“ನಮ್ಮೂರ ಅಗಸ್ಯಾಗ” ಪುಸ್ತಕ ಶಿಕ್ಷಕ ಮಲ್ಲಪ್ಪನವರ ಪ್ರಥಮ ಕೃತಿ. ಪುಸ್ತಿಕೆಯ 36 ಲೇಖನಗಳು ಸುಂದರ ಸುಲಲಿತ.ಸಾಧಕರ ಬದುಕನ್ನು ಕಟ್ಟಿಕೊಡಲು, ಪರಿಚಯಿಸಲು ಲೇಖಕರು ಶ್ರಮಿಸಿದ್ದಾರೆ.ಕೃತಿಯ ಪರಿಚಯವನ್ನು ಲೇಖಕರಾದ ಡಾ.ಪ್ರಕಾಶ ಬಾರ್ಕಿ ಅವರು ಓದುಗರಿಗೆ ಮಾಡಿಕೊಟ್ಟಿದ್ದಾರೆ.ಮುಂದೆ ಓದಿ…
“#ನಮ್ಮೂರ_ಅಗಸ್ಯಾಗ” ಎಂಬ “ಲೇಖನಗಳ ಮಾಲೆ” ಹೊದ್ದು ಅಲಂಕೃತವಾದ ಪುಸ್ತಕದ ಆಕರ್ಷಕ ಮುಖಪುಟ ಮತ್ತು ನಮ್ಮ #ಹಾವೇರಿ_ಜಿಲ್ಲೆಯ ಲೇಖಕನ ಬರಹಗಳು ಸಂಗ್ರಹ ಆವಾಗಾವಾಗ ಕೈ ಬೀಸಿ ಕರೆಯುತಿತ್ತು. ಕಣ್ಣಾಡಿಸಲು ಸಮಯ ಕೂಡಿರಲಿಲ್ಲ.
ಹಳ್ಳಿಯ ಬಾಲ್ಯ ಜೀವನ, ಬಡತನ ಮತ್ತು ಕನ್ನಡ ಮಾಧ್ಯಮ ಸರ್ಕಾರಿ ಶಾಲಾ ಬದುಕು ಅದೇಂಥವರನ್ನೂ ಮಾದರಿಯಾಗಿ ಬದುಕಲು, ಬರೆಯಲು ಪ್ರೇರೆಪಿಸುತ್ತದೆ ಎಂಬ ನನ್ನ ಗಹನ ನಂಬಿಕೆ ಇನ್ನಷ್ಟೂ ಬಲವಾಗಿದ್ದು ಮೊಟೇಬೆನ್ನೂರಿನ ಲೇಖಕ ಮತ್ತು ಶಿಕ್ಷಕ ಶ್ರೀ #ಮಲ್ಲಪ್ಪ_ಕರೇಣ್ಣನವರ” ಅವರ ಬರಹಗಳನ್ನು ಓದಿದಾಗ.

“#ನಮ್ಮೂರ_ಅಗಸ್ಯಾಗ” ಪುಸ್ತಕ ಶಿಕ್ಷಕ ಮಲ್ಲಪ್ಪನವರ ಪ್ರಥಮ ಕೃತಿ. ಪ್ರಬುದ್ಧ ಬರಹಗಳ ಅನಾವರಣ. ಪ್ರತಿ ಬರಹವು ಸರಾಗವಾಗಿ ಓದಿಸಿಕೊಳ್ಳುತ್ತವೆ. ಪುಸ್ತಿಕೆಯ 36 ಲೇಖನಗಳು ಸುಂದರ ಸುಲಲಿತ. ಬಾಲ್ಯದ ಜೀವನ, ಬಡತನದ ಬವಣೆಗಳು, ಹಳ್ಳಿ ಬದುಕಿನ ಮಗ್ಗುಲುಗಳು, ಹಾಸ್ಟೆಲ್ ಜೀವನ, ಕಾಲೇಜು ದಿನಗಳನ್ನ ಮೆಲುಕು ಹಾಕುತ್ತಲೆ…. ಸಾಧಕರ ಬದುಕನ್ನು ಕಟ್ಟಿಕೊಡಲು, ಪರಿಚಯಿಸಲು ಲೇಖಕರು ಶ್ರಮಿಸಿದ್ದಾರೆ.
ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವು ಎಲ್ಲ ರೀತಿಯ ಸಾಹಿತ್ಯ ಸ್ತರಗಳನ್ನು ತಲುಪುವ ತುಡಿತದಿಂದ ಬರೆದಂತಿವೆ.
ಓದಿಸಿಕೊಳ್ಳುವ ಮೋಡಿ ಬರಹಗಳ ಸರದಾರ, ಶಿಕ್ಷಕ ಮಲ್ಲಪ್ಪನವರ ಲೇಖನಿಯಲ್ಲಿ ಮಂತ್ರಮುಗ್ಧಗೊಳಿಸುವಂತೆ ಬರೆಯುವ ಕಸುವಿದೆ. ನಮ್ಮ ನೆಲದ ಘಮವಿದೆ.
ಬಡತನದ ಬದುಕಿನಿಂದ ಮೈ ಕೊಡವಿ ಅರಳಿದ ಬಾಲ್ಯದ ಆಟಗಳು, ಹಸಿವನ್ನು ಹಿಮ್ಮೆಟ್ಟಿಸಿದ “ಅನಾರ್ಕಲಿ” ತಿಂಡಿ, ವಯೋಸಹಜ ಅರಳಿದ ಭಗ್ನ ಪ್ರೇಮ ಪಾಶ, ಭವಿಷ್ಯಕ್ಕೆ ಕಟ್ಟಿಕೊಂಡ “ಸರ್ಕಾರಿ ನೌಕರಿ”, ಕೆಲಸದ ಜೊತೆಗಿನ ಸಾಹಿತ್ಯ ಸೇವೆ, ಸಾಧಕರನ್ನು ಪರಿಚಯಿಸುವ ಸಹೃದಯ ಎಲ್ಲವೂ ಕೃತಿಯ ಜೀವಾಳ.
ಬಾಲ್ಯದ ತುಂಟಾಟ, ಕಾಲೇಜು ಜೀವನದ ಜೂಟಾಟ, ಕೃಷಿ, ಭಾವ ಬಂಧನ, ಹಸಿವು, ಹಾಸ್ಟೆಲ್ ಬದುಕು, ಬಡತನ ಬೇಗುದಿ, ಪರಿಸರ, ರಾಜಕಾರಣ, ಆಟೋಟ,ದೇಗುಲ ದರ್ಶನ ಹೀಗೆ ವೈವಿಧ್ಯ ಲೇಖನಗಳ ಏಕತೆಯಂತಿರುವ ಕೃತಿ ಪುಸ್ತಕದ ಹರವನ್ನು ಓದುಗನಿಗೆ ಇನ್ನಷ್ಟೂ ವಿಸ್ತರಿಸುತ್ತದೆ.
ಲೇಖಕರು ತಮ್ಮ ಸುತ್ತಲೂ ನಡೆದ, ತಮ್ಮದೇ ಬದುಕಿನ ನೆನಹುಗಳನ್ನ ಕಣ್ಣಿಗೆ ಕಟ್ಟುವಂತೆ ಅತ್ಯಂತ ಸರಳವಾಗಿ ಕಥೆಯಂತೆ, ಲಲಿತ ಪ್ರಬಂಧದಂತೆ ಬಿತ್ತಿದ್ದಾರೆ.
ಬಾಲ್ಯದಲ್ಲಿ #ತೆಂಗಿನ_ಮರದ ಮಟ್ಟಿಯ ಬ್ಯಾಟ್’ನಿಂದ ಆಡಿದ ಕ್ರಿಕೆಟ್, ಕ್ರಿಕೆಟ್ ಆಡಿಸಲು ಹೋಗಿ ಸಗಣಿ ಮಾರಬೇಕಾದ ಪ್ರಸಂಗ “ಪಾಪ…!! ಎನ್ನುವಷ್ಟು ಕನಿಕರಪಡುವಂತಿದೆ. ದನಕಾಯುವ ನೆಪ, ಖೋ ಖೋ ಮೇಲಿನ ಅಗಾಧ ಪ್ರೀತಿ, ತಪ್ಪಾದ ತೀರ್ಪುಗಾರನಿಂದ ಊರಿಗೂರೆ ಬಡಿದಾಡಿಕೊಂಡ ಪ್ರಸಂಗ ಯಥಾವತ್ತಾಗಿ ಕಣ್ಮುಂದೆ ನಡೆದಂತೆ ಉಲ್ಲೇಖಿಸಿದ್ದೀರಿ. ನಮ್ಮ ಬಾಲ್ಯದ ದಿನಗಳು ಕಣ್ಮುಂದೆ ಹಾದು ಹೋದವು.

(ನಮ್ಮೂರ ಅಗಸ್ಯಾಗ ಕೃತಿ ಲೇಖಕರು ಶ್ರೀ ಮಲ್ಲಪ್ಪ ಕರೇಣ್ಣ)
ಅವ್ವನ ಸೀರೆಯ ಚುಂಗಿನ ಭಾವಲೋಕ ವರ್ಣನಾತೀತ, ಹಲವು ಮದುವೆಯಲ್ಲಿ ಯಾಮಾರಿಸಿ ಉಂಡ ಊಟ, ಹೋಟೆಲ್ ಮಾಲೀಕನಿಗೆ ಚಳ್ಳೆಹಣ್ಣು ತಿನ್ನಿಸಿದ ಪರಿ ಕಚಗುಳಿಯಿಡುವಂತಿದ್ದರೂ.. ಬಡತನದ ಅನಾವರಣದಂತಿವೆ.
ಹರೆಯ ಉಕ್ಕುವಾಗ ಚಿಗರೊಡೆದ ಪ್ರೀತಿ, ಕಾಲೇಜಿನ ತೇಜು, ಕೊನೆಯದಾಗಿ ಲವ್ಲಿ ಮೇಡಮ್ ಕಥೆ ವರ್ಣರಂಜಿತ.
ಒಬ್ಬಂಟಿ ಪಯಣ ಹಿಡಿ #ಧೈರ್ಯ ನೀಡಿದ ಪರಿ ದಾಖಲೆಗೆ ಬಹುಯೋಗ್ಯ ಲಲಿತ ಪ್ರಬಂಧ. ಪ್ರೇಮ ಸ್ಮಾರಕವಾದ “ರೇನಾಲ್ಡ್ಸ್ ಜೆಟರ್ ಪೆನ್ ಅಲ್ಲಲ್ಲಿ ತಾಜಮಹಲ್’ನಂತೆ ಕಂಗೊಳಿಸಿದೆ.
ಮಲ್ಲಪ್ಪ ಸರ್..
ನಿಮ್ಮ ಕೃತಿ ನೆನಪಿನ ಮೆರವಣಿಗೆಯ ಪಲ್ಲಕ್ಕಿ. ಈಗಿನ ಬಡ, ಮಧ್ಯಮ ಕುಟುಂಬದ ವಿದ್ಯಾರ್ಥಿಗಳಿಗೆ ಅಂದಿನ ಬವಣೆ ತಿಳಿದು ಇನ್ನಷ್ಟು ಓದುವಂತೆ ಪ್ರೇರೆಪಿಸುತ್ತೆ.
ನಿಮ್ಮ “ರೇನಾಲ್ಡ್ ಜೆಟರ್” ಲೇಖನಿಯಲ್ಲಿ ವಿಡಂಬನೆ, ಭಾವ ಬದುಕು, ವಿಶ್ಲೇಷಣೆ, ಸಾಮಾಜಿಕ ಹೊಣೆ, ನೆನಪಿನ ಬುತ್ತಿ, ನೈತಿಕ ಪಾಠ, ತೀವ್ರ ತುಡಿತ, ಹೊಸತನಕ್ಕೆ ಹಾತೊರೆಯುವಿಕೆ ಇದೆ.
ನಿರ್ಧಿಷ್ಟ ವಿಷಯಗಳನ್ನ ಕಣ್ಣಿಗೆ ಕಟ್ಟುವಂತೆ ಬರೆಯುವ ತಾಕತ್ತಿದೆ. ಮೋಡಿ ಮಾಡುವ ಆಳ ಸಾಹಿತ್ಯ ಜ್ಞಾನವು ಒಲಿದು ಬಂದಿದೆ. ಬರವಣಿಗೆಯಲ್ಲಿ ಗಟ್ಟಿತನ ಮೊನಚಾಗಿದೆ. ಇನ್ನೊಂದಿಷ್ಟು ಕ್ರೀಯಾಶೀಲತೆಯ ಮಸಿ(Ink) ತುಂಬಿದರೆ ಅದ್ಭುತ ಕೃತಿಗಳು ಮೈದಳೆಯುವುದರಲ್ಲಿ ಸಂಶಯವಿಲ್ಲ.
ಓದುಗರೆ.. ನಮ್ಮ ನೆಲದ ಲೇಖಕನ ಪ್ರಥಮ ಕೃತಿಯನ್ನು ಓದಿ ಮುಷ್ಟಿ ಪ್ರೀತಿ, ಪ್ರೋತ್ಸಾಹ ನೀಡಿ… ಬರಹಗಾರನ ಲೇಖನಿಯ ಬೆನ್ನಿಗೆ ಬಲ ತುಂಬಿ.ನಮ್ಮ ನೆಲದ ಪ್ರತಿಭೆ ಸಾಹಿತ್ಯ ಕ್ಷೇತ್ರದಲ್ಲಿ ಅರಳಲಿ.
ಜಿಲ್ಲೆಯ ಶಿಕ್ಷಣ ಇಲಾಖೆ ಈ ಪ್ರತಿಭಾವಂತ ಬರಹಗಾರ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸಲಿ ಎಂದು ಆಶಿಸುವೆ. All the best Mallappa Karennanavar ನಿಮ್ಮ ಮುಂದಿನ ಕೃತಿಯ ನಿರೀಕ್ಷೆಯಲ್ಲಿ.
ಸಾಹಿತ್ಯದ ಅಗಸಿ ಬಾಗಿಲಿಗೆ ಸ್ವಾಗತ..
ಕೃತಿ: ನಮ್ಮೂರ ಅಗಸ್ಯಾಗ.
ಲೇಖಕರು: ಶ್ರೀ ಮಲ್ಲಪ್ಪ ಕರೇಣ್ಣನವರ. ಶಿಕ್ಷಕರು.
ಮೋಟೆಬೆನ್ನೂರು. ಹಾವೇರಿ ಜಿಲ್ಲೆ.
ಪ್ರಕಾಶಕರು: ಅವಿರತ ಪುಸ್ತಕ. ಬೆಂಗಳೂರು.
(94499 35103)
ಬೆಲೆ: 125 ರೂ. ಮಾತ್ರ.
- ಡಾ.ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.
