ನಿಷ್ಕಲ್ಮಶ ಜೀವದ ಬೆಲೆ ಸಾವು ಮಾತ್ರವೆ? – ಕೇಶವ ಮಳಗಿ



ಉತ್ಸಿನ್ಯಾ, ಬೆಣ್ಣೆ ಸವರಿದ ಬಿಸಿ ರೊಟ್ಟಿಯನ್ನು ಮಡಿಕೆಯಲ್ಲಿ ಕಾಯ್ದಿಟ್ಟು ಅಲ್ಯೋಶನಿಗೆ ತಿನ್ನಲು ಕೊಡುತ್ತಿದ್ದಳು. ಅಲ್ಯೋಶ ಆಕೆಯತ್ತ ಕುಡಿನೋಟ ಬೀರಿದಾಗ ಆಕೆಯು ನಗುತ್ತಿದ್ದಳು. ಮುಂದೇನಾಯಿತು ತಪ್ಪದೆ ಓದಿ ಖ್ಯಾತ ಕತೆಗಾರ ಕೇಶವ ಮಳಗಿಯವರ ಲೇಖನಿಯಲ್ಲಿ ನಿಷ್ಕಲ್ಮಶ ಜೀವದ ಬೆಲೆ ಸಾವೇ ?

ರಶ್ಯನ್‌ ಭಾಷೆಯಲ್ಲಿ ಬರೆದ ವಿಶ್ವದ ಮೇರು ಸಾಹಿತಿ #ಲೆವ್‌_ಟಾಲ್‌ಸ್ಟಾಯ್‌ (೧೮೨೮-೧೯೧೦) ಹೆಸರನ್ನು ಕೇಳದ, ಅವರ ಒಂದಾದರೂ ತುಣುಕನ್ನು ಓದದ ಅಕ್ಷರವಂತರು ಇರಲಾರರು. ಆನಾ ಕರೆನಿನ, ವಾರ್‌ ಆಂಡ್‌ ಪೀಸ್‌, ರಿಸರೆಕ್ಷನ್‌ ಕಾದಂಬರಿಗಳು ಅಸಂಖ್ಯ ಕಥೆಗಳು, ವೈಚಾರಿಕ ಲೇಖನ, ಶ್ರದ್ಧೆ, ದೈವನಂಬಿಕೆ, ಶ್ರಮಸಂಸ್ಕೃತಿಯ ಕುರಿತ ಪ್ರಬಂಧಗಳು ಎಲ್ಲ ಕಾಲಕ್ಕೂ ಅವರನ್ನು ಲೋಕಮಾನ್ಯ ಸಾಹಿತಿಯನ್ನಾಗಿಸಿವೆ.

(ವಿಶ್ವದ ಮೇರು ಸಾಹಿತಿ ಲೆವ್‌ ಟಾಲ್‌ಸ್ಟಾಯ್‌) ಫೋಟೋ ಕೃಪೆ : google

ಜನ ವಿರೋಧಿ ಪ್ರಭುತ್ವ, ಮನುಷ್ಯನ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಅನುವು ಮಾಡಿಕೊಡದ ಧರ್ಮಗಳ ಕಟು ನಿಂದಕರಾಗಿದ್ದ ಟಾಲ್‌ಸ್ಟಾಯ್‌ ಸಿರಿವಂತ ಕೌಂಟ್‌ ಆಗಿದ್ದರೂ ಬದುಕಿನ ಕೊನೆಗಾಲದಲ್ಲಿ ಜೀವನಸತ್ಯವನ್ನು ಹುಡುಕುವಂತೆ ಸನ್ಯಾಸಿಯಾಗಿ ಬದುಕಿದರು. ಬದುಕನ್ನು ನಡೆಸುವ ಶಕ್ತಿ ಯಾವುದು? ಮನುಷ್ಯ ಜೀವನದಲ್ಲಿ ನೈತಿಕತೆಯ ಸ್ಥಾನವೇನು? ಮನುಷ್ಯ ಜಟಿಲ ಸಂಬಂಧಗಳನ್ನು ಕಳಚಿಕೊಂಡಷ್ಟು ಆಧ್ಯಾತ್ಮಿಕವಾಗಿ ಬಿಡುಗಡೆಗೊಳ್ಳುತ್ತಾನೆಯೇ? ಎಂಬಂಥ ಮೂಲಭೂತ ಪ್ರಶ್ನೆಗಳನ್ನು ಅವರ ಸಾಹಿತ್ಯವು ಮುನ್ನೆಲೆಗೆ ತರುತ್ತದೆ.

‘ಅಲ್ಯೋಶ ದಿ ಪಾಟ್‌’ ಫೋಟೋ ಕೃಪೆ : google

#ಅಲ್ಯೋಶ_ದಿ_ಪಾಟ್‌’ ಕಥೆಯನ್ನು ಟಾಲ್‌ಸ್ಟಾಯ್‌ ಬರೆದದ್ದು ೧೯೦೫ರಲ್ಲಿ, ತಮ್ಮ ಎಪ್ಪತ್ತೇಳನೆಯ ವಯಸ್ಸಿನಲ್ಲಿ. ಕೊನೆಯ ಕಥೆ ಎಂದು ಗುರುತಿಸಲಾಗುತ್ತದೆ. ಬರೆದಾದ ಮೇಲೆ ಕಥೆಯ ಗುಣಮಟ್ಟ, ಕಥೆಯನ್ನು ನಿಭಾಯಿಸಿದ ಮತ್ತು ಕಥೆಯ ಹೇಳ ಬಯಸುವ ನೈತಿಕತೆಯ ಕುರಿತು ತೀವ್ರ ಅಸಮಾಧಾನಗೊಂಡಿದ್ದ ಟಾಲ್‌ಸ್ಟಾಯ್‌ ಆ ಕಥೆಯನ್ನು ಮತ್ತೆ ಪರಿಷ್ಕರಣೆಗೊಳಿಸಲಿಲ್ಲ. ಇದೊಂದು ‘ಅತ್ಯಂತ ಕೆಟ್ಟ ಕಥೆ’, ಎಂದು ತಮ್ಮ ದಿನಚರಿಯಲ್ಲಿ ಬರೆದುಕೊಂಡರು. ಕಥೆಯ ಕುರಿತು ಅದನ್ನು ಬರೆದ ಲೇಖಕನ ಅಭಿಪ್ರಾಯವೇನೆ ಇರಲಿ, ಅದು ಪ್ರಕಟವಾದ ದಿನದಿಂದಲೂ ಈ ಕಥೆ ವಿಶ್ವದ ಓದುಗರನ್ನು ಮಂತ್ರಮುಗ್ಧಗೊಳಿಸುತ್ತಲೇ ಬಂದಿದೆ. ಸರಳತೆ, ಸಹಜತೆ, ನೇರವಂತಿಕೆ ಈ ನಿರಾಭರಣ ಕಥೆಯ ಚೆಲುವು.

ಕಥೆಯ ಸರಳತೆ, ಮುಖ್ಯ ಪಾತ್ರದಲ್ಲಿ ಅಡಕವಾಗಿರುವ ಮುಗ್ಧತೆ ಮತ್ತು ಸಂಬಂಧಗಳು, ಸಮಾಜ ತೋರುವ ಥಣ್ಣನೆಯ ಕ್ರೌರ್ಯ ಮೈ ನಡುಗಿಸುವಂಥದ್ದು. ಕಥಾನಾಯಕ ಅಲ್ಯೋಶ ಸೂಕ್ಷ್ಮ ಓದುಗನನ್ನು ಜೀವಮಾನವಿಡೀ ಕಾಡಬಲ್ಲಷ್ಟು ಪ್ರಭಾವಶಾಲಿ. ವಿಶ್ವದ ದೊಡ್ಡ ದೊಡ್ಡ ಸಾಹಿತಿಗಳು ಈ ಕಥೆ ಬೀರುವ ಪ್ರಭಾವದ ಕುರಿತು ಮೂಕವಿಸ್ಮಯರಾಗಿರುವುದುಂಟು. ರಶ್ಯನ್‌ ಸಿಂಬಲಿಸ್ಟ್‌ ಕವಿ ಅಲೆಗ್ಸಾಂಡರ್‌ ಬ್ಲೋಕ್‌, ‘ಅಲ್ಯೋಶ’ ಕಥೆ ಟಾಲ್‌ಸ್ಟಾಯ್‌ ಬರೆದ ಸಾರ್ವಕಾಲಿಕ ಅತ್ತ್ಯುತ್ತಮ ಕಥೆ ಎಂದು ಉದ್ಗರಿಸಿದ್ದರು. ಈ ಕಥೆಯ ಬಾಲಕ, ತರುಣ ಅಲ್ಯೋಶ ‘ಮಹಾನಾಯಕ’ನಲ್ಲ. ಹೊರಲೋಕಕ್ಕೆ ತೋರಿಸಿಕೊಳ್ಳುವ ಯಾವ ಸಾಧನೆಯನ್ನೂ ಮಾಡಿದವನಲ್ಲ. ಆತನ ಒಳ್ಳೆಯತನ, ಉಳಿದವರಿಗೆ ನೋವುಂಟು ಮಾಡದ ರೀತಿಯಲ್ಲಿ ಬದುಕುವ ಸರಳತೆ, ಸದಾ ಉಳಿದವರಿಗಾಗಿ ಇರುವೆಯಂತೆ ಕೆಲಸ ಮಾಡುವ ನಿಸ್ವಾರ್ಥತೆಯೇ ಆತನ ದೊಡ್ಡ ಗುಣಗಳು. ಅಲ್ಯೋಶ ಕಾರಣವಿಲ್ಲದೆ ಮನದುಂಬಿ ನಗಬಲ್ಲ. ಉಳಿದವರು ಕಲ್ಪಿಸಿಕೊಳ್ಳುವ ಮೊದಲೇ ಅವರ ಕೆಲಸವನ್ನು ಮಾಡಿ ಮುಗಿಸಬಲ್ಲ. ಇಂತಹ ವಿಶಿಷ್ಟತೆಯೇ ಓದುಗರು ಆತನೊಬ್ಬ ಯಾರೂ ಅರಿಯದ ಅಸಾಮಾನ್ಯನೆಂದು ಭಾವಿಸುವಂತೆ ಮಾಡುತ್ತವೆ.

ಕುಡಿಕೆ ಅಲ್ಯೋಶ

#ಲೆವ್‌_ಟಾಲ್‌_ಸ್ಟಾಯ್‌

ಅಲ್ಯೋಶ ಕಿರಿಯ ಸೋದರ. ಒಮ್ಮೆ ಆತನ ಅವ್ವ ಅರ್ಚಕರ ಮನೆಯಿಂದ ಒಂದು ಕುಡಿಕೆ ಹಾಲು ತರಲು ಕಳಿಸಿದ್ದಾಗ ಕಾಲು ಜಾರಿ ಬಿದ್ದು ಹಾಲಿನ ಕುಡಿಕೆಯನ್ನು ಒಡೆದುಕೊಂಡು ಬಂದಿದ್ದರಿಂದ ಆತನಿಗೆ ‘ಕುಡಿಕೆ’ ಎಂಬ ಅಡ್ಡ ಹೆಸರು. ಅವ್ವ ಸರಿಯಾಗಿ ನಾಲ್ಕು ಬಾರಿಸತೊಡಗಿದಾಗ ಉಳಿದ ಬಾಲಕರು ಈತನನ್ನು ‘ಕುಡಿಕೆ’ ಎಂದು ಛೇಡಿಸಿ ಕೇಕೆ ಹಾಕಿದರು. ಅಂದಿನಿಂದ ಆ ಹೆಸರೇ ಅವನ ನಿಜ ನಾಮಧೇಯವಾಯಿತು.



ಅಲ್ಯೋಶ ಮಡಚಿದ ಕಿವಿಗಳ, ಡೊಣ್ಣ ಮೂಗಿನ ಸಣಕಲ. ಕಿವಿಗಳು ರೆಕ್ಕೆಯಂತೆ ಹೊರಗೆ ಬಾಗಿದ್ದವು. “ಅಲ್ಯೋಶನ ಮೂಗು ಗುಡ್ಡದ ಮೇಲಿನ ನಾಯಿ ಥರ ಕಾಣ್ತದೆ!”, ಎಂದು ಹುಡುಗರು ಗೇಲಿ ಮಾಡುತ್ತಿದ್ದರು. ಹಳ್ಳಿಯಲ್ಲಿ ಶಾಲೆಯಿದ್ದರೂ ಅಲ್ಯೋಶನಿಗೆ ಸುಲಭವಾಗಿ ಅಕ್ಷರ ಒಲಿದು ಬರಲಿಲ್ಲ. ಮೇಲಾಗಿ, ಕಲಿಯುವಷ್ಟು ಸಮಯವೂ ಆತನಿಗಿರಲಿಲ್ಲ. ಆತನ ಹಿರಿಯಣ್ಣ ಪಟ್ಟಣದಲ್ಲಿ ವ್ಯಾಪಾರಿಯೊಬ್ಬನ ಬಳಿ ಜೀತಕ್ಕಿದ್ದುದರಿಂದ ಅಲ್ಯೋಶ ನಡೆದಾಡಲು ಕಲಿತಾಗಿನಿಂದಲೇ ಅಪ್ಪನಿಗೆ ಸಹಾಯ ಮಾಡುತ್ತಿದ್ದ. ವರ್ಷ ಆರೇ ಇದ್ದರೂ ಅದಾಗಲೇ ಸಣ್ಣ ತಂಗಿಯ ನಿಗಾ ವಹಿಸುತ್ತ ಹುಲ್ಲುಗಾವಲಿನಲ್ಲಿ ಕುರಿ-ಹಸುಗಳನ್ನು ಮೇಯಿಸುತ್ತಿದ್ದ. ಕೊಂಚ ದೊಡ್ಡವನಾಗಿದ್ದೇ ಹಗಲು-ರಾತ್ರಿ ಕುದುರೆಗಳನ್ನು ನೋಡಿಕೊಳ್ಳತೊಡಗಿದ್ದ. ಹನ್ನೆರಡನೆ ವಯಸ್ಸಿಗೆ ನೇಗಿಲು ಹೊಡೆಯುವುದು, ಜಟಕಾಗಾಡಿ ಓಡಿಸುವುದು ಕಲಿತಿದ್ದ. ಆತ ಕಟ್ಟುಮಸ್ತು ಆಳಲ್ಲದಿದ್ದರೂ ಕೆಲಸವನ್ನು ಮಾಡುವ ವಿಧಾನ ಅರಿತಿದ್ದ. ಆತನದು ಸದಾ ನಗುಮೊಗ. ಹುಡುಗರು ಆತನನ್ನು ಛೇಡಿಸುತ್ತಿದ್ದಾಗಲೂ ಅಲ್ಯೋಶ ಮೌನವಾಗಿ ಎಲ್ಲವನ್ನೂ ಕೇಳುತ್ತಿದ್ದ. ಬೈಗುಳು ನಿಂತಿದ್ದೇ ನಗುನಗುತ್ತ ತಾನು ಮಾಡುವ ಕೆಲಸವನ್ನು ಮುಂದುವರೆಸುತ್ತಿದ್ದ.

ಅಲ್ಯೋಶನಿಗೆ ಹತ್ತೊಂಬತ್ತು ವರ್ಷಗಳಾದಾಗ ಆತನ ಹಿರಿಯಣ್ಣನಿಗೆ ಕೆಲಸದಿಂದ ಮುಕ್ತಿ ಸಿಕ್ಕಿತು. ವ್ಯಾಪಾರಿ ಬಳಿ ಹಿರಿಯ ಮಗನನ್ನು ಕೆಲಸಕ್ಕೆ ಹಾಕಿದ್ದ ಅಪ್ಪ ಆತನ ಬದಲಿಗೆ ಅಲ್ಯೋಶನನ್ನು ಅಲ್ಲಿಗೆ ಸೇರಿಸಿದ. ಮನೆಯಲ್ಲಿ ಅಲ್ಯೋಶನ ಹಿರಿಯಣ್ಣನ ಬೂಟುಗಳನ್ನು ಈತನಿಗೆ ನೀಡಿದರು. ಅಪ್ಪನ ಟೊಪ್ಪಿಗೆ, ಕೋಟು ತೊಡಿಸಿ ಆತನನ್ನು ಪಟ್ಟಣಕ್ಕೆ ಕರೆದೊಯ್ದರು. ತನ್ನ ಹೊಸ ದಿರಿಸಿನಲ್ಲಿ ಅಲ್ಯೋಶ ಕೆಂಪಾಗಿ ಹೊಳೆಯುತ್ತಿದ್ದ. ಆದರೆ, ವ್ಯಾಪಾರಿಗೆ ಅಲ್ಯೋಶನ ನೋಟ ಇಷ್ಟವಾಗಲಿಲ್ಲ.

ಆತನನ್ನು ಕಾಲುಗುರಿಂದ ತಲೆಯವರೆಗೂ ನೋಡಿದ ವ್ಯಾಪಾರಿ ಕುಹಕದಿಂದ ನುಡಿದ: “ಸೈಮನ್‌ನ ಜಾಗವನ್ನು ಗಟ್ಟಿಮುಟ್ಟಾದ ಆಳು ತುಂಬುತಾನೆ ಅಂದುಕೊಂಡಿದ್ದೆ. ಈ ಸುಂಬಳ ಬುರುಕ ಮುಕುಡ ಏನು ಮಾಡಬಲ್ಲ? ಇವನಿಂದ ನನಗೇನು ಪ್ರಯೋಜನ?”

“ಎಲ್ಲಾ ಕೆಲಸ ಮಾಡ್ತಾನೆ ಧಣಿಗಳೇ. ನೋಡೀಕೆ ಅಳ್ಳಿಪುಸುಕನ ಥರ ಕಾಣ್ತಾನೆ. ಆದ್ರೆ, ನೀವು ತೆಗೆದು ಹಾಕಲಾಗದಂತೆ ಗಟ್ಟಿ ಆಳಿನ ಥರ ದುಡೀತಾನೆ.”

“ಏನು ಮಾಡ್ತಾನೋ. ಇನ್ನುಮೇಲೆ ನೋಡಬೇಕಷ್ಟೇ”

“ಅಷ್ಟೇ ಅಲ್ಲ ಧಣಿ. ಈತ ಯಾವತ್ತೂ ನಿಮಗೆ ಎದುರು ಆಡೋನಲ್ಲ. ಊಟಕ್ಕಿಂತ ಕೆಲಸದ ಚಿಂತೆನೇ ಹೆಚ್ಚು ಇವನಿಗೆ”.

“ಏನು ಗತಿನೋ. ಆಯ್ತು, ಬಿಟ್ಟು ಹೋಗು ಅವನ್ನ.”

ಅಲ್ಯೋಶ ವ್ಯಾಪಾರಿಯೊಂದಿಗೆ ಬದುಕಲು ಆರಂಭಿಸಿದ.

ವ್ಯಾಪಾರಿಯದು ಬಹಳ ದೊಡ್ಡ ಕುಟುಂಬವೇನೂ ಅಲ್ಲ. ಆತನ ವಯಸ್ಸಾದ ತಾಯಿ, ಹೆಂಡತಿ, ಶಾಲೆಯನ್ನು ಪೂರ್ಣಗೊಳಿಸದ, ಅಪ್ಪನ ವ್ಯಾಪಾರದಲ್ಲಿ ಸಹಾಯ ಮಾಡುತ್ತ, ಅಪ್ಪನ ಮನೆಯಲ್ಲಿಯೇ ವಾಸಿಸುವ ಮದುವೆಯಾದ ಹಿರಿಯ ಮಗ. ಶಾಲೆಯನ್ನು ಪೂರ್ಣಗೊಳಿಸಿ, ಕಾಲೇಜಿನಿಂದ ಹೊರದಬ್ಬಿಸಿಕೊಂಡ ಮನೆಯಲ್ಲಿಯೇ ಠಿಕಾಣಿ ಹೂಡಿದ್ದ ಇನ್ನೊಬ್ಬ ಪುತ್ರ ಮತ್ತು ಹೈಸ್ಕೂಲು ಕಲಿಯುತ್ತಿದ್ದ ಮಗಳು.

ಫೋಟೋ ಕೃಪೆ : photos.com

ಮೊದಮೊದಲು ಯಾರೂ ಅಲ್ಯೋಶನನ್ನು ಇಷ್ಟಪಡಲಿಲ್ಲ. ಆತ ಹಳ್ಳಿ ಮುಸುಂಡಿಯ ಪರಮಾವತಾರದಂತಿದ್ದ. ಉಡುಪು ವಿಚಿತ್ರವಾಗಿದ್ದವು. ಹೇಗೆ ನಡೆದುಕೊಳ್ಳಬೇಕೆಂಬುದು ಅರಿಯದು. ಜತೆಗೆ, ತನಗಿಂತ ಮೇಲಿನ ಅಂತಸ್ತಿನವರೊಂದಿಗೆ ಯಾವ ಬಗೆಯ ಭಾಷೆ ಬಳಸಬೇಕು ಎಂಬುದೂ ತಿಳಿಯದು. ಆದರೂ ಎಲ್ಲರೂ ಆತನೊಂದಿಗೆ ಒಗ್ಗಿಕೊಳ್ಳಲು ಬಹಳ ಸಮಯವೇನೂ ಬೇಕಾಗಲಿಲ್ಲ. ಹಾಗೆ ನೋಡಿದರೆ ಆತನ ಅಣ್ಣನಿಗಿಂತ ಅಲ್ಯೋಶ ಚುರುಕಿನ ಕೆಲಸದಾಳೇ ಆಗಿದ್ದ. ಆತ ಯಾವತ್ತೂ ತಿರುಗಿ ಮಾತನಾಡದಿರುವುದು ಸಹ ಸತ್ಯವೇ ಆಗಿತ್ತು. ಯಾವುದೇ ಕೆಲಸ ಹೇಳಿದರೂ ಕಣ್ಚಿಟಿಕೆಯ ತೆರೆಯುವಷ್ಟರಲ್ಲಿ ಸಂತೋಷದಿಂದ ಮಾಡಿ ಮುಗಿಸುತ್ತಿದ್ದ. ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹೊರಳುವ ಮೊದಲು ವಿಶ್ರಾಂತಿಯೂ ಬೇಕಿರಲಿಲ್ಲ. ವ್ಯಾಪಾರಿಯಂತೂ ಎಲ್ಲವನ್ನೂ ಆತನ ಮೇಲೆಯೇ ಹೇರುತ್ತಿದ್ದ. ವ್ಯಾಪಾರಿಯ ಹೆಂಡತಿ, ತಾಯಿ, ಮಕ್ಕಳು, ಬಾಣಸಿ, ಪಾರುಪತ್ಯೇಗಾರ ಹೀಗೆ ಎಲ್ಲರೂ ಅಲ್ಯೋಶನನ್ನು ಗಾಣದೆತ್ತಿನಂತೆ ಸುತ್ತಿಸುವವರೇ. “ಹೇ! ಅಲ್ಯೋಶ, ಬೇಗ ಅದು ತಂದುಕೊಡು, ಇದನ್ನು ಅಲ್ಲಿಗೆ ಕೊಂಡೊಯ್ಯಿ, ಮರತೆ ಅಂತ ಹೇಳಬೇಡ ಮಾರಾಯ. ಓಡು, ಅಲ್ಲಿಗೆ ಹೋಗು. . .” ಹೀಗೆ ಎಲ್ಲರೂ ಕರೆಯುವವರೆ. ಯಾರು ಏನೇ ಹೇಳಿದರೂ, ಅಲ್ಯೋಶ ಮಾತ್ರ ಯಾವುದನ್ನೂ ಮರೆಯದೇ ನಗುನಗುತ್ತ ಮಾಡಿ ಮುಗಿಸುತ್ತಿದ್ದ.

ಆತ ತೊಡುತ್ತಿದ್ದ ಹಿರಿಯಣ್ಣನ ಬೂಟುಗಳು ಓಡಾಡಿ, ಕಾಲ್ಬೆರಳು ಹೊರ ಚಾಚುವಷ್ಟು ಚಿಂದಿಯಾದವು. ವ್ಯಾಪಾರಿ ಪಟ್ಟಣದಿಂದ ಆತನಿಗೆಂದು ಹೊಸ ಬೂಟುಗಳನ್ನು ತಂದರು. ಹೊಸ ಚಡಾವು ನೋಡಿ ಅಲ್ಯೋಶನಿಗೆ ಖುಷಿಯೋ ಖುಷಿ. ಚಡಾವು ಹೊಸತಾದರೂ ಆತನ ಕಾಲುಗಳು ಮಾತ್ರ ಹಳೆಯವೇ ಇದ್ದವು. ಸಂಜೆಯಷ್ಟೊತ್ತಿಗೆ ಆತನಿಗೆ ಸಾವೇ ಗಂಟಲಿಗೆ ಬಂದಂತಾಗಿ, ಬೂಟುಗಳ ಮೇಲೆ ಕೆಂಡ ಕಾರುವಂತಾಯಿತು. ವಾರದ ಸಂಬಳವನ್ನು ಪಡೆಯಲು ಬರುವ ಅಪ್ಪ, ಬೂಟಿನ ಹಣವನ್ನು ಮುರಿದುಕೊಂಡು ಕೊಟ್ಟಾಗ ಕೋಪಗೊಳ್ಳುವುದನ್ನು ನೆನಪಿಸಿಕೊಂಡು ಆತ ನಡುಗಿದ.
ಚಳಿಗಾಲದಲ್ಲಿ ಅಲ್ಯೋಶ ನಸುಕಿನಲ್ಲಿಯೇ ಎದ್ದು ಕಟ್ಟಿಗೆ ಒಡೆದು ಹಾಕುತ್ತಿದ್ದ. ಅಂಗಳ ಗುಡಿಸುತ್ತಿದ್ದ. ಕುದುರೆ, ಹಸುಗಳಿಗೆ ಮೇವು ಹಾಕಿ ನೀರು ಕುಡಿಸುತ್ತಿದ್ದ. ಆಮೇಲೆ ಒಲೆ ಹೊತ್ತಿಸಿ, ಬೂಟುಗಳನ್ನು ತಿಕ್ಕಿ ಹೊಳಪಿಸಿ, ಧಣಿಯ ಬಟ್ಟೆಯನ್ನು ಮಡಿ ಮಾಡುತ್ತಿದ್ದ. ಹಂಡೆಗೆ ನೀರು ತುಂಬುತ್ತಿದ್ದ. ಅಷ್ಟರೊಳಗೆ ಪಾರುಪತ್ಯೆಗಾರ ಯಾವುದೋ ಕೆಲಸಕ್ಕೆ ಕರೆಯುವುದೋ ಇಲ್ಲ ಅಡುಗೆಯಾಕೆ ಹಿಟ್ಟು ನಾದಲೋ, ಪಾತ್ರೆಪರಡೆ ತೊಳೆಯಲೋ ಕೂಗುವುದು ನಡೆಯುತ್ತಿತ್ತು. ಬಳಿಕ ಯಾರಿಗೋ ಕೊಡಲು, ಇಲ್ಲವೇ ಸರಂಜಾಮು ತರಲು ಚೀಟಿಯನ್ನು ಕೊಟ್ಟು ಆತನನ್ನು ಪಟ್ಟಣಕ್ಕೆ ಕಳಿಸುತ್ತಿದ್ದರು. ಇಲ್ಲ, ಮಗಳನ್ನು ಶಾಲೆಗೆ ಬಿಡಲು-ಕರೆ ತರಲು ಕಳಿಸುತ್ತಿದ್ದರು. “ಇಷ್ಟು ಹೊತ್ತು ಎಲ್ಲಿ ಹಾಳಾಗಿ ಹೋಗಿದ್ದೆ?” ಎಂದು ಯಾರೋ ಜೋರು ಮಾಡುತ್ತಿದ್ದರು. ಒಟ್ಟಿನಲ್ಲಿ ಅಲ್ಯೋಶ ಯಾವಾಗಲೂ ಓಟದಲ್ಲಿರುತ್ತಿದ್ದ.

ಫೋಟೋ ಕೃಪೆ : rbth.com

ನಡುವೆ ಇಷ್ಟು ಸಮಯ ಸಿಕ್ಕರೆ ಒಂಚೂರು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದ. ರಾತ್ರಿ ಎಲ್ಲರೊಂದಿಗೆ ಉಣ್ಣುವುದು ಆತನಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಊಟದ ಹೊತ್ತಿಗೆ ಗೈರಾಗುತ್ತಿದ್ದುದಕ್ಕೆ ಯಾವಾಗಲೂ ಬಾಣಸಿಯ ಬಳಿ ಬೈಸಿಕೊಳ್ಳುತ್ತಿದ್ದ. ಇದ್ದರೂ ಮನೆಯಾಳಾದ ಈ ಹುಡುಗನಿಗಾಗಿ ಕರುಳು ಚುರುಕ್ಕೆಂದು ಇಷ್ಟು ಬಿಸಿಯೂಟವನ್ನು ಯಾವಾಗಲೂ ಆಕೆ ತೆಗೆದಿಡುತ್ತಿದ್ದಳು. ರಜೆಗಳಲ್ಲಿ ರಜಾದಿನದ ತಯಾರಿಗೆಂದು, ರಜಾದಿನದಂದು ಆ ದಿನಕ್ಕೆಂದು ವಿಪರೀತ ಕೆಲಸವಿರುತ್ತಿತ್ತು. ಅಲ್ಯೋಶನಿಗೆ ರಜಾದಿನಗಳೆಂದರೆ ಬಹಳ ಹಿಗ್ಗು. ಕಾರಣ ಆ ದಿನಗಳಲ್ಲಿ ಆತನಿಗೆ ಬಹಳವಲ್ಲದಿದ್ದರೂ ಒಂಟಿ ಕೈ ತುಂಬುವಷ್ಟು ಚಿಲ್ಲರೆ ಭಕ್ಷಿಸು ಸಿಗುತ್ತಿತ್ತು. ಆ ಹಣ ಸಂಪೂರ್ಣ ಆತನಿಗೆ ಸೇರಿದ್ದು. ಈ ಕಾಸನ್ನು ತನಗೆ ಹೇಗೆ ಬೇಕೋ ಹಾಗೆ ಖರ್ಚು ಮಾಡಬಹುದಿತ್ತು. ಇನ್ನು ವಾರದ ಬಟವಾಡೆಯ ಮೇಲೆ ಆತನೆಂದೂ ಕಣ್ಣು ಹಾಕಿದವನಲ್ಲ. ಅದನ್ನು ಅಪ್ಪ ತಪ್ಪದೇ ಬಂದು ತೆಗೆದುಕೊಂಡು ಹೋಗುತ್ತಿದ್ದ. ಅಪ್ಪ ಹೇಳುತ್ತಿದ್ದುದೆಲ್ಲ, “ಎಷ್ಟು ಬೇಗ ನಿನ್ನ ಬೂಟುಗಳನ್ನು ಸವೆಸಿಕೊಳ್ಳುತ್ತೀಯ, ಮಾರಾಯ!” ಎಂದು.

ಒಂದಿಷ್ಟು ಭಕ್ಷಿಸು ಹಣ ಸೇರಿದ ಮೇಲೆ ಬಾಣಸಿಗಳ ಸಲಹೆಯಂತೆ ಒಂದು ಕೆಂಪು ಕಸೂತಿಯ ನಡುವಂಗಿಯನ್ನು ಖರೀದಿಸಿದ. ಆಗ ಅಲ್ಯೋಶನಿಗಾದ ಸಂತೋಷವನ್ನು ಮುಖದಿಂದ ಮುಚ್ಚಿಡಲಾಗಲಿಲ್ಲ.

ಅಲ್ಯೋಶ ಹೆಚ್ಚು ಮಾತನಾಡುವವನಲ್ಲ. ಮಾತಾಡಿದಾಗಲೂ ಒಂದೆರಡು ಹರುಕು-ಮುರುಕು ಶಬ್ದಗಳು ಅಷ್ಟೇ. ಯಾರಾದರೂ ಏನಾದರೂ ಕೆಲಸ ಹೇಳಿದರೆ, ‘ಆಗಲಿ’ ಎಂದು ಅವರು ಮಾತು ಮುಗಿಸುವ ಮೊದಲೇ ಕೆಲಸ ಪೂರೈಸಿ ಬಿಟ್ಟಿರುತ್ತಿದ್ದ. ಆತನಿಗೆ ದೇವಪೂಜೆಯ ಒಂದು ಮಂತ್ರವೂ ಬರುತ್ತಿರಲಿಲ್ಲ. ಅವ್ವ ಕೆಲವನ್ನು ಕಲಿಸಿದ್ದರೂ ಎಂದೋ ಮರೆತುಹೋಗಿದ್ದ. ಆದರೂ ಆತ ಪ್ರತಿ ಬೆಳಗು-ಸಂಜೆ ಪ್ರಾರ್ಥನೆ ತಪ್ಪಿಸುತ್ತಿರಲಿಲ್ಲ. ಕೈಗಳನ್ನು ಎದೆಯ ಮೇಲೆ ಕತ್ತರಿಯಂತೆ ಜೋಡಿಸಿಕೊಂಡು ದೈವವನ್ನು ಸ್ಮರಿಸುತ್ತಿದ್ದ.

ಒಂದೂವರೆ ವರ್ಷಗಳ ಕಾಲ ಅಲ್ಯೋಶ ಬದುಕಿದ್ದು ಹೀಗೆಯೇ. ಬಳಿಕ ಎರಡನೆಯ ವರ್ಷದ ಮಧ್ಯಭಾಗದಲ್ಲಿ ಆತನ ಬದುಕಿನಲ್ಲಿ ಎಂದೂ ನಡೆದಿರದ ಸಂಗತಿ ಜರುಗಿತು. ಜನ ತನಗೆ ಏನೇನೋ ಕೆಲಸ ಹೇಳವುದು, ಅವರಿಗಾಗಿ ತಾನು ಏನೇನೊ ಕೆಲಸ ಪೂರೈಸುವುದು ಇತ್ಯಾದಿಯನ್ನು ಹೊರತುಪಡಿಸಿಯೂ ಅಲ್ಲೊಂದು ಸಂಬಂಧದ ಕೊಂಡಿಯಿತ್ತು. ಇದು ವಿಶೇಷ ಸಂಗತಿಯಾಗಿತ್ತು. ಎಲ್ಲರಿಗೂ ಕೆಲಸ ಮಾಡಿಕೊಡುವುದರ ಹೊರತಾಗಿಯೂ ಯಾರೋ ಒಬ್ಬರು ಬೇಕಾಗುತ್ತಾರೆ. ಮತ್ತು ಹಾಗೆ ಅಗತ್ಯವಿರುವ, ಕಾಳಜಿ ತೋರಿಸಬಲ್ಲ ವ್ಯಕ್ತಿ ತಾನೇ ಆಗಿದ್ದೇನೆ ಎಂಬುದೇ ವಿಶೇಷ ಸಂಗತಿಯಾಗಿತ್ತು. ಅದು ಅಲ್ಯೋಶನಿಗೆ ತಿಳಿದಿತ್ತು. ಈ ಸಂಗತಿಯ ಅರಿವಿನಿಂದ ಆತ ವಿಸ್ಮಯವಾಗುವಷ್ಟು ಸಂತಸಗೊಂಡಿದ್ದ. ಈ ವಿಶೇಷ ಸಂಗತಿಯನ್ನು ಅಲ್ಯೋಶನಿಗೆ ಅರ್ಥ ಮಾಡಿಸಿದವಳು ತರುಣಿಯೂ, ಅನಾಥೆಯೂ ಇವನಂತೆಯೇ ಆ ಮನೆಯ ಕೆಲಸಗಾರಳೂ ಆಗಿದ್ದ ಬಾಣಸಿ ಉತ್ಸಿನ್ಯಾ! ಆಕೆಗೆ ಅಲ್ಯೋಶ ನಿಜಕ್ಕೂ ಪಾಪದವನು ಅನ್ನಿಸುತ್ತಿತ್ತು.

ಅಲ್ಯೋಶನಿಗೆ ತಾನು ಮಾಡುವ ಕೆಲಸವಲ್ಲದೆ ವ್ಯಕ್ತಿಯಾಗಿ ತಾನೇ ಉಳಿದ ಮನುಷ್ಯರಿಗೆ ಬೇಕಾಗಿದ್ದೇನೆ ಎಂದು ಮೊದಲಬಾರಿಗೆ ಅನುಭವಕ್ಕೆ ಬರತೊಡಗಿತು. ಅವ್ವ ತನ್ನ ಬಗ್ಗೆ ‘ಪಾಪದವನು’ ಅನ್ನುತ್ತಿದ್ದಾಗಲೂ ಅವನಲ್ಲೇನೂ ಬದಲಾವಣೆಯಾಗಿರಲಿಲ್ಲ. ಏಕೆಂದರೆ, ತಾನಿರಬೇಕಾದುದೇ ಹಾಗೆ ಎಂಬುದೇ ಅವನ ಭಾವನೆಯಾಗಿತ್ತು. ಈ ಅನ್ನಿಸಿಕೆ ಕೂಡ ತನ್ನಷ್ಟಕ್ಕೆ ತಾನು ಪಾಪ ಅಂದುಕೊಂಡ ಭಾವ. ಆದರೆ, ಇದೀಗ ತನಗೆ ಯಾವ ರೀತಿಯಲ್ಲೂ ಸಂಬಂಧವಿರದ ಉತ್ಸಿನ್ಯಾ ಆತನಿಗಾಗಿ ಮರುಕ ವ್ಯಕ್ತಪಡಿಸಿದ್ದಳು. ತನಗಾಗಿ ಬೆಣ್ಣೆ ಸವರಿದ ಬಿಸಿ ರೊಟ್ಟಿಯನ್ನು ಮಡಿಕೆಯಲ್ಲಿ ಕಾಯ್ದಿಟ್ಟು ತಾನು ತಿನ್ನುವಾಗ ಮಂಡಿಗೆ ಕೈಯೂರಿ ನೋಡುತ್ತ ಕುಳಿತಿರುತ್ತಿದ್ದಳು. ಅಲ್ಯೋಶ ಆಕೆಯತ್ತ ಕುಡಿನೋಟ ಬೀರಿದಾಗ ಆಕೆ ನಗಲು ಆರಂಭಿಸುತ್ತಿದ್ದಳು. ಅದನ್ನು ಕಂಡು ಈತನೂ ನಗುತ್ತಿದ್ದ.



ಇದಂತೂ ಅಲ್ಯೋಶನಿಗೆ ಸಂಪೂರ್ಣ ಹೊಸತು. ವಿಚಿತ್ರವಾದುದು. ಅದರಿಂದ ಆತನಿಗೆ ಆತಂಕವಾಗತೊಡಗಿತು. ಇದರಿಂದಾಗಿ ತನಗೆ ಮೊದಲಿನಂತೆ ಕೆಲಸದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಾರದು ಅನ್ನಿಸಿತು. ಇದ್ದರೂ ಆತನಿಗೆ ಸಂತೋಷವಾಗಿದ್ದಂತೂ ನಿಜ. ತನ್ನ ಹರಿದ ಬಟ್ಟೆಯನ್ನು ಉತ್ಸಿನ್ಯಾ ಹೊಲೆದು ಕೊಟ್ಟಾಗ ಆತ ತಲೆಯಾಡಿಸಿ ನಕ್ಕಿದ್ದನಷ್ಟೇ. ಕೆಲಸ ಮಾಡುತ್ತಿರುವಾಗ ಇಲ್ಲವೆ, ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಜಿಗಿಯುವ ಅಂತರದಲ್ಲಿ ಆಕೆಯನ್ನು ನೆನಪಿಸಿಕೊಂಡು “ಓಹ್‌! ಉತ್ಸಿನ್ಯಾ!” ಎಂದು ಉದ್ಗರಿಸುತ್ತಿದ್ದ. ಇಬ್ಬರೂ ಒಬ್ಬರಿಗೊಬ್ಬರು ಆಸರೆಯಾಗಿದ್ದರು. ಬಿಡುವಿನಲ್ಲಿ ಉತ್ಸಿನ್ಯಾ ತನ್ನ ಕಥೆಯನ್ನು ಅವನಿಗೆ ಹೇಳಿದ್ದಳು. ತನ್ನ ಹೆತ್ತವರು ತೀರಿಕೊಂಡಿದ್ದು, ಚಿಕ್ಕಿ ತನ್ನನ್ನು ಸಾಕಿದ್ದು. ಪಟ್ಟಣಕ್ಕೆ ಬಂದು ಈ ಕೆಲಸಕ್ಕೆ ಸೇರಿದ್ದು. ಹೇಗೆ ಧಣಿಯ ಹಿರಿಯ ಮಗ ತನ್ನೊಂದಿಗೆ ಸಲಗೆ ಬೆಳೆಸಲು ಯತ್ನಿಸಿ ಬೈಸಿಕೊಂಡಿದ್ದ ಎಂಬುದು ಹೀಗೆ. ಆಕೆಗೆ ಮಾತು ಅಂದರೆ ಇಷ್ಟ. ಇವನಿಗೆ ಆಕೆಯ ಮಾತು ಕೇಳುವುದು! ಪಟ್ಟಣಗಳಲ್ಲಿ ಕೆಲಸಕ್ಕೆಂದು ಬರುವ ರೈತಾಪಿಗಳು ಅಡುಗೆಯವರನ್ನು ಮದುವೆಯಾಗುವುದು ಸಾಮಾನ್ಯ ಎಂಬ ಮಾತನ್ನು ಆತ ಕೇಳಿಸಿಕೊಂಡಿದ್ದ. ಸಾಲದ್ದಕ್ಕೆ ಉತ್ಸಿನ್ಯಾ ಕೂಡ ಒಮ್ಮೆ, “ನಾವೇನಾದರೂ ಮದುವೆಯಾಗುವ ಸಾಧ್ಯತೆ ಇದೆಯೇ?” ಎಂದು ಕೇಳಿದ್ದಳು. ಆ ಕುರಿತು ತನಗೇನೂ ತಿಳಿಯದೆಂದು, ಆದರೆ ತಾನು ಹಳ್ಳಿಯ ಹುಡುಗಿಯರನ್ನು ಮದುವೆಯಾಗಲಾರೆನೆಂದೂ ಆತ ಹೇಳಿದ್ದ.

“ಓಹೋ! ನಿನ್ನ ಮನಸ್ಸಿನಲ್ಲಿ ಯಾವುದೋ ಹುಡುಗಿ ಇದ್ದಾಳ?” ಆಕೆ ಕೇಳಿದಳು.

“ಹೇಳೋದಾದರೆ, ನಿನ್ನನ್ನು ನಾನು ಮದುವೆಯಾಗಬಲ್ಲೆ. ನಿನ್ನ ಒಪ್ಪಿಗೆ ಇದೆಯ?”

“ಯಾಕಾಗಬಾರದು?” ಮರುಪ್ರಶ್ನೆ ಕೇಳಿದ್ದಳಾಕೆ.

ವ್ಯಾಪಾರಿಯ ಹೆಂಡತಿಗೆ ಈ ವಿಷಯ ಕಿವಿಗೆ ಬಿದ್ದಂದಿನಿಂದ ಆಕೆ ಕನಲಿದ್ದಳು. “ಅಡುಗೆಯವಳು ಬಸುರಿಯಾಗಿ ಮಗು ಹೆತ್ತರೆ ಮನೆ ಕೆಲಸ ಮಾಡೋರ್‍ಯಾರು?” ಎಂದು ಗಂಡನನ್ನು ತಿವಿದಿದ್ದಳು. ಅಲ್ಯೋಶನ ಅಪ್ಪ ಮಗನ ಸಂಬಳ ಪಡೆಯಲು ಬಂದಾಗ ಸಹಜವೆನ್ನುವಂತೆ ಧಣಿಯನ್ನು ಕೇಳಿದ:

“ಮಗ ಹೇಗೆ ಕೆಲಸ ಮಾಡ್ತಾನೆ ಧಣಿ? ಆತ ತಿರುಗಿ ಮಾತಾಡೋನಲ್ಲ ಎಂದು ನಾನು ಹೇಳಿರಲಿಲ್ಲವೆ?”

“ಎದುರುತ್ತರ ಕೊಡೊದಿಲ್ಲ ಅನ್ನೋದೇನೋ ಸರಿ ಮಾರಾಯ. ಆದರೆ ಬೇರೊಂದು ಮೂರ್ಖ ಕೆಲಸ ಮಾಡಿ ಕೂತಿದ್ದಾನಲ್ಲ! ನಮ್ಮನೆ ಅಡುಗೆಯವಳಲ್ಲ ಮದುವೆಯಾಗ್ತೇನೆ ಅಂತಿದ್ದಾನಂತೆ. ಮೊದಲೇ ಹೇಳಿಬಿಡ್ತೇನೆ, ಮದುವೆಗೆ ಅಂತ ನನ್ನಿಂದ ಯಾವ ಸಹಾಯನೂ ಇರೋಲ್ಲ. ಆ ರಗಳೆ ನಮಗೆ ಆಗಿ ಬರೋದಿಲ್ಲ.”

“ಮುಠ್ಠಾಳನ್ನ ತಂದು! ನೀವೇನೂ ಯೋಚಿಸೋಕ್ಕೆ ಹೋಗಬೇಡಿ ಧಣಿ. ಎಲ್ಲ ಕೈ ಬಿಟ್ಟು ನೆಟ್ಟಗೆ ಬದುಕು ಅಂತ ಅವನಿಗೆ ಬುದ್ಧಿ ಹೇಳ್ತೀನಿ. ಎಂದವನೆ ಅಡುಗೆಮನೆಗೆ ಹೋಗಿ ಮಗನನ್ನು ಕಾಯತೊಡಗಿದ. ಕೊರಳಿಗೆ ಬಿದ್ದ ಕೆಲಸವನ್ನು ಪೂರೈಸಿ ಅಲ್ಯೋಶ ನಿಟ್ಟುಸಿರು ಬಿಡುತ್ತ ಬಂದ.

“ನಿನಗೆ ಸ್ವಲ್ಪವಾದರೂ ಬುದ್ಧಿ ಸರಿಯಿದೆ ಅಂದುಕೊಂಡಿದ್ದೆ . . .” ಆತನ ಅಪ್ಪ ಹೇಳಿದ.

“ನಾನೇ . . ಮಾಡಿದೇ . . .?”

“ಏನು ಮಾಡಿದ್ಯ? ಮದುವೆ ಆಗಬೇಕೂಂತ ಇದಿಯ? ಸಮಯ ಬಂದಾಗ ಹೆಣ್ಣು ನೋಡಿ ನಾನೇ ನಿನ್ನ ಮದುವೆ ಮಾಡ್ತೇನೆ. ಈ ಪಟ್ಟಣದ ಮಿಟಕಲಾಡಿಯರು ನಮಗೆ ಬೇಡ!”
ಅಪ್ಪ ಸುಮಾರು ಹೊತ್ತು ಮಾತನಾಡುತ್ತಲೇ ಇದ್ದ. ಅಲ್ಯೋಶ ಉಸಿರುಗರೆದ. ಅಪ್ಪನ ಮಾತು ಮುಗಿದಾಗ ಅಲ್ಯೋಶ ನಕ್ಕ.

“ಸರಿ, ಅದೆಲ್ಲ ಮರೆತುಬಿಡು!”

“ಹಾಗೇ ಆಗಲಿ!”

ಅಪ್ಪ ಹೋದ ಮೇಲೆ ಅಲ್ಯೋಶ ಮತ್ತು ಅಲ್ಲಿಯೇ ಬಾಗಿಲ ಮರೆಯಲ್ಲಿ ನಿಂತು ಮಾತು ಕೇಳಿಸಿಕೊಳ್ಳುತ್ತಿದ್ದ ಉತ್ಸನ್ಯಾ ಮಾತ್ರ ಉಳಿದರು. ಅಲ್ಯೋಶ ಆಕೆಗೆ ಹೇಳಿದ:
“ನಾವಂದುಕೊಂಡಿದ್ದು ನಡೆಯೋ ಹಾಗೆ ಕಾಣಿಸೋಲ್ಲ. ಕೇಳಿಸ್ತ ಇದೆಯ? ಆತನಿಗೆ ಹುಚ್ಚೇ ಹಿಡಿದಿದೆ.”

ಆಕೆ ಸೆರಗಿನ ಮರೆಯಲ್ಲಿ ಅಳತೊಡಗಿದಳು.

ಅಲ್ಯೋಶ ತ್ಚು! ತ್ಚು ಎಂದು ಸಮಾಧಾನ ಮಾಡಿ, “ಅಪ್ಪ ಹೇಳಿದಂತೆ ನಡಕೋ ಬೇಕು. ಎಲ್ಲಾನೂ ಮರೆಯೋದೆ ಒಳ್ಳೆದು ಅನ್ನಿಸುತ್ತೆ.”

ಅಂದು ರಾತ್ರಿ ತಲಬಾಗಿಲು ಹಾಕಲು ಕರೆದ ಮನೆ ಯಜಮಾನಿ, “ಹಾಗಿದ್ರೆ, ಎಲ್ಲ ತಲೆಹರಟೆ ಬಿಟ್ಟು ನಿಮ್ಮ ಅಪ್ಪನ ಮಾತು ನಡೆಸಿಕೊಡ್ತೀಯ ಅಂತಾಯ್ತು.

“ನೋಡಿದರೆ, ಹಾಗೆ ಮಾಡಬೇಕು ಅನ್ನಿಸುತ್ತೆ” ಎಂದು ಅಲ್ಯೋಶ ನಗುತ್ತ ಹೇಳಿದ. ಬಳಿಕ ಬಿಕ್ಕತೊಡಗಿದ.

ಅದಾದ ಮೇಲೆ ಅಲ್ಯೋಶ ಮತ್ಯಾವತ್ತೂ ಉತ್ಸಿನ್ಯಾಳ ಜತೆ ಮದುವೆಯ ಮಾತೆತ್ತಲಿಲ್ಲ. ಬದುಕು ಹಿಂದೆ ಹೇಗಿತ್ತೋ ಹಾಗೆಯೇ ಸಾಗತೊಡಗಿತು. ಒಂದುದಿನ ಅಸ್ಥಿರ ಮನಸ್ಥಿತಿಯಲ್ಲಿದ್ದ ಪಾರುಪತ್ಯೆಗಾರ ಆತನನ್ನು ಮನೆಯ ಮೇಲಿನ ಹೆಂಚಿನಲ್ಲಿ ಕುಳಿತಿದ್ದ ಮಂಜನ್ನು ಸವರಲು ಕಳಿಸಿದ. ಮಂಜನ್ನು ಸವರಿ ಚೊಕ್ಕಟ ಮಾಡುತ್ತಿದ್ದ ಅಲ್ಯೋಶ ಕಾಲು ಜಾರಿ ಸಲಿಕೆ ಸಮೇತ ಕೆಳಗೆ ಬಿದ್ದ. ದುರದೃಷ್ಟಕ್ಕೆ ಮಂಜುಹಾಸಿನ ಮೇಲೆ ಬೀಳದೆ ಕಬ್ಬಿಣದ ಸರಳಿನ ಬಾಗಿಲನ ಮೇಲೆ ಬಿದ್ದ. ಅದನ್ನು ನೋಡಿ ಉತ್ಸನ್ಯಾ ಮತ್ತು ಧಣಿಯ ಮಗಳು ಓಡಿ ಬಂದರು.

“ಅಲ್ಯೋಶ, ನೀನು ಹುಶಾರಾಗಿದ್ದೀಯ, ಪೆಟ್ಟಾಯಿತ””

“ಸ್ವಲ್ಪ ಮಾತ್ರ. ನಾನು ಆರಾಮವಾಗಿಯೇ ಇದ್ದೇನೆ.”

ಆತ ಎದ್ದು ನಿಲ್ಲಲು ಯತ್ನಿಸಿ ವಿಫಲನಾದ. ನಗಲು ಆರಂಭಿಸಿದ. ಆತನನ್ನು ಕೆಲಸಗಾರರ ಕೊಟ್ಟಿಗೆಯತ್ತ ಸಾಗಿಸಿದರು. ವೈದ್ಯರು ಬಂದರು. ಪರೀಕ್ಷಿಸಿದ ವೈದ್ಯರು ಎಲ್ಲಿ ನೋವಾಗುತ್ತಿದೆ? ಎಂದು ಕೇಳಿದರು.

“ಮೈಯೆಲ್ಲ ನೋಯುತ್ತಿದೆ. ಆದರೂ ಪರವಾಗಿಲ್ಲ. ಧಣಿಗಳು ಸಿಟ್ಟು ಮಾಡಿಕೊಳ್ಳೋದು ಬೇಡ. ಅಪ್ಪನಿಗೆ ಸುದ್ದಿ ಹೇಳಿ ಕಳಿಸಿ.”

ಅಲ್ಯೋಶ ಎರಡು ದಿನ ಹಾಸಿಗೆಯಲ್ಲೇ ಮಲಗಿದ್ದ. ಮೂರನೆಯ ದಿನ ಅವರು ಅರ್ಚಕರನ್ನು ಕರೆ ಕಳಿಸಿದರು.

“ನೀನು ಸಾಯುತ್ತೀಯ, ಹೌದಾ ಹೇಳು!”ಉತ್ಸಿನ್ಯಾ ಕೇಳಿದಳು.

“ನೀನು ಏನೂಂತ ತಿಳಕೊಂಡಿದೀಯ? ನಾವೇನು ಶಾಶ್ವತವಾಗಿರುತ್ತೇವಾ? ಯಾವತ್ತಾದರೂ ಸಾಯಲೇಬೇಕು ! ನನ್ನೊಂದಿಗೆ ನೀನು ಎಷ್ಟು ಒಳ್ಳೆಯವಳಾಗಿ ನಡಕೊಂಡಿದಿಯ. ಅದಕ್ಕಾಗಿ ಎಷ್ಟು ಹೇಳಿದರೂ ಸಾಲದು. ಅವರೆಲ್ಲ ನಮ್ಮಿಬ್ಬರ ಮದುವೆಗೆ ಒಪ್ಪದಿದ್ದುದೇ ಒಳ್ಳೆಯದಾಯ್ತು. ಅದರಲ್ಲೇನಿತ್ತು ಮಣ್ಣು. ಈಗ ಎಲ್ಲಾ ಒಳ್ಳೇದಾಗುತ್ತೆ. ” #ಅಲ್ಯೋಶ ಎಂದಿನಂತೆ ಬಡಬಡನೆ ಹೇಳಿ ಮುಗಿಸಿದ.
ಎದೆಯ ಮೇಲೆ ಕತ್ತರಿಯಾಕಾರದಲ್ಲಿ ಕೈಗಳನ್ನಿಟ್ಟುಕೊಂಡು ಆತ ಅರ್ಚಕರೊಡನೆ ಪ್ರಾರ್ಥಿಸಿದ. ಜನ ಹೇಳಿದ್ದನ್ನು ಮಾಡಿಕೊಂಡು, ಯಾರಿಗೂ ನೋವಿಸದ ಹಾಗೆ ಬದುಕೋದೆ ಇಲ್ಲಿ ಚೆನ್ನ. ನಾನು
ಈ ಲೋಕದಲ್ಲಿ ಒಳ್ಳೆಯವನಾಗಿದ್ದರೆ, ಆ ಲೋಕದಲ್ಲೂ ಒಳ್ಳೆಯದೇ ಆಗುತ್ತದೆ, ಎಂದು ಮನಸ್ಸಿನಲ್ಲಿಯೇ ಅಂದುಕೊಂಡ.

ಆತ ಬಹಳವೇನೂ ಮಾತಾಡಲಿಲ್ಲ. ಆದರೆ ಮತ್ತೆ ಮತ್ತೆ ನೀರು ಕೇಳುತ್ತಿದ್ದ. ಮತ್ತು ಯಾವುದರ ಕುರಿತೋ ಸೆಳೆತಕ್ಕೆ ಒಳಗಾದವನಂತೆ ಕಾಣುತ್ತಿದ್ದ.

ಆತನನ್ನು ಯಾವುದೋ ಚಕಿತಗೊಳಿಸಿದಂತಿತ್ತು. ಕಾಲುಗಳನ್ನು ಅಗಲಿಸಿದ ಅಲ್ಯೋಶ ಅಸು ನೀಗಿದ.

(೧೯೦೫)

(ವರ್ಣಚಿತ್ರ: ರಶ್ಯದ ಕಲಾವಿದ ವಾಸಿಲಿ ಸುರಕೋಫ್‌ (೧೮೪೮-೧೯೧೬). ರಿಯಲಿಸಂ, ಇಂಪ್ರಶನಿಸಂ, ಅಕೆಡೆಮಿಕ್‌ ಕಲೆ, ರೇಖಾಚಿತ್ರ ಕಲೆ ಹೀಗೆ ವಿವಿಧ ಮಾಧ್ಯಮಗಳಲ್ಲಿ ಸರ್ವಮಾನ್ಯ ಕಲಾವಿದ.
ವರ್ಣಚಿತ್ರದ ತಲೆಬರಹ: ‘ಗಾಡ್ಸ್‌ ಫೂಲ್‌ ಸಿಟ್ಟಿಂಗ್‌ ಆನ್‌ ದಿ ಸ್ನೋ’.)


  • ಕೇಶವ ಮಳಗಿ (ಖ್ಯಾತ ಕತೆಗಾರರು, ಲೇಖಕರು, ಕವಿಗಳು)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW