‘ಮಾಂಡೋವಿ’ ಪುಸ್ತಕ ಪರಿಚಯ – ಪಾರ್ವತಿ ಜಗದೀಶ್

ಮೂಲತಃ ಸ್ಪ್ಯಾನಿಶ್ ಬರಹಗಾರ ನೊಬೆಲ್ ಪ್ರಶಸ್ತಿ ವಿಜೇತ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ ‘ಲವ್ ಇನ್ ದ ಟೈಮ್ ಆಫ್ ಕಾಲರಾ’ ಕೃತಿಯ ಅನುವಾದಿತ ಕೃತಿ  ‘ಮಾಂಡೋವಿ’. ಈ ಕೃತಿಯ ಕುರಿತು ಪಾರ್ವತಿ ಜಗದೀಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಮಾಂಡೋವಿ.
ಲೇಖಕರು : ರವಿ ಬೆಳೆಗೆರೆ
ಪ್ರಕಾಶಕರು : ಲೋಹಿಯಾ ಪ್ರಕಾಶನ ಬಳ್ಳಾರಿ.
ಬೆಲೆ : 60 ರೂಪಾಯಿ
ಪುಟಗಳು : 218

ಮನುಷ್ಯನನ್ನು ದುಃಖ, ಅಸಹನೆ, ನಿರಾಸೆ, ವಿಕಾರ, ಆತ್ಮನಿಂದೆ, ಲೌಕಿಕ ಸಂಕಟ ಇವೆಲ್ಲವೂಗಳಿಂದಲೂ ಬಿಡುಗಡೆ ಮಾಡಬಲ್ಲಂತಹ ಅದ್ಭುತ ಚೈತನ್ಯವೇ ಪ್ರೇಮ! ಅಂತಹ ಅದ್ಬುತ ಪ್ರೇಮಿ ಸೋಮಯಾಜುಲು ಚಲಪತಿಯ ಅಪರಿಮಿತ ಪ್ರೇಮದ ಕಥೆಯೇ ಮಾಂಡೋವಿ ಒಂದು ಪ್ರೇಮ ಪುಸ್ತಕ. ಪುಸ್ತಕದ ಆರಂಭಕ್ಕೆ ಹೀಗೆ ಬರೆಯುತ್ತಾರೆ ರವೀ, ಪುಸ್ತಕದ ಮೇಲೆ ಕೈ ಇರಿಸಿದೆಯಾ ಜೀವವೇ ನಿನ್ನ ಕೈಗೆ ಪ್ರೇಮದ ಹುಡಿ ಆಂಟಿಕೊಳ್ಳಲಿ! ನಿಜ ಪುಸ್ತಕದ ಓದಿನ ನಂತರ ಪ್ರತಿಯೊಬ್ಬರಿಗೂ ಒಂತರ ನಿರಾಳದ ಪ್ರೇಮದ ಹುಡಿ ಆವರಿಸಿಕೊಳ್ಳುತ್ತದೆ.

 

ಮಲೆನಾಡಿನ ಹಿತ್ನಳ್ಳಿಯ ಲಿಂಗಾಯತ ಪಂಚಪ್ಪನ ಮಗಳು ಭಾರ್ಗವಿ ವ್ಯಾಪಾರಕ್ಕೆ0ದು ಬಂದ ಬಯಲುಸೀಮೆಯ ಶುದ್ಧ ಒರಟನೊಂದಿಗೆ ಪ್ರೇಮ ಅಂಕುರಿಸಿ ತಂದೆಯ ನಿರ್ಬಂಧದ ನಡುವೆಯೂ ಹಾಡು ಹಗಲೇ ತಂದೆ ಮನೆಯ ಋಣ ಹರಿದುಕೊಂಡು ಶಿವರಾಜನೆಂಬ ಹುಂಬನ ಜೊತೆಗೆ ಗೋವಾದಲ್ಲಿ ಇರುವಾಗ, ಮುಂದೆ ತನ್ನ ಗಂಡನ ಚಾ0ಡಾಲತನಕ್ಕೆ ರೋಸಿ, ಪಣಜಿಯ ಮಾಂಡೋವಿ ನದಿಯಲ್ಲೇ ತನ್ನ ಕಣ್ಣೀರು ಹರಿ ಬಿಟ್ಟ ಭಾರ್ಗವಿ ತನ್ನ ಒಡಲ ಕಂದನಿಗೆ ಆ ನದಿಯ ವೇಗವಾದರೂ ಬರಲಿ ಎಂಬ ಆಶಯದಿಂದ ಮಗಳಿಗೆ ಮಾಂಡೋವಿ ಅನ್ನುವ ಹೆಸರಿಟ್ಟಿದ್ದಳು. ಅವಳೇ ಕಥಾನಾಯಕಿ ಮಾಂಡೋವಿ. ಅವಳ ಸುತ್ತಲೇ ಹೆಣೆದ ಕಥೆ ಇದು.

ಪ್ರೀತಿಗೆ ಇಂತಿಷ್ಟೇ ವಯಸ್ಸು ಅನ್ನುವ ಮಿತಿ, ಪರಿಮಿತಿ, ಪ್ರಮಾಣಗಳಿಲ್ಲದ ಪ್ರೀತಿ ಅಮೂರ್ತ, ಅವ್ಯಕ್ತ, ನಿರಂತರ, ನಿರಾಧಾರ ಅದೊಂದು ಭಗವಂತನ ಭಾಷೆ. ಮಾಂಡೋವಿ ಗೋವಾದ ಮಹಾದಾಯಿ ನದಿಯಷ್ಟೇ ಸೆಳೆತ, ತುಡಿತ, ಹರಿವುಗಳನ್ನು ಒಳಗೊಂಡ ಕೃತಿ. ಕೃತಿಯಲ್ಲಿ ಬರುವ ಕಥಾನಾಯಕಿ ಕೂಡ ನದಿಯಂತೆ ಸೆಳೆವು, ಸೆಳಕು ಹೊಂದಿರುವ ತಂದೆಯ ಕ್ರೌರ್ಯದಿಂದ ನಲುಗಿ ಜೀವ ಕಳೆದುಕೊಂಡ ತಾಯಿಯ ನಂತರ ಸೋದರತ್ತೆ ಮುಕ್ತಾಯಿಯೊಡನೆ ಬೆಳೆದ ಮಾಂಡೋವಿಗೆ ವಯೋ ಸಹಜ ಗುಣದಂತೆ ಸೋಮಯಾಜುಲು ವೆಂಕಟಚಲಪತಿ ಅನ್ನುವವನೊಂದಿಗೆ 16 ವರ್ಷದಲ್ಲೇ ಪ್ರೀತಿ ಹುಟ್ಟುತ್ತದೆ. ಅದು ತನ್ನ ಸೋದರತ್ತೆಯ ಸೇತುವೆಯೊಂದಿಗೆ. ಶುರುವಾಗದೆ ಕೊನೆಗೊಂಡ ಪ್ರೇಮಕ್ಕೆ ಬೆಂಗಾವಲಾದ ಮುಕ್ತಾಯಿ ಕೂಡಮುಂದೊಂದು ದಿನ ಅದೇ ಕಾರಣಕ್ಕೆ ಅಣ್ಣನ ಮನೆಯಿಂದ ಹೊರಬೀಳಬೇಕಾಗುತ್ತದೆ.

ಅಷ್ಟೊಂದು ಅದಮ್ಯವಾಗಿ ಪ್ರೀತಿಸಿದ ಮಾಂಡೋವಿ ಚಲಂ ನಲ್ಲಿರುವ ವಿಶೇಷತೆಯನ್ನು ಅರಿಯದೇ ಕೇವಲ ಅವನು ಬೇರೆಯವರ ನೆರಳು ಅವನಿಗೆ ಸ್ವತಂತ್ರ ವ್ಯಕ್ತಿತ್ವವೇ ಇಲ್ಲವೆಂದು ತಿಳಿದು ತಿರಸ್ಕಾರ ಮಾಡುತ್ತಾಳೆ. ಎದೆ ಸುಟ್ಟುಕೊಂಡು ಪ್ರೀತಿಸಿದ ಚಲಂ ಅವಳ ಆ ನಡೆಯಿಂದ ಅನಾಥನಾಗಿ,ಅಸಹಾಯಕನಾಗಿ, ವಿಷಣ್ಣನಾಗಿ,ಕೊನೆಯವರೆಗೂ ಕಾದಂಬರಿಯಲ್ಲಿ ಕಾಡುವ ಪಾತ್ರವಾಗುತ್ತಾನೆ. ತಾನು ಜೀವದಷ್ಟೇ ಪ್ರೀತಿಸಿ ಅವಳೇ ಜೀವ, ಜೀವನ ಎಂದು ಆರಾಧಿಸಿದ ಚಲಂನ ಮಾಂಡೋವಿ ತನ್ನ ಸಾಮಾಜಿಕ, ಆರ್ಥಿಕ ಭದ್ರತೆಗಾಗಿ ಊರಿನ ಲಿಂಗಾಯತ ಶಿವಭಕ್ತ ಡಾ. ಚನ್ನಬಸವನಗೌಡನನ್ನ ಮದುವೆ ಆಗುತ್ತಾಳೆ. ಆದರೇ, ಅವರಿಬ್ಬರಲ್ಲಿ ಪ್ರೀತಿ ಇತ್ತಾ? ಪ್ರೀತಿಸದೆ ಜೊತೆಗಿರಲು ಸಾಧ್ಯವೇ ಇಲ್ಲ. ಜಗತ್ತಿನಲ್ಲಿ ಪ್ರೀತಿಸುವುದಕ್ಕಿಂತ ಕಷ್ಟದ್ದು ಮತ್ತೊಂದಿಲ್ಲ ಅನ್ನುವ ಅರಿವಿನೊಂದಿಗೆ ಡಾ. ಗೌಡನೊಂದಿಗೆ ಜೀವಿಸುತ್ತಿರುತ್ತಾಳೆ.

ಮತ್ತೊಂದು ಕಡೆಗೆ ಅವಳಿಂದ ಬೇರ್ಪಟ್ಟ ಚಲಂ ಅವಳ ಮದುವೆ ಆದ ಗೌಡನ ಸಾವನ್ನು ಬಯಸಿ ಅವಳನ್ನೂ ಶಪಿಸಿ, ಅವಳ ನೆನಪಿನಲ್ಲೇ ಬದುಕಿ ಛಲದಿಂದ ತನ್ನ ಬದುಕಿನ ಉನ್ನತ ಸ್ಥಾನಕ್ಕೇರಿ, ಅವಳ ಒಳಿತು ಬಯಸಿ ಇಂದಲ್ಲವಾದರೂ, ಎಂದಾದರೂ ಅವಳು ಬಂದೇ ಬರುತ್ತಾಳೆ ಒಂದು ಕಾಯುವ ಅದಮ್ಯ ಪ್ರೇಮಿ ಅದಕ್ಕಾಗಿ ಅವನು ಕಾಯ್ದ ದಿನಗಳು ಸರಿಸುಮಾರು ಅರ್ಧ ಶತಮಾನದಷ್ಟು.

ಅದೊಂದು ದಿನ ಸೋಮವಾರ ಶಿವನ ಪರಮಭಕ್ತ ಡಾ. ಗೌಡ ಮರದ ಮೇಲಿನಿಂದ ಬಿದ್ದು ಸಾವನ್ನಪ್ಪುತ್ತಾನೆ. ಅದರ ನಂತರದ ದಿನಗಳಲ್ಲಿ ಚಲಂ ನಿರಂತರ ಪ್ರಯತ್ನ 50 ವರ್ಷಗಳ ಕಾಲ ಪ್ರೀತಿ, ಪ್ರೇಮ, ಸಂಸಾರ ಎಲ್ಲವನ್ನೂ ಅನುಭವಿಸಿ ಬದುಕಿನಂಚಿಗೆ ಬಂದು ನಿಂತ ವಿಧವೆ ವೃದ್ದೆಯೊಬ್ಬಳಿಗೆ ಪುನಃ ಪ್ರೇಮದ ಬಗ್ಗೆ ಆಸಕ್ತಿ ಮೂಡಿಸುವ, ಪ್ರೇಮವೆಂದರೆ ಯಾವ ಕಾಲಕ್ಕೂ ಅವಮಾನಕರವಲ್ಲ ಎಂಬ ಭಾವನೆ ಮೂಡಿಸುವಲ್ಲಿ ಚಲಂ ಜಯ ಸಾಧಿಸುತ್ತಾನಾ? ಅವನ ಅರ್ಧ ಶತಮಾನದ ಕಾಯುವಿಕೆ ಫಲ ಕೊಡುತ್ತಾ? ಮಾಂಡೋವಿ ಅವನಿಗೆ ದಕ್ಕುತ್ತಾಳಾ? ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಕಾದಂಬರಿ ಮಾಂಡೋವಿ.

ಕೃತಿಯಲ್ಲಿ ಬರುವ ಹಲವಾರು ಪಾತ್ರಗಳು ಸೋಮಯಾಜುಲು ಸೀತಮ್ಮ, ಸಣ್ಣ ಸತ್ತೆಪ್ಪ, ನೇಮಿರಾಲು ಸುಬ್ಬರಾವು,ಜೇಕಾಬ್ ಚಂದ್ರಪ್ಪ, ಮಂಗಳಗೌರಿ, ಮುಕ್ತಾಯಿ, ಶಿವರಾಜಪ್ಪ, ಶೇಷಿ, ಕಲ್ಯಾಣಿ, ಕಾಂಚನಮಾಲಾ ಜುಲೇಖ ಹೀಗೆ ಇನ್ನೂ ಹಲವಾರು ಪಾತ್ರಗಳು ಎಲ್ಲವೂ ಅದರದ್ದೇ ಆದ ಪ್ರಾಮುಖ್ಯತೆ ಪಡೆದು ಎಲ್ಲಾ ಪಾತ್ರಗಳೂ ಒಂದು ವಿಲಕ್ಷಣ ಕುತೂಹಲಗಳೊಂದಿಗೆ ಓದಿಸಿಕೊಂಡು ಹೋಗುತ್ತವೆ. ಇಂತಹ ಅದ್ಬುತ ಕೃತಿಯ ಬಗೆಗೆ ಇದುವರೆಗೂ ಒಂದು ಸಣ್ಣ ವಿಮರ್ಶೆಯೂ ಯಾವ ಪತ್ರಿಕೆಯಲ್ಲೂ ಬಂದಿಲ್ಲವೆಂದೆ ಸ್ವತಃ ರವಿ ಬೆಳೆಗೆರೆ ಅವರೇ ಹೇಳಿದ್ದು ಆಶ್ಚರ್ಯ ಅನಿಸುತ್ತೆ. ಕಾರಣ ಏನಿರಬಹುದು ಅಂತ.


  • ಪಾರ್ವತಿ ಜಗದೀಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW