ಬೀದಿ ಬದಿ ವ್ಯಾಪಾರಿ ಹೆಣ್ಣುಮಗಳು. ಆಯಾ ಕಾಲಮಾನಕ್ಕೆ ಬೆಳೆಯುವ ಹಣ್ಣು ಹಂಪಲು ಮಾರಾಟ ಮಾಡುತ್ತಾಳೆ. ಆ ಹೆಣ್ಣುಮಗಳು ನೀಡಿದ ಚೆಕ್ ನಿಂದ ಕೋರ್ಟ್ ನಲ್ಲಿ ಕಟಕಟೆಯಲ್ಲಿ ನಿಲ್ಲುವ ಪ್ರಸಂಗ ಬಂತು.ಯಾವ ಕಾರಣಕ್ಕಾಗಿ ತಪ್ಪದೆ ಮುಂದೆ ಓದಿ… ಪ್ರಕಾಶ ವಸ್ತ್ರದ ಅವರ ‘ನ್ಯಾಯದ ಕಣ್ಣು’ ಅಂಕಣದಲ್ಲಿ ಚೆಕ್ಕ್ ನೀಡಿದ ಮಾತ್ರಕ್ಕೆ ಅಪರಾಧವೆನ್ನಲಾಗದು…
ಪುಸ್ತಕ : ”ಅಡ್ವೋಕೇಟ್ ಡೈರಿ ವೃತ್ತಿ ಬದುಕಿನ ಬುತ್ತಿ”
ಬೆಲೆ : 200/
ಖರೀದಿಗಾಗಿ : 9448015613
ಮಧ್ಯ ವಯಸ್ಸಿನ ಹೆಣ್ಣುಮಗಳು. ಕಡಿಮೆ ಬೆಲೆಯ ಸರಳ ಡಿಸೈನ್ ಹೊಂದಿದ ಸೀರೆ ಉಟ್ಟಿದ್ದಳು. ತಲೆ ತುಂಬ ಇರುವ ದಟ್ಟವಾದ ಕಪ್ಪು ಕೂದಲುಗಳನ್ನು ಒಪ್ಪವಾಗಿ ಸೇರಿಸಿ ನರ್ಸ್ ಗಳು ಹಾಕುವಂತೆ ದೊಡ್ಡ ತುರುಬಿನಲ್ಲಿ ಕೂಡಿ ಹಾಕಿದ್ದಳು. ಇವಳನ್ನು ನೋಡಿದರೆ, ಮುಂಜಾನೆಯಿಂದ ಸಂಜೆವರೆಗೆ ಬಿಸಿಲಿನಲ್ಲಿ ದುಡಿಯುವ ಹೆಣ್ಣುಮಗಳು ಅನಿಸಿತು. ಬಿಸಿಲಿಗೆ ಬಣ್ಣ ಕೆಟ್ಟಿರಬಹುದು ಆದರೆ ಅವಳ ಅಂದ ಕೆಟ್ಟಿರಲಿಲ್ಲ. ಹೇಳುವ ಮಾತಿನಲ್ಲಿ ಗಡಿಬಿಡಿಯಿತ್ತು, ಧಾಟಿಯ ಲ್ಲಿ ಆಸ್ಪಷ್ಟತೆ ಇತ್ತು. ಬಂದ ಕೂಡಲೆ ಅವಳ ಕೈಯಲ್ಲಿದ್ದ ಕಾಗದ ಪತ್ರ ಇಸಿದುಕೊಂಡೆ. ಅವುಗಳನ್ನು ಪೊಲಿಸ್ ತಂದು ಕೊಟ್ಟಿದ್ದರಿಂದ ಹೆಚ್ಚಿಗೆ ಭಯವಾಗಿದ್ದಳು. ಹೇಳಬೇಕಿದ್ದು ಹೇಳಲಾಗದೆ ತಿಣುಕುತಿದ್ದಳು. ಬಹಳಷ್ಟು ಕಕ್ಷಿದಾರರು ಕೋರ್ಟ್ ದಿಂದ ಬಂದ ಕಾಗದ
ಪತ್ರಗಳನ್ನು ಬ್ಯಾಗಲ್ಲಿ ಭಧ್ರವಾಗಿಟ್ಟು ಏನೇನೋ ಹೇಳಲಾರಂಭಿಸುತ್ತಾರೆ. ಅದಕ್ಕೆ ನಾನು ಮೊದಲು ಮಾಡುವ ಕೆಲಸ, ಕಾಗದ ಪತ್ರ ಇಸಿದುಕೊಂಡು, ಮಾತಿಗೆ ತಡೆವಡ್ಡಿ, ಪರಿಶೀಲಿಸಿ ನಂತರ ಮಾತು ಕೇಳುತ್ತ ಹೋಗುತ್ತೇನೆ. ಸಮಯ, ಸಂಯಮ ಎರಡು ಉಳಿಯುತ್ತವೆ. ಸಮಾಧಾನದಿಂದ ಮಾತಾಡಿಸಿ, ನ್ಯಾಯ ದೊರಕಿ ಸಿಕೊಡುವ ಭರವಸೆ ನೀಡಿ ಮಾಹಿತಿ
ಸಂಗ್ರಹಿಸಿದೆ.
ರುಕ್ಮಿಣಿ ( ಹೆಸರು ಬದಲಿಸಲಾಗಿದೆ) ಬೀದಿ ಬದಿ ವ್ಯಾಪಾರಿ ಹೆಣ್ಣುಮಗಳು. ಆಯಾ ಕಾಲಮಾನಕ್ಕೆ ಬೆಳೆಯುವ ಹಣ್ಣು ಹಂಪಲು ಮಾರಾಟ ಮಾಡುತ್ತಾಳೆ. ಮಾರುವ ಹಣ್ಣಿಗಿಂತ, ಹೇಳುವ ಮಾತಿಗೆ ಗಿರಾಕಿಗಳು ಜಾಸ್ತಿ. ಪ್ರಾಮಾಣಿಕ ವ್ಯಾಪಾರಿ ಎಂಬ ಬಿರುದು. ತನ್ನಂತೆ ಬೀದಿ ಬದಿ ವ್ಯಾಪಾರ ಮಾಡುವ ಹೆಣ್ಣುಮಕ್ಕಳ ಸ್ವಸಹಾಯ ಗುಂಪು ಮಾಡಿಕೊಂಡು ಅವರಿಗೆ ಸಹಾಯ ಮಾಡಿ, ನಾಯಕಿ ಆಗಿದ್ದಾಳೆ.
ಮಹಿಳಾ ಸೌಹಾರ್ದ್ ಸೊಸೈಟಿ ಸಂಸ್ಥೆಯೊಂದು ಅವಳ ಮೇಲೆ ಸೆಕ್ಷನ್ 138, ಎನ್. ಆಯ್. ಆಕ್ಟ್ 1881 ( ನೆಗೊ ಷಿ ಬಲ್ ಇನಸ್ಟ್ರು ಮೆಂಟ್ ಆಕ್ಟ್ /ವರ್ಗಾವಣೆಯ ಲಿಖಿತ ಪತ್ರಗಳ ಅಧಿನಿಯಮ 188 1) ರ ಅಡಿಯಲ್ಲಿ ಪಿರ್ಯಾದಿ ದಾಖಲಿಸಿದೆ, ಕೋರ್ಟ್ ಸುಮನ್ಸ್ ಬಂದಿದೆ. ಪಿರ್ಯಾದಿಯಲ್ಲಿ, ರುಕ್ಮಿಣಿ ಸಂಸ್ಥೆಯ ಸದಸ್ಯೆಇದ್ದಾಳೆ. ತನ್ನ ವ್ಯಾಪಾರಕ್ಕೆ ರೂ 5 ಲಕ್ಷ ಹಣವನ್ನು, ಸುಲಭ ಸಾಲ ಯೋಜನೆಯಲ್ಲಿ ಪಡೆದಿರುತ್ತಾಳೆ. ಸಾಲ ಮರಳಿ ಕೊಟ್ಟಿಲ್ಲ, ನೋಟಿಸ್ ನೀಡಿದಾಗ, ಸಾಲ ಬಡ್ಡಿ ಸಹಿತ ರೂ 6,2 5 ,000 /00 ಗೆ ಚೆಕ್ಕ್ ಕೊಟ್ಟಿದ್ದಳು. ತಮ್ಮ ಸಂಸ್ಥೆಯ ಉಳಿತಾಯ ಖಾತೆ ಜಮೆಗಾಗಿ ಹಾಜರು ಪಡಿಸಿದಾಗ, ಖಾತೆಯ ಲ್ಲಿ”ಸಾಕಷ್ಟು ಹಣ ಇಲ್ಲ ” ಎಂದು ಮೆಮೊ ಬಂದಿದೆ. ಚೆಕ್ ಬೌನ್ಸ್ ಆಗಿರುವದಾಗಿ, ಹಣ ಮರಳಿ ಕೊಡುವಂತೆ ನೋಟಿಸು ನೀಡಿದರೂ ಉತ್ತರಿಸಿಲ್ಲ. ಎನ್. ಆಯ್ ಆಕ್ಟ್ ಅಡಿಯಲ್ಲಿ ಶಿಕ್ಷೆ ಮಾಡಲು ವಿನಂತಿಸಿ ಕೋರ್ಟಲ್ಲಿ ಪಿರ್ಯಾದಿ ದಾಖಲಿಸಿದ್ದಾರೆ, ಇದಿಷ್ಟು ಫಿರ್ಯಾದಿಯಲ್ಲಿಯ ಸಾರಾಂಶ.ಆರೋಪಿಯನ್ನು ನಿಗದಿತ ದಿನಾಂಕದಂದು ಕೋರ್ಟಿಗೆ ಹಾಜರುಪಡಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿಕೊಂಡೆ.
ವಿಚಾರಣೆ ಪ್ರಾರಂಭವಾಯಿತು. ಪಿರ್ಯಾದಿ ಸಂಸ್ಥೆಯ ಮ್ಯಾನೇಜರ್ ಮೊದಲಿಗೆ ತನ್ನ ಮುಖ್ಯ ವಿಚಾರಣೆ ಪ್ರಮಾಣಪತ್ರ ದಾಖಲಿಸಿದ. ಸುಮ್ಮನೆ ಇದೊಂದು ನೌಕರಿಯ ಭಾಗವೆಂದು ಕೋರ್ಟಿಗೆ ಬಂದಿದ್ದನು ಅನಿಸುತ್ತಿತ್ತು. ಅವನನ್ನು ಸುಧೀರ್ಘವಾಗಿ ಕ್ರಾಸ್ ಎಕ್ಸಾಮಿನೇಷನ್ ಮಾಡಿದೆ. ಉತ್ತರಗಳು ಒಂದಕೊಂದು ಎಷ್ಟೊಂದು ಅಸಂಬದ್ಧ, ತದ್ವಿರುದ್ದ
ಆಗಿದ್ದವು. ಪಾಟಿ ಸವಾಲಿನಲ್ಲಿಯ ಉತ್ತರಗಳ ಸಾರಾಂಶ ಹೀಗಿದೆ. ” ಆರೋಪಿ ಸಾಲದ ಅಸಲು, ಬಡ್ಡಿಯ ಅಕೌಂಟ್ ಸ್ಟೇಟ್ಮೆಂಟ್ ಹಾಜರು ಪಡಿಸಿಲ್ಲ. 2 ಲಕ್ಷಕ್ಕಿಂತ ಹೆಚ್ಚಿಗೆ ಸಾಲಕ್ಕೆ ಆಧಾರ ಪಡೆಯುತ್ತೇವೆ ಆದರೆ ಪಡೆದಿಲ್ಲ. ಆರೋಪಿ ಬೀದಿ ಬದಿ ವ್ಯಾಪಾರಿ, ದಿನಕ್ಕೆ ರೂ 200 ಆದಾಯ ಇದೆ, ಐದು ಲಕ್ಷ ಸಾಲಕ್ಕೆಅರ್ಹ ಇಲ್ಲ, ಇಷ್ಟು ಸಾಲದ ಅವಶ್ಯಕತೆ ಇಲ್ಲ ಅನ್ನುವದು ಸರಿ. ಸಾಲದ ನೋಟಿಸ್ ಕೊಟ್ಟಾಗ ಚೆಕ್ ಕೊಟ್ಟಿದ್ದಾಳೆ ಎಂದು ಫಿರ್ಯಾದಿಯಲ್ಲಿ ಬರೆದಿದೆ, ಆದರೆ ಸಾಲ ಕೊಡುವಾಗ ಭದ್ರತೆಗಾಗಿ 2 ಚೆಕ್ ಕೊಟ್ಟಿದ್ದಾಳೆ. ಚೆಕ್ ಮೇಲಿನ ಸಹಿ, ಸಾಲ ಪತ್ರ ಇತರೆ ಕಾಗದ ಪತ್ರ, ವಕಾಲತ ಪತ್ರ ಮೇಲಿನ ಸಹಿ ಬೇರೆ ಇವೆ ಎಂದರೆ ಸರಿ. ನಮ್ಮ ಸಂಸ್ಥೆಯ, ಮೈಕ್ರೋ ಫೈನಾನ್ಸ ಅಂಗ ಸಂಸ್ಥೆಯಲ್ಲಿ ಸ್ವಸಹಾಯ ಗುಂಪಿನ
ಮುಂದಾಳಾಗಿ ಐದು ಜನರಿಗೆ ತಲಾ 10,000 ಸಾಲ ಪಡೆದಿದ್ದು, ಸಹಿ ಮಾಡದ ಖಾಲಿ ಚೆಕ್ ಪಡೆದಿದ್ದೇವೆ ಎಂದರೆ ಸರಿ. ಆ ಚೆಕ್ ದುರುಪಯೋಗ ಪಡಿಸಿಕೊಂಡು, ಫೋರ್ಜರಿ ಸಹಿ ಸೃಷ್ಟಿಸಿದ್ದೀರಿ ” ಅಂದರೆ ನಿರುತ್ತರಣಾಗಿ ಏನೂ ಉತ್ತರಿಸದೆ ನಿಂತನು.
ಆರೋಪಿ ರುಕ್ಮಿಣಿ, ಫಿರ್ಯಾದಿದಾರ ಮಾಡಿದ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆದಳು. ತನ್ನ ನಿಲುವನ್ನು ಸಮರ್ಥಿಸಲು ತನ್ನ ಮುಖ್ಯ ವಿಚಾರಣೆ ಪತ್ರ ದಾಖಲಿಸಿದಳು. ಪಾಟಿ ಸವಾಲಿನಲ್ಲಿ ತನ್ನ ನಿಲುವಿಗೆ ಬದ್ದಳಾಗಿ ಉತ್ತರಿಸಿದಳು.ನ್ಯಾಯಾಲಯ ಪಿರ್ಯಾದಿ, ಆರೋಪಿ ಪರ ವಾದವನ್ನು ಆಲಿಸಿತು. ಪ್ರಕರಣ ತೀರ್ಪುಗಾಗಿ ಮುಂದುಡಿತು.
ನಿಗದಿತ ದಿನದಂದು ತೀರ್ಪು ಹೊರಬಂದಿತು. ಕೇವಲ ಆರೋಪಿ ಚೆಕ್ಕ್ ಕೊಟ್ಟಿದ್ದಾನೆ ಅಂದ ಮಾತ್ರಕ್ಕೆ ಅಪರಾಧ ಎಸಗಿದ್ದಾನೆ ಎಂದು ಅಭಿಪ್ರಾಯಕ್ಕೆ ಬರಲಾಗದು. ಕಾನೂನು ಮೂಲಕ ಜಾರಿಗೊಳಿಸಬಹುದಾದ ಮರಳಿ ಹಣ ಕೊಡುವ ಜವಾಬ್ದಾರಿ ರುಜುವಾತು ಪಡಿಸಬೇಕು. ಪಿರ್ಯಾದಿ, ಸಾಲದ ಸ್ಟೇಟ್ಮೆಂಟ್ ಆಫ್ ಅಕೌಂಟ್ ಸಲ್ಲಿಸಿಲ್ಲ, ಚೆಕ್ಕ್ ಮೇಲಿನ ಸಹಿ ರುಜುವಾತು ಆಗಿಲ್ಲ. ಚೆಕ್ಕ್ ಯಾವಾಗ ಕೊಟ್ಟಿದ್ದಾಳೆಂನ್ನುವದು ಖ ಚಿತ ಇಲ್ಲ. ದಿನಾಲು ರೂ 200 /00 ಗಳಿಸುವ ಬೀದಿ ಬದಿ ವ್ಯಾಪಾರಿಗೆ 5 ಲಕ್ಷ ಸಾಲ ಕೊಟ್ಟಿದ್ದು,ಅದಕ್ಕೆ ಚೆ ಕ್ಕ್ ಕೊಟ್ಟಿದ್ದು ನಂಬಲು ಅಸಾಧ್ಯ ಎಂದು ನ್ಯಾಯಾ ಲಯ ಅಭಿಪ್ರಾಯ ಪಟ್ಟು,ಆರೋಪಿಯನ್ನು ಆ ರೋಪ ಮುಕ್ತ ಮಾಡಿ ಬಿಡುಗಡೆಗೊಳಿಸಿತು ಎಂದೂ ಒಂದು ಲಕ್ಷ ಹಣ ಕಾಣದ ರುಕ್ಮಿಣಿ, ಪಿರ್ಯಾದಿ ದಾಖಲಿಸಿದ ಕೇಸಿನಿಂದ ತತ್ತರಿಸಿದ್ದಳು. ತೀರ್ಪಿನಿಂದಾಗಿ, ನಿರಾಳ ಹಗುರ ಭಾವದಿಂದ ಕೈಬೀಸಿ ಹೊರಟ ಸಾರ್ಥಕ ದೃಶ್ಯ ಮರೆಯಲಾಗದು.
‘ನ್ಯಾಯದ ಕಣ್ಣು’ ಅಂಕಣದ ಹಿಂದಿನ ಸಂಚಿಕೆಗಳು :
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೧)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೨)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೩)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೪)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೫)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೬)
- ‘ನ್ಯಾಯದ ಕಣ್ಣು’ ಅಂಕಣ – (ಭಾಗ -೭)
- ಪ್ರಕಾಶ ವಸ್ತ್ರದ
