ಹಣ್ಣೆಲೆಯೊಂದಿಗೆ ಚಿಗುರೆಲೆ ಮರವಿದ್ದರೆ ಬಲು ಸೊಗಸು

ಅರಳಿ ಅಳಿಯುವ ಅಂಚಿನಲ್ಲಿರುವ ಜೀವಗಳನ್ನು ಮಕ್ಕಳು ಇಟ್ಟುಕೊಳ್ಳಲು ಆಗದೆ ಇದ್ದರು ಅವರ ಹಣ ,ಆಸ್ತಿ ಮಾತ್ರ ತಮಗೆ ಬೇಕು ಎಂದು ಹಂಬಲಿಸುವ ಮನಗಳಿಗೆ ಏನು ಹೇಳೋಣ.??ತಂದೆ -ತಾಯಿ,ಹಿರಿಯರನ್ನು ನಿರ್ಲಕ್ಷಿಸಿ ಜೀವನ ನಡೆಸುವ ಮಕ್ಕಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಲ್ಲಾ ಹಕ್ಕು ಹೆತ್ತವರಿಗೆ ಇರುತ್ತದೆ. ಕಾನೂನು ಸಲಹೆಗಾರ್ತಿ, ಲೇಖಕಿ, ವಕೀಲೆ ಪವಿತ್ರ ಹೆತ್ತೂರ್ ಅವರ ಭಾವನಾತ್ಮಕ ಬರಹವನ್ನು ತಪ್ಪದೆ ಮುಂದೆ ಓದಿ…

ಹಳೆಯ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು, ಹಿರಿಯರು ಕಿರಿಯರು ಒಂದೇ ಸೂರಿನಲ್ಲಿರಲು ಆ ಮನೆಯು ಬೃಂದಾವನವಾಗಿರುವುದು. ಊರು ಸುತ್ತಲು ಅಪ್ಪನ ಹೆಗಲು, ತುತ್ತಿಡಲು ಅಮ್ಮನ ಕೈ, ಕಥೆ‌ ಹೇಳುವಾಗ ಹ್ಞೂಂ ಅನ್ನೋಕೆ ಅಜ್ಜಿಯ ಮಡಿಲು, ಜೀವನಾನುಭವದ ಪಟ್ಟುಗಳನ್ನು ಕಲಿಸಲು ಅಜ್ಜನ ಆಸರೆ ಇದ್ದರೆಷ್ಟು ಚಂದ ಅಲ್ವಾ..?? ಆದರೆ ಇಂದು ಅದೇಷ್ಟು ಮಕ್ಕಳಿಗೆ ಈ ಭಾಗ್ಯವಿದ್ದೀತು!! ಅಜ್ಜ- ಅಜ್ಜಿ ಮರಣ ಹೊಂದಿದ್ದರೆ ಅದು ಬೇರೆ ಮಾತು. ಎಲ್ಲರೂ ಇದ್ದೂ ಯಾರೂ ಇಲ್ಲದಂತೆ ನಮ್ಮ ಮಕ್ಕಳು, ನಾವು, ನಮ್ಮನ್ನು ಹೆತ್ತವರು ಇನ್ನೊಂದೆಡೆ ಬದುಕುವ ಅನಿವಾರ್ಯತೆ ತಂದುಕೊಂಡಿರುವ ನಾವು ನಮ್ಮ ಹೆತ್ತವರೊಂದಿಗೆ ನಮ್ಮ ಮಕ್ಕಳಿಗೆ ಅಜ್ಜ ಅಜ್ಜಿಯ ಅಕ್ಕರೆಯನ್ನು ಸವಿಯಲು ಅವಕಾಶ ಮಾಡಿಕೊಟ್ಟರೆ, ಅರಳಿ ಅಳಿಯುವ ಅಂಚಿನಲ್ಲಿರುವ ಜೀವಗಳು, ಅರೆಬಿರಿದ ಮೊಗ್ಗಿನಂತಿರುವ ಎಳೆಯ ಮನಸ್ಸುಗಳಿಗೂ ಖುಷಿ ಆಗುತ್ತದೆ ಅಲ್ವಾ.

ಬದುಕಿನ ತೋಟದಲ್ಲಿ ಚಂದದ ಗಿಡವೊಂದನ್ನು ನೆಟ್ಟು ಅದಕ್ಕೆ ಕಾಲಕಾಲಕ್ಕೆ ಊಟ ಉಪಚಾರ, ಉಡುಗೆ-ತೊಡುಗೆ ಯಾವುದಕ್ಕೂ ಕಡಿಮೆ ಮಾಡದೆ, ವಿದ್ಯೆ ಎಂಬ ಫಲವತ್ತಾದ ಗೊಬ್ಬರ ಕೊಟ್ಟು ಬೆಳೆಸಿದ ಜನ್ಮದಾತರು, ರೋಗರುಜಿನಗಳು ನಮ್ಮನ್ನು ಕಾಡಿದಾಗ ಕಂಡ ಕಂಡ ದೇವರನ್ನು ಸುತ್ತಿ ಕಣ್ಣೀರಧಾರೆ ಸುರಿಸಿ ತಮ್ಮ ಆಯುಷ್ಯವನ್ನೆಲ್ಲ ನಮಗೆ ಧಾರೆಯೆರಯಲು ಶುದ್ಧ ಮನಸ್ಸಿನಿಂದ ಬೇಡಿಕೊಂಡ ನಿಸ್ವಾರ್ಥ ಜೀವಿಗಳು ಹೆತ್ತವರು, ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ನಮ್ಮ ಖುಷಿಯಲ್ಲಿ ಅವರ ಸಂತೋಷ ನೋಡುತ್ತಾ, ನಮ್ಮ ಸಣ್ಣಸಣ್ಣ ಸಂತೋಷಗಳಿಗೆ ದೊಡ್ಡ ದೊಡ್ಡ ತ್ಯಾಗ ಮಾಡಿ ಬದುಕು ಸವೆಸಿದ ಜೀವಿಗಳು, ಅವರ ಬೆವರ ಹನಿಯ ಫಲವಾಗಿ ನಾವಿಂದು ಸುಸ್ಥಿತಿಯಲ್ಲಿದ್ದೇವೆ ಎಂಬುದನ್ನು ಮರೆತು ವರ್ತಿಸುತ್ತಾ ಮುಸ್ಸಂಜೆಯ ಹೊಸ್ತಿಲಲ್ಲಿರುವ ಜೀವಗಳನ್ನು ಕಡೆಗಣಿಸುವುದು ಎಷ್ಟು ಸರಿ??.

ನಾನ್ಯಾಕೆ ಈ ಮಾತನ್ನು ಈಗ ಹೇಳುತ್ತಿರುವೆ ಅಂದರೆ.. ಮೊನ್ನೆಯ ಕೋರ್ಟನಲ್ಲಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಯಸ್ಸಾದ ಹೆಂಗಸರೊಬ್ಬರು ನ್ಯಾಯಾಧೀಶರ ಕುರಿತು “ಸ್ವಾಮಿ ನಿಮ್ಮ ಮೇಲಿರುವ ನಂಬಿಕೆ ನನ್ನ ಮಕ್ಕಳ ಮೇಲೆ ಇಲ್ಲ, ನೀವು ಏನು ತಿರ್ಮಾನ ಕೊಡುತ್ತಿರೋ ಅದಕ್ಕೆ ನಾನು ಬದ್ದ ” ಎಂದು ಹೇಳಿದ್ದು ಕೇಳಿ ನನ್ನ ಗಮನ ಆ ಕಡೆಗೆ ಹರಿಯಿತು. ಅಲ್ಲಿ ತಾಯಿಯೊಂದಿಗೆ ಬೆಳೆದು ಮಧ್ಯೆ ವಯಸ್ಸು ದಾಟಿದ ಇಬ್ಬರು ಗಂಡುಮಕ್ಕಳು ,ಒಬ್ಬ ಮಗಳು ಮತ್ತು ಆಕೆಯ ಗಂಡ ಕೆಲಸ ಮಾಡುತ್ತಿದ್ದ ಕಂಪನಿಯ ಅಧಿಕಾರಿಯೊಬ್ಬರು ಇದ್ದರು, ಕುತೂಹಲದಿಂದ ಆ ಕೇಸ್ ಮೇಲೆ ಗಮನವಿಟ್ಟು ಅಲ್ಲೆ ಕುಳಿತ ನನಗೆ ಅಲ್ಲಿ ನಡೆದ ವಿಚಾರ ಮನಕಲಕಿತು.

ಒಂದು ಪ್ರಸಿದ್ಧ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪತಿ ಮರಣಹೊಂದಿದ ತರುವಾಯ ಬರಬೇಕಾಗಿದ್ದ work compassion ಪಡೆಯಲು ನ್ಯಾಯಾಲಯಕ್ಕೆ ಬಂದಿದ್ದರು. ಕಾರಣ work compassion ಬಾಬ್ತಿನ ಬಗ್ಗೆ ಮಕ್ಕಳಲ್ಲಿ ತಕಾರರು ಇದ್ದ ಕಾರಣ ಬಂದ ಹಣದ ಹಂಚಿಕೆಯಲ್ಲಿ ವಿವಾದ ಏರ್ಪಟ್ಟಿತ್ತು. ಆ ವಯಸ್ಸಾದ ತಾಯಿಗೆ ಇಬ್ಬರೂ ಗಂಡುಮಕ್ಕಳು, ಒಬ್ಬಳು ಮಗಳು ಇದ್ದು ಮನೆ ಯಜಮಾನಿಗೆ ಪರಿಹಾರ ರೂಪದಲ್ಲಿ ಒಟ್ಟು 9 ಲಕ್ಷದಷ್ಟು ಹಣ ಸಿಗುತ್ತಿತ್ತು . ಈ ಹಣದ ವಿಚಾರದಲ್ಲಿ ರಾಜಿ ಸಂಧಾನ ಏರ್ಪಟ್ಟು ನ್ಯಾಯಾಧೀಶರ ಮುಂದೆ ಓಪನ್ ಕೋರ್ಟನಲ್ಲಿ ಮತ್ತೆ ವಿಚಾರಣೆಗೆ ಬಂದಿತ್ತು. ಆ ಸಂದರ್ಭದಲ್ಲಿ ನ್ಯಾಯಾಧೀಶರು ವೃದ್ಧೆಯನ್ನು ವಿಚಾರಿಸಿದಾಗ ಮೇಲಿನ ಮಾತು ಬಂದಿದ್ದು. ಅದನ್ನು ಕೇಳಿದ ನ್ಯಾಯಾಧೀಶರ ಮನಸ್ಸು ಕರಗಿತ್ತು, ಆ ತಾಯಿಯನ್ನು ಕುರಿತು ಕೇಳಿದರು ಯಾಕಮ್ಮ… ಮಕ್ಕಳು ಚನ್ನಾಗಿ ನೋಡಿಕೊಳ್ಳುವುದಿಲ್ವಾ ಅಂತ ಆಗ ಅವರು ನನ್ನ ಮೂವರು ಮಕ್ಕಳಿಂದ ಒಂದು ರೂಪಾಯಿ ಸಹ ನಾನು ಪಡೆದಿಲ್ಲ, ನನ್ನ ಆಸ್ಪತ್ರೆ ಮತ್ತು ಇತರೆ ಎಲ್ಲಾ ಖರ್ಚುಗಳನ್ನು ನಾನೇ ಭರಿಸುತ್ತಿರುವೆ, ಸಪ್ರೇಟ್ ಆಗಿ ಬೇರೆ ಮನೆಯಲ್ಲಿರುವೆ, ಈ ಮೂವರು ನನ್ನನ್ನು ನೋಡುವುದಿಲ್ಲ ಎಂದರು, ಆಗ ತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ, ಅದನ್ನೇ ಮರೆತರೆ ಕಾನೂನಿನ ಅಡಿಯಲ್ಲಿ ಅಪರಾಧಿಗಳಾವಿರಿ..ಎಂಬ ಎಚ್ಚರಿಕೆ ನೀಡಿ ಅಷ್ಟು ಹಣವನ್ನು ತಾಯಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಡೇಪಾಸೀಟ್ ಮಾಡೋಣ ಅದರ ಬಡ್ಡಿ ಹಣದಲ್ಲಿ ನೀವು ಜೀವನ ಸಾಗಿಸಿ ನಿಮ್ಮ ಮರಣದ ನಂತರ ಆ ಹಣವನ್ನು ಮೂವರು ಮಕ್ಕಳು ಸಮವಾಗಿ ತೆಗೆದುಕೊಳ್ಳಲಿ ಎಂದಾಗ ಆ ತಾಯಿ ಮುಂದುವರೆದು ಬೇಡಾ ಸ್ವಾಮಿ ಅವರಿಗೆ ಈಗಲೇ ಹಣ ಕೊಡಿ ಅಲ್ಲದೆ ನನ್ನ ಎರಡನೇ ಮಗನ ಮಗಳನ್ನು ನಾನೇ ಸಾಕಿ ಮದುವೆ ಮಾಡಿರುವೆ ,ಈಗ ಬಾಣಂತನದ ಆರೈಕೆ ಮತ್ತು ನಾನು ಇರುವ ಮನೆಯನ್ನು ರಿಪೇರಿ ಮಾಡಿಸ ಬೇಕಾಗಿರುವುದರಿಂದ ಹಣವನ್ನು ಡೇಪಾಸೀಟ್ ಮಾಡುವುದು ಬೇಡಾ ಎಂದಾಗ ವಿಧಿಯಿಲ್ಲದೆ ನ್ಯಾಯಾಧೀಶರು ಇದಕ್ಕಲ್ಲವೇ ಹೆತ್ತ ಕರಳು ಅನ್ನೋದು, ನಿಮ್ಮನ್ನು ಮಕ್ಕಳು ನೋಡಿಕೊಳ್ಳದೆ ಇದ್ದರೂ ಮಕ್ಕಳಿಗೆ ಪರಿಹಾರ ಮೊತ್ತದ ಭಾಗಶಃ ಹಣವನ್ನು ಕೊಡಬೇಕು ಎನ್ನುತ್ತಿರೀ.. ಆದರೆ ನಮ್ಮ ತಾಯಿಯನ್ನು ಜೊತೆಯಲ್ಲಿಟ್ಟುಕೊಂಡು ನೋಡಿ ಕೊಳ್ಳಬೇಕು ಎಂಬ ಮನಸ್ಸು ಬಾರದೆ ಇರುವುದು ವಿಪರ್ಯಾಸ.. ಎಂದು ಆ ತಾಯಿಯ ಇಚ್ಚೆಯಂತೆ 1,50,000 ದಂತೆ ತಲಾ ಮೂವರು ಮಕ್ಕಳಿಗೆ ಡಿವೈಡ್ ಮಾಡಿ ಉಳಿದ ಮೂರು ಲಕ್ಷ ಹಣವನ್ನು ತಾಯಿಗೆ ಸಲ್ಲುವಂತೆ ಆದೇಶ ಮಾಡಿದ್ರು.ಆಗ ಆ ಮಕ್ಕಳ ಮುಖದಲ್ಲಿ ಸಂತಸ ನೋಡಬೇಕಿತ್ತು!! ಎಂತಹ ಮನಸ್ಥಿತಿಗಳು ಅನಿಸಿತು. ತಾಯಿಯನ್ನು ಜೊತೆಯಲ್ಲಿ ಇಟ್ಟುಕೊಂಡು ನೋಡಲು ಆಗದೆ ಇದ್ದರು ಅವರ ಹಣ ,ಆಸ್ತಿ ಮಾತ್ರ ತಮಗೆ ಬೇಕು ಎಂದು ಹಂಬಲಿಸುವ ಮನಗಳಿಗೆ ಏನು ಹೇಳೋಣ.?? ನ್ಯಾಯಾಲಯ, ನ್ಯಾಯಾಧೀಶರ ಮೇಲೆ ನಂಬಿಕೆ ಇಟ್ಟ ಆ ತಾಯಿ ತಾನು ಹೆತ್ತ ಮಕ್ಕಳ ಮೇಲೆ ನಂಬಿಕೆ ಇಲ್ಲ ಎನ್ನಬೇಕಾದರೆ ಆ ಹೆತ್ತೊಡಲು ಎಷ್ಟು ನೊಂದಿರಬಹುದು.ಇದೊಂದು ಪ್ರಕರಣವನ್ನು ಮಾತ್ರ ನಾನ್ನಿಲ್ಲಿ ಪ್ರಸ್ತಾಪಿಸಿದ್ದು ಅಷ್ಟೆ. ಇಂತಹ ಸಾಕಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿವೆ. ವಯಸ್ಸಾದ ಹಿರಿಯರು ತಮ್ಮ ಹಕ್ಕುಗಳನ್ನು ಪಡೆಯಲು ಮಕ್ಕಳ ಮೇಲೆ ದಾವೆ ಹಾಕುವ ಪ್ರಕರಣಗಳು ಹೆಚ್ಚಾಗಿವೆ,ಜೊತೆಗೆ ವೃದ್ಧಾಪ್ಯದಲ್ಲಿ ವೃದ್ಧಾಶ್ರಮದಲ್ಲಿ ಇರುವಂತೆ ಆಗಿದೆ. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗೆ ಒಂದು ಹೊತ್ತು ಊಟ ಹಾಕಿ ವಸತಿ ನೀಡಲು ಸಾಧ್ಯವಿಲ್ಲದವರು ಅವರು ಸಂಪಾದನೆ ಮಾಡಿದ ಆಸ್ತಿಯನ್ನು ಹೆಂಡತಿ ಮಕ್ಕಳೊಂದಿಗೆ ಹೇಗೆ ಸಂತಸದಿಂದ ಅನುಭವಿಸಲು ಸಾಧ್ಯ..?

ತಂದೆ -ತಾಯಿ,ಹಿರಿಯರನ್ನು ನಿರ್ಲಕ್ಷಿಸಿ ಜೀವನ ನಡೆಸುವ ಮಕ್ಕಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಲ್ಲಾ ಹಕ್ಕು ಹೆತ್ತವರಿಗೆ ಇರುತ್ತದೆ. ಮಕ್ಕಳು ನೋಡದೆ ಇದ್ದಾಗ ನ್ಯಾಯಾಲಯದ ಮೂಲಕ ಜೀವನಾಂಶ ಪಡೆಯಲು ಸಾಧ್ಯವಿದೆ, ಅಲ್ಲದೆ ಜಿಲ್ಲಾಧಿಕಾರಿ ಕಚೇರಿ ಮತ್ತು Tribunal court, ನಲ್ಲಿ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007 ರಡಿಯಲ್ಲಿ ಪರಿಹಾರ ಪಡೆಯಬಹುದು, ಮಕ್ಕಳು ಹೆತ್ತವರು ಸಂಪಾದನೆ ಮಾಡಿದ್ದ ಸ್ಥಿರ ಮತ್ತು ಚರ ಆಸ್ತಿಗಳನ್ನು ಪಡೆದು ಅವರನ್ನು ನಿರ್ಲಕ್ಷಿಸಿದರೆ ಸಂಪೂರ್ಣ ಆಸ್ತಿಯನ್ನು ಹೆತ್ತವರಿಗೆ ವಾಪಸ್ಸು ಪಡೆಯುವ ಹಕ್ಕು ಹಿರಿಯರಿಗೆ ಇದೆ. ಒಂದು ವೇಳೆ ಮಕ್ಕಳು ಇಲ್ಲದಿದ್ದರೆ ಅಂತಹ ಹಿರಿಯರ ಆಸ್ತಿ ಪಾಸ್ತಿಗೆ ಅವರ ಮರಣನಂತರ ವಾರುಸುದಾರನಾಗುವರು ಅವರು ಹಿರಿಯರನ್ನು ನೋಡಿಕೊಳ್ಳಬೇಕಾಗುತ್ತದೆ. ಅಲ್ಲದೆ ದತ್ತು ಮಕ್ಕಳು ಸಹ ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣಚಿಕೊಳ್ಳಲು ಸಾಧ್ಯವಿಲ್ಲ. ಕಾನೂನಿನ ಪರಿಭಾಷೆಯಲ್ಲಿ ಹಿರಿಯರು ಅಂದ್ರೆ ತಂದೆ ತಾಯಿ ಮಾತ್ರವಲ್ಲದೆ, ಮಲತಂದೆ-ತಾಯಿ,ಸಾಕುತಂದೆ-ತಾಯಿಯು ಬರುತ್ತಾರೆ. ಇದಲ್ಲದೆ ಯಾರು ದಿಕ್ಕು ಇಲ್ಲದ ಹಿರಿಯರನ್ನು ನಾಗರಿಕ ಸಂರಕ್ಷಣಾ ಕಾಯ್ದೆ ಅನ್ವಯ ಸರ್ಕಾರದ ಅಧೀನದಲ್ಲಿರುವ ಓಲ್ಡ್ ಎಜ್ ಹೋಂ ನಲ್ಲಿಟ್ಟು ರಕ್ಷಣೆ ಮಾಡಲಾಗುತ್ತದೆ. ಮಕ್ಕಳು ಹೆತ್ತವರನ್ನು ನಿರ್ಲಕ್ಷಿಸಿದ್ದಲ್ಲಿ ಐದು ತಿಂಗಳು ಕಾರಗೃಹ ವಾಸ ಮತ್ತು ದಂಡವನ್ನು ವಿಧಿಸಲಾಗುತ್ತದೆ.

ಇದೆಯಲ್ಲವೂ ಹಿರಿಯರ ರಕ್ಷಣೆಗೆ ಕಾನೂನು ಮತ್ತು ಸರ್ಕಾರ ಎರಡು ಜೊತೆಗೆ ನಿಂತು ಸಾಕಷ್ಟು ಸವಲತ್ತುಗಳನ್ನು ಮಾಡಿಕೊಟ್ಟಿರುವುದಲ್ಲದೆ ಅವರಲ್ಲಿ ಜೀವನೋತ್ಸಾಹ ತುಂಬಾ ಸಲುವಾಗಿ ಹಿರಿಯ ನಾಗರಿಕ ಸೇವಾದಿನವೆಂದು ಆಗಸ್ಟ್ 21 ರಂದು ಆಚರಣೆ ಸಹ ಮಾಡುತ್ತದೆ. ಆದರೆ ಇವೆಲ್ಲವೂ ಹಿರಿಯ ಮನಗಳಿಗೆ ಕೊನೆಗಾಲದಲ್ಲಿ ಸಂತಸ ತಂದುಕೊಡಬಲ್ಲವೇ..!? ಖಂಡಿತ ಇಲ್ಲ ವೃದ್ಯಾಪ್ಯದಲ್ಲಿ ಬೇಕಿರುವುದು ನೆಮ್ಮದಿಯ ಖುಷಿಯಾದ ಸಂತೃಪ್ತಿಯ ಜೀವನ ಈ ಜೀವನವನ್ನು ಸರ್ಕಾರದ ಸವಲತ್ತುಗಳು, ಕಾನೂನಿನ ರಕ್ಷಣೆ ನೀಡಲಾರದು. ಅದನ್ನು ನೀಡಬೇಕಾದದ್ದು ಅವರು ಹೆತ್ತ ಮಕ್ಕಳು.

ನಮ್ಮನ್ನು ಹೆತ್ತವರಿಗೆ ಈಗ ವಯಸ್ಸಾಯ್ತು, ಅರಳು ಮರಳು ಶುರುವಾಯ್ತು, ದಿನೇದಿನೇ ಸಣ್ಣ ಮಕ್ಕಳಂತೆ ಆಡುತ್ತಿದ್ದಾರೆ, ಹೇಳಿದ್ದನ್ನೇ ಹೇಳಿ ತಲೆ ತಿನ್ನುತ್ತಾರೆ, ನೀವೇನು ಆಫೀಸ್ ತೋಟಕ್ಕೆ ಹೋಗಿಬಿಡ್ತಿರಿ, ನಾನಿಲ್ಲಿ ಅವರ ಜೊತೆ ಏಗಬೇಕು ಎಂಬ ಪತ್ನಿಯ ದೂರು ಕೇಳಿ ಸುಮ್ಮನಾಗುವ ಪತಿ, ಉದ್ಯೋಗಸ್ಥ ಪತ್ನಿಯಾಗಿದ್ದರಂತೂ ಹೆಂಡತಿ ಮಾತಿಗೆ ಮೌನವಾಗಿ ತಲೆ ಆಡಿಸಿ ತುಟಿ ಪಿಟಿಕ್ ಎನ್ನದೆ ವಯಸ್ಸಾದ ತಂದೆತಾಯಿಗಳನ್ನು ಊರಿನಲ್ಲಿರಿಸಿ ಹೆಂಡತಿಯೊಂದಿಗೆ ಪಟ್ಟಣ ಸೇರುವ ಮಗ, ಇತ್ತ ತಾನು ಹೆತ್ತ ಮಗುವನ್ನು ನಾಲ್ಕು ಗೋಡೆಯ ಮದ್ಯೆ ಬಂಧಿಸಿ ಕೆಲಸಕ್ಕೆ ಹೋಗುವುದರ ಜೊತೆಗೆ ಅನಾಥ ಭಾವ ತುಂಬಿ ಬಿಡುತ್ತಾನೆ. ಬಂಗಲೆಯಂತಹ ಮನೆ, ಮನೆಯ ಮುಂದೆ ಎರಡು ಮೂರು ಕಾರು, ಮನೆ ಕಾಯಲು ಜಾತಿನಾಯಿಗಳು ಅವುಗಳಿಗೆ ಪುಟ್ಟ ಮನೆ ಇಷ್ಟೆಲ್ಲಾ ಇರುವ ನಮಗೆ ಅಂತಃಕರಣ ದಯೆಯ ಸಾಗರದಂತಿರುವ ಹೆತ್ತವರಿಗೆ ದೊಡ್ಡ ಮನೆಯಲ್ಲಿ ಜಾಗ ಇಲ್ಲವೇ? ಮನೆ ದೊಡ್ಡದಾಗಿದ್ದು ಮನಸ್ಸು ಕುಬ್ಜವಾಗಿದೆ, ಕೃತಘ್ಞವಾಗಿದೆ, ಸ್ವಾರ್ಥಿಯಾಗಿದೆ. ಹೀಗಾಗಿ ಹೆತ್ತವರು ಬೇಡವಾಗುತ್ತಿದ್ದಾರೆ.

ಸ್ವಲ್ಪ ಯೋಚಿಸಿ ನೋಡಿ!! ಇಂದು ನಾವು ಯೌವನದಲ್ಲಿದ್ದೇವೆ. ಮುಂದೊಂದು ದಿನ ನಮ್ಮನ್ನು ಮುಪ್ಪು ಆವರಿಸುವುದು ಖಚಿತ. ಆಗ ನಮ್ಮ ಮಕ್ಕಳು ನಮ್ಮನ್ನು ಅನುಸರಿಸಿದರೆ ನಮಗೆ ಸಹಿಸಲು ಸಾಧ್ಯವೇ ??? ಒಂದು ಮರವು ಸೊಬಗಿನಿಂದ ಕೂಡಿರಲು ಹಣ್ಣೆಲೆ, ಚಿಗುರೆಲೆ ಎರಡೂ ಮುಖ್ಯ. ಹಣ್ಣೆಲೆ ಉದುರಿ ಬಿದ್ದರೂ ಗೊಬ್ಬರವಾಗುವುದು. ಚಿಗುರೊಡೆದ ಎಲೆ ಮುಂದಿನ ದಿನಗಳಲ್ಲಿ ಹಣ್ಣಾಗುವುದು.

ಇದೇ ಅಲ್ವ ಜೀವನ ಚಕ್ರ!! ಜೀವನವೆಂಬ ಪುಸ್ತಕದ ಕೊನೆಯ ಪುಟದಲ್ಲಿರುವ ಹೆತ್ತವರನ್ನು ಗೌರವಿಸಿ ಪ್ರೀತಿಸುತ್ತಾ ಬಾಳಿನ ಸವಿ ನೆನಪಿನ ಬುತ್ತಿ ಬಿಚ್ಚಿ ಸವಿಯಲು ಸಹಕರಿಸೋಣ. ಮುಸುಕಿನೊಳಗಿನ ನಸುಕಿನ ಭ್ರಮಾಲೋಕದ ಕನಸಿಗೆ ಕತ್ತರಿ ಹಾಕುತ್ತಾ ನೋವುಂಡು ಸದಾ ಮಿನುಗುವ ಹೆತ್ತವರನ್ನು ಆದರಿಸುತ್ತ ನಮ್ಮ ಮಕ್ಕಳಿಗೆ ಹಳೆ ಬೇರಿನೊಂದಿಗೆ ಹೇಗೆ ಚಿಗುರೊಡೆದು ನಳನಳಿಸಬೇಕು ಎಂಬುದನ್ನು ಹೇಳಿಕೊಡುವ ಮೂಲಕ ಹಣ್ಣೆಲೆಗೂ ಬಣ್ಣ ತುಂಬೋಣ.


  • ಪವಿತ್ರ ಹೆತ್ತೂರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW