ರಾಧಾ-ಮಾಧವ ವಿನೋದಹಾಸ: ಒಂದು ಚಿಂತನ ಬರೆಹ

ರಾಧೆಯ ಬಗೆಗಿನ ಪ್ರೀತಿ ಮತ್ತು ಅನುಕಂಪದಿಂದ, ಒಂದಷ್ಟು ಸ್ತ್ರೀವಾದಿ ಚಿಂತನೆಯ ಹಿನ್ನೆಲೆಯಲ್ಲಿ ನೋಡುವುದಾದರೆ ರಾಧೆ ಎಂಬುವವಳು ಕೃಷ್ಣ ಮರೆತ ಅಥವಾ ಮರೆತಂತೆ ಎದೆಯಲ್ಲಿಟ್ಟುಕೊಂಡು ಪೊರೆದ ಪಾತ್ರ. ಕೃಷ್ಣ ಸಮ್ಮೋಹಕ ವ್ಯಕ್ತಿ ಮತ್ತು ಶಕ್ತಿ. ಆ ಚುಂಬಕ ಶಕ್ತಿಗೆ, ಆ ಮಾಯಕಾರನಿಗೆ ತನ್ನನ್ನೇ ಧಾರೆ ಎರೆದುಕೊಂಡಳು ರಾಧೆ. – ಕೆ. ರಾಜಕುಮಾರ್, ತಪ್ಪದೆ ಮುಂದೆ ಓದಿ…

ರಾಧೆ ದುರಂತ ನಾಯಕಿ. ಕೃಷ್ಣ ಮರೆತ ಪಾತ್ರವದು. ಕೃಷ್ಣನು ತೊರೆದು ಹೋದ ಜೀವವದು. ಸೌಮ್ಯ ಸ್ವಭಾವದ ರುಕ್ಮಿಣಿ, ಧಾರ್ಷ್ಟ್ಯದ ಸತ್ಯಭಾಮೆಯರಿಗಿಂತ ರಾಧೆಯ ಕುರಿತು ನಮ್ಮ ಹೃದಯ ಆರ್ದ್ರವಾಗುತ್ತದೆ. ಬರೀ ಆರ್ದ್ರವಲ್ಲ; ರಸಾರ್ದ್ರ. ಅದು ಅನುಕಂಪವಲ್ಲ. ಹಾಗಾಗಿ ತೇವ ಅನ್ನುವುದು ಇಲ್ಲಿ ಸ್ಥಾಯಿಯಾಗಿ ಒಸರುತ್ತಿರುತ್ತದೆ. ಕೃಷ್ಣನ ಕೊಳಲಾಗಲು ಬಯಸುವವರೇ ಹೆಚ್ಚು. ಆದರೆ ರಾಧೆಯಾಗಲು ಬಯಸುವವರು ಅಪರೂಪ. ಕೃಷ್ಣನದು ಅತ್ಯಂತ ಸಂಕೀರ್ಣ ವ್ಯಕ್ತಿತ್ವ. ಅವನ ತಂತ್ರಗಾರಿಕೆ ಅನನ್ಯ.

ಕೃಷ್ಣನು ಪುರಾಣದ ಪಾತ್ರವೇ ಹೊರತು ಚರಿತ್ರೆಯ ಭಾಗವಲ್ಲ. ರಾಧೆಯೂ ಅಷ್ಟೇ. ಇವರಿಬ್ಬರೂ ಗಾಢ ಪ್ರೀತಿ ಮತ್ತು ವಿರಹಕ್ಕೆ ರೂಪಕಗಳಾಗಿ ನಿಲ್ಲುತ್ತಾರೆ.

ಕೃಷ್ಣನದು ಕಾರಣಜನ್ಮ. ಹಾಗಾಗಿ ಲೋಕೋದ್ಧಾರ ಅವನಿಗೆ ಮುಖ್ಯವಾಗಿತ್ತೇ ಹೊರತು ರಾಸಕ್ರೀಡೆಯಲ್ಲ. ಆದರೂ ಅವನ ಜೊತೆ ಅಂಗಸಂಗ ಬಯಸಿದ ಗೋಪಿಕೆಯರೊಡನೆ ಕಟಿಗೆ ಕಟಿ, ತುಟಿಗೆ ತುಟಿ ಬೆರೆಸಿ ಸರಸವಾಡಿದರೂ ಅವನು ಅಂಟಿಯೂ ಅಂಟದಂತೆ ಇದ್ದವನು. ಕೃಷ್ಣ ಆ ಕ್ಷಣದ ಸತ್ಯ. ಅವನು ಕಪಟನಾಟಕ ಸೂತ್ರಧಾರಿ. ರಾಧೆಯ ಬಗೆಗಿನ ಪ್ರೀತಿ ಮತ್ತು ಅನುಕಂಪದಿಂದ, ಒಂದಷ್ಟು ಸ್ತ್ರೀವಾದಿ ಚಿಂತನೆಯ ಹಿನ್ನೆಲೆಯಲ್ಲಿ ನೋಡುವುದಾದರೆ ರಾಧೆ ಎಂಬುವವಳು ಕೃಷ್ಣ ಮರೆತ ಅಥವಾ ಮರೆತಂತೆ ಎದೆಯಲ್ಲಿಟ್ಟುಕೊಂಡು ಪೊರೆದ ಪಾತ್ರ. ಕೃಷ್ಣ ಸಮ್ಮೋಹಕ ವ್ಯಕ್ತಿ ಮತ್ತು ಶಕ್ತಿ. ಆ ಚುಂಬಕ ಶಕ್ತಿಗೆ, ಆ ಮಾಯಕಾರನಿಗೆ ತನ್ನನ್ನೇ ಧಾರೆ ಎರೆದುಕೊಂಡಳು ರಾಧೆ.

ಫೋಟೋ ಕೃಪೆ : google

ಕೃಷ್ಣ ಎಲ್ಲವನ್ನೂ ತೊರೆದುಹೋದ ಜೋಗಿ. ನಿಜಕ್ಕೂ ಅವನು ಭೋಗಲೋಲುಪನೂ ಅಲ್ಲ; ಯಾರ ನಲ್ಲನೂ ಅಲ್ಲ. ಅವನು ರಾಗಿಯಲ್ಲ, ವಿರಾಗಿ. ತನಗಾಗಿಯಲ್ಲದೆ ಸದಾ ಇನ್ನೊಬ್ಬರಿಗಾಗಿ ತುಡಿದು ಮಿಡಿದವನು. ಅವನು ತನ್ನ ಹಿತ ಬಲಿಕೊಟ್ಟು ಸದಾ ಇನ್ನೊಬ್ಬರ ಹಿತ ಬಯಸಿದವನು. ಅವನು ಪರೋಪಕಾರಿ ಪಾಪಣ್ಣ. ರಾಧೆ ಸಹ ಕೃಷ್ಣನ ಈ ಪರೋಪಕಾರಕ್ಕೆ ‘ಉಪಹಾರ’ವಾದವಳು! ಕೃಷ್ಣನ ಸಾನ್ನಿಧ್ಯಕ್ಕಾಗಿ, ಹರೆಯದಿಂದ ಹಿಡಿದು ಕಡೆಯವರೆಗೆ ಜೀವನಪೂರ್ತಿ ಹಂಬಲಿಸಿದವಳು ರಾಧೆ. ಮತ್ತೆ, ಮತ್ತೆ ನೆನಪಾಗಿ ಕಾಡಿ, ನಿಡುಸುಯ್ದು ಕಣ್ಣ ಬಿಂದು ಜಾರುವಂತೆ ಮಾಡುವ ಪಾತ್ರವದು.

ಕೃಷ್ಣನ ಸಖ್ಯದಿಂದ, ಸ್ಪರ್ಶದಿಂದ, ಕೊಳಲ ಗಾನದಿಂದ, ಕಿರುಗಾಲ ಮಾತ್ರ ಸುಖಿಯಾಗಿದ್ದ ರಾಧೆ ಉಳಿದಂತೆ ಅಸುಖಿ‌. ಆಕೆಯ ಬಗೆಗೆ ಇಡೀ ಭರತಖಂಡಕ್ಕೆ ಕನಿಕರ, ಕಕ್ಕುಲತೆ, ಅಪರಿಮಿತ ಕಾಳಜಿ! ಹಾಗಂತ ಕೃಷ್ಣನೇನೂ ಸುಖಿಯಾಗಿರಲಿಲ್ಲ ಎಂದು ಜಯದೇವನ ಅಷ್ಟಪದಿಯೊಂದು (“ತವ ವಿರಹಿ ವನಮಾಲಿ ಸಖಿ ಸೀಡತಿ ರಾಧೆ”) ಹೇಳುತ್ತದೆ. ವಸಂತಾಗಮನದಿಂದ ಇಡೀ ಪ್ರಕೃತಿ ಪುಳಕಗೊಂಡು, ಪೂವುದುರಿಸಿ ಸಂಭ್ರಮಿಸುತ್ತಿದ್ದರೂ, ರಾಧೆಯ ಅಗಲಿಕೆಯಿಂದ ಕೃಷ್ಣ ಖೇದಗೊಂಡಿದ್ದ ಎಂದು ಅದರಲ್ಲಿ ವರ್ಣಿಸಲಾಗಿದೆ. ಇದೊಂದೇ ರಾಧೆಗೆ ಭಾವನಾತ್ಮಕ ಸಂತೋಷ ನೀಡಬಲ್ಲ ಸಂಗತಿ.

ಚರಿತ್ರೆಯಲ್ಲ; ಪುರಾಣ :

ರಾಧೆ, ಕೃಷ್ಣ ಇವೆಲ್ಲಾ ಪುರಾಣದ ಪಾತ್ರಗಳು. ಚರಿತ್ರೆಯಲ್ಲ. ಪುರಾಣಕ್ಕೆ ನಂಬಿಕೆಯೊಂದಿದ್ದರೆ ಸಾಕು. ಆ ತಳಹದಿಯೊಂದೇ ಸಾಕು. ಆದರೆ ಚರಿತ್ರೆ ನಂಬಲರ್ಹವಾದ ದಾಖಲೆಗಳನ್ನು, ಸಾಕ್ಷ್ಯಗಳನ್ನು ಬಯಸುತ್ತದೆ.

ಇತಿಹಾಸವೆಂಬುದು ಪತ್ರ, ಪುಷ್ಪಗಳೆಲ್ಲವನ್ನೂ ಕಳಚಿಕೊಂಡ ಶಿಶಿರಾರಂಭದ ಬೋಳು ಮರದಂತೆ ನೀರಸ. ಆದರೆ ಪುರಾಣವೆಂಬುದು ರಸಭರಿತ ವೃಕ್ಷ. ಹೂವು, ಕಾಯಿ, ಹಣ್ಣುಗಳನ್ನು ಹೊತ್ತು ಕಳೆಕಳೆಯಾಗಿ ಕಂಗೊಳಿಸುವ ಫಲಭರಿತ ಮರ. ಇಲ್ಲಿ ಎಲ್ಲವೂ ಸಜೀವ ಸಾಕಾರ.‌ ಪುರಾಣಗಳಲ್ಲಿ ವೈವಿಧ್ಯವುಂಟು, ಪ್ರಕ್ಷೇಪಗಳುಂಟು. ಬರೆದವರು ಅದನ್ನು ವರ್ತಮಾನದ ನಿಕಷಕ್ಕಿಟ್ಟು ನೋಡಿದ ಬಗೆಗಳೂ ಉಂಟು. ಪುರಾಣವೆಂಬುದು ಶ್ರದ್ಧಾಭಕ್ತಿಯ ಸಂಕೇತ. ಅದೊಂದು ಬೆಳಗಿನ ಜಾವದ ಸವಿಗನಸಿನಂತೆ; ಸಕ್ಕರೆಯ ಸವಿಪಾಕದಂತೆ.

ಆದರೂ ಮೇಲಿನ ಬರೆಹ ಓದಿದ ಹಲವರು ಮುಂದೆ ರಾಧೆಗೇನಾಯಿತು, ಆಕೆ ಕೃಷ್ಣನನ್ನು ಸೇರಿದಳೆ ಎಂದು ಅತೀವ ಕಕ್ಕುಲತೆಯಿಂದ ತಿಳಿಯಬಯಸಿದರು. ಹಾಗಾಗಿ ಪುರಾಣದಲ್ಲಿ ದಾಖಲಾಗಿರುವ ಕಥಾಭಾಗವನ್ನು ಸಂಕ್ಷೇಪಿಸಿ ಇಲ್ಲಿ ನೀಡುತ್ತಿರುವೆ:

ಫೋಟೋ ಕೃಪೆ : google

ಕೃಷ್ಣನ ಅಗಲಿಕೆಯ ಅನಂತರ ರಾಧೆಯ ಬದುಕು ದುಸ್ತರವಾಯಿತು. ಅವರಿಬ್ಬರದೂ ಬಾಲ್ಯಪ್ರೇಮ; ವಯಃಪೂರ್ವಪ್ರೇಮ (Infatuation!). ಕೃಷ್ಣನು ಗೋಕುಲ ತೊರೆದ. ರಾಧೆಗೆ ಮದುವೆಯಾಯಿತು. ಮಕ್ಕಳೂ ಆದವು. ಸಾಂಸಾರಿಕ ಬದುಕನ್ನು ಕ್ರಮಿಸಿ, ಆಕೆ ಕೃಷ್ಣನನ್ನು ಕಾಣಲು ದ್ವಾರಕೆಗೆ ಬಂದಳು. ಕೃಷ್ಣನೇ ಆಕೆಯೆಡೆಗೆ ಧಾವಿಸಿದ. ಕಣ್ಣೂ, ಕಣ್ಣೂ ಕಲೆಯಿತು. ಆದರೆ ಮನವು ಉಯ್ಯಾಲೆಯಾಡಲಿಲ್ಲ; ತೂಗಿ ತೊನೆದಾಡಲಿಲ್ಲ. ದಶಕಗಳ ಅನಂತರದ ಭೇಟಿ. ಅವರಿವರ ಕೆಲಸಗಳನ್ನು ತನ್ನ ಮೇಲೆ ಹೇರಿಕೊಂಡಿದ್ದ ಕೃಷ್ಣ. ಕಾರ್ಯಬಾಹುಳ್ಯ ದಿಂದಾಗಿ ಬಳಲಿದ್ದ. ಅರವತ್ತು ದಾಟಿ ಅಪರವಯಸ್ಕನಾಗಿದ್ದ. ಹೊಣೆಗಾರಿಕೆಯಿಂದಾಗಿ ಆದ್ಯತೆಗಳು ಬದಲಾಗಿದ್ದವು.

ರಾಧೆಯ ಮೊಗದಲ್ಲಿ ಕಳೆಯಿರಲಿಲ್ಲ, ಕಾಂತಿಯಿರಲಿಲ್ಲ. ನಜ್ಜುಗುಜ್ಜಾಗಿದ್ದ ಆಕೆ ಅರಮನೆಯಲ್ಲಿ ತೊತ್ತಾಗಿ (ಆಳಾಗಿ) ಕೆಲಸಕ್ಕೆ ಸೇರಿದಳು; ದೂರದಿಂದಲಾದರೂ ಕೃಷ್ಣನನ್ನು ಆಗಾಗ ಕಾಣುವ ಅವಕಾಶ ಲಭ್ಯವಾದೀತೆಂದು. ಅರಮನೆಯಲ್ಲಿ ಕೃಷ್ಣನನ್ನು ಭೌತಿಕವಾಗಿ ಕಾಣಲು ಸಾಧ್ಯವಾಯಿತು. ಆದರೆ ಎದುರು ಬದುರು ಬಂದಾಗಲೂ ಮಾತಿಲ್ಲ; ಕಥೆಯಿಲ್ಲ. ಮೌನವೆಂಬುದು ಆಭರಣವಾಗಲಿಲ್ಲ; ಮುಗುಳ್ನಗೆ ಶಶಿಕಿರಣವಾಗಲಿಲ್ಲ. ಅದು ರಾಧೆಯ ಪಾಲಿಗೆ ಅಸಹನೀಯವಾಗಿತ್ತು.

ರಾಧೆಗೆ ಅದನ್ನು ಭರಿಸಲು ಸಾಧ್ಯವಾಗದೆ ಕೆಲಸ ಬಿಟ್ಟು ಹೊರಡುತ್ತಾಳೆ. ಕೃಷ್ಣ ಆಕೆಯೆಡೆಗೆ ಓಡಿ ಬರುತ್ತಾನೆ. ರಾಧೆಯ ಕಡೆಯ ಅಪೇಕ್ಷೆಯಂತೆ ಕೃಷ್ಣನು ತನ್ನ ಕೊಳಲು ನುಡಿಸುತ್ತಾನೆ. ಆಕೆ ತನ್ನ ದೇಹ ತ್ಯಜಿಸಿ ಕೃಷ್ಣನಲ್ಲಿ ಲೀನವಾಗುತ್ತಾಳೆ. ಕೃಷ್ಣ ದುಃಖತಪ್ತನಾಗಿ ತನ್ನ ಕೊಳಲನ್ನು ಮುರಿದೆಸೆಯುತ್ತಾನೆ. ಮುಂದೆಂದೂ ಕೊಳಲನ್ನು ತುಟಿಗಿಟ್ಟುಕೊಳ್ಳಲಿಲ್ಲ. ಬೇರೆ ಯಾವುದೇ ವಾದ್ಯವನ್ನೂ ಮುಟ್ಟಲಿಲ್ಲ; ನುಡಿಸಲಿಲ್ಲ. ಮುಂದೆ ಕೃಷ್ಣನ ಅಧರದಿ ನಸುನಗೆ ಮೂಡಲಿಲ್ಲ. ಕರದಲಿ ಕೊಳಲು ಕಾಣಲಿಲ್ಲ. ಕೃಷ್ಣನಿಗೆ ರಾಧೆಯ ಬಗೆಗಿದ್ದ ಬದ್ಧತೆಯದು. ಚಿರವಿರಹಿ ಕೃಷ್ಣ ದುರಂತ ನಾಯಕ.

ಇದೊಂದು ಅಮರಪ್ರೇಮದ ದುರಂತ ಕಥೆ. ಆದರೆ ನಮ್ಮ ಟಾಲಿವುಡ್ ಸಹ ಇದನ್ನು ಇನ್ನೂ ಸಿನಿಮಾ ಮಾಡಿಲ್ಲ!

ಫೋಟೋ ಕೃಪೆ : imagesvibes.com

ಕೃಷ್ಣನೆಂಬ ನೊಂದ ವಿರಹ ಗೀತೆ!

ಕೃಷ್ಣನು ಕಂಡಕಂಡವರಿಗೆಲ್ಲ ಮರುಗಿದವನು. ಅವನಿಗಾಗಿ ಮರುಗಿದವರಿಲ್ಲ; ರಾಧೆಯ ಹೊರತು. ಅವನೊಂದು ”ನೊಂದ ವಿರಹ ಗೀತೆ!” ಆದರೂ ಲೋಕೋದ್ಧಾರಕ್ಕಾಗಿ ಈ ಉದಾರಿ ಕೊಟ್ಟಿದ್ದು ಭಗವದ್ಗೀತೆ! ಕೃಷ್ಣ ಎಂದರೆ ಔದಾರ್ಯಕ್ಕೊಂದು ಸಮರ್ಥ ರೂಪಕ.

ಕೃಷ್ಣನು ಎಲ್ಲರ ಹಿತವನ್ನೂ ಬಯಸಿದವನು. ಉಳಿದವರಿಗೆ ಅವನ ಬಗೆಗೆ ಇದ್ದದ್ದು ಭಕ್ತಿಯಲ್ಲ; ಅನುರಕ್ತಿಯಲ್ಲ. ಕೇವಲ ಭಯ, ದಿಗಿಲು. ಆ ದಿಗಿಲ್ ದಬ್ಬಾಕುವ ಧೈರ್ಯ ಯಾರಿಗೂ ಇಲ್ಲದಿದ್ದರಿಂದ ಅವನಿಗೆ ಹೆದರುತ್ತಿದ್ದರಷ್ಟೇ. ಎಲ್ಲರೂ ಅವನ ನೆಮ್ಮದಿ, ಶಾಂತಿಯನ್ನು ದೋಚಿಕೊಂಡವರೇ. ಗೋಪಿಕೆಯರಿಗೋ ತಮ್ಮ ಎದೆಬಡಿತವನ್ನು ಹೆಚ್ಚಿಸುತ್ತಿದ್ದ ಸುರಸುಂದರಾಂಗ; ಶ್ಯಾಮಸುಂದರ. ಚೆಲುವ ಚೆನ್ನಿಗರಾಯ; ಚಿತ್ತಚೋರ. ಗೋಪಿಕೆಯರಿಗೆ ಅವನೊಬ್ಬ ಮಾಯಕಾರ ಮಾಯಾವಿ!

ಆದರೆ ಅವನಿಗಾಗಿ ಮಿಡಿದವಳು ರಾಧೆಯೊಬ್ಬಳೇ. ಅವಳ ಸೈರಣೆಗೊಂದು ನಮನ. ಕೃಷ್ಣನ ತುರೀಯ ತ್ಯಾಗಗುಣಕ್ಕೆ ನತಮಸ್ತಕ. ಕೃಷ್ಣ ಗತವಲ್ಲ ಸಂಗತ. ಅವನು “ನಿಟ್ಟುಸಿರ ನೋವಿನಲ್ಲಿ ಅನುದಿನವೂ ಬೆಂದರೂ” ಹೊರಜಗತ್ತಿಗೆ ನಿರಾಳವೆಂಬಂತೆ ಕಾಣುತ್ತಿದ್ದವನು, ಆಳದಲ್ಲಿ ಅಂತಃರ್ಮುಖಿ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಿದ್ದ ಕೃಷ್ಣನನ್ನು ಬಹಿರ್ಮುಖಿ ಎಂದು ಭಾವಿಸಿದವರೇ ಹೆಚ್ಚು.

ಗೋಕುಲ, ಬೃಂದಾವನಗಳ ನಿರ್ಗಮನದವರೆಗಷ್ಟೇ ಅವನ ಚಿನ್ನಾಟ. ಆಗಲೂ ಪೂತನಿ, ತೃಣಾರ್ನವನಂತಹ ರಕ್ಕಸರ ಕಾಟ. ಕೃಷ್ಣ ಅನವರತ ಶೋಷಿತ.

ರಾಧೆಯ ಪ್ರಸ್ತಾಪವೇ ಭಾಗವತದಲ್ಲಿ ಇಲ್ಲವಲ್ಲ!

ಕೃಷ್ಣ ರಾಧೆಯರ ಬಗೆಗೆ ಏನೆಲ್ಲ ಚಿಂತನೆ ಹರಿಸಿದೆವಲ್ಲವೆ? ಆದರೆ ಭಾಗವತದಲ್ಲಿ ರಾಧೆಯ ಪಾತ್ರವೇ ದಾಖಲಾಗಿಲ್ಲ. ಅವಳ ಹೆಸರಿನ ಉಲ್ಲೇಖವೇ ಇಲ್ಲ. ಅದು ಬರಿಯ ಕಲ್ಪನೆ ಎಂದು ತೀವ್ರವಾಗಿ ಸೆಣಸಾಡುವವರು ಇದ್ದಾರೆ. ತೀವ್ರ ಪ್ರೀತಿಗೆ, ಅತೀವ ವಿರಹಕ್ಕೆ, ನಿರಂತರ ಬದ್ಧತೆಗೆ ರಾಧೆ ಎಂಬುದೊಂದು ಶಕ್ತ ರೂಪಕ. ಆ ರೂಪಕ ರಾಧೆಯೇ ಆಗಿರಬೇಕಿಲ್ಲ. ಆದರೆ ರಾಧೆ ಇರಲಿಲ್ಲ ಎಂಬ ಸಂಗತಿಯೇ ಅವಳ ಆರಾಧಕರಿಗೆ, ಅಭಿಮಾನಿ ದೇವರುಗಳಿಗೆ ತಡೆದುಕೊಳ್ಳಲು ಆಗದ ಸಂಗತಿ. ಏನೆಲ್ಲ, ಎಷ್ಟೆಲ್ಲ ಹೆಸರುಗಳ ಗೋಪಿಕೆಯರಲ್ಲಿ ರಾಧೆ ಎಂಬ ಹೆಸರೂ ಇದ್ದೀತು ಬಿಡಿ ಎಂಬ ಹುಸಿ ಸಮಾಧಾನ ಅವರಿಗೆ ಬೇಕಿಲ್ಲ. ರಾಧೆ ನಮಗೆ ಸಾವಿರದಲ್ಲಿ ಒಬ್ಬಳಲ್ಲ. ಸಾವಿರ, ಸಾವಿರ. ಕೃಷ್ಣ ಕನಯ್ಯನ ಸಂಗಾತಿ. ಅಂತಹ ಭಾವನಿಷ್ಠ ಪಾತ್ರ ನಮ್ಮ ಭಾಗವತ ಪುರಾಣದಲ್ಲಿಲ್ಲ ಎಂದರೆ ರೋಷಾವೇಷದ ಜೊತೆಗೆ ಗಾಬರಿಯೂ ಆಗಿ ಖಿನ್ನರಾಗುತ್ತೇವೆ. ಕೃಷ್ಣನು ವಸ್ತುನಿಷ್ಠ. ಭಾವನೆಗಳನ್ನೆಲ್ಲ ಮೂಟೆಕಟ್ಟಿ ಮನದ ಮೂಲೆಗೆ ದೂಡಿ, ಲೋಕಕಲ್ಯಾಣವೆಂದು ಕಾರ್ಯತತ್ಪರ. ಕೊಳಲು ಕೈಲಿ ಹಿಡಿದರೂ ಅವನೊಂದು ಮೌನಗೀತೆ! ಅವನೊಂದು ಮೂಕಮರ್ಮರ! ನಂದಕಿಶೋರನ ಎಡೆಗಿನ ರಾಧೆಯ ರಸಭಾವಲಹರಿ ಕೃಷ್ಣನಿಗಷ್ಟೇ ಅರಿವಾಗುವ ಆದರೆ ಇತರರಿಗೆ ಒಂದಿನಿತೂ ಗೋಚರವಾಗದ ಮೂಕಲಹರಿ. ರಾಧೆ ಎಂಬುದು; “ಕೇಳದೆ ನಿಮಗೀಗ ಹಾಡು ಹೇಳಿದಂತೆ ಒಂದು ಹೆಣ್ಣಿನ ನೊಂದ ವಿರಹಗೀತೆ.

ಫೋಟೋ ಕೃಪೆ : google

ದೈವೀಕ ರಾಸಲೀಲೆ ಎಂಬುದು ತನುಮನದೊಂದಿಗಿನ ಅನುಸಂಧಾನ:

ದೈವೀಕ ಪ್ರೇಮದಲ್ಲಿ ಮಡಿ-ಮೈಲಿಗೆ, ಶೀಲ-ಅಶ್ಲೀಲದ ಪ್ರಶ್ನೆ ಇಲ್ಲ. ಅಲ್ಲಿ ನಿಜಾರ್ಥದಲ್ಲಿ ಪ್ರೇಮ ಕುರುಡು. ಕೃಷ್ಣನು ಒಂದೇ ರಾತ್ರಿಯಲ್ಲಿ ಏಕಕಾಲದಲ್ಲಿ ಸಾವಿರ, ಸಾವಿರ ಸಂಖ್ಯೆಯ ಗೋಪಿಕೆಯರೊಡನೆ ತುಟಿಗೆ ತುಟಿ, ಕಟಿಗೆ ಕಟಿ ಬೆರೆಸಿ ಭೋ(ಯೋ)ಗಿಸಿದವನು. ಅವರ ನೂರು ನೂರು ತರಹದ ವಿರಹದ ಉರಿಯನ್ನು ಶಮನಗೊಳಿಸಿ ಮುಲಾಮನ್ನು ತೀಡಿದವನು. ಅವರ ಹರೆಯದ ಭಾರವನ್ನು ನೀಗಿದ ಉದಾರಿ. ಗೋಪಿಕೆಯರ ವಿರಹವು ಒಂದಿರುಳ ಮಟ್ಟಿಗಾದರೂ ರಹವಾಗುವ ಹಾಗೆ ಮಾಡಿದ ಲೋಕೋಪಕಾರಿ. ವಿರಹವೆಂಬುದು ಪ್ರೇಮಕಾವ್ಯದ ಕಹಿ ಬರೆಹವಾಗದೆ, ಸಿಹಿಯ ನಿಶಾನೆಗಳನ್ನು ಮೂಡಿಸಿ ಅವರ ತನುವನ್ನು ಅರಳಿಸಿದವನು. ಅದೊಂದು ದೈವೀಕ ರಾಸಲೀಲೆ.

ಕೃಷ್ಣನು ಎಂದೂ ಯಾರಿಗೂ, ಏನನ್ನೂ ಇಲ್ಲ ಎಂದವನಲ್ಲ. ಆದರೆ ಅವನು ಮಾತ್ರ ಶಾಶ್ವತ ವಿರಹಿ. ಎಂತಹ ವೈರುಧ್ಯ ಅಲ್ಲವೆ? ಅವನಿಂದ ಯಾವ ರೀತಿಯ ಭೌತಿಕ ಸುಖಕ್ಕೂ ಪಾತ್ರಳಾಗದವಳು ರಾಧೆ ಮಾತ್ರ. ಆದರೆ ಈಗಲೂ ಶ್ರೀಕೃಷ್ಣನನ್ನು ಸ್ಮರಿಸುವುದು:

“ರಾಧೆ ರಾಧೆ ರಾಧೆ ರಾಧೆ-ಗೋವಿಂದ, ಬೃಂದಾವನ ಚಂದ್ರ” ಎಂದೇ.

ಪುರಾಣಕಾಲದ ರೀತಿ, ನೀತಿ, ರಿವಾಜುಗಳೇ ಬೇರೆ. ಈಗಿನ ನೈತಿಕ ಮೌಲ್ಯಗಳ ಮಾನದಂಡವೇ ಬೇರೆ. ಆದರೂ ನಮ್ಮ ಪುರಾಣಗಳ ಬಗೆಗಿನ ಗಾಢ ನಂಬಿಕೆ ಮತ್ತು ವಿಶ್ವಾಸ ಗಮನಿಸಿ:

ಪುರಾಣ ಓದಲಿಕ್ಕೆ; ಬದನೆಕಾಯಿ ತಿನ್ನಲಿಕ್ಕೆ. ಅಂದರೆ ಪುರಾಣಗಳನ್ನು ನೈತಿಕ, ಮೌಲಿಕ ಎಂದು ಇಂದಿನ ಜನಮಾನಸವೂ ನಂಬಿದೆ ಎಂದರ್ಥ. ಬದನೆಕಾಯಿ ಎಂಬುದು ಅನಾಚಾರಕ್ಕೆ ನಿದರ್ಶನ.

‘ಪುರಾಣಗಳಲ್ಲಿ ಪ್ರೀತಿ-ಪ್ರೇಮ, ಕಾಮ-ಕೇಳಿ’ ಎಂಬ ಉದ್ಗ್ರಂಥ ಬರಬೇಕಿದೆ. ಪುರಾಣಗಳೆಂದರೆ ಕಲ್ಪನೆಯ ಕಣ್ಣು ಹರಿವನಕ ಹಚ್ಚುವ ಸಾಲುದೀಪಗಳು. ಪುರಾಣಗಳಲ್ಲಿ ಮಾನಭಂಗ, ಮಾನರಕ್ಷೆ ಎರಡೂ ಉಂಟು. ಪುರಾಣವೆಂಬುದು ಕಳೆವುದು, ಕಾಯುವುದು ಹೀಗೆ ಎರಡನ್ನೂ ಒಳಗೊಂಡಿರುತ್ತದೆ.


  • ಕೆ. ರಾಜಕುಮಾರ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW