ನಾನು ನಿಘಂಟುಗಳಲ್ಲಿ ಬದುಕುವುದಿಲ್ಲ
ಏನೆಲ್ಲ ಇದೆ ನಿಘಂಟಿನಲ್ಲಿ
ಮಳೆ ವರ್ಷಧಾರೆ ಕುಂಭದ್ರೋಣ
ನದಿ ನೆಗಸು
ಹಿಂಡಿದರೆ ಹನಿ ನೀರೂ ಇಲ್ಲ
ದಾರಿ ರಾಜಮಾರ್ಗ ಕೈಮರ ಎಲ್ಲ ಇವೆ
ನಡೆಯೂ ಕೂಡ
ನಡೆಯಬೇಕಾದ್ದು ನಾವೇ
ಏನೆಲ್ಲ ಇವೆ ನಿಘಂಟಿನಲ್ಲಿ
ಕವಿತೆಯ ಎಲ್ಲ ಪದಗಳೂ
ಹೊಟ್ಟೆಯಲ್ಲೇ
ಕವಿತೆ ಮಾತ್ರ ಇಲ್ಲ
ಇಲ್ಲ, ಕೋಶಗಳಲ್ಲಿ ಕೈಕಾಲು ಕೊಕ್ಕರಿಸಿ
ತಲೆಯದುಮಿಇಷ್ಟು ಉಸಿರೂ ಆಡದ
ಇಕ್ಕಟ್ಟಿನಲ್ಲಿ ನರಳಿ
ಸಾಯುವುದಿಲ್ಲ
ಕಂಬ ಒಡೆದು ಕೈಕಾಲು ಚಾಚಿ
ಎದೆ ಸೆಟೆಸಿ ಬಿಡುಬೀಸಾಗಿ
ಉಸಿರಾಡುತ್ತೇನೆ
ತಲೆಯೆತ್ತಿ ನಡೆಯುತ್ತೇನೆ
ಸರಿ ತಪ್ಪಿನ ತಕ್ಕಡಿ ಹಿಡಿದು ತೋರು
ಬೆರಳೆತ್ತಿ ಸುತ್ತಿಗೆ ಬಡಿದು
ತೀರ್ಪು ಕೊಡುವವರು
ಕಾದಿರಲಿ ಅಲ್ಲಿ
ನನಗಿರಲಿ ನನ್ನ ಪಾಡು
ಜಾಡು ನಾನೇ
ಕಡಿಯುವೆ
ಬಿಟ್ಟು ಬಿಡಿ
* ಗೋವಿಂದ ಹೆಗಡೆ
#ಕವನ