‘ನಲುಗದಿರಲಿ ಪರಿಸರ’ ಕೃತಿ ಪರಿಚಯ

ವೃತ್ತಿಯಲ್ಲಿ ಪೊಲೀಸ್ ಶ್ವಾನದಳ ಪಡೆಯಲ್ಲಿ ಸೇವೆ ಸಲ್ಲಿಸುತಿದ್ದು, ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರಾಗಿರುವ ಮೌಲಾಲಿ ಕೆ ಆಲಗೂರ ಅವರ ‘ನಲುಗದಿರಲಿ ಪರಿಸರ’ ಕೃತಿಯ ಕುರಿತು ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ನಲುಗದಿರಲಿ ಪರಿಸರ
ಲೇಖಕರು : ಮೌಲಾಲಿ ಕೆ ಆಲಗೂರ
ಪ್ರಕಾರ : ಶಿಶುಗೀತೆಗಳ ಸಂಕಲನ
ಪ್ರಕಾಶನ : ನಬರೋಷನ್ ಪ್ರಕಾಶನ

ಶಿಶುಗೀತೆ ರಚಿಸುತಲಿ
ಕೃಷಿಮಾಡುತಿಹರಲ್ಲ
ಹೊಸದೊಂದು ಕಾವ್ಯದ ಗೂಡುಕಟ್ಟಿ
ಹೆಸರಿಗಿವು ಶಿಶುಗೀತೆ
ಬಸಿರೊಡೆದ ಸಿರಿಧಾನ್ಯ
ಪಸರಿಸಲಿ ಮೌಲಾಲಿ ಸಿರಿ ಕೀರುತಿ.

ಗೆಳೆಯ ಮೌಲಾಲಿಯವರು ಹುಟ್ಟಿದ್ದು ಆಲಗೂರಿನಲ್ಲಿ, ವೃತ್ತಿಯಲ್ಲಿ ಪೊಲೀಸ್ ಶ್ವಾನದಳ ಪಡೆಯಲ್ಲಿ ಸೇವೆ ಸಲ್ಲಿಸುತಿದ್ದು ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು.

ತಾವು ಕಂಡಂತೆ ಇಂದಿನ ವಾಸ್ತವ ಪರಿಸರದ ಸ್ಥಿತಿಯ ನೈಜತೆಯನ್ನು, ಹೊರ ಜಗತ್ತಿಗೆ ತೊರ್ಪಡಿಸಲು ಶ್ರೀಯುತ ಮೌಲಾಲಿಯವರು ಆಯ್ದುಕೊಂಡ ಶಿಶುಗೀತೆಗಳ ಪ್ರಕಾರ ನಿಜಕ್ಕೂ ಪ್ರಶಂಸನೀಯ. “ಇಂದಿನ ಮಕ್ಕಳೆ ಮುಂದಿನ ಭವಿಷ್ಯಕ್ಕೆ ಗುರಿಕಾರರು” ಅಂತಹ ಮಕ್ಕಳಿಗೆ “ಭದ್ರವಾದ ಶಿಕ್ಷಣ ಕೊಟ್ಟರೆ ಮುಂದೆ ಮಕ್ಕಳು ಸುಭದ್ರವಾಗಿ ಬಾಳುತ್ತಾರೆ” ಎಂಬ ಅರಿವಿನಿಂದ ಇಂತಹ ಅದ್ಭುತ ಕಾವ್ಯ “ನಲುಗದಿರಲಿ ಪರಿಸರ” ಎಂಬ ಕೃತಿಯನ್ನು ಲೋಕಕ್ಕೆ ನೀಡಿದ್ದಾರೆ.

ಇಡಿ ಸಂಕಲನದಲ್ಲಿ ಪ್ರತಿಯೊಂದು ಕವಿತೆಗಳು ಒಂದಿಲ್ಲೊಂದು ರೀತಿಯ ನೀತಿಯನ್ನು ಉಣಬಡಿಸಿದ್ದು, ಅವರ ಪದಬಳಕೆ, ಪದಲಾಲಿತ್ಯ ಜೊತೆಗೆ ಅಂತ್ಯ ಪ್ರಾಸಗಳ ನೈಸರ್ಗಿಕ ಪ್ರಯೋಗ ಹೆಚ್ಚು ಗಮನ ಸೆಳೆಯುತ್ತವೆ.

ಮನುಷ್ಯ ಪ್ರಕೃತಿಯ ಕೂಸು ಪ್ರತಿಯೊಂದು ಆಯಾಮದಲ್ಲೂ ಅವನು ಪ್ರಕೃತಿಯ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾನೆ. “ಪಂಚಭೂತಗಳಿಂದಾದ ದೇಹ ಹುಟ್ಟಿನಿಂದ ಮಡಿಯುವತನಕ” ತನ್ನನ್ನು ತಾನು ರೂಪಿಸಿಕೊಂಡಿರುವುದು ಪ್ರಕೃತಿಯ ವಸ್ತುಗಳಾದ ಸೂರ್ಯ, ಜಲ, ನೆಲ ಆಕಾಶ, ಬೆಟ್ಟ, ಗುಡ್ಡ, ಕಾಡು ಹಾಗು ಇತರ ಪ್ರಾಕೃತಿಕ ವಸ್ತುಗಳ ಮೇಲೆಯೆ. ಇಂತಹ ಸ್ಥಿತಿಗತಿಯಲ್ಲಿ ತಾನು ಪ್ರಕೃತಿಯ ಕೂಸಾದರು “ಪ್ರಕೃತಿಯನ್ನೇ ವಿಕೃತ ಮಾಡಲು ಹೊರಟಿರುವುದು” ಅತ್ಯಂತ ಶೋಚನೀಯ. ಮನುಜನ ಅಟ್ಟಹಾಸ ಮಿತಿಮೀರುತ್ತಿರುವುದು ಒಂದಿಲ್ಲೊಂದು ರೀತಿಯಲ್ಲಿ ಪ್ರಕೃತಿಯ ವಿನಾಶಕ್ಕೆ ಕಾರಣವಾಗಿದೆ. ಇಂತಹ ಸ್ಥಿತಿಯಿಂದ ಪರಿಸರದಲ್ಲಿ ಅತಿವೃಷ್ಟಿ ಹಾಗು ಅನಾವೃಷ್ಟಿಗಳು ಸಂಭವಿಸುತ್ತಿರುವುದು ಸಾಮಾನ್ಯವಾಗಿದೆ. ಈ ರೀತಿಯ ಹಲವಾರ ಮನುಜನ ಅತ್ಯಾಚಾರದಿಂದ ಪ್ರಕೃತಿ ನಲುಗಿದೆ ಇದೇ ವಿಷಯಾಧಾರಿತ ಶ್ರೀಯುತ ಮೌಲಾಲಿಯವರ ಕೃತಿ “ನಲುಗದಿರಲಿ ಪರಿಸರ”.

ಹೇ ಲೋಕನಾಥ, ನಲುಗದಿರಲಿ
ನಮ್ಮ ಅನ್ನದಾತ
ಈ ಧರೆಗೆ ದಯೆ ತೋರುವ ರೈತ
ಇರಲಿ ನಗೆ ಬೀರುತ.

ರೈತ ಪ್ರಕೃತಿಯ ಅವಿಭಾಜ್ಯ ಅಂಗ. ಮನುಷ್ಯನ ದುಷ್ಕೃತ್ಯಗಳು ರೈತನ ಮೇಲೆಯೂ ಪರಿಣಾಮ ಬೀರಿವೆ ಇಂತಹ ರೈತ ನಲುಗದಿರಲಿ ಎಂಬ ಕವಿಗಳ ಭಾವ ನಿಜಕ್ಕೂ ಚೇತನವಾದದ್ದು ಜೊತೆಗೆ ದೇವರಲ್ಲಿ ಮಗುವಿನಂತೆ ಮನವಿ ಮಾಡುವ ಭಾವ ಎಲ್ಲರನ್ನು ಒಮ್ಮೆ ಸೆಳೆದಿಡುತ್ತದೆ ಮುಂದಿನ ದಿನಗಳಲ್ಲಿ ಈ ಕವಿತೆ ಪಠ್ಯದ ಭಾಗವಾಗಲಿ ಎಂಬುದು ನನ್ನ ಆಶಯವಾಗಿದೆ.

ನಮ್ಮ ಸುತ್ತಲಿನ ಚೆಲುವಿಗೆ
ಬಿಡುತ್ತಿಲ್ಲ ಚಿಗುರಲು
ಬರುತ್ತಿಲ್ಲ ನಮಗೆ ಪ್ರಕೃತಿಯ
ಸೊಬಗು ಸವಿಯಲು.

ಮೇಲಿನ ಕವಿತೆಯು ಅತ್ಯಂತ ಮಾರ್ಮಿಕವಾಗಿದ್ದು ಮನುಷ್ಯನ ದುಷ್ಕೃತ್ಯಗಳಿಂದ ಪರಿಸರ ದಿನೆದಿನೇ ಹದಗೆಡುತ್ತಿದೆ ಹಲವಾರು ಮಾಲಿನ್ಯಗಳಿಂದ ಸಹಜ ಸೃಷ್ಟಿಯ ಹೊಳಪು, ಚೆಲುವು ಮಾಯವಾಗಿದೆ. ಧರೆ ಎಲ್ಲರಿಗೆ ಎಲ್ಲವನ್ನೂ ನೀಡಿದೆ ಅದರೆ ಅದರ ಫಲವನ್ನು ಸರಿಯಾಗಿ ಉಣ್ಣಲು ಮನುಜನಿಗೆ ಬರುತ್ತಿಲ್ಲ ಎಂಬ ಮಾರ್ಮಿಕಾರ್ಥವನ್ನು ತಿಳಿಸಿದ್ದಾರೆ ಇದೇ ವಿಷಯವಾಗಿ “ಪದ್ಮಶ್ರೀ ಪುರಸ್ಕೃತ ಡಾ. ದೊಡ್ಡರಂಗೇಗೌಡರು” ಕೂಡ ಕವಿತೆಗಳಿಗೆ “ಒಳ ಅರ್ಥ ಅಂದರೆ ಅಂತರಾರ್ಥ ಮುಖ್ಯವಾಗುತ್ತದೆ” ಎಂದು ಹೇಳಿದ್ದಾರೆ ಇದಕ್ಕೆ ಅನ್ವರ್ಥವಾಗಿ ಆತ್ಮೀಯ ಸ್ನೇಹಿತ ಮೌಲಾಲಿಯವರ ಸಾಕಷ್ಟು ಕವಿತೆಗಳಲ್ಲಿ ಈ ರೀತಿಯ ಮಾರ್ಮಿಕ ಅರ್ಥಗಳು ಎದ್ದು ಕಾಣುತ್ತವೆ.

ಗಣಿಗಾರಿಕೆಯಿಂದ ಗಂಧದ
ನಾಡಿನ ನೆಲ ಬಯಲು
ಎಷ್ಟು ಆಳ ಕೊರೆದರು
ಬರುತ್ತಿಲ್ಲ ನೀರು,
ಬತ್ತಿದೆ ಗಂಗೆಯ ಒಡಲು‌

ಅಂತರ್ಜಲದ ಮಟ್ಟ ದಿನೆ ದಿನೇ ಕುಸಿಯಿತಿದ್ದು ಅಂತರ ಗಂಗೆ ಬತ್ತಿದ್ದಾಳೆ. ಸಾವಿರಾರು ಅಡಿ ನೆಲ ಕೊರೆದರು ಜೀವ ಜಲ ಸಿಗುತ್ತಿಲ್ಲ. ಇದಕ್ಕೆಲ್ಲ ಕಾರಣ ಮನುಷ್ಯನ ದುರ್ಬುದ್ದಿತನದಿಂದ ಗಣಿಗಾರಿಕೆ ಮಾಡಿ ನೆಲವನ್ನು ಬಗೆಯುತ್ತಿರುವುದೇ ಎಂದು ಸಾಬೀತು ಮಾಡಿದ್ದಾರೆ.

ನಲುಗುತಿದೆ ಪರಿಸರ, ಹೇ
ಮಾನವ, ನೀ ಎಚ್ಚರ
ನಮ್ಮುಳಿವಿನ ಉಸಿರಾಟಕ್ಕೆ
ಬೆಳೆಸಬೇಕಿದೆ ಕಾಂತಾರ.

ಮುಂದಿನ ದಿನಗಳಲ್ಲಿ ಪ್ರಾಣ ವಾಯುವಿಗೂ ಕುಂದಾಗಬಹುದು ಎಂಬ ಅರಿವಿನಿಂದ ಮನುಷ್ಯನಿಗೆ ಪದಗಳ ಮೂಲಕವೆ ಚಾಟಿ ಬೀಸಿದ್ದಾರೆ. ಅರಣ್ಯನಾಶ ಹೀಗೆ ಮುಂದುವರೆದರೆ ನಿಜಕ್ಕೂ ಉಸಿರಾಡಲು ಕಷ್ಟವಾಗಬಹುದು. ಒಂದು ಕಾಲದಲ್ಲಿ ಉಳುಮೆ ಭೂಮಿಗೋಸ್ಕರ ಅರಣ್ಯ ಕ್ಷೀಣವಾಗುತಿತ್ತು ಅದಕ್ಕೂ ಮೀರಿ ಇಂದು ಕಾರ್ಖಾನೆ ರೆಸರ್ಟ್ ಇನ್ನೂ ಹಲವು ವೈಭೋಗಕ್ಕೋಸ್ಕರ ಕಾನನ ನೆಲಸಮವಾಗುತ್ತಿರುವುದು ಮುಂದೆ ವಿಷಮ ಸ್ಥಿತಿಗೆ ಕಾರಣವಾಗಬಹುದು ಎಂಬುದನ್ನು ಮನಗಂಡು ಶ್ರೀಯುತ ಮೌಲಾಲಿಯವರು “ಗಿಡಮರ ಬೆಳೆಸಿ ಕಾಡುಗಳನ್ನು ರಕ್ಷಿಸಿ” ಎಂಬುದಾಗಿ ತಿಳಿಸಿದ್ದಾರೆ.

ಇನ್ನೂ ಹಲವಾರು ಕವಿತೆಗಳ ಮೂಲಕ ಜಾಗ್ರತಿಯನ್ನು ನೀಡಿದ್ದಾರೆ. ಓದುಗರಿಗೆ ಒಂದು ಒಳ್ಳೆಯ ಕೃತಿ ಓದಿದ ಭಾವ ಅನ್ನಿಸುವುದು ಖಂಡಿತ ಎಲ್ಲರು ಪುಸ್ತಕವನ್ನು ಕೊಂಡು ಓದಿ ಎಂದು ತಿಳಿಸುತ್ತ ಶ್ರೀಯುತ ಮೌಲಾಲಿಯವರಿಗೆ ಅಭಿನಂದಿಸುತ್ತ
ಕೊನೆ ಮಾತು

“ಅರಿವೆರದು ಕಾವ್ಯದಲಿ ಪರಿಸರವನುಳಿಸುತಲಿ
ಶಿಶುಗೀತೆಗಳೊಳು ತಂದು ಕಾಳಜಿಯನು
ಕಾವ್ಯಪದ ಮಾಲೆ ಕಟ್ಟಿಹರಲ್ಲ ಮೌಲಾಲಿ
ನೇಹಿಗರು ನಮಗೆಲ್ಲ ಜಗಮಿತ್ರನು”.


  • ಚನ್ನಕೇಶವ ಜಿ ಲಾಳನಕಟ್ಟೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW