ಕವಿಯತ್ರಿ ಮಂಜುಳಾ ಭಾರ್ಗವಿ ಅವರ ‘ಮೊದಲ ಮಳೆ’ ಕವನಸಂಕಲನದ ಕುರಿತು ಯುವ ಕವಿ ಚೇತನ್ ಗವಿಗೌಡ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಮೊದಲ ಮಳೆ
ಲೇಖಕರು : ಮಂಜುಳಾ ಭಾರ್ಗವಿ
ಪ್ರಕಾರ : ಹನಿಗವನ
ಕಾದ ಇಳೆ ಮೊದಲ ಮಳೆಗಾಗಿ ಅದೆಷ್ಟು ಕಾಯುತ್ತದೆ ಅಲ್ಲವೇ.. ವರ್ಷದ ಮೊದಲಮಳೆ ತರುವ ಸಂಭ್ರಮವೇ ಅಂಥದ್ದು. ಸಕಲ ಜೀವರಾಶಿಗೂ ಮೊದಲ ಮಳೆಯೆಂದರೆ ಇನ್ನಿಲ್ಲದ ಪುಳಕ. ಮಳೆಯ ಹನಿಗಳೇ ಆಗಲ್ಲವೇ..? ತನು ಮನ ರೋಮಾಂಚನ.
ಬಾಲ್ಯದಲ್ಲಿ ಮಳೆ ಎಂದರೆ ಎಲ್ಲಿಲ್ಲದ ಖುಷಿ..!
ಎಂತಹ ಮಳೆ ಬಂದರೂ ಪುಸ್ತಕಗಳು ನೆನೆಯದಂತೆ ಜಾಗರೂಕತೆಯಿಂದ ತೆಗೆದುಕೊಂಡು ಹೋಗುತ್ತಿದ್ದೆವು. ಜೊತೆಗೆ ಗೋಣಿ ಚೀಲದ ರೀತಿಯ ಪ್ಲಾಸ್ಟಿಕ್ ಚೀಲವೊಂದನ್ನು ಜೊತೆಯಲ್ಲಿ ಒಯ್ಯುವುದು ಮಳೆಗಾಲದಲ್ಲಿ ಸಾಮಾನ್ಯವಾಗಿತ್ತು. ಶಾಲೆಯಿಂದ ಬರುವ ಸಮಯದಲ್ಲಿ ಮಳೆ ಬಂದರೆ ನಮಗೆ ತುಂಬಾ ಕುಶಿ.
“ಬಾರೋ ಬಾರೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯ”
ಹೀಗೆ ಹಲವಾರು ಮಳೆಯ ಹಾಡುಗಳನ್ನು ಸಲೀಸಾಗಿ ಎಲ್ಲರೂ ಹಾಡುತ್ತಾ ಸಂಭ್ರಮಿಸುತ್ತಿದ್ದೆವು. ಮಳೆ ನೀರು ಹರಿಯುವ ದಾರಿಯಲ್ಲಿ ಮೊದಲೇ ತಯಾರಿಸಿಕೊಂಡು ಬಂದಿದ್ದ ಕಾಗದದ ದೋಣಿಗಳನ್ನು ಬಿಡುವುದು. ಅಲ್ಲಿ ನಿಲ್ಲುತ್ತಿದ್ದ ನೀರಿನ ಗುಂಡಿಗಳಲ್ಲಿ ಜಿಗಿಯವುದೆಂದರೆ ಕುಶಿಯೋ ಕುಶಿ. ಸ್ನೇಹಿತರೆಲ್ಲ ಸೇರಿ ದೊಡ್ಡ ಗುಂಡಿಗಳಿದ್ದರೆ 4-5 ಕಲ್ಲುಗಳನ್ನು ಎಸೆದು ಬರುವವರೆಗೂ ಸಮಾದಾನವಾಗದು.
ಮಂಜುಳಾ ಭಾರ್ಗವಿ ಅಮ್ಮನ ಮೊದಲ ಕವನಸಂಕಲನವೇ
” ಮೊದಲ ಮಳೆ “
ಕವಿತೆಯ ತುಂಬಾ ಕಾಡುವ ಮಳೆಹನಿಗಳನ್ನ ಕಾಣಬಹುದು. ಮೊದಲ ಮಳೆಯ ಘಮ ಸವಿಯಬಹುದು. ಮಳೆಹನಿಯಂತೆ ಶುಭ್ರವಾದ, ರಸವತ್ತಾದ ಸಾಲುಗಳಿವೆ, ಭಾವಗಳಿವೆ.
ವೃತ್ತಿಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಇವರು ಸುಮಾರು ಹತ್ತು ವರ್ಷಗಳಿಂದ ಮಕ್ಕಳಿಗೆ ಪಾಠದ ಜೊತೆಗೆ ಕನ್ನಡ ಭಾಷೆ, ಸಾಹಿತ್ಯದ ಸೊಗಡನ್ನು ಸಹ ತಿಳಿ ಹೇಳುತ್ತಿದ್ದಾರೆ.
ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ.
ಮೊದಲ ಮಳೆಯ ಕಾಡುವ ಹನಿಗಳನ್ನ ಓದುತ್ತಾ ಹೋದಂತೆ ಹೊಸ ನವಿರಾದ ಭಾವನೆ ವ್ಯಕ್ತವಾಗುತ್ತದೆ. ಹೊಸತನದ ಹುಡುಕಾಟ ಕಾಣುತ್ತದೆ. ಪ್ರೀತಿ ಪ್ರೇಮ, ವಿರಹ, ಪ್ರಕೃತಿ ತಲ್ಲಣ, ನಿಸರ್ಗ, ಸಾಮಾಜಿಕ ಜವಾಬ್ದಾರಿ, ಹೆಣ್ತನದ ಕಾಳಜಿ, ಅಂತರಂಗದ ಭಾವನೆ ವೇದನೆಗಳನ್ನ ಕವಿತೆಗಳಲ್ಲಿ ಕಾಣಬಹುದು.
ಬಾರದಿರಿ ಕನಸುಗಳೇ
ಬಂದು ಹಿಂಸಿಸದಿರಿ,
ಕೆಣಕದಿರಿ
ಸಾವು ಕಾಣದ ಅದೆಷ್ಟೋ ಕನಸುಗಳು
ಉಸಿರಾಡುತಿವೆ ಅದೇ ಹೃದಯದ ಗೋರಿಯಲ್ಲಿ
ಎನ್ನುವ ಸಾಲುಗಳಲ್ಲಿ ವಿರಹವನ್ನ ಕಾಣಬಹುದು. ಭಾವ ಹಳೆಯದಾದರೂ ಭಾಷೆಯಲಿ ಹೊಸತನವಿದೆ..
ರಾಧೆಯಳಲು ಕವಿತೆಯ
” ನಿನ್ನನ್ನು ಸುತ್ತುವರಿದ ಗೋಪಿಕೆಯರು
ಎಷ್ಟಾದರೂ ಇರಲಿ ಬಿಡು
ನಾನಂತು ಅವರ
ಕಿರು ಬೆರಳ ನೆರಳನೂ ಕೂಡ ಸೋಕಲಾರೆ
ರಾಧೆಯಂತ ಪ್ರೇಮ ಈ ಜನುಮದುದ್ದಾಕೂ
ಜಾರಿಯಲ್ಲಿದ್ದು ಬಿಡಲಿ”
ಈ ಸಾಲುಗಳಲ್ಲಿ ರಾಧೇಯ ನಿಸ್ಕಲ್ಮಷ ಪ್ರೀತಿ ಕಾಣುತ್ತದೆ. ಕೃಷ್ಣನ ತುಟಿ ತಾಕಿದ ಬಿದಿರು ಕೂಡ ಕೊಳಲಾದಂತೆ ನಿಸ್ವಾರ್ಥವಿದ್ದಲ್ಲಿ ಪ್ರೀತಿಯು ಕೂಡ ಅಮರವಾಗುತ್ತದೆ ಎನ್ನುವುದು ಅರಿವಾಗುತ್ತದೆ.
“ನಾದಬೇಕು, ರಾಗ ತಾಳ ಬೇಕು
ಹಿಟ್ಟು ಕಲಸಿ ಕಣಕ ಮಾಡಿ
ಪ್ರೀತಿಯಿಂದ ಕಲಿತ ಪಾಠ ಮಾಡಬೇಕು ಮನೆಗೆ ಹಂಚಬೇಕು.
ಕಷ್ಟದಲ್ಲಿ ಹದದಿ ಬೆಂದ ಬೇಳೆ
ರುಚಿಸುವಷ್ಟು ಬೆಲ್ಲ ಕಲೆಸಿ ಕಾಯಬೇಕು
ಕಣಕ ಊರಬೇಕು “
ಎನ್ನುವ ಯುಗಾದಿಯ ಹೋಳಿಗೆ ಕವಿತೆಯಲ್ಲಿ ಜೀವನದ ರಸಾನುಭವಗಳು ಕಾಣುತ್ತವೆ. ಸಿಹಿಯೇ ಇರಲಿ ಕಹಿಯೇ ಇರಲಿ ಬೇವು ಬೆಲ್ಲ ಕಲಸಿದಂತೆ, ಜೀವನದಲ್ಲಿ ನೋವು ನಲಿವು ಏನೇ ಬಂದರೂ ಸಮಾನವಾಗಿ ಸ್ವೀಕಾರ ಮಾಡಬೇಕು. ಆಗಲೇ ಅಲ್ಲವೇ? ಆಸನಾಗುವುದು ಬದುಕು..
“ಪದ್ಯವೊಂದನು ಕಟ್ಟಿರುವೆ ಗೆಳತಿ
ಪದ ಪದವೂ ತಡಕಾಡಿ
ಭಾವಗಳ ಶೃತಿ ಮಾಡಿ
ರಾಗಲಯ ಬದ್ಧವಾಗಿ “
ಮೂಕ ಹಕ್ಕಿಯ ಕವಿತೆಯಲ್ಲಿ ಪದಗಳನ್ನು ಕಟ್ಟುವ, ಅಂತರಂಗದ ಭಾವಗಳ, ಪದ್ಯದ ರೂಪ ಲಾವಣ್ಯದ ಬಗ್ಗೆ ತಿಳಿ ಹೇಳಿದ್ದಾರೆ.. ಒಮ್ಮೆ ಓದಲೇ ಬೇಕಾದ ಕವಿತೆ ಕೂಡ ಹೌದು.! ಏಕೆಂದರೆ ಕವಿತೆಯೆಂದರೆ ಓದುವವರಿಲ್ಲದೆ, ಮೆಚ್ಚುವವರಿಲ್ಲದೆ ಬಿಕಾರಿಗೊಳ್ಳದ ಸರಕಲ್ಲ, ಮುಖ ಮುಚ್ಚಿದ ಶವವಲ್ಲ.. ಲೇಖಕಿಯವರು ಭಾವನೆಗಳನೆಲ್ಲ ಬಸಿದು, ಅಂತರಂಗದಲ್ಲಿ ಪದಗಳ ಪೋಣಿಸಿ, ಭಾವಗಳ ರೂಪಕ ಕೊಟ್ಟ ಕವಿತೆಗಳು.
ಹೀಗೆ ಅನೇಕ ಕವಿತೆಗಳು ಮೊದಲ ಮಳೆ ಸುರಿದ ಮೇಲೆ ಮಣ್ಣಿನಿಂದ ಘಮ್ ಎಂದು ಬರುವ ಪರಿಮಳದ ಸ್ವಾದವನು ಹಿಡಿದಿಟ್ಟುಕೊಡಿವೆ.
ಮಳೆಮಿಲನ, ಮಳೆಗಾಲದ ಒಂದು ದಿನ, ವನಸುಮ, ಪ್ರಕೃತಿದಾತೆ, ಮಸಣದ ಹೂವು, ಮಳೆಗಾಲ, ಮಾವು ಮಲ್ಲಿಗೆ, ಜಿಟಿ ಜಿಟಿ ಮಳೆ ಕವಿತೆಗಳು ಪ್ರಕೃತಿ ನಡುವಿನ ತಲ್ಲಣಗಳನ್ನ ಚಿತ್ರೀಸುತ್ತವೆ. ಕವಿಯತ್ರಿಗೆ ನಿಸರ್ಗದ ಮೇಲಿನ ಪ್ರೀತಿಯನ್ನ ಸೂಚಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಹಳೇ ಬೇರಿನ ಹೊಸ ಚಿಗುರಿನ ಹಾಗೇ ಕವಿತೆಗಳಲ್ಲಿ ನವೀನತೆ ಕಾಣಬಹುದು. ಪ್ರಾಕೃತಿಕ ವಸ್ತುಗಳನ್ನ ರೂಪಕಾತ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಸ್ತ್ರೀ ಸಂವೇದನೆ, ಸಾಂಸಾರಿಕ ಜೀವನದ ಸ್ವಾರಸ್ಯ, ಹೆಣ್ತನದ ನೋವು ನಲಿವುಗಳ ಮಿಶ್ರಣವೂ ಸಿಗುತ್ತದೆ.
ಮಳೆಗಾಲದ ಚಳಿಗೆ ಬಿಸಿ ಬಿಸಿ ಕಾಫಿ / ಬಜ್ಜಿ ಜೊತೆ ಕೈಯಲ್ಲಿ ಕನ್ನಡ ಪುಸ್ತಕ ಹಿಡಿದು ಕುಳಿತುಕೊಳ್ಳಿ. ಮೊದಲ ಮಳೆಯ ಜೊತೆ ಕಾಡುವ ಹನಿಗಳನ್ನು ಸ್ವೀಕರಿಸಿ. ಆದಷ್ಟು ಕನ್ನಡ ಪುಸ್ತಕಗಳನ್ನ ಕೊಂಡು ಓದಿ.. ಸ್ನೇಹಿತರಿಗೂ ಓದಿಸಿ. ಕನ್ನಡ ಸಾಹಿತ್ಯ ಎಲ್ಲೆಡೆ ಅಬ್ಬಲಿ. ಮಂಜುಳಾ ಭಾರ್ಗವಿ ಅಮ್ಮನ ಶಿಕ್ಷಣದ ಕಾರ್ಯದ ಜೊತೆಗೆ ಸಾಹಿತ್ಯವೂ ಕೂಡ ನಿರಂತರವಾಗಿ ಸಾಗಲಿ.
ಸಾಹಿತ್ಯಲೋಕದಲ್ಲಿನ ಪಯಣ ಸುಖಕರವಾಗಿರಲಿ…
- ಚೇತನ್ ಗವಿಗೌಡ