‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿ ಪರಿಚಯ

ಲೇಖಕರಾದ ಶ್ರೀ ಪಿ.ವೆಂಕಟೇಶ ಬಾಗಲವಾಡರವರ ‘ನಿಮಗ ತಿಳಿಯೋದಿಲ್ಲ ಬಿಡ್ರಿ’ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ನಿಮಗ ತಿಳಿಯೋದಿಲ್ಲ ಬಿಡ್ರಿ.
ಲೇಖಕರು: ಪಿ.ವೆಂಕಟೇಶ ಬಾಗಲವಾಡ.
ಸ್ಪಂದನ ಪ್ರಕಾಶನ ರಾಯಚೂರು.
ವರ್ಷ: ೨೦೨೫.
ಪುಟಗಳು:೧೩೨.
ಬೆಲೆ:೧೨೦.

ಲೇಖಕರಾದ ಶ್ರೀ ಪಿ.ವೆಂಕಟೇಶ ಬಾಗಲವಾಡರವರು ಅಂಚೆ ಇಲಾಖೆಯಲ್ಲಿ ಸುದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಬರಹದಲ್ಲಿ ತೊಡಗಿಸಿಕೊಂಡು, ತಮ್ಮ ಮೊದಲ ಪುಸ್ತಕವಾದ ಈ ಹಾಸ್ಯಸಂಕಲನವನ್ನು ಪ್ರಕಟಿಸಿದವರು. ಇದರಲ್ಲಿ ೩೫ ವಿವಿಧ ಹಾಸ್ಯ ಪ್ರಬಂಧಗಳಿವೆ. ಅವುಗಳ ಪರಿಚಯ ನಿಮಗಾಗಿ…

*ನಿಮಗ ತಿಳಿಯೋದಿಲ್ಲ ಬಿಡ್ರಿ.

ಬಾಲ್ಯದಲ್ಲಿ ಅತ್ತೆ ಮಾವನೊಂದಿಗೆ ತರಕಾರಿ ತರಲು ,ಬಟ್ಟೆ ಇತರೇ ಅಂಗಡಿಗೆ ಹೋದಾಗ ‘ ನಿಮಗ ತಿಳಿಯುವುದಿಲ್ಲ..ಸುಮ್ಮನಿರಿ ನಾ ಎಲ್ಲಾ ಚೌಕಾಶಿ ಮಾಡತೀನಿ ‘ ಎನ್ನುತ್ತಿದ್ದದ್ದು ಕೇಳಿ ಕೇಳಿ, ಅವರಿಗೆ ಆ ಮಾತು ತೀರಾ ಸಹಜವೆನ್ನಿಸಿತ್ತು. ಆದರೆ ತಮ್ಮ ಜೀವನದಲ್ಲೂ ಮಾವನ ಅವಸ್ಥೆ ಬರುತ್ತದೆಂಬುದು ಅರಿವಾಗಿದ್ದು ಮದುವೆಯಾದ ನಂತರವೇ!

ಬಟ್ಟೆ ಅಂಗಡಿಯಲ್ಲಿ ಸೀರೆ ಆರಿಸುವಾಗ ಅವಳು ‘ ನೋಡ ಬರ್ರಿ…ಡಿಸೈನ್,ಕಲರ್,ಸೆರಗು… ಅಂದಾಗ ‘ಇವರು ಯಾವುದು ಬೇಕು ತಗೋ..ಅಂದಿದ್ದರು. ನಿಮಗ ಏನೂ ತಿಳಿಯಂಗಿಲ್ಲ ಬಿಡ್ರಿ.. ನಾ. ಎಲ್ಲಾ ತಗೋತೀನಿ .. ಎಂದವರ ಹೆಂಡತಿ ಸಾರ್ವತ್ರಿಕವಾಗಿ ಮೊದಲ ಬಾರಿಗೆ ಹೇಳಿದಾಗ ಅವಮಾನವೆನ್ನಿಸಿತ್ತು.

ಹೀಗೆ ನನಗೆ ಗೊತ್ತಾಗುದಿಲ್ಲ ಅಂತ ಗೊತ್ತಾಗದಂಗ ೩೦ ವರ್ಷ ಕಾಲ ಕಳೆದು ನಿವೃತ್ತಿ ಅಂಚಿಗೆ ಬಂದಾಗ ಬಿ.ಪಿ ಪರೀಕ್ಷೆಗೆಂದು ಡಾಕ್ಟರ್ ಬಳಿ ಹೆಂಡತಿಯೊಂದಿಗೆ ಹೋಗಿದ್ದರು.ಮಕ್ಕಳು ದೊಡ್ಡವರಾಗಿ ಅವರ ಪಾಡಿಗಿದ್ದಾರೆ .ಇವರೇ ಬೇಡದ ಒಣಚಿಂತಿ ಹಚ್ಚಿಕೊಂಡು ಒದ್ದಾಡತಾರೆ. ಏನು ಮಾಡುವುದು ಎಷ್ಟು ಹೇಳಿದ್ರೂ ತಿಳಿಯಂಗಿಲ್ಲ.. ಎಂದು ಆಕೆ ಡಾಕ್ಟರಲ್ಲಿ ಪುಕಾರು ಹೇಳಿದ್ದಳು. ಮುಂದೆ ನಿವೃತ್ತಿಯ ನಂತರ ಸೇವಾ ಸೌಲಭ್ಯದ ಹಣ, ಉಳಿತಾಯ ನೋಡಿ ಖುಶಿ ಪಟ್ಟು “ಇವರಿಗೂ ಎಲ್ಲಾ ಗೊತ್ತಗತದ “ಎಂದು ಹೆಂಡತಿ ಬಿರುದು ಕೊಟ್ಟ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದಾರೆ.

 

*ಕಣ್ಣಿಗೆ ಕಾಡಿಗೆ ಬದಲಾಗಿ ಸೋಡಾ ಗ್ಲಾಸ್ ಹಾಕಿಕೊಂಡು, ಟೀ ಶರ್ಟ್ ಪೈಜಾಮ, ಎಣ್ಣೆ ಕಾಣದ ಕೂದಲು ಬಿಟ್ಟ ಇಂದಿನ ಸಾಫ್ಟ್ ವೇರ್ ಹೆಣ್ಣು ಮಕ್ಕಳು ವರ್ಕ್ ಫ್ರಮ್ ಹೋಮ್ ಎಂದು ಸದಾ ಮಂಚದ ಮೇಲೆ ಕುಳಿತು , ಒಂದು ಸಣ್ಣ ಮನೆಕೆಲಸವನ್ನೂ ಕಲಿಯದೇ,ಸರಿಯಾಗಿ ಊಟವನ್ನೂ ಮಾಡದೇ, ಹೊರಗಿನ ಕುರುಕು ತಿಂಡಿಯನ್ನು ನೆಚ್ಚಿರುವ ಬಗ್ಗೆ ಬೇಸರ ವ್ಯಕ್ತ ಪಡಿಸುವ ತಾಯಿಯೊಬ್ಬಳ “ಗೊಣಗಾಟ” ಎನ್ನುವ ಲೇಖನ ನಗೆಯುಕ್ಕಿಸಿದರೂ ಅಲ್ಲಿನ ಸತ್ಯವನ್ನು ಅಲ್ಲಗಳೆಯುವಂತಿಲ್ಲ.

* ತೆಳ್ಳಗಿನ ಹುಡುಗಿಗೆ ಹಂಚಿ ಕಡ್ಡಿ, ಗುಡಾಣಿ ಬಸವ ,ಸಾವಿತ್ರಿಯನ್ನು ಸಾವಿ, ಪವಿತ್ರಳನ್ನು ಪವ್ವಿ, ಸದಾ ನಿದ್ದೆಗಣ್ಣಿನಲ್ಲಿರುವ ಹುಸೇನಿಗೆ ಮಬ್ಬು ಹುಸೇನಿ,ಒಂಟಿ ಕಿವಿ ಗೋವಿಂದ, ಇಂತಾ ಸಾಲ್ಯಾಗಿನ ಅಡ್ಡ ಹೆಸರುಗಳನ್ನು ಈಗಲೂ ನೆನೆಸಿ ಕೊಂಡರೆ ನಿದ್ಯಾಗ ಸಹ ನಗು ಬರತದರೀ ಎನ್ನುತ್ತಾರೆ.

*ಏನ ಬಿಸಲ್ರೀ ಲೇಖನದಲ್ಲಿ ಹೊರಗೆ ಬೇಸಿಗೆಯ ಬಿಸಿಲಿನ ತಾಪ ಒಂದು ಕಡೆಯಾದರೆ, ಇನ್ನೊಂದೆಡೆ ನನ್ನವಳ ಪರಿತಾಪ ಮತ್ತೊಂದು ಕಡೆ. ಇದರ ಜೊತೆಗೆ ಸೂರ್ಯನಿಗೆ ಹಿಡಿಶಾಪ ಎಂದು ತಮಾಷೆ ಮಾಡುತ್ತಲೇ ಬೇಸಿಗೆಯ ಕಷ್ಟವನ್ನು ಹೇಳಿದ್ದಾರೆ.

*ಉತ್ತರ ಕರ್ನಾಟಕದ ವಿಶೇಷ ಸಿಹಿ ಖಾದ್ಯವಾದ ಹೋಳಿಗೆ, ಚಹಾ ಚುರುಮುರಿ, ವಗ್ಗರಣೆ ಮಿರ್ಜಿ, ಸುಡು ಸುಡು ಚಹಾ..ಇವುಗಳ ಬಗ್ಗೆಯೂ ಕೆಲವು ಬರಹಗಳು ಚೆನ್ನಾಗಿವೆ.

*ಸಂತಿ ಸಂಭ್ರಮ ಶೀರ್ಷಿಕೆಯ ಬರಹದಲ್ಲಿ ಹಳ್ಳಿಯಲ್ಲಿ ನಡೆಯುವ ಶನಿವಾರದ ಸಂತೆಯ ಹಾಸ್ಯ ಪ್ರಸಂಗವಿದೆ.

*ನಿವೃತ್ತಿಯ ನಂತರದಲ್ಲಿ ವ್ಯಕ್ತಿಯ ಮನಸ್ಸಿನ ತಳಮಳವೇನು?ಅವರನ್ನು ಜನ ನೋಡುವ ದೃಷ್ಟಿ ಹೇಗಿರುತ್ತದೆ?..ಮನೆಮಂದಿಯ ಉಪದೇಶ, ಇಂತಹ ಅನೇಕ ಉದಾಹರಣೆಯೊಂದಿಗೆ ಕಠೋರ ಸತ್ಯವನ್ನು ಸರಳ ಹಾಸ್ಯದ ಮಾದರಿಯಲ್ಲಿ ಬರೆದಿದ್ದಾರೆ.

* ಹೆಂಡತಿ ಎನ್ನುವ ಅಲಾರಾಂ ಲೇಖನಲ್ಲಿ ಪುರುಷನೊಬ್ಬನ ಗೆಲುವಿನ ಹಿಂದೆ ಸ್ತ್ರೀಯ ಪಾತ್ರ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ.

ಬಾಲ್ಯ, ಹರೆಯ, ಮುಪ್ಪು ಹೀಗೆ ಮನುಷ್ಯನ ಜೀವಿತದ ಅವಧಿಯಲ್ಲಿ ನಡೆಯುವ ಘಟನೆಗಳ ನೆನಪುಗಳೇ ಸರಕಾಗಿ ಇಲ್ಲಿ ರಚನೆಗೊಂಡ ಹಾಸ್ಯ ಮಿಶ್ರಿತ ಲೇಖನಗಳು ಓದುಗನಿಗೆ ಖುಷಿ ನೀಡುತ್ತವೆ.

ಈ ಪುಸ್ತಕದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಉತ್ತರ ಕರ್ನಾಟಕದ ಗ್ರಾಮ್ಯ ಆಡುಭಾಷೆಯ ಸೊಗಡಿನ ಬಹುತೇಕ ಬರಹಗಳು . ದಿನನಿತ್ಯ ನಡೆಯುವ ಘಟನೆಗಳೇ ಇಲ್ಲಿ ಹಾಸ್ಯ ರೂಪಕವಾಗಿದೆ.

ತಮ್ಮ ಅರವತ್ತರ ವಯೋಮಾನದ ನಂತರ ಗಂಭೀರ ಬರವಣಿಗೆಗೆ ಇಳಿದು ಮೊದಲ ಪುಸ್ತಕ ಹೊರತಂದ ಲೇಖಕರ ಕ್ರಿಯಾಶೀಲತೆ ಮೆಚ್ಚುವಂತದ್ದು. ಸುಲಲಿತವಾಗಿ ಓದಿಸಿಕೊಳ್ಳುವ ಈ ಪುಸ್ತಕವನ್ನು ನೀವೂ ಓದಿನೋಡಿ…

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW