‘ನಗುತ್ತಿದ್ದ ಹುಣ್ಣಿಮೆ ಶಶಿಗೆ ಬೀಸುತ್ತಿದ್ದ ತಂಗಾಳಿಗೆ’… ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹುಣ್ಣಿಮೆಯ ಮುಸ್ಸಂಜೆ ಇರುಳು
ಆ ನದಿಯ ತೀರ ತಂಪು ತಂಪು
ಬೀಸುತಿದ್ದ ತಂಗಾಳಿಗೆ ಅಲೆಗಳಲ್ಲಿ
ನಲಿವಿನ ಸಂಭ್ರಮದ ಭಾವಗಳು
ನದಿಯ ಗುಂಟ ಮರಳಿನ ಮೇಲೆಲ್ಲಾ
ಹಾಲು ಸುರಿದ ಬೆಳದಿಂಗಳು
ಕವಿ ರಸಿಕ ಪ್ರೇಮಿಗಳಿಗೆ ಇನ್ನೇನು ಬೇಕು
ಇಲ್ಲಿ
ಆ ದಿನ ಅದೆಂಥ ವಿಸ್ಮಯ ನಡೆದು ಬಿಟ್ಟಿತು!
ಸಂಪಿಗೆ ನಾಸಿಕದ ಬಟ್ಟಲು ಕಂಗಳ
ಚೆಲುವೆ ಹೆಜ್ಜೆ ಇಟ್ಟಿದ್ದೆ ತಡ
ಅವಳ ನವಿಲಿನ ಹೆಜ್ಜೆಗೊಂದೊಂದು ಮಲ್ಲಿಗೆ
ಮೆಲ್ಲಗೆ ಅರಳುತಿತ್ತು
ಚಂದ್ರನ ಬೆಳ್ಳನೆ ನಗೆ ಹೊನಲು
ಎಲ್ಲೆಡೆ ಹರಿದಿತ್ತು
ಗಂಧರ್ವ ಗಾನದ ಗುಂಗು
ಅಲೆ ಅಲೆಯಲಿ ತೇಲಿ ಬರುತಲಿತ್ತು
ಓಹ್! ಇದ್ದಕಿದ್ದಂತೆ
ಜಲಸ್ಸು, ಈರ್ಶೆ, ಹೊಟ್ಟೆಯುರಿ
ಎಲ್ಲವೂ ಒಮ್ಮೆಗೆ
ಹರಿಯುತ್ತಿದ್ದ ನದಿಗೆ
ನಗುತಿದ್ದ ಹುಣ್ಣಿಮೆ ಶಶಿಗೆ
ಬೀಸುತ್ತಿದ್ದ ತಂಗಾಳಿಗೆ!
ಚಂದ್ರ ಏನೋ ಲಾಭಿ ನಡೆಸಿ ಕ್ಷಣ
ಮೋಡಗಳ ಕರೆಸಿಕೊಂಡು
ಮರೆಯಲಿ ಮುಖ ಅಡಗಿಸಿ ಕೂತ
ತಂಗಾಳಿ ಅಡ್ಡದಾರಿ ಹಿಡಿದು
ಬದಲಿಸಿಕೊಂಡು ಬಿಟ್ಟಿತು ತನ್ನ ದಿಕ್ಕು
ಹರಿಯುತ್ತಿದ್ದ ನದಿ ತಟ್ಟನೆ
ಶಾಂತವಾದಳು ಚಲಿಸದೆ
ಅರೆರೆ! ಇದೆಂತ ವಿಸ್ಮಯ!
ನಾನು ಮನುಜರಿಗಷ್ಟೇ ಜಲಸ್ಸು, ಈರ್ಶೆ
ಎಂದು ತಿಳಿದಿದ್ದೆ! ಇಲ್ಲಿ ಪ್ರಕೃತಿಗೂ…….!?
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
