇಕು. ತಂದೆ ತಾಯಿಯನ್ನು ಪ್ರೀತಿಸುವಂತೆ ರಾಷ್ಟ್ರದ ಮೇಲಿನ ಪ್ರೇಮವೂ ಹಾಗೆಯೇ ಇರಬೇಕು. ಅವರ ಪಾತ್ರ ಬೇರೆ ಯಾವ ರಾಷ್ಟ್ರಕ್ಕಾದರೂ ಮಾದರಿಯಂತೆ ಇರಬೇಕು. ಒಂದು ಶಿಸ್ತುಬದ್ಧ, ಕ್ರಮಬದ್ಧವಾದ ಜೀವನ ಇದ್ದಲ್ಲಿ ರಾಷ್ಟ್ರದ ಏಳಿಗೆಗಾಗಿ ಯುವಪೀಳಿಗೆಯ ಪಾತ್ರ ಬಹಳ ಮುಖ್ಯವಾಗಿರುತ್ತದೆ.

ಯುವ ಜನತೆಯು ಸ್ವಾವಲಂಬಿಯಾಗಿ ಬದುಕಬೇಕು. ಶ್ರಮವಹಿಸಿ ದುಡಿಯಬೇಕು. ತಾವು ದೇಶದಿಂದ ಏನು ಪಡೆಯುತ್ತೇವೆ ಎನ್ನುವುದರ ಬದಲಾಗಿ ನಾವು ದೇಶಕ್ಕಾಗಿ ಏನು ಕೊಡುಗೆ ನೀಡುತ್ತಿದ್ದೇವೆ ಎಂಬ ಅರಿವಿರಬೇಕು. ಬಡವನಾಗಿ ದೇಶದ ಸೌಕರ್ಯಗಳನ್ನು ಒದಗಿಸಿಕೊಳ್ಳುವ ಬದಲಾಗಿ ನಿರುದ್ಯೋಗದಿಂದ ಹೊರಬಂದು ಸರ್ಕಾರ ಕೆಲಸಗಳಿಗೆ ಕಾಯದೆ ಸ್ವಂತ ಕೆಲಸಗಳಲ್ಲಿಯೂ, ಬೇರೆ ಯಾವುದೇ ಕೆಲಸ ಅಥವಾ ಸರ್ಕಾರದ ಕೆಲಸದಲ್ಲಿಯೇ ಇದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆಯಾಗಬಹುದು. ಯುವ ಪೀಳಿಗೆಯವರು ಸ್ವದೇಶಿ ವಸ್ತುಗಳ ಬಳಕೆ ಮಾಡಿದರೆ ದೇಶದ ಅಭಿವೃದ್ಧಿಗೆ ಮೊದಲ ಹೆಜ್ಜೆಯಾಗುತ್ತದೆ. ಯಾವುದೇ ವಿದೇಶಿ ವಸ್ತುಗಳನ್ನು ಕೊಂಡಾಗ ಹೂಡಿದ ಬಂಡವಾಳ ಪರದೇಶದ ಲಾಭವಾಗುತ್ತದೆ ಹೊರತು ದೇಶದ ಅಭಿವೃದ್ಧಿಗೆ ಮಾರಕವೇ ಸರಿ.

ಪ್ರತಿಯೊಬ್ಬ ಪ್ರಜೆಗೂ ಮತಚಲಾಯಿಸುವ ಹಕ್ಕು ಎಷ್ಟು ಮುಖ್ಯವೋ ಕಾನೂನು ಸುವ್ಯವಸ್ಥೆಯ ಮೇಲೆ ಅಷ್ಟೇ ಪ್ರಶ್ನಿಸುವ ಹಕ್ಕಿರುತ್ತದೆ. ಪಕ್ಷಪಾತವಿಲ್ಲದೆ ಪ್ರಶ್ನೆ ಮಾಡುವ ರೀತಿ ಸ್ವಾಗತಾರ್ಹವಾಗಿರಬೇಕು. ಉದಾಹರಣೆಗೆ ಯಾರೋ ಯಾರಿಗೋ ಕಣ್ಣು ಹೊಡೆದದ್ದು ಪ್ರಪಂಚದಾದ್ಯಂತ ಪ್ರಚಾರವಾದಾಗ ತಪ್ಪುಗಳ ವಿರುದ್ಧ ಪ್ರಶ್ನಿಸಿದಾಗ ಅದೂ ಸಹ ಎಲ್ಲರಿಗೂ ತಲುಪುವಂತೆ ಯುವಕರು ಮುಂದಾಗಬೇಕು. ಯಾವುದೇ ಪಕ್ಷದ ಪರವಾಗಿ ಅಥವ ವಿರೋಧವಾಗಿ ಹೋರಾಡುವ ಬದಲು ಸ್ವಂತವಾಗಿ ಮುಂದೆ ಬಂದು ದೇಶದ ಏಳಿಗೆಗಾಗಿ ಶ್ರಮವಹಿಸಿದರೆ ಸುತ್ತಮುತ್ತಲಿನ ಯುವ ಪೀಳಿಗೆಯವರೂ ಮುಂದೆ ನಿಂತು ದೇಶದ ಪ್ರಗತಿಗಾಗಿ ಹೋರಾಡುತ್ತಾರೆ.

ಫೋಟೋ ಕೃಪೆ : google

ಯುವಕರ ಸ್ವಯಂ ಸೇವೆಯಿಂದಲೂ ರಾಷ್ಟ್ರದ ಅಭಿವೃದ್ದಿಗೆ ಕಾರಣವಾಗುತ್ತದೆ. ಇಲ್ಲಿ ಸ್ವಯಂ ಸೇವೆ ಎಂದರೆ ಆರ್ ಎಸ್ ಎಸ್ ನಲ್ಲಿ ಇರದ ಯುವಕರು ಸ್ವಯಂ ಪ್ರೇರಿತರಾಗಿ ಅಂದರೆ ಬೀದಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು, ತ್ಯಾಜ್ಯ ವಸ್ತುಗಳನ್ನು ಸ್ವಚ್ಛ ಮಾಡುವುದು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು, ಧ್ಯೇಯಗಳನ್ನು ದುರುಯೋಗಪಡಿಸಿಕೊಳ್ಳದಿರುವುದು, ಇಂಥಹ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ದೇಶದ ಏಳಿಗೆಗೆ ಮುಖ್ಯ ಪಾತ್ರ ವಹಿಸುತ್ತದೆ. ಕಂಡ ಕಂಡಲ್ಲಿ ಉಗುಳುವುದು, ಬೇಕಾಬಿಟ್ಟಿ ವಾಹನ ಚಲಾಯಿಸುವುದು, ಸಂಚಾರಿ ನಿಯಮಗಳ ಉಲ್ಲಂಘನೆ, ಸಿಗ್ನಲ್ಗಳಲ್ಲಿ ಗಡಿಬಿಡಿ ಸಣ್ಣ ವಿಷಯಗಳಾದರೂ ದೊಡ್ಡ ಮಟ್ಟದಲ್ಲಿ ಸಮಸ್ಯೆ ಉಂಟುಮಾಡುತ್ತದೆ. ಇಂತಹ ವಿಷಯಗಳ ಮೇಲೆ ಕೇಂದ್ರೀಕರಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ದೇಶದ ಕಾನೂನನ್ನು ಸ್ವಯಂ ತಿಳುವಳಿಕೆಯಿಂದ ಪಾಲಿಸುವುದೂ ಸಹ ಯುವಕರು ರಾಷ್ಟ್ರ ನಿರ್ಮಾಣದಲ್ಲಿ ಬಹು ದೊಡ್ಡ ಪಾಲಿದೆ. ದಂಡ ಕಟ್ಟದೆ ಸಂಚಾರಿ ನಿಯಮಗಳ ಪಾಲನೆಯೂ ಸಹ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಯುವಕರು ಸ್ವಯಂ ತಿಳಿವಳಿಕೆಯಿಂದ ವಹಿಸುವ ಪಾತ್ರ ದೇಶ ಸುವ್ಯವಸ್ಥೆಯಾಗಿರುತ್ತದೆ ಹಾಗು ದೇಶಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ.

ಯುವಕರು ಹಿರಿಯರಿಗೆ ಗೌರವ ಕೊಡುವುದು ಕಲಿಯಬೇಕು. ಹಿರಿಯ ತಲೆಮಾರಿನ ಸ್ವತಂತ್ರ ಹೋರಾಟಗಾರರಿರಬಹುದು, ಕವಿಗಳು, ಸಾಹಿತಿಗಳು, ಯಾವುದೇ ಕಲೆಗಾರರೂ, ಹಿರಿಯರು, ತಂದೆತಾಯಿಗಳಿಗೆ ಗೌರವ ಕೊಡಬೇಕು. ಸಾಹಿತಿಗಳ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಸಾಹಿತ್ಯ ಹಾಗೂ ಕವನಗಳಲ್ಲಿ ಬದುಕಿನ ಮಾರ್ಗ ತೋರಿಸುವಲ್ಲಿ ಸಾಹಿತ್ಯಾಸಕ್ತರು ಪಣ ತೊಡಬೇಕು. ನಮ್ಮ ಸಂಸ್ಕೃತಿ, ಇತಿಹಾಸಗಳ ಬಗ್ಗೆ ಗೌರವ, ತಿಳುವಳಿಕೆ ಹಾಗು ಇದು ನಮ್ಮದು, ನಾವು ಕಾಪಾಡಿಕೊಂಡು ಹೋಗಬೇಕು ಎಂಬ ಭಾವನೆಯಿದ್ದರೆ ರಾಷ್ಟ್ರದ ಅಭಿವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ. ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿಯನ್ನೇ ಮರೆಯುತ್ತಿದ್ದೇವೆ. ಯುವಜನಾಂಗ ದೇಶದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಉಳಿಸಿಕೊಳ್ಳಲು ಪಣ ತೊಡಬೇಕಿದೆ. ರಾಷ್ಟ್ರ ಹಾಗೂ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡುವಲ್ಲಿ ಬಹು ಮುಖ್ಯ ಪಾತ್ರವಹಿಸಬಹುದು.

ಒಂದು ದೇಶದ ಅಭಿವೃದ್ಧಿಯಲ್ಲಿ ಅಲ್ಲಿಯ ಯುವಪೀಳಿಗೆಯವರ ಕೊಡುಗೆ ನಿರ್ಣಾಯಕ, ಅಲ್ಲಿಯ ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇಂದು ಅಭಿವೃದ್ಧಿಶೀಲ ರಾಷ್ಟಗಳಷ್ಟೇ ಅಲ್ಲದೆ, ಮುಂದುವರಿದ ದೇಶಗಳೂ ಕೂಡ ಈ ಯುವಶಕ್ತಿಯನ್ನು ಒಂದು ಸಂಪತ್ತೆಂದು ಪರಿಗಣಿಸಿವೆ. ದೇಶದ ಯುವಶಕ್ತಿಯನ್ನು ಗಮನದಲ್ಲಿರಿಸಿಕೊಂಡು ಎಲ್ಲೆಡೆಯೂ ದೃಷ್ಟಿ ಹಾಯಿಸಿದರೆ ಪ್ರತಿಯೊಂದು ಕ್ಷೇತ್ರದ ಅದ್ಭುತ ಪ್ರಗತಿಯ ಹಿಂದೆಯೂ ಯುವಜನರ ಸಾಧನೆ ಎದ್ದು ಕಾಣುತ್ತದೆ. ಆದರೆ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ರಾಜಕೀಯ ಕ್ಷೇತ್ರದಲ್ಲಿ ಸಮರ್ಥ ಯುವಶಕ್ತಿಯ ಬಳಕೆ ಇನ್ನೂ ಆಗಬೇಕಾದ ಅಗತ್ಯ ತುಂಬ ಇದೆ. ಹಳೆ ಬೇರು ಹೊಸ ಚಿಗುರು ಸೇರಿಕೊಂಡು ಅಭಿವೃದ್ಧಿಯ ಅಭಿಯಾನ ಆರಂಭವಾಗಬೇಕು. ವರ್ತಮಾನದಲ್ಲಿ ನಿಂತು ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ಅಲ್ಲಿಯೂ ಯುವಜನಾಂಗದ ಸಾಧನೆಯೇನೂ ಕಡಿಮೆ ಇಲ್ಲ. ಪ್ರಪಂಚದಲ್ಲಿ ಆಗಿರುವ ಕ್ರಾಂತಿಗಳು, ಸಂಶೋಧನೆಗಳು, ಹೊಸತನದ ಹುಡುಕಾಟಗಳು, ಅನ್ವೇಷಣೆ, ಆವಿಷ್ಕಾರಗಳು ಹೀಗೆ ಎಲ್ಲ ರಂಗಗಳಲ್ಲೂ ಇವರ ಉತ್ಸಾಹ, ಪ್ರಾಮಾಣಿಕತೆ ಹಾಗೂ ಸಾಹಸಗಳೇ ದೇಶಗಳ ನಿಜವಾದ ಬಂಡವಾಳವಾಗಿವೆ. ಯುವಕರೇ ದೇಶದ ಶಕ್ತಿ. ಇವರು ತಮ್ಮ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳನ್ನು ಉಪಯೋಗಿಸಿಕೊಂಡು, ಸೃಜನಶೀಲತೆಯಿಂದ ಮುಂದುವರಿದರೆ ದೇಶದ ಸಂಪತ್ತಾಗುತ್ತಾರೆ. ಇವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ದೇಶದ ಭವಿಷ್ಯ ಅಡಗಿದೆ. ಯುವಜನರಿಂದಲೇ ನಾಡುಕಟ್ಟುವ ಕಾರ್ಯವಾಗಬೇಕು.

ಫೋಟೋ ಕೃಪೆ : google

ಯುವ ಪೀಳಿಗೆಯವರು ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದೆಂದು ತಿಳಿಯುವ ವಿವೇಚನೆ ಇರುತ್ತದೆ . ಯಾವುದು ಸರಿ ಮತ್ತು ತಪ್ಪು ಎಂದು ನಿರ್ಧರಿಸುವಷ್ಟು ಬುದ್ಧಿವಂತರಾಗಿರುತ್ತಾರೆ. ಒಳ ಮನಸ್ಸಿನ ಮಾತನ್ನು ಕೇಳಿ ನಿರ್ಧಾರ ತೆಗೆದುಕೊಂಡು ಹೆಜ್ಜೆ ಇಟ್ಟಲ್ಲಿ ಯುವಜನತೆ ತಪ್ಪು ಹಾದಿಯಲ್ಲಿ ಹೋಗಲು ಸಾಧ್ಯವಿಲ್ಲ. ಯುವ ಪೀಳಿಗೆಯವರು ಜಬಾಬ್ದಾರಿಯಿಂದ ವರ್ತಿಸಬೇಕು. ಯಾವುದೇ ದೇಶದ್ರೋಹ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸದೆ ಉತ್ತಮ ಕೌಟುಂಬಿಕ ಹಿನ್ನೆಲೆಯನ್ನು ತಮ್ಮ ಮುಂದಿನ ಪೀಳಿಗೆಗೆ ನೀಡುವ ಮಾರ್ಗದರ್ಶನ ಬಹಳ ಮುಖ್ಯವಾಗಿರುತ್ತದೆ. ಮುಂದಿನ ಭವಿಷ್ಯ ಜೀವನದ ಬಗ್ಗೆ ಉನ್ನತ ಪರಿಕಲ್ಪನೆ ಹೊಂದಿರಬೇಕಾಗುತ್ತದೆ.

ಪಶ್ಚಾತ್ತಾಪ ಪಡುವಂತೆ ತಮ್ಮ ಗುರಿ ಇರಬಾರದು. ಗುರಿ ಮುಟ್ಟುವಂಥ ಒಂದು ದೊಡ್ಡ ಸಂಕಲ್ಪ ಮಾಡಿಕೊಂಡಿರಬೇಕು. ಯಾವುದೇ ಸೋಲಿಗೆ ಹತಾಶರಾಗದೆ, ಆತ್ಮಹತ್ಯೆಗೆ ಎಡೆಮಾಡಿಕೊಡಬಾರದು. ಸೋಲೇ ಗೆಲುವಿನ ಮೆಟ್ಟಿಲು ಎಂಬಂತಿರಬೇಕು. ಹಾಗೂ ಓದಿನ ಹವ್ಯಾಸ ಬೆಳೆಸಿಕೊಂಡು ಮಹಾನ್ ವ್ಯಕ್ತಿಗಳ ಜೀವನ ಸೇರಿದಂತೆ ಉತ್ತಮ ಮೌಲ್ಯಗಳನ್ನು ತಿಳಿದು ಅಳವಡಿಸಿಕೊಂಡು ಅವರ ಮಾರ್ಗದರ್ಶನದಂತೆ ರಾಷ್ಟ್ರ ನಿರ್ಮಾಣದ ಹೊಣೆ ಹೊರಬೇಗಾಗುತ್ತದೆ. ಗುರಿ ಮುಂದೆ ಗುರು ಹಿಂದೆ ಅನ್ನುವ ಹಾಗೆ ಉತ್ತಮ ಗುರುವಿನ ಮಾರ್ಗದರ್ಶನದಂತೆ ರಾಷ್ಟ್ರಕ್ಕಾಗಿ ಸ್ವಾರ್ಥರಹಿತ ಕೆಲಸಗಳನ್ನು ಮಾಡಿಕೊಂಡು ಉತ್ತಮ ಪ್ರಜೆಯಾಗಬೇಕು.

ಉದ್ಯೋಗವಿಲ್ಲ ಎನ್ನುವ ಬದಲು ಉದ್ಯೋಗವನ್ನು ಸೃಷ್ಟಿಸಬೇಕು. ಇತರರಿಗೆ ನಾವೇ ಉದ್ಯೋಗ ನೀಡುವಂತಾಗಬೇಕು. ಸಾಧ್ಯವಾದರೆ ಸೈನ್ಯಕ್ಕೆ ಸೇರಬೇಕು. ಪೋಲಿಸ್ ಇಲಾಖೆಗೆ ಸೇರಿ ನ್ಯಾಯಯುತವಾಗಿ ಸೇವೆ ಸಲ್ಲಿಸಬೇಕು. ಯುವಕರ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಬೇಕು. ಮುಂದುವರೆದ ವಿದ್ಯುನ್ಮಾನ ಯುಗದಲ್ಲಿ ತಮ್ಮ ಪೂರ್ತಿ ಜೀವನವನ್ನು ದೇಶ ಸೇವೆಗೆ ಮೀಸಲಿರಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಸ್ವಲ್ಪ ಸಮಯವಾದರೂ ಜನಸೇವೆಗಾಗಿ ಮುಡಿಪಾಗಿಡಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಬಡವಬಲ್ಲಿದನೆಂದು ನೋಡದೆ ಸಮರೀತಿಯಲ್ಲಿ ಸೇವೆ ಸಲ್ಲಿಸಬೇಕು. ನ್ಯಾಯಪರದ ಕಡೆ ಇರುವ ವಕೀಲವೃತ್ತಿಯಲ್ಲಿರಬೇಕು. ಶಿಕ್ಷಕರಾಗಿದ್ದರೆ ವಿದ್ಯಾರ್ಥಿಗಳಿಗೆ ಬೇಧ ತೋರದೆ ಎಲ್ಲರನ್ನೂ ಸಮವಾಗಿ ಕಾಣಬೇಕು. ಇದೆಲ್ಲದಕ್ಕೂ ಮೊದಲು ಯುವಕರಲ್ಲಿ ದೇಶಭಕ್ತಿ ಜಾಗೃತವಾಗಬೇಕು.

ಫೋಟೋ ಕೃಪೆ : pandu yadav

ಯುವ ಪೀಳಿಗೆಯವರು ದೇಶದ ಆಗು ಹೋಗುಗಳ ಘಟನೆಗಳನ್ನು ಗಮನಿಸದೆ, ತಮ್ಮ ಕ್ಷೇತ್ರದ ಜನಪ್ರತಿನಿಧಿಗಳು ಯಾರೆಂಬುದು ಗೊತ್ತಿರದೆ, ತಮ್ಮ ಪಾಡಿಗೆ ತಾವಿದ್ದು, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ಮಡಿದ ಹೋರಾಟಗಾರರನ್ನು ನೆನೆಯದೆ, ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿಗಳ ದೂರದೃಷ್ಟಿಯನ್ನು ಅರಿಯದೆ, ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಲ್ಲಿ ಮತಚಲಾಯಿಸುವ ಜವಾಬ್ದಾರಿಯನ್ನೇ ಕಡೆಗಣಿಸಿದರೆ ರಾಷ್ಟ್ರ ನಿರ್ಮಾಣ ಮಾಡುವುದು ಅಸಾಧ್ಯ ಹಾಗಾಗಿ ನಮ್ಮ ದೇಶದ ಆಗು ಹೋಗುಗಳ ಬಗ್ಗೆ ಗಮನ ಹರಿಸಿ ನಾವೂ ಈ ದೇಶದ ಪ್ರಜೆ ಎಂದು ಅರಿತು ನಡೆದರೆ ಸುಂದರ ರಾಷ್ಟ್ರ ನಿರ್ಮಾಣವಾಗುತ್ತದೆ.

ಇಂದಿನ ಕೆಲಸ ಇಂದೇ ಮಾಡಿ ನಾಳೆ ಎಂಬುದ ಸೋಮಾರಿತನವನ್ನು ಬಿಟ್ಟು ತಾನೂ ಎಚ್ಚೆದ್ದು ಯುವಜನರನ್ನೂ ಎಚ್ಚರಿಸಿ ರಾಷ್ಟ್ರ ನಿರ್ಮಾಣದ ಕಡೆಗೆ ಚಿತ್ತ ಹರಿಸಿದರೆ ಸುಂದರ ದೇಶದ ಭವಿಷ್ಯ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲ.

ಇದೆಲ್ಲದಕ್ಕಿಂತ ಮಿಗಿಲಾಗಿ ದೇಶದ ಏಳಿಗೆಗೆ ಶ್ರಮವಹಿಸಿದಾಗ ಮಾತ್ರ ದೇಶ ಮೊದಲ ಸ್ಥಾನಗಳಿಸುತ್ತದೆ. ಪಾಶ್ಚಾತ್ಯ ದೇಶದ ವ್ಯಾಮೋಹ ಹಾಗು ಅಲ್ಲಿನ ನಮ್ಮದಲ್ಲದ ಸಂಸ್ಕ್ರತಿಯನ್ನು ಅನುಸರಿಸದೆ ಇದು ನನ್ನ ದೇಶ, ನನ್ನ ದೇಶಕ್ಕಾಗಿ ನಿಸ್ವಾರ್ಥದ ಕರ್ತವ್ಯ ಹಾಗು ದೇಶಪ್ರೇಮದ ಬಗ್ಗೆ ಪ್ರಜ್ಞೆ ಎಲ್ಲರಲ್ಲೂ ಒಡಮೂಡಿದಾಗ ದೇಶದ ಏಳಿಗೆಯು ವ್ಯಕ್ತಿಗತ ಏಳಿಗೆಯಂತೆ ಅಭಿವೃದ್ಧಿಯಾಗುತ್ತದೆ. ಪರಿಶ್ರಮದ ಮೂಲಕ ಗುರಿ ಸಾಧಿಸಲು ಪ್ರಯತ್ನಿಸಬೇಕು. ಹೊಸ ವಿಚಾರಗಳನ್ನು ಅರಿತುಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಮೂಲಕ ರಾಷ್ಟ್ರನಿರ್ಮಾಣದ ಯಶಸ್ಸಿಗೆ ಕಾರಣವಾಗಬಹುದು.

ತಾಯಿ ಭಾರತಾಂಬೆಯ ಸೇವೆಗೆ ಕಂಕಣ ಬದ್ಧರಾಗಿ ರಾಷ್ಟ್ರಕ್ಕೆ ಗೌರವ ಸಲ್ಲಿಸುವ ಯುವ ಪೀಳಿಗೆಯವರು ಮುಂದಾಗಲಿ ಎಂದು ಆಶಿಸೋಣ.


  • ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW