ಕುರುಡು ಪ್ರಪಂಚದಲ್ಲಿ ಅಳುವುದು ಕಷ್ಟ ಹೇಗೆಂದರೆ ಉತ್ತಮ ಕವಿತೆಯೊಂದು ಸತ್ತಂತೆ! ಅರ್ಥ ಹೀನವೇ? ಅಲ್ಲವೇ?…- ದೇವರಾಜ್ ಹುಣಸಿಕಟ್ಟಿ ಅವರ ಕವಿತೆಯನ್ನು ತಪ್ಪದೆ ಓದಿ…
ಮೊಲೆಯ ತೊಟ್ಟಿಗೆ
ಮುತ್ತಿಕ್ಕಿದ ತುಟಿಗಳೇ…
ಮೊಲೆಯಿಂದ ತೊಟ್ಟಿಕ್ಕಿದ ಹಾಲು
ವಿಷವಾಗಿದ್ದು ಹೇಗೆ? ಹೇಳಿ ಬಿಡಿ…
ಪ್ರೀತಿಯಿಂದ ಮುದ್ದಿಸಿ
ಚಂದ್ರನ ತೋರಿ…
ತುತ್ತಿಟ್ಟ ಕೈ ಬೆರಳುಗಳೇ…..
ಮುಳ್ಳಾಗಿ ಚಂದ್ರ ನಾಡಿಯ
ಬಗೆದಿದ್ದು ಹೇಗೆ? ಹೇಳಿ ಬಿಡಿ….
ಮಲವೆಲ್ಲ ಬಳಿದು ತೊಳೆದು
ಸೋತ ರಟ್ಟೆಗಳೇ…
ಬಿಗಿದು ತಬ್ಬಿ ಬೆತ್ತಲೆ ಮಾಡಿ
ಎಳೆದೊಯ್ದ ಕುಣಿಕೆಯಾಗಿದ್ದು
ಹೇಗೆ…? ಹೇಳಿ ಬಿಡಿ
ಕಣ್ಣ ಚಾದರವನ್ನೇ ಹೊಚ್ಚಿ
ಹೃದಯದ ಪಾಳಿಯಲ್ಲಿ
ಕಾಯ್ದ ಮನವೇ…..
ಮೃಗವಾಗಿ ಹರಿದು
ತಿಂದ್ದಿದ್ದು ಹೇಗೆ..? ಹೇಳಿ ಬಿಡಿ…
ಪ್ರತಿ ಮಾಸ ತೊಟ್ಟಾಗಿ
ಹನಿದು ಮುಟ್ಟಾಗಿ ಕಟ್ಟಿದ ಜೀವದನಿಯೇ….
ರಕ್ತ ಬೀಜಾಸುರನಾಗಿ
ಮುಕ್ಕಿದ್ದು ಹೇಗೆ? ಹೇಳಿ ಬಿಡಿ..
ತೊಟ್ಟಿಲಾದ ಸೀರೆಯೇ….
ಎಂಜಲೆಲ್ಲ ಒರೆಸಿ
ಸಣ್ಣ ಸಣ್ಣ ನೋವಿಗೂ
ನೆರಳಾಗಿ ಹೊದಿಸಿದ ಸೆರಗೇ….
ಯೋನಿಗೆ ಅಂಟಿದ ತುಂಡು
ಬಟ್ಟೆಯಾಗಿ ಉಳಿಯದೇ
ಹೋದದ್ದು ಹೇಗೆ…? ಹೇಳಿ ಬಿಡಿ
ಸುಮ್ಮನೆ ಹೀಗೆ ದೇಹವ
ಹರಿದು ಹಂಚಿ ಉಂಬುವ ಮುನ್ನ
ಜೀವಂತ ಸುಟ್ಟುಬಿಡಿ…..
ಆತ್ಮ ನಿಮಗೆ ದಕ್ಕದ ವಸ್ತುವೆಂದು
ನನ್ನ ತಾಯಂದಿರೆ ಒಮ್ಮೆ ಗಟ್ಟಿಯಾಗಿ
ನಾಮರ್ದ ಗಂಡಸರಿಗೆ ಹೇಳಿ ಬಿಡಿ….
- ದೇವರಾಜ್ ಹುಣಸಿಕಟ್ಟಿ