ದೊಡ್ಡಬಳ್ಳಾಪುರದ ನಾಗರಕೆರೆಗೆ ಕೊಳಚೆ ನೀರು ಬಂದು ಸೇರುತ್ತಿದ್ದು, ಕೆರೆಯ ಅಂದದ ಜೊತೆಗೆ ಜಲಜೀವರಾಶಿಗಳಿಗೂ ತೊಂದರೆಯಾಗುತ್ತಿದೆ.ಮತ್ತು ಸಣ್ಣ ಮಕ್ಕಳು ಈಜಾಡಲು ಇಲ್ಲಿಗೆ ಬರುತ್ತಿದ್ದು, ಆತಂಕಕಾರಿ ವಾತಾವರಣವನ್ನು ಸೃಷ್ಟಿಸಿದೆ. ಕೆರೆಯ ಸ್ವಚ್ಛತೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿವಹಿಸಿದರೆ ಸುಂದರ ಕೆರೆ ನಮ್ಮದಾಗುವುದು ಎನ್ನುತ್ತಾರೆ ಸಮಾಜಕಾರ್ಯಕರ್ತ ಚಿದು ಯುವ ಸಂಚಲನ.
ದೊಡ್ಡಬಳ್ಳಾಪುರ ನಗರದ ಭಾಗವಾಗಿರುವ ಈ ಕೆರೆಯು ನಗರದ ಅಂದವನ್ನು ಹೆಚ್ಚಿಸ ಬೇಕಾಗಿತ್ತು ಅಥವಾ ಸಮೃದ್ಧವಾಗಿ ತುಂಬಿ ಬೇರೆ ಎಲ್ಲಾ #ಕೆರೆಗಳನ್ನು ನಿರ್ಮಿಸಿದ ಮುಖ್ಯ ಉದ್ದೇಶದ ಕರ್ತವ್ಯದಂತೆ ಸಮೃದ್ಧ ಜಲದಿಂದ ಜೀವರಾಶಿಗಳಿಗೆ, ಕೃಷಿಕರಿಗೆ ಹಾಗೂ ನಗರವಾಸಿಗಳಿಗೆ ಉಪಯೋಗವಾಗ ಬೇಕಿತ್ತು. ದೊಡ್ಡಬಳ್ಳಾಪುರದಲ್ಲಿ ಹರಿವ ಅರ್ಕಾವತಿಯು ಕೆರೆಗಳ ಸರಣಿ ಎಂದೇ ಕರೆಯಲ್ಪಡುತ್ತದೆ.

ಆ ಸರಣಿಯಲ್ಲಿ ಬರುವ 17ನೇ ಕೆರೆಯೇ #ನಾಗರಕೆರೆ, ಸಹಜ ಮಳೆಗೆ ತುಂಬಿ ಹರಿಯುತ್ತಿದ್ದ ಈ ಕೆರೆಯು ಈ ಬಾರಿ ಕೋಡಿ ಬಿದ್ದದ್ದು 23 ವರ್ಷಗಳ ತದನಂತರ ಅದು ಸಹ ಈ ಬಾರಿ ಸುರಿದ ಅತಿವೃಷ್ಟಿಯ ಮಳೆಯ ಕೊಡುಗೆ. ಮಳೆ ನೀರಿನಿಂದಲೇ ಕೆರೆ ತುಂಬಿದೆ ಎಂದರೆ ಅದು ಸಹ ಒಪ್ಪುವ ಮಾತಾಗುವುದಿಲ್ಲ. ಏಕೆಂದರೆ ದೊಡ್ಡಬಳ್ಳಾಪುರ ನಗರದ ಕೊಳಚೆ ನೀರು ಅರ್ಧ ಕೆರೆಯನ್ನೇ ಆವರಿಸಿಬಿಟ್ಟಿತ್ತು. ನಗರದ ಕೊಳಚೆ ನೀರು ಕೆರೆಗೆ ಸೇರಬಾರದು ಎಂದು ನಗರಸಭೆ 42 ಕೋಟಿಗಳನ್ನು ಖರ್ಚು ಮಾಡಿ ಅರ್ಕಾವತಿ ನದಿ ಭಾಗವೇ ಆಗಿರುವ ಮುಂದಿನ ಕೆರೆಯಾದ ಚಿಕ್ಕ ತುಮಕೂರು ಕೆರೆಯಲ್ಲಿ ಶುದ್ಧೀಕರಣ ಘಟಕವನ್ನು ಮಾಡಿ ಅದನ್ನು ನಿರ್ವಹಿಸಲು ಬಾರದೆ ಆ ಕೆರೆಯನ್ನು ಸಹ ಕಲುಷಿತಗೊಳಿಸಿ ನದಿ ಪಾತ್ರವನ್ನು ಕೊಳಚೆ ನೀರನ್ನಾಗಿ ಪರಿವರ್ತಿಸಿದ ಕೊಡುಗೆ ನಗರಸಭೆಗೆ ಸಲ್ಲತಕ್ಕದ್ದು.
ಯಾವುದೇ ಯಂತ್ರೋಪಕರಣ ಬಳಸದೆ ಇಂದಿನ ವಿಷಪೂರಿತ ಜಗತ್ತಿನಲ್ಲಿ ನೈಸರ್ಗಿಕ ಶುದ್ಧೀಕರಣ ಮಾಡುವ ಪಣತೊಟ್ಟವರು ನಗರಸಭೆಯವರು. ನಾಗರ ಕೆರೆಯೊಳಗೆ 21 ಮ್ಯಾನ್ ಹೋಲ್ ಗಳನ್ನು ನಿರ್ಮಿಸಿ ಅದನ್ನು ನಿರ್ವಹಿಸಲು ಬಾರದೆ ಸದಾ ಕೆರೆಯೊಳಗೆ ನೀರು ಹರಿವಂತೆ ಮಾಡಿದವರು. ಈ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಯುವ ಸಂಚಲನ ತಂಡದ ವತಿಯಿಂದ ತಜ್ಞರನ್ನು ಕರೆಸಿ ಒಂದು ವರದಿಯನ್ನು ಸಿದ್ಧಪಡಿಸಿ ನೀಡಿದರು ಅದರ ಬಗ್ಗೆ ಕಿಂಚಿತ್ತೂ ಗಮನ ಕೊಡದೆ ಸಮಸ್ಯೆಯನ್ನು ಇನ್ನೂ ದ್ವಿಗುಣಗೊಳಿಸುತ್ತಲೇ ಇರುವವರು ನಮ್ಮ ಇಲಾಖೆಯವರು.

ಕೆಲವು ತಿಂಗಳುಗಳ ಹಿಂದೆ ಜೀವವೈವಿಧ್ಯತೆಯ ದಾಖಲಾತಿಯ ಸಲುವಾಗಿ ಪಕ್ಷಿಗಳ ಸಮೀಕ್ಷೆ ನಡೆಸಿದಾಗ ನೂರಕ್ಕೂ ಹೆಚ್ಚು ವೈವಿಧ್ಯತೆಯ ಪಕ್ಷಿಗಳು ನಮಗೆ ಕಂಡುಬಂದವು. ವಿಶೇಷವಾದ ಸರೀಸೃಪಗಳು ಸಹ ಆಗಾಗ ನಾನು ಕಾಣುತ್ತಲೇ ಇರುತ್ತೇನೆ. ಈ ಬಾರಿಯ ವಿಶೇಷ ಸಂಗತಿಯೇನೆಂದರೆ ಕೆರೆಯಲ್ಲಿ ನೀರು ಇಲ್ಲದಾಗ ನಗರದ ತಿಪ್ಪೆಗುಂಡಿ ಎಂದೇ ಪರಿಗಣಿಸಿದ್ದರು. ಈಗ ಕೆರೆಯ ಸ್ವಚ್ಛತೆ ಬಗ್ಗೆ ಗಮನಹರಿಸಿರುವುದು ವಿಶೇಷ ಸಂಗತಿ ಹಾಗೂ ಸಂತೋಷದ ವಿಚಾರವೂ ಹೌದು. ಆದರೆ ಸ್ವಚ್ಛತೆ ಹೆಸರಿನಲ್ಲಿ ಅಲ್ಲಿನ ಜೀವವೈವಿಧ್ಯತೆಗೆ ಧಕ್ಕೆ ಆಗದಂತೆ ಜವಾಬ್ದಾರಿ ವಹಿಸುವುದು ಸಹ ಮುಖ್ಯವಾಗಿದೆ.

ನಾಗರ ಕೆರೆಯ ಜಲ ಕಳೆಯನ್ನು ತೆರವುಗೊಳಿಸುವ ವಿಚಾರವು ಈಗ ಪ್ರಚಲಿತವಾಗಿದೆ. ಜಲ ಕಳೆಯು ಸಹ ಅದರದೇ ಆದಂತಹ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತದೆ ಹಾಗೂ ಕೆಲ ಜಲಚರಗಳು ಸಹ ಅವುಗಳನ್ನು ಅವಲಂಬಿಸಿರುತ್ತದೆ. ಈ ಸಂಬಂಧಕ್ಕೆ ಧಕ್ಕೆ ಬರದಂತೆ ಹಾಗೂ ಕೆರೆಯ ಸ್ವಚ್ಛತೆಯನ್ನು ಕಾಪಾಡುವಂತೆ ಕಾರ್ಯ ರೂಪಿಸುವ ಅನಿವಾರ್ಯತೆ ಹೆಚ್ಚಾಗಬೇಕಿದೆ. ಕೆರೆ ಕೋಡಿ ಬಿದ್ದ ಸಂದರ್ಭದಿಂದ ನಾನು ಗಮನಿಸುತ್ತಿರುವಂತೆ ನಗರವಾಸಿಗಳಲ್ಲಿ ನೀರು ಹರಿಯುವ ಸುಂದರ ದೃಶ್ಯವನ್ನು ಜಾತ್ರೆಯ ಸಂಭ್ರಮದಂತೆ ಸಂಭ್ರಮಿಸುತ್ತಿದ್ದಾರೆ, ಬಹುಶಃ ಪ್ರಕೃತಿ ಶಕ್ತಿ ಎಂದರೆ ಇದೇ ಅನಿಸುತ್ತದೆ. ತನ್ನೆಡೆಗೆ ಎಲ್ಲರನ್ನೂ ಸೆಳೆವ ಆಕರ್ಷಿಸುವ ಶಕ್ತಿ ಅದಕ್ಕಿದೆ.

ಪ್ರಕೃತಿಯೇ ದೇವರು ಎಂದು ಪೂಜಿಸುವ ಸಂಸ್ಕೃತಿ ಸಂಸ್ಕೃತಿಯ ಜೊತೆಗೆ ಅದನ್ನು ಗೌರವಿಸುವ ಹಾಗೂ ಸ್ವಚ್ಛವಾಗಿ ಕಾಪಾಡುವ ಸಾಮಾನ್ಯ ಜ್ಞಾನವನ್ನು ನಾವುಗಳು ಬೆಳೆಸಿಕೊಳ್ಳಬೇಕಿದೆ.
ಸೂಚನೆ :
• ಕೆರೆಯ ನೀರು ಕೊಳಚೆ ನೀರಿನಿಂದ ತುಂಬಿದ್ದು ಅದರಲ್ಲಿ ಸಣ್ಣ ಮಕ್ಕಳನ್ನು ಪೋಷಕರು ಆಡಲು ಬಿಟ್ಟು ಖುಷಿ ಪಡುತ್ತಿದ್ದಾರೆ. ದಯಮಾಡಿ ಎಚ್ಚರವಹಿಸಿ. ಮಕ್ಕಳಿಗೆ ಅದರಿಂದ ತೊಂದರೆಯಾಗುವ ಸಾಧ್ಯತೆ ಇದೆ.

• ಕೆರೆಗೆ ನೀರು ಬಂದಿರುವ ಕಾರಣ ಮಕ್ಕಳು ಹಾಗೂ ಯುವಜನರು ನೀರಿಗೆ ಹೇಳಿದ್ದು ಈಜು ಹೊಡೆಯುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಅದನ್ನು ದಯಮಾಡಿ ತಡೆಯಬೇಕಿದೆ.
• ಕೆರೆಯ ಆವರಣದಲ್ಲಿರುವ ಪಕ್ಷಿಗಳನ್ನು ಬೇಟೆಯಾಡುವ ಕಾರ್ಯವನ್ನು ತಡೆಯಬೇಕಿದೆ.
• ಸಂಪೂರ್ಣವಾಗಿ ಲವಣಾಂಶವನ್ನು ಹೀರಿ ಬೆಳೆದಿರುವ ಹಾಗೂ ತುಂಬ ದೊಡ್ಡ ಗುಂಪಾಗಿ ಬೆಳೆದಿರುವ ಜಲ ಕಳೆಯನ್ನು ತೆರವುಗೊಳಿಸಿ ಹೊಸದಾಗಿ ಬೆಳೆಯುತ್ತಿರುವ ಕಳೆಗಳ ಗುಂಪುಗಳನ್ನು
ಕೆರೆಯಲ್ಲಿ ಉಳಿಸಿ ಪಕ್ಷಿ ಸಂಕುಲಕ್ಕೆ ಅನುವು ಮಾಡಿಕೊಡಬೇಕಾಗುತ್ತದೆ.ತೆರವುಗೊಳಿಸಿದ ಜಲಕಳೆಯನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕಿದೆ ,ಮಾಡದಿದ್ದಲ್ಲಿ ಸಮಸ್ಯೆಯು ದ್ವಿಗುಣಗೊಳ್ಳುತ್ತದೆ.
- ಚಿದು ವಾರನ್ (ಪರಿಸರವಾದಿ, ಲೇಖಕರು,ಯುವ ಸಂಚಲನ)
