ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೧)

ಅನುಸೂಯಾ ತಾಯಿಯ ಮಕ್ಕಳೆಂದರೆ ದತ್ತಾತ್ರೇಯ, ದೂರ್ವಾಸ ಮತ್ತು ಚಂದ್ರ, ಇವರನ್ನು ತ್ರಿಮೂರ್ತಿಗಳ ರೂಪ ಎಂದು ಬಣ್ಣಿಸಲಾಗುತ್ತೆ‌. ಸತಿ ಅನುಸೂಯಾ ಮಂದಿರದಿಂದ ನರ್ಮದಾ ನದಿ ಸುಮಾರು 800 ಮೀಟರ್ ದೂರ ಇದೆ‌. ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಇವತ್ತು ಮತ್ತು ನಿನ್ನೆ ಬೆಳಿಗ್ಗೆ ಎದ್ದೊಡನೆ ಮಂಜು ತುಂಬಿದ ವಾತಾವರಣ ನೋಡುವುದೆ ಆಗಿದೆ. ತೀವ್ರ ಚಳಿಗಾಳಿ, ದಟ್ಟ ಮಂಜು, ಮೋಡ ಕವಿದ ವಾತಾವರಣ, ಸುತ್ತಲೂ ಕಾಡು, ಕಾಡಿನೊಳಗೊಂದು ಆಶ್ರಮ. ಅದೆಲ್ಲೋ ಮಳೆ ಸುರಿಯುತ್ತಿರುವ ಹಾಗೆ ಅನಿಸುತ್ತಿದೆ. ಸೂರ್ಯ ಹಾಜರಾಗಿ ಎಳೆ ಬಿಸಿಲು ಚಾಚಿದ್ದೆ 12:30 ಕ್ಕೆ ಆಮೇಲೆ 3 ಗಂಟೆಗೆ ನಾಪತ್ತೆ ಆಸಾಮಿ.
ಇಲ್ಲಿ ಬೆಳಿಗ್ಗೆ 12° ತಾಪಮಾನ ಇತ್ತು. ತಂಪು ಗಾಳಿಗೆ ಪದೇ ಪದೇ ಬೆಚ್ಚಗೆ ಹೊದ್ದುಕೊಂಡು ಮಲಗಿಬಿಡೋಣ ಎನಿಸುತ್ತಿತ್ತು. “ಚಹಾ ಕುಡಿಯಲು ಬನ್ನಿ” ಎಂದು ಕರೆಯಲು ಬಂದ ಸಾಧು, ನನ್ನ ನೋಡಿದವರೆ “ನೀವು ಇಂದು ಪ್ರಯಾಣ ಮುಂದುವರಿಸಬೇಡಿ.. ಚಳಿ ತುಂಬಾ ಇದೆ.. ಇಲ್ಲಿಯೇ ಉಳಿದುಕೊಳ್ಳಿ” ಎಂದರು.

ಈ ಚಳಿಗೆ ತತ್ತರಿಸಿದ್ದ ನನಗೂ ಹಾಗೇ ಅನಿಸುತ್ತಿತ್ತು. ಚಹಾ ಕುಡಿದು, ಸ್ನಾನ ಮುಗಿಸಿ ಬಂದವನೇ ಸ್ಲೀಪಿಂಗ್ ಬ್ಯಾಗನಲ್ಲಿ ತೂರಿಕೊಂಡು, ಸಾಧು ಕೊಟ್ಟಿದ್ದ ಪುಸ್ತಕ ಓದುತ್ತಾ ಮಲಗಿದೆ.
ನಾನು ಇವಾಗ ಇರುವುದು ಗುಜರಾತ್’ನ “ಕಹೋಣಾ” ಗ್ರಾಮದ “ತಪೋವನಧಾಮ ಆಶ್ರಮ” ಭಗವಾನ್ ಸಂಕಟ ಮೋಚನ ಹನುಮಾನ್’ನನ್ನು ಆರಾಧಿಸುವ ಆಶ್ರಮ.
ಈ ಆಶ್ರಮಗಳಲ್ಲಿ ದಿನಕ್ಕೆರಡು ಬಾರಿ ಭೋಜನ ವ್ಯವಸ್ಥೆ ಇರುತ್ತೆ‌. ಬೆಳಿಗ್ಗೆ 11:30 ರಿಂದ 1: 30 ವರೆಗೆ ಮತ್ತು ಸಾಯಂಕಾಲ 6:30 ರಿಂದ 7:30. ದಿನಕ್ಕೆ ಎರಡು ಬಾರಿ ಆಹಾರ ಸೇವನೆಯ ನಿಯಮ.

ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ತುರಂತ್ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು, ಅದು ದಿನಕ್ಕೆರಡು ಬಾರಿ. “ಜೈನ್ ಸಮುದಾಯ” ದ ಮುನಿಗಳು ಈ ಕ್ರಮವನ್ನು ಪಾಲಿಸುತ್ತಾರೆ, ಹಿಂದೂ ಧರ್ಮದ ಹಲವು ಮುನಿಗಳು ಪಾಲಿಸುವರು ಮತ್ತು ಆಯುರ್ವೇದ ಗ್ರಂಥಗಳು ಇದನ್ನು ಸಮರ್ಥಿಸುತ್ತವೆ.

ಇವಾಗ Intermittent fasting ಎಂಬ ಹೆಸರಿನಲ್ಲೀ ಈ ಆಹಾರ ಸೇವಿಸುವ ಪದ್ಧತಿ ಜನಮನ್ನಣೆ ಗಳಿಸುತ್ತಿದೆ. Lifestyle disorder ಗಳಿಗೆ ಇದು ಅತ್ಯುತ್ತಮ ಸಲಹೆ ಮತ್ತು ಔಷಧಿ. ನಾನಿರುವ ಆಶ್ರಮದ ಸುತ್ತ ಕಾಡು ಇದೆ, ಆಶ್ರಮದ ಎದುರಿಗೆ ರಸ್ತೆಯಿದ್ದು, ವಾಹನಗಳು ಅಪರೂಪಕ್ಕೆ ಓಡಾಡುತ್ತವೆ. ಶಾಂತ ವಾತಾವರಣದ ಆಶ್ರಮ. ಇಲ್ಲಿ ಹಕ್ಕಿಗಳದ್ದೆ ಕಾರುಬಾರು.

ಗೋಶಾಲೆ ಇದ್ದು, ಆಶ್ರಮಕ್ಕೆ ಹಾಲಿನ ಅವಶ್ಯಕತೆ ಪೂರೈಸುತ್ತಿದೆ. ಇಂದು 3 ಬಾರಿ ಬಿಸಿ ಬಿಸಿ ಚಹಾ ನನ್ನ ಬೆಚ್ಚಗೆ ಇಟ್ಟಿತ್ತು. ಬಿಸಿ ಬಿಸಿ ಚಪಾತಿ, ಅನ್ನ, ಕಿಚಡಿ, ಆಲೂಗಡ್ಡೆ ಮತ್ತು ಬದನೆಕಾಯಿ ಪಲ್ಯ ಎಲ್ಲವೂ ರುಚಿಕರ. ಚಳಿಗೆ ಹೇಳಿ ಮಾಡಿಸಿದಂತ ಆಹಾರ. ಎಲ್ಲವನ್ನೂ ಬಿಸಿ ಇರುವಾಗಲೇ ಬಡಿಸಿದರು.

ಆ ತಾಯಿ ನರ್ಮದೆಯ ಕೃಪಾಕಟಾಕ್ಷದಿಂದ ಈ ಆಶ್ರಮಗಳು ನಡೆಯುತ್ತಿವೆ, ನಾವು ಅವಳ ಪ್ರದಕ್ಷಿಣೆಗೆ ಹೊರಟು ನಿಂತ ಶ್ರದ್ಧಾಳುಗಳು. ತಾಯಿಯ ಆಶೀರ್ವಾದದಿಂದ ಎಲ್ಲಾ ಸಮಯದಲ್ಲೂ ಸಹಾಯ, ಸಹಕಾರ, ಅನ್ನ, ವಸತಿ, ಧೈರ್ಯ, ದಾರಿ ಎಲ್ಲವೂ ದಕ್ಕಿದೆ. ಅವಳನ್ನು ಬೆನ್ನಿಗೆ ಹೊತ್ತು ಸಾಗುತ್ತಿದ್ದೇನೆ. ಎಲ್ಲರೂ ಗುಂಪಿನಲ್ಲಿದ್ದರೆ.. ಇನ್ನೂ ಕೆಲವರು ತಮ್ಮ ಬಾಳ ಸಂಗಾತಿಯೊಡನೆ ಹೆಜ್ಜೆ ಹಾಕುತ್ತಾರೆ. ಅಪರೂಪಕ್ಕೆ “ಏಕ್ ನಿರಂಜನ್,” ತರಹ ನನ್ನಂಂತವರೂ ಯಾರ ಹಂಗಿಲ್ಲದೆ, ನರ್ಮದಾ ತಾಯಿಯ ಲೀಲೆ ಎಂಬಂತೆ ಮಂದುವರಿಯುತ್ತಾರೆ‌.

ಬೆಳಿಗ್ಗೆ ಎದ್ದಾಗ ವಾತಾವರಣದಲ್ಲಿ ಹೆಪ್ಪುಗಟ್ಟಿದ ಇಬ್ಬನಿ ಆದರೆ ಚಳಿಗಾಳಿಯ ಆರ್ಭಟ ಇರಲಿಲ್ಲ. ತಣ್ಣನೆಯ ಇಬ್ಬನಿಯಿಂದ ರಕ್ಷಿಸಿಕೊಳ್ಳಲು ಉಣ್ಣೆಯ ಅಂಗಿ, ಟೋಪಿ, ಮುಖಗವಸು ಮತ್ತು ಕೈಗವಸು ಧರಿಸಿ ನಂದಿಯನ್ನು ತಾಯಿ ನರ್ಮದೆಯ ದಡಕ್ಕೆ ಹತ್ತಿರದ ರಸ್ತೆಯಲ್ಲಿ ನಡೆಸತೊಡಗಿದೆ.

ರಸ್ತೆಯ ತುಂಬಾ ಇಬ್ಬನಿ, ಧರಿಸಿದ ಬಟ್ಟೆಗಳು ಒಳಗಿನಿಂದ ಬೆವರಿಗೆ ತೊಪ್ಪೆಂದು ತೊಯ್ದರೆ, ಮೇಲೆ ಇಬ್ಬನಿಯಿಂದ ಇನ್ನಷ್ಟು ತೊಯ್ದು ತಣ್ಣಗಾದವು, ಮೋಡ ಕವಿದ ವಾತಾವರಣವಿತ್ತು. ರಸ್ತೆಯಲ್ಲಿ ನಂದಿಯನ್ನು ತೀರಾ ನಿಧಾನವಾಗಿ ಓಡಿಸತೊಡಗಿದೆ ಇಲ್ಲವಾದರೆ ಖಬರುಗೆಟ್ಟು ಬರುವ ವಾಹನಗಳಿಂದ ಅಪಾಯ ತಪ್ಪಿದ್ದಲ್ಲ. ರಸ್ತೆಯಲ್ಲಿ ಒಬ್ಬ ಸನ್ಯಾಸಿ, ದಂಡವತ್ (ದೀಡ ನಮಸ್ಕಾರ) ಹಾಕುತ್ತಾ ನರ್ಮದಾ ಪ್ರದಕ್ಷಿಣೆ ಮಾಡುತ್ತಿದ್ದಾರೆ‌. ಈ ಪದ್ಧತ ಪರಿಕ್ರಮ ಅಷ್ಟು ಸುಲಭವಲ್ಲ. ದೇಹವನ್ನು ಬಹುವಾಗಿ ದಂಡಿಸಬೇಕಾಗುತ್ತೆ. ಈ ಪರಿಕ್ರಮ ಪೂರ್ಣವಾಗಲು 3 ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು.

ಕಹೋಣಾದಿಂದ ಹೊರಟು… ನಿಂತಿದ್ದು “ಅಂಬಾಲಿ”ಯ ಸತಿ ಅನುಸೂಯಾ ಮಂದಿರಕ್ಕೆ. ಸತಿ ಅನುಸೂಯಾ ಅತ್ರಿ ಮಹರ್ಷಿಯ ಪತ್ನಿ ಮತ್ತು ಕಪಿಲ ಮುನಿಯ ಸಹೋದರಿ‌. ತಪಸ್ವಿ ಮತ್ತು ಧರ್ಮನಿಷ್ಠ ಮಹಿಳೆಯಾಗಿದ್ದಳು. ತ್ರಿಮೂರ್ತಿಗಳನ್ನು ಶಿಶುಗಳಾಗಿ ಪರಿವರ್ತಿಸಿ, ಊಟ ಮಾಡಿಸಿದ್ದ ವಿಶೇಷ ಶಕ್ತಿಯ ಮಹಿಳೆ. ಸದಾ ಪೂಜೆ, ತಪಸ್ಸಿನಲ್ಲಿರುತ್ತಿದ್ದ ಮಹಿಳೆ.
ನರ್ಮದಾ ನದಿಯ ತಟದಲ್ಲಿ ತನ್ನ ಮಕ್ಕಳಿಗೆ ಜನ್ಮ ನೀಡಿದಳಂತೆ. ತಾನು ತಪಸ್ಸು ಮಾಡಿದ್ದ ಸ್ಥಳವದು‌. ಇದು ಮಂದಿರ ಮತ್ತು ಅನ್ನಕ್ಷೇತ್ರವಾಗಿದೆ‌‌.

ಅನುಸೂಯಾ ತಾಯಿಯ ಮಕ್ಕಳೆಂದರೆ ದತ್ತಾತ್ರೇಯ, ಧೂರ್ವಾಸ ಮತ್ತು ಚಂದ್ರ. ಇವರನ್ನು ತ್ರಿಮೂರ್ತಿಗಳ ರೂಪ ಎಂದು ಬಣ್ಣಿಸಲಾಗುತ್ತೆ‌. ಸತಿ ಅನುಸೂಯಾ ಮಂದಿರದೀಂದ ನರ್ಮದಾ ನದಿ ಸುಮಾರು 800 ಮೀಟರ್ ದೂರ ಇದೆ‌. ಪ್ರತಿ ವರ್ಷವೂ ಮಳೆ ಸುರಿದಾಗ, ದೇವಿ ನರ್ಮದೆ, ದೇವಸ್ಥಾನದ ತನಕ ಉಕ್ಕಿ ಬಂದು ಅನುಸೂಯಾ ಮಾತೆಯನ್ನು ಭೇಟಿಯಾಗುವಳಂತೆ.

ದಕ್ಷಿಣ ಪ್ರಯಾಗ ಎಂದು ಪ್ರಸಿದ್ದಿಯಾದ “ಕರನಾಲಿ”ಯ ಕುಂಬೇರ ಭಂಡಾರಿ ತೀರ್ಥವನ್ನು ಭೇಟಿ ಮಾಡಿದೆ‌. ಇದು ತ್ರಿವೇಣಿ ಸಂಗಮವಾಗಿದ್ದು 3 ನದಿಗಳ ಸಮಾಗಮವಾಗುತ್ತೆ.
ನರ್ಮದಾ ನದಿಗೆ ಓರಸಂಗ್ ಮತ್ತು ಗುಪ್ತ ಸರಸ್ವತಿ ನದಿಗಳು ಸೇರುವವು. ಅಲ್ಲಿಂದ ನದಿಯ ದಂಡೆಯ ಜೊತೆ ಹೊರಟು ಸಂಜೆಯ ಸಮಯಕ್ಕೆ ತಲುಪಿದ್ದು “ತಿಲಕವಾಡಾ”ದಿಂದ ಅನತಿ ದೂರದ “ಮಣಿನಾಗೇಶ್ವರ ಆಶ್ರಮ”ಕ್ಕೆ. ಆಶ್ರಮಕ್ಕೆ ಬರುವ ಸಮಯಕ್ಕೆ ಕತ್ತಲು ಕವಿಯುತ್ತಿತ್ತು‌. 8 ಕ್ಕೆ ಭೋಜನ ಮುಗಿಸಿ, ಮಲಗಿರುವೆ.

ಇಂದು ಒಟ್ಟು ಕ್ರಮಿಸಿದ 75 ಕಿ. ಮೀಟರ್.

ಮುಂದಿನ ಪಯಣ ನಾಳೆಗೆ.
ನರ್ಮದೇ ಹರ್

ಹಿಂದಿನ ಸಂಚಿಕೆಗಳು :


  • ಡಾ. ಪ್ರಕಾಶ ಬಾರ್ಕಿ –  ವೈದ್ಯರು, ಲೇಖಕರು, ಕಾಗಿನೆಲೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW