ನೀನಾಸಂ ಕಲೆಗಳ ಸಂಗಡ ಮಾತುಕತೆ – ೧

ಹೆಗ್ಗೋಡು – ನೀನಾಸಂ ನಾಟಕ ಶಾಲೆ, ‘ತಿರುಗಾಟ’ವೆಂಬ ನಾಟಕ ಮೇಳ, ಅಕ್ಷರ ಪ್ರಕಾಶನ ಎಂದಿತ್ಯಾದಿ ಸಾಹಿತ್ಯಕ ಹಾಗೂ ಸಾಮಾಜಿಕ ಕಲಾಪಗಳಿಂದ ವಿಶ್ವವಿಖ್ಯಾತಿ ಪಡೆದಿದೆ,ಅಲ್ಲಿ ನಾವೋ ಐದಾರು ದಿನಗಳ ಶಿಬಿರವಾಸಕ್ಕೆ ಒಂದಷ್ಟು ಬಟ್ಟೆಬರಿ ಹಿಡಿದುಕೊಂಡದ್ದು ಬೈಕಿನ ದೊಡ್ಡ ಡಬ್ಬಿ ತುಂಬಿ ಹೊರಗೂ ಕಟ್ಟಿಕೊಂಡಾಗಿತ್ತು. ಮುಂದೆ ಓದಿ ಅಶೋಕ ವರ್ಧನ ಅವರ ನೀನಾಸಂ ಅನುಭವ…

ಚಿಟ್ಟೆಯದು ಚಾಂಚಲ್ಯವಲ್ಲ :

ಗುರುವಾರ (೪-೧೧-೨೨) ಬೆಳಿಗ್ಗೆ ಏಳೂವರೆಗೆ ಬೈಕೇರಿ ನಾನೂ ದೇವಕಿಯೂ ಶಿವಮೊಗ್ಗ ಜಿಲ್ಲೆಯ, ಸಾಗರ ಸಮೀಪದ ಹೆಗ್ಗೋಡು ಮುಖಿಗಳಾದೆವು. ಹಿಂದಿನ ಸಂಜೆ ಕೇವಲ ಬೆದರಿಕೆ ಹಾಕಿ ಚದರಿದ್ದ ಮೋಡಗಳು, ಆಗಸದ ಮೂಲೆಗಳಲ್ಲಿ ಸುಳಿಯುತ್ತ ನಮ್ಮ ಮೇಲೆ ಕಣ್ಣಿಟ್ಟಂತಿತ್ತು. ನಾವೋ ಐದಾರು ದಿನಗಳ ಶಿಬಿರವಾಸಕ್ಕೆ ಒಂದಷ್ಟು ಬಟ್ಟೆಬರಿ ಹಿಡಿದುಕೊಂಡದ್ದು ಬೈಕಿನ ದೊಡ್ಡ ಡಬ್ಬಿ ತುಂಬಿ ಹೊರಗೂ ಕಟ್ಟಿಕೊಂಡಾಗಿತ್ತು. ನಾವು ನೆನೆದರೂ ಅವು ಒದ್ದೆಯಾಗಬಾರದು ಎಂಬ ಹೆಚ್ಚಿನ ಎಚ್ಚರದಲ್ಲಿ, ಮುಂಜಾವಿನ ನಸು ಚಳಿಗೆ ನಡುಕ ಹುಟ್ಟುವಂತೆ ಮೂಡುಬಿದ್ರೆ ಸೇರಿಕೊಂಡೆವು. ಎಂದಿನಂತೇ ಪಡಿವಾಳ ಹೋಟೆಲಿನಲ್ಲಿ ಕಾಫಿಂಡಿ ಮುಗಿಸುವುದರೊಳಗೆ ಆಗಸವೂ ಮುಖ ತೊಳೆದುಕೊಂಡಿತ್ತು. ಹೊಸ ಹುರುಪಿನಲ್ಲಿ ಬೈಕ್ ಗೇರಿಸಿದೆವು.

ಮೂಡಬಿದ್ರೆ – ಕಾರ್ಕಳ ದಾರಿಯ ಅಗಲೀಕರಣದ ಕಾರ್ಯ ನಡೆದಿತ್ತು. ಒರೆಸಿ ಹೋಗುತ್ತಿದ್ದ ಹಸಿರ ಸಿರಿಯೊಡನೆ ನೆನಪಿನ ಮುನ್ನೆಲೆಗೆ ಬಂದವರು ಸ್ಥಳೀಯ ಪರಿಸರ ಪ್ರೇಮಿ – ಸಮ್ಮಿಳನ ಶೆಟ್ಟಿ. ಅವರು ಜೀವವೈವಿಧ್ಯದ ಬಯಕೆಯಲ್ಲಿ ತನಗೆ ಪರಂಪರೆಯಿಂದ ಬಂದ ಆರೇಳು ಎಕ್ರೆ ಕೃಷಿಭೂಮಿಯನ್ನು (ಮುಖ್ಯವಾಗಿ ಅಡಿಕೆ) ಎಲ್ಲಾ ತೆರನ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳಿಂದ ಮುಕ್ತಗೊಳಿಸಿದ್ದರು. ಆಗ ಸಹಜವಾಗಿ ಬಂದ ‘ಕಳೆ ಗಿಡ’ಗಳಿಗೆ ಇನ್ನಷ್ಟು ವೈವಿಧ್ಯ ಸೇರಿಸಿ, ಸಾಂಪ್ರದಾಯಿಕ ಕೃಷಿಕರು ಹೇಳುವಂತೆ “ಹಾಳು ಬೀಳಿಸಿ”, ಚಿಟ್ಟೆ ಉದ್ಯಾನವನ್ನೇ ಮಾಡಿದ್ದರು. (ವಿವರಗಳಿಗೆ ನೋಡಿ: ಪಾತರಗಿತ್ತಿಯರ ಸಮ್ಮಿಲನ https://www.athreebook.com/2013/09/blog-post_13.html) ಬೆಳ್ವಾಯಿಯ ಮುಖ್ಯ ಮಾರ್ಗದಿಂದ ಒಂದೇ ಕಿಮೀ ಅಂತರದಲ್ಲಿರುವ ಶೆಟ್ಟರ ಚಿಟ್ಟೆ ಉದ್ಯಾನದ ಕಂಪು, ಇಂದು ವೈವಿಧ್ಯಮಯ ಚಿಟ್ಟೆಗಳನ್ನು ಮಾತ್ರವಲ್ಲ, ಸಾಕಷ್ಟು ಪರಿಸರ ಪ್ರೇಮಿಗಳನ್ನೂ ಆಕರ್ಷಿಸುತ್ತಿದೆ. ಚಿಟ್ಟೆ ಉದ್ಯಾನದ ಕವಲು ಬರುತ್ತಿದ್ದಂತೆ ನನ್ನ ಚಿಂತನಾಲಹರಿಯ ಹೊಸ ಕವಲು ಅತ್ತ ಎಳೆದೊಯ್ದಿತ್ತು.

‘ಅಶೋಕವನ’ದಿಂದ ತೊಡಗಿದ ನನ್ನ ‘ಖಾಸಗಿ ವನಧಾಮ’ದ ಕಲ್ಪನೆಗೆ ಈಗ ಗೆಳೆಯ ಅನಿಲ್ ಯುಕೆ, ಸುಬ್ರಹ್ಮಣ್ಯ ಉರಾಳಾದಿಗಳು ಸೇರಿಕೊಂಡಿರುವುದು ನಿಮಗೆಲ್ಲ ತಿಳಿದೇ ಇದೆ. (ತಿಳಿದಿಲ್ಲವರು ಇಲ್ಲಿ ಓದಿಕೊಳ್ಳಿ https://www.facebook.com/plugins/post.php…) ಅದರ ಕುರಿತು ಸಮ್ಮಿಳನ ಶೆಟ್ಟಿಯವರನ್ನು ಹೆಚ್ಚಿಗೆ ಜಾಗೃತಗೊಳಿಸುವ ಉತ್ಸಾಹ ನನ್ನದು. ಸಮ್ಮಿಳನರ ತೋಟದ ಮನೆಯಲ್ಲಿ ಮಂಗಳೂರು ವಿವಿನಿಲಯದ ಕೆಲವು ಸಂಶೋಧನಾ ವಿದ್ಯಾರ್ಥಿಗಳಷ್ಟೇ ಇದ್ದರು. ಆದರೆ ಸಮೀಪದಲ್ಲೇ ಪ್ರತ್ಯೇಕ ಮನೆಯಲ್ಲಿದ್ದ ಶೆಟ್ಟರು, ನನ್ನ ಚರವಾಣಿ ಕರೆಗೆ ಸ್ಪಂದಿಸಿ, ಕೂಡಲೇ ಬಂದರು. ಕಾರಿಳಿಯುತ್ತಿದ್ದಂತೇ “ಇದು ಚಿಟ್ಟೆ ಹೆಚ್ಚು ಆಕ್ಟಿವ್ ಆಗಿರುವ ಸೀಸನ್ ಅಲ್ಲಾ ಸಾರ್ ಆದರೂ…” ಎಂದು ತುಳುಕುವ ಪ್ರೀತಿ ಉತ್ಸಾಹಗಳಲ್ಲಿ ಉದ್ಯಾನ ಸುತ್ತಿಸಲು ಹೊರಡಲಿದ್ದರು. ಆದರೆ ನಾನು ಅವರಿಗೆ ಹೊಸ ವಿಚಾರವನ್ನು ಐದು ಮಿನಿಟಿನ ಸಂವಾದದಲ್ಲಿ ಹಂಚಿಕೊಳ್ಳುವಷ್ಟಕ್ಕೇ ಮುಗಿಸಿದೆ. ಅಂದಿನ ಮಟ್ಟಿಗೆ ನಮ್ಮ ಲಕ್ಷ್ಯವಾದರೂ ಇನ್ನೂ ದೂರದ್ದಿತ್ತು.

ಹೆಗ್ಗೋಡು – ನೀನಾಸಂ ನಾಟಕ ಶಾಲೆ, ‘ತಿರುಗಾಟ’ವೆಂಬ ನಾಟಕ ಮೇಳ, ಅಕ್ಷರ ಪ್ರಕಾಶನ ಎಂದಿತ್ಯಾದಿ ಸಾಹಿತ್ಯಕ ಹಾಗೂ ಸಾಮಾಜಿಕ ಕಲಾಪಗಳಿಂದ ವಿಶ್ವಖ್ಯಾತವೇ ಇದೆ. ಮರೆಯಬೇಡಿ, ಅದರ ಮೂಲಪುರುಷ – ಕೀರ್ತಿಶೇಷ ಕೆವಿ ಸುಬ್ಬಣ್ಣ, ಅಂತಾರಾಷ್ಟ್ರೀಯ ಮ್ಯಾಗ್ಸೇಸೇ ಪುರಸ್ಕೃತರು. ಅದು ತನ್ನ ಬಹುಮುಖೀ ಚಟುವಟಿಕೆಗಳಿಗೆ ಕಳಶಪ್ರಾಯವಾಗಿ ವರ್ಷಕ್ಕೊಮ್ಮೆ ಕೆಲವು ದಿನಗಳ ‘ಜಾತ್ರೆ’ಯೊಂದನ್ನೂ ನಡೆಸುತ್ತದೆ. ಸುಮಾರು ಎರಡೂವರೆ ದಶಕಗಳ ಇತಿಹಾಸವಿರುವ ಈ ಜಾತ್ರೆ, ಕಾಲಕಾಲಕ್ಕೆ ಸಿನಿಮಾ ರಸಗ್ರಹಣ, ಸಂಸ್ಕೃತಿ ಶಿಬಿರ ಎಂದೆಲ್ಲ ಹೆಸರು ಹೊತ್ತಂತೆ ಈ ಬಾರಿ – ಕಲೆಗಳ ಸಂಗಡ ಮಾತುಕತೆ ಎಂದೇ ಘೋಷಿಸಿಕೊಂಡಿತ್ತು. ನಾವಾದರೂ ನವೆಂಬರ್ ಐದರಿಂದ ಒಂಬತ್ತರವರೆಗಿನ (ಐದು ದಿನಗಳು) ಅದನ್ನೇ ಉದ್ದೇಶಿಸಿಯೇ ಹೊರಟವರು. ಆದರೆ ಮಾರ್ಗಕ್ರಮಣದಲ್ಲಿ ಇನ್ನಷ್ಟು ಅನುಭವ ಸಂಗ್ರಹಿಸಿಕೊಳ್ಳುವ ಯೋಚನೆಯಿಂದ ಬೈಕ್ ಹಿಡಿದಿದ್ದೆವು. ಅದರಲ್ಲಿ ಮೊದಲಲ್ಲೇ ಹೂವಿಂದ ಹೂವಿಗೆ ಮಧುಸಂಗ್ರಹಕ್ಕೆ ಹಾರುವ ಚಿಟ್ಟೆಗಳ ಉದ್ಯಾನಕ್ಕೇ ನುಗ್ಗುವಂತಾದದ್ದು ಶುಭ ನಾಂದಿಯೆಂದೇ ಹೇಳಿಕೊಳ್ಳುತ್ತ ಮುಂದುವರಿದೆವು. ಹಾಗಾದರೆ ಮುಂದಿನ ಹೂವು ಯಾವುದೆಂಬ ಕುತೂಹಲಕ್ಕೆ ಮತ್ತೆ ಕಾದಿರಿ….

ಮುಂದುವರಿಯುತ್ತದೆ…


  • ಅಶೋಕ ವರ್ಧನ – ಅತ್ರಿ ಬುಕ್ ಸೆಂಟರ್ ನಿರ್ದೇಶಕರು, ಲೇಖಕರು, 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW