ಬಳೆಗಾರ ಅಂದಾಗ ಜಾನಪದದ ‘ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ’ ‘ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೇ’…..ಹಾಡು ನೆನಪಿಗೆ ಬರುತ್ತದೆ. ಮದುವೆ ಸಂದರ್ಭದಲ್ಲಿ ಬಳೆಗಾರ ಮನೆಗೆ ಬಂದು ಹಸಿರು ಬಳೆ ತೊಡಿಸಿ ಹೋಗುತ್ತಿದ್ದದ್ದು ಕೂಡಾ ನೆನಪಿಗೆ ಬರುತ್ತದೆ, ಆದರೆ ಇಂದು ಊರೂರು ಸುತ್ತಿ ಬಳೆ ಮಾರುತ್ತಿದ್ದ ಬಳೆಗಾರರೂ ಈಗ ಕಾಣುತ್ತಿಲ್ಲ. ಭಾಗ್ಯದ ಬಳೆಗಾರರ ಕುರಿತು ಟಿ.ಶಿವಕುಮಾರ್ ಅವರು ಬರೆದಿರುವ ಒಂದು ಬರಹ, ತಪ್ಪದೆ ಓದಿ…
‘ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೇ ದೊರೆಯೆ…’ ಏನಿದು ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಕವಿತೆಯಸಾಲು ಅಂತೀರಾ ಹೌದು ಈ ಗೀತೆ ಕೆ.ಎಸ್. ನರಸಿಂಹಸ್ವಾಮಿಯವರದೇ. ಬಳೆಗಾರ ಮನೆಯ ಬಾಗಿಲಿಗೆ ಬಂದು ಒಳಗೆ ಬರಲೇ ಎಂದು ಕೇಳಿದರೆ. ಬಾ ಎಂದು ಮುಕ್ತ ಮನಸ್ಸಿನಿಂದ ಕರೆಯುವ ಮಹಿಳೆಯರು ಇದ್ದರು. ಬಳೆಗಾರ ಬಂದನೆಂದರೆ ಊರ ಹೆಂಗಳೆಯರ ಮುಖ ಆರಳುತ್ತಿತ್ತು. ಏಕೆಂದರೆ ಬಳೆಗಾರ ತೌರುಮನೆಯಿಂದ ಏನಾದರು ಸುದ್ದಿ ತಂದಿರಬಹದೆಂಬ ಕುತೂಹಲ ಇರುತ್ತಿತ್ತು. ಪುಟ್ಟ ಬಾಲೆಯರಿಂದ ಹಿಡಿದು ಅಜ್ಜಿಯರವರೆಗಿನ ಎಲ್ಲರಿಗೂ ಬಳೆ ತೊಡುವ ಸಂಭ್ರಮವಿತ್ತು.
ಮಲಾರ ಹೊತ್ತು ಬಾಗಿಲಲ್ಲಿ ನಿಲ್ಲುವ ಬಳೆಗಾರರನ್ನು ಒಳಗೆ ಕರೆದು ಪಡಸಾಲೆಯಲ್ಲಿ ಚಾಪೆ ಹಾಕಿ ಕೂರಿಸಿ, ಮಲಾರಕ್ಕೆ ಅರಿಸಿನ ಕುಂಕುಮದಿಂದ ಪೂಜೆ ಮಾಡಿ ಬಳೆಗಾರರ ಎದುರು ಕುಳಿತು ಬಣ್ಣ ಬಣ್ಣದ ಗಾಜಿನ ಬಳೆಗಳನ್ನು ಅರಿಸಿಕೊಂಡು ಬಳೆಗಾರರಿಂದಲೇ ಕೈಗೆ ತೊಡಿಸಿಕೊಳ್ಳುವ ಹೆಂಗಳೆಯರ ಆ ಸಂಭ್ರಮವಂತು ಅವರ್ಣನೀಯ!
ನನಗೆ ಹಸಿರು ಬಳೆ, ನನಗೆ ಹಳದಿ ಬಳೆ ಎಂದೆಲ್ಲಾ ಆಶೆ ಪಡುತ್ತಾ ತಮ್ಮ ತಮ್ಮಲ್ಲೇ ಚರ್ಚೆಯಲ್ಲಿ ತೊಡಗಿ ಬಳೆ ತೊಡಿಸಿಕೊಳ್ಳುವ ಹೆಣ್ಣು ಮಕ್ಕಳ, ಮುತ್ತೈದೆಯರ ಕಣ್ಣಿನಲ್ಲಿ ಮಿಂಚು ಹಬ್ಬಗಳ ಸಾರ್ಥಕ ಭಾವನೆಯ ಸಂಕೇತವಾಗಿತ್ತು.
ಬಳೆ ತೊಡಿಸಿಕೊಂಡ ನಂತರ ಮನೆಯ ಹೆಂಗಸರೆಲ್ಲಾ ಬಳೆಯ ಮಲಾರಕ್ಕೆ ಪೂಜಿಸಿ ಆರತಿ ಮಾಡಿ ಮುತ್ತೈದೆ ಭಾಗ್ಯ ಬೇಡಿಕೊಂಡು ಬಳೆಗಾರರಿಗೆ ಮೊರದಲ್ಲಿ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಆಡಿಕೆ, ಬಾಳೆಹಣ್ಣುಗಳೊಡನೆ ಬಳೆಯ ಹಣವನ್ನು ಗೌರವದಿಂದ ನೀಡಿ ಮುಂದಿನ ಹಬ್ಬಕ್ಕೆ ಬಾ ಎಂದು ಬಿಳ್ಕೋಡುತ್ತಿದ್ದರು.
ಇಂದು ಬಳೆಗಾರ ಬರುತ್ತಿಲ್ಲ. ಏಕೆಂದರೆ ಅವನನ್ನು ಬಾ ಎನ್ನುವವರಿಲ್ಲ. ನನ್ನ ತೌರಿಗೆ ಹೋಗಿ ಈ ಸುದ್ದಿ ನನ್ನ ಅಪ್ಪ ಅಮ್ಮಂದಿರಿಗೆ ತಲುಪಿಸು ಎನ್ನುವವರಿಲ್ಲ ಈಗ ಬಳೆ ತೊಡುವವರೂ ಕಡಿಮೆ ಅಗುತ್ತಿದ್ದಾರೆ. ಹೀಗಾಗಿ ಬಳೆಗಾರನ ಭಾಗ್ಯವೆಲ್ಲ ಕಣ್ಮರೆಯಾಗಿದೆ! ಹೆಣ್ಣು ಮಕ್ಕಳು ಅತ್ತಿತ್ತ ಸುಳಿದಾಡಿದರೆ ಸಾಕು ಕೈಗಳಲ್ಲಿನ ಬಳೆಗಳ ಘಲ್ ಘಲ್ ಸದ್ದು. ಅದೊಂದು ತೆರನಾದ ಸಡಗರವಿತ್ತು.
ಆದರೆ ನಮ್ಮ ಸಂಸ್ಸ್ರತಿಯ ಅವಿಭಾಜ್ಯ ಅಂಗವಾಗಿದ್ದ ‘ಬಳೆ ಸಂಸ್ಕಾರ’ ಮರೆಯಾಗಿದೆ. ಆಧುನಿಕತೆಯ ಮತ್ತು ಫ್ಯಾಷನ್ ಮೋಹಕ್ಕೆ ಸಿಕ್ಕಿ ಮರೆಯಾಗಿದೆ. ಕಾಲೇಜು ಮೆಟ್ಟಿಲು ಏರುತ್ತಿದ್ದಂತೆ ಯುವತಿಯರು ಎಡಗೈಗೆ ವಾಚ್ ಕಟ್ಟಿಕೊಂಡು ಬಲಗೈ ಫ್ರೀ ಇದ್ದರೇನೆ ಚಂದ ಎನ್ನುತ್ತಾ ಬೋಳು ಕೈಯಲ್ಲೇ ಇರುತ್ತಾರೆ. ಬೋಳು ಕೈ ಈಗ ಫ್ಯಾಷನ್! ಬಂಗಾರದ ಬಳೆ, ಬೆಳ್ಳಿಯಬಳೆ, ಪ್ಲಾಸ್ಟಿಕ್‍ಬಳೆ, ಚೀನಿಬಳೆ, ಮಣ್ಣಿನ ಬಳೆ ಹೀಗೆ ನಾನಾ ರೀತಿಯಲ್ಲಿ ತಯಾರಾಗುತ್ತವೆ. ಆದರೆ ಚಿಕ್ಕಿ ಬಳೆ ಸಾದಾಬಳೆ, ಹಸಿರುಬಳೆ, ಸಿಂಗಲ್‍ಕಲರ್‍ಬಳೆ.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಅವನ್ನು ತೊಡುವವರು ಈಗ ಕಡಿಮೆ.
ಊರೂರು ಸುತ್ತಿ ಬಳೆ ಮಾರುತ್ತಿದ್ದ ಬಳೆಗಾರರೂ ಈಗ ಕಾಣುತ್ತಿಲ್ಲ. ಆಧುನಿಕತೆ ಮತ್ತು ಬದಲಾದ ಸಂದರ್ಭಕ್ಕೆ ಅವರೂ ಬದಲಾಗಿದ್ದಾರೆ. ಬಳೆಗಾರ ಈಗ ಭಾಗ್ಯದ ಬಳೆಗಾರನಾಗಿ ಉಳಿದಲ್ಲ ಅವನನ್ನು ಬಾ ಎಂದು ಕರೆಯುವವರೂ ಇಲ್ಲ.
- ಟಿ.ಶಿವಕುಮಾರ್, ಸಹ ಶಿಕ್ಷಕ, ಸ.ಹಿ.ಪ್ರಾ.ಶಾಲೆ ಅರಳೇಶ್ವರ, (ತಾ) ಹಾನಗಲ್ಲ (ಜಿ) ಹಾವೇರಿ