ಕವಿ ಜಬೀವುಲ್ಲಾ ಎಂ ಅಸದ್ ಅವರು ಲೇಖಕಿ, ಕವಿಯತ್ರಿ ಎಂ ಆರ್ ಕಮಲಾ ಅವರು ಬರೆದ ಕವನದಿಂದ ಸ್ಪೂರ್ತಿಗೊಂಡು ಬರೆದಂತಹ ಈ ಸುಂದರ ಕವನವನ್ನು ತಪ್ಪದೆ ಓದಿ…
ಎಲ್ಲೊ ಮುಗುಚಿ ಬಿದ್ದ ಆಗಸ
ಕಣ್ಣಲ್ಲರಳಿದ ಕನಸು ನುಚ್ಚು ನೂರು
ಸಾವಿರ ಬಯಕೆ, ಸಾವಿಲ್ಲದ ನೆನಕೆ
ಬರಿ ಬಿಕ್ಕಳಿಕೆಗಳ ತೇರು
ಎಲ್ಲೊ ಮುದುಡಿದ ತಾವರೆ
ವಿಳಾಸ ಮರೆತ ದುಂಬಿ, ಚಿಟ್ಟೆ, ಹಕ್ಕಿ, ಇರುವೆ ಸಾಲು
ಮರುಭೂಮಿಯಾದ ಮನದ ತುಂಬ
ಅಲೆಮಾರಿ ಒಂಟೆಗಳ ರಂಗೋಲಿ
ಎಲ್ಲೊ ನೋವು ಮುಡಿದು ಹುಸಿ ನಗುವ ಮನ
ಕತ್ತಲಲ್ಲಿ ಕರ ಚಾಚುವ ಮೌನ
ಆರಿದ ಬೆಳಕು, ಕದಡಿದ ಧ್ಯಾನ
ಯಾರಿಲ್ಲ ಇಲ್ಲಿ ಕಾಣ
ಎಲ್ಲೊ ಖಾಲಿ ಕ್ಯಾನುವಾಸಿನ ಮೇಲೆ
ಒಸರಿದ ಕಲಾವಿದನ ಕುಂಚದ ಕಂಬನಿ
ಅಪ್ರತಿಮ ಕಲಾಕೃತಿ
ಅಪ್ರಕಟ ಪ್ರೇಮ್ ಕಹಾನಿ
ಎಲ್ಲೊ ನಾನು, ಅವಳೆಲ್ಲೊ
ಎಂದಿಗೂ ಸೇರಲಾಗದ ಒಲವು
ಮುರಿದ ಸೇತುವೆಯ ಮತ್ತೆ ಕಟ್ಟುವುದು
ವಿಫಲವಾಗುವ ಸಾವು
- ಜಬೀವುಲ್ಲಾ ಎಂ ಅಸದ್