ನನ್ನ ಪಾಲಿಗಂತೂ ಪೆಪ್ಪರಮೆಂಟು ಒಂದು ಲೋಕವನ್ನೇ ಸೃಷ್ಟಿಸಿದೆ. ಅತಿ ಸಿಹಿಯೂ ಅಲ್ಲದ, ಅತಿ ಸಪ್ಪೆಯೂ ಅಲ್ಲದ ಹಿತಮಿತ ಸವಿರುಚಿಯ ಪೆಪ್ಪರಮೆಂಟಿನಿಂದ ನಾವು ಕಲಿಯಬೇಕಾದುದು ಬೆಟ್ಟದಷ್ಟಿದೆ. ಈಗ ಪೆಪ್ಪರಮೆಂಟು ಇಷ್ಟವಾಗುತ್ತಾ ಅಂತ ಯಾರಾದರೂ ಕೇಳಿದರೆ ‘ಓಹೋ’ ಎಂದು ಬಾಯಲ್ಲಿ ನೀರು ಸುರಿಸುವವರೆಷ್ಟು ಜನವೋ!- ಡಾ.ಎಚ್.ಎಸ್. ಸತ್ಯನಾರಾಯಣ, ಮುಂದೆ ಓದಿ…
ಸಿಹಿಗಳಲ್ಲಿ ಒಬ್ಬೊಬ್ಬರಿಗೆ ಒದೊಂದು ಇಷ್ಟವಿರಬಹುದು. ಅದಕ್ಕೆ ಅವರವರದೇ ಕಾರಣಗಳಿರುತ್ತವೆ, ಇದನ್ನು ಮನಗಂಡೇ ಇರಬೇಕು ‘ಲೋಕೋಭಿನ್ನ ರುಚಿ’ ಎಂಬ ಮಾತು ಚಾಲನೆಗೆ ಬಂದಿರುವುದು. ಈ ಭಿನ್ನ ರುಚಿ ಎಂಬ ಮಾತನ್ನು ಸ್ವಲ್ಪ ಬದಲಾಯಿಸಿ, ಭಿನ್ನ ಅಭಿರುಚಿ ಎಂದು ಸೇರಿಸಿದರೆ ಸರಿಯಾಗಬಹುದು. ತರತರದ ಸಿಹಿಯಲ್ಲಿ ಯಾವುದೋ ಒಂದು ಮಾತ್ರವೇ ನಮ್ಮ ಮನಸ್ಸನ್ನು ಕದಿಯಬೇಕೆಂದರೆ ಸುಮ್ಮನಾದೀತೆ? ನಾವು ಬಯಸುವ ಸಿಹಿ ಪದಾರ್ಥ ಕೂಡ ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆಂದು ಮನೋವೈದ್ಯರೊಬ್ಬರು ಬರೆದಿದ್ದರು. ಆ ಮಾತನ್ನು ಮತ್ತೆ ಕೆಲವರು ಕೇವಲ ಸಿಹಿಗೆ ಮಾತ್ರ ಸೀಮಿತಗೊಳಿಸದೆ ಬೇರೆ ಬೇರೆ ಆಹಾರದ ಅಭಿರುಚಿಗೆ ವಿಸ್ತರಿಸಿದ್ದೂ ಉಂಟು.
ಅವರ ಪ್ರಕಾರ ಬಿಸಿಬಿಸಿ ಊಟ ತಿಂಡಿ ಬಯಸುವವರಿಗೆ ಗಡಿಬಿಡಿ, ಆತುರಗಳು ಹೆಚ್ಚು. ಸಮಾಧಾನದ ಮನಸ್ಥಿತಿಯವರು ತಣ್ಣನೆ ಊಟ ಪ್ರಿಯರು. ಅಂಥವರಿಗೆ ಕಾಫಿ-ಟೀ ಕೂಡ ‘ತಣ್ಣಗಾಗಲಿ, ಮತ್ತೆ ಕುಡಿದರಾಯ್ತು’ ಎಂಬ ಧೋರಣೆ. ನಮ್ಮ ಯು. ಆರ್. ಅನಂತಮೂರ್ತಿಯವರ ಸೂರ್ಯನ ಕುದುರೆಯಲ್ಲಿ ಬರುವ ಹಡೇ ವೆಂಕಟನಂತೋರಿಗೆ ತಿನ್ನುವ ಪದಾರ್ಥಗಳು ಹೇಗಿದ್ದರೂ ನಡೆಯುತ್ತದೆ. ತಣ್ಣಗೆ ಬಿಸಿಗೆ ತಲೆಕೆಡಿಸಿಕೊಳ್ಳುವ ಜಾಯಾಮನದವನಲ್ಲ. ಅವನ ಬದುಕಿನ ಕ್ರಮ ಕೂಡ ಅಂತೆಯೇ. ಅನಂತಮೂರ್ತಿಯವರ ಭವ ಅಥವಾ ದಿವ್ಯಾ ಕಾದಂಬರಿಯಲ್ಲೊ ನೆನಪಾಗುತ್ತಿಲ್ಲ, ಅಕ್ಕನ ಪಾತ್ರವೊಂದು ಬದುಕಿನ ಎಂಥ ಕ್ಷೋಭೆಯ ಸಂದರ್ಭದಲ್ಲಿಯೂ ತುಂಬ ತಣ್ಣಗೆ ಪ್ರತಿಕ್ರಿಯಿಸುತ್ತಿರುತ್ತದೆ. ಅವಳ ತಣ್ಣನೆಯ ಸ್ವಭಾವಕ್ಕೆ ಅನುಗುಣವಾಗಿ ಅಕ್ಕನಿಗೆ ಊಟದಲ್ಲಿ ತಂಬುಳಿ ಪ್ರೀತಿ! ಎಂ.ಕೆ. ಇಂದಿರಾ ಅವರ ‘ಫಣಿಯಮ್ಮ’ ಒಂದು ಬಾಳೇಹಣ್ಣಿನಲ್ಲಿ ಕಾಲ ಹಾಕುವ ಸಂಯಮದ ಹಿರಿಯ ಜೀವ. ನಮ್ಮ ಸುತ್ತಮುತ್ತಲಲ್ಲಿ, ನಾವು ಓದಿದ ಕತೆ, ಕಾದಂಬರಿಗಳಲ್ಲಿನ ಪಾತ್ರಗಳಲ್ಲಿ ಇಂತಹ ಅನೇಕ ಉದಾಹರಣೆಗಳನ್ನು ಗಮನಿಸುತ್ತಿರುತ್ತೇವೆ.

ಇರಲಿ, ಮಾತು ಎಲ್ಲಿದೆಂಲ್ಲಿಗೋ ಹೋಯಿತು! ಕೆಲವರಿಗೆ ಸಿಹಿಯೆಂದರೆ ಹೋಳಿಗೆಯೇ ಆಗಬೇಕು. ಇನ್ನು ಕೆಲವರಿಗೆ ಜಾಮೂನು, ವಿವಿಧ ಪಾಯಸಗಳು, ಸಿಹಿ ಪೊಂಗಲ್, ಕೇಸರಿಬಾತು, ಕ್ಷೀರಾನ್ನ, ರವೆ ಉಂಡೆ ಯಾವುದಾದರೂ ಆದೀತು. ಮನೆಯಲ್ಲಿ ಹಬ್ಬಕ್ಕೋ ನೆಂಟರು ಬಂದಾಗಲೋ ಮಾಡುವ ಬಗೆ ಬಗೆಯ ಸಿಹಿ ಪದಾರ್ಥಗಳೆಂದರೆ ಪಂಚಪ್ರಾಣ. ಸಿರಿವಂತರ ಮನೆಗಳಲ್ಲಿ ಇವಕ್ಕೆಲ್ಲಾ ಬರಗಾಲವಿಲ್ಲ. ಬಡತನದಲ್ಲಿ ಬೆಳೆದ ನಮಗೆ ಪಾಯಸವೇ ತುಂಬಾ ದುಬಾರಿ! ಅದನ್ನು ಮಾಡಿಬಡಿಸಲು ಹತ್ತು ಸಲ ಯೋಚಿಸಬೇಕಾದ ಕಷ್ಟ ನಮ್ಮ ಮನೆಯಲ್ಲಿ ನೆಲೆಸಿತ್ತು. ನಮ್ಮ ಆರೀಫ್ ರಾಜಾ ಅವರು ‘ಹೊಲಿಗೆ ಯಂತ್ರದ ಅಮ್ಮಿ’ ಎಂಬ ಕವಿತೆಯಲ್ಲಿ ತಾಯಿ ಹಬ್ಬದ ದಿನ ಹೆಚ್ಚೆಂದರೆ ದೂದ್ ಕುರ್ಮ ಮಾಡಿ ಮಕ್ಕಳಿಗೆ ತಿನ್ನಿಸುತ್ತಿದ್ದ ಬಗ್ಗೆ ಬರೆದಿದ್ದಾರೆ. ಮನೆತುಂಬ ಹಸಿದ ಆಸೆಗಣ್ಣಿನ ಮಕ್ಕಳಿರುವ ಎಲ್ಲ ತಾಯಂದಿರ ಸ್ಥಿತಿ ಕೂಡ ಇದಕ್ಕಿಂತ ಭಿನ್ನವೇನಲ್ಲ! ಹೋಗಲುಬಿಡಿ, ಈಗ ಆ ನೆನಪುಗಳೇಕೆ? ಬಡತನ ಇದ್ದದ್ದೇ ನಮ್ಮ ಜೊತೆಗೆ, ಅದರ ಜೊತೆ ನಾವು.

ಎಲ್ಲೋ ಕೆಲವರಿಗೆ ಮಾತ್ರ ಯಾವ ಸಿಹಿಯಾದರೂ ಪ್ರಿಯವೇ! ಇಂಥವರನ್ನು ನಮ್ಮ ಮಲೆನಾಡಿನ ಕಡೆ ‘ಇರುವೆ ಜಾತಿ’ಯ ಜನ ಎಂದು ತಮಾಷೆ ಮಾಡುತ್ತಾರೆ. ಯಾವ ಸಿಹಿ ಪದಾರ್ಥವೂ ಇವರಿಗೆ ವರ್ಜ್ಯವಲ್ಲ. ‘ಭಿನ್ನ ಭೇಧವ ಮಾಡಬೇಡಿರೋ’ ಎಂಬ ತತ್ತ್ವವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುವ ಜನ. ಸಕ್ಕರೆ ಖಾಯಿಲೆ ಬಂದರೂ, ವೈದ್ಯರೂ ತಿನ್ನಬೇಡಿರೆಂದರೂ ಸಿಹಿ ತಿನ್ನುವುದನ್ನು ಈ ಸಿಹಿ ಪ್ರಿಯರು ಬಿಡುವುದೇ ಇಲ್ಲ! ಹಾ.ಮಾ. ನಾಯಕರು ಒಮ್ಮೆ ಸಾಹಿತ್ಯಭೀಷ್ಮ ಡಿ.ವಿ.ಜಿ.ಯವರ ಮನೆಗೆ ಹೋದಾಗ ಗುಂಡಪ್ಪನವರು ತಟ್ಟೆಯ ತುಂಬಾ ಬಿಸಿಬಿಸಿ ಜಿಲೇಬಿ ಹಿಡಿದುಕೊಂಡು ಒಂದೊಂದನ್ನೇ ಮುರಿದು ಬಾಯಿಗಿಟ್ಟುಕ್ಕೊಳ್ಳುತ್ತಾ ಸ್ವರ್ಗಾನಂದದಲ್ಲಿ ತೇಲುತ್ತಿರುವಂತೆ ಕುಳಿತಿದ್ದರಂತೆ. ಅವರಿಗೆ ಡಯಾಬಿಟಿಸ್ ಇರುವುದನ್ನು ಬಲ್ಲವರಾಗಿದ್ದ ನಾಯಕರು “ಕ್ಷಮಿಸಿ ಸರ್, ನೀವು ಸಿಹಿ ತಿನ್ನುವಂತಿಲ್ಲ ಅಲ್ಲವೆ?” ಎಂದು ಕಾಳಜಿ ತೋರಿದಾಗ ಡಿ.ವಿ.ಜಿ.ಯವರು “ಅಯ್ಯೋ ಬಿಡೀಪ್ಪಾ ಕಾಯಿಲೆಯದೇ ಬೇರೆ ಡಿಪಾರ್ಟ್ಮೆಂಟು, ಸಿಹಿ ತಿನ್ನೋದರದ್ದೇ ಬೇರೆ ಡಿಪಾರ್ಟ್ಮೆಂಟು. ಬಯಕೆ ಹುಟ್ಟಿದಾಗ ಚೆನ್ನಾಗಿ ತಿಂದುಬಿಡಬೇಕು, ಆಮೇಲೆ ಔಷಧಿ, ಮಾತ್ರೆ ತಗೋಳ್ಳದು ಇದ್ದೇ ಇದೆ” ಎಂದು ನಸುನಗುತ್ತಾ ನುಡಿದು, ನಾಯಕರಿಗೂ ಬಿಸಿಬಿಸಿ ಜಿಲೇಬಿ ತಂದುಕೊಡುವಂತೆ ಅಡುಗೆ ಮನೆಯಲ್ಲಿದ್ದವರಿಗೆ ಕೂಗಿ ಹೇಳಿದ ಬಗ್ಗೆ ನಾಯಕರು ಬರೆದುಕೊಂಡಿದ್ದಾರೆ. ಗುಂಡಪ್ಪನವರ ಈ ‘ಜೀವನ ಧರ್ಮ ಯೋಗ’ವೇ ನಮಗೆಲ್ಲ ಮಾದರಿಯಲ್ಲವೆ?

ಫೋಟೋ ಕೃಪೆ : twitter
ನನಗೆ ಚಿಕ್ಕಂದಿನಲ್ಲಿ ಪೆಪ್ಪರಮೆಂಟು ಎಂದರೆ ಪಂಚಪ್ರಾಣ. ನಾನು ಶಿಶುವಿಹಾರಕ್ಕೆ ಹೋಗುತ್ತಿದುದೇ ಪೆಪ್ಪರಮೆಂಟು ಕ ಕೊಡ್ತಾರೆ ಅಂತ ಎಂದು ನಮ್ಮಮ್ಮ ಹೇಳುತ್ತಿರುತ್ತಿದ್ದರು. ಈಗ ಶಿಶುವಿಹಾರದ ದಿನಗಳ ನೆನಪಿರುವುದು ಸಾಧ್ಯವಿಲ್ಲವಾದರೂ ಉದ್ದ ಜಡೆಯ ಮೇಡಂ ಒಬ್ಬರು ಪೇಪರಿನಲ್ಲಿ ಸುತ್ತಿ ತಂದ ಪೆಪ್ಪರಮೆಂಟುಗಳನ್ನು ಅಳುತ್ತಿದ್ದವರಿಗೆ ಮೊದಲು ಬಾಯಿಗಿಟ್ಟು ಆಮೇಲೆ ಉಳಿದವರಿಗೆ ಹಂಚುತ್ತಿದುದು ಅಸ್ಪಷ್ಟವಾಗಿ, ಒಂದು ಚಿಕ್ಕ ಪೆಪ್ಪರಮೆಂಟಿನಷ್ಟು ನೆನಪಲ್ಲಿ ಉಳಿದಿದೆ. ಅವರು ವಿವಿಧ ಬಗೆಯ ಗೊಂಬೆ ಆಕಾರದ ಪೆಪ್ಪರಮೆಂಟು ತಂದಿರುತ್ತಿದ್ದರು. ನಾವೆಲ್ಲ ನಮ್ಮ ನಮ್ಮ ಕೈಗೆ ಸಿಕ್ಕವು ಯಾವ ಆಕಾರದವೆಂದು ನೋಡಿ ಖುಷಿಪಟ್ಟುಕೊಳ್ಳುತ್ತಿದ್ದೆವು. ಗಂಡುಭೇರುಂಡದ ಆಕಾರದ್ದು ಸಿಕ್ಕರೆ ಡಬಲ್ ಧಮಾಕ. ಅದು ಉಳಿದವಕ್ಕಿಂತ ತುಸುವೇ ದೊಡ್ಡದಿರುತ್ತಿತ್ತು.
ಪೆಪ್ಪರಮೆಂಟಿನ ಆಕಾರದ ಜೊತೆ, ನನ್ನನ್ನು ಹೆಚ್ಚು ಆಕರ್ಷಿಸುತ್ತಿದ್ದುದು ಅವುಗಳ ಬಣ್ಣ. ಕೆಂಪು, ಹಳದಿ, ಹಸಿರು ಬಣ್ಣದ ಪೆಪ್ಪರಮೆಂಟುಗಳೇ ನಮ್ಮ ಪಾಲಿನ ನವರತ್ನಗಳು. ನನಗೆ ಬೇಕಾದ ಬಣ್ಣ. ಮತ್ತೊಬ್ಬರಿಗೆ ಸಿಕ್ಕಿದರೆ ಬದಲಾಯಿಸಿಕೊಂಡು ಖುಷಿಪಡುವುದು. ಅವುಗಳ ಆಕಾರ, ಬಣ್ಣವನ್ನು ನೋಡಿ ಸಂತೋಷಪಡುವಷ್ಟರಲ್ಲಿ ಅವು ಕೈಯ ಶಾಖಕ್ಕೆ ಜಿನುಗಿ ಅಂಟಿಕೊಳ್ಳುತ್ತಿದ್ದವು. ಕೈಯನ್ನು ಅಂಗಿ, ಚೆಡ್ಡಿಗೆ ಒರೆಸಿಕೊಂಡು ಮನೆಗೆ ಬಂದರೆ “ಇವು ತಾವು ಪೆಪ್ಪರಮೆಂಟು ತಿನ್ನೋದಲ್ಲದೆ, ಬಟ್ಟೆಗೆಲ್ಲಾ ರುಚಿ ತೋರಿಸುತ್ತವೆ” ಅಂತ ದೊಡ್ಡವರು ನಗುತ್ತಾ ಕೊಳೆ ಬಟ್ಟೆಬಿಚ್ಚಿ ಬೇರೆ ಹಾಕುತ್ತಿದ್ದರು.
ಪೆಪ್ಪರಮೆಂಟುಗಳ ಬಣ್ಣದ ಲೋಕ ಒಂದು ಆರ್ಕಷಕ ಧ್ರುವವಾದರೆ, ಮತ್ತೊಂದು ಅದರ ರುಚಿಯದು. ಆಹಾ! ಅದೇನು ಸವಿ ಆ ಪುಟ್ಟ ತಿಂಡಿಯಲ್ಲಿ. ಬಾಯಲ್ಲಿಟ್ಟು ಚಪ್ಪರಿಸಿದರೆ ಖಾಲಿಯಾದ ಎಷ್ಟೋ ಹೊತ್ತಿನ ಮೇಲೂ ಅದು ತನ್ನ ಅಸ್ತಿತ್ವವನ್ನು ಉಳಿಸಿ ಹೋಗಿರುತ್ತಿತ್ತು. ಗಾಜಿನ ತುಂಡುಗಳಂತಹ ಪೆಪ್ಪರಮೆಂಟಿಗೆ ಹೇಗೆ ಬಣ್ಣ, ಸಿಹಿ ರುಚಿಯನ್ನು ತುಂಬಿಸಿರುತ್ತಾರೆಂಬುದು ಈಗಲೂ ನನಗೆ ಸೋಜಿಗದ ವಿಚಾರ. ಕೋಲ್ಗೆಟ್ ಟೂತ್ಪೇಸ್ಟ್ ಬರುತ್ತಿತ್ತಲ್ಲ, ಅದನ್ನೂ ಪೆಪ್ಪರಮೆಂಟು ತಿಂದ ಹಾಗೆ ನುಂಗಿಬಿಡುತ್ತಿದ್ದ ನನಗೆ, ಖಾಲಿಯಾದ ಪೇಸ್ಟಿನ ಡಬ್ಬಿಗಳು ಅಸ್ಥಿಪಂಜರದಂತೆ ಕಾಣುತ್ತಿತ್ತು.

ಆಗಿನ್ನೂ ಪ್ಲಾಸ್ಟಿಕ್ ಯುಗ ಕಾಲಿಟ್ಟಿರಲಿಲ್ಲವಾದ್ದರಿಂದ ತೆಳ್ಳನೆಯ ತಗಡಿನ ಪೇಸ್ಟ್ ಟೂಬುಗಳು ಹಿಚುಕಿ, ಹಿಚುಕಿ ನುಗ್ಗುನುರಿಯಾಗುತ್ತಿತ್ತು. ಅದರೊಳಗೆ ಪೇಸ್ಟನ್ನು ಹೇಗೆ ತುಂಬಿಸುತ್ತಾರೆಂಬುದು ಮತ್ತು ಪೆಪ್ಪರಮೆಂಟಿನೊಳಗೆ ಬಣ್ಣ ಹಾಗೂ ಸಿಹಿಯನ್ನು ಹೇಗೆ ಬೆರೆಸುತ್ತಾರೆಂಬುದು ಎಳವೆಯಲ್ಲಿ ನನ್ನನ್ನು ಕಾಡುತ್ತಿದ್ದ ಮಿಲಿಯನ್ ಡಾಲರ್ ಪ್ರಶ್ನೆಗಳು. ಇದರ ಜೊತೆಗೆ ಇದಕ್ಕೆ ಪೆಪ್ಪರಮೆಂಟು ಎಂಬ ಹೆಸರುನ್ನು ಯಾರಿಟ್ಟರಬಹುದೆಂಬ ಕುತೂಹಲ ಕೂಡ!
ಐದು ಪೈಸೆಗೆ ನಾಲ್ಕು ಅಥವಾ ಐದು ಪೆಪ್ಪರಮೆಂಟು ಬರುತ್ತಿದ್ದ ಕಾಲವದು. ನಮ್ಮ ಅಣ್ಣ-ಅಕ್ಕಂದಿರು ಚಿಕ್ಕವರಿದ್ದಾಗ ಏಳೋ ಎಂಟೋ ಕೊಡುತ್ತಿದ್ದರಂತೆ. ನಾನು ಅಂಗಡಿಗೆ ಹೋಗುವ ಕಾಲಕ್ಕೆ ನಾಲ್ಕಕ್ಕಿಳಿದಿತ್ತು! ಐದು ಪೈಸೆ ಕೊಟ್ಟರೆ ನಮ್ಮೂರಿನ ಕರಿಶೆಟ್ಟರಂಗಡಿಯಲ್ಲಿ ನಾಲ್ಕು ಪೆಪ್ಪರಮೆಂಟು ಕೊಡುತ್ತಿದ್ದರು. ನಾನು ಬೇರೆ ಬೇರೆ ಬಣ್ಣದ ನಾಲ್ಕು ಕೊಡಿರೆಂದು ಪೀಡಿಸುತ್ತಿದ್ದೆ. ಅವರು ಬೇರೆ ಗಿರಾಕಿಗಳಿಲ್ಲದೆ ಕೈ ಬಿಡುವಾಗಿದ್ದರೆ ದೊಡ್ಡ ಗಾಜಿನ ಬಾಟಲಿಯ ರಾಶಿಯಲ್ಲಿ ಹುಡುಕಿ ತೆಗೆದು ಕೊಡುತ್ತಿದ್ದರು. ಹೆಚ್ಚು ಗಿರಾಕಿಗಳಿದ್ದರೆ ‘ಈಗ ಆಯ್ಕಂಡ್ ಕೂರಕ್ಕಾಗಲ್ಲ’ ಅಂದುಬಿಡುತ್ತಿದ್ದರು. “ಯಾವ ಬಣ್ಣದಾದರೇನಂತೆ, ಎಲ್ಲದರ ರುಚಿಯೂ ಒಂದೇ ಅಲ್ಲವಾ?” ಎಂಬ ಮಾತನ್ನು ನಾನು ಆಗಲೂ ಒಪ್ಪುತ್ತಿರಲಿಲ್ಲ, ಈಗಲೂ ಒಪ್ಪುವುದಿಲ್ಲ. ಅವುಗಳ ಆಕಾರ, ರುಚಿ ಒಂದೇ ಇರಬಹುದು, ಆದರೆ ಆ ಬಣ್ಣಗಳು ಸೃಷ್ಟಿಸಿಕೊಡುವ ಅವ್ಯಕ್ತ ಆನಂದವನ್ನು ಕಡೆಗಣಿಸಬಹುದೆ? ನಮ್ಮ ಮನೆ ಸಮೀಪದಲ್ಲಿ ಎರಡು ಶೆಟ್ಟರ ಅಂಗಡಿಗಳಿದ್ದವು. ಎಲ್ಲರೂ ಒಂದನ್ನು ಬಿಳಿಶೆಟ್ರಂಗಡಿ, ಮತ್ತೊಂದನ್ನು ಕರೆಶೆಟ್ರಂಗಡಿ ಎಂದೇ ಕರೆಯುತ್ತಿದುದು. ಬಿಳಿಶೆಟ್ಟರ ಅಂಗಡಿಯನ್ನು ಹಾದು ಕರೆಶೆಟ್ಟರಂಗಡಿಗೆ ಹೋಗಬೇಕಿತ್ತು. ಬೇಕಾದ ಬಣ್ಣದ ಪೆಪ್ಪರಮೆಂಟುಗಳನ್ನು ಆಯ್ದುಕೊಡರೆಂಬ ಏಕೈಕ ಕಾರಣಕ್ಕೆ ನಾನು ಬಿಳೆಶೆಟ್ರಂಗಡಿಗೆ ಹೋಗುತ್ತಿರಲಿಲ್ಲ! ಈಗಲೂ ಅವೆರಡೂ ಅಂಗಡಿಗಳು ನಮ್ಮೂರಲ್ಲಿವೆ. ಆ ಶೆಟ್ಟರುಗಳ ಮಕ್ಕಳು, ಮೊಮ್ಮಕ್ಕಳು ಪಾಲಾಗಿ, ಯಾರೋ ತಮ್ಮ ಪಾಲಿಗೆ ಬಂದ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಒಮ್ಮೆ ಕರೆಶೆಟ್ಟರ ಅಂಗಡಿಗೆ ಹೋಗಿ ಪೆಪ್ಪರಮೆಂಟುಗಳಿವೆಯೇ ಅಂತ ಇಣುಕಿ ಬರಬೇಕೆಂಬ ಆಸೆ ಇದೆ. ಚಾಕೊಲೇಟ್ ತಿಂದರೆ ಕ್ಯಾಲರಿ ಹೆಚ್ಚುತ್ತದೆಂಬ ಭಯ ಪೆಪ್ಪರಮೆಂಟು ತಿಂದಾಗ ಇರುವುದಿಲ್ಲ.

ಕರೆಶೆಟ್ಟರ ಅಂಗಡಿಯಲ್ಲಿ ಐದುಪೈಸೆಗೆ ಸಿಗುವ ನಾಲ್ಕು ಬಣ್ಣದ ಪೆಪ್ಪರಮೆಂಟುಗಳನ್ನು ಒಂದ ತುಂಡು ಕಾಗದದಲ್ಲಿ ಸುತ್ತಿಟ್ಟುಕೊಳ್ಳುವುದು. ಸಹಪಾಠಿಗಳು ನೋಡಿದರೆ ಅದರಲ್ಲಿ ಪಾಲು ಕೊಡಬೇಕಾದೀತೆಂಬ ಭಯದಲ್ಲಿ ಮುಚ್ಚಿಟ್ಟುಕೊಳ್ಳುವುದು. ಆಗಾಗ ಯಾರಿಗೂ ಕಾಣದಂತೆ ಮುದುರಿದ ಕಾಗದವನ್ನು ಬಿಚ್ಚಿ ಬಿಚ್ಚು ನೋಡುವುದು. ಹೀಗೆ ಕಣ್ಣುಗಳಿಗೆ ತೃಪ್ತಿ ದೊರೆಯಾದ ಮೇಲೆಯೇ ನಾಲಗೆಗೆ ಅವುಗಳ ರುಚಿ ತೋರಿಸುವುದು. ಒಮ್ಮೊಮ್ಮೆ ಕದ್ದುಮುಚ್ಚಿ ತಿನ್ನುವುದರಲ್ಲಿ ಸುಖ, ಮತ್ತೆ ಕೆಲವೊಮ್ಮೆ ಒಬ್ಬೊಬ್ಬರಿಗೊಂದೊಂದನ್ನು ಹಂಚಿ ತಿನ್ನುವುದರಲ್ಲಿ ಸುಖ! ದೊಡ್ಡವರಾಗುತ್ತ ಆಗುತ್ತ ಈ ಎರಡರಲ್ಲೊಂದು ಗುಣ ನಮ್ಮ ವ್ಯಕ್ತಿತ್ವದಲ್ಲಿ ಬೇರುಬಿಡುತ್ತದೆ. ಹಾಗಾಗಿ ನಾವು ಮತ್ತೊಬ್ಬರೊಂದಿಗೆ ಹಂಚಿಕೊಂಡು ತಿನ್ನುವ, ಕದ್ದುಮುಚ್ಚಿ ಗುಳುಂ ಮಾಡುವ ನಮ್ಮ ಗುಣಕ್ಕೆ ಪೆಪ್ಪರಮೆಂಟು ಪ್ರಾಪ್ತವಾಗಿಸಿದ ಸಂಸ್ಕಾರದ ಪಾಲೂ ಉಂಟೆಂದು ವಾದಿಸಿದರೆ ತಪ್ಪೇನು?
ಹಳೆಯ ನೋಟ್ ಬುಕ್ಕುಗಳನ್ನು ತಂದುಕೊಟ್ಟರೆ ಪೆಪ್ಪರಮೆಂಟು ಕೊಡುತ್ತೇನೆ ಅಂತ ಕೆಲವು ಅಂಗಡಿಯವರು ಆಮಿಷವೊಡ್ಡುತ್ತಿದ್ದರು. ಆದರೆ ಹಳೆಯ ಟಿಪ್ಪಣಿ ಪುಸ್ತಕಗಳನ್ನು ಅಂಗಡಿಗೆ ಕೊಡಲು ಪರೀಕ್ಷೆ ಮುಗಿದು ಬೇಸಿಗೆ ರಜೆ ಬರುವವರೆಗೆ ಕಾಯಬೇಕು. ಅಲ್ಲದೆ ಹಳೇಪೇಪರ್ ಸಾಬರಿಗೆ ಕೊಟ್ಟರೆ, ತೂಗಿದಷ್ಟಕ್ಕೆ ದುಡ್ಡುಕೊಡ್ತಾರೆ ಅಂತಾನೋ, ಕಡ್ಲೆ ಮಿಠಾಯಿ ಕೊಡ್ತಾರೆ ಅಂತಾನೋ ಅಣ್ಣ ಅಕ್ಕ ರಗಳೆ ಮಾಡಿದರೆ ನನಗೆ ತುಂಬಾ ನಿರಾಸೆಯಾಗುತ್ತಿತ್ತು. ಅದಕ್ಕೆ ನಾನು ಬೇರೊಂದು ಉಪಾಯ ಕಂಡುಕೊಂಡಿದ್ದೆ. ಆಗೆಲ್ಲ ಮನೆಗೆ ತಿಂಗಳ ದಿನಸಿ ಸಾಮಾನುಗಳನ್ನು ಹಳೆಯ ಪೇಪರಿನಲ್ಲಿ ಸುತ್ತಿ ಕೊಡುತ್ತಿದ್ದರು. ಜೋಪಾನವಾಗಿ ಅವುಗಳನ್ನು ಅಡುಗೆ ಮನೆಯ ನಿಗದಿತ ಡಬ್ಬಿಗಳಿಗೆ ಸುರಿದಾದ ಮೇಲೆ, ಆ ಪೇಪರುಗಳನ್ನು ಎಸೆಯದೆ ನೀಟಾಗಿ ಸುಕ್ಕು ಹೋಗುವಂತೆ ಕೈಯಿಂದಲೇ ಒರೆಸಿ ಒರೆಸಿ, ಎಲ್ಲವನ್ನೂ ಜೋಡಿಸಿ ತೆಗೆದುಕೊಂಡು ಹೋಗಿ ವಾಪಾಸ್ ಅಂಗಡಿಗೆ ಕೊಟ್ಟರೆ ಅವರು ಪ್ರತಿಯಾಗಿ ಪೆಪ್ಪರಮೆಂಟುಗಳನ್ನು ಕೈಗಿಡುತ್ತಿದ್ದರು. ಆ ವಯಸ್ಸಿನಲ್ಲಿ ಕಾಗದದ ಮರುಬಳಕೆಯ ಗುಣ ಬೆಳೆದಿದ್ದು ಪೆಪ್ಪರಮೆಂಟಿನ ಕಾರಣದಿಂದಲೇ ಎಂಬುದನ್ನು ನಿರ್ಲಕ್ಷಿಸಲಾದೀತೇ?

ಈ ಮರು ಬಳಕೆ ಎಂದಾಗ ನೆನಪಾಗುವ ಮತ್ತೊಂದು ಪ್ರಸಂಗವೆಂದರೆ, ನನ್ನ ದೊಡ್ಡಕ್ಕ ತನ್ನ ಯಾವುದೋ ನೋಟುಬುಕ್ಕಿನಲ್ಲಿ ಮುಕ್ಕಾಲುಭಾಗ ಖಾಲಿ ಇದಿದಗದನ್ನು ಮುಂದಿನ ವರ್ಷಕ್ಕೆಂದು ಎತ್ತಿಟ್ಟುಕೊಂಡಿದ್ದಳು. ನಾನು ಅಂಗಡಿಗೊಯ್ದು ಕೊಡಬೇಕಾದವುಗಳ ಜೊತೆ ಅದನ್ನೂ ಹೊತ್ತೊಯ್ದು ಅಂಗಡಿಗೆ ಕೊಟ್ಟು ಭಕ್ಷೀಸು ಪಡೆದುಬಿಟ್ಟಿದ್ದೆ. ಪದೇ ಪದೇ ಹೊಸ ನೋಟುಬುಕ್ಕು ಕೊಡಿಸುವುದು ಅಮ್ಮನಿಗೆ ಕಷ್ಟವಾಗಬಹುದೆಂದು ಪಾಪ ಅವಳು ಖಾಲಿ ಉಳಿದುದರ ಮರು ಬಳಕೆಗೆ ಯೋಜಿಸಿದ್ದಳು. ನನ್ನ ಪೆಪ್ಪರಮೆಂಟು ಖಯಾಲಿಗೆ ಅದು ಅಂಗಡಿ ಸೇರಿದ್ದರಿಂದ ತುಂಬ ದುಃಖವಾಗಿರಬಹುದು, ಜೋರಾಗಿ ಅತ್ತು ರಂಪ ಎಬ್ಬಿಸಿದಳು. ಈ ಹೆಣ್ಣುಮಕ್ಕಳಿಗೆ ಯಾವುದಕ್ಕೆ ಅಳಬೇಕು, ಯಾವುದಕ್ಕೆ ಅಳಬಾರದೆಂಬ ವ್ಯತ್ಯಾಸವೇ ಗೊತ್ತಿರುವುದಿಲ್ಲ! ಎಲ್ಲದಕ್ಕೂ ‘ಹೋ…’ ಎಂದು ಅಳುವಿನ ಕಹಳೆ ಊದಿ ಮನೆಯಲ್ಲಿ ಯುದ್ಧದ ವಾತಾವರಣ ಸೃಷ್ಟಿಸಿಬಿಡುತ್ತಾರೆ. ನಮ್ಮಕ್ಕ ಕೂಡ ಹಾಗೇ ಮಾಡಿದ್ದು. ಏನೋ ಚಿನ್ನದ ಒಡವೆ ಕಳೆದುಹೋದಂತೆ ಅಳಲು ಮೊದಲು ಮಾಡಿದಳು. ದೊಡ್ಡವರ ತಪಾಸಣೆ, ವಿಚಾರಣೆ ಮುಗಿದ ಬಳಿಕ ಬಂದ ತೀರ್ಮಾನವೆಂದರೆ ನಾನು ಶೆಟ್ಟರ ಅಂಗಡಿಯಿಂದ ಅಕ್ಕನ ನೋಟ್ ಪುಸ್ತಕವನ್ನು ಹಿಂದಕ್ಕೆ ತಂದು ಕೊಡಬೇಕು. ಹೊಡೆತ ತಪ್ಪಿಸಿಕೊಳ್ಳಲು ಅಂಗಡಿಗೆ ಹೋಗಿ ಹೇಳಿದೆ. ಪುಣ್ಯಕ್ಕೆ ಅವರು ಅದನ್ನು ಹುಡುಕಿ ಕೊಟ್ಟರಲ್ಲದೆ, ‘ಪೆಪ್ಪರಮೆಂಟು ಆಸೆಗೆ ಅಕ್ಕನ ಬುಕ್ ಕದ್ದಿದೀಯಾ?’ ಅಂತ ನಗಾಡಿದರು. ಅಂತೂ ಈ ಪ್ರಹಸನ ಸುಖಾಂತ್ಯ ಕಂಡಿತು.
ಶಾಲೆಯಲ್ಲಿ ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆಗಳಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದವರಿಗೆ ಬೂಂದಿ ಉಂಡೆ ಅಥವಾ ಪ್ಯಾಕ್ ಮಾಡಿದ ಬೂದಿ ಕಾಳುಗಳನ್ನು ಕೊಡುತ್ತಿದ್ದರು. ಆದರೆ ಚಿಕ್ಕವರಾದ ನಮಗೆ ಪೆಪ್ಪರಮೆಂಟು ಮಾತ್ರ. ನನಗೆ ಇದರಿಂದೇನೂ ಬೇಸರವಾಗುತ್ತಿರಲಿಲ್ಲ. ಆಗಿನ್ನೂ ಚಾಕಲೇಟುಗಳು ಅಷ್ಟಾಗಿ ಬಳಕೆಗೆ ಬಂದಿರಲಿಲ್ಲವಾದ್ದರಿಂದ ನಮಗೆಲ್ಲ ಸಭೆ ಮುಗಿದ ಬಳಿಕ ಪೆಪ್ಪರಮೆಂಟು ಕೊಡುತ್ತಿದ್ದರು. ಶಿಕ್ಷಕರ ಭಾಷಣಗಳಿಂದ ಸೊರಗಿರುತ್ತಿದ್ದ ಮಕ್ಕಳಿಗೆಲ್ಲ ಪೆಪ್ಪರಮೆಂಟು ವಿತರಣೆಯ ಸಮಯದಲ್ಲಿ ಅದೆಲ್ಲಿಂದ ಉತ್ಸಾಹ ಬರುತ್ತಿತ್ತೋ! ನೂಕು ನುಗ್ಗುಲಲ್ಲಿ ಗುದ್ದಾಡಿ ಅದನ್ನು ಪಡೆಯುತ್ತಿದ್ದುದೇ ಒಂದು ಚೆಂದ. ಬದುಕಿನಲ್ಲಿ ಸಿಹಿ ಸಂಗತಿಗಳಿಗಾಗಿ, ಸುಖ ಪಡೆಯಲು ಅದೆಷ್ಟು ಹೋರಾಡಬೇಕೆಂಬುದನ್ನು ಚಿಕ್ಕಂದಿನ ಪೆಪ್ಪರಮೆಂಟು ಹೋರಾಟದಲ್ಲಿಯೇ ತಾಲೀಮು ನಡೆಸುತ್ತಿದ್ದೆವೇನೋ! ನಾಲ್ಕೋ ಐದೋ ಪೆಪ್ಪರಮೆಂಟು ಸಿಕ್ಕರೆ ನಮ್ಮ ಜೊತೆಗಾರರಲ್ಲಿ ಒಂದಿಬ್ಬರಾದರೂ ಅವನ್ನು ಒಟ್ಟೀಗೆ ಬಾಯಿಗೆ ಹಾಕಿಕೊಂಡು ಗುಳುಂ ಮಾಡುತ್ತಿದ್ದರು. ಏನು ಅವಸರವೋ ಇವರಿಗೆ, ವಿರಾಮದಲ್ಲಿ ತಿನ್ನಬಾರದೆ ಎಂದು ನಾನು ಮನಸ್ಸಲ್ಲಿ ಯೋಚಿಸುತ್ತಿದ್ದೆ. ಹಲ್ಲು ಹುಳುಕಾಗಿದೆ, ಹೊಟ್ಟೆ ನೋವಿದೆ ಎಂದು ಯಾರಾದರೂ ಅವರ ಪಾಲಿನದನ್ನು ನನಗೆ ಕೊಡಬಾರದೆ ಎಂಬ ದುರಾಸೆಗೂ ನನ್ನ ಯೋಚನೆಯಲ್ಲಾಗ ಜಾಗವಿರುತ್ತಿತ್ತು.
ಹೈಸ್ಕೂಲಿಗೆ ಬಂದರೂ ಪೆಪ್ಪರಮೆಂಟಿನ ವ್ಯಾಮೋಹ ಅಳಿಯಲಿಲ್ಲ. ಲೈಬ್ರರಿಗೆ ಹೋಗುವಾಗ ಪೆಪ್ಪರಮೆಂಟು ತೆಗೆದುಕೊಂಡು ಹೋಗುತ್ತಿದ್ದೆ. ಬಾಯಲ್ಲಿ ಹಾಕಿಕೊಂಡು ಸವಿಯುತ್ತಾ ಓದುವುದು ಅಭ್ಯಾಸವಾಗಿತ್ತು. ತೆಳು ಅವಲಕ್ಕಿ ಜೊತೆ ಹುರಿಗಡಲೆ ಬೆರೆಸಿ ತಿನ್ನುವ ಹುಚ್ಚೂ ಇತ್ತು. ಊಟ ತಿಂಡಿಯ ಹೊರತಾಗಿ ಬೇರೆ ತಿಂಡಿತೀರ್ಥಗಳು ಅಪರೂಪಕ್ಕೆ ಲಭ್ಯವಾಗುತ್ತಿದ್ದ ಕಾರಣ ಮನೆಯಲ್ಲಿ ಸುಲಭವಾಗಿ ಕೈಗೆಟುಕುತ್ತಿದುದು ಒಣ ಅವಲಕ್ಕಿ ಮತ್ತು ಹುರಿಗಡಲೆ ಮಾತ್ರ. ಅವನ್ನು ಎಷ್ಟು ತಿಂದರೂ ಮನೆಯಲ್ಲಿ ಯಾರೂ ಆಕ್ಷೇಪಿಸುತ್ತಿರಲಿಲ್ಲ ಮತ್ತದನ್ನು ಹೆಚ್ಚು ತಿನ್ನಲೂ ಆಗುತ್ತಿರಲಿಲ್ಲ. ಆದರೆ ಅವೆರಡರ ಕಾಂಬಿನೇಷನ್ ಕೊಡುವ ಸವಿಯದ್ದೇ ಒಂದು ಬಗೆಯ ಮಜ! ನಮ್ಮ ಅಮ್ಮ ಮತ್ತು ಅಜ್ಜಿ ಬಸ್ಸಲ್ಲಿ ಪ್ರಯಾಣಿಸುವಾಗ ಲಿಂಬೆಹುಳಿ ಪೆಪ್ಪರಮೆಂಟು ತರಲು ಹೇಳುತ್ತಿದ್ದರು. ಮಲೆನಾಡ ತಿರುವು ಮುರುವುಗಳಲ್ಲಿ ಮನೆಯಲ್ಲಿ ತಿಂದು ಹೊರಟಿರುವುದನ್ನು ಕಕ್ಕಿಕೊಳ್ಳಬಹುದೆಂಬ ಮುನ್ನೆಚ್ಚರಿಕೆಯದು. ನನಗೆ ಬಣ್ಣ ಬಣ್ಣದ ಪೆಪ್ಪರಮೆಂಟು ಕೊಡುತ್ತಿದ್ದ ಸಂತೋಷವನ್ನು ಬಿಳಿಯ ಅಥವಾ ಕಿತ್ತಳೆ ಬಣ್ಣ ಮಾತ್ರ ಇರುತ್ತಿದ್ದ ಲಿಂಬೆಹುಳಿ ರುಚಿಸುತ್ತಿರಲಿಲ್ಲ. ಅವುಗಳ ಆಕಾರವೂ ಕಿತ್ತಳೆಯ ತೋಳೆಯ ಆಕಾರದಲ್ಲಿರುತ್ತಿದ್ದವು. ನಮ್ಮ ಪೆಪ್ಪರಮೆಂಟಿನ ನಂತರದ ಸ್ಥಾನ ಪಡೆಯಲಷ್ಟೇ ಈ ಲಿಂಬೆಹುಳಿ ಮತ್ತು ಚಾಕಲೇಟುಗಳಿಗೆ ಸಾಧ್ಯವಾದುದು.

ಫೋಟೋ ಕೃಪೆ : shutterstock
ನಾನು ಚಿಕ್ಕವನಿರುವಾಗ ಕಟಿಂಗ್ ಮಾಡಿಸಿಕೊಳ್ಳಲು ತುಂಬ ನಕರ ಮಾಡುತ್ತಿದ್ದೆನಂತೆ. ಆಗ ನಮ್ಮ ಅಜ್ಜಿ ಪೆಪ್ಪರಮೆಂಟಿನ ಆಸೆ ತೋರಿಸಿ ಕ್ಷೌರದಂಗಡಿಯಲ್ಲಿ ಕೂರಿಸಿ ಬರುತ್ತಿದ್ದರಂತೆ. ನನಗೆ ನೆನಪಿರುವಂತೆ ಅಜ್ಜಿ ಎರಡು ಚಾಕಲೇಟ್ ಕೈಯಲ್ಲಿ ಹಿಡಿದುಕೊಂಡು ಕ್ಷೌರದಂಗಡಿಯಿಂದ ದೂರದಲ್ಲಿ ನಿಂತಿರುತ್ತಿದ್ದರು. ಅವರು ನಿಂತಿರುವುದನ್ನು ನಾನು ಆ ಅಂಗಡಿಯ ಕನ್ನಡಿಯಿಂದ ನೋಡುತ್ತಿದ್ದೆ. ಮುಂದಿನ ಕನ್ನಡಿಯೊಳಗೆ ಹಿಂದಿನ ಕನ್ನಡಿ ಕಾಣಿಸಿ, ಆ ಕನ್ನಡಿಯಲ್ಲಿ ದೂರ ನಿಂತ ಅಜ್ಜಿಯು ಬಲಕ್ಕೆ ಸೆರಗು ಹೊದ್ದುಕೊಳ್ಳುವ ಬದಲು ಎಡಕ್ಕೆ ಹೊದ್ದಿರುವಂತೆ, ಓಡಾಡುವ ವಾಹನಗಳು ನನ್ನ ನಿರೀಕ್ಷೆಗೆ ವಿರುದ್ಧ ಚಲಿಸಿದಂತೆ ವಿಚಿತ್ರ ವಿಚಿತ್ರವಾಗಿ ಕಾಣುತ್ತಿದ್ದವು. ಕಟಿಂಗ್ ಮಾಡುವ ಅರ್ಧ ತಾಸು ಒಂದಯ ಯುಗದಂತೆ ಭಾಸವಾಗುತ್ತಿತ್ತು. ಅಜ್ಜಿ ಮಾತ್ರ ಮನೆಗೆ ಹೋಗಿ ಸ್ನಾನ ಮಾಡಿಸಿದ ಮೇಲೆಯೇ ಅವರ ಕೈಲಿದ್ದುದನ್ನು ನನ್ನ ಕೈಗೆ ವರ್ಗಾಯಿಸುತ್ತಿದ್ದುದು.
ಇದನ್ನೆಲ್ಲಾ ಓದುತ್ತಿರುವಾಗ ನಿಮ್ಮೊಳಗೂ ಈ ಬಗೆಯ ನಾನಾ ಬಗೆಯ ನೆನಪುಗಳ ಮಾಲೆ ಕಣ್ಣೆದುರು ಸುಳಿಯುತ್ತಿರಬಹುದು. ನನ್ನ ಪಾಲಿಗಂತೂ ಪೆಪ್ಪರಮೆಂಟು ಒಂದು ಲೋಕವನ್ನೇ ಸೃಷ್ಟಿಸಿದೆ. ಅತಿ ಸಿಹಿಯೂ ಅಲ್ಲದ, ಅತಿ ಸಪ್ಪೆಯೂ ಅಲ್ಲದ ಹಿತಮಿತ ಸವಿರುಚಿಯ ಪೆಪ್ಪರಮೆಂಟಿನಿಂದ ನಾವು ಕಲಿಯಬೇಕಾದುದು ಬೆಟ್ಟದಷ್ಟಿದೆ. ಈಗ ಪೆಪ್ಪರಮೆಂಟು ಇಷ್ಟವಾಗುತ್ತಾ ಅಂತ ಯಾರಾದರೂ ಕೇಳಿದರೆ ‘ಓಹೋ’ ಎಂದು ಬಾಯಲ್ಲಿ ನೀರು ಸುರಿಸುವವರೆಷ್ಟು ಜನವೋ!
ಇದಕ್ಕೆ ನಮ್ಮ ಮಹಾಕವಿ ಕುವೆಂಪು ಕೂಡ ಹೊರತಲ್ಲ. ಆ ಘಟನೆಯನ್ನು ನಿಮಗೆ ತಿಳಿಸಿದರೆ ಮಾತ್ರ ಈ ಪೆಪ್ಪರಮೆಂಟಿಗೊಂದು ಘನತೆ ಬರಬಹುದು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯೊಂದರಲ್ಲಿ ನಡೆದ ಘಟನೆಯಿದು. ಗೋಷ್ಠಿಯಲ್ಲಿ ಮಾತನಾಡುತ್ತ ಹಿರಿಯರೊಬ್ಬರು ‘ಇವೆಲ್ಲಾ ಚಿಕ್ಕ ಸಂಗತಿಗಳು, ನಿಮ್ಮಂಥ ಚಿಕ್ಕವರಿಗೆ ಇಷ್ಟವಾಗಬಹುದು. ಉದಾಹರಣೆಗೆ, ಚಿಕ್ಕಮಕ್ಕಳಿಗೆ ಪೆಪ್ಪರಮೆಂಟು ರುಚಿಸುವಂತೆ. ಈಗ ನನಗಾಗಲೀ, ಪುಟ್ಟಪ್ಪನವರಿಗಾಗಲೀ ಪೆಪ್ಪರಮೆಂಟು ರುಚಿಸುವುದೆ?” ಎಂದು ತಮ್ಮ ಮಾತಿಗೆ ಸಹಮತ ನಿರೀಕ್ಷಿಸಿ ಕುವೆಂಪು ಅವರತ್ತ ನೋಡಿದರಂತೆ. ಆದರೆ ಕುವೆಂಪು ಅವರ ನಿರೀಕ್ಷೆಗೆ ವಿರುದ್ಧವಾಗಿ ಎದ್ದು ನಿಂತು “ನನಗೇನೋ ಪೆಪ್ಪರಮೆಂಟೆಂದರೆ ಈಗಲೂ ತುಂಬ ಇಷ್ಟ” ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತಂತೆ. ಇದನ್ನು ನಮ್ಮ ಹರಿಹರಪ್ರಿಯ ಅವರು ಸಂಪಾದಿಸಿರುವ ‘ಇವರು ಕುವೆಂಪು’ ಎಂಬ ಪುಸ್ತಕದಲ್ಲಿಯೋ ಅಥವಾ ಪ್ರಭುಶಂಕರರ ಬರಹದಲ್ಲಿಯೋ ಓದಿದ ನೆನಪು. ಮಹಾಕವಿಯೇ ಪೆಪ್ಪರಮೆಂಟಿನ ಬಗ್ಗೆ ಪ್ರೀತಿ ತೋರಿದ ಮೇಲೆ ನಮ್ಮಂಥ ಸಾಮಾನ್ಯರು ಮನಸೋತಿದ್ದರಲ್ಲಿ ಅಚ್ಚರಿಯೇನಿಲ್ಲ ಬಿಡಿ. ಕುವೆಂಪು ಬರೆದ ಶಿಶುಗೀತೆಯೊಂದರಲ್ಲಿ ಬರುವ ಮಗುವೊಂದು ಆಗಸದಲ್ಲಿರುವ ದುಂಡನೆಯ ಚಂದ್ರನನ್ನು ನೋಡಿ “ದೇವರ ಪೆಪ್ಪರಮೆಂಟೇನಮ್ಮಾ, ಗಗನದೊಳಿರುವ ಚಂದಿರನು ದೇವರ ಪೆಪ್ಪರಮೆಂಟೇನಮ್ಮಾ” ಎಂದು ಕೇಳಿರುವ ಮುಗ್ಧ ಪ್ರಶ್ನೆಯ ಹಿಂದೆಯೂ ಪೆಪ್ಪರಮೆಂಟಿನ ಸವಿಯೇ
ತುಂಬಿಕೊಂಡಿದೆಯಲ್ಲವೆ?
- ಡಾ.ಎಚ್.ಎಸ್. ಸತ್ಯನಾರಾಯಣ
