ನನಗೆ ಬರಿ ಆಕಾಶವಷ್ಟೇ ಕಾಣುವುದಿಲ್ಲ, ಅದರಲ್ಲಿ ನನ್ನ ಬಾಲ್ಯದ ನೆನಪುಗಳು ಕೂಡಾ ಅದರಲ್ಲಿ ಅಡುಗಿದೆ ಎನ್ನುತ್ತಾ ತಮ್ಮ ಬಾಲ್ಯದ ನೆನಪಿನ ಜೊತೆಗೆ ಹಳ್ಳಿಗರ ಆಡುಭಾಷೆಯಲ್ಲಿ ಕತೆಗಳನ್ನು ಬರೆದು ಓದುಗರ ಮನ ಗೆದ್ದಿದ್ದಾರೆ ಕತೆಗಾರ ಕೇಶವ ರೆಡ್ಡಿ ಹಂದ್ರಾಳ ಅವರು, ಅವರ ಕತೆಗಳನ್ನು ಓದುವಾಗ ಒಂದು ಆತ್ಮೀಯತೆ ಇರುತ್ತದೆ, ಈಗ ಅವರ ಒಂದು ಬರಹ ಆಕೃತಿಕನ್ನಡದಲ್ಲಿ, ತಪ್ಪದೆ ಓದಿ…
ನಮ್ಮ ಬಯಲುಸೀಮೆಯ ಹಳ್ಳಿಗಾಡಿನಲ್ಲಿ ಅಂದಿನ ದಿನಗಳಲ್ಲಿ ನಾವು ಮನೆಗಳಲ್ಲಿ ಇರುತ್ತಿದ್ದುದ್ದೇ ಅಪರೂಪ.ಬೇಸಿಗೆಯಲ್ಲಂತೂ ಹಟ್ಟಿ ಮುಂದೆಯೇ ಉಣ್ಣುವುದು,ಹಟ್ಟಿ ಮುಂದೆಯೇ ಚಾಪೆ, ಕಂಬಳಿಗಳನ್ನು ಹಾಸಿ ಹೊದ್ದು ಮಲಗುವುದು ಮಾಡುತ್ತಿದ್ದೆವು. ವಿದ್ಯುತ್ ಇಲ್ಲದ ಆ ದಿನಗಳಲ್ಲಿ ಬೇಗನೆ ದೀಪವಾರಿಸಿ ಕಥೆಗಳನ್ನು, ಗಾದೆಗಳನ್ನು ಹೇಳೆಕೊಳ್ಳುತ್ತಲೇ ನಿದ್ರಾದೇವಿಯ ವಶವಾಗಿ ಬಿಡುತ್ತಿದ್ದೆವು. ಒಂದು ಸಾರಿ ನಿದ್ರೆಗೆ ಬಿದ್ದರೆ ಎಂಥಾ ಘನಂದಾರಿ ಸೊಳ್ಳೆ, ತಿಗಣೆಗಳೇ ಹರಸಾಹಸ ಮಾಡಿದರೂ ನಮ್ಮ ಕಣ್ಣು ಬಿಡಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ರಗ್ಗುಗಳಲ್ಲಿ ತೂರಿಕೊಂಡು ಮಲಗುತ್ತಿದ್ದ ನಾಯಿ, ಬೆಕ್ಕುಗಳು ಕೆಲವೊಮ್ಮೆ ನಮ್ಮನ್ನು ಚೇಳು, ಮಂಡರಗಪ್ಪೆಗಳಿಂದ ರಕ್ಷಿಸುತ್ತಿದ್ದದ್ದುಂಟು. ಇನ್ನು ಕಪ್ಪಲಕ್ಕಗಳಂತೂ ನಮ್ಮ ಪಕ್ಕದಲ್ಲಿಯೇ ಎಗರಿ ಮನೆಯೊಳಕ್ಕೆ ಹೋದರೆ ಯಕಶ್ಚಿತ್ ಸಣ್ಣ ಹುಡುಗರೇ ಹಿಡಿದು ಬೀದಿಗೆ ಬಿಸಾಕುತ್ತಿದ್ದರು. ನೊಣಗಳಂತೂ ನಮ್ಮ ಮೂತಿಗಳಿಗೇ ಮುಸುರಿಕೊಳ್ಳುತ್ತಿದ್ದವು.
ಇಷ್ಟೆಲ್ಲದರ ನಡುವೆ ಮಕ್ಕಳು ಮುದುಕರಾದಿಯಾಗಿ ಎಲ್ಲರನ್ನೂ ಅಚ್ಚರಿಯ ಸಮುದ್ರದಲ್ಲಿ ಮುಳುಗಿಸುತ್ತಿದ್ದು ರಾತ್ರಿಯ ಆಕಾಶ. ಆಕಾಶಕ್ಕಿದ್ದ ಒಗಟು ನಾನಿಂದೂ ಮೇಲೆ ನೋಡಿದಾಗಲೆಲ್ಲ ನೆನಪಾಗುತ್ತದೆ. ” ಅಮ್ಮನ ಸೀರೆ ಮಡ್ಚಾಕಾಗಲ್ಲ,ಅಪ್ಪನ ದುಡ್ಡು ಎಣಿಸೋಕಾಗಲ್ಲ” ಎಂಬ ಒಗಟನ್ನು ಯಾರಾದರೂ ಎತ್ತುವ ಮೂಲಕ ” ಐಟ್ಲಗೊ ಅಷ್ಟು ಗೊತ್ತಿಲ್ವಾ ಆಕಾಶ ,ನಕ್ಷತ್ರ” ಎಂದು ಎಲ್ಲರೂ ಅಂಗಾತ ಮಲಗಿ ಆಕಾಶ ಮುಖಿಯಾಗುತ್ತಿದ್ದರು.ಸಾವಿರಾರು ವರ್ಷಗಳ ಕಾಲ ನಮ್ಮ ಹಿರಿಯರನ್ನು ಅಹಂಕಾರ ,ದರ್ಪ, ಭ್ರಮೆಗಳಿಂದ ದೂರ ಇಟ್ಟಿದ್ದೆ ಈ ಆಕಾಶ. ಆಕಾಶದಲ್ಲಿ ಮಿನುಗುವ ಅಸಂಖ್ಯಾತ ನಕ್ಷತ್ರಗಳಿಗೆ ಒಂದೊಂದು ಕಥೆ ಕಟ್ಟುತ್ತಾ,ಓಡಾಡುವ ಚಂದ್ರನನ್ನು ಮಾತನಾಡಿಸುತ್ತಾ ರಾತ್ರಿಯ ಕತ್ತಲೆಯನ್ನು ಆಪ್ಯಾಯಮಾನವಾಗಿ ಅಪ್ಪಿಕೊಳ್ಳುತ್ತಿದ್ದದ್ದು ನಮ್ಮ ಅನಕ್ಷರಸ್ತ ಜಗತ್ತು. ಅಕಾಶದ ಅನಂತತೆ ಅವರಲ್ಲಿ ಏನೆಲ್ಲಾ ಶ್ರೇಷ್ಠ ಗುಣ, ಸಂವೇದನೆ, ಭಾವನೆಗಳನ್ನು ನಿರಂತರವಾಗಿ ತುಂಬಿ ಕಾಯುತ್ತಿತ್ತು.
ಇವೆಲ್ಲದರ ನಡುವೆ ರಾತ್ರಿ ಹೊತ್ತು ಬರುತ್ತಿದ್ದ ಭಿಕ್ಷುರು ,ಮಂಡರು ಮಕ್ಕಳನ್ನಲ್ಲದೆ ದೊಡ್ಡವರನ್ನೂ ಬಹಳವಾಗಿ ಕಾಡುತ್ತಿದ್ದರು.ನಿಯಮಿತವಾಗಿ ಬರುತ್ತಿದ್ದ ಇಂಥವರು ಬಾರದಿದ್ದಾಗ ರಾತ್ರಿಯ ಹೊತ್ತು ಜ್ಞಾಪಿಸಿಕೊಳ್ಳುತ್ತಿದ್ದರು. ” ಯಾಕೊ ಈ ವಾರ ದೊಡ್ಡಸಳ್ಳಿ ವಾರುದ್ದಾಸಯ್ಯ ಬರ್ಲಿಲ್ಲಾ.ಪಾಪ,ಈ ನಡ್ವೆ ಮೆತ್ಗಾಗೆವ್ನೆ”
” ಬುಡುಬುಡ್ಕೆ ರಾಮಯ್ಯ ಈ ಕಡೆ ತಲೆ ಇಟ್ಟು ವರ್ಷ ಆಗ್ತ ಬರ್ಲಿಲ್ವ..” ” ಯಾಕೊ ಗಂಗೆತ್ತ್ನೋರು ಈ ನಡ್ವೆ ಕಾಣಿಸ್ಕಂಬ್ಲಿಲ್ಲಪ್ಪ..” ” ಮಂಡ್ರ್ ಬಂದು ಮೂರ್ತಿಂಗ್ಳಾಯ್ತಲ್ವಾ ..” ” ದೊಂಬ್ರಾಟ್ದೋರ್ಯಾಕೊ ತಲೆನೇ ಇಕ್ಲಿಲ್ಲ ,ಒಂದುಡ್ಗಿ ಏನ್ ಡ್ಯಾನ್ಸ್ ಮಾಡ್ತಾಳಪ್ಪ .. ನೆನೆಸಿಕೊಂಡ್ರೆ ಮೈ ಜುಂ ಅಂತೈತೆ ..” ಇತ್ಯಾದಿಯಾಗಿ ಬಂಧುಗಳೆಂಬಂತೆ ನೆನಪಿಸಿಕೊಳ್ಳುತ್ತಿದ್ದರು.
ಗೊಂದಳ್ಳಿಯಿಂದ ಒಬ್ಬ ಭಿಕ್ಷುಕ ವಾರಕ್ಕೊಮ್ಮೆಯಾದರೂ ಬರುತ್ತಿದ್ದ.ಆತ ಸದಾ ಎರಡು ಹರಳೆಲೆಗಳನ್ನು ಇಟ್ಟುಕೊಳ್ಳುತ್ತಿದ್ದ. ಯಾವುದೇ ಮನೆ ಮುಂದೆ ನಿಂತರೂ ” ಅಮ್ಮ ನಂಗೊಂದಿಷ್ಟು ಹಿಟ್ಟು ಸಾರು ಕೊಡ್ರಮ್ಮ” ಎಂದಷ್ಟೇ ಮಾತನಾಡುತ್ತಿದ್ದ.ಹಾಗಾಗಿ ಆತನಿಗೆ ” ನಂಗೊಂದಿಷ್ಟು ಹಿಟ್ಟು ಸಾರು” ಎಂದೇ ಹೆಸರು ಬಿದ್ದಿತ್ತು. ಅವನು ಮೊದಲು ನಮ್ಮ ಮನೆಯ ಹತ್ತಿರ ಬರುತ್ತಿದ್ದ. ನಮ್ಮ ಮನೆಯಲ್ಲಿ ಬೆಳಿಗ್ಗೆ ಹೊತ್ತು ಜಾಸ್ತಿ ಮುದ್ದೆಯನ್ನು ಮಾಡುತ್ತಿದ್ದರು.ರಾತ್ರಿ ಹೊತ್ತು ಬರಿ ಅನ್ನವನ್ನು ಮಾಡುತ್ತಿದ್ದರು.ಅನ್ನದ ಜೊತೆಗೆ ಬೆಳಿಗ್ಗೆಯ ತಂಗಳು ಮುದ್ದೆಯೂ ಇರುತ್ತಿತ್ತು. ಆತನಿಗೆ ನಮ್ಮಮ್ಮ ಅನ್ನವನ್ನೂ ಹಾಕುತ್ತಿದ್ದರಿಂದ ಗಬಗಬ ತಿನ್ನುತ್ತಾ ಹರಳೆಲೆಯಿಂದ ಚೆಲ್ಲಿಕೊಳ್ಳುತ್ತಿದ್ದ.” ನಿಧಾನಕ್ಕೆ ತಿನ್ನು ಎಲ್ಲೂ ಓಡೋಗಲ್ಲ..” ಎಂದು ಚಿಕ್ಕ ಮಕ್ಕಳೂ ಆತನಿಗೆ ಬುದ್ಧಿ ಹೇಳುತ್ತಿದ್ದೆವು.ಚೆಲ್ಲಿಕೊಳ್ಳದಿರಲೆಂದು ಆತನಿಗೆ ನಮ್ಮಮ್ಮ ಸಿಲಿವಾರದ ಬೋಸುಣಿಗೆಯೊಂದನ್ನು ಕೊಟ್ಟಿದ್ದಳು .ಆತ ಕಾಯಿಲೆ ಬಂದು ಸತ್ತು ಹೋಗಿದ್ದ.ಅವತ್ತು ನಮ್ಮಪ್ಪ ಇನ್ನೂ ಕೆಲವರು ಗೊಂದಳ್ಳಿಗೆ ಹೋಗಿ ನೋಡಿಕೊಂಡು ಬಂದಿದ್ದರು.ಕೇರಿಯ ಹೆಂಗಸರು ” ಪಾಪ, ಬಲೊಳ್ಳೇನು” ಎಂದು ಮರುಕಪಟ್ಟುಕೊಂಡಿದ್ದರು.ಮಕ್ಕಳಿಗಂತೂ ಅವನ ರಾಗಪೂರಿತ ಧ್ವನಿ ಇನ್ನು ಕೇಳಿಸುವುದಿಲ್ಲವಲ್ಲ ಎಂಬ ಬೇಸರವಾಗಿತ್ತು. ಈಗಲೂ ಊರಿಗೆ ಹೋದಾಗ
“ಅಮ್ಮ ನಂಗೊಂದಿಷ್ಟು ಅನ್ನ ಸಾರಮ್ಮ” ಎಂಬ ವ್ಯಕ್ತಿಯನ್ನು ಹಟ್ಟಿಮುಂದೆ ಕುಂತು ನೆನಪಿಸಿಕೊಳ್ಳುತ್ತೇವೆ. ನಾನು ಈಗಲೂ ರಾತ್ರಿಗಳಲ್ಲಿ ಬಿಡುವಾದಾಗ ಆಕಾಶ ನೋಡುತ್ತೇನೆ.ಆದರೆ ಹಳ್ಳಿಯಲ್ಲಿ ಕಂಡಂತೆ ಆಕಾಶ ಈ ಬೆಂಗಳೂರಿನಲ್ಲಿ ಕಾಣುವುದಿಲ್ಲ,ಸಂಭ್ರಮವನ್ನೂ ಉಂಟು ಮಾಡುವುದಿಲ್ಲ. ಸ್ನೇಹಿತರೇ ಇವೊತ್ತು ಹುಣ್ಣಿಮೆ. ಚಂದ್ರ ಮಾಮೂಲಿ ಹುಣ್ಣಿಮೆಗಳಿಗಿಂತಲೂ ರಮ್ಯ ಮನೋಹರವಾಗಿ ಕಾಣುತ್ತಿದ್ದಾನೆ.ನೋಡಿರದಿದ್ದರೆ ಒಮ್ಮೆ ನೋಡಿ ಮಲಗಿ.
- ಕೇಶವ ರೆಡ್ಡಿ ಹಂದ್ರಾಳ – ಸುಮಾರು ಐನೂರು ಕಥೆಗಳು , ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಕೆ ಎ ಎಸ್ ಅಧಿಕಾರಿಯಾಗಿ ನಿವೃತ್ತಿಯನ್ನು ಹೊಂದಿದ್ದಾರೆ.