ನರ್ಮದಾ ಪ್ರದಕ್ಷಿಣೆ ಯಾತ್ರೆ – (ಭಾಗ – ೧೮)

ಚಿಕ್ಕ ಆಂಜನೇಯನ ಮೂರ್ತಿ ಎದುರು ಒಂದು ಹೆಣ್ಣುಮಗಳು ಕಿರುಚುತ್ತಾ ಅಳುತ್ತಿದ್ದಳು, “ಮತ್ತೊಮ್ಮೆ ಬರುವುದಿಲ್ಲ ಎಂದು ಆಣೆ ಮಾಡು” ಎಂದು ಮತ್ತೊಬ್ಬ ಗದರಿಸುತ್ತಿದ್ದ. ಹೌದು ಅವಳೊಳಗಿನ ಪ್ರೇತ ಬಿಡಿಸುವ ಯತ್ನ ನಡೆದಿತ್ತು. ಮುಂದೇನಾಯಿತು ಡಾ. ಪ್ರಕಾಶ ಬಾರ್ಕಿ ಅವರ ನರ್ಮದಾ ಪರಿಕ್ರಮಾ ಅನುಭವ ಕಥನ ತಪ್ಪದೆ ಮುಂದೆ ಓದಿ…

ಬೆಳಗಿನ ಚಳಿಗೆ ಸ್ವಲ್ಪ ಹೊತ್ತು ಹೊರಟರೆ ಸಾಕು ಕೈ ಬೆರಳು ಜೋಮು ಹಿಡಿಯುತ್ತವೆ. ಸೂರ್ಯನ ತಾಪ ಹೆಚ್ಚಿರುವ ಸಮಯದಲ್ಲೂ ಚಳಿಗಾಳಿ ಬೀಸುತ್ತಿರತ್ತೆ. ಇವತ್ತು ಬೆಳಿಗ್ಗೆ 6:30 ಕ್ಕೆ ನಂದಿಯನ್ನು ರಸ್ತೆಗಿಳಿಸಿದೆ. ನೇಮಾವರದ ಹೊರಭಾಗದಲ್ಲಿದ್ದ ದಂಡಿ ಸ್ವಾಮಿ ಆಶ್ರಮದಿಂದ ಊರಿನ ಮಧ್ಯಕ್ಕೆ ಬಂದೆ. ಅಲ್ಲಿಂದ ಪುರಾಣ ಪ್ರಸಿದ್ಧ ಪ್ರಾಚೀನ ಸಿದ್ಧನಾಥ ಮಹಾದೇವ ದೇವಸ್ಥಾನದ ದರ್ಶನ, ನರ್ಮದಾ ದೇವಿ ದೇವಸ್ಥಾನ ದರ್ಶನವಾಯಿತು.

ನದಿಯ ಮಧ್ಯ ಭಾಗದಲ್ಲಿ ಸ್ವಯಂಭೂ ಶಿವಲಿಂಗವಿದ್ದು, ಸ್ವಯಂ ಗಣೇಶ ಅಲ್ಲಿ ತಪಸ್ಸು ಮಾಡಿದ್ದನಂತೆ. ಶಿವಲಿಂಗದ ಕೆಳಗೆ ನಾಭಿಯ ರೀತಿ ರಚನೆಯಿದೆ. ನದಿಯ ಮಧ್ಯದಲ್ಲಿ ಇದ್ದುದರಿಂದ ಪರಿಕ್ರಮ ಮಾಡುವವರಿಗೆ ನದಿಯಲ್ಲಿ ಹೋಗುವುದು ನಿಷಿದ್ಧ. ದೂರದಿಂದ ಕೈ ಮುಗಿದು ತೃಪ್ತನಾದೆ. ಭಗವಾ ಧ್ವಜ ಗಾಳಿಯಲ್ಲಿ ತೇಲುತ್ತಿದ್ದು ಮತ್ತು ಶಿವಲಿಂಗ ಮಾತ್ರ ಕಾಣಿಸುತ್ತದೆ. ಸಂಪೂರ್ಣ ನದಿಯ ಮಧ್ಯದ ಭಾಗವಿದು‌, ಆದ್ದರಿಂದಲೆ ನಾಭಿ ಸ್ಥಳ ಎಂದು ಕರೆಯುವರು.

This slideshow requires JavaScript.

 

ಅಲ್ಲಿಂದ ನದಿಯ ದಂಡೆಯ ಜೊತೆಗೆ ನಂದಿಯನ್ನು ಓಡಿಸತೊಡಗಿದೆ. ಸುಮಾರು ಹಳ್ಳಿಗಳು ಸಿಗುತ್ತಿದ್ದವು. ಪ್ರತಿ ಹಳ್ಳಿಯಲ್ಲಿ ಜಾತ್ರೆಯಂತ ವಿಜೃಂಭಣೆ, ಊರಿನಲ್ಲಿ ದೊಡ್ಡದಾಗಿ ಡಿಜೆ ಹಾಕಿಕೊಂಡು ಊರು ತುಂಬಾ ಮೆರವಣಿಗೆ, ಊರಿನ ಹೆಣ್ಣು ಗಂಡೆಂಬ ಭೇದವಿರದೆ ಡಿಜೆ ಸಾಂಗ್’ಗಳಿಗೆ ಹೆಜ್ಜೆ ಹಾಕುತ್ತಿದ್ದರು. ಎಲ್ಲರದೂ ಸಾಂಪ್ರದಾಯಿಕ ಉಡುಗೆ, ತಿಲಕ , ಕೇಸರಿ ಧ್ವಜದಲ್ಲಿ ಮುಳುಗಿ ಹೋಗಿದ್ದರು. ಭಗವಾನ್ ರಾಮನ ಪ್ರತಿಮೆಯ ಪ್ರಾಣ ಪ್ರತಿಷ್ಠಾಪನೆ, ರಾಮ ಮಂದಿರ ಎಲ್ಲರಲ್ಲೂ ರಂಗು ಹೆಚ್ಚಿಸಿತ್ತು.

ರಸ್ತೆಯಲ್ಲಿ ಹೋಗಿ ಬರುವವರಿಗೆ ವಿಶೇಷ ಆತಿಥ್ಯ.

“ತುರನಾಲ” ಎಂಬ ಗ್ರಾಮದಲ್ಲಿ ನರ್ಮದೆಗೆ ಗೌನಿ ಎಂಬ ನದಿ ಬಂದು ಸೇರುತ್ತದೆ. ಇದೊಂದು ಸಂಗಮ ಸ್ಥಾನ. ಅಲ್ಲಿಯೇ ನದಿ ದಂಡೆಗೆ ಪರಶುರಾಮ ತನ್ನ ಮಾತಾ ಪಿತೃವಿಗೆ “ಪಿಂಡದಾನ” ಮಾಡಿದ್ದಂತೆ‌.‌ ಅಲ್ಲಿ ಬಂಡೆಯ ಮೇಲೆ ಪಿಂಡಗಳು ಕಲ್ಲಿನಲ್ಲಿವೆ. ಇವತ್ತಿಗೂ ಅವುಗಳಿಗೆ ವಿಶೇಷ ಪೂಜೆ ನೆರವೇರುತ್ತದೆ. ಈ ಸ್ಥಳವನ್ನು ವೀಕ್ಷಿಸಿ ಸ್ವಲ್ಪ ಹೊತ್ತು ಕೂತಿದ್ದೆ‌.
ನರ್ಮದೆಯ ದಡ ಯಾವಾಗಲೂ ಆಕರ್ಷಣೀಯ. ಧನಾತ್ಮಕ ಶಕ್ತಿ ಹೇರಳವಾಗಿದೆ. ಕಣ್ಮುಚ್ಚಿದರೆ ಶಾಂತಿ, ಆನಂದದ ಅಲೆಗಳು.

ಅಲ್ಲಿಂದ ನರ್ಮದೆಯ ತಟದಲ್ಲಿಯೇ ಮುಂದೆ ಹೊರಟೆ. ಮಧ್ಯಾಹ್ನ “ಸಾತದೇವ” ಎಂಬ ಹಳ್ಳಿಯಲ್ಲಿ ಭೋಜನವಾಯಿತು‌. ಸಾಯಂಕಾಲದ ಹೊತ್ತಿಗೆ.. ಸೆಹೋರ್ ಜಿಲ್ಲೆಯ ” ರೇವುಗಾಂವ್”ನ ಚಿತ್ರಕೂಟ ಆಶ್ರಮಕ್ಕೆ ಬಂದೆ‌. ನರ್ಮದೆಯ ತಟದಲ್ಲಿನ ಆಶ್ರಮದಲ್ಲಿ ತಂಗಿರುವೆ.

ಇವತ್ತು ಈ ಊರಿನಲ್ಲಿ ಊಟದ ವ್ಯವಸ್ಥೆಯಿತ್ತು. ಊರಿಗೆ ಊರೆ ಸಂಭ್ರಮದಲ್ಲಿತ್ತು. “ರಾಮಮಂದಿರ ಲೋಕಾರ್ಪಣೆ ಸಂಬಂಧ ಅನ್ನದಾನ ನಡೆಯುತ್ತಿದೆ ಬನ್ನಿ” ಎಂದು ಊರಿನ ಹಿರಿಯರೊಬ್ಬರು ಕರೆದುಕೊಂಡು ಹೋದರು‌. ವಿಶೇಷ ಆತಿಥ್ಯ ನೀಡಿದರು‌. ಇಂದು ಮತ್ತೊಂದು ನೈಜ ಹಿಂದೂಗಳ ಹಬ್ಬ.

ಬೆಳಗಿನ ಚಳಿ ಲೆಕ್ಕಿಸದೆ ನದಿಯಲ್ಲಿ ಸ್ನಾನ ಮಾಡಿದ್ದಾಯಿತು, ನದಿಯ ನೀರು ಬೆಚ್ಚಗಿದ್ದವು. ಆಮೇಲೆ ಚಹಾ ಗಂಟಲಲ್ಲಿ ಇಳಿದ ತಕ್ಷಣ ಮೈಯಲ್ಲಿ ಲವಲವಿಕೆ ತುಂಬಿಕೊಂಡಿತು.
ನಂದಿಯ ಮೇಲೆ ನಿತ್ಯದ ಲಗೇಜುಗಳನ್ನು ಏರಿ , ಸವಾರಿ ಹೊರಟಾಯಿತು.

ಹತ್ತು ಕಿ.ಮೀ ನಂದಿಯನ್ನು ಓಡಿಸಿದಾಗ ಮೈಯಲ್ಲಿ ಬೆವರು ಇಳಿಯತೊಡಗಿತು, ಚಳಿಯು ದೂರ ದೂರ. ಹಳ್ಳಿ ಹಳ್ಳಿಗಳನ್ನು ದಾಟುತ್ತಾ, ಕೈ ಮುಗಿದು “ನರ್ಮದೆ ಹರ್”! ಎಂದು ಹರಸುತ್ತಿದ್ದವರಿಗೆ, ವಾಪಸ್ಸು “ಹರ್ ಹರ್ ನರ್ಮದೆ” ಎಂದು ಬೆನ್ನು ಬಾಗಿಸುತ್ತಾ ಪ್ರಯಾಣ ಮುಂದುವರಿಸಿದೆ. ಪ್ರತಿ ಹಳ್ಳಿಯಲ್ಲಿ ಸೇವೆ ಮಾಡುವವರು ಇದ್ದಾರೆ. ಚಹಾ, ಬಿಸ್ಕಿಟ್ ಕೊಟ್ಟು ಸತ್ಕರಿಸುವ ಮಹಾನ್ ದಾನಿಗಳು. ಕೈ ಮುಗಿದು ನಮ್ಮನ್ನು ಕರೆದು ಚಹಾ ಕುಡಸಿ ಕಳಿಸುವ ಈ ಹೃದಯವಂತರ ಮನೆ, ಅವರ ಸ್ಥಿತಿ ನೋಡಿದರೆ ಆಶ್ಚರ್ಯವಾಗುತ್ತದೆ.

ಇವರಾರು ಮಹಡಿಯಲ್ಲಿ ಇರುವವರಲ್ಲ… ಹಣ ಕಂತೆಗಟ್ಟಲೆ ತುಂಬಿಕೊಂಡವರೂ ಅಲ್ಲಾ. ಸಾಮಾನ್ಯ ಜೀವನ ನಡೆಸುತ್ತಾ, ಉತ್ಕೃಷ್ಟ ಬದುಕು ಬದುಕುತ್ತಿರುವ ಮಹಾನ್ ದಾನಿಗಳು.

ತಮ್ಮ ಪ್ರಚಾರ ಬಯಸದ ಇವರು, ತಲೆಮಾರುಗಳಿಂದ ನರ್ಮದಾ ಪರಿಕ್ರಮ ಯಾತ್ರಿಗಳ ಸೇವಕರು. ಇವರಿಗೆ ಶಿರಬಾಗಿಸಿ ನಮಿಸಿ ಬಂದೆ. ಮುಂದೆ “ಸಪ್ತಧಾರಾ” ಘಾಟ್ ಗೆ ಹೊರಟೆ. ಆಂವಲಿಘಾಟ್ ಊರಿನಿಂದ ಮುಂದೆ ನಡೆದರೆ, ನರ್ಮದಾ ನದಿ ಏಳು ಟಿಸಿಲುಗಳಾಗಿ ಹರಿಯುತ್ತಾ ನಡೆದಿದೆ ಆದ್ದರಿಂದಲೆ ಸಪ್ತಧಾರಾ ಎನ್ನುವರು.

ಒಂದೊಂದು ಟಿಸಿಲು ಸಪ್ತ ಋಷಿಗಳಾದ ಕಶ್ಯಪ, ವಸಿಷ್ಠ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ಭರದ್ವಾಜ ಮತ್ತು ಗೌತಮ ಮಹರ್ಷಿಗಳ ಸಂಕೇತವಂತೆ. ಮುಂದಿನ ಪಯಣ ಕಠಿಣವಾದದ್ದು.. ನಾನು ಹೋಗಿದ್ದು ಪಾದಚಾರಿ ಮಾರ್ಗದಲ್ಲಿ. ಗೋದಿ ಹೊಲಗಳ ಬದುವಿನಲ್ಲಿ, ಹಳ್ಳಿಗಳ ನಡುವಿನ ಕಾಲುದಾರಿಯಲ್ಲಿ, ಬೆಂಚುಕಲ್ಲು, ಮಣ್ಣು, ಜಾರು ರಸ್ತೆಗಳಲ್ಲೆಲ್ಲಾ ನಂದಿಯನ್ನು ಓಡಿಸತ್ತಿದ್ಧೆ. ಕೈ ತೋಳುಗಳು ಸಣ್ಣಗೆ ನೋವು ಬರುತ್ತಿದ್ದವು. ನಂದಿಯ ಹ್ಯಾಂಡಲ್ ಬಿಗಿ ಹಿಡಿದಿಡಿದು.

This slideshow requires JavaScript.

 

ಇವೆಲ್ಲ ಹಳ್ಳಿಗಳನ್ನು ದಾಟಿ ಮುಖ್ಯ ರಸ್ತೆಗೆ ಬಂದಾಗ ಸಮಯ 12 ಗಂಟೆ ದಾಟಿತ್ತು. ಹಲವು ರಾಮಮಂದಿರಗಳು ಇಲ್ಲಿ ನಿನ್ನೆಯೇ ಲೋಕಾರ್ಪಣೆಯಾಗಿವೆ. 3 ಹಳ್ಳಿಗಳಲ್ಲಿ ಹೊಸ ಹೊಸ ಮಂದಿರಗಳು.

ಮುಂದೆ ಹಳ್ಳಿಗಳ ಕಚ್ಚಾ ರೋಡು ಬಿಟ್ಟು ಹೊರಟ್ಟಿದ್ದಾರೆ ಮುಖ್ಯರಸ್ತೆಗೆ, ಸುಮಾರು 65 ಕಿ.ಮೀ ಚಲಿಸಿದ ನಂತರ “ಬಾಂದ್ರಾಬಾಂದ್ ಘಾಟ್” ಸಿಕ್ಕಿತು, ಇಲ್ಲಿಗೆ “ತವಾ” ಎಂಬ ನದಿ ಬಂದು ಸೇರಿ ಸಂಗಮ ಕ್ಷೇತ್ರ ಸೃಷ್ಟಿ ಮಾಡಿದೆ. ಇಲ್ಲಿ ಆಂಜನೇಯನ ದೇವಸ್ಥಾನಕ್ಕೆ ಹೋದಾಗ ಸುಂದರ ರಾಮ, ಲಕ್ಷ್ಮಣ, ಸೀತೆಯ ಮೂರ್ತಿಗಳ ಕಂಡ ಪುಳಕಿತನಾದೆ, ಆಹಾ..!! ಅದೆಷ್ಟು ಸುಂದರ.

ಇಲ್ಲಿನ ಚಿಕ್ಕ ಆಂಜನೇಯನ ಮೂರ್ತಿ ಎದುರು ಒಂದು ಹೆಣ್ಣುಮಗಳು ಕಿರುಚುತ್ತಾ ಅಳುತ್ತಿದ್ದಳು, “ಮತ್ತೊಮ್ಮೆ ಬರುವುದಿಲ್ಲ ಎಂದು ಆಣೆ ಮಾಡು” ಎಂದು ಮತ್ತೊಬ್ಬ ಗದರಿಸುತ್ತಿದ್ದ.
ಹೌದು ಅವಳೊಳಗಿನ ಪ್ರೇತ ಬಿಡಿಸುವ ಯತ್ನ ನಡೆದಿತ್ತು. ಅವಳು ಉನ್ಮಾದದಲ್ಲಿ ಅಳುತ್ತಿದ್ದಳು‌. ಬುಡಕಟ್ಟು ಸಮಾಜದ ಅನಕ್ಷರಸ್ಥ ಮುಗ್ಧ ಜೀವವದು. ಹೀಗಾದರು ಅವಳೊಳಗಿನ ದುಗುಡ ಹೊರಬಿದ್ದು ಹಗುರಾಗಿ ಚೆಂದಗೆ ಬಾಳಲಿ ಎಂದು ಆ ಆಂಜನೇಯನಿಗೆ ಕೈ ಮುಗಿದೆ.

ಹೋಶಂಗಾಬಾದ್’ನ ರಸ್ತೆ ಹಿಡಿದು ನಂದಿಯನ್ನು ಓಡಿಸತೊಡಗಿದೆ, ಸಂಜೆಯಾದ್ದರಿಂದ ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯ “ಡೋಬಿ” ಗ್ರಾಮದಲ್ಲಿರುವ “ಮಾ ರೇವಾ ಆಶ್ರಮದಲ್ಲಿ” ತಂಗಿರುವೆ.

ಬಿಸಿ ಬಿಸಿ ದಾಲ್ ಕಿಚಡಿ, ಮೂಲಂಗಿ ತರಕಾರಿ, ಬೂಂದಿ ಸಿಕ್ಕಿದ್ದರಿಂದ ಹೊಟ್ಟೆತುಂಬಾ ತಿಂದೆ‌. ಪ್ರತಿ ದಿನ ಒಂದೊಂದು ಊರು, ಬದಲಾಗುವ ಸ್ದಳ, ಎಲ್ಲೆಲ್ಲಿಯೂ ಅನ್ನದಾನಿಗಳು🙏. ಮಾ ನರ್ಮದೆಯ ಮಡಿಲಲ್ಲಿ ಆಡಿ ಬೆಳೆದ ಮಕ್ಕಳು. ಅವರೆಲ್ಲರಿಗೂ ನಮೋ ನಮಃ

ಇವಾಗ ಚಳಿ. ತಾಪಮಾನ 10 ಡಿಗ್ರಿ ಇದೆ. ತಣ್ಣನೆಯ ಗಾಳಿ ನಿಡುಸುಯ್ಯುತಿದೆ.

ಬೆಚ್ಚಗೆ ಚಾದರ ಹೊದ್ದುಕೊಂಡು ಮಲಗುವ ಸಮಯ….

ಮುಂದಿನ ಪಯಣ ನಾಳೆಗೆ.

ನರ್ಮದೆ ಹರ್

ಹಿಂದಿನ ಸಂಚಿಕೆಗಳು :


  • ಪ್ರಕಾಶ ಬಾರ್ಕಿ–  ವೈದ್ಯರು, ಲೇಖಕರು, ಕಾಗಿನೆಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW