ಉತ್ತರ ಕನ್ನಡದ ಉಸಿರು ವಿದ್ಯುತ್ ಗೆ ಹೆಸರು -ಕಾಳಿ ನದಿ

ಉತ್ತರಕನ್ನಡ ಜಿಲ್ಲೆಯ ಜೀವನಾಡಿ ಕಾಳಿ ನದಿ.ಈ ನದಿ ಉತ್ತರಕನ್ನಡ ಜಿಲ್ಲೆಯ ಕುಶಾಲಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟುತ್ತದೆ. ಈ ದಾಂಡೇಲಿಗೆ ಹೆಸರು ಬರಲು ಕಾರಣ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಅವಿನಾಶ ಸೆರೆಮನಿ ಅವರು ‘ನದ – ನದಿಗಳ ನಿನಾದ’ ಅಂಕಣದಲ್ಲಿ ಕಾಳಿ ನದಿಯ ಕುರಿತಾಗಿದ್ದು, ತಪ್ಪದೆ ಮುಂದೆ ಓದಿ…

ಉತ್ತರಕನ್ನಡ ಜಿಲ್ಲೆಯ ಜೀವನಾಡಿ, ಹರಿಯುತ್ತಾ , ಪ್ರಶಾಂತದಿ ನಲಿಯುತ್ತಾ ಶುಭ್ರ ಭಾವದಿ ಸಾಗುತಾ ಅವನಿಯ ಮಡಿಲಲಿ ಸದಾ ಭರವಸೆಯಿಂದ ಹರಿದು ಮಧ್ಯದಿ ಭೇಟಿಯಾಗುವ ಪಕ್ಷಿ ಸಂಕುಲ,ಪ್ರಾಣಿ ಸಂಕುಲಗಳನು ತಣಿಸುತ ಜೀವಧಾರೆಗಳ ಸಂರಕ್ಷಿಸಿ ಉಸಿರಾಗಿ ಸಲಹುತ ಮುನ್ನಡೆದಿದೆ ಪಶ್ಚಿಮ ಘಟ್ಟಕೆ ಚೆಲುವನು ಧಾರೆ ಎರೆಯುತ ನಲಿದಿದೆ ಸಂಕುಲದ ಬತ್ತಿದ ಕಳೆಯನು ಮತ್ತೆ ಹೆಚ್ಚಿಸುತ ಹೊರಟಿದೆ ತನ್ನ ರೂಪವನ್ನು ಧರಿಸುತ್ತ ಹೊಯ್ದಾಡಿ ನಗು ನಗುತ್ತ ಹರಿಯುವ ರಮ್ಯ ಮನೋಹರತೆಗೆ ಹೆಸರಾದ ನದಿಯೇ ಕಾಳಿ ನದಿ.

ಈ ನದಿ ಉತ್ತರಕನ್ನಡ ಜಿಲ್ಲೆಯ ಕುಶಾಲಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟುತ್ತದೆ.ಈ ಜಿಲ್ಲೆಯ ಸಮೀಪವಿರುವ ದಾಂಡೇಲಿಯನ್ನ ಪ್ರವಾಸಿ ತಾಣವನ್ನಾಗಿ ಮಾಡಿ .ಸದಾ ಪ್ರಾಕೃತಿಕ ಹಚ್ಚಹಸಿರಿನಿಂದಲೇ ಹೆಸರಾಗಿದೆ. ಇಲ್ಲಿ ಕಾಡು ತುಂಬಾ ದಟ್ಟವಾಗಿದ್ದು ವೈವಿಧ್ಯಮಯ ಪ್ರಾಣಿಗಳು ಇಲ್ಲಿ ಕಂಡು ಬರುತ್ತವೆ .ಈ ದಾಂಡೇಲಿಗೆ ಹೆಸರು ಬರಲು ಕಾರಣ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ದಂಡಕ ನಾಯಕ ಎಂಬ ರಾಜನು ಹಸಿರಿನ ಸೌಂದರ್ಯಕ್ಕೆ ಮನಸೋತಿದ್ದರಿಂದ ತನ್ನ ಹೆಸರನ್ನೇ ಇಟ್ಟ ಎಂಬ ವಾದವೂ ಇದೆ.ಈ ರೀತಿ ವಿವಿಧ ರೀತಿ ಪುರಾವೆಯ ಪ್ರಕಾರ ದಾಂಡೇಲಿ ಹೆಸರು ಬಂತು ಎನ್ನುತ್ತಾರೆ ಸ್ಥಳೀಯರು.

ಈ ನದಿಯ ಪಯಣದಿಂದ ದಾಂಡೇಲಿ ಸುತ್ತಮುತ್ತಲೂ ಹಲವಾರು ಸಣ್ಣ ಸಣ್ಣ ಜಲಪಾತಗಳು,ಝರಿಗಳು ನಿರ್ಮಾಣವಾಗಿವೆ.ಅಲ್ಲದೆ ನೊಂದ ಮನಸುಗಳು ಶಾಂತಿಯನ್ನು ಪಡೆಯಲು ,ಮಜಾ ಮಾಡಲು ಸುಂದರವಾದ ಪ್ರವಾಸಿ ತಾಣಗಳನ್ನು ಕಾಣಬಹುದು.ಅದರಲ್ಲಿ ಪ್ರಮುಖವಾದವು ಸಿಂಥೆರಿ ರಾಕ್ಸ್.ಇದನ್ನು 20 ನೆ ಶತಮಾನದಲ್ಲಿ ಕಂಡು ಹಿಡಿಯಲಾಯಿತು ಎಂದು ಹೇಳುವರು.ಜಂಜಾಟಗಳಿಂದ ದೂರವಿದ್ದು ವಿಶ್ರಾಂತಿ ಬಯಸುವವರಿಗೆ ಇದು ಹೇಳಿ ಮಾಡಿಸಿದಂತ ಪ್ರವಾಸಿ ತಾಣ.ನಿಸರ್ಗದೊಳಗೆ ಇದು ತನ್ನ ನೆಲೆ ಸ್ಥಾಪಿಸಿದ್ದರಿಂದ ಇಲ್ಲಿ ಸುಂದರ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು.ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಸ್ಥಳ ನೋಡುವುದೇ ಪುಣ್ಯ.ಇಂತಹ ಹಲವಾರು ಪ್ರವಾಸಿ ತಾಣಗಳನ್ನು ನೀಡಿದ ಕೀರ್ತಿ ಕಾಳಿ ನದಿಗೆ ಸಲ್ಲುತ್ತದೆ.

ಫೋಟೋ ಕೃಪೆ : google

ಈ ನದಿಗೆ ಕಾಳಿ ಎಂಬ ಹೆಸರು ಬರಲು ಕಾರಣವೇನೆಂದರೆ ನೀರು ಕಪ್ಪಗಿದ್ದು ಭೀಕರವಾಗಿ ಕಾಣುವುದರಿಂದ ಕಾಳಿ ಎಂದು ಹೆಸರು ಬಂದಿತು ಎಂಬ ನಂಬಿಕೆಯಿದೆ.ಈ ನದಿಯು ಹರಿಯುವ ಸ್ಥಳದಲ್ಲೂ ಕರಿಕಲ್ಲುಗಳು ಇವೆ.ಇದು ಕುಶಾವಳಿ ಮೂಲಕ ಯಲ್ಲಾಪುರ ಹಳಿಯಾಳ ಮೂಲಕ ಹರಿದು ಹೋಗುವುದರಿಂದ ಇಲ್ಲಿಯ ಪ್ರಕೃತಿಯ ಚೆಲುವನ್ನು ಸವಿಯಲು ಎರಡು ಕಣ್ಣು ಸಾಲದು ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ.ಇಲ್ಲಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವರು.

ಈ ನದಿಯು ಹಲವಾರು ಉಪನದಿಗಳನ್ನು ಹೊಂದಿದ್ದು, ವಿದ್ಯುತ್ ಉತ್ಪಾದನೆ ,ಕೃಷಿ ಭೂಮಿಗೆ,ಕೈಗಾರಿಕೆಗೆ ಹೀಗೆ ಹಲವಾರು ಉದ್ದೇಶಗಳಿಗೆ ಬಹು ಉಪಯೋಗವಾಗಿವೆ.ಅವುಗಳಲ್ಲಿ ಪ್ರಮುಖವಾದವು ಕಾನೇರಿ,ತಟ್ಟಿಹಳ್ಳಿ ಇವುಗಳಿಗೆ ಅಲ್ಲಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.ಕಾಳಿ ಅಣೆಕಟ್ಟುಗಳನ್ನು ಸೂಪಾ,ಬೊಮ್ಮನಹಳ್ಳಿ ,ಕೊಡಸಳ್ಳಿ,ಕದ್ರಾಗಳಲ್ಲಿ ಕಟ್ಟಲಾಗಿದೆ. ಕದ್ರಾ ಹಿನ್ನೀರಿನ ಎಡದಂಡೆಯಲಿ ಕೈಗಾ ಅಣುಸ್ಥಾವರವಿದೆ. ಸೋಪಾ, ನಾಗಝರಿ, ಕೊಡಸಳ್ಳಿ, ಮತ್ತು ಕದ್ರಾ ,ಈ ನಾಲ್ಕು ಸ್ಥಳಗಳಲ್ಲಿ 14 ವಿದ್ಯುತ್ ಉತ್ಪಾದನಾ ಘಟಕಗಳಿವೆ.ಅಂದರೆ ಕಾಳಿ ನದಿಗೆ ಪ್ರತಿ 40 ಕಿಮೀ ಗೆ ಒಂದು ಅಣೆಕಟ್ಟು ಮತ್ತು ಪ್ರತಿ 11 ಕಿಮೀ ಗೆ ಒಂದು ಉತ್ಪಾದನಾ ಘಟಕವಿದೆ.ಈ ನದಿಯು ಹಲವಾರು ರೀತಿಯಲ್ಲಿ ಸಹಕಾರಿಯಾಗಿದೆ.ಇನ್ನೊಂದು ಬೇಜಾರಿನ ವಿಷಯ ಎಂದರೆ ಈ ಎಲ್ಲ ಅಣೆಕಟ್ಟುಗಳ ಒಂದೂ ಕೂಡ ನೀರಾವರಿಯ ಯೋಜನೆಗೆ ನಿರ್ಮಿಸಿಲ್ಲ. ಎಲ್ಲವೂ ವಿದ್ಯುತ್ ಉತ್ಪಾದನೆಗೋಸ್ಕರ ಮಾತ್ರ.

ಕಾಳಿ ನದಿಯು ಸುಮಾರು 4,00,000 ಜನರಿಗೆ ಜೀವನಾಡಿಯಾಗಿದೆ.ಜನರು ಈ ನದಿಯನ್ನು ಅಪಾರವಾಗಿ ಅವಲಂಬಿಸಿದ್ದಾರೆ.ಕಾರವಾರದ ಜನರ ಜೀವನ ಬೆಳಗುವ ಈ ನದಿ ಮೀನುಗಾರಿಕೆಗೆ ಸೂಕ್ತವಾಗಿದೆ.ಅಲ್ಲದೆ ಈ ನದಿಯು ಬಹುಪಾಲು ವಿದ್ಯುತ್ ಉತ್ಪಾದನೆಗೆ ಅಣೆಕಟ್ಟುಗಳನ್ನು ನಿರ್ಮಿಸಿದೆ.ಈ ನದಿಗೆ ಗಣೇಶಗುಡಿ ಹತ್ತಿರದಲ್ಲಿರುವ ಸೂಪಾ ಅಣೆಕಟ್ಟು ನಿರ್ಮಿಸಲಾಗಿದ್ದು ಪ್ರವಾಸಿಗರ ಸೆಳೆಯುತ್ತದೆ.

ಫೋಟೋ ಕೃಪೆ : google

ಈಗಿನ ದಿನಮಾನದಲ್ಲಿ ಕಾಳಿ ನದಿಯು ತ್ಯಾಜ್ಯಗಳ ತವರಾಗುತ್ತಿದ್ದು ಕೈಗಾರಿಕೆ, ಅಕ್ರಮ ಮರಳುಗಾರಿಕೆ ನದಿಗೆ ನೇರವಾಗಿ ಬಿಡುಗಡೆಯಾಗುವ ತ್ಯಾಜ್ಯಗಳು ನದಿಗೆ ಕುತ್ತಾಗಿವೆ ಅಲ್ಲದೆ ಸುತ್ತಮುತ್ತಲಿನ ಪರಿಸರಕ್ಕೆ ಧಕ್ಕೆಯಾಗಿ ತನ್ನ ಕಳೆಯನ್ನು ಕಳೆದುಕೊಳ್ಳುತಿದೆ. ನದಿ ಮುಖದ ಬಳಿಯಿರುವ ರಾಸಾಯನಿಕ ಮತ್ತು ಕಂಪನಿಗಳು ಪಾದರಸ ಸೇರಿದಂತೆ ಇತರ ವಿಷಕಾರಿ ಅನಿಲಗಳು ಕಾಳಿ ನದಿಯನ್ನು ಸೇರಿ ಕಲುಷಿತಗೊಳಿಸುತ್ತಿವೆ.ಆದ್ದರಿಂದ ಸರ್ಕಾರ ಇದರತ್ತ ಗಮನಹರಿಸಿ,ಜನರು ಕೂಡ ಇದರ ಉಳಿವಿಗಾಗಿ ಶ್ರಮಿಸಬೇಕು ಒಟ್ಟಿನಲ್ಲಿ ಕಾಳಿ ನದಿಯು ನೂರಾರು ರೀತಿಯಲ್ಲಿ ಸಹಾಯವಾದರೂ ಇಂದು ಕೆಲ ಯೋಜನೆಗಳ ಮೂಲಕ ಇದರ ಸುತ್ತಲಿನ ಪರಿಸರ ಮತ್ತು ಕಾಡು ನಾಶವಾಗುತ್ತಿದೆ.ಹಾಗಾಗಿ ಯೋಜನೆಗಿಂತ ಪ್ರಾಕೃತಿಕ ಸಂಪತ್ತು ಕೂಡ ಅಷ್ಟೇ ಮುಖ್ಯ ಎಂಬುದು ಯೋಜನಾಗಾರರು ಅರಿಯಬೇಕು.

ಒಟ್ಟಿನಲ್ಲಿ ಉತ್ತರಕನ್ನಡಜಿಲ್ಲೆಯಲ್ಲಿ ಕಾಳಿ ನದಿ ಹುಟ್ಟಿದರೂ ಇದು ಕಾರವಾರದ ಬಳಿಯಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಏನೇ ಆಗಲಿ ಕಾಳಿ ನದಿಯನ್ನು ಸಂರಕ್ಷಿಸಿ .ನೀರಾವರಿಗೆ ಕೂಡ ಹೆಚ್ವಿನ ಸೌಕರ್ಯ ಒದಗಿಸುವತ್ತ ಸರ್ಕಾರ ಗಮನಹರಿಸಬೇಕು. ಕಾಳಿ ನದಿಯನ್ನು ಸಂರಕ್ಷಿಸೋಣ ಪ್ರವಾಸಿಗರ ತವರಿನ ಸಿರಿಯ ಕಳೆಯನು ಉಳಿಸೋಣ.ಪ್ರವಾಸಿ ತಾಣಗಳನ್ನು ಕಾಪಾಡೋಣ,ನೆಮ್ಮದಿಯ ಒಡಲನು ಬದುಕಿಸೋಣ.

ಹಿಂದಿನ ಸಂಚಿಕೆಗಳು :


  • ಅವಿನಾಶ ಸೆರೆಮನಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading