ಡಾ.ನಾಗರತ್ನ ಜಿ ರಾವ್ ಅವರು ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಇವರು, ದಿನ ನಿತ್ಯ ತಮ್ಮಲ್ಲಿಗೆ ಬರುವ ರೋಗಿಗಳ ಮತ್ತು ಇವರ ನಡುವಿನ ಸಂಭಾಷಣೆಯನ್ನು ಹಾಸ್ಯವನ್ನಾಗಿಸಿದ ಪುಸ್ತಕ ‘ನನ್ನ ಪೇಶಂಟ್ಸ್ ಹಾಗೂ ಇತರ ಪ್ರಸಂಗಗಳು’. ಈ ಪುಸ್ತಕದ ಕುರಿತು ಲೇಖಕಿ ವಸಂತ ಗಣೇಶ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ: ನನ್ನ ಪೇಶಂಟ್ಸ್ ಹಾಗೂ ಇತರ ಪ್ರಸಂಗಗಳು
(ಹಾಸ್ಯ ಪ್ರಸಂಗಗಳ ಸಂಕಲನ)
ಲೇಖಕರು: ನಾಗರತ್ನ ಜಿ ರಾವ್
ಪ್ರಕಾಶನ: ಶ್ರೀನಿವಾಸ ಪುಸ್ತಕ ಪ್ರಕಾಶನ
ಸಂಪರ್ಕ ಸಂಖ್ಯೆ: 9844048406
ನಾಗರತ್ನ ಜಿ ರಾವ್: 9632312296
ಬೆಲೆ: ರೂ. 110.
ಇಂದು ಕಥಾಗುಚ್ಚದ ಸಂಸ್ಥಾಪಕಿ ಶ್ರೀಮತಿ ಲತಾ ಜೋಶಿ, ಲೇಖಕಿ ಶ್ರೀಮತಿ ಜಯಶ್ರೀ ದೇಶಪಾಂಡೆ, ಶ್ರೀಯುತ ಅಣಕು ರಾಮನಾಥ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀಯುತ ಮಲ್ಲಾರೆಡ್ಡಿ ಗುರುಗಳ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಯಾದ ಪುಸ್ತಕ ಇದು.
ಅಂಕಣ ಬರಹಗಳು, ಬೇರೆ ಬೇರೆ ವಿಷಯಗಳ ಕುರಿತು ಲೇಖನಗಳು ಹಾಗೂ ಒಂದು ಲಲಿತ ಪ್ರಬಂಧದ ಪುಸ್ತಕವೂ ಸೇರಿ ಹಲವಾರು ಪುಸ್ತಕಗಳನ್ನ ಪ್ರಕಟಿಸಿರುವ ಶ್ರೀಮತಿ ಶಾಂತಾ ನಾಗರಾಜ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯನ್ನು ಶ್ರೀಮತಿ ಜಯಶ್ರೀ ದೇಶಪಾಂಡೆ ಅವರು ಬರೆದಿದ್ದಾರೆ.
ಲೇಖಕಿಯ ಕುರಿತು ನಾನೇನೂ ಹೆಚ್ಚು ಹೇಳುವಷ್ಟಿಲ್ಲ. ಕನ್ನಡ ಕಥಾಗುಚ್ಚದಲ್ಲಿ ದಿನವೂ ತಮ್ಮ ಹಾಸ್ಯ ಬರಹಗಳಿಂದ ನಗೆ ಉಕ್ಕಿಸುವ ಹಾಗೆಯೇ ಪುಸ್ತಕ ಅವಲೋಕನದಲ್ಲಿ ಪುಸ್ತಕಗಳ ವಿಮರ್ಶೆಯ ಮೂಲಕ ಎಲ್ಲರಿಗೂ ಪರಿಚಿತರಾದವರು ನಾಗರತ್ನ ಜಿ ರಾವ್. ವೃತ್ತಿಯಿಂದ ಡಾಕ್ಟರ್ ಆಗಿರುವ ಇವರು, ದಿನ ನಿತ್ಯ ತಮ್ಮಲ್ಲಿಗೆ ಬರುವ ರೋಗಿಗಳ ಮತ್ತು ಇವರ ನಡುವಿನ ಸಂಭಾಷಣೆಯನ್ನು ಹಾಸ್ಯವಾಗಿ ಬರೆಯುವ ಮೂಲಕ ನಮ್ಮೆಲ್ಲರನ್ನೂ ನಗೆಗಡಲಿನಲ್ಲಿ ಮುಳುಗುವಂತೆ ಮಾಡುತ್ತಾರೆ.

ಇಲ್ಲಿರುವ ಹಾಸ್ಯ ಪ್ರಸಂಗಗಳನ್ನು ಕಥೆ ಕಾದಂಬರಿಯಂತೆ ಗಂಟೆಗಳ ಲೆಕ್ಕದಲ್ಲಿ ಸಮಯ ಮಾಡಿಕೊಂಡು ಓದಬೇಕು ಎಂದೇನಿಲ್ಲ. ಕಾಫಿ ಕುಡಿಯುವಾಗಲೋ, ಮಲಗುವ ಮುನ್ನವೋ ಯಾವಾಗಲಾದರೂ ಒಂದೆರಡು ನಿಮಿಷಗಳ ಕಾಲದಲ್ಲಿ ಓದಿ ಮುಗಿಸಬಹುದಾದ ಸಣ್ಣ ಸಣ್ಣ ನಗೆ ಬರಹಗಳು ಇವು. ಆದರೆ ಓದಿ ಮುಗಿದ ಮೇಲೆ ನೆನಪಾದಾಗಲೆಲ್ಲ ಮುಖದಲ್ಲೊಂದು ನಗು ಮೂಡುವುದು ಗ್ಯಾರಂಟಿ. ಕೆಲವೊಂದನ್ನು ನೆನಸಿಕೊಂಡಾಗಲೆಲ್ಲ ನಗು ಉಕ್ಕುಕ್ಕಿ ಬರುತ್ತದೆ.
ಇಂದು ಪುಸ್ತಕ ಬಿಡುಗಡೆಯ ಸಮಯದಲ್ಲಿ ಶ್ರೀಯುತ ಅಣಕು ರಾಮನಾಥ್ ಸರ್ ಅವರು ಹೇಳಿದಂತೆ ಇವು ಡಾಕ್ಟರ್ ಬರಹಗಳು ಆದ್ದರಿಂದ ಬೆಳಗ್ಗೆ ಮೂರು, ಮಧ್ಯಾಹ್ನ ಮೂರು, ರಾತ್ರಿ ಮಲಗುವ ಮೊದಲು ಮೂರು ಲೇಖನಗಳನ್ನು ಓದಬಹುದು.
ದಿನ ನಿತ್ಯದ ಜೀವನದ ಜಂಜಾಟಗಳು, ಏಕತಾನತೆಯಿಂದ ಬೇಸರವಾದಾಗ ಓದಿದರೆ ಮನಸ್ಸಿಗೆ ಹರುಷ ಸಿಗುವಂತಹ ಲೇಖನಗಳು ಇವು.
ಪುಸ್ತಕದಲ್ಲಿರುವ ನಗೆ ಬರಹಗಳ ಒಂದೆರಡು ಸ್ಯಾಂಪಲ್ ಇಲ್ಲಿದೆ. ಪೂರ್ತಿ ಓದಲು ಪುಸ್ತಕಕ್ಕಾಗಿ ಮೇಲೆ ಹೇಳಿರುವ ನಂಬರ್ ಹಾಗೂ ನಾಗರತ್ನ ಜಿ ರಾವ್ ಅವರನ್ನು ಸಂಪರ್ಕಿಸಿ.

- ನನ್ನ ಪೇಷಂಟ್
ಜಯಮ್ಮ ,ಅವಳ ಗಂಡ ಇಬ್ಬರೂ ಬಿಪಿ ,ಶುಗರ್ ಚೆಕ್ ಮಾಡಿಸಿಕ್ಕೊಳ್ಳಲು ಬಂದಿದ್ರು.ಜಯಮ್ಮ ನೂರು ರೂ ಮಾತ್ರ ಕೊಟ್ಳೂ.ನಾನು ಧೈರ್ಯ ಮಾಡಿ ಕೇಳಿಯೇಬಿಟ್ಟೆ.
“ಜಯಮ್ಮ ನಿನ್ನ ಗಂಡನ ಫೀ ಕೊಟ್ಟಿಲ್ಲ “.
“ಯವ್ವಾ ನಿಮ್ಗೆ ಕ್ವಟ್ಟಿರೋದೇ ಅವರ ಪೀಸು.”
“ಹಾಗಿದ್ರೆ ನಿಂದು??”
“ಏನ್ರವ್ವಾ ಇಂಗೆ ಕಾಣ್ದೋರಂಗೆ ದುಡ್ಡು ಕ್ಯಾಳೀರಾ? ನಾನೇನ್ ನಿಮ್ಗೆ ಅರೀದೋಳಾ?ನೀವೇನ್ ನಮ್ಗೆ ಕಾಣ್ದೋರಾ? ಯೆಸ್ಟು ದಿನ್ದಿಂದ ಬರ್ತಾ ಇವ್ನೀ. ನಿಮ್ಗೆ ಕ್ವಡೋ ದುಡ್ಡು ಮಿಗಿಸಿದ್ರೆ ನಾನು ಕಾಸಿನಸರ ತಕ್ಕೊಂಡು ಬಿಡ್ತಿದ್ದೆ.ನಿಂ ಖರ್ಚೆಲ್ಲಾ ಈಗ ನಾನೇ ನೋಡ್ಕೊಳೋ ಅಂಗಾಗಿದೆ…
ಮೂರ್ಕಾಸು ಕೊಟ್ಟು ಮಾತಿಡೂಂದು ಆರ್ಕಾಸು ಕೊಟ್ಟು ನಿಲ್ಸೂ ಅನ್ನೋ ಹಾಗಾಯ್ತು ನನ್ನ ಪರಿಸ್ಥಿತಿ. ಹೋಗವ್ವಾ ತಾಯಿ ಅಂತ ಕಳಿಸಿಕೊಟ್ಟೆ.
ಅಂದ್ಹಾಗೆ ನಿಂ ಡಾಕ್ಟರ್ ಖರ್ಚಿಗೆ ನೀವೆಷ್ಟು ಕೊಡ್ತೀರಿ?
- ನನ್ನ ಪೇಷಂಟ್
ನಿಂಗಮ್ಮಂಗೆ ಫುಡ್ ಪಾಯ್ಸನ್ ಆಗಿತ್ತು.
“ನಿಂಗವ್ವಾ ನಿಮ್ಮನೇಲಿ ಏನೇನು ತಿಂದಿ??”
“ಏ ನಮ್ಮನ್ಯಾಗೆ ಒಲೇ ಅತ್ಸೇ ಮೂರ್ದಿನ ಆಯ್ತು.ಕಾರ್ತೀಕ ಕಳೀತಲ್ವಾ..ರಾಜಮ್ಮನ ಮನ್ಯಾಗೆ ಮೂರು ಮೊಟ್ಟೆ, ಕೆಂಪಿ,ಶ್ಯಾಮ್ಲಿ ಮನ್ಯಾಗೆ ಪೆಷಲ್.ನಾಗಕ್ಕನ ಮನ್ಯಾಗೆ ಪೂರಿ.ಇನ್ನೂ ಮರ್ದಿನ ಕರೆದವ್ರೇ..ನೀವೊಳ್ಳೆ ..ಇನ್ನು ನಮ್ಮನ್ಯಾಗೆ ಏನು ತಿನ್ಲೀ??”.
- ವಸಂತ ಗಣೇಶ್
